ರಾಷ್ಟ್ರಪತಿಗಳ ಕಾರ್ಯಾಲಯ

ಅರಣ್ಯಗಳ ಮಹತ್ವವನ್ನು ಮರೆಯುವ ಮೂಲಕ ಮಾನವ ಸಮಾಜ ತಪ್ಪು ಮಾಡುತ್ತಿದೆ: ರಾಷ್ಟ್ರಪತಿ  ಮುರ್ಮು


ಡೆಹ್ರಾಡೂನ್ ನ ಇಂದಿರಾ ಗಾಂಧಿ ರಾಷ್ಟ್ರೀಯ ಅರಣ್ಯ ಅಕಾಡೆಮಿಯಲ್ಲಿ ಭಾರತೀಯ ಅರಣ್ಯ ಸೇವೆಯ ತರಬೇತಿ ನಿರತ ಅಧಿಕಾರಿಗಳ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಭಾರತದ ರಾಷ್ಟ್ರಪತಿ

Posted On: 24 APR 2024 3:15PM by PIB Bengaluru

ಮಾನವ ಸಮಾಜವು ಅರಣ್ಯಗಳ ಮಹತ್ವವನ್ನು ಮರೆಯುವ ತಪ್ಪನ್ನು ಮಾಡುತ್ತಿದೆ. ಕಾಡುಗಳು ಜೀವ ನೀಡುವವು. ವಾಸ್ತವವೆಂದರೆ ಅರಣ್ಯಗಳು ಭೂಮಿಯ ಮೇಲಿನ ಜೀವವನ್ನು ಸಂರಕ್ಷಿಸಿವೆ ಎಂದು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಹೇಳಿದರು. ಅವರು ಇಂದು (ಏಪ್ರಿಲ್ 24, 2024) ಡೆಹ್ರಾಡೂನ್ ನ ಇಂದಿರಾ ಗಾಂಧಿ ರಾಷ್ಟ್ರೀಯ ಅರಣ್ಯ ಅಕಾಡೆಮಿಯಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಭಾರತೀಯ ಅರಣ್ಯ ಸೇವೆ (2022 ಬ್ಯಾಚ್) ತರಬೇತಿ ನಿರತ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡುತ್ತಾ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. 

ಇಂದು ನಾವು ಮಾನವ ಕೇಂದ್ರಿತ ಅಭಿವೃದ್ಧಿಯ ಅವಧಿಯಾದ ಆಂಥ್ರೋಪೊಸೀನ್ ಯುಗದ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ರಾಷ್ಟ್ರಪತಿ ಹೇಳಿದರು. ಈ ಅವಧಿಯಲ್ಲಿ, ಅಭಿವೃದ್ಧಿಯ ಜೊತೆಗೆ ವಿನಾಶಕಾರಿ ಫಲಿತಾಂಶಗಳು ಹೊರಹೊಮ್ಮಿವೆ. ಸಂಪನ್ಮೂಲಗಳ ಸುಸ್ಥಿರವಲ್ಲದ ಬಳಕೆ ಅಥವಾ  ಶೋಷಣೆಯು ಅಭಿವೃದ್ಧಿಯ ಮಾನದಂಡಗಳನ್ನು ಮರು ಮೌಲ್ಯಮಾಪನ ಮಾಡಬೇಕಾದ ಹಂತಕ್ಕೆ ಮನುಕುಲವನ್ನು ತಂದಿದೆ. ನಾವು ಭೂಮಿಯ ಸಂಪನ್ಮೂಲಗಳ ಮಾಲೀಕರಲ್ಲ, ಆದರೆ ನಾವು ಟ್ರಸ್ಟಿಗಳು ಎಂಬುದನ್ನು ಅರ್ಥಮಾಡಿಕೊಳ್ಳುವ ಅಗತ್ಯ ಈಗ ಬಂದಿದೆ ಎಂದವರು  ಒತ್ತಿ ಹೇಳಿದರು. ನಮ್ಮ ಆದ್ಯತೆಗಳು ಮಾನವ ಕೇಂದ್ರಿತವಾಗುವುದರ ಜೊತೆಗೆ ಪರಿಸರ ಕೇಂದ್ರಿತವಾಗಿರಬೇಕು. ವಾಸ್ತವವಾಗಿ, ಪರಿಸರ ಕೇಂದ್ರಿತವಾಗಿರುವುದರಿಂದ ಮಾತ್ರ ನಾವು ನಿಜವಾಗಿಯೂ ಮಾನವ ಕೇಂದ್ರಿತವಾಗಲು ಸಾಧ್ಯವಾಗುತ್ತದೆ ಎಂದೂ ಅವರು ಹೇಳಿದರು.

ವಿಶ್ವದ ಅನೇಕ ಭಾಗಗಳಲ್ಲಿ ಅರಣ್ಯ ಸಂಪನ್ಮೂಲಗಳ ನಾಶವು ಬಹಳ ವೇಗವಾಗಿ ಸಂಭವಿಸಿದೆ ಎಂದು ರಾಷ್ಟ್ರಪತಿ ಹೇಳಿದರು. ಕಾಡುಗಳ ನಾಶವು ಒಂದು ರೀತಿಯಲ್ಲಿ - ಮಾನವೀಯತೆಯ ನಾಶ.ಮನುಕುಲದ ನಾಶ.  ಭೂಮಿಯ ಜೀವವೈವಿಧ್ಯತೆ ಮತ್ತು ನೈಸರ್ಗಿಕ ಸೌಂದರ್ಯದ ಸಂರಕ್ಷಣೆಯು ಬಹಳ ಮುಖ್ಯವಾದ ಕಾರ್ಯವಾಗಿದೆ, ಅದನ್ನು ನಾವು ಬಹಳ ತ್ವರಿತವಾಗಿ ಮಾಡಬೇಕಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ ಎಂದೂ ರಾಷ್ಟ್ರಪತಿ ಅವರು ನುಡಿದರು. 

ಅರಣ್ಯಗಳು ಮತ್ತು ವನ್ಯಜೀವಿಗಳ ಸಂರಕ್ಷಣೆ ಮತ್ತು ಉತ್ತೇಜನದ ಮೂಲಕ ಮಾನವ ಜೀವವನ್ನು ಬಿಕ್ಕಟ್ಟಿನಿಂದ ಪಾರು ಮಾಡಬಹುದು ಎಂದು ರಾಷ್ಟ್ರಪತಿ ಹೇಳಿದರು. ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ನಾವು ಹಾನಿಯನ್ನು ಬಹಳ ವೇಗವಾಗಿ ದುರಸ್ತಿ ಮಾಡಬಹುದು. ಉದಾಹರಣೆಗೆ, ಮಿಯಾವಾಕಿ ವಿಧಾನವನ್ನು ಅನೇಕ ಸ್ಥಳಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಅರಣ್ಯೀಕರಣಕ್ಕೆ ಮತ್ತು ಪ್ರದೇಶ ನಿರ್ದಿಷ್ಟ ಮರ ಪ್ರಭೇದಗಳಿಗೆ ಸೂಕ್ತವಾದ ಭೂ ಪ್ರದೇಶಗಳನ್ನು ಗುರುತಿಸಲು ಕೃತಕ ಬುದ್ಧಿಮತ್ತೆ ಸಹಾಯ ಮಾಡುತ್ತದೆ. ಅಂತಹ ವಿವಿಧ ಆಯ್ಕೆಗಳನ್ನು ಮೌಲ್ಯಮಾಪನ ಮಾಡುವ ಮತ್ತು ಭಾರತದ ಭೌಗೋಳಿಕ ಪರಿಸ್ಥಿತಿಗಳಿಗೆ ಸೂಕ್ತವಾದ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ ಎಂದೂ  ಅವರು ಅಭಿಪ್ರಾಯಪಟ್ಟರು. 

ಅಭಿವೃದ್ಧಿಯ ರಥಕ್ಕೆ ಸಂಪ್ರದಾಯ ಮತ್ತು ಆಧುನಿಕತೆ ಎಂಬ ಎರಡು ಚಕ್ರಗಳಿವೆ ಎಂದು ರಾಷ್ಟ್ರಪತಿ ಹೇಳಿದರು. ಇಂದು ಮಾನವ ಸಮಾಜವು ಅನೇಕ ಪರಿಸರ ಸಮಸ್ಯೆಗಳ ಭಾರವನ್ನು ಹೊರುತ್ತಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಒಂದು ವಿಶೇಷ ರೀತಿಯ ಆಧುನಿಕತೆ, ಅದರ ಮೂಲ ಪ್ರಕೃತಿಯ ಶೋಷಣೆ. ಈ ಪ್ರಕ್ರಿಯೆಯಲ್ಲಿ ಸಾಂಪ್ರದಾಯಿಕ ಜ್ಞಾನವನ್ನು ನಿರ್ಲಕ್ಷಿಸಲಾಗುತ್ತದೆ ಎಂದೂ ಅವರು ಹೇಳಿದರು. 

ಬುಡಕಟ್ಟು ಸಮಾಜವು ಪ್ರಕೃತಿಯ ಶಾಶ್ವತ ನಿಯಮಗಳನ್ನು ತಮ್ಮ ಜೀವನದ ಆಧಾರವನ್ನಾಗಿ ಮಾಡಿಕೊಂಡಿದೆ ಎಂದು ರಾಷ್ಟ್ರಪತಿ ಹೇಳಿದರು. ಈ ಸಮಾಜದ ಜನರು ಪ್ರಕೃತಿಯನ್ನು ಸಂರಕ್ಷಿಸುತ್ತಾರೆ. ಆದರೆ, ಅಸಮತೋಲಿತ ಆಧುನಿಕತೆಯ ಪ್ರಚೋದನೆಯಲ್ಲಿ, ಕೆಲವರು ಬುಡಕಟ್ಟು ಸಮುದಾಯ ಮತ್ತು ಅವರ ಸಾಮೂಹಿಕ ಬುದ್ಧಿವಂತಿಕೆಯನ್ನು ಪ್ರಾಚೀನವಾದುದೆಂದು ಪರಿಗಣಿಸುತ್ತಾರೆ. ಹವಾಮಾನ ಬದಲಾವಣೆಯಲ್ಲಿ ಬುಡಕಟ್ಟು ಸಮಾಜದ  ಯಾವುದೇ ಪಾತ್ರವಿಲ್ಲ,  ಆದರೆ ಅದರ ದುಷ್ಪರಿಣಾಮಗಳ ಹೊರೆ ಅವರ ಮೇಲೆ ಅಸಮಾನವಾದ ರೀತಿಯಲ್ಲಿ  ಹೆಚ್ಚಾಗಿದೆ ಎಂದವರು ಅಭಿಪ್ರಾಯಪಟ್ಟರು.

ಶತಮಾನಗಳಿಂದ ಬುಡಕಟ್ಟು ಸಮಾಜವು ಸಂಗ್ರಹಿಸಿದ ಜ್ಞಾನದ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ಮತ್ತು ಪರಿಸರವನ್ನು ಸುಧಾರಿಸಲು ಅದನ್ನು ಬಳಸುವುದು ಬಹಳ ಮುಖ್ಯ ಎಂದು ರಾಷ್ಟ್ರಪತಿ ಹೇಳಿದರು. ಅವರ ಸಾಮೂಹಿಕ ಜ್ಞಾನವು ಪರಿಸರಾತ್ಮಕವಾಗಿ ಸುಸ್ಥಿರ, ನೈತಿಕವಾಗಿ ಅಪೇಕ್ಷಣೀಯ ಮತ್ತು ಸಾಮಾಜಿಕವಾಗಿ ಸಮರ್ಥನೀಯ ಹಾದಿಯಲ್ಲಿ ಮುಂದುವರಿಯಲು ನಮಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಬುಡಕಟ್ಟು ಸಮಾಜದ ಸಮತೋಲಿತ ಜೀವನಶೈಲಿಯ ಆದರ್ಶಗಳಿಂದ ನಾವು ಅನೇಕ ತಪ್ಪು ಕಲ್ಪನೆಗಳನ್ನು ತೊರೆಯಬೇಕು ಮತ್ತು ಅವರಿಂದ ಮರು ಕಲಿಯಬೇಕು ಎಂದು ಅವರು ಒತ್ತಿ ಹೇಳಿದರು. ನಾವು ಹವಾಮಾನ ನ್ಯಾಯದ ಸ್ಫೂರ್ತಿಯೊಂದಿಗೆ ಮುಂದುವರಿಯಬೇಕು ಎಂದೂ ಅವರು ನುಡಿದರು. 

18 ಮತ್ತು 19 ನೇ ಶತಮಾನಗಳಲ್ಲಿ ಕೈಗಾರಿಕಾ ಕ್ರಾಂತಿಯು ಮರಮುಟ್ಟು ಮತ್ತು ಇತರ ಅರಣ್ಯ ಉತ್ಪನ್ನಗಳ ಬೇಡಿಕೆಯನ್ನು ಹೆಚ್ಚಿಸಿತು ಎಂದು ರಾಷ್ಟ್ರಪತಿ ಹೇಳಿದರು. ಬೇಡಿಕೆಯನ್ನು ನಿಭಾಯಿಸಲು ಹೊಸ ನಿಯಮಗಳು, ನಿಬಂಧನೆಗಳು ಮತ್ತು ಅರಣ್ಯ ಬಳಕೆಯ ವಿಧಾನಗಳನ್ನು ಅಳವಡಿಸಿಕೊಳ್ಳಲಾಯಿತು. ಅಂತಹ ನಿಯಮಗಳು ಮತ್ತು ನಿಬಂಧನೆಗಳನ್ನು ಜಾರಿಗೆ ತರಲು, ಭಾರತೀಯ ಅರಣ್ಯ ಸೇವೆಯ ಪೂರ್ವವರ್ತಿ ಸೇವೆಯಾದ ಇಂಪೀರಿಯಲ್ ಫಾರೆಸ್ಟ್ ಸರ್ವಿಸ್ ಅನ್ನು ರಚಿಸಲಾಯಿತು. ಆ ಸೇವೆಯ ಉದ್ದೇಶವು ಬುಡಕಟ್ಟು ಸಮಾಜ ಮತ್ತು ಅರಣ್ಯ ಸಂಪತ್ತನ್ನು ರಕ್ಷಿಸುವುದಾಗಿರಲಿಲ್ಲ. ಭಾರತದ ಅರಣ್ಯ ಸಂಪನ್ಮೂಲಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವ ಮೂಲಕ ಬ್ರಿಟಿಷ್ ರಾಜ್ ನ ಉದ್ದೇಶಗಳನ್ನು ಉತ್ತೇಜಿಸುವುದು ಅವರ ಇರಾದೆಯಾಗಿತ್ತು ಎಂದೂ ರಾಷ್ಟ್ರಪತಿ ಅವರು ನುಡಿದರು. 

ಬ್ರಿಟಿಷರ ಕಾಲದಲ್ಲಿ ಕಾಡು ಪ್ರಾಣಿಗಳ ಸಾಮೂಹಿಕ ಬೇಟೆಯನ್ನು ಉಲ್ಲೇಖಿಸಿದ ರಾಷ್ಟ್ರಪತಿಗಳು, ತಾವು ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡಿದಾಗ ಪ್ರಾಣಿಗಳ ಚರ್ಮ ಅಥವಾ ಕತ್ತರಿಸಿದ ತಲೆಗಳು ಗೋಡೆಗಳನ್ನು ಅಲಂಕರಿಸಿರುವುದನ್ನು ನೋಡಿದಾಗ ಅವುಗಳು ತಮಗೆ  ಮಾನವ ನಾಗರಿಕತೆಯ ಅವನತಿಯ ಕಥೆಯನ್ನು ಹೇಳುತ್ತಿವೆ ಎಂಬ ಭಾವನೆಯನ್ನು ಮೂಡಿಸುತ್ತವೆ ಎಂದು ಹೇಳಿದರು.

ಭಾರತೀಯ ಅರಣ್ಯ ಸೇವೆಯ ಅಧಿಕಾರಿಗಳು ಹಿಂದಿನ ಸಾಮ್ರಾಜ್ಯಶಾಹಿ/ವಸಾಹತುಶಾಹೀ  ಅರಣ್ಯ ಸೇವೆಯ ವಸಾಹತುಶಾಹಿ ಮನಸ್ಥಿತಿ ಮತ್ತು ದೃಷ್ಟಿಕೋನದಿಂದ ಸಂಪೂರ್ಣವಾಗಿ ಮುಕ್ತರಾಗಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದು ರಾಷ್ಟ್ರಪತಿ ಹೇಳಿದರು. ಐಎಫ್ಎಸ್ ಅಧಿಕಾರಿಗಳು ಭಾರತದ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಮತ್ತು ಹೆಚ್ಚಿಸುವುದು ಮಾತ್ರವಲ್ಲದೆ ಸಾಂಪ್ರದಾಯಿಕ ಜ್ಞಾನವನ್ನು ಮನುಕುಲದ ಹಿತದೃಷ್ಟಿಯಿಂದ ಬಳಸಬೇಕು ಎಂದೂ ಅವರು ಹೇಳಿದರು. ಆಧುನಿಕತೆ ಮತ್ತು ಸಂಪ್ರದಾಯವನ್ನು ಸಮನ್ವಯಗೊಳಿಸುವ ಮೂಲಕ ಮತ್ತು ಕಾಡುಗಳನ್ನು ಆಧರಿಸಿದ ಜನರ ಹಿತಾಸಕ್ತಿಗಳನ್ನು ಮುನ್ನಡೆಸುವ ಮೂಲಕ ಅವರು ಅರಣ್ಯ ಸಂಪತ್ತನ್ನು ರಕ್ಷಿಸಬೇಕಾಗಿದೆ. ಆ ಮೂಲಕ ಅವರು ನಿಜವಾಗಿಯೂ ಅಂತರ್ಗತ ಮತ್ತು ಪರಿಸರಕ್ಕೆ ಅನುಕೂಲಕರವಾದ ಕೊಡುಗೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದೂ ರಾಷ್ಟ್ರಪತಿ ಹೇಳಿದರು. 

ಪರಿಸರಕ್ಕಾಗಿ ಸಾಟಿಯಿಲ್ಲದ ಕೆಲಸ ಮಾಡಿದ ಅನೇಕ ಅಧಿಕಾರಿಗಳನ್ನು ಭಾರತೀಯ ಅರಣ್ಯ ಸೇವೆ ದೇಶಕ್ಕೆ ನೀಡಿದೆ ಎಂದು ರಾಷ್ಟ್ರಪತಿ ಹೇಳಿದರು. ಶ್ರೀ ಪಿ.ಶ್ರೀನಿವಾಸ್, ಶ್ರೀ ಸಂಜಯ್ ಕುಮಾರ್ ಸಿಂಗ್, ಶ್ರೀ ಎಸ್.ಮಣಿಕಂದನ್ ಅವರಂತಹ ಐಎಫ್ಎಸ್ ಅಧಿಕಾರಿಗಳು ಕರ್ತವ್ಯದ ಸಮಯದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅಂತಹ ಅಧಿಕಾರಿಗಳನ್ನು ತಮ್ಮ ಆದರ್ಶ ಮತ್ತು ಮಾರ್ಗದರ್ಶಕರನ್ನಾಗಿ ಪರಿಗಣಿಸಬೇಕು ಮತ್ತು ಅವರು ತೋರಿಸಿದ ಆದರ್ಶಗಳ ಮೇಲೆ ಮುಂದುವರಿಯಬೇಕು ಎಂದು ಅವರು ತರಬೇತಿ ಪಡೆಯುತ್ತಿರುವ ಅಧಿಕಾರಿಗಳನ್ನು ಆಗ್ರಹಿಸಿದರು. 

ಬುಡಕಟ್ಟು ಜನರೊಂದಿಗೆ ಸಮಯ ಕಳೆಯುವಂತೆ ಮತ್ತು ಅವರ ಪ್ರೀತಿ ಹಾಗು ವಿಶ್ವಾಸವನ್ನು ಗಳಿಸುವಂತೆ ರಾಷ್ಟ್ರಪತಿಗಳು ಐಎಫ್ಎಸ್ ಅಧಿಕಾರಿಗಳನ್ನು ಒತ್ತಾಯಿಸಿದರು. ಬುಡಕಟ್ಟು ಸಮಾಜದ ಉತ್ತಮ ಅಭ್ಯಾಸಗಳಿಂದ ಅವರು ಕಲಿಯಬೇಕು ಎಂದೂ ಅವರು ಹೇಳಿದರು. ಅವರು ತಮ್ಮ ಜವಾಬ್ದಾರಿಗಳ ಮಾಲೀಕತ್ವವನ್ನು ತೆಗೆದುಕೊಳ್ಳಬೇಕು ಮತ್ತು ಮಾದರಿಯಾಗಬೇಕು ಎಂದೂ ಆಗ್ರಹಿಸಿದರು. 

ರಾಷ್ಟ್ರಪತಿಗಳ ಭಾಷಣವನ್ನು ಹಿಂದಿಯಲ್ಲಿ ನೋಡಲು ಇಲ್ಲಿ ಕ್ಲಿಕ್ ಮಾಡಿ

https://static.pib.gov.in/WriteReadData/specificdocs/documents/2024/apr/doc2024424333301.pdf

*****



(Release ID: 2019064) Visitor Counter : 17