ಪ್ರಧಾನ ಮಂತ್ರಿಯವರ ಕಛೇರಿ

ಅಸ್ಸಾಂನ ಜೋರ್ಹತ್‌ನಲ್ಲಿ ವಿವಿಧ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

Posted On: 09 MAR 2024 6:20PM by PIB Bengaluru

ನಮಸ್ಕಾರ! ನೀವು ಉತ್ತಮವಾಗಿ ಇದ್ದೀರಿ ಎಂದು ಭಾವಿಸುತ್ತೇವೆ ! 

ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೇ, ಸಂಪುಟದ ನನ್ನ ಸಹೋದ್ಯೋಗಿಗಳಾದ ಸರ್ಬಾನಂದ ಸೋನೋವಾಲ್ ಮತ್ತು ರಾಮೇಶ್ವರ್ ತೇಲಿ ಅವರೇ , ಅಸ್ಸಾಂ ಸರ್ಕಾರದ ಎಲ್ಲಾ ಸಚಿವರೇ, ಇಲ್ಲಿ ಹಾಜರಿರುವ ಎಲ್ಲಾ ಪ್ರತಿನಿಧಿಗಳು, ಇತರ ಗಣ್ಯರು ಮತ್ತು ನನ್ನ ಆತ್ಮೀಯ ಅಸ್ಸಾಮಿನ ಸಹೋದರರೇ ಮತ್ತು ಸಹೋದರಿಯರೇ ! 

ನಮ್ಮನ್ನು ಆಶೀರ್ವದಿಸಲು ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿದ್ದೀರಿ. ನಾನು ತಲೆ ಬಾಗಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.  ವಿಡಿಯೋ ಕಾನ್ಫರೆನ್ಸ್ ಮೂಲಕ 200 ಸ್ಥಳಗಳಿಂದ ಲಕ್ಷಾಂತರ ಜನರು ಈ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ಈಗಷ್ಟೇ ನನಗೆ ತಿಳಿಸಿದರು. ನಾನು ಅವರನ್ನೂ ಈ ಕಾರ್ಯಕ್ರಮಕ್ಕೆ ಸ್ವಾಗತಿಸುತ್ತೇನೆ. ಗೋಲಘಟ್ಟದ ಜನರು ಸಾವಿರಾರು ದೀಪಗಳನ್ನು ಹೇಗೆ ಬೆಳಗಿಸಿದರು ಎಂಬುದನ್ನು ನಾನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇನೆ. ಅಸ್ಸಾಂ ಜನತೆಯ ಈ ಪ್ರೀತಿ ಮತ್ತು ಬಾಂಧವ್ಯ ನನ್ನ ದೊಡ್ಡ ಆಸ್ತಿ. ಇಂದು, ಅಸ್ಸಾಂನ ಜನರಿಗಾಗಿ 17,000 ಕೋಟಿಗೂ ಹೆಚ್ಚು ಮೊತ್ತದ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡುವ ಅವಕಾಶ ನನಗೆ ದೊರಕಿರುವುದು ನನ್ನ ಅದೃಷ್ಟ. ಈ ಯೋಜನೆಗಳು ಆರೋಗ್ಯ, ವಸತಿ ಮತ್ತು ಪೆಟ್ರೋಲಿಯಂಗೆ ಸಂಬಂಧಿಸಿವೆ. ಈ ಯೋಜನೆಗಳು ಅಸ್ಸಾಂನಲ್ಲಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತವೆ. ಈ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ಅಸ್ಸಾಂನ ಎಲ್ಲಾ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. 

ಸ್ನೇಹಿತರೇ, 

ಇಲ್ಲಿಗೆ ಬರುವ ಮೊದಲು, ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ವಿಶಾಲತೆ ಮತ್ತು ನೈಸರ್ಗಿಕ ಸೌಂದರ್ಯವನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ಸಿಕ್ಕಿತು. ಕಾಜಿರಂಗ ಒಂದು ವಿಶಿಷ್ಟವಾದ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶವಾಗಿದೆ. ಇದರ ಜೀವವೈವಿಧ್ಯತೆ ಮತ್ತು ಪರಿಸರ ಎಲ್ಲರನ್ನೂ ಆಕರ್ಷಿಸುತ್ತದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂಬ ಹೆಮ್ಮೆಯೂ ಕಾಜಿರಂಗಕ್ಕಿದೆ. ಪ್ರಪಂಚದ ಶೇಕಡ ೭೦ ರಷ್ಟು ಒಂದು ಕೊಂಬಿನ ಘೇಂಡಾಮೃಗಗಳಿಗೆ ಕಾಜಿರಂಗವು ನೆಲೆಯಾಗಿದೆ. ಈ ನೈಸರ್ಗಿಕ ಪರಿಸರದಲ್ಲಿ ಹುಲಿಗಳು, ಆನೆಗಳು, ಜೌಗು ಜಿಂಕೆಗಳು, ಕಾಡು ಎಮ್ಮೆಗಳು ಮತ್ತು ಇತರ ಹಲವಾರು ವನ್ಯಜೀವಿಗಳನ್ನು ನೋಡುವ ಅನುಭವ ಬೇರೆಯೇ ಆಗಿದೆ. ಪಕ್ಷಿ ವೀಕ್ಷಕರಿಗಂತೂ ಕಾಜಿರಂಗ ಸ್ವರ್ಗವಿದ್ದಂತೆ. ದುರದೃಷ್ಟವಶಾತ್, ಹಿಂದಿನ ಸರ್ಕಾರಗಳ ನಿರ್ಲಕ್ಷ್ಯ ಮತ್ತು ಬೇಟೆಗಾರರಿಂದಾಗಿ ಅಸ್ಸಾಂನ ಗುರುತಾಗಿರುವ ಘೇಂಡಾಮೃಗಗಳು ಸಹ ಅಳಿವಿನಂಚಿನಲ್ಲಿವೆ.  2013 ರೊಂದರಲ್ಲೇ 27 ಘೇಂಡಾಮೃಗಗಳನ್ನು ಬೇಟೆಯಾಡಲಾಗಿತ್ತು. ಆದರೆ ನಮ್ಮ ಸರ್ಕಾರ ಮತ್ತು ಇಲ್ಲಿನ ಜನರ ಪ್ರಯತ್ನದಿಂದಾಗಿ 2022 ರ ವೇಳೆಗೆ ಈ ಸಂಖ್ಯೆ ಶೂನ್ಯವಾಗಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನವು 2024 ರಲ್ಲಿ ತನ್ನ ಸುವರ್ಣ ಮಹೋತ್ಸವ ವರ್ಷವನ್ನು ಆಚರಿಸಲಿದೆ. ಇದಕ್ಕಾಗಿ ನಾನು ಅಸ್ಸಾಂನ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇಲ್ಲಿಗೆ ಭೇಟಿ ನೀಡುವ ಮೂಲಕ ಕಾಜಿರಂಗದ ಸುವರ್ಣ ಮಹೋತ್ಸವ ವರ್ಷವನ್ನು ಆಚರಿಸಲು ನಾನು ದೇಶವಾಸಿಗಳಿಗೆ ಹೇಳಲು ಬಯಸುತ್ತೇನೆ. ಕಾಜಿರಂಗದಲ್ಲಿ ನಾನು ಕಳೆದ ಕ್ಷಣಗಳು, ನೆನಪುಗಳು ನನ್ನೊಂದಿಗೆ ಜೀವಮಾನವಿಡೀ ಉಳಿಯಲಿವೆ. .
 
ಸ್ನೇಹಿತರೇ, 

ಇಂದು ವೀರ್ ಲಚಿತ್ ಬೋರ್ಫುಕನ್ ಅವರ ಭವ್ಯವಾದ ಪ್ರತಿಮೆಯನ್ನು ಅನಾವರಣಗೊಳಿಸುವ ಸೌಭಾಗ್ಯವೂ ನನಗೆ ಒದಗಿ ಬಂದಿತ್ತು. ಲಚಿತ್ ಬೊರ್ಫುಕನ್ ಅಸ್ಸಾಂ ಜನರ  ಧೈರ್ಯ ಮತ್ತು ಶೌರ್ಯದ ದ್ಯೋತಕರಾಗಿದ್ದಾರೆ. ನಾವು 2022 ರಲ್ಲಿ ದೆಹಲಿಯಲ್ಲಿ ಲಚಿತ್ ಬೋರ್ಫುಕನ್ ಅವರ 400 ನೇ ಜನ್ಮದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಿದ್ದೇವೆ. ನಾನು ಮತ್ತೊಮ್ಮೆ ವೀರ ಯೋಧ ಲಚಿತ್ ಬೋರ್ಫುಕನ್ ಅವರಿಗೆ ನನ್ನ ಗೌರವವನ್ನು ಸಲ್ಲಿಸುತ್ತೇನೆ. 

ಸ್ನೇಹಿತರೇ, 

'ವಿರಾಸತ್' (ಪರಂಪರೆ) ಮತ್ತು 'ವಿಕಾಸ್' (ಅಭಿವೃದ್ಧಿ) ಇವೆರಡೂ ನಮ್ಮ ಡಬಲ್ ಇಂಜಿನ್ ಸರ್ಕಾರದ ಮಂತ್ರವಾಗಿದೆ. ಪರಂಪರೆಯ ಸಂರಕ್ಷಣೆಯ ಜೊತೆಗೆ, ಅಸ್ಸಾಂನ ಡಬಲ್ ಇಂಜಿನ್ ಸರ್ಕಾರವು ರಾಜ್ಯದ ಅಭಿವೃದ್ಧಿಗೂ ಅಷ್ಟೇ ವೇಗವಾಗಿ ಕೆಲಸ ಮಾಡುತ್ತಿದೆ. ಮೂಲಸೌಕರ್ಯ, ಆರೋಗ್ಯ ಮತ್ತು ಇಂಧನ ಕ್ಷೇತ್ರಗಳಲ್ಲಿ ಅಸ್ಸಾಂ ಅಭೂತಪೂರ್ವ ಪ್ರಗತಿಯನ್ನು ತೋರಿಸಿದೆ. ಏಮ್ಸ್ (AIIMS) ನ ನಿರ್ಮಾಣದಿಂದ ಇಲ್ಲಿನ ಜನರಿಗೆ ಬಹಳ ಅನುಕೂಲವಾಗಿದೆ. ಇಂದು ತಿನ್ಸುಕಿಯಾ ವೈದ್ಯಕೀಯ ಕಾಲೇಜಿನ ಉದ್ಘಾಟನೆಯೂ ನಡೆದಿದೆ. ಇದು ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಖಚಿತಪಡಿಸುತ್ತದೆ. ನನ್ನ ಹಿಂದಿನ ಅಸ್ಸಾಂ ಭೇಟಿಯ ಸಂದರ್ಭದಲ್ಲಿ ನಾನು ಗುವಾಹಟಿ ಮತ್ತು ಕರೀಂಗಂಜ್‌ನಲ್ಲಿ ಎರಡು ವೈದ್ಯಕೀಯ ಕಾಲೇಜುಗಳಿಗೆ ಶಂಕುಸ್ಥಾಪನೆ ಮಾಡಿದ್ದೇನೆ. ಇಂದು ಶಿವಸಾಗರ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಹೆಚ್ಚುವರಿಯಾಗಿ, ಜೋರ್ಹತ್‌ನಲ್ಲಿ ಕ್ಯಾನ್ಸರ್ ಆಸ್ಪತ್ರೆಯೊಂದನ್ನು ನಿರ್ಮಿಸಲಾಗಿದೆ. ಆರೋಗ್ಯ ಮೂಲಸೌಕರ್ಯಗಳ ಅಭಿವೃದ್ಧಿಯೊಂದಿಗೆ, ಅಸ್ಸಾಂ ಇಡೀ ಈಶಾನ್ಯ ರಾಜ್ಯಗಳಿಗೆ ಆರೋಗ್ಯ ಸೇವೆಗಳ ಒದಗಿಸುವ ಮಹತ್ವದ ಕೇಂದ್ರವಾಗಲಿದೆ. 

ಸ್ನೇಹಿತರೇ, 

ಇಂದು ಪ್ರಧಾನಮಂತ್ರಿ ಉರ್ಜಾ ಗಂಗಾ ಯೋಜನೆಯಡಿ ನಿರ್ಮಿಸಲಾದ ಬರೌನಿ-ಗುವಾಹಟಿ ಪೈಪ್‌ಲೈನ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ಈ ಗ್ಯಾಸ್ ಪೈಪ್‌ಲೈನ್ ಈಶಾನ್ಯ ಗ್ರಿಡ್ ಅನ್ನು ನ್ಯಾಷನಲ್ ಗ್ಯಾಸ್ ಗ್ರಿಡ್‌ಗೆ ಸಂಪರ್ಕಿಸುತ್ತದೆ. ಇದು ಸುಮಾರು 30 ಲಕ್ಷ ಕುಟುಂಬಗಳಿಗೆ ಮತ್ತು 600 ಸಿಎನ್‌ಜಿ ಕೇಂದ್ರಗಳಿಗೆ ಅನಿಲ (ಗ್ಯಾಸ್) ವನ್ನು ಪೂರೈಸುತ್ತದೆ. ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ 30 ಕ್ಕೂ ಹೆಚ್ಚು ಜಿಲ್ಲೆಗಳು ಈ ಪೈಪ್‌ಲೈನ್‌ನಿಂದ ಪ್ರಯೋಜನ ಪಡೆಯುತ್ತವೆ. 

ಸ್ನೇಹಿತರೇ, 

ಇಂದು, ದಿಗ್ಬೋಯ್ ಮತ್ತು ಗುವಾಹಟಿ ರಿಫೈನರಿಗಳ ಸಾಮರ್ಥ್ಯಗಳ ವಿಸ್ತರಣೆಯನ್ನು ಸಹ ಮಾಡಿದ್ದೇವೆ. ಅಸ್ಸಾಂನ ಸಂಸ್ಕರಣಾಗಾರಗಳ ಸಾಮರ್ಥ್ಯವನ್ನು ಹೆಚ್ಚಿಸುವುದು  ಅಸ್ಸಾಂನ ಜನರ ದಶಕಗಳ ಬೇಡಿಕೆಯಾಗಿತ್ತು. ಇದಕ್ಕಾಗಿ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಆದರೆ ಹಿಂದಿನ ಸರಕಾರಗಳು ಇಲ್ಲಿನ ಜನರ ಭಾವನೆಗಳತ್ತ ಗಮನ ಹರಿಸಲೇ ಇಲ್ಲ. ಆದಾಗ್ಯೂ, ಬಿಜೆಪಿ ಸರ್ಕಾರವು ಕಳೆದ 10 ವರ್ಷಗಳಲ್ಲಿ ಅಸ್ಸಾಂನ ಎಲ್ಲಾ ನಾಲ್ಕು ಸಂಸ್ಕರಣಾಗಾರಗಳ ಸಾಮರ್ಥ್ಯವನ್ನು ಹೆಚ್ಚಿಸಲು ಸತತವಾಗಿ ಕೆಲಸ ಮಾಡಿದೆ. ಈಗ, ಅಸ್ಸಾಂನ ಸಂಸ್ಕರಣಾಗಾರಗಳ ಒಟ್ಟು ಸಾಮರ್ಥ್ಯವು ದ್ವಿಗುಣಗೊಳ್ಳಲಿದೆ. ಇದಲ್ಲದೆ, ನುಮಾಲಿಗಢ್ ಸಂಸ್ಕರಣಾಗಾರದ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ. ಒಂದು ಪ್ರದೇಶವನ್ನು ಅಭಿವೃದ್ಧಿ ಮಾಡಬೇಕೆಂಬ ಬಲವಾದ ಇಚ್ಚಾಶಕ್ತಿಯಿದ್ದಾಗ ಕೆಲಸವು ತ್ವರಿತ ಗತಿಯಲ್ಲಿ ನಡೆಯುತ್ತದೆ. 

ಸ್ನೇಹಿತರೇ,

ಇಂದು ಅಸ್ಸಾಂನ 5.5 ಲಕ್ಷ ಕುಟುಂಬಗಳ ಶಾಶ್ವತ ಮನೆ ಹೊಂದುವ ಕನಸು ನನಸಾಗಿದೆ. ಒಂದು ಕ್ಷಣ ಊಹಿಸಿ..... ಒಂದು ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ಕುಟುಂಬಗಳು ತಮ್ಮದೇ ಸ್ವಂತ ಮನೆಗಳಿಗೆ ಹೋಗುವುದನ್ನು. ಸಹೋದರ ಸಹೋದರಿಯರೇ, ನಿಮ್ಮ ಸೇವೆ ಮಾಡಲು ಸಾಧ್ಯವಾಗಿರುವುದು ನನ್ನ ಜೀವನದ ಒಂದು ದೊಡ್ಡ ಅದೃಷ್ಟ ಎಂದು ನಾನು ಭಾವಿಸಿದ್ದೇನೆ. 

ಸಹೋದರ ಸಹೋದರಿಯರೇ,

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜನರು ಸ್ವಂತ ಮನೆಗಾಗಿ ಹಾತೊರೆಯುತ್ತಿದ್ದರು, ಆದರೆ ನೀವೇ ನೋಡುತ್ತಿರುವಂತೆ ನಮ್ಮ ಸರ್ಕಾರವು ಅಸ್ಸಾಂ ಒಂದರಲ್ಲೇ 5.5 ಲಕ್ಷಕ್ಕೂ ಹೆಚ್ಚು ಬಡವರಿಗೆ ಮನೆಗಳನ್ನು ನೀಡುತ್ತಿದೆ. ಇವು ಕೇವಲ ನಾಲ್ಕು ಗೋಡೆಯಾ ಮನೆಗಳಲ್ಲ. ಈ ಮನೆಗಳ ಜೊತೆಗೆ, ಶೌಚಾಲಯಗಳು, ಗ್ಯಾಸ್ ಕನೆಕ್ಷನ್ ಗಳು, ವಿದ್ಯುತ್ ಮತ್ತು ಕೊಳವೆ ನೀರಿನಂತಹ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ. ಅಸ್ಸಾಂನಲ್ಲಿ ಇದುವರೆಗೆ 18 ಲಕ್ಷ ಕುಟುಂಬಗಳಿಗೆ ಪಕ್ಕಾ ಮನೆಗಳನ್ನು ಒದಗಿಸಲಾಗಿದೆ. ಮತ್ತು ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಒದಗಿಸಲಾದ ಹೆಚ್ಚಿನ ಮನೆಗಳು ಮಹಿಳೆಯರ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿವೆ ಎಂಬುದನ್ನು ಹೇಳಲು ನನಗೆ ಸಂತೋಷವಾಗುತ್ತದೆ. ಈಗ ನನ್ನ ತಾಯಂದಿರು ಮತ್ತು ಸಹೋದರಿಯರು ಈ ಮನೆಗಳ ಮಾಲೀಕರಾಗಿದ್ದಾರೆ. ಅಂದರೆ, ಈ ಮನೆಗಳು ಲಕ್ಷಗಟ್ಟಲೆ ಹೆಂಗಸರನ್ನು ಸ್ವಂತ ಮನೆಯ ಒಡೆಯರನ್ನಾಗಿಸಿವೆ.

ಸ್ನೇಹಿತರೇ,

ಅಸ್ಸಾಂನ ಪ್ರತಿಯೊಬ್ಬ ಮಹಿಳೆಯ ಜೀವನವನ್ನು ಸುಲಭಗೊಳಿಸುವುದು, ಅವರ ಉಳಿತಾಯವನ್ನು ಹೆಚ್ಚಿಸುವುದು ಮತ್ತು ಅವರನ್ನು ಆರ್ಥಿಕವಾಗಿ ಸ್ಥಿರವಾಗಿಸುವುದು ನಮ್ಮ ಪ್ರಯತ್ನವಾಗಿದೆ. ಇತ್ತೀಚೆಗೆ, ಅಂತಾರಾಷ್ಟ್ರೀಯ ಮಹಿಳಾ ದಿನದಂದು ನಮ್ಮ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯನ್ನು 100 ರೂಪಾಯಿಯಷ್ಟು ಕಡಿಮೆ ಮಾಡಿದೆ.  ಆಯುಷ್ಮಾನ್ ಕಾರ್ಡ್ ಮೂಲಕ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವ ನಮ್ಮ ಸರ್ಕಾರದ ಯೋಜನೆಯ ಪ್ರಮುಖ ಫಲಾನುಭವಿಗಳು ನಮ್ಮ ತಾಯಂದಿರು, ಸಹೋದರಿಯರು ಮತ್ತು ಮಹಿಳೆಯರು. ಜಲ ಜೀವನ್ ಮಿಷನ್ ಅಡಿಯಲ್ಲಿ, ಕಳೆದ 5 ವರ್ಷಗಳಲ್ಲಿ ಅಸ್ಸಾಂನಲ್ಲಿ 50 ಲಕ್ಷಕ್ಕೂ ಹೆಚ್ಚು ಮನೆಗಳು ನೀರಿನ ಸಂಪರ್ಕವನ್ನು ಪಡೆದಿವೆ. ಅಮೃತ್ ಸರೋವರ ಅಭಿಯಾನದ ಅಡಿಯಲ್ಲಿ, 3,000ಕ್ಕೂ ಹೆಚ್ಚು ಅಮೃತ ಸರೋವರಗಳು ಪ್ರಯೋಜನ ಪಡೆದಿವೆ. ಈ ಕುರಿತ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡುವ ಅವಕಾಶವೂ ನನಗೆ ಸಿಕ್ಕಿತ್ತು. ಸುಂದರವಾದ ಟೋಪಿಗಳನ್ನು ಧರಿಸಿರುವ ಸಹೋದರಿಯರೇ, ನಾನು ನಿಮಗೆ ಹೇಳ ಬಯಸುತ್ತೇನೆ, ಬಿಜೆಪಿ ಸರ್ಕಾರವು ದೇಶದಲ್ಲಿ 3 ಕೋಟಿ ಸಹೋದರಿಯರನ್ನು ‘ಲಖಪತಿ ದೀದಿ’ ಗಳನ್ನಾಗಿ ಮಾಡುವ ಅಭಿಯಾನವನ್ನು ಕೈಗೆತ್ತಿಕೊಂಡಿದೆ. ಈ ಅಭಿಯಾನವು ಸ್ವ-ಸಹಾಯ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಮಹಿಳೆಯರನ್ನು ಸಬಲೀಕರಣಗೊಳಿಸುವುದರ ಜೊತೆಗೆ ಅವರಿಗೆ ಹೊಸ ಅವಕಾಶಗಳನ್ನು ಒದಗಿಸುತ್ತಿದೆ. ಈ ಅಭಿಯಾನದ ಪ್ರಯೋಜನವು ಅಸ್ಸಾಂನ ಲಕ್ಷಾಂತರ ಮಹಿಳೆಯರನ್ನೂ ತಲುಪುತ್ತಿದೆ. ಅಸ್ಸಾಂನಲ್ಲಿರುವ ಎಲ್ಲಾ ‘ಲಖಪತಿ ದೀದಿ’ ಗಳು ಈ ಕಾರ್ಯಕ್ರಮದಲ್ಲಿ ಇದ್ದಾರೆ ಎಂದು ಮುಖ್ಯಮಂತ್ರಿ ನನಗೆ ಹೇಳುತ್ತಿದ್ದರು. ದಯವಿಟ್ಟು ಚಪ್ಪಾಳೆ ತಟ್ಟುವ ಮೂಲಕ ಈ ‘ಲಖಪತಿ ದೀದಿ' ಗಳನ್ನು ಶ್ಲಾಘಿಸಿರಿ. ಸರಕಾರದ ನೀತಿಗಳು ಸರಿಯಾದ ದಿಕ್ಕಿನಲ್ಲಿದ್ದರೆ ಮತ್ತು ಅವುಗಳ ಜೊತೆ ಸಾಮಾನ್ಯ ಜನರು ಕೈಜೋಡಿಸಿದರೆ ಒಂದು ದೊಡ್ಡ ಬದಲಾವಣೆಯನ್ನು ಕಾಣಬಹುದು. ದೇಶಾದ್ಯಂತ ಹಳ್ಳಿಗಳಲ್ಲಿ ‘ಲಖಪತಿ ದೀದಿ’ಗಳನ್ನು ಸೃಷ್ಟಿಸುವುದು ಮೋದಿಯವರ ಗ್ಯಾರಂಟಿಯಾಗಿದೆ. 

ಸ್ನೇಹಿತರೇ,
 
2014 ರಿಂದ, ಅಸ್ಸಾಂನಲ್ಲಿ ಹಲವಾರು ಐತಿಹಾಸಿಕ ಬದಲಾವಣೆಗಳಿಗೆ ಅಡಿಪಾಯ ಹಾಕಲಾಗಿದೆ. ಎರಡೂವರೆ ಲಕ್ಷಕ್ಕೂ ಹೆಚ್ಚು ಭೂರಹಿತ ನಿವಾಸಿಗಳಿಗೆ ಭೂಮಿಯ ಹಕ್ಕುಗಳನ್ನು ನೀಡಲಾಗಿದೆ. ಸ್ವಾತಂತ್ರ್ಯ ದೊರೆತ ಏಳು ದಶಕಗಳವರೆಗೆ ಚಹಾ ತೋಟದ ಕಾರ್ಮಿಕರನ್ನು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಂಯೋಜಿಸಲಾಗಿರಲಿಲ್ಲ. ನಮ್ಮ ಸರ್ಕಾರವು ಚಹಾ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 8 ಲಕ್ಷ ಕಾರ್ಮಿಕರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಜೋಡಿಸುವ ಕಾರ್ಯ ಪ್ರಾರಂಭಿಸಿತು. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಏಕೀಕರಣ ಎಂದರೆ ಈ ಕಾರ್ಮಿಕರು ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲಾರಂಭಿಸಿದರು ಎಂದಂತೆ. ಸರ್ಕಾರದಿಂದ ವಿತ್ತೀಯ ಸವಲತ್ತುಗಳಿಗೆ ಅರ್ಹರಾದವರು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣವನ್ನು ಪಡೆಯಲಾರಂಭಿಸಿದರು. ನಾವು ಮಧ್ಯವರ್ತಿಗಳಿಗೆ ಎಲ್ಲಾ ಬಾಗಿಲುಗಳನ್ನು ಮುಚ್ಚಿದ್ದೇವೆ. ಮೊಟ್ಟಮೊದಲ ಬಾರಿಗೆ ಬಡವರಲ್ಲಿ ತಮ್ಮನ್ನು ನೋಡಿಕೊಳ್ಳುವ ಸರ್ಕಾರ ದೇಶದಲ್ಲಿದೆ ಎಂದು ಭಾವಿಸಲಾರಂಭಿಸಿದ್ದಾರೆ ಮತ್ತು ಅದು ಬಿಜೆಪಿ ಸರ್ಕಾರವಾಗಿದೆ.

ಸ್ನೇಹಿತರೇ,
 
‘ವಿಕಸಿತ ಭಾರತ್’ ಸಂಕಲ್ಪವನ್ನು ಈಡೇರಿಸಲು ಈಶಾನ್ಯ ಭಾಗದ ಅಭಿವೃದ್ಧಿ ಅತ್ಯಗತ್ಯ. ಕಾಂಗ್ರೆಸ್ ಆಡಳಿತದ ಸುದೀರ್ಘ ಅವಧಿಯಲ್ಲಿ, ಈಶಾನ್ಯ ಪ್ರದೇಶಗಳು ನಿರ್ಲಕ್ಷ್ಯವನ್ನು ಅನುಭವಿಸಿದೆ. ಹಲವಾರು ಅಭಿವೃದ್ಧಿ ಯೋಜನೆಗಳನ್ನು ಅಬ್ಬರದಿಂದ ಉದ್ಘಾಟನೆ ಮಾಡಿ ಜನರನ್ನು ದಾರಿ ತಪ್ಪಿಸಿ ನಂತರ ಮರೆತು ಬಿಟ್ಟರು. ಆದರೆ ಮೋದಿಯವರು ಇಡೀ ಈಶಾನ್ಯವನ್ನು ತಮ್ಮ ಕುಟುಂಬವೆಂದು ಪರಿಗಣಿಸುತ್ತಾರೆ. ಆದ್ದರಿಂದ, ನಾವು ವರ್ಷಗಳಿಂದ ಬಾಕಿ ಉಳಿದಿರುವ, ಕೇವಲ ಕಾಗದದ ಮೇಲೆ ಬರೆದು ಮುಟ್ಟದೆ ಬಿಟ್ಟಿರುವ ಯೋಜನೆಗಳನ್ನು ಪೂರ್ಣಗೊಳಿಸುವತ್ತ ಗಮನ ಹರಿಸಿದ್ದೇವೆ. ಬಿಜೆಪಿ ಸರ್ಕಾರವು ಸರೈಘಾಟ್‌ನಲ್ಲಿ ಎರಡನೇ ಸೇತುವೆ, ಧೋಲಾ-ಸಾಡಿಯಾ ಸೇತುವೆ ಮತ್ತು ಬೋಗಿಬೀಲ್ ಸೇತುವೆಗಳನ್ನು ನಿರ್ಮಿಸಿ ದೇಶಕ್ಕೆ ಅರ್ಪಿಸಿದೆ. ನಮ್ಮ ಸರ್ಕಾರದ ಅವಧಿಯಲ್ಲಿ, ಬ್ರಾಡ್ ಗೇಜ್ ಯೋಜನೆಯನ್ನು ಬರಾಕ್ ಕಣಿವೆವರೆಗೆ ವಿಸ್ತರಿಸಲಾಯಿತು. 2014 ರ ನಂತರ ಆರಂಭಿಸಲಾದ ಅನೇಕ ಯೋಜನೆಗಳು ಈ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿವೆ. ಜೋಗಿಘೋಪಾದಲ್ಲಿ ಬಹು-ಮಾದರಿ ಲಾಜಿಸ್ಟಿಕ್ ಪಾರ್ಕ್‌ನ ನಿರ್ಮಾಣ ಪ್ರಾರಂಭವಾಯಿತು. ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಎರಡು ಹೊಸ ಸೇತುವೆಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಯಿತು. 2014 ರವರೆಗೆ, ಅಸ್ಸಾಂ ಕೇವಲ ಒಂದು ರಾಷ್ಟ್ರೀಯ ಜಲಮಾರ್ಗವನ್ನು ಹೊಂದಿತ್ತು; ಇಂದು ಈಶಾನ್ಯದಲ್ಲಿ 18 ರಾಷ್ಟ್ರೀಯ ಜಲಮಾರ್ಗಗಳಿವೆ. ಈ ಮೂಲಸೌಕರ್ಯ ಅಭಿವೃದ್ಧಿಯು ಹೊಸ ಕೈಗಾರಿಕಾ ಅವಕಾಶಗಳನ್ನು ಸೃಷ್ಟಿಸಿದೆ. ಈಶಾನ್ಯ ರಾಜ್ಯಗಳಲ್ಲಿ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಉನ್ನತಿ ಯೋಜನೆಯ ವಿಸ್ತರಣೆಗೆ ನಮ್ಮ ಸರ್ಕಾರ ಅನುಮೋದನೆ  ನೀಡಿದೆ. ಅಸ್ಸಾಂನ ಸೆಣಬು ಬೆಳೆಯುವ ರೈತರಿಗಾಗಿಯೂ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಸಂಪುಟ ಸೆಣಬಿನ MSP ಅನ್ನು ಪ್ರತಿ ಕ್ವಿಂಟಲ್‌ಗೆ 285 ರೂಪಾಯಿ ಹೆಚ್ಚಿಸಿದೆ. ಈ ವರ್ಷ ಸೆಣಬು  ಬೆಳೆಗಾರರು ಪ್ರತಿ ಕ್ವಿಂಟಲ್ 5,335 ರೂಪಾಯಿಗಳನ್ನು ಪಡೆಯಲಿದ್ದಾರೆ. 

ಸ್ನೇಹಿತರೇ, 

ನಮ್ಮ ಈ ಎಲ್ಲಾ ಪ್ರಯತ್ನಗಳ ನಡುವೆ ನಮ್ಮ ವಿರೋಧಿಗಳು ಏನು ಮಾಡುತ್ತಿದ್ದಾರೆ? ದೇಶವನ್ನು ದಾರಿ ತಪ್ಪಿಸುವವರು ಏನು ಮಾಡುತ್ತಿದ್ದಾರೆ? ಸದಾ ಕಾಲ ಮೋದಿಯನ್ನು ನಿಂದಿಸುತ್ತಲೇ ಇರುವ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಇತ್ತೀಚೆಗೆ ಮೋದಿಯವರಿಗೆ ಸ್ವಂತ ಕುಟುಂಬವಿಲ್ಲ ಎಂದು ಹೇಳತೊಡಗಿವೆ. ಅವರ ಟೀಕೆಗೆ ಇಡೀ ರಾಷ್ಟ್ರವೇ ಎದ್ದು ನಿಂತಿದೆ. 'ನಾನು ಮೋದಿ ಕುಟುಂಬ', 'ನಾನು ಮೋದಿ ಕುಟುಂಬ', 'ನಾನು ಮೋದಿ ಕುಟುಂಬ', 'ನಾನು ಮೋದಿ ಕುಟುಂಬ', 'ನಾನು ಮೋದಿ' ಎಂದು ಇಡೀ  ದೇಶವೇ ಹೇಳುತ್ತಿದೆ. ಇದೇ ಪ್ರೀತಿ, ಇದೇ ಆಶೀರ್ವಾದ.  1.4 ಶತಕೋಟಿ ದೇಶವಾಸಿಗಳನ್ನು ತಮ್ಮ ಕುಟುಂಬವೆಂದು ಪರಿಗಣಿಸುವುದು ಮಾತ್ರವಲ್ಲದೆ ಹಗಲಿರುಳು ಅವರಿಗೆ ಸೇವೆ ಸಲ್ಲಿಸುತ್ತಿರುವುದಕ್ಕಾಗಿಯೇ ಮೋದಿಯವರಿಗೆ ಈ ದೇಶದ ಜನರ ಪ್ರೀತಿ ದೊರೆತಿದೆ. ಇಂದಿನ ಕಾರ್ಯಕ್ರಮ ನಿಮ್ಮ ಪ್ರೀತಿಯ ಪ್ರತಿಬಿಂಬವಾಗಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದಕ್ಕಾಗಿ ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಧನ್ಯವಾದಗಳು. ಇಷ್ಟು ದೊಡ್ಡ ಮಟ್ಟದ ಅಭಿವೃದ್ಧಿ ಕಾರ್ಯಗಳಿಗಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. 

ಎರಡೂ ಕೈಗಳನ್ನು ಮೇಲಕ್ಕೆತ್ತಿ ನನ್ನೊಂದಿಗೆ ಹೇಳಿ -

ಭಾರತ್ ಮಾತಾ ಕಿ—ಜೈ!

ನಿಮ್ಮ ಧ್ವನಿ ಇಡೀ ಈಶಾನ್ಯವನ್ನು ತಲುಪಬೇಕು.

ಭಾರತ್ ಮಾತಾ ಕಿ—ಜೈ! ಭಾರತ್ ಮಾತಾ ಕಿ—ಜೈ!

‘ಲಖಪತಿ ದೀದಿ’ಗಳ ಧ್ವನಿ ಇನ್ನೂ ಗಟ್ಟಿಯಾಗಬೇಕು.

ಭಾರತ್ ಮಾತಾ ಕಿ—ಜೈ! ಭಾರತ್ ಮಾತಾ ಕಿ—ಜೈ!

ಭಾರತ್ ಮಾತಾ ಕಿ—ಜೈ! ತುಂಬ ಧನ್ಯವಾದಗಳು.

ಹಕ್ಕು ತ್ಯಾಗ: ಇದು ಪ್ರಧಾನ ಮಂತ್ರಿ ಮೋದಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಅವರು ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಿದ್ದಾರೆ.

*****



(Release ID: 2016487) Visitor Counter : 25