ಪ್ರಧಾನ ಮಂತ್ರಿಯವರ ಕಛೇರಿ

ಆರ್‌ಬಿಐ @90 ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


ಆರ್‌ಬಿಐಗೆ 90 ವರ್ಷ ತುಂಬಿದ ಸ್ಮರಣಾರ್ಥ ನಾಣ್ಯ ಬಿಡುಗಡೆ

"ನಮ್ಮ ರಾಷ್ಟ್ರವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸುವಲ್ಲಿ ಆರ್‌ಬಿಐ ಪ್ರಮುಖ ಪಾತ್ರ ವಹಿಸುತ್ತಿದೆ"

"ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಕಾಲಕ್ಕೆ ಆರ್‌ಬಿಐ ಸಾಕ್ಷಿಯಾಗಿದೆ, ಅದರ ವೃತ್ತಿಪರತೆ ಮತ್ತು ಬದ್ಧತೆಯ ಆಧಾರದ ಮೇಲೆ ಇಡೀ ಜಗತ್ತಿನಲ್ಲೇ ತನ್ನದೇ ಗುರುತು ಸೃಷ್ಟಿಸಿದೆ"

"ಇಂದು ನಾವು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ವಿಶ್ವದ ಪ್ರಬಲ ಮತ್ತು ಸುಸ್ಥಿರ ಬ್ಯಾಂಕಿಂಗ್ ವ್ಯವಸ್ಥೆಯಾಗಿ ನೋಡುವ ಹಂತ ತಲುಪಿದ್ದೇವೆ"

"ಮನ್ನಣೆ, ನಿರ್ಣಯ ಮತ್ತು ಮರುಬಂಡವಾಳೀಕರಣದ ಕಾರ್ಯತಂತ್ರದಲ್ಲಿ ಸರ್ಕಾರ ಕೆಲಸ ಮಾಡಿದೆ"

"ಸಕ್ರಿಯ ಬೆಲೆ ಮೇಲ್ವಿಚಾರಣೆ ಮತ್ತು ಹಣಕಾಸಿನ ಬಲವರ್ಧನೆಯಂತಹ ಕ್ರಮಗಳು ಕೊರೊನಾ ಸಂಕಷ್ಟ ಸಮಯದಲ್ಲೂ ಹಣದುಬ್ಬರ ದರವನ್ನು ಮಧ್ಯಮ ಮಟ್ಟದಲ್ಲಿ ಕಾಪಾಡಲು ನೆರವಾದವು"

"ಇಂದು  ಭಾರತವು ಜಾಗತಿಕ ಜಿಡಿಪಿ ಬೆಳವಣಿಗೆಯಲ್ಲಿ ಶೇಕಡ 15ರಷ್ಟು ಪಾಲು ಹೊಂದಿರುವ ಜಾಗತಿಕ ಬೆಳವಣಿಗೆಯ ಚಾಲನಾಶಕ್ತಿ ಆಗುತ್ತಿದೆ"

"ವಿಕಸಿತ ಭಾರತ ಬ್ಯಾಂಕಿಂಗ್ ದೂರದೃಷ್ಟಿಯ ಸಮಗ್ರ ಮೆಚ್ಚುಗೆಗೆ ಆರ್‌ಬಿಐ ಸೂಕ್ತ ಸಂಸ್ಥೆಯಾಗಿದೆ"

Posted On: 01 APR 2024 12:49PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಮುಂಬೈನಲ್ಲಿಂದು ಭಾರತೀಯ ರಿಸರ್ವ್ ಬ್ಯಾಂಕ್‌ನ 90 ನೇ ವರ್ಷಾಚರಣೆ ಕಾರ್ಯಕ್ರಮ ಆರ್‌ಬಿಐ@90 ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಆರ್‌ಬಿಐ 90 ವರ್ಷಗಳನ್ನು ಪೂರೈಸಿದ ಸ್ಮರಣಾರ್ಥ ಶ್ರೀ ಮೋದಿ ಅವರು ನಾಣ್ಯ ಬಿಡುಗಡೆ ಮಾಡಿದರು. ಭಾರತೀಯ ರಿಸರ್ವ್ ಬ್ಯಾಂಕ್(RBI) 1935 ಏಪ್ರಿಲ್ 1ರಂದು ತನ್ನ ಕಾರ್ಯಾಚರಣೆ ಪ್ರಾರಂಭಿಸಿ, ಇಂದು ತನ್ನ 90ನೇ ವರ್ಷಕ್ಕೆ ಪ್ರವೇಶಿಸಿತು.

ಈ ಸಂದರ್ಭ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಭಾರತೀಯ ರಿಸರ್ವ್ ಬ್ಯಾಂಕ್ ಇಂದು 90 ವರ್ಷಗಳ ಅಸ್ತಿತ್ವ ಪೂರೈಸುವ ಮೂಲಕ ಐತಿಹಾಸಿಕ ಹೆಗ್ಗುರುತು ತಲುಪಿದೆ. ಸ್ವಾತಂತ್ರ್ಯಪೂರ್ವ ಮತ್ತು ನಂತರದ ಎರಡೂ ಯುಗಗಳಿಗೆ ಆರ್‌ಬಿಐ ಸಾಕ್ಷಿಯಾಗಿದೆ. ಅದು ತನ್ನ ವೃತ್ತಿಪರತೆ ಮತ್ತು ಬದ್ಧತೆಯ ಆಧಾರದ ಮೇಲೆ ಇಡೀ ಜಗತ್ತಿನಾದ್ಯಂತ ತನ್ನ ಗುರುತು ಸೃಷ್ಟಿಸಿದೆ. ಆರ್‌ಬಿಐ 90 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಅವರು ಎಲ್ಲಾ ಸಿಬ್ಬಂದಿಯನ್ನು ಅಭಿನಂದಿಸಿದರು. ಪ್ರಸ್ತುತ ಆರ್‌ಬಿಐ ಸಿಬ್ಬಂದಿಯನ್ನು ಅದೃಷ್ಟವಂತರು ಎಂದು ಉಲ್ಲೇಖಿಸಿದ ಪ್ರಧಾನಿ, ಇಂದು ರೂಪಿಸಿದ ನೀತಿಗಳು ಆರ್‌ಬಿಐನ ಮುಂದಿನ ದಶಕವನ್ನು ರೂಪಿಸಲಿವೆ. ಮುಂದಿನ 10 ವರ್ಷಗಳು ಆರ್‌ಬಿಐ ಅನ್ನು ಶತಮಾನೋತ್ಸವ ವರ್ಷಕ್ಕೆ ಕೊಂಡೊಯ್ಯಲಿವೆ. "ಮುಂದಿನ ದಶಕವು ವಿಕ್ ಸಿತ್ ಭಾರತ್‌ನ ನಿರ್ಣಯಗಳಿಗೆ ಅತ್ಯಂತ ಮಹತ್ವದ್ದಾಗಿದೆ". ವೇಗದ ಬೆಳವಣಿಗೆ, ನಂಬಿಕೆ ಮತ್ತು ಸ್ಥಿರತೆಯ ಮೇಲೆ ಗಮನ ಕೇಂದ್ರೀಕರಿಸಲು ಆರ್‌ಬಿಐ ಒತ್ತು ನೀಡಿದೆ. ಅದರ ಗುರಿಗಳು ಮತ್ತು ನಿರ್ಣಯಗಳ ನೆರವೇರಿಕೆಗಾಗಿ ಪ್ರಧಾನ ಮಂತ್ರಿ ತಮ್ಮ ಶುಭಾಶಯಗಳನ್ನು ತಿಳಿಸಿದರು.

ಜಿಡಿಪಿ ಮತ್ತು ದೇಶದ ಆರ್ಥಿಕತೆಯಲ್ಲಿ ವಿತ್ತೀಯ ಮತ್ತು ಆರ್ಥಿಕ ನೀತಿಗಳ ಸಮನ್ವಯದ ಪ್ರಾಮುಖ್ಯತೆ ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, 2014ರಲ್ಲಿ ಆರ್‌ಬಿಐನ 80 ವರ್ಷಗಳ ಸಂಭ್ರಮಾಚರಣೆ ನೆನಪಿಸಿಕೊಂಡರು. ಬ್ಯಾಂಕಿಂಗ್ ವ್ಯವಸ್ಥೆಯು ಎದುರಿಸುತ್ತಿರುವ ಅನುತ್ಪಾದಕ ಆಸ್ತಿ(ಎನ್‌ಪಿಎ)ಯ ಸ್ಥಿರತೆಯಂತಹ ಸವಾಲುಗಳು ಮತ್ತು ಸಮಸ್ಯೆಗಳನ್ನು ನೆನಪಿಸಿಕೊಂಡರು. ಆ ಸಮಯದಲ್ಲಿ ದೇಶ ಎದುರಿಸಿದ ಪರಿಸ್ಥಿತಿಯಿಂದ ಆರಂಭವಾಗಿ ಇಂದು ನಾವು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯನ್ನು ವಿಶ್ವದ ಪ್ರಬಲ ಮತ್ತು ಸುಸ್ಥಿರ ಬ್ಯಾಂಕಿಂಗ್ ವ್ಯವಸ್ಥೆಯಾಗಿ ನೋಡುವ ಹಂತಕ್ಕೆ ತಲುಪಿದ್ದೇವೆ. ಆ ಕಾಲದಲ್ಲೇ ಆರಂಭವಾದ ಈ ಬ್ಯಾಂಕಿಂಗ್ ವ್ಯವಸ್ಥೆಯು ಈಗ ಲಾಭದಲ್ಲಿದ್ದು, ದಾಖಲೆಯ ಸಾಲವನ್ನು ತೋರಿಸುತ್ತಿದೆ.

ಈ ಪರಿವರ್ತನೆಗೆ ಆರ್‌ಬಿಐನ ನೀತಿ, ಉದ್ದೇಶಗಳು ಮತ್ತು ನಿರ್ಧಾರಗಳ ಸ್ಪಷ್ಟತೆ ಕಾರಣ ಎಂದು ಪ್ರಧಾನ ಮಂತ್ರಿ ಶ್ಲಾಘಿಸಿದರು. "ಉದ್ದೇಶಗಳು ಸರಿಯಾಗಿದ್ದರೆ, ಫಲಿತಾಂಶವೂ ಸರಿಯಾಗಿರುತ್ತದೆ". ಆರ್‌ಬಿಐ ಸುಧಾರಣೆಗಳ ಸಮಗ್ರ ಸ್ವರೂಪ ಕುರಿತು ಮಾತನಾಡಿದ ಪ್ರಧಾನ ಮಂತ್ರಿ, ಸರ್ಕಾರವು ಗುರುತಿಸುವಿಕೆ, ನಿರ್ಣಯ ಮತ್ತು ಮರುಬಂಡವಾಳೀಕರಣ ಕಾರ್ಯತಂತ್ರದ ಮೇಲೆ ಕೆಲಸ ಮಾಡಿದೆ. ಅನೇಕ ಆಡಳಿತ-ಸಂಬಂಧಿತ ಸುಧಾರಣೆಗಳೊಂದಿಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಸಹಾಯ ಮಾಡಲು 3.5 ಲಕ್ಷ ಕೋಟಿ ರೂ. ಬಂಡವಾಳ ಕೈಗೊಳ್ಳಲಾಯಿತು. ದಿವಾಳಿತನ ಮತ್ತು ಪಾಪರಿಕೆ ಸಂಹಿತೆಯಿಂದಲೇ 3.25 ಲಕ್ಷ ಕೋಟಿ ರೂಪಾಯಿ ಸಾಲ ಸಮಸ್ಯೆಪರಿಹರಿಸಿದೆ ಎಂದು ಪ್ರಧಾನಿ ಗಮನ ಸೆಳೆದರು. ಐಬಿಸಿ ಅಡಿ, ಪ್ರವೇಶಕ್ಕೆ ಮುಂಚೆಯೇ 9 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಡೀಫಾಲ್ಟ್‌ಗಳನ್ನು ಒಳಗೊಂಡಿರುವ 27,000ಕ್ಕಿಂತ ಹೆಚ್ಚಿನ ಅರ್ಜಿಗಳನ್ನು ಪರಿಹರಿಸಲಾಗಿದೆ. 2018ರಲ್ಲಿ ಶೇಕಡ 11.25ರಷ್ಟಿದ್ದ ಬ್ಯಾಂಕ್‌ಗಳ ಒಟ್ಟು ಅನುತ್ಪಾದಕ ಆಸ್ತಿ ಪ್ರಮಾಣ(ಎನ್‌ಪಿಎಗಳು) ಸೆಪ್ಟೆಂಬರ್ 2023 ರ ವೇಳೆಗೆ ಶೇಕಡ 3ಕ್ಕಿಂತಕೆಳ ಹಂತಕ್ಕೆ ಕಡಿಮೆಯಾಗಿದೆ. ಅವಳಿ ಬ್ಯಾಲೆನ್ಸ್ ಶೀಟ್‌ಗಳ ಸಮಸ್ಯೆ ಹಿಂದಿನ ಸಮಸ್ಯೆಯಾಗಿದೆ. ಈ ಎಲ್ಲಾ ಪರಿವರ್ತನೆಗಳಿಗೆ ಆರ್‌ಬಿಐ ನೀಡಿದ ಕೊಡುಗೆಗಾಗಿ ಪ್ರಧಾನಿ ಮೋದಿ  ಶ್ಲಾಘಿಸಿದರು.

ಆರ್‌ಬಿಐಗೆ ಸಂಬಂಧಿಸಿದ ಚರ್ಚೆಗಳು ಸಾಮಾನ್ಯವಾಗಿ ಹಣಕಾಸಿನ ವ್ಯಾಖ್ಯಾನಗಳು ಮತ್ತು ಸಂಕೀರ್ಣ ಪರಿಭಾಷೆಗಳಿಗೆ ಸೀಮಿತವಾಗಿದ್ದರೂ, ಆರ್‌ಬಿಐನಲ್ಲಿ ಕೈಗೊಳ್ಳುವ ಕೆಲಸವು ಸಾಮಾನ್ಯ ನಾಗರಿಕರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಪ್ರಧಾನಿ ಮೋದಿ ಗಮನ ಸೆಳೆದರು. ಕಳೆದ 10 ವರ್ಷಗಳಲ್ಲಿ, ಕೇಂದ್ರೀಯ ಬ್ಯಾಂಕ್‌ಗಳು, ಬ್ಯಾಂಕಿಂಗ್ ವ್ಯವಸ್ಥೆಗಳು ಮತ್ತು ಫಲಾನುಭವಿಗಳ ನಡುವಿನ ಸಂಪರ್ಕವನ್ನು ಸರ್ಕಾರವು ಕೊನೆಯ ಸರತಿಯಲ್ಲಿ ಎತ್ತಿ ತೋರಿಸಿದೆ ಮತ್ತು ಬಡವರ ಆರ್ಥಿಕ ಸೇರ್ಪಡೆಯ ಉದಾಹರಣೆಯನ್ನು ನೀಡಿದೆ ಎಂದು ಪ್ರಧಾನಿ ಹೇಳಿದರು. ದೇಶದಲ್ಲಿರುವ 52 ಕೋಟಿ ಜನ್ ಧನ್ ಖಾತೆಗಳಲ್ಲಿ ಶೇ 55ರಷ್ಟು ಮಹಿಳೆಯರಿಗೆ ಸೇರಿದೆ. 7 ಕೋಟಿಗೂ ಹೆಚ್ಚು ರೈತರು, ಮೀನುಗಾರರು ಮತ್ತು ಪಶುಪಾಲಕರು  ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳಿಗೆ ಪ್ರವೇಶ ಹೊಂದಿರುವ ಕೃಷಿ ಮತ್ತು ಮೀನುಗಾರಿಕೆ ವಲಯದಲ್ಲಿ ಆರ್ಥಿಕ ಸೇರ್ಪಡೆಯ ಪರಿಣಾಮವನ್ನು ಅವರು ಪ್ರಸ್ತಾಪಿಸಿದರು, ಇದು ಗ್ರಾಮೀಣ ಆರ್ಥಿಕತೆಗೆ ಗಮನಾರ್ಹವಾದ ಉತ್ತೇಜನ ನೀಡುತ್ತದೆ. ಕಳೆದ 10 ವರ್ಷಗಳಲ್ಲಿ ಸಹಕಾರಿ ಕ್ಷೇತ್ರದ ಉತ್ತೇಜನವನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ, ಸಹಕಾರಿ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಮಗಳ ಪ್ರಾಮುಖ್ಯತೆಯ ಬಗ್ಗೆ ಬೆಳಕು ಚೆಲ್ಲಿದರು. ಯುಪಿಐ ಮೂಲಕ 1,200 ಕೋಟಿಗೂ ಹೆಚ್ಚು ಮಾಸಿಕ ವಹಿವಾಟುಗಳನ್ನು ಜಾಗತಿಕವಾಗಿ ಮಾನ್ಯತೆ ಪಡೆದ ವೇದಿಕೆಯನ್ನಾಗಿ ಮಾಡಿದೆ ಎಂದು ಉಲ್ಲೇಖಿಸಿದ ಪ್ರಧಾನ ಮಂತ್ರಿ, ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯಲ್ಲಿ ಮಾಡಲಾಗುತ್ತಿರುವ ಕೆಲಸಗಳನ್ನು ಸಹ ಪ್ರಸ್ತಾಪಿಸಿದರು.  ಕಳೆದ 10 ವರ್ಷಗಳ ರೂಪಾಂತರಗಳು ಹೊಸ ಬ್ಯಾಂಕಿಂಗ್ ವ್ಯವಸ್ಥೆ, ಆರ್ಥಿಕತೆ ಮತ್ತು ಕರೆನ್ಸಿ ಅನುಭವವನ್ನು ಸೃಷ್ಟಿಸಲು ಅನುವು ಮಾಡಿಕೊಟ್ಟಿವೆ ಎಂದು ಹೇಳಿದರು.

ಮುಂದಿನ 10 ವರ್ಷಗಳ ಗುರಿಗಳಿಗೆ ಸ್ಪಷ್ಟತೆ ಇರಬೇಕು. ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಸಂದರ್ಭದಲ್ಲಿ ನಗದು ರಹಿತ ಆರ್ಥಿಕತೆ ತಂದ ಬದಲಾವಣೆಗಳ ಮೇಲೆ ನಿಗಾ ಇಡುವ ಅಗತ್ಯವಿದೆ. ಜತೆಗೆ, ಆಳವಾದ ಆರ್ಥಿಕ ಸೇರ್ಪಡೆ ಮತ್ತು ಸಬಲೀಕರಣ ಪ್ರಕ್ರಿಯೆಗಳ ಮೇಲೂ ನಿಗಾ ಇಡುವ ಅಗತ್ಯವಿದೆ ಎಂದರು.ಭಾರತದಂತಹ ದೊಡ್ಡ ರಾಷ್ಟ್ರದ ವೈವಿಧ್ಯಮಯ ಬ್ಯಾಂಕಿಂಗ್ ಅಗತ್ಯಗಳನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, 'ಬ್ಯಾಂಕಿಂಗ್ ವ್ಯವಹಾರಗಳನ್ನು ಸುಲಭ'ವಾಗಿಸುವ ಸುಧಾರಣೆಗಳ ಅಗತ್ಯವಿದೆ. ನಾಗರಿಕರ ಅಗತ್ಯಗಳಿಗೆ ಅನುಗುಣವಾಗಿ ಸೇವೆಗಳನ್ನು ಒದಗಿಸಲು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ತಂತ್ರಜ್ಞಾನಗಳ ಬಳಕೆ ಆಗಬೇಕು ಎಂದು ಪ್ರಧಾನಿ ಒತ್ತಿಹೇಳಿದರು.

ದೇಶದ ತ್ವರಿತ ಮತ್ತು ಸುಸ್ಥಿರ ಬೆಳವಣಿಗೆಯಲ್ಲಿ ಆರ್‌ಬಿಐ ಪಾತ್ರವನ್ನು ಅವರು ಎತ್ತಿ ತೋರಿಸಿದರು. ಬ್ಯಾಂಕಿಂಗ್ ವಲಯದಲ್ಲಿ ನಿಯಮಾಧಾರಿತ ಶಿಸ್ತು ಮತ್ತು ಹಣಕಾಸಿನ ವಿವೇಕಯುತ ನೀತಿಗಳನ್ನು ತುಂಬುವಲ್ಲಿ ಆರ್‌ಬಿಐನ ಸಾಧನೆಯನ್ನು ಗಮನಿಸಿದ ಪ್ರಧಾನಿ, ಬ್ಯಾಂಕ್‌ಗಳಿಗೆ ಸರ್ಕಾರದ ಬೆಂಬಲದ ಭರವಸೆ ನೀಡುವಾಗ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲು ವಿವಿಧ ವಲಯಗಳ ಅಗತ್ಯಗಳನ್ನು ಮುಂಚಿತವಾಗಿ ಅಂದಾಜು ಮಾಡಬೇಕು. ಹಣದುಬ್ಬರ ನಿಯಂತ್ರಣ ಕ್ರಮಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ಹಣದುಬ್ಬರದ ಹಕ್ಕನ್ನು ಆರ್‌ಬಿಐಗೆ ನೀಡುವುದರ ಜತೆಗೆ, ಈ ನಿಟ್ಟಿನಲ್ಲಿ ಹಣಕಾಸು ನೀತಿ ಸಮಿತಿಯ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು. ಸಕ್ರಿಯ ಬೆಲೆ ಮೇಲ್ವಿಚಾರಣೆ ಮತ್ತು ಹಣಕಾಸಿನ ಬಲವರ್ಧನೆಯಂತಹ ಕ್ರಮಗಳು ಕೊರೊನಾ ಕಷ್ಟದ ಸಮಯದಲ್ಲಿಯೂ ಹಣದುಬ್ಬರವನ್ನು ಮಧ್ಯಮ ಮಟ್ಟದಲ್ಲಿ ಕಾಪಾಡಿದವು.

"ಒಂದು ದೇಶದ ಆದ್ಯತೆಗಳು ಸ್ಪಷ್ಟವಾಗಿದ್ದರೆ ಅದರ ಪ್ರಗತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಬಡವರು ಮತ್ತು ಮಧ್ಯಮ ವರ್ಗದವರು ಸಂಕಷ್ಟದಿಂದ ಹೊರಬಂದು ಇಂದು ದೇಶದ ಬೆಳವಣಿಗೆಗೆ ವೇಗ ನೀಡುತ್ತಿರುವ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರವು ಆರ್ಥಿಕ ವಿವೇಕಕ್ಕೆ ಗಮನ ಕೊಡುವ ಜತೆಗೆ, ಸಾಮಾನ್ಯ ನಾಗರಿಕರ ಜೀವನಕ್ಕೆ ಆದ್ಯತೆ ನೀಡಿದೆ ಎಂದು ಅವರು ಉದಾಹರಣೆ ನೀಡಿದರು. "ವಿಶ್ವದ ಅನೇಕ ದೇಶಗಳು ಸಾಂಕ್ರಾಮಿಕ ರೋಗದ ಆರ್ಥಿಕ ಆಘಾತದಿಂದ ಚೇತರಿಸಿಕೊಳ್ಳಲು ಇನ್ನೂ ಪ್ರಯತ್ನಿಸುತ್ತಿರುವ ಸಮಯದಲ್ಲಿ ಭಾರತೀಯ ಆರ್ಥಿಕತೆಯು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ". ಭಾರತದ ಯಶಸ್ಸನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಆರ್‌ಬಿಐ ಪಾತ್ರವನ್ನು ಅವರು ಒತ್ತಿ ಹೇಳಿದರು. ಯಾವುದೇ ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಹಣದುಬ್ಬರ ನಿಯಂತ್ರಣ ಮತ್ತು ಬೆಳವಣಿಗೆಯ ನಡುವೆ ಸಮತೋಲನ ಸೃಷ್ಟಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ ಪ್ರಧಾನಿ ಮೋದಿ, ಆರ್‌ಬಿಐ ಇದಕ್ಕೆ ಮಾದರಿಯಾಗಬಹುದು, ಇದು ಇಡೀ ವಿಶ್ವದಲ್ಲೇ ನಾಯಕತ್ವ ಪಾತ್ರವನ್ನು ವಹಿಸುತ್ತದೆ, ಆ ಮೂಲಕ ಇಡೀ ಜಾಗತಿಕ ದಕ್ಷಿಣ ಪ್ರದೇಶವನ್ನು ಬೆಂಬಲಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತವು ಇಂದು ವಿಶ್ವದ ಅತ್ಯಂತ ಯುವ ರಾಷ್ಟ್ರವಾಗಿದೆ. ಯುವಜನರ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ಆರ್‌ಬಿಐ ನಿರ್ಣಾಯಕ ಪಾತ್ರ ವಹಿಸುತ್ತಿದೆ. ದೇಶದಲ್ಲಿ ಹೊಸ ಕ್ಷೇತ್ರಗಳನ್ನು ತೆರೆಯುವಲ್ಲಿ ಸರ್ಕಾರದ ನೀತಿಗಳು ಇಂದಿನ ಯುವಕರಿಗೆ ಹಲವಾರು ಅವಕಾಶಗಳನ್ನು ಸೃಷ್ಟಿಸಿವೆ. ಹಸಿರು ಇಂಧನ ಕ್ಷೇತ್ರಗಳ ವಿಸ್ತರಣೆಯ ಉದಾಹರಣೆ ನೀಡಿದ ಪ್ರಧಾನಿ, ಸೌರಶಕ್ತಿ, ಹಸಿರು ಜಲಜನಕ ಮತ್ತು ಎಥೆನಾಲ್ ಮಿಶ್ರಣವನ್ನು ಪ್ರಸ್ತಾಪಿಸಿದರು. ಸ್ವದೇಶಿ ನಿರ್ಮಿತ 5-ಜಿ ತಂತ್ರಜ್ಞಾನ ಮತ್ತು ರಕ್ಷಣಾ ವಲಯದಲ್ಲಿ ಹೆಚ್ಚುತ್ತಿರುವ ರಫ್ತುಗಳನ್ನು ಪ್ರಸ್ತಾಪಿಸಿದರು. ಎಂಎಸ್‌ಎಂಇಗಳು ಭಾರತದ ಉತ್ಪಾದನಾ ಕ್ಷೇತ್ರದ ಬೆನ್ನೆಲುಬಾಗುತ್ತಿರುವ ಕುರಿತು ಮಾತನಾಡಿದ ಪ್ರಧಾನ ಮಂತ್ರಿ, ಎಂಎಸ್‌ಎಂಇಗಳನ್ನು ಬೆಂಬಲಿಸಲು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಕ್ರೆಡಿಟ್ ಗ್ಯಾರಂಟಿ ಯೋಜನೆಯ ಅನುಷ್ಠಾನ ಮಾಡಲಾಯಿತು. ಹೊಸ ವಲಯಗಳೊಂದಿಗೆ ಸಂಬಂಧ ಹೊಂದಿರುವ ಯುವಜನರಿಗೆ ಸಾಲ ಲಭ್ಯತೆ ಖಚಿತಪಡಿಸಿಕೊಳ್ಳಲು ಆರ್‌ಬಿಐ ಉದಾರ(ಔಟ್-ಆಫ್-ದಿ-ಬಾಕ್ಸ್) ನೀತಿಗಳೊಂದಿಗೆ ಬರುತ್ತಿದೆ ಎಂದು ಪ್ರಧಾನಿ ಹೇಳಿದರು.

21ನೇ ಶತಮಾನದಲ್ಲಿ ನಾವೀನ್ಯತೆಯ ಪ್ರಾಮುಖ್ಯತೆ ಪ್ರಸ್ತಾಪಿಸಿದ ಪ್ರಧಾನ ಮಂತ್ರಿ,  ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಕಾರ್ಯಕ್ಕಾಗಿ ಸಿಬ್ಬಂದಿಯನ್ನು ಗುರುತಿಸುವ ಪ್ರಸ್ತಾವನೆಗಳಿಗೆ ಸಿದ್ಧರಾಗಿರಲು ಹೇಳಿದರು. ಬಾಹ್ಯಾಕಾಶ ಮತ್ತು ಪ್ರವಾಸೋದ್ಯಮದಂತಹ ಹೊಸ ಮತ್ತು ಸಾಂಪ್ರದಾಯಿಕ ಕ್ಷೇತ್ರಗಳ ಅಗತ್ಯತೆಗಳಿಗೆ ಸಿದ್ಧರಾಗಿರಬೇಕು ಎಂದು ಅವರು ಬ್ಯಾಂಕರ್‌ಗಳು ಮತ್ತು ನಿಯಂತ್ರಕ ಅಧಿಕಾರಿಗಳಿಗೆ ಸಲಹೆ ನೀಡಿದರು. ಮುಂಬರುವ ವರ್ಷಗಳಲ್ಲಿ ಅಯೋಧ್ಯೆ ವಿಶ್ವದ ಅತಿದೊಡ್ಡ ಧಾರ್ಮಿಕ ಪ್ರವಾಸೋದ್ಯಮ ಕೇಂದ್ರವಾಗಲಿದೆ ಎಂಬ ತಜ್ಞರ ಅಭಿಪ್ರಾಯವನ್ನು ಅವರು ಉಲ್ಲೇಖಿಸಿದರು.

ಸಣ್ಣ ಉದ್ಯಮಗಳು ಮತ್ತು ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸಾಮರ್ಥ್ಯದಲ್ಲಿ ಪಾರದರ್ಶಕತೆ ಸೃಷ್ಟಿಸಿದ ಹಣಕಾಸು ಸೇರ್ಪಡೆ ಮತ್ತು ಡಿಜಿಟಲ್ ಪಾವತಿ ಕಾರ್ಯಕ್ರಮಗಳಿಗೆ ಪ್ರಧಾನ ಮಂತ್ರಿ ಮನ್ನಣೆ ನೀಡಿದರು. "ಈ ಮಾಹಿತಿಯನ್ನು ಅವರ ಆರ್ಥಿಕ ಸಬಲೀಕರಣಕ್ಕಾಗಿ ಬಳಸಬೇಕು" ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.

ಜಾಗತಿಕ ಸಮಸ್ಯೆಗಳ ಪ್ರಭಾವ ತಗ್ಗಿಸಲು ಮುಂದಿನ 10 ವರ್ಷಗಳಲ್ಲಿ ಭಾರತದ ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸುವುದಾಗಿ ಪ್ರಧಾನಿ ಮೋದಿ ಹೇಳಿದರು. "ಇಂದು, ಭಾರತವು ಜಾಗತಿಕ ಜಿಡಿಪಿ ಬೆಳವಣಿಗೆಯಲ್ಲಿ ಶೇಕಡ 15ರಷ್ಟು ಪಾಲು ಹೊಂದಿರುವ ಜಾಗತಿಕ ಬೆಳವಣಿಗೆಯ ಚಾಲನಾಶಕ್ತಿ ಆಗುತ್ತಿದೆ". ವಿಶ್ವಾದ್ಯಂತ ರೂಪಾಯಿಯನ್ನು ಹೆಚ್ಚು ಸುಲಭವಾಗಿ ಮತ್ತು ಸ್ವೀಕಾರಾರ್ಹವಾಗಿಸುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ವಿಪರೀತ ಆರ್ಥಿಕ ವಿಸ್ತರಣೆ ಮತ್ತು ಹೆಚ್ಚುತ್ತಿರುವ ಸಾಲ ಪ್ರವೃತ್ತಿಗಳನ್ನು ಪ್ರಸ್ತಾಪಿಸಿದ ಅವರು, ಅನೇಕ ದೇಶಗಳ ಖಾಸಗಿ ವಲಯದ ಸಾಲವು ಅದರ ಜಿಡಿಪಿಯ 2 ಪಟ್ಟು ಹೆಚ್ಚಾಗಿದೆ. ಅನೇಕ ದೇಶಗಳ ಸಾಲದ ಮಟ್ಟವು ಪ್ರಪಂಚದ ಮೇಲೆ ನಕಾರಾತ್ಮಕ ಪ್ರಭಾವ ಸೃಷ್ಟಿಸುತ್ತಿದೆ. ಭಾರತದ ಆರ್ಥಿಕ ಬೆಳವಣಿಗೆಯ ಸಾಧ್ಯತೆಗಳು ಮತ್ತು ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ, ಈ ಕುರಿತು ಅಧ್ಯಯನ ನಡೆಸಬೇಕು ಎಂದು ಪ್ರಧಾನಿ ಸಲಹೆ ನೀಡಿದರು.

ರಾಷ್ಟ್ರದ ಯೋಜನೆಗಳಿಗೆ ಅಗತ್ಯವಾದ ಹಣ ಒದಗಿಸಲು ಪ್ರಬಲ ಬ್ಯಾಂಕಿಂಗ್ ಉದ್ಯಮದ ಪ್ರಾಮುಖ್ಯತೆ ಅಗತ್ಯ. ಕೃತಕ ಬುದ್ಧಿಮತ್ತೆ ಮತ್ತು ಬ್ಲಾಕ್ ಚೈನ್ ನಂತಹ ತಂತ್ರಜ್ಞಾನಗಳು ಅಪಾರ ಬದಲಾವಣೆಗಳನ್ನು ತಂದಿವೆ. ಬೆಳೆಯುತ್ತಿರುವ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸೈಬರ್ ಭದ್ರತೆಯ ಪ್ರಾಮುಖ್ಯತೆಗೆ ಒತ್ತು ನೀಡಬೇಕು. ಹೊಸ ಹಣಕಾಸು, ಕಾರ್ಯ ನಿರ್ವಹಣೆ ಮತ್ತು ವ್ಯವಹಾರ ಮಾದರಿಗಳ ಅಗತ್ಯವಿರುವುದರಿಂದ ಹಣಕಾಸು ತಂತ್ರಜ್ಞಾನ ನಾವೀನ್ಯತೆಯ ಬೆಳಕಿನಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯ ರಚನೆಯಲ್ಲಿ ಅಗತ್ಯವಾದ ಬದಲಾವಣೆಗಳ ಬಗ್ಗೆ ಯೋಚಿಸಬೇಕು.  "ಜಾಗತಿಕ ಚಾಂಪಿಯನ್‌ಗಳ ಸಾಲದ ಅಗತ್ಯಗಳನ್ನು ಬೀದಿ ವ್ಯಾಪಾರಿಗಳಿಗೂ ಪೂರೈಸುವುದು, ಸಾಂಪ್ರದಾಯಿಕ ವಲಯಗಳ ಜತೆಗೆ, ಅತ್ಯಾಧುನಿಕ ವಲಯಗಳಿಗೂ ಹಣಕಾಸು ಸೇವೆ ಪೂರೈಸುವುದು ವಿಕ್ ಸಿತ್ ಭಾರತಕ್ಕೆ ನಿರ್ಣಾಯಕವಾಗಿದೆ. ವಿಕ್ ಸಿತ್ ಭಾರತ್‌ನ ಬ್ಯಾಂಕಿಂಗ್ ದೃಷ್ಟಿಯ ಸಮಗ್ರ ಮೆಚ್ಚುಗೆಗೆ ಆರ್‌ಬಿಐ ಸೂಕ್ತ ಸಂಸ್ಥೆಯಾಗಿದೆ" ಎಂದು ಪ್ರಧಾನ ಮಂತ್ರಿ ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯಪಾಲರಾದ ಶ್ರೀ ರಮೇಶ್ ಬೈನ್ಸ್, ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವಿಸ್ ಮತ್ತು ಶ್ರೀ ಅಜಿತ್ ಪವಾರ್, ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, ಹಣಕಾಸು ಖಾತೆ ರಾಜ್ಯ ಸಚಿವರಾದ ಶ್ರೀ ಭಗವತ್ ಕಿಶನ್ ರಾವ್ ಕರಾಡ್ ಮತ್ತು ಶ್ರೀ ಪಂಕಜ್ ಚೌಧರಿ, ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಉಪಸ್ಥಿತರಿದ್ದರು.

 

 
*****



(Release ID: 2016889) Visitor Counter : 92