ಪ್ರಧಾನ ಮಂತ್ರಿಯವರ ಕಛೇರಿ

ಮಹಾವೀರ ಜಯಂತಿಯ ಸಂದರ್ಭದಲ್ಲಿ 2,550ನೇ ಭಗವಾನ ಮಹಾವೀರ ನಿರ್ವಾಣ ಮಹೋತ್ಸವವನ್ನು ಪ್ರಧಾನ ಮಂತ್ರಿಗಳು ಉದ್ಘಾಟಿಸಿದರು 


ಈ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು

"ಭಗವಾನ್ ಮಹಾವೀರರ ಮೌಲ್ಯಗಳ ಕುರಿತ ನಮ್ಮ ಯುವಕರ ಬದ್ಧತೆ ರಾಷ್ಟ್ರವು ಸರಿಯಾದ ದಿಕ್ಕಿನಲ್ಲಿ ಮುನ್ನಡೆಯುತ್ತಿರುವುದರ ಸಂಕೇತವಾಗಿದೆ"

"2,500 ವರ್ಷಗಳ ನಂತರವೂ ನಾವು ಭಗವಾನ್ ಮಹಾವೀರ ಅವರ ನಿರ್ವಾಣ ದಿನವನ್ನು ಆಚರಿಸುತ್ತಿದ್ದೇವೆ. ಮುಂದಿನ ಸಾವಿರಾರು ವರ್ಷಗಳ ಕಾಲವೂ ನಮ್ಮ ದೇಶ ಭಗವಾನ್ ಮಹಾವೀರ್ ಅವರ ಮೌಲ್ಯಗಳ ಆಚರಿಣೆಯನ್ನು ಮುಂದುವರಿಸುತ್ತದೆ ಎಂದು ನನಗೆ ಖಾತ್ರಿಯಿದೆ "

"ಜಗತ್ತಿನ ಅನೇಕ ಕಡೆ ಯುದ್ಧಗಳು ನಡೆಯುತ್ತಿರುವ ಈ ಸಮಯದಲ್ಲಿ ನಮ್ಮ ತೀರ್ಥಂಕರರ ಬೋಧನೆಗಳು ಮತ್ತಷ್ಟು ಪ್ರಸ್ತುತತೆಯನ್ನು ಪಡೆದುಕೊಂಡಿವೆ"

"ವಿಭಜಿತ ಜಗತ್ತಿನಲ್ಲಿ ಭಾರತವು 'ವಿಶ್ವ ಬಂಧು'ವಾಗಿ ತನ್ನದೇ ಆದ  ಸ್ಥಾನವನ್ನು ಗಳಿಸಿಕೊಳ್ಳುತ್ತಿದೆ"

“ಹೊಸ ಪೀಳಿಗೆಗೆ ಭಾರತದ ಐಡೆಂಟಿಟಿ  ಹೆಮ್ಮೆಯ ವಿಷಯವಾಗಿದೆ. ಸ್ವಾಭಿಮಾನದ ಭಾವನೆ ಜಾಗೃತವಾದಾಗ ಒಂದು ರಾಷ್ಟ್ರವನ್ನು ತಡೆಯುವುದು ಅಸಾಧ್ಯ ಎಂಬುದಕ್ಕೆ ಭಾರತವೇ ಸಾಕ್ಷಿ”

"ಆಧುನಿಕತೆ ಭಾರತದ ದೇಹ, ಆಧ್ಯಾತ್ಮಿಕತೆ ಅದರ ಆತ್ಮ"

Posted On: 21 APR 2024 12:04PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಂದು ಭಾರತ ಮಂಟಪದಲ್ಲಿ ಮಹಾವೀರ್ ಜಯಂತಿಯ ಶುಭ ಸಂದರ್ಭದಂದು 2550 ನೇ ಭಗವಾನ್ ಮಹಾವೀರ್ ನಿರ್ವಾಣ ಮಹೋತ್ಸವವನ್ನು ಉದ್ಘಾಟಿಸಿದರು. ಶ್ರೀ ಮೋದಿಯವರು ಭಗವಾನ್ ಮಹಾವೀರರ ಮೂರ್ತಿಗೆ ಅಕ್ಕಿ ಮತ್ತು ಪುಷ್ಪಗಳೊಂದಿಗೆ ನಮನ ಸಲ್ಲಿಸಿ ಭಗವಾನ್ ಮಹಾವೀರರ ಕುರಿತು ಶಾಲಾ ಮಕ್ಕಳು ಪ್ರಸ್ತುತಪಡಿಸಿದ “ವರ್ತಮಾನ್ ಮೇ ವರ್ಧಮಾನ್” ಎಂಬ ನೃತ್ಯ ನಾಟಕವನ್ನು ವೀಕ್ಷಿಸಿದರು. ಇದೇ  ಸಂದರ್ಭದಲ್ಲಿ ಮಹಾವೀರ್ ನಿರ್ವಾಣ ಮಹೋತ್ಸವದ ಸ್ಮರಣಾರ್ಥ ಹೊರತರಲಾದ ಅಂಚೆಚೀಟಿ ಮತ್ತು ನಾಣ್ಯವನ್ನು ಪ್ರಧಾನಮಂತ್ರಿಯವರು ಬಿಡುಗಡೆ ಮಾಡಿದರು.

ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು, ಭವ್ಯವಾದ ಭಾರತ ಮಂಟಪವು ಇಂದು 2550 ನೇ ಭಗವಾನ್ ಮಹಾವೀರ್ ನಿರ್ವಾಣ ಮಹೋತ್ಸವಕ್ಕೆ ಸಾಕ್ಷಿಯಾಗಿದೆ ಎಂದರು. ಭಗವಾನ್ ಮಹಾವೀರರ ಕುರಿತು ಶಾಲಾ ಮಕ್ಕಳು ಪ್ರಸ್ತುತಪಡಿಸಿದ “ವರ್ತಮಾನ್ ಮೇ ವರ್ಧಮಾನ್” ನೃತ್ಯ ನಾಟಕವನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿಗಳು, ಮಹಾವೀರರ ಮೌಲ್ಯಗಳೆಡೆಗೆ ದೇಶದ ಯುವಕರ ಸಮರ್ಪಣೆ ಮತ್ತು ಬದ್ಧತೆಯು ರಾಷ್ಟ್ರವು ಸರಿಯಾದ ದಿಕ್ಕಿನಲ್ಲಿ ಮುನ್ನಡೆಯುತ್ತಿರುವ ಸಂಕೇತವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಅಂಚೆಚೀಟಿ ಮತ್ತು ನಾಣ್ಯದ  ಬಗ್ಗೆ ಪ್ರಸ್ತಾಪಿಸಿದ ಅವರು ಜೈನ ಸಮುದಾಯದ ಮಾರ್ಗದರ್ಶನ ಮತ್ತು ಆಶೀರ್ವಾದಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಜೈನ ಸಮುದಾಯದ ಸಂತರಿಗೆ ನಮಸ್ಕರಿಸಿದ ಶ್ರೀ ಮೋದಿಯವರು ದೇಶದ ಎಲ್ಲಾ ನಾಗರಿಕರಿಗೆ ಮಹಾವೀರ್ ಜಯಂತಿಯ ಶುಭಾಷಯಗಳನ್ನು ತಿಳಿಸಿದರು. ಆಚಾರ್ಯ ಶ್ರೀ ವಿದ್ಯಾಸಾಗರಜಿ ಮಹಾರಾಜರಿಗೆ ನಮನ ಸಲ್ಲಿಸುವುದರ ಜೊತೆಗೆ ಪ್ರಧಾನಮಂತ್ರಿಯವರು ಆಚಾರ್ಯರೊಂದಿಗಿನ ತಮ್ಮ ಇತ್ತೀಚಿನ ಭೇಟಿಯನ್ನು ಸ್ಮರಿಸಿದರು. ಆಚಾರ್ಯರ ಆಶೀರ್ವಾದವು ನಮಗೆ ಈಗಲೂ ಮಾರ್ಗದರ್ಶನ ನೀಡುತ್ತಿದೆ ಎಂದು ಹೇಳಿದರು.

2550ನೇ ಭಗವಾನ್ ಮಹಾವೀರ್ ನಿರ್ವಾಣ ಮಹೋತ್ಸವದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿಗಳು, ಈ ಸಂದರ್ಭವು ಅಮೃತ ಕಾಲದ  ಆರಂಭಿಕ ಹಂತದಂತಹ ಹಲವು ಸಂತೋಷಗಳ ಜೊತೆಗೆ ಮಿಳಿತವಾಗಿದೆ ಎಂದರು. ಸಂವಿಧಾನದ 75 ನೇ ವರ್ಷಾಚರಣೆ ಮತ್ತು ಪ್ರಜಾಪ್ರಭುತ್ವದ ಹಬ್ಬವು ರಾಷ್ಟ್ರದ ಭವಿಷ್ಯದ ದಿಕ್ಕನ್ನು ನಿರ್ಧರಿಸಲಿವೆ  ಎಂದರು. 

ಅಮೃತ್ ಕಾಲ್ ಕಲ್ಪನೆಯು ಕೇವಲ ಒಂದು ನಿರ್ಧಾರ ಅಥವಾ ಗುರಿಯಲ್ಲ. ಆದರೆ ಅಮರತ್ವ ಮತ್ತು ಶಾಶ್ವತತೆಯ ಮೂಲಕ ಬದುಕಲು ನಮಗೆ ಅನುವು ಮಾಡಿಕೊಡುವ ಆಧ್ಯಾತ್ಮಿಕ ಸ್ಫೂರ್ತಿಯಾಗಿದೆ ಎಂದು ಪ್ರಧಾನ ಮಂತ್ರಿಗಳು ಒತ್ತಿ ಹೇಳಿದರು. "ನಾವು 2500 ವರ್ಷಗಳ ನಂತರವೂ ಭಗವಾನ್ ಮಹಾವೀರ ಅವರ ನಿರ್ವಾಣ ದಿನವನ್ನು ಆಚರಿಸುತ್ತಿದ್ದೇವೆ. ಮುಂದಿನ ಸಾವಿರಾರು ವರ್ಷಗಳ ಕಾಲವೂ ನಮ್ಮ ದೇಶವು ಭಗವಾನ್ ಮಹಾವೀರ ಅವರ ಮೌಲ್ಯಗಳನ್ನು ಆಚರಿಸುವುದನ್ನು ಮುಂದುವರಿಸುತ್ತದೆ ಎಂದು ನನಗೆ ಖಾತ್ರಿಯಿದೆ" ಎಂದು ಅವರು ಹೇಳಿದರು. ಮುಂಬರುವ ಶತಮಾನಗಳು ಮತ್ತು ಸಹಸ್ರಮಾನಗಳು ಹೇಗಿರಬಹುದೆಂದು ಕಲ್ಪಿಸಿಕೊಳ್ಳುವ ಭಾರತದ ಸಾಮರ್ಥ್ಯ ಮತ್ತು ಅದರ ದೂರದೃಷ್ಟಿಯ ವಿಧಾನವು ನಮ್ಮ ದೇಶವನ್ನು ಈ ಭೂಮಿಯ ಮೇಲಿನ ದೀರ್ಘಕಾಲದ ನಾಗರಿಕತೆಯನ್ನಾಗಿಸುವುದರ ಜೊತೆಗೆ ಮಾನವೀಯತೆಯ ಸ್ವರ್ಗವನ್ನಾಗಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಭಾರತವು ತನ್ನ ಬಗ್ಗೆ ಮಾತ್ರವಲ್ಲ, ಎಲ್ಲರ ಬಗ್ಗೆಯೂ ಯೋಚಿಸುತ್ತದೆ. ಪ್ರತಿಯೊಬ್ಬರಲ್ಲಿಯೂ ನಂಬಿಕೆ ಇರಿಸುತ್ತದೆ. ಭಾರತ ಕೇವಲ ಸಂಪ್ರದಾಯಗಳ ಬಗ್ಗೆ ಮಾತನಾಡುವುದಿಲ್ಲ. ನೀತಿಗಳ ಬಗ್ಗೆಯೂ ಮಾತನಾಡುತ್ತದೆ. ದೇಹದಲ್ಲಿ ಬ್ರಹ್ಮಾಂಡ, ಜಗತ್ತಿನಲ್ಲಿ ಬ್ರಹ್ಮ ಮತ್ತು ಜೀವಿಗಳಲ್ಲಿ ಶಿವನ ಇರುವಿಕೆಯ ಬಗ್ಗೆಯೂ ಭಾರತ ಮಾತನಾಡುತ್ತದೆ,” ಎಂದು ಅವರು ಹೇಳಿದರು.

ನಿಶ್ಚಲತೆಯಿಂದಾಗಿ ಅಭಿಪ್ರಾಯಗಳು ಭಿನ್ನಾಭಿಪ್ರಾಯಗಳಾಗಿ ಬದಲಾಗಬಹುದು, ಆದಾಗ್ಯೂ, ಚರ್ಚೆಯು ಹೊಸ ನೋಟಗಳಿಗೆ ಕಾರಣವಾಗುತ್ತದೆ. ಕೆಲವೊಮ್ಮೆ ಚರ್ಚೆಯ ಸ್ವರೂಪವನ್ನು ಅವಲಂಬಿಸಿ ವಿನಾಶಕ್ಕೂ ಕಾರಣವಾಗಬಹುದು ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಕಳೆದ 75 ವರ್ಷಗಳ ಮಂಥನವು ಈ ಅಮೃತ ಕಾಲದಲ್ಲಿ ಅಮೃತಕ್ಕೆ ಕಾರಣವಾಗಬೇಕು ಎಂದು ಒತ್ತಿ ಹೇಳಿದರು. "ಜಾಗತಿಕವಾಗಿ, ಅನೇಕ ದೇಶಗಳು ಯುದ್ಧದಲ್ಲಿ ತೊಡಗಿರುವ ಸಮಯದಲ್ಲಿ ನಮ್ಮ ತೀರ್ಥಂಕರರ ಬೋಧನೆಗಳು ಎಂದಿಗಿಂತಲೂ ಹೆಚ್ಚಿನ ಪ್ರಸ್ತುತತೆಯನ್ನು ಪಡೆದುಕೊಂಡಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಒಂದು ವಿಷಯದ ಎಲ್ಲ ಆಯಾಮಗಳನ್ನು ಅವಲೋಕಿಸುವ ಮತ್ತು ಇತರರ ಅಭಿಪ್ರಾಯಗಳನ್ನು ಒಪ್ಪಿಕೊಳ್ಳುವುದನ್ನು ನಮಗೆ ಕಲಿಸುವ ಅನೇಕಾಂತವಾದ ಮತ್ತು ಸ್ಯಾದ್ವಾದದಂತಹ ತತ್ವಗಳನ್ನು ಪ್ರಧಾನ ಮಂತ್ರಿ ಮೋದಿ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಇಂದಿನ ಸಂಘರ್ಷದ ಸಮಯದಲ್ಲಿ ಜಗತ್ತು ಭಾರತದಿಂದ ಶಾಂತಿಯನ್ನು ನಿರೀಕ್ಷಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಜಗತ್ತಿನೆದುರು ಹೆಚ್ಚುತ್ತಿರುವ ಭಾರತದ  ಪ್ರಭಾವಕ್ಕೆ  ಕಾರಣ ನಮ್ಮ ದೇಶದ ಕಲ್ಚರಲ್ ಇಮೇಜ್, ವೃದ್ಧಿಸುತ್ತಿರುವ ಸಾಮರ್ಥ್ಯ ಮತ್ತು ವಿದೇಶಾಂಗ ನೀತಿಗಳು ಎಂದು ಅವರು ಹೇಳಿದರು. “ಇಂದು ನಾವು ಜಾಗತಿಕ ವೇದಿಕೆಗಳಲ್ಲಿ ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ಸಂಪೂರ್ಣ ವಿಶ್ವಾಸದೊಂದಿಗೆ ಮುಂದಿಡುತ್ತಿದ್ದೇವೆ. ಪ್ರಾಚೀನ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಜಾಗತಿಕ ಸಮಸ್ಯೆಗಳಿಗೆ ಪರಿಹಾರವಿದೆ ಎಂದು ನಾವು ಜಗತ್ತಿಗೆ ಹೇಳುತ್ತಿದ್ದೇವೆ. ಈ ಕಾರಣಕ್ಕಾಗಿಯೇ ಭಾರತವು ಇಂದಿನ ವಿಭಜಿತ ಜಗತ್ತಿನಲ್ಲಿ ‘ವಿಶ್ವ ಬಂಧು'ವಾಗಿ ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತಿದೆ ”ಎಂದು ಪ್ರಧಾನ ಮಂತ್ರಿ ಮೋದಿ ಹೇಳಿದರು. ಹವಾಮಾನ ಬದಲಾವಣೆಯನ್ನು ಎದುರಿಸಲು ಮಿಷನ್ ಲೈಫ್‌,  ಮತ್ತು ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ ಎಂಬ ದೃಷ್ಟಿಕೋನ ಜೊತೆಗೆ ಒಂದು ವಿಶ್ವ-ಒಂದು ಸೂರ್ಯ-ಒಂದು ಗ್ರಿಡ್‌ನಂತಹ ಭಾರತದ  ಕ್ರಮಗಳನ್ನು ಅವರು ಈ ಸಂದರ್ಭದಲ್ಲಿ  ಪ್ರಸ್ತಾಪಿಸಿದರು. ಇಂದು ಭಾರತವು ಅಂತರರಾಷ್ಟ್ರೀಯ ಸೌರ ಒಕ್ಕೂಟದಂತಹ ಭವಿಷ್ಯದ ಜಾಗತಿಕ ಉಪಕ್ರಮವನ್ನು ಮುನ್ನಡೆಸುತ್ತಿದೆ ಎಂದು ಅವರು ಹೇಳಿದರು. "ಈ ಉಪಕ್ರಮಗಳು ಜಗತ್ತಿನಲ್ಲಿ ಭರವಸೆಯನ್ನು ಮಾತ್ರ ಸೃಷ್ಟಿಸಿಲ್ಲ ಬದಲಾಗಿ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಕುರಿತು ಜಾಗತಿಕ ಗ್ರಹಿಕೆಯಲ್ಲಿ ಬದಲಾವಣೆಗೆ ಕಾರಣವಾಗಿದೆ" ಎಂದು ಮೋದಿ ಅವರು ಹೇಳಿದರು. 

ಜೈನ ಧರ್ಮದ ಅರ್ಥದ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿಗಳು, ಇದು ಜಿನ ಅಥವಾ ವಿಜಯಶಾಲಿಯ ಮಾರ್ಗವಾಗಿದೆ ಎಂದು ಹೇಳಿದರು. ಭಾರತ ಎಂದಿಗೂ ಮತ್ತೊಂದು ರಾಷ್ಟ್ರವನ್ನು ವಶಪಡಿಸಿಕೊಳ್ಳಲು ದಾಳಿ ಮಾಡಿಲ್ಲ. ಬದಲಿಗೆ ತನ್ನನ್ನು ತಾನು ಸುಧಾರಿಸಿಕೊಳ್ಳಲು ಕೆಲಸ ಮಾಡಿದೆ ಎಂದು ಅವರು ಒತ್ತಿ ಹೇಳಿದರು. ಅತ್ಯಂತ ಕರಾಳ ಸಮಯದಲ್ಲಿ ಮಹಾನ್ ಸಂತರು ಮತ್ತು ಋಷಿಗಳು ಭಾರತಕ್ಕೆ ಮಾರ್ಗದರ್ಶನ ಮಾಡಿದ್ದಾರೆ. ಇದು ಅನೇಕ ಮಹಾನ್ ನಾಗರಿಕತೆಗಳು ನಾಶವಾದರೂ ಭಾರತವು ತನ್ನ ದಾರಿಯನ್ನು ಕಂಡುಕೊಳ್ಳಲು ಅನುವು ಮಾಡಿಕೊಟ್ಟಿತು ಎಂದು ಅವರು ಹೇಳಿದರು.

ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಹಲವಾರು ಆಚರಣೆಗಳು  ನಡೆದಿರುವುದನ್ನು ಪ್ರಸ್ತಾಪಿಸಿದ ಮೋದಿ ಅವರು, ಜೈನ ಆಚಾರ್ಯರ ಆಹ್ವಾನದ ಮೇರೆಗೆ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಗೌರವದ ವಿಷಯ ಎಂದರು. "ಸಂಸತ್ತಿನ ಹೊಸ ಕಟ್ಟಡವನ್ನು ಪ್ರವೇಶಿಸುವ ಮೊದಲು, ನನ್ನ ಜೀವನದ ಮೌಲ್ಯಗಳನ್ನು ನೆನಪಿಸಿಕೊಳ್ಳಲು ನಾನು 'ಮಿಚ್ಚಾಮಿ ದುಕ್ಕಡಂ' ಅನ್ನು ಪಠಿಸಿದ್ದು ಈಗಲೂ ನನಗೆ ನೆನಪಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ದೇಶದ ಪರಂಪರೆ, ಯೋಗ ಮತ್ತು ಆಯುರ್ವೇದ ಕ್ಷೇತ್ರಗಳನ್ನು ಇನ್ನಷ್ಟು ಅಂದವಾಗಿಸುವ  ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದರು. ಭಾರತದ ಅಸ್ಮಿತೆಯೇ ಹೆಮ್ಮೆ ಎಂದು ಹೊಸ ಪೀಳಿಗೆ ನಂಬುತ್ತದೆ ಎಂದು ಹೇಳಿದರು. ಸ್ವಾಭಿಮಾನದ ಭಾವನೆ ಜಾಗೃತವಾದಾಗ ರಾಷ್ಟ್ರ ಪ್ರಗತಿಯಾಗುವುದನ್ನು ಮತ್ತು ಸಧೃಢವಾಗುವುದನ್ನು ತಡೆಯುವುದು ಅಸಾಧ್ಯ ಎಂಬುದಕ್ಕೆ ಭಾರತವೇ ಸಾಕ್ಷಿ ಯಾಗಿದೆ ಎಂದು ಅವರು ಒತ್ತಿ ಹೇಳಿದರು.

“ಆಧುನಿಕತೆ ಭಾರತದ ದೇಹವಾಗಿದೆ, ಆಧ್ಯಾತ್ಮಿಕತೆ ಅದರ ಆತ್ಮವಾಗಿದೆ. ಆಧುನಿಕತೆಯಿಂದ ಆಧ್ಯಾತ್ಮಿಕತೆಯನ್ನು ಬೇರ್ಪಡಿಸಿದರೆ ಅರಾಜಕತೆ ಹುತ್ತಿಕೊಳ್ಳುತ್ತದೆ," ಎಂದು ಹೇಳಿದ ಪ್ರಧಾನ ಮಂತ್ರಿಗಳು, ಭಗವಾನ್ ಮಹಾವೀರರ ಬೋಧನೆಗಳನ್ನು ಅನುಸರಿಸಲು ಕರೆ ನೀಡಿದರು. "ಅವರ ಮೌಲ್ಯಗಳ ಪುನರುಜ್ಜೀವನವು ಈ ಕಾಲದ ಬೇಡಿಕೆಯಾಗಿದೆ," ಎಂದರು. 

25 ಕೋಟಿಗೂ ಹೆಚ್ಚು ಭಾರತೀಯರು ಬಡತನದಿಂದ ಹೊರಬಂದಿರುವುದರಿಂದ ಭಾರತವು ಭ್ರಷ್ಟಾಚಾರ ಮತ್ತು ಹತಾಶೆಯ ಕಾಲಘಟ್ಟದಿಂದ ಹೊರಬರುತ್ತಿದೆ. ಈ ಕ್ಷಣವನ್ನು ಸದುಪಯೋಗಪಡಿಸಿಕೊಳ್ಳಲು ನಾಗರಿಕರನ್ನು ಕೋರಿದ ಪ್ರಧಾನಮಂತ್ರಿಯವರು,  ‘ಅಸ್ತೇಯ ಮತ್ತು ಅಹಿಂಸಾ’ದ ಮಾರ್ಗವನ್ನು ಅನುಸರಿಸಲು ಪ್ರತಿಯೊಬ್ಬರನ್ನು ಕೇಳಿಕೊಂಡರು. ರಾಷ್ಟ್ರದ ಭವಿಷ್ಯಕ್ಕಾಗಿ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ ಮೋದಿ ಅವರು ಸಂತರ ಸ್ಪೂರ್ತಿದಾಯಕ ಮಾತುಗಳಿಗಾಗಿ ಧನ್ಯವಾದಗಳನ್ನು ಅರ್ಪಿಸಿದರು.

ಶ್ರೀ ಅರ್ಜುನ್ ರಾಮ್ ಮೇಘವಾಲ್, ಕೇಂದ್ರ ಕಾನೂನು ಮತ್ತು ನ್ಯಾಯ, ಮತ್ತು ಸಂಸದೀಯ ವ್ಯವಹಾರಗಳು ಮತ್ತು ಸಂಸ್ಕೃತಿ ರಾಜ್ಯ ಸಚಿವರು, ಜೈನ ಸಮುದಾಯದ ಸಂತರು ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

24 ನೇ ತೀರ್ಥಂಕರರಾದ ಭಗವಾನ್ ಮಹಾವೀರ್ ಅವರು ಜೈನ ತತ್ವಗಳಾದ ಅಹಿಂಸೆ, ಸತ್ಯ, ಅಸ್ತೇಯ (ಕಳ್ಳತನ ಮಾಡದಿರುವುದು), ಬ್ರಹ್ಮಚರ್ಯ (ಪಾವಿತ್ರ್ಯತೆ) ಮತ್ತು ಅಪರಿಗ್ರಹ (ಪರಿತ್ಯಕ್ತತೆ) ಗಳ ಮೂಲಕ ಶಾಂತಿಯುತ ಸಹಬಾಳ್ವೆ ಮತ್ತು ಸಾರ್ವತ್ರಿಕ ಸಹೋದರತ್ವದ ಮಾರ್ಗವನ್ನು ಬೆಳಗಿಸಿದರು.

ಜೈನರು ಮಹಾವೀರ ಸ್ವಾಮಿಜಿ ಸೇರಿದಂತೆ ಪ್ರತಿಯೊಬ್ಬ ತೀರ್ಥಂಕರರ ಜೀವಿತದ ಐದು ಪ್ರಮುಖ ಘಟ್ಟಗಳನ್ನು ಆಚರಿಸುತ್ತಾರೆ:  ಚ್ಯವನ/ಗರ್ಭ (ಗರ್ಭಧಾರಣೆ) ಕಲ್ಯಾಣಕ್; ಜನ್ಮ (ಹುಟ್ಟು) ಕಲ್ಯಾಣಕ್; ದೀಕ್ಷಾ (ತ್ಯಾಗ) ಕಲ್ಯಾಣಕ್; ಕೇವಲಜ್ಞಾನ (ಸರ್ವಶಾಸ್ತ್ರ) ಕಲ್ಯಾಣಕ್ ಮತ್ತು ನಿರ್ವಾಣ (ವಿಮೋಚನೆ/ಅಂತಿಮ ಮೋಕ್ಷ) ಕಲ್ಯಾಣಕ್.  21ನೇ ಏಪ್ರಿಲ್ 2024 ಭಗವಾನ್ ಮಹಾವೀರರ ಜನ್ಮ ಕಲ್ಯಾಣವಾಗಿದ್ದು, ಜೈನ ಸಮುದಾಯದೊಂದಿಗೆ ಭಾರತ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಸರ್ಕಾರವು ಈ ಸಂದರ್ಭವನ್ನು ಸ್ಮರಿಸಿಕೊಂಡಿತು. ಜೈನ ಸಮುದಾಯದ ಸಂತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಭಾಗವಹಿಸಿದ್ದ ಜನರನ್ನು ಹಾರೈಸಿದರು. ಭಗವಾನ್ ಮಹಾವೀರರ ಶಾಂತಿ, ಸಹಾನುಭೂತಿ ಮತ್ತು ಸಹೋದರತ್ವದ ಸಂದೇಶವು ಜಗತ್ತಿನ ಪ್ರತಿಯೊಬ್ಬರಿಗೂ ಸ್ಫೂರ್ತಿಯ ಮೂಲವಾಗಿದೆ. 2550ನೇ ಭಗವಾನ್ ಮಹಾವೀರ ನಿರ್ವಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವುದು.

 

******



(Release ID: 2018568) Visitor Counter : 42