ಚುನಾವಣಾ ಆಯೋಗ

ಬುಡಕಟ್ಟು ಜನರಿಂದ ಮತದಾನ: ಚುನಾವಣಾ ಆಯೋಗದ ಜಾಗೃತಿಯ ಫಲ


ನಿರ್ದಿಷ್ಟ ದುರ್ಬಲ ಬುಡಕಟ್ಟು ಸಮೂಹಗಳು ಮತ್ತು ಬುಡಕಟ್ಟು ಜನರನ್ನು ಮತದಾನದತ್ತ ಸೆಳೆಯಲು ಸತತ ಎರಡು ವರ್ಷಗಳಿಂದ ಚುನಾವಣಾ ಆಯೋಗದ ಪ್ರಯತ್ನ

Posted On: 01 MAY 2024 2:46PM by PIB Bengaluru

ನಿರ್ದಿಷ್ಟ ದುರ್ಬಲ ಬುಡಕಟ್ಟು ಸಮೂಹ (ಪಿವಿಟಿಜಿ) ಸಮುದಾಯಳು ಮತ್ತು ಇತರ ಬುಡಕಟ್ಟು ಸಮೂಹದ ಜನರು ಚುನಾವಣಾ ಪ್ರಕ್ರಿಯೆ ಅರಿತು ಮತ  ಚಲಾಯಿಸುವಂತೆ ಮಾಡಲು ಕಳೆದ ಎರಡು ವರ್ಷಗಳಿಂದ ಭಾರತೀಯ ಚುನಾವಣಾ ಆಯೋಗ ಮಾಡಿದ ಪ್ರಯತ್ನಗಳು ಈಗ ಫಲ ಕೊಟ್ಟಿವೆ. ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಮೊದಲ ಮತ್ತು ಎರಡನೇ ಹಂತದ ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ವಿವಿಧ ಮತಗಟ್ಟೆಗಳಲ್ಲಿ ಬುಡಕಟ್ಟು ಸಮೂಹಗಳು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು ಕಂಡುಬಂದಿದೆ. ಗ್ರೇಟರ್‌ ನಿಕೋಬಾರ್‌ ನ ಶೋಂಪೇನ್‌ ಬುಡಕಟ್ಟು ಜನರು ಇದೇ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿರುವುದು, ಐತಿಹಾಸಿಕ ನಡೆಯಾಗಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ಪಿವಿಟಿಜಿಗಳ ಒಳಗೊಳ್ಳುವಿಕೆ ಬಗ್ಗೆ ಅರಿತ ಚುನಾವಣಾ ಆಯೋಗ, ಈ ಸಮೂಹದ ಜನರು ಮತದಾರರಾಗಿ ಸೇರ್ಪಡೆಯಾಗಲು ಮತ್ತು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಾಗಲು, ಕಳೆದ ಎರಡು ವರ್ಷಗಳಿಂದ ವಿಶೇಷ ಪ್ರಯತ್ನಗಳನ್ನು ಮಾಡಿದೆ. ಮತದಾರರ ಪಟ್ಟಿಯ ಪರಿಷ್ಕರಣೆಯ ವಿಶೇಷ ಪ್ರಕ್ರಿಯೆಯಲ್ಲಿ, ನಿರ್ದಿಷ್ಟ ದುರ್ಬಲ ಬುಡಕಟ್ಟು ಸಮೂಹಗಳು ವಾಸಿಸುವ ರಾಜ್ಯಗಳಲ್ಲಿ ವಿಶೇಷ ಔಟ್‌ ರೀಚ್‌ ಶಿಬಿರಗಳನ್ನು ನಡೆಸುವ ಮೂಲಕ ಅಲ್ಲಿನ ಬುಡಕಟ್ಟು ವಾಸಿಗಳ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲಾಯಿತು. ವಿಶೇಷ ಸರಾಂಶ ಪರಿಷ್ಕರಣೆ 2023ರ ಮತದಾರರ ಪಟ್ಟಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ, ನವೆಂಬರ್‌ 2022 ರಲ್ಲಿ ಪುಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಶ್ರೀರಾಜೀವ್‌ ಕುಮಾರ್‌ ಅವರು, ಪಿವಿಟಿಜಿ ಸಮುದಾಯದರವನ್ನು ದೇಶದ ಹೆಮ್ಮೆಯ ಮತದಾರರನ್ನಾಗಿ ಸಬಲೀಕರಣಗೊಳಿಸಲು ಆಯೋಗದ ಔಟ್‌ ರೀಚ್ (ದೂರದೂರುಗಳಲ್ಲಿ ಬಾಹ್ಯ ಕಾರ್ಯಕ್ರಮ) ಮತ್ತು ಮಧ್ಯಸ್ಥಿಕೆ ಆದ್ಯತೆ ಬಗ್ಗೆ ಒತ್ತಿ ಹೇಳಿದ್ದರು. ಪಿವಿಟಿಜಿ – ಮಧ್ಯಪ್ರದೇಶದ ಬೈಗಾ ಬುಡಕಟ್ಟು ಮತ್ತು ಗ್ರೇಟರ್ ನಿಕೋಬಾರ್ ನ ಶೋಂಪೆನ್ ಬುಡಕಟ್ಟು

 

 

 

 

ಕೆಲವು ರಾಜ್ಯಗಳ ಚಿತ್ರಣ

ಮಧ್ಯಪ್ರದೇಶ 

ಮಧ್ಯಪ್ರದೇಶದಲ್ಲಿ ಬೈಗಾ, ಭಾರಿಯಾ ಮತ್ತು ಸಹಾರಿಯಾ ಎಂಬ ಮೂರು ಪಿವಿಟಿಜಿ ಗಳಿವೆ. 23 ಜಿಲ್ಲೆಗಳ ಒಟ್ಟು ಜನಸಂಖ್ಯೆ 9,91,613ರ ಪೈಕಿ 6,37,681 ಜನರು 18 ವರ್ಷ ಮೇಲ್ಪಟ್ಟ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಅರ್ಹರಾದ ನಾಗರಿಕರಿದ್ದು, ಎಲ್ಲವೂ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿ ನಡೆದ ಎರಡು ಹಂತದ ಮತದಾನದಲ್ಲಿ, ಬೈಗಾ ಮತ್ತು ಭಾರಿಯಾ ಬುಡಕಟ್ಟು ಜನರು ಅತ್ಯುತ್ಸಾಹದಿಂದ ಮತದಾನ ಮಾಡಿದ್ದು ಕಂಡುಬಂದಿತು. ಬೆಳಗ್ಗೆ ಬೇಗನೇ ಮತಗಟ್ಟೆ ತಲುಪಿದ ಈ ಬುಡಕಟ್ಟು ಜನರು, ತಮ್ಮ ಸರತಿಗಾಗಿ ಕಾದು ಮತ ಚಲಾಯಿಸಿ, ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬದಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಿದ್ದಾರೆ. 

 

ಮಧ್ಯಪ್ರದೇಶದ ದಿಂದೋರಿ ಮತಗಟ್ಟೆ.

ಮತಗಟ್ಟೆಗಳಲ್ಲಿ ಬುಡಕಟ್ಟು ಜನರ ಸ್ವಾಗತಕ್ಕಾಗಿ ಬುಡಕಟ್ಟು ವಿಷಯಾಧಾರಿತವಾಗಿ ಮತಗಟ್ಟೆಗಳನ್ನು ಸಜ್ಜು ಮಾಅಡಲಾಗಿತ್ತು. ಮಧ್ಯಪ್ರದೇಶದ ದಿಂದೋರಿ ಗ್ರಾಮಸ್ಠರು ಸ್ವತಃ ಮತಗಟ್ಟೆಯನ್ನು ಸಿಂಗರಿಸಿದರು.

ಕರ್ನಾಟಕ

ಕರ್ನಾಟಕದ ಪಶ್ಚಿಮ ಮತ್ತು ದಕ್ಷಿಣ ಭಾಗಗಳು ಜೇನು ಕುರುಬ ಮತ್ತು ಕೊರಗ ಎಂಬ ನಿರ್ದಿಷ್ಟ ದುರ್ಬಲ ಬುಡಕಟ್ಟು ಸಮೂಹಗಳ ಆವಾಸಸ್ಥಾನವಾಗಿದೆ. ಸಾರ್ವತ್ರಿಕ ಚುನಾವಣೆಗೂ ಮುನ್ನ,  ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರ ಕಚೇರಿಯು ಸಾಮಾಜಿಕ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಅರ್ಹ ಪಿವಿಟಿಜಿಗಳ ನೋಂದಣಿಯನ್ನು ಖಾತರಿಪಡಿಸಿದೆ. ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರ ಮಟ್ಟದ ಬುಡಕಟ್ಟು ಕಲ್ಯಾಣ ಸಮಿತಿಗಳನ್ನು ರಚಿಸಲಾಗಿತ್ತು. ಇವು ಎಲ್ಲಾ ಪಿವಿಟಿಜಿಗಳಲ್ಲಿ ಮತದಾನ ಜಾಗೃತಿ ಮೂಡಿಸಲು ಮತ್ತು ಅರ್ಹ ಮತದಾರರ ನೋಂದಣಿಗೆ ನಿಯಮಿತವಾಗಿ ಸಭೆ ಸೇರಿ ಕಾರ್ಯೋನ್ಮುಖವಾಗಿತ್ತು. ಚುನಾವಣಾ ಅಧಿಕಾರಿಗಳು ಈ ಪ್ರದೇಶಗಳಿಗೆ ಭೇಟಿ ನೀಡಿ, ನೋಂದಣಿ ಪ್ರಮಾಣ ಹೆಚ್ಚು ಮಾಡಿದ್ದಾರೆ ಮತ್ತು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ ಹೆಚ್ಚಿಸುವಂತೆ ಮಾಡಿದ್ದಾರೆ. ಒಟ್ಟು ಜನಸಂಖ್ಯೆಯ ಪೈಕಿ 55,815 ಪಿವಿಟಿಜಿ ಗಳಿದ್ದು, ಈ ಪೈಕಿ 18 ವರ್ಷ ಮೇಲ್ಪಟ್ಟ 39,498 ಜನರಿದ್ದು, ಎಲ್ಲರೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 

ಮತದಾನದ ದಿನ ಮತದಾರರನ್ನು ಸೆಳೆಯುವ ಪ್ರಯತ್ನವಾಗಿ ವಿಶಿಷ್ಟ ಬುಡಕಟ್ಟು ಮಾದರಿಯಲ್ಲಿ ಅಲಂಕೃತಗೊಂಡ 40 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 

 

 

ಕೇರಳ

ಕೇರಳದಲ್ಲಿ, ಐ ದು ಸಮುದಾಯಗಳನ್ನು ಪಿವಿಟಿಜಿ ಎಂದು ವರ್ಗೀಕರಿಸಲಾಗಿದೆ. ಕಾಸರಗೋಡು ಜಿಲ್ಲೆಯ ಕೊರಗ, ಮಲಪ್ಪುರಂ ಜಿಲ್ಲೆಯ ನಿಲಂಬೂರ್‌ ಕಣಿವೆಯ ಚೋಳನಾಯಕನ್, ಪಾಲಕ್ಕಾಡ್‌ ಜಿಲ್ಲೆಯ ಅಟ್ಟಪ್ಪಾಡಿಯಲ್ಲಿರುವ ಕುರುಂಬರ್‌, ಪಾಲಕ್ಕಾಡ್ & ತ್ರಿಶೂರ್‌ ಜಿಲ್ಲೆಗಳಲ್ಲಿನ ಪರಂಬಿಕುಲಂನಲ್ಲಿರುವ ಕಾದರ್ ಹಾಗೂ ಪಾಲಕ್ಕಾಡ್‌, ಮಲಪ್ಪುರಂ, ಕೋಜಿ಼ಕೋ, ವಯನಾಡ್‌ ಜಿಲ್ಲೆಗಳ ಕಟ್ಟುನಾಯಕನ್‌ ಬುಡಕಟ್ಟು ವರ್ಗಗಳ ಒಟು ಜನಸಂಖ್ಯೆ 2024ರ ಮಾರ್ಚ್‌ 31 ರಂದು 4,750 ಇತ್ತು. ಈ ಪೈಕಿ 3,850 ಜನರು ವಿಶೇಷ ಅಭಿಯಾನಗಳು ಮತ್ತು ನೋಂದಣಿ ಶಿಬಿರಗಳಲ್ಲಿ ಮತದಾರರ ಪಟ್ಟಿಗೆ ಯಶಸ್ವಿಯಾಗಿ ನೋಂದಾಯಿಸಿಕೊಂಡಿದ್ದಾರೆ. ಮತದಾನ ಸಾಕ್ಷರತಾ ಕ್ಲಬ್‌ ಮತ್ತು ಮತದಾನ ಪಾಠಶಾಲೆಗಳು ತೀವ್ರ ಮತದಾನ ಜಾಗೃತಿ ಉಪಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಮತದಾನದ ದಿನದಂದು ಸಾರಿಗೆ ಸೌಲಭ್ಯವನ್ನೂ ಒದಗಿಸಿದ್ದವು. 

ಕುರುಂಬಾ ಬುಡಕಟ್ಟು ಮತದಾರರು ಗಂಟೆಗಟ್ಟಲೆ ನಡೆದು‌ ಕಾಡಿನಲ್ಲಿ ಸಾರಿಗೆ ಸೌಲಭ್ಯ ಒದಗಿಸಿದ್ದ ಪ್ರದೇಶ ತಲುಪಿದ್ದು, ಬಳಿಕ ಅಲ್ಲಿಂದ ಅವರನ್ನು ಕೇರಳದ ಮೌನ ಕಣಿವೆ ಪ್ರದೇಶ ಮುಕ್ಕಾಲಿಯಲ್ಲಿನ ಮತಗಟ್ಟೆಗೆ ಕರೆದೊಯ್ಯಲಾಗಿತ್ತು. ಇದು ಪ್ರೇರಣಾದಾಯಕ ದಾಖಲೆಯೇ ಸರಿ. 80 ರಿಂದ 90 ವರ್ಷದ ಅನೇಕ ಬುಡಕಟ್ಟು ಮತದಾರರು ಅತ್ಯುತ್ಸಾಹದಿಂದ ಮತ ಚಲಾಯಿಸಿರುವುದು ಪ್ರಜಾಪ್ರಭುತ್ವದ ಬದ್ಧತೆಗೆ ಅತ್ಯುತ್ತಮ ಉದಾಹರಣೆಗಯಾಗಿದೆ ಮತ್ತು ಅನೇಕರಿಗೆ ಪ್ರೇರಣಾದಾಯಕ ಕೂಡ. ಒಟ್ಟು 817 ಮತದಾರರ ಪೈಕಿ 417 ಮಹಿಳಾ ಮತದಾರರಿದ್ದಾರೆ. 

 

 

ತ್ರಿಪುರಾ 

ತ್ರಿಪುರಾದ ಬುಡಕಟ್ಟು ಸಮೂಹಗಳ ಪೈಕಿ ಒಂದಾದ ರಿಯಾಂಗ್, ಅದ್ವಿತೀಯ ಸ್ಫೂರ್ತಿಯನ್ನು ಪ್ರದರ್ಶಿಸಿದೆ. ರಾಜ್ಯ ವಿಧಾನಸಭಾ ಕ್ಷೇತ್ರದ ಧಾಲೈ, ಉತ್ತರ ಗೋಮತಿ ಮತ್ತು ದಕ್ಷಿಣ ತ್ರಿಪುರಾಗಳ ದೂರದ ಮತ್ತು ಗುಡ್ಡಗಾಡುಗಳಲ್ಲಿನ ವಿವಿಧ ಸ್ಥಳಗಳಲ್ಲಿ ಅಪಾರ ಸಂಖ್ಯೆಯಲ್ಲಿ ಈ ಬುಡಕಟ್ಟು ಸಮುದಾಯ ವಾಸವಿದೆ. ರಿಯಾಂಗ್‌ ಎಂದೂ ಕರೆಯಲ್ಪಡುವ ಬ್ರು ಸಮುದಾಯ, ಮಿಜೋರಾಂ ರಾಜ್ಯದಿಂದ ತ್ರಿಪುರಾ ರಾಜ್ಯಕ್ಕೆ ವಲಸೆ ಬಂದಿದ್ದು, ಈಗ ಸರ್ಕಾರ ಒದಗಿಸಿರುವ ವಿವಿಧ ಪುನರ್ವಸತಿ ಕೇಂದ್ರಗಳಲ್ಲಿ ವಾಸಿಸುತ್ತಿದೆ.

 

 

 

ಒಡಿಶಾ 

ಒಡಿಶಾ ರಾಜ್ಯವು 13 ನಿರ್ದಿಷ್ಟ ದುರ್ಬಲ ಬುಡಕಟ್ಟು ಸಮೂಹ (ಪಿವಿಟಿಜಿ) ಗಳ ತವರಾಗಿದೆ. ಪೌಡಿ ಭೂಯಾ, ಜೌಂಗ್‌, ಸೌರಾ, ಲಂಜಿಯಾ ಸೌರಾ, ಮಂಕಿರ್ಡಿಯಾ, ಬಿರ್ಹೋರೆ, ಕುಟಿಯಾ ಕೋಂಢಾ, ಬೋಂಡೋ, ದಿದಾಯಿ, ಲೋಧಾ, ಖಾರಿಯಾ, ಚುಕುತಿಯಾ ಭುಂಜಿಯಾ, ದೋಗೋರಿಯಾ ಖೋಂಡ್‌ ಬುಡಕಟ್ಟು ಸಮುದಾಯಗಳ ಒಟ್ಟು ಜನಸಂಖ್ಯೆ 2,69,974.

ಮಹತ್ವದ ಪ್ರಯತ್ನಗಳು ಮತ್ತು ನೋಂದಣಿ ಅಭಿಯಾನದ ಮೂಲಕ ಎಲ್ಲಾ ಅರ್ಹ 1,84,274 ಪಿವಿಟಿಜಿ ಗಳ ಶೇಕಡಾ 100 ರಷ್ಟು ನೋಂದಣಿ ಸಾಧಿಸಲಾಗಿದೆ. ಮತದಾನದ ಮಹತ್ವ ಸಾರುವ ಜಾಗೃತಿ ಕಾರ್ಯಕ್ರಮಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳಲಾಗಿತ್ತು ಮತ್ತು ಸ್ಥಳೀಯ ಭಾಷೆ, ಉಪಭಾಷೆಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಇದರ ಜೊತೆ ಜೊತೆಗೇ ವಿಶೇಷ ನೋಂದಣಿ ಅಭಿಯಾನ, ಸಾಂಪ್ರದಾಯಿಕ ಜಾನಪದ ಕಲೆ ಮತ್ತು ಸಮುದಾಯ ಪಾಲ್ಗೊಳ್ಳುವಿಕೆ ಮೂಲಕ ಬಹುಆಯಾಮದ ಸಂಪರ್ಕವು ಶೇಕಡಾ 100 ರಷ್ಟು ನೋಂದಣಿ ಖಾತರಿಪಡಿಸುವುದನ್ನು ಸಾಧ್ಯವಾಗಿಸಿದೆ. ಸ್ಥಳೀಯ ಭಾಷೆಗಳಲ್ಲಿನ ಬೀದಿ ನಾಟಕ, ಪಾಲಾ ಮತ್ತು ದಶಕಾಥಿಯಾದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮತದಾರರ ಶಿಕ್ಷಣ ಮತ್ತು ಅರಿವಿಗೆ ಪ್ರಬಲ ಮಾಧ್ಯಮವಾಗಿವೆ.  

 

ಮತದಾನ ಪ್ರಕ್ರಿಯೆ ಬಗ್ಗೆ ಸಮುದಾಯಗಳಿಗೆ ಜಾಗೃತಿ ಮೂಡಿಸಲು ಪಿವಿಟಿಜಿ ಪ್ರದೇಶಗಳಲ್ಲಿ ಸಂಚಾರಿ ಪ್ರಾತ್ಯಕ್ಷಿಕೆ ವಾಹನಗಳನ್ನು ನಿಯೋಜಿಸಲಾಗಿತ್ತು. ಮತದಾನ ಪ್ರಕ್ರಿಯೆ ಬಗ್ಗೆ ಅವರಲ್ಲಿ ತಿಳುವಳಿಕೆ ನೀಡಲು ನಡೆಸಿದ ಅಣಕು ಮತದಾನದಲ್ಲಿ 20 ಸಾವಿರಕ್ಕೂ ಹೆಚ್ಚು ಪಿವಿಟಿಜಿ ಜನರು ಪಾಲ್ಗೊಂಡಿದ್ದರು. ಸ್ಥಳೀಯ ಭಾಷೆಗಳಲ್ಲಿ ಗೋಡೆ ಬರಹಗಳ ಮೂಲಕ ಜಾಗೃತಿ ಮೂಡಿಸುವ ವಿನೂತನ ಆಲೋಚನೆಯು ಸುತ್ತಮುತ್ತಲಿನ ಪ್ರದೇಶಕ್ಕೆ ಸ್ಥಳೀಯ ಅಸ್ಮಿತೆ ನೀಡಿರುವುದರ ಜೊತೆಗೆ “ಕಡ್ಡಾಯವಾಗಿ ಮತದಾನ ಮಾಡಿ”, “ನನ್ನ ಮತ ಮಾರಾಟಕ್ಕಿಲ್ಲ” ಎಂಬ ಸಂದೇಶಗಳಿಗೂ ಕರೆ ಕೊಟ್ಟಿತು. 

 

 

ಒಡಿಶಾದ ಪೌದಿ ಭೂಯಾನ್‌ ಬುಡಕಟ್ಟು (ಪಿವಿಟಿಜಿ) ಮತದಾರರು ಬೋನಾಯ್‌ ಜಿಲ್ಲೆಯ ಅಧಿಕಾರಿಗಳ ಶ್ರಮದ ಫಲವಾಗಿನ ಸಾಂಸ್ಕೃತಿಕ ಪ್ರೇರಣಾದಾಯಕ ಕಾರ್ಯಕ್ರಮಗಳು

 

 

666 ವಿಷಯಾಧಾರಿತ ಮತಗಟ್ಟೆಗಳನ್ನು ಆಯಾ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದ್ದು, ಸಾರಿಗೆ ಅಡೆತಡೆಗಳನ್ನು ನಿವಾರಿಸಿ, ಮತದಾನ ಪ್ರಕ್ರಿಯೆ ಖಾತರಿಪಡಿಸಲಾಗಿದೆ. ಮುಂದಿನ ಹಂತಗಳಲ್ಲಿ (4-7) ಈ ರಾಜ್ಯದಲ್ಲಿ ಮತದಾನ ನಿಗದಿಯಾಗಿದೆ. 

 

 

ಬಿಹಾರ

ಬಿಹಾರದ ಹತ್ತು ಜಿಲ್ಲೆಗಳಲ್ಲಿ ಮಲ್‌ ಪಹಾರಿಯಾಮ ಸೌರಿಯಾ ಪಹಾರಿಯಾ, ಪಹಾರಿಯಾ, ಕೌರ್ವಾ ಮತ್ತು ಬಿರ್ಹೋರ್‌ ಸೇರಿ ಐದು ಪಿವಿಟಿಜಿ ಗಳಿದ್ದು, ಒಟ್ಟು ಜನಸಂಖ್ಯೆ 7,631 ರಷ್ಟಿದೆ. ಅರ್ಹ ಎಲ್ಲ 3,147 ಮತದಾರರ ನೋಂದಣಿಯಾಗಿದ್ದು, ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ ಹೆಚ್ಚಿಸಲು ʼಮತದಾತರ ಮನವಿ ಪತ್ರʼ ಬಿಡುಗಡೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

 

 

ಜಾರ್ಖಂಡ್ 

ಜಾರ್ಖಂಡ್‌ ನಲ್ಲಿ 32 ಬುಡಕಟ್ಟು ಸಮೂಹಗಳಿದ್ದು, ಈ ಪೈಕಿ 9 ಸಮೂಹಗಳಾದ ಅಸುರ್‌, ಬಿರ್ಹೋರ್‌, ಬಿರ್ಜಿಯಾ, ಕೊರ್ವಾ, ಮಲ್‌ ಪಹಾರಿಯಾ, ಪಹಾರಿಯಾ, ಸೌರಿಯಾ ಪಹಾರಿಯಾ, ಬೈಗಾ ಮತ್ತು ಸಾವರ್‌ ಬುಡಕಟ್ಟುಗಳು ಪಿವಿಟಿಜಿಗೆ ಸೇರಿದ್ದವಾಗಿವೆ. ವಿಶೇಷ ಪರಿಷ್ಕರಣೆ 2024ರ ಸಂದರ್ಭದಲ್ಲಿ, ಜಾರ್ಖಂಡ್‌ ನಲ್ಲಿ ಪಿವಿಟಿಜಿಗಳು ವಾಸಿಸುವ ಬಹುತೇಕ ಗುಡ್ಡಗಾಡು ಪ್ರದೇಶಗಳಲ್ಲಿ ವಿಶೇಷ ಅಭಿಯಾನಗಳನ್ನು ಕೈಗೊಳ್ಳಲಾಗಿತ್ತು. ಇದರ ಪರಿಣಾಮವಾಗಿ ಒಟ್ಟು ಅರ್ಹ 1,69,288 ಜನರ ಪೈಕಿ 6,979 ಜನರು ನೋಂದಾಯಿಸಿಕೊಂಡಿದ್ದಾರೆ. ಪಿವಿಟಿಜಿಗಳ ಒಟ್ಟು ಜನಸಂಖ್ಯೆ 2,58,266 ರಷ್ಟಿದೆ. 

 

 

ಗುಜರಾತ್

ಕೋಲ್ಗಾ, ಕಾಥೋಡಿ, ಕೊತ್ವಾಲಿಯಾ, ಪಾಧರ್‌, ಸಿದ್ದಿ ಬುಡಕಟ್ಟು ಸಮೂಹಗಳ ಜನರು ಪಿವಿಟಿಜಿ ಗಳಿಗೆ ಸೇರಿದ್ದವಾಗಿದ್ದು, ಗುಜರಾತ್‌ ನ 15 ಜಿಲ್ಲೆಗಳಲ್ಲಿ ವಾಸವಿದ್ದಾರೆ. ಒಟ್ಟು 86,755 ಜನರು ಮತದಾರರ ಪಟ್ಟಿಗೆ ನೋಂದಾಯಿಸಿಕೊಂಡಿದ್ದು, ರಾಜ್ಯದಲ್ಲಿ ಅರ್ಹ ಪಿವಿಟಿಜಿ ಗಳ ಶೇಕಡ 100 ರಷ್ಟು ನೋಂದಣಿಯಾಗಿದೆ. ಗುಜರಾತ್‌ ನಲ್ಲಿ ಮೂರನೇ ಹಂತದಲ್ಲಿ ಚುನಾವಣೆ ನಡೆಯಲಿದೆ. 

 

 

ತಮಿಳುನಾಡು

ತಮಿಳುನಾಡಿನಲ್ಲಿ ಕುಟ್ಟುನಾಯಕನ್‌, ಕೋಟಾ, ಕುರುಂಬಾ, ಯರುಲರ್‌, ಪನಿಯನ್‌, ತೋಡಾ ಎಂಬ ಆರು ಪಿವಿಟಿಜಿ ಗಳಿದ್ದು ಒಟ್ಟು ಜನಸಂಖ್ಯೆ 2,26,300 ರಷ್ಟಿದೆ. 18 ವರ್ಷ ಮೇಲ್ಪಟ್ಟ ಅರ್ಹ 1,62,049 ಜನರ ಪೈಕಿ 1,61,932 ಜನರು ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ. 23 ಜಿಲ್ಲೆಗಳಲ್ಲಿ ನಡೆದ ಸಮಗ್ರ ಅಭಿಯಾನಗಳು ಪಿವಿಟಿಜಿಗಳ ಒಳಗೊಳ್ಳುವಿಕೆಗೆ ಆದ್ಯತೆ ನೀಡಿತ್ತು. ಕೊಯಮತ್ತೂರು, ನೀಲಗಿರಿ ಮತ್ತು ತಿರುಪತ್ತೂರ್‌ ಗಳಲ್ಲಿ ವಿಶೇಷ ಗಮನಹರಿಸಲಾಗಿತ್ತು. 

ಉತ್ಸಾಹಿ ಮತದಾರರು ದಟ್ಟ ಕಾಡಿನಲ್ಲಿ ನಡೆದು ಬಂದು, ಜಲ ಮಾರ್ಗ ಮೂಲಕ ವಿವಿಧ ಸಾರಿಗೆ ವಿಧಾನಗಳ ಮೂಲಕ ಮತಗಟ್ಟೆ ತಲುಪಿ ತಮ್ಮ ಹಕ್ಕು ಚಲಾಯಿಸಿ, ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಾಲ್ಗೊಳ್ಳುವಿಕೆ ಖಾತರಿಪಡಿಸಿದ್ದಾರೆ. 

 

 

ಛತ್ತೀಸ್ ಗಢ

ಛತ್ತೀಸ್ ಗಢದ 18 ಜಿಲ್ಲೆಗಳಲ್ಲಿ ಅಬುಝ್ ಮಾದಿಯಾ, ಬೈಗಾ, ಬಿರ್ಹೋರ್, ಕಮಾರ್ ಮತ್ತು ಪಹಾಡಿ ಎಂಬ ಐದು ಪಿವಿಟಿಜಿ ಗಳಿದ್ದು, ಒಟ್ಟು ಜನಸಂಖ್ಯೆ 1,86,918 ರಷ್ಟಿದೆ. ಈ ಪೈಕಿ 18 ವರ್ಷ ಮೇಲ್ಪಟ್ಟ ಎಲ್ಲಾ 1,20,632 ಜನರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.

ಮತದಾರರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಬೈಗಾ ಬುಡಕಟ್ಟು ವಿಷಯಾಧಾರಿತವಾಗಿ ಗರಿಯಾಬಂದ್ ನಲ್ಲಿ ಮತದಾರರ ಶಿಕ್ಷಣ ಅಭಿಯಾನ, ಕಂಕೇರ್ ನಲ್ಲಿ ಹೆಚ್ಚುವರಿ ವಾಹನಗಳ ನಿಯೋಜನೆ, ಕಬೀರ್ ಧಾಮ್ ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಮತಗಟ್ಟೆ ಸ್ಥಾಪನೆ,  ಪ್ಲಾಸ್ಟಿಕ್ ಮುಕ್ತ ನೈಸರ್ಗಿಕ ವಸ್ತುಗಳ ಬಳಕೆ, ಉದಾಹರಣೆಗೆ, ಅಲಂಕಾರಕ್ಕೆ ಬಿದಿರು, ಹೂವು, ಎಲೆ ಇತ್ಯಾದಿ ಮೊದಲಾದ ಉಪಕ್ರಮಗಳು ಸುಸ್ಥಿರ ಚುನಾವಣೆಯಲ್ಲಿ ಒಂದು ಹೆಜ್ಜೆಯಾಗಿದೆ. 

ಮಹಸಮುಂದ್ ಜಿಲ್ಲೆಯಲ್ಲಿ ನಡೆದ “ಚುನಾಯ್ ಮದೈ” ಉತ್ಸವದಲ್ಲಿ ದಾಖಲೆಯ ಶೇಕಡ 100 ರಷ್ಟು ಮತದಾರರ ಕಾರ್ಡ್ ವಿತರಿಸಲಾಯಿತು ಮತ್ತುಈ ಉತ್ಸವ ಬುಡಕಟ್ಟು ಜನರೊಂದಿಗೆ ಸಂಪರ್ಕ ಸಾಧಿಸಲು ನೆರವಾಯಿತು. 

ರಾಜನಂದಗಾವ್ ಲೋಕಸಭಾ ಕ್ಷೇತ್ರದ ಕಬೀರ್ ಧಾಮ್ ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಮತಗಟ್ಟೆ ಮಹಾಸಮುಂದ್ ಲೋಕಸಭಾ ಕ್ಷೇತ್ರ – ಕುಲ್ಹದಿಘಾಟ್ ಗ್ರಾಮ, ಗರಿಯಾಬಂದ್ ಜಿಲ್ಲೆ – ಕಮರ್ ಪಿವಿಟಿಜಿ

 

 

 

 

ಹಿನ್ನೆಲೆ 

ಭಾರತದಲ್ಲಿ ಬುಡಕಟ್ಟು ಜನಸಂಖ್ಯೆ ಶೇಕಡ 8.6 ರಷ್ಟಿದ್ದು, ಈ ಪೈಕಿ 75 ನಿರ್ದಿಷ್ಟ ದುರ್ಬಲ ಬುಡಕಟ್ಟು ಸಮೂಹ (ಪಿವಿಟಿಜಿ) ಗಳಿವೆ.  ಈ ಹಿಂದೆ ಇದ್ದ ತಲುಪಲು ಸಾಧ್ಯವಾಗದೇ ಇದ್ದ ಸ್ಥಳಗಳಲ್ಲಿದ್ದ ಮತಗಟ್ಟೆಗಳ ಬದಲಿಗೆ ಈಗಿರುವ ಹೊಸ ಮತಗಟ್ಟೆಗಳು ತಲುಪಬಹುದಾದ ಸ್ಥಳಗಳಲ್ಲಿರುವುದರಿಂದ ಹೆಚ್ಚಿನ ಪಿವಿಟಿಜಿಗಳ ಒಳಗೊಳ್ಳುವಿಕೆ ಸಾಧ್ಯವಾಗಿದೆ. ಕಳೆದ 11 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ, ಕಮಾರ್, ಭುಂಜಿಯಾ, ಬೈಗಾ, ಪಹಾಡಿ ಕೊರ್ವಾ, ಅಭುಜ್ ಮಾದಿಯಾ, ಬಿರ್ಹೋರ್, ಸಹಾರಿಯಾ, ಭಾರಿಯಾ, ಚೆಂಚು, ಕೋಲಂ, ಥೋತಿ, ಕೊಂಡರೆಡ್ಡಿ, ಜೇನು ಕುರುಬ ಮತ್ತು ಕೊರಗ, ಈ14 ಪಿವಿಟಿಜಿ ಸಮುದಾಯಗಳ 9 ಲಕ್ಷ ಅರ್ಹ ಮತದಾರರಿದ್ದರು. ಚುನಾವಣಾ ಆಯೋಗದ ವಿಶೇಷ ಪ್ರಯತ್ನಗಳಿಂದಾಗಿ ಈ ರಾಜ್ಯಗಳಲ್ಲಿ ನಿರ್ದಿಷ್ಟ ದುರ್ಬಲ ಬುಡಕಟ್ಟು ಸಮೂಹಗಳಿಗೆ ಸೇರಿದ ಎಲ್ಲ ಅರ್ಹ ಮತದಾರರ ನೋಂದಣಿ ಅಂದರೆ ಶೇಕಡ 100 ರಷ್ಟು ನೋಂದಣಿ ಸಾಧ್ಯವಾಗಿದೆ.

*****



(Release ID: 2019376) Visitor Counter : 52