ಪ್ರಧಾನ ಮಂತ್ರಿಯವರ ಕಛೇರಿ

​​​​​​​ ನವದೆಹಲಿಯ ನಡೆದ ʻಭಾರತ್ ಟೆಕ್ಸ್-2024ʼ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳ ಭಾಷಣದ ಕನ್ನಡ ಪಠ್ಯಾಂತರ

Posted On: 26 FEB 2024 4:01PM by PIB Bengaluru

ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳಾದ ಪಿಯೂಷ್ ಗೋಯಲ್ ಅವರೇ ಮತ್ತು ದರ್ಶನ ಜರ್ದೋಶ್ ಅವರೇ, ವಿವಿಧ ದೇಶಗಳ ರಾಯಭಾರಿಗಳೇ, ಹಿರಿಯ ರಾಜತಾಂತ್ರಿಕರೇ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳೇ, ಫ್ಯಾಷನ್ ಮತ್ತು ಜವಳಿ ಪ್ರಪಂಚದ ಎಲ್ಲಾ ಸಹವರ್ತಿಗಳೇ, ಯುವ ಉದ್ಯಮಿಗಳೇ, ವಿದ್ಯಾರ್ಥಿಗಳೇ, ನಮ್ಮ ನೇಕಾರರು ಮತ್ತು ಕುಶಲಕರ್ಮಿಗಳೇ ಹಾಗೂ ಮಹಿಳೆಯರೇ ಮತ್ತು ಮಹನೀಯರೇ! ಭಾರತ್ ಮಂಟಪದಲ್ಲಿ ʻಭಾರತ್ ಟೆಕ್ಸ್ʼ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳು! ಇಂದಿನ ಕಾರ್ಯಕ್ರಮವು ಖುದ್ದು ಬಹಳ ವಿಶೇಷವಾಗಿದೆ. ಇದು ಏಕೆ ವಿಶೇಷವೆಂದರೆ ಇದು ಭಾರತದ ಎರಡು ಅತಿದೊಡ್ಡ ಪ್ರದರ್ಶನ ಕೇಂದ್ರಗಳಾದ ʻಭಾರತ್ ಮಂಟಪʼ ಮತ್ತು ʻಯಶೋಭೂಮಿʼಯಲ್ಲಿ ಏಕಕಾಲದಲ್ಲಿ ನಡೆಯುತ್ತಿದೆ. ಇಂದು, 3,000ಕ್ಕೂ ಹೆಚ್ಚು ಪ್ರದರ್ಶಕರು... 100 ದೇಶಗಳಿಂದ ಸುಮಾರು 3,000 ಖರೀದಿದಾರರು... 40,000ಕ್ಕೂ ಹೆಚ್ಚು ವ್ಯಾಪಾರ ಸಂದರ್ಶಕರು... ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇವೆ. ಈ ಕಾರ್ಯಕ್ರಮವು ಜವಳಿ ಪರಿಸರ ವ್ಯವಸ್ಥೆಯ ಎಲ್ಲಾ ಪಾಲುದಾರರನ್ನು ಮತ್ತು ಇಡೀ ಮೌಲ್ಯ ಸರಪಳಿಯನ್ನು ಒಗ್ಗೂಡಿಸಲು ವೇದಿಕೆಯನ್ನು ಒದಗಿಸುತ್ತಿದೆ.

ಸ್ನೇಹಿತರೇ,

ಇಂದಿನ ಕಾರ್ಯಕ್ರಮವು ಕೇವಲ ಜವಳಿ ಪ್ರದರ್ಶನ ಮೇಳವಲ್ಲ. ಈ ಕಾರ್ಯಕ್ರಮದೊಂದಿಗೆ ಅನೇಕ ವಿಷಯಗಳು ಸಂಪರ್ಕ ಹೊಂದಿವೆ. ʻಭಾರತ್ ಟೆಕ್ಸ್ʼನ ಎಳೆಯು ಭಾರತದ ಭವ್ಯ ಇತಿಹಾಸವನ್ನು ಇಂದಿನ ಪ್ರತಿಭೆಯೊಂದಿಗೆ ಸಂಪರ್ಕಿಸುತ್ತಿದೆ. ʻಭಾರತ್ ಟೆಕ್ಸ್ʼನ ಎಳೆಯು ತಂತ್ರಜ್ಞಾನವನ್ನು ಸಂಪ್ರದಾಯದೊಂದಿಗೆ ಬೆರೆಸುತ್ತಿದೆ. ʻಭಾರತ್ ಟೆಕ್ಸ್ʼನ ಎಳೆಯು ಶೈಲಿ, ಸುಸ್ಥಿರತೆ, ಪ್ರಮಾಣ ಮತ್ತು ಕೌಶಲ್ಯವನ್ನು ಒಟ್ಟುಗೂಡಿಸುತ್ತಿದೆ. ಮಗ್ಗವು ಅನೇಕ ದಾರಗಳನ್ನು ಹೆಣೆಯುವಂತೆಯೇ, ಈ ಕಾರ್ಯಕ್ರಮವು ಭಾರತ ಮತ್ತು ಇಡೀ ಪ್ರಪಂಚದ ಎಳೆಗಳನ್ನು ಒಟ್ಟುಗೂಡಿಸುತ್ತಿದೆ. ಮತ್ತು ನಾನು ನೋಡುವಂತೆ, ಈ ಸ್ಥಳವು ಭಾರತದ ಚಿಂತನೆಗಳ ವೈವಿಧ್ಯತೆಗೆ ಮಾತ್ರವಲ್ಲದೆ ಅವುಗಳನ್ನು ಒಂದೇ ಎಳೆಯಲ್ಲಿ ಬಂಧಿಸುವ ಸಾಂಸ್ಕೃತಿಕ ಏಕತೆಗೆ ಒಂದು ಸ್ಥಳವಾಗಿದೆ. ಕಾಶ್ಮೀರದ ಕಾನಿ ಶಾಲುಗಳು, ಉತ್ತರ ಪ್ರದೇಶದ ಚಿಕಂಕಾರಿ, ಜರ್ದೋಜಿ, ಬನಾರಸಿ ರೇಷ್ಮೆ, ಗುಜರಾತ್‌ನ ಪಟೋಲಾ ಮತ್ತು ಕಛ್ ಕಸೂತಿ, ತಮಿಳುನಾಡಿನ ಕಾಂಜಿವರಂ, ಒಡಿಶಾದ ಸಂಬಲ್ಪುರಿ ಮತ್ತು ಮಹಾರಾಷ್ಟ್ರದ ಪೈಥಾನಿ ಮುಂತಾದ ಸಂಪ್ರದಾಯಗಳು ನಿಜವಾಗಿಯೂ ಅನನ್ಯವಾಗಿವೆ. ಭಾರತದ ಸಂಪೂರ್ಣ ಜವಳಿ ಪ್ರಯಾಣವನ್ನು ಪ್ರದರ್ಶಿಸುವ ಪ್ರದರ್ಶನಕ್ಕೆ ನಾನು ಈಗಷ್ಟೇ ಸಾಕ್ಷಿಯಾಗಿದ್ದೇನೆ. ಈ ಪ್ರದರ್ಶನವು ಭಾರತದ ಜವಳಿ ಕ್ಷೇತ್ರದ ಇತಿಹಾಸ ಮತ್ತು ಅದರ ಸಾಮರ್ಥ್ಯ ಎಷ್ಟು ಅದ್ಭುತವಾಗಿದೆ ಎಂಬುದನ್ನು ತೋರಿಸುತ್ತದೆ.

ಸ್ನೇಹಿತರೇ,

ಇಂದು, ಜವಳಿ ಮೌಲ್ಯ ಸರಪಳಿಯ ವಿವಿಧ ವಿಭಾಗಗಳ ಪಾಲುದಾರರು ಇಲ್ಲಿ ಇದ್ದಾರೆ. ನೀವು ಭಾರತದ ಜವಳಿ ವಲಯವನ್ನು ಅರ್ಥಮಾಡಿಕೊಂಡಿದ್ದೀರಿ ಮತ್ತು ನಮ್ಮ ಆಕಾಂಕ್ಷೆಗಳು ಮತ್ತು ಸವಾಲುಗಳ ಬಗ್ಗೆಯೂ ನಿಮಗೆ ತಿಳಿದಿದೆ. ಇಲ್ಲಿ ನಾವು ನಮ್ಮ ನೇಕಾರರು ಮತ್ತು ಕುಶಲಕರ್ಮಿ ಸಹಚರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದ್ದೇವೆ, ಅವರು ತಳಮಟ್ಟದಲ್ಲಿ ಈ ಮೌಲ್ಯ ಸರಪಳಿಯೊಂದಿಗೆ ಸಂಪರ್ಕ ಹೊಂದಿದ್ದಾರೆ. ನಮ್ಮ ಅನೇಕ ಸಹಚರರು ಹಲವಾರು ತಲೆಮಾರುಗಳ ಅನುಭವವನ್ನು ಹೊಂದಿದ್ದಾರೆ. ಮುಂದಿನ 25 ವರ್ಷಗಳಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಂಕಲ್ಪ ಮಾಡಿದೆ ಎಂದು ನಿಮಗೆ ತಿಳಿದಿದೆ. 'ವಿಕಸಿತ ಭಾರತ'ದ(ಅಭಿವೃದ್ಧಿ ಹೊಂದಿದ ಭಾರತ) ನಾಲ್ಕು ಪ್ರಮುಖ ಸ್ತಂಭಗಳೆಂದರೆ ಬಡವರು, ಯುವಕರು, ರೈತರು ಮತ್ತು ಮಹಿಳೆಯರು. ಮತ್ತು ಭಾರತದ ಜವಳಿ ಕ್ಷೇತ್ರವು ಈ ನಾಲ್ಕು ಸ್ತಂಭಗಳೊಂದಿಗೆ ಸಂಪರ್ಕ ಹೊಂದಿದೆ, ಅಂದರೆ ಬಡವರು, ಯುವಕರು, ರೈತರು ಮತ್ತು ಮಹಿಳೆಯರ ಜತೆ ನಂಟು ಹೊಂದಿದೆ. ಆದ್ದರಿಂದ, ʻಭಾರತ್ ಟೆಕ್ಸ್ʼನಂತಹ ಕಾರ್ಯಕ್ರಮಗಳ ಪ್ರಾಮುಖ್ಯತೆ ಗಮನಾರ್ಹವಾಗಿ ಹೆಚ್ಚಾಗಿದೆ.

ಸ್ನೇಹಿತರೇ,

'ವಿಕಸಿತ ಭಾರತ' ನಿರ್ಮಾಣಕ್ಕೆ ಜವಳಿ ಕ್ಷೇತ್ರದ ಕೊಡುಗೆಯನ್ನು ಹೆಚ್ಚಿಸಲು ನಾವು ವ್ಯಾಪಕವಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಸಂಪ್ರದಾಯ, ತಂತ್ರಜ್ಞಾನ, ಪ್ರತಿಭೆ ಮತ್ತು ತರಬೇತಿಯ ಮೇಲೆ ಗಮನ ಹರಿಸುತ್ತಿದ್ದೇವೆ. ಇಂದಿನ ಫ್ಯಾಷನ್‌ನ ಬೇಡಿಕೆಗಳಿಗೆ ಅನುಗುಣವಾಗಿ ನಮ್ಮ ಸಾಂಪ್ರದಾಯಿಕ ಅಭ್ಯಾಸಗಳನ್ನು ಹೇಗೆ ನವೀಕರಿಸಬಹುದು ಮತ್ತು ವಿನ್ಯಾಸಗಳನ್ನು ಹೇಗೆ ಪುನರುಜ್ಜೀವನಗೊಳಿಸಬಹುದು ಎಂಬುದನ್ನು ನಾವು ಒತ್ತಿಹೇಳುತ್ತಿದ್ದೇವೆ. ನಾವು ʻ5 ಎಫ್ʼ ಸೂತ್ರವನ್ನು ಬಳಸಿಕೊಂಡು ಜವಳಿ ಮೌಲ್ಯ ಸರಪಳಿಯ ಎಲ್ಲಾ ಅಂಶಗಳನ್ನು ಪರಸ್ಪರ ಸಂಪರ್ಕಿಸುತ್ತಿದ್ದೇವೆ. ಮತ್ತು ಈ ಕಾರ್ಯಕ್ರಮ ಮುಂದುವರಿಯುವವರೆಗೂ ಬಹುಶಃ 50 ಜನರು `5 ಎಫ್’ಗಳ ಬಗ್ಗೆ ನಿಮಗೆ ಪದೇ ಪದೇ ನೆನಪಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ, ನೀವು ಆ ಪರಿಕಲ್ಪನೆಯೊಂದಿಗೆ ಪರಿಚಿತರಾಗುತ್ತೀರಿ. ಮತ್ತು ನೀವು ಪ್ರದರ್ಶನಕ್ಕೆ ಹೋದಾಗ, ನೀವು 5 `ಎಫ್’ಗಳನ್ನು ಪದೇ ಪದೇ ಎದುರಿಸುತ್ತೀರಿ. `ಫಾರ್ಮ್’, `ಫೈಬರ್’, `ಫ್ಯಾಬ್ರಿಕ್’, `ಫ್ಯಾಶನ್’ ಮತ್ತು `ಫಾರಿನ್‌ʼ ಎಂಬ ಐದು ʻಎಫ್ʼಗಳ ಈ ಪ್ರಯಾಣವು ಒಂದು ರೀತಿಯಲ್ಲಿ ನಮ್ಮ ಮುಂದೆ ತೆರೆದುಕೊಳ್ಳುತ್ತಿದೆ. `5 ಎಫ್’ಗಳ ಈ ತತ್ವವನ್ನು ಗಮನದಲ್ಲಿಟ್ಟುಕೊಂಡು, ನಾವು ರೈತರು, ನೇಕಾರರು, ʻಎಂಎಸ್‌ಎಂʼಇಗಳು, ರಫ್ತುದಾರರು, ಎಲ್ಲರನ್ನೂ ಪ್ರೋತ್ಸಾಹಿಸುತ್ತಿದ್ದೇವೆ. ʻಎಂಎಸ್ಎಂʼಇಗಳನ್ನು ಉತ್ತೇಜಿಸಲು ನಾವು ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದೇವೆ. ಹೂಡಿಕೆ ಮತ್ತು ವಹಿವಾಟಿನ ದೃಷ್ಟಿಯಿಂದ ʻಎಂಎಸ್ಎಂಇʼಗಳ ವ್ಯಾಖ್ಯಾನವನ್ನು ನಾವು ಪರಿಷ್ಕರಿಸಿದ್ದೇವೆ. ಇದು ಗಾತ್ರದ ವಿಸ್ತರಣೆ ನಂತರವೂ ಕೈಗಾರಿಕೆಗಳು ಸರ್ಕಾರದ ಯೋಜನೆಗಳಿಂದ ಪ್ರಯೋಜನ ಪಡೆಯಲು ಅನುವು ಮಾಡಿಕೊಡುತ್ತದೆ. ನಾವು ಕುಶಲಕರ್ಮಿಗಳು ಮತ್ತು ಮಾರುಕಟ್ಟೆಯ ನಡುವಿನ ಅಂತರವನ್ನು ಕಡಿಮೆ ಮಾಡಿದ್ದೇವೆ. ನೇರ ಮಾರಾಟ, ಪ್ರದರ್ಶನಗಳು ಮತ್ತು ಆನ್‌ಲೈನ್ ವೇದಿಕೆಗಳಂತಹ ಸೌಲಭ್ಯಗಳನ್ನು ದೇಶದಲ್ಲಿ ಹೆಚ್ಚಿಸಲಾಗಿದೆ.

ಸ್ನೇಹಿತರೇ,

ಮುಂದಿನ ದಿನಗಳಲ್ಲಿ, ದೇಶದ ವಿವಿಧ ರಾಜ್ಯಗಳಲ್ಲಿ ಏಳು ʻಪಿಎಂ ಮಿತ್ರ ಪಾರ್ಕ್ʼಗಳನ್ನು (ಪ್ರಧಾನ ಮಂತ್ರಿ ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜನ್ ಮತ್ತು ಅಪೆರಲ್‌ ಪಾರ್ಕ್‌) ಸ್ಥಾಪಿಸಲಾಗುತ್ತಿದೆ. ಈ ಯೋಜನೆಯು ನಿಮ್ಮಂತಹ ಮಿತ್ರರಿಗೆ ಎಷ್ಟು ಮಹತ್ವದ ಅವಕಾಶವನ್ನು ತರುತ್ತದೆ ಎಂದು ನೀವು ಊಹಿಸಬಹುದು. ಮೌಲ್ಯ ಸರಪಳಿಯೊಂದಿಗೆ ಸಂಪರ್ಕ ಹೊಂದಿದ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಒಂದೇ ಸ್ಥಳದಲ್ಲಿ ಸಿದ್ಧಪಡಿಸುವುದು ಇದರ ಉದ್ದೇಶವಾಗಿದೆ, ಅಲ್ಲಿ ಆಧುನಿಕ, ಸಮಗ್ರ ಮತ್ತು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ʻಪ್ಲಗ್-ಅಂಡ್-ಪ್ಲೇʼ ಸೌಲಭ್ಯಗಳೊಂದಿಗೆ ನಿಮಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಇದು ಕಾರ್ಯಾಚರಣೆಯ ಪ್ರಮಾಣವನ್ನು ಹೆಚ್ಚಿಸುವುದಲ್ಲದೆ ಸರಕು-ಸಾಗಣೆ ವೆಚ್ಚವನ್ನು ಕಡಿಮೆ ಮಾಡುತ್ತದೆ.

ಸ್ನೇಹಿತರೇ,

ಜವಳಿ ಮತ್ತು ಉಡುಪು ವಲಯವು ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ ಎಂದು ನಿಮಗೆ ತಿಳಿದಿದೆ. ಇದು ಹೊಲಗಳಿಂದ ಹಿಡಿದು ʻಎಂಎಸ್ಎಂಇʼಗಳವರೆಗೆ ಮತ್ತು ರಫ್ತು ಕ್ಷೇತ್ರದವರೆಗೆ ವಿವಿಧ ಹಂತಗಳಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತದೆ. ಗ್ರಾಮೀಣ ಆರ್ಥಿಕತೆಯ ಗಮನಾರ್ಹ ಭಾಗ ಮತ್ತು ಮಹಿಳೆಯರು ಸಹ ಈ ಇಡೀ ವಲಯದಲ್ಲಿ ತೊಡಗಿಸಿಕೊಂಡಿದ್ದಾರೆ. ಉಡುಪುಗಳನ್ನು ತಯಾರಿಸುವ ಪ್ರತಿ 10 ಮಂದಿಯಲ್ಲಿ, 7 ಮಹಿಳೆಯರು ಇದ್ದಾರೆ ಮತ್ತು ಈ ಪ್ರಮಾಣ ಕೈಮಗ್ಗದಲ್ಲಿ ಇನ್ನೂ ಹೆಚ್ಚಾಗಿದೆ. ಜವಳಿ ಮಾತ್ರವಲ್ಲದೆ, ಖಾದಿ ನಮ್ಮ ಭಾರತದ ಮಹಿಳೆಯರನ್ನು ಸಬಲೀಕರಣಗೊಳಿಸಿದೆ. ಕಳೆದ 10 ವರ್ಷಗಳಲ್ಲಿ ನಾವು ಏನೇ ಪ್ರಯತ್ನಗಳನ್ನು ಮಾಡಿದರೂ, ಅದು ಖಾದಿಯನ್ನು ಅಭಿವೃದ್ಧಿ ಮತ್ತು ಉದ್ಯೋಗ ಎರಡರ ಸಾಧನವನ್ನಾಗಿ ಮಾಡಿದೆ ಎಂದು ನಾನು ಹೇಳಬಲ್ಲೆ. ಅಂದರೆ, ಖಾದಿ ಹಳ್ಳಿಗಳಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಕಳೆದ 10 ವರ್ಷಗಳಲ್ಲಿ, ಸರ್ಕಾರವು ಬಡವರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಮಾಡಿದೆ...ಕಳೆದ 10 ವರ್ಷಗಳಲ್ಲಿ, ದೇಶದಲ್ಲಿ ಸಂಭವಿಸಿದ ಮೂಲಸೌಕರ್ಯ ಅಭಿವೃದ್ಧಿಯು ನಮ್ಮ ಜವಳಿ ಕ್ಷೇತ್ರಕ್ಕೆ ಗಮನಾರ್ಹವಾಗಿ ಪ್ರಯೋಜನವನ್ನು ನೀಡಿದೆ.

ಸ್ನೇಹಿತರೇ,

ಇಂದು, ಭಾರತವು ವಿಶ್ವದಲ್ಲಿ ಹತ್ತಿ, ಸೆಣಬು ಮತ್ತು ರೇಷ್ಮೆ ಉತ್ಪಾದಿಸುವ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ಲಕ್ಷಾಂತರ ರೈತರು ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರವು ಇಂದು ಲಕ್ಷಾಂತರ ಹತ್ತಿ ರೈತರನ್ನು ಬೆಂಬಲಿಸುತ್ತಿದೆ, ಅವರಿಂದ ಲಕ್ಷಾಂತರ ಕ್ವಿಂಟಾಲ್ ಹತ್ತಿಯನ್ನು ಖರೀದಿಸುತ್ತಿದೆ. ಸರ್ಕಾರ ಪ್ರಾರಂಭಿಸಿದ ʻಕಸ್ತೂರಿ ಹತ್ತಿʼಯು ಭಾರತದ ಸ್ವಂತ ಗುರುತನ್ನು ಸೃಷ್ಟಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಲಿದೆ. ಇಂದು, ನಾವು ಸೆಣಬಿನ ರೈತರು ಮತ್ತು ಸೆಣಬಿನ ಕಾರ್ಮಿಕರಿಗಾಗಿಯೂ ಕೆಲಸ ಮಾಡುತ್ತಿದ್ದೇವೆ. ರೇಷ್ಮೆ ಕ್ಷೇತ್ರಕ್ಕೂ ನಾವು ನಿರಂತರವಾಗಿ ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ʻಗ್ರೇಡ್ 4ಎʼ ರೇಷ್ಮೆ ಉತ್ಪಾದನೆಯಲ್ಲಿ ಹೇಗೆ ಸ್ವಾವಲಂಬಿಯಾಗುವುದು ಎಂಬುದರ ಕುರಿತು ಪ್ರಯತ್ನಗಳು ನಡೆಯುತ್ತಿವೆ. ಸಂಪ್ರದಾಯದ ಜೊತೆಗೆ, ಭಾರತವು ಇನ್ನೂ ಸಾಧಿಸಬೇಕಾದದ್ದು ಬಹಳಷ್ಟಿರುವ ಕ್ಷೇತ್ರಗಳನ್ನು ಸಹ ನಾವು ಉತ್ತೇಜಿಸುತ್ತಿದ್ದೇವೆ. ಉದಾಹರಣೆಗೆ, ನಾವು ತಾಂತ್ರಿಕ ಜವಳಿ ಕ್ಷೇತ್ರದಲ್ಲಿ ವೇಗವಾಗಿ ಮುಂದುವರಿಯುತ್ತಿದ್ದೇವೆ. ತಾಂತ್ರಿಕ ಜವಳಿ ವಿಭಾಗವು ಎಷ್ಟು ಸಾಮರ್ಥ್ಯವನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆ. ಆದ್ದರಿಂದ, ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ನಾವು ʻರಾಷ್ಟ್ರೀಯ ತಾಂತ್ರಿಕ ಜವಳಿ ಮಿಷನ್ʼಅನ್ನು ಪ್ರಾರಂಭಿಸಿದ್ದೇವೆ. ಭಾರತದಲ್ಲಿ ಯಂತ್ರೋಪಕರಣಗಳು ಮತ್ತು ಸಲಕರಣೆಗಳನ್ನು ಅಭಿವೃದ್ಧಿಪಡಿಸಬೇಕೆಂದು ನಾವು ಬಯಸುತ್ತೇವೆ. ಈ ನಿಟ್ಟಿನಲ್ಲಿ ಅಗತ್ಯ ಮಾರ್ಗಸೂಚಿಗಳನ್ನು ಸಹ ಹೊರಡಿಸಲಾಗಿದೆ. ತಾಂತ್ರಿಕ ಜವಳಿಯಲ್ಲೂ ನವೋದ್ಯಮಗಳಿಗೆ ಸಾಕಷ್ಟು ಅವಕಾಶವಿದೆ. ಇದಕ್ಕಾಗಿ ಮಾರ್ಗಸೂಚಿಗಳನ್ನು ಸಹ ಮಾಡಲಾಗಿದೆ.

ಸ್ನೇಹಿತರೇ,

ಇಂದಿನ ಜಗತ್ತಿನಲ್ಲಿ, ಒಂದು ಕಡೆ ತಂತ್ರಜ್ಞಾನ ಮತ್ತು ಯಾಂತ್ರೀಕರಣವಿದ್ದರೆ, ಮತ್ತೊಂದೆಡೆ ಅನನ್ಯತೆ ಮತ್ತು ಅಧಿಕೃತತೆಗೆ ಬೇಡಿಕೆ ಇದೆ. ಮತ್ತು ಎರಡಕ್ಕೂ ಅನುವು ಮಾಡಿಕೊಡಲು ಸಾಕಷ್ಟು ಸ್ಥಳಾವಕಾಶವೂ ಇದೆ. ಕೈಯಿಂದ ತಯಾರಿಸಿದ ವಿನ್ಯಾಸ ಅಥವಾ ಜವಳಿ ವಿಷಯ ಉದ್ಭವಿಸಿದಾಗಲೆಲ್ಲಾ, ಅನೇಕ ಬಾರಿ ನಮ್ಮ ಕಲಾವಿದರು ತಯಾರಿಸಿದ ಏನೇ ಆದರೂ  ಇತರರಿಗಿಂತ ಸ್ವಲ್ಪ ಭಿನ್ನವಾಗಿ ಕಾಣುತ್ತದೆ. ಇಂದು, ಪ್ರಪಂಚದಾದ್ಯಂತದ ಜನರು ಪರಸ್ಪರ ವಿಭಿನ್ನವಾಗಿ ಕಾಣಲು ಬಯಸುತ್ತಿರುವಾಗ, ಅಂತಹ ಕಲೆಯ ಬೇಡಿಕೆಯೂ ಹೆಚ್ಚಾಗುತ್ತದೆ. ಆದ್ದರಿಂದ, ಇಂದು ದೊಡ್ಡಮಟ್ಟದಲ್ಲಿ, ನಾವು ಭಾರತದಲ್ಲಿ ಈ ಕ್ಷೇತ್ರದ ಕೌಶಲ್ಯಗಳಿಗೆ ಒತ್ತು ನೀಡುತ್ತಿದ್ದೇವೆ. ʻರಾಷ್ಟ್ರೀಯ ಫ್ಯಾಷನ್‌ ಟೆಕ್ನಾಲಜಿ ಸಂಸ್ಥೆʼಗಳ(ಎನ್ಐಎಫ್‌ಟಿ) ಜಾಲವು ದೇಶಾದ್ಯಂತ 19ಕ್ಕೆ ತಲುಪಿದೆ. ಸುತ್ತಮುತ್ತಲಿನ ನೇಕಾರರು ಮತ್ತು ಕುಶಲಕರ್ಮಿಗಳನ್ನು ಸಹ ಈ ಸಂಸ್ಥೆಗಳಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆ. ಹೊಸ ಪ್ರವೃತ್ತಿಗಳು ಮತ್ತು ಹೊಸ ತಂತ್ರಜ್ಞಾನಗಳ ಬಗ್ಗೆ ಅವರಿಗೆ ತಿಳಿಸಲು ಕಾಲಕಾಲಕ್ಕೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕೌಶಲ್ಯ ಅಭಿವೃದ್ಧಿ ಮತ್ತು ಸಾಮರ್ಥ್ಯ ವರ್ಧನೆಗಾಗಿ ನಾವು 'ಸಮರ್ಥ ಯೋಜನೆ' ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಈ ಕಾರ್ಯಕ್ರಮದಡಿ ಎರಡೂವರೆ ಲಕ್ಷಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಲಾಗಿದೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು. ಮತ್ತು 1.75 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಈಗಾಗಲೇ ಉದ್ಯಮಕ್ಕೆ ಸೇರಿಸಲಾಗಿದೆ.

ಸ್ನೇಹಿತರೇ,

ಕಳೆದ ದಶಕದಲ್ಲಿ, ನಾವು ಮತ್ತೊಂದು ಹೊಸ ಆಯಾಮವನ್ನು ಸೇರಿಸಿದ್ದೇವೆ. ಈ ಆಯಾಮವೆಂದರೆ "ವೋಕಲ್‌ ಫಾರ್‌ ಲೋಕಲ್‌"(ಸ್ಥಳೀಯತೆಗೆ ದನಿ). ಇಂದು, ದೇಶಾದ್ಯಂತ "ವೋಕಲ್‌ ಫಾರ್‌ ಲೋಕಲ್‌" ಮತ್ತು "ಲೋಕಲ್‌ ಟು ಗ್ಲೋಬಲ್‌"(ಸ್ಥಳೀಯದಿಂದ ಜಾಗತಿಕ) ಎಂಬ ರಾಷ್ಟ್ರವ್ಯಾಪಿ ಆಂದೋಲನ ನಡೆಯುತ್ತಿದೆ. ಸಣ್ಣ ಕಲಾವಿದರು, ಕುಶಲಕರ್ಮಿಗಳು ಮತ್ತು ಗುಡಿ ಕೈಗಾರಿಕೆಗಳಿಗೆ ರಾಷ್ಟ್ರೀಯ ಮಟ್ಟದ ಜಾಹೀರಾತುಗಳು ಮತ್ತು ಮಾರ್ಕೆಟಿಂಗ್‌ಗಾಗಿ ಹಣ ಇರುವುದಿಲ್ಲ, ಅಥವಾ ಅವರು ಅದನ್ನು ಅಷ್ಟು ವೆಚ್ಚವನ್ನು ಭರಿಸಲು ಸಾಧ್ಯವಿಲ್ಲ ಎಂದು ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಹಾಗಾಗಿಯೇ, ನೀವು ಅವರಿಗಾಗಿ ಜಾಹೀರಾತು ನೀಡಲಿ ಅಥವಾ ನೀಡದಿರಲಿ, ಮೋದಿ ಆ ಕೆಲಸವನ್ನು ಮಾಡುತ್ತಿದ್ದಾರೆ. ಬೇರೆ ಯಾರೂ ʻಗ್ಯಾರಂಟಿʼಯನ್ನು ನೀಡದವರಿಗೆ ಮೋದಿ ʻಗ್ಯಾರಂಟಿʼ ನೀಡುತ್ತಿದ್ದಾರೆ. ಈ ಮಿತ್ರರಿಗಾಗಿ ದೇಶಾದ್ಯಂತ ಪ್ರದರ್ಶನಗಳಿಗೆ ಸಂಬಂಧಿಸಿದ ವ್ಯವಸ್ಥೆಗಳನ್ನು ಸರ್ಕಾರ ಮಾಡುತ್ತಿದೆ.

ಸ್ನೇಹಿತರೇ,

ಸ್ಥಿರ ಮತ್ತು ಪರಿಣಾಮಕಾರಿ ನೀತಿಗಳನ್ನು ರೂಪಿಸುವಲ್ಲಿ ಸರ್ಕಾರದ ಪ್ರಯತ್ನಗಳ ಸಕಾರಾತ್ಮಕ ಪರಿಣಾಮವನ್ನು ಈ ಕ್ಷೇತ್ರದ ಬೆಳವಣಿಗೆಯಲ್ಲಿ ಸ್ಪಷ್ಟವಾಗಿ ಕಾಣಬಹುದು. 2014ರಲ್ಲಿ ಭಾರತದ ಜವಳಿ ಮಾರುಕಟ್ಟೆಯ ಮೌಲ್ಯ 7 ಲಕ್ಷ ಕೋಟಿ ರೂಪಾಯಿಗಳಿಗಿಂತ ಕಡಿಮೆ ಇತ್ತು. ಇಂದು ಅದು 12 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಕಳೆದ 10 ವರ್ಷಗಳಲ್ಲಿ, ಭಾರತದಲ್ಲಿ ನೂಲು, ಬಟ್ಟೆ ಮತ್ತು ಉಡುಪು ಉತ್ಪಾದನೆಯಲ್ಲಿ ಶೇಕಡಾ 25 ರಷ್ಟು ಹೆಚ್ಚಳವಾಗಿದೆ. ಸರ್ಕಾರವು ಈ ವಲಯದಲ್ಲಿ ಗುಣಮಟ್ಟದ ನಿಯಂತ್ರಣಕ್ಕೆ ಒತ್ತು ನೀಡುತ್ತದೆ. 2014 ರಿಂದ, ಸುಮಾರು 380 ʻಬಿಐಎಸ್ʼ ಮಾನದಂಡಗಳನ್ನು ರೂಪಿಸಲಾಗಿದೆ, ಇದು ಜವಳಿ ಕ್ಷೇತ್ರದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತಿದೆ. ಸರ್ಕಾರದ ಇಂತಹ ಪ್ರಯತ್ನಗಳಿಂದಾಗಿಯೇ ಈ ವಲಯದಲ್ಲಿ ವಿದೇಶಿ ಹೂಡಿಕೆ ನಿರಂತರವಾಗಿ ಹೆಚ್ಚುತ್ತಿದೆ. 2014ಕ್ಕೆ ಮುಂಚಿನ ಮೊದಲ 10 ವರ್ಷಗಳಲ್ಲಿ ಈ ವಲಯಕ್ಕೆ ಹರಿದು ಬಂದ ʻಎಫ್‌ಡಿಐʼ(ವಿದೇಶಿ ನೇರ ಹೂಡಿಕೆ) ಪ್ರಮಾಣವನ್ನು ಹೋಲಿಸುವುದಾದರೆ, ಈಗ ನಮ್ಮ ಸರ್ಕಾರದ 10 ವರ್ಷಗಳಲ್ಲಿ ಅದು ಸರಿಸುಮಾರು ದ್ವಿಗುಣಗೊಂಡಿದೆ.

ಸ್ನೇಹಿತರೇ,

ಭಾರತದ ಜವಳಿ ಕ್ಷೇತ್ರದ ಶಕ್ತಿಯನ್ನು ನಾವು ನೋಡಿದ್ದೇವೆ ಮತ್ತು ಅದರ ಮೇಲೆ ನನಗೆ ಬಹಳ ನಿರೀಕ್ಷೆಗಳಿವೆ. ನೀವು ಏನೆಲ್ಲಾ ಸಾಧಿಸಬಲ್ಲಿರಿ ಎಂಬುದರ ಅನುಭವವನ್ನು ಕೋವಿಡ್ ಸಮಯದಲ್ಲಿ ನಾವೆಲ್ಲರೂ ಪಡೆದುಕೊಂಡಿದ್ದೇವೆ. ದೇಶ ಮತ್ತು ಜಗತ್ತು ʻಪಿಪಿಇ ಕಿಟ್‌ʼಗಳು ಮತ್ತು ʻಮಾಸ್ಕ್‌ʼಗಳ ತೀವ್ರ ಕೊರತೆ ಎದುರಿಸುತ್ತಿದ್ದಾಗ, ಭಾರತದ ಜವಳಿ ಕ್ಷೇತ್ರವು ನಾಗಾಲೋಟ ಪಡೆಯಿತು. ಇಡೀ ಪೂರೈಕೆ ಸರಪಳಿಯನ್ನು ಸುಗಮಗೊಳಿಸಲು ಸರ್ಕಾರ ಮತ್ತು ಜವಳಿ ವಲಯವು ಸಹಕರಿಸಿತು. ದಾಖಲೆಯ ಸಮಯದಲ್ಲಿ, ದೇಶದಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿಗೆ ಸಾಕಷ್ಟು ಮಾಸ್ಕ್‌ಗಳು ಮತ್ತು ಪಿಪಿಇ ಕಿಟ್‌ಗಳನ್ನು ಪೂರೈಕೆ ಮಾಡಲಾಯಿತು. ಭಾರತವನ್ನು ಜವಳಿ ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಮ್ಮ ಗುರಿಯನ್ನು ನಾವು ಆದಷ್ಟು ಬೇಗ ಸಾಧಿಸಬಹುದು ಎಂದು ನಾನು ನಂಬುತ್ತೇನೆ. ನಿಮಗೆ ಯಾವುದೇ ಬೆಂಬಲ, ಸಹಾಯ ಅಗತ್ಯವಾದರೂ ಸರ್ಕಾರವು ನಿಮಗೆ ಪೂರ್ಣ ಪ್ರಮಾಣದಲ್ಲಿ ಅದನ್ನು ಒದಗಿಸುತ್ತದೆ. ಇದು ಒಂದು ಸುತ್ತಿನ ಚಪ್ಪಾಳೆಗೆ ಅರ್ಹವಾಗಿದೆ. ಆದಾಗ್ಯೂ, ನಿಮ್ಮ ಸಂಘಗಳು ಇನ್ನೂ ಚದುರಿದ ಸ್ಥಿತಿಯಲ್ಲೇ ಇವೆ ಎಂಬುದು ನನ್ನ ಭಾವನೆ. ಅವುಗಳನ್ನು ಸಂಪೂರ್ಣವಾಗಿ ಒಟ್ಟುಗೂಡಿಸುವುದು ಹೇಗೆ? ಹಾಗೆ ಮಾಡದಿದ್ದರೆ ಏನಾಗುತ್ತದೆ ಎಂದರೆ, ಒಂದು ವಲಯದ ಪ್ರತಿನಿಧಿಗಳು ಬಂದು, ತಮ್ಮ ಸಮಸ್ಯೆಗಳನ್ನು ಹೇಳಿ, ಸರ್ಕಾರದಿಂದ ಸಾಲ ಪಡೆದು ಓಡಿಹೋಗುತ್ತಾರೆ. ನಂತರ ಇನ್ನೊಬ್ಬರು ಬರುತ್ತಾರೆ, ಮತ್ತು ಬೇರೆ ಏನನ್ನಾದರೂ ಒತ್ತಾಯಿಸುತ್ತಾರೆ. ಆದ್ದರಿಂದ, ನಿಮ್ಮಲ್ಲಿಯೇ ಅಂತಹ ವಿರೋಧಾಭಾಸಗಳು ಅದರಿಂದ ಒಬ್ಬರಿಗೆ ಸಹಾಯಕವಾಗುತ್ತದೆ ಅಥವಾ ಇನ್ನೊಬ್ಬರನ್ನು ನಷ್ಟದಲ್ಲಿರಿಸುತ್ತದೆ. ನೀವೆಲ್ಲರೂ ಒಗ್ಗೂಡಿ ಸಮಸ್ಯೆಗಳನ್ನು ತಂದರೆ, ವಿಷಯಗಳನ್ನು ಸಮಗ್ರ ರೀತಿಯಲ್ಲಿ ಮುನ್ನಡೆಸಬಹುದು. ಮತ್ತು ನೀವು ಈ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ನಾನು ಬಯಸುತ್ತೇನೆ.

ಎರಡನೆಯದಾಗಿ, ಜಗತ್ತಿನಲ್ಲಿ ನಡೆಯುsತ್ತಿರುವ ಬದಲಾವಣೆಗಳನ್ನು ನೋಡಿದರೆ, ನಾವು ಶತಮಾನಗಳಿಂದಲೂ ಆ ಬದಲಾವಣೆಗಳಿಗಿಂತ ಮುಂದಿದ್ದೇವೆ. ಉದಾಹರಣೆಗೆ, ಇಡೀ ಜಗತ್ತು ಸಮಗ್ರ ಆರೋಗ್ಯ ರಕ್ಷಣೆಯತ್ತ, ಸಮಗ್ರ ಜೀವನಶೈಲಿಯತ್ತ ಸಾಗುತ್ತಿದೆ. ಆಹಾರದಲ್ಲಿಯೂ ಸಹ ಮೂಲಕ್ಕೆ ಮರಳುವುದು ಹೊಸ ಪ್ರವೃತ್ತಿಯಾಗಿದೆ. ಜನರು ತಮ್ಮ ಜೀವನಶೈಲಿಯಲ್ಲಿ ಮೂಲಕ್ಕೆ ಮರಳಲು ಒಲವು ತೋರುತ್ತಿದ್ದಾರೆ. ಹಾಗಾಗಿಯೇ, ಅವರು ಉಡುಪುಗಳಲ್ಲಿನ ಮೂಲ ಪದ್ಧತಿಗೆ ಹಿಂತಿರುಗುವತ್ತ ಒಲವು ತೋರುತ್ತಿದ್ದಾರೆ. ಬಟ್ಟೆಗಳನ್ನು ಧರಿಸುವ ಮೊದಲು ಅದರ ಮೇಲೆ ರಾಸಾಯನಿಕ ಆಧಾರಿತ ಬಣ್ಣವಿದ್ದರೆ ಅದನ್ನು ಧರಿಸಲು ಅವರು ಐವತ್ತು ಬಾರಿ ಯೋಚಿಸುತ್ತಾರೆ. ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಬಟ್ಟೆಗಳನ್ನು ಪಡೆಯಬಹುದೇ ಎಂದು ಅಪೇಕ್ಷಿಸುತ್ತಾರೆ. ಯಾವುದೇ ರೀತಿಯ ಬಣ್ಣವಿಲ್ಲದೆ ಹತ್ತಿ ಮತ್ತು ದಾರವನ್ನು ಬಟ್ಟೆ ತಯಾರಿಸಬಹುದೇ ಎಂದು ಅವರು ತಿಳಿಯಲು ಬಯಸುತ್ತಾರೆ. ಅಂದರೆ, ಜಗತ್ತು ವಿಭಿನ್ನ ಬೇಡಿಕೆಗಳೊಂದಿಗೆ ವಿಭಿನ್ನ ಮಾರುಕಟ್ಟೆಯಾಗಿದೆ. ನಾವು ಏನು ಮಾಡಬೇಕು? ಭಾರತ್ ಸ್ವತಃ ಒಂದು ದೊಡ್ಡ ಮಾರುಕಟ್ಟೆಯಾಗಿದೆ, ಜನರು ಬಟ್ಟೆಗಳ ಗಾತ್ರವನ್ನು ಸ್ವಲ್ಪ ಬದಲಾಯಿಸುತ್ತಲೇ ಇದ್ದರೂ, ಮಾರುಕಟ್ಟೆ ಇನ್ನೂ ದೊಡ್ಡದಾಗಿದೆ. ಬಟ್ಟೆಗಳ ಗಾತ್ರವು ಎರಡು ಅಥವಾ ಮೂರು ಇಂಚುಗಳಷ್ಟು ಕಡಿಮೆಯಾಗುತ್ತದೆ. ಮತ್ತು ಅದಕ್ಕಾಗಿಯೇ ಹೊರಗೆ ನೋಡಲು ಬಯಸುವುದಿಲ್ಲ. ಈ ಮನಸ್ಥಿತಿ ಹೇಗಿದೆಯೆಂದರೆ, ಭಾರತದಲ್ಲಿ ಇಷ್ಟು ದೊಡ್ಡ ಮಾರುಕಟ್ಟೆ ಇದೆ, ಇದಕ್ಕಿಂತಲೂ ನನಗೆ ಮತ್ತೇನು ಬೇಕು? ಇಂದಿನ ಪ್ರದರ್ಶನವನ್ನು ನೋಡಿದ ನಂತರ ದಯವಿಟ್ಟು ಅದರಿಂದ ಹೊರಬನ್ನಿ.

ಆಫ್ರಿಕನ್ ಮಾರುಕಟ್ಟೆಯಲ್ಲಿ ಯಾವ ರೀತಿಯ ಬಟ್ಟೆಯ ಅಗತ್ಯವಿದೆ, ಯಾವ ರೀತಿಯ ಬಣ್ಣದ ಸಂಯೋಜನೆಗಳನ್ನು ಅಲ್ಲಿ ಬಯಸುತ್ತಾರೆ, ಯಾವ ರೀತಿಯ ಗಾತ್ರಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ನಿಮ್ಮಲ್ಲಿ ಯಾರಾದರೂ ಅಧ್ಯಯನ ಮಾಡಿದ್ದೀರಾ? ನಾವು ಅದನ್ನು ಮಾಡುವುದಿಲ್ಲ. ಅಲ್ಲಿಂದ ಯಾರೋ ಆರ್ಡರ್‌ ನೀಡಿದರು, ನಾವು ಅದನ್ನು ಪೂರೈಕೆ ಮಾಡಿದ್ದೇವೆ ಅಷ್ಟೇ. ಆಫ್ರಿಕಾದ ಜನರು ಸ್ವಲ್ಪ ಅಗಲವಾದ ಬಟ್ಟೆಗಳನ್ನು ಬಯಸುತ್ತಾರೆ ಎಂದು ನನಗೆ ನೆನಪಿದೆ. ನಾವು ಇಲ್ಲಿ ಹೊಂದಿರುವ ಅಗಲವು ನಮ್ಮ ಜನರ ಗಾತ್ರವನ್ನು ಆಧರಿಸಿದೆ. ಆದ್ದರಿಂದ, ನಮ್ಮ 'ಕುರ್ತಾಗಳು' ನಮಗೆ ಸರಿಹೊಂದುತ್ತವೆ ಆದರೆ ಆ ದೇಸಗಳಿಗೆ ಅಲ್ಲ. ಆದ್ದರಿಂದ, ಸುರೇಂದ್ರನಗರದ ವ್ಯಕ್ತಿಯೊಬ್ಬರು ಇದನ್ನು ಪ್ರಯತ್ನಿಸಿದರು. ಅವರು ಕೈಯಿಂದ ಬಟ್ಟೆ ತಯಾರಿಸುತ್ತಿದ್ದರು, ಅವರು ನೇಕಾರರಾಗಿದ್ದರು... ಅವರು ಗಾತ್ರವನ್ನು ಹೆಚ್ಚಿಸಿದನು. ಅವರು ಅಗಲವಾದ ಬಟ್ಟೆಯನ್ನು ತಯಾರಿಸಲು ಪ್ರಾರಂಭಿಸಿದರು. ಮತ್ತು ಅವರು ಬಯಸಿದ ವಿವಿಧ ಬಣ್ಣಗಳನ್ನು ಒದಗಿಸಿದರು. ಅವರ ಬಟ್ಟೆ ಆಫ್ರಿಕನ್ ಮಾರುಕಟ್ಟೆಗಳಲ್ಲಿ ಬಹಳ ಜನಪ್ರಿಯವಾಯಿತು ಎಂದರೆ ನಿಮಗೆ ಅಚ್ಚರಿ ಎನಿಸಬಹುದು. ಏಕೆಂದರೆ ಆ ಬಟ್ಟೆಗಳಿಗೆ ನಡುವೆ ಹೊಲಿಗೆಯ ಅಗತ್ಯವಿಲ್ಲ. ಅದಕ್ಕೆ ಒಂದೇ ಸ್ಥಳದಲ್ಲಿ ಹೊಲಿಗೆ ಅಗತ್ಯವಿತ್ತು, ಮತ್ತು ಬಟ್ಟೆಗಳು ಸಿದ್ಧವಾಗಿದ್ದವು. ಈಗಲಾದರೂ ಈ ಬಗ್ಗೆ ಸ್ವಲ್ಪ ಸಂಶೋಧನೆ ಮಾಡಿ.

ನಾನು ಮೇಳದಲ್ಲಿ ಪ್ರದರ್ಶನವೊಂದನ್ನು ಸುಮ್ಮನೆ ಹಾಗೇ ವೀಕ್ಷಿಸುತ್ತಿದ್ದೆ, ಮತ್ತು ಜಿಪ್ಸಿ ಸಮುದಾಯವು ಪ್ರಪಂಚದಲ್ಲಿ, ಯುರೋಪಿನಾದ್ಯಂತ ವ್ಯಾಪಿಸಿರುವುದನ್ನು ನಾನು ತಿಳಿದುಕೊಂಡೆ. ಜಿಪ್ಸಿ ಜನರು ಧರಿಸುವ ಬಟ್ಟೆಗಳನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ, ಅವು ಬೆಟ್ಟಗಳಲ್ಲಿ ಅಥವಾ ರಾಜಸ್ಥಾನ ಮತ್ತು ಗುಜರಾತ್‌ನ ಗಡಿ ಪ್ರದೇಶಗಳಲ್ಲಿ ಧರಿಸುವ ನೈಸರ್ಗಿಕವಾಗಿ ಬಣ್ಣ ಹಚ್ಚಿದ ಬಟ್ಟೆಗಳನ್ನು ಹೋಲುತ್ತವೆ. ಅವರ ಬಣ್ಣದ ಆಯ್ಕೆಗಳು ಸಹ ಒಂದೇ ಆಗಿರುತ್ತವೆ. ಜಿಪ್ಸಿ ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ಬಟ್ಟೆಗಳನ್ನು ತಯಾರಿಸುವ ಮೂಲಕ ಯಾರಾದರೂ ದೊಡ್ಡ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಎಂದಾದರೂ ಪ್ರಯತ್ನಿಸಿದ್ದಾರೆಯೇ? ನಾನು ಯಾವುದೇ ರಾಯಧನವಿಲ್ಲದೆ ಈ ಸಲಹೆಯನ್ನು ನೀಡುತ್ತಿದ್ದೇನೆ. ನಾವು ಅದರ ಬಗ್ಗೆ ಯೋಚಿಸಬೇಕು, ಜಗತ್ತಿಗೆ ಈ ವಿಷಯಗಳು ಬೇಕು. ಇಲ್ಲಿ, ಈ ಇಡೀ ಪ್ರದರ್ಶನದಲ್ಲಿ ರಾಸಾಯನಿಕ ಉದ್ಯಮದಿಂದ ಯಾವುದೇ ಪ್ರಾತಿನಿಧ್ಯವಿಲ್ಲ ಎಂಬುದನ್ನು ನಾನು ನೋಡಿದ್ದೇನೆ. ಈಗ ಹೇಳಿ ರಾಸಾಯನಿಕಗಳಲ್ಲಿ ತೊಡಗಿರುವವರ ಸಹಾಯವಿಲ್ಲದೆ ಯಾವುದೇ ಬಟ್ಟೆಯನ್ನು ಮಾರುಕಟ್ಟೆಯಲ್ಲಿ ಪರಿಚಯಿಸಬಹುದೇ? ಆದರೆ ನಿಮ್ಮ ಪೂರೈಕೆ ಸರಪಳಿಯಲ್ಲಿ ರಾಸಾಯನಿಕ ಉದ್ಯಮದ ಯಾವುದೇ ಪ್ರಾತಿನಿಧ್ಯ ಇಲ್ಲ. ರಾಸಾಯನಿಕ ಉದ್ಯಮದ ಜನರು ಸಹ ಈ ಪ್ರದರ್ಶನದಲ್ಲಿ ಭಾಗವಹಿಸಿದ್ದರೆ ಚೆನ್ನಾಗಿರುತ್ತಿತ್ತು. ನೈಸರ್ಗಿಕ ಬಣ್ಣಗಳನ್ನು ಒದಗಿಸಲು ಸ್ಪರ್ಧೆ ಇರಬೇಕು. ತರಕಾರಿಗಳಿಂದ ತಯಾರಿಸಿದ ಬಣ್ಣಗಳನ್ನು ಯಾರು ಒದಗಿಸುತ್ತಾರೆ? ಮತ್ತು ಅದನ್ನು ಜಗತ್ತಿಗೆ ಮಾರಾಟ ಮಾಡೋಣ. ನಮ್ಮ ಖಾದಿ ವಿಶ್ವದಲ್ಲಿ ತನ್ನದೇ ಆದ ಛಾಪು ಮೂಡಿಸುವ ಶಕ್ತಿಯನ್ನು ಹೊಂದಿದೆ. ಆದರೆ ನಾವು ಖಾದಿಯನ್ನು ಸ್ವಾತಂತ್ರ್ಯ ಚಳವಳಿಗೆ ಅಥವಾ ಚುನಾವಣೆಯ ಸಮಯದಲ್ಲಿ ನಾಯಕರು ಧರಿಸುವ ಬಟ್ಟೆಗಳಿಗೆ ಸೀಮಿತಗೊಳಿಸಿದ್ದೇವೆ. 2003ರಲ್ಲಿ ನಾನು ತುಂಬಾ ಸ್ಥೈರ್ಯದ ಕಾರ್ಯಕ್ರಮವನ್ನು ನಡೆಸಿದ್ದು ಎಂದು ನನಗೆ ನೆನಪಿದೆ. ನಾನು ಇದನ್ನು ಸ್ಥೈರ್ಯದ ಕಾರ್ಯಕ್ರಮ ಎಂದು ಕರೆಯುತ್ತಿದ್ದೇನೆ, ಏಕೆಂದರೆ ನಾನು ವಾಸಿಸುತ್ತಿದ್ದ ಜನರು ಮತ್ತು ನಾನು ಅದನ್ನು ಮಾಡಿದ ವೇದಿಕೆಯಲ್ಲಿ, ಇದನ್ನು ಸ್ಥೈರ್ಯದ ಕಾರ್ಯಕ್ರಮ ಎಂದು ಕರೆಯಲಾಗುತ್ತದೆ.

ನಾನು 2003ರ ಅಕ್ಟೋಬರ್ 2ರಂದು ಪೋರ್‌ಬಂದರ್‌ನಲ್ಲಿ ʻಫ್ಯಾಷನ್ ಶೋʼ ಆಯೋಜಿಸಿದ್ದೆ. ಇಂದಿಗೂ, ನೀವು ನಮ್ಮ ದೇಶದಲ್ಲಿ ಎಲ್ಲಿಯಾದರೂ ʻಫ್ಯಾಷನ್ ಶೋʼ ಆಯೋಜಿಸಿದರೆ, ನಾಲ್ಕರಿಂದ ಆರು ಜನರು ಪ್ರತಿಭಟಿಸಲು ಧ್ವಜಗಳನ್ನು ಹಿಡಿದು  ಬರುತ್ತಾರೆ. 2003ರಲ್ಲಿ ಏನಾಗುತ್ತಿತ್ತು ಎಂದು ನೀವು ಊಹಿಸಬಹುದು. ಮತ್ತು ನಾನು ಅದನ್ನು ಗುಜರಾತ್‌ನ ʻಎನ್ ಐಡಿʼ(ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಡಿಸೈನ್) ಹುಡುಗರಿಗೆ ವಿವರಿಸಿದೆ. ಅಕ್ಟೋಬರ್ 2 ರಂದು ರಾಜಕೀಯ ನಾಯಕರೊಂದಿಗೆ ಸಂಬಂಧ ಹೊಂದಿರುವ ಖಾದಿಯೊಂದಿಗೆ ನಾನು ವಿಭಿನ್ನವಾದದ್ದನ್ನು ಬಯಸುತ್ತೇನೆ ಎಂದು ನಾನು ಹೇಳಿದೆ. ಸಾಮಾನ್ಯ ಜನರು ಧರಿಸುವ ಬಟ್ಟೆಗಳಲ್ಲಿ ಬದಲಾವಣೆ ತರಲು ನಾನು ಬಯಸಿದೆ. ಸ್ವಲ್ಪ ಪ್ರಯತ್ನದಿಂದ ನಾನು ಗಾಂಧೀಜಿ ಮತ್ತು ವಿನೋಬಾ ಅವರೊಂದಿಗೆ ಕೆಲಸ ಮಾಡಿದ ಎಲ್ಲ ಗಾಂಧಿವಾದಿಗಳನ್ನು ಕರೆದೆ. ನಾನು ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಫ್ಯಾಷನ್ ಶೋನಲ್ಲಿ "ವೈಷ್ಣವ್ ಜನ್ ತೋ ತೆನೆ ಕಹಿಯೆ" ಹಾಡನ್ನು ನುಡಿಸಲಾಯಿತು. ಮತ್ತು ಎಲ್ಲಾ ಚಿಕ್ಕ ಮಕ್ಕಳು ಆಧುನಿಕ ಖಾದಿ ಬಟ್ಟೆಗಳನ್ನು ಧರಿಸಿ ಬಂದರು. ನಮ್ಮೊಂದಿಗಿಲ್ಲದ ವಿನೋಬಾ ಜೀ ಅವರ ಒಡನಾಡಿ ಭಾವ್ ಜೀ ನನ್ನೊಂದಿಗೆ ಕುಳಿತಿದ್ದರು. ಖಾದಿ ಬಗ್ಗೆ ನಾವು ಎಂದಿಗೂ ಈ ರೀತಿ ಯೋಚಿಸಿಲ್ಲ ಎಂದು ಅವರು ಹೇಳಿದರು. ಇದು ನಿಜವಾದ ಮಾರ್ಗ. ಹೊಸ ಪ್ರಯೋಗಗಳ ಫಲಿತಾಂಶ ಏನಾಯಿತು ಮತ್ತು ಖಾದಿ ಇಂದು ಎಲ್ಲಿಗೆ ತಲುಪಿದೆ ಎಂದು ನೀವು ನೋಡುತ್ತಿದ್ದೀರಿ ಅಲ್ಲವೇ? ಇದು ಇನ್ನೂ ಜಾಗತಿಕವಾಗಿಲ್ಲ. ಆದಾಗ್ಯೂ, ಇದು ನಮ್ಮ ದೇಶದಲ್ಲಿ ವೇಗವನ್ನು ಪಡೆಯುತ್ತಿದೆ. ಸ್ನೇಹಿತರೇ, ಈ ರೀತಿಯ ಅನೇಕ ವಿಷಯಗಳಿವೆ, ಅವುಗಳ ಬಗ್ಗೆ ನಾವು ಯೋಚಿಸಬೇಕು. ಎರಡನೆಯದಾಗಿ, ವಿಶ್ವಾದ್ಯಂತ ಜವಳಿ ಇತಿಹಾಸದಲ್ಲಿ ಅತ್ಯಂತ ಶಕ್ತಿಯುತ ಹೆಜ್ಜೆಗುರುತನ್ನು ಹೊಂದಿರುವ ದೇಶ ಭಾರತ. ಆದರೂ ಇಲ್ಲಿ ನಾವು ಢಾಕಾ ಮಸ್ಲಿನ್ ಬಗ್ಗೆ ಚರ್ಚಿಸುತ್ತಿದ್ದೆವು. ಇಡೀ ಬಟ್ಟೆಯು ಉಂಗುರದ ಮೂಲಕ ಹಾದುಹೋಗುತ್ತಿತ್ತು ಮುಂತಾದಾಗಿ ಅದರ ಬಗ್ಗೆ ವಿವರಿಸಲಾಗುತ್ತಿತ್ತು. ಈಗಲೂ ನಾವು ಕಥೆಗಳನ್ನು ಹೇಳುತ್ತಲೇ ಇರುತ್ತೇವೆಯೇ? ಜವಳಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಯಂತ್ರ ತಯಾರಿಕೆಯನ್ನು ನಾವು ಸಂಶೋಧಿಸಬಹುದಲ್ಲವೇ? ನಮ್ಮ ಐಐಟಿ ವಿದ್ಯಾರ್ಥಿಗಳು, ನಮ್ಮ ಎಂಜಿನಿಯರಿಂಗ್ ವಿದ್ಯಾರ್ಥಿಗಳು, ತುಂಬಾ ಅನುಭವಿ ಜನರು ಸಹ ಅನೇಕ ಕೆಲಸಗಳನ್ನು ಮಾಡಬಲ್ಲರು.

ನಿಮ್ಮ ಮುಂದೆ ವಜ್ರ ಉದ್ಯಮದ ಉದಾಹರಣೆ ಇದೆ. ವಜ್ರ ಕ್ಷೇತ್ರದ ಜನರಿಗೆ ಅಗತ್ಯವಿರುವ ಪ್ರತಿಯೊಂದು ಯಂತ್ರವನ್ನು ಇಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮತ್ತು ವಜ್ರ ಉದ್ಯಮದಲ್ಲಿ ಕತ್ತರಿಸುವ ಮತ್ತು ಹೊಳಪುಗೊಳಿಸುವ ಕೆಲಸವನ್ನು ಭಾರತದಲ್ಲಿ ತಯಾರಿಸಿದ ಯಂತ್ರಗಳಿಂದ ಮಾಡಲಾಗುತ್ತಿದೆ. ಜವಳಿ ಕ್ಷೇತ್ರದಲ್ಲಿ ನಾವು ಸಮರೋಪಾದಿಯಲ್ಲಿ ಅದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲವೇ? ನಿಮ್ಮ ಸಂಘವು ಸ್ಪರ್ಧೆಯನ್ನು ನಡೆಸಬೇಕು. ಕಡಿಮೆ ವಿದ್ಯುತ್ ಬಳಸುವ ಮತ್ತು ಹೆಚ್ಚು ಉತ್ಪಾದಿಸುವ ಹಾಗೂ ವಿವಿಧ ವಸ್ತುಗಳನ್ನು ತಯಾರಿಸುವ ಹೊಸ ಯಂತ್ರವನ್ನು ಕಂಡುಹಿಡಿಯುವವರಿಗೆ ಸುಂದರವಾದ ಪ್ರಶಸ್ತಿಯನ್ನು ನೀಡಬೇಕು. ನೀವು ಇದನ್ನು ಮಾಡಲು ಸಾಧ್ಯವಿಲ್ಲವೇ?

ನನ್ನ ಸ್ನೇಹಿತರೇ, ಸಂಪೂರ್ಣವಾಗಿ ಹೊಸದಾಗಿ ಯೋಚಿಸಿ. ಇಂದು, ಆಫ್ರಿಕನ್ ದೇಶಗಳಲ್ಲಿ ನಮ್ಮ ಮಾರುಕಟ್ಟೆಗೆ ಅಗತ್ಯವಿರುವ ಜವಳಿ ಪ್ರಕಾರಗಳ ಬಗ್ಗೆ ಸಮಗ್ರ ಸಮೀಕ್ಷೆ, ಅಧ್ಯಯನ ನಡೆಸುವ ಬಗ್ಗೆ ಪರಿಗಣಿಸೋಣ. ಯುರೋಪಿಯನ್ ದೇಶಗಳಲ್ಲಿ ಯಾವ ರೀತಿಯ ಜವಳಿ ಅಗತ್ಯವಿದೆ? ಆರೋಗ್ಯ ಪ್ರಜ್ಞೆ ಇರುವವರಿಗೆ ಯಾವ ರೀತಿಯ ಬಟ್ಟೆಗಳು ಬೇಕಾಗುತ್ತವೆ? ನಾವು ಆ ಬಟ್ಟೆಗಳನ್ನು ಏಕೆ ತಯಾರಿಸಬಾರದು? ನಾವು ಎಂದಾದರೂ ಜಗತ್ತಿನಲ್ಲಿ ಒಂದು ಬ್ರಾಂಡ್ ಅನ್ನು ಸೃಷ್ಟಿಸಿದ್ದೇವೆಯೇ, ನಿರ್ದಿಷ್ಟವಾಗಿ ವೈದ್ಯಕೀಯ ವೃತ್ತಿ, ಆಸ್ಪತ್ರೆಗಳು, ಆಪರೇಟಿಂಗ್ ಥಿಯೇಟರ್‌ಗಳು ಇತ್ಯಾದಿಗಳಿಗೆ ಸಂಬಂಧಿಸಿದ ಜನರಿಗಾಗಿ, ಅಲ್ಲಿ ಬಟ್ಟೆಗಳನ್ನು ಒಮ್ಮೆ ಧರಿಸಬೇಕು ಮತ್ತು ನಂತರ ತ್ಯಜಿಸಬೇಕು, ಮತ್ತು ಅದರ ಮಾರುಕಟ್ಟೆ ಸಾಕಷ್ಟು ವ್ಯಾಪಕವಾಗಿಲ್ಲವೇ? ಶಸ್ತ್ರಚಿಕಿತ್ಸೆ ಎಷ್ಟೇ ದೊಡ್ಡದಾಗಿದ್ದರೂ ʻಭಾರತʼದಲ್ಲಿ ತಯಾರಿಸಿದ ಬಟ್ಟೆಗಳು ರೋಗಿಗೆ ಯಾವುದೇ ಅನಾನುಕೂಲತೆ ಉಂಟುಮಾಡುವುದಿಲ್ಲ ಎಂದು ಜಗತ್ತಿಗೆ ಖಾತರಿ ನೀಡುವ ಬ್ರಾಂಡ್ ಅನ್ನು ನಾವು ಎಂದಾದರೂ ಸೃಷ್ಟಿಸಿದ್ದೇವೆಯೇ? ನಾವು ಅಂತಹ ಬ್ರಾಂಡ್ ಅನ್ನು ಸೃಷ್ಟಿಸಬಾರದೇ? ನನ್ನ ಸ್ನೇಹಿತರೇ, ನಿಮ್ಮ ಆಲೋಚನೆ ಜಾಗತಿಕವಾಗಿರಲಿ. ಇದು ಭಾರತದ ಪಾಲಿಗೆ ಅಷ್ಟು ಅಗಾಧವಾದ ವಲಯವಾಗಿದೆ, ಮತ್ತು ಭಾರತದಲ್ಲಿ ಲಕ್ಷಾಂತರ ಜನರ ಉದ್ಯೋಗಗಳು  ಇದರೊಂದಿಗೆ ನಂಟು ಹೊಂದಿವೆ. ದಯವಿಟ್ಟು ಪ್ರಪಂಚದಿಂದ ಹೊರಹೊಮ್ಮುವ ಫ್ಯಾಷನ್ ಅನ್ನು ಅನುಸರಿಸಬೇಡಿ; ಫ್ಯಾಷನ್‌ನಲ್ಲೂ ಜಗತ್ತನ್ನು ನಾವೇ ಮುನ್ನಡೆಸೋಣ. ಫ್ಯಾಷನ್ ಜಗತ್ತಿನಲ್ಲಿ ನಾವು ತುಂಬಾ ಅನುಭವಿ ಜನರು; ನಾವು ಫ್ಯಾಷನ್‌ಗೆ ಹೊಸಬರಲ್ಲ. ನೀವು ಕೊನಾರ್ಕ್‌ನಲ್ಲಿರುವ ಸೂರ್ಯ ದೇವಾಲಯಕ್ಕೆ ಭೇಟಿ ನೀಡಬೇಕು. ನೂರಾರು ವರ್ಷಗಳ ಹಿಂದೆ ಕೆತ್ತಲಾದ ಸೂರ್ಯ ದೇವಾಲಯದ ಪ್ರತಿಮೆಗಳು ಇಂದಿನ ಆಧುನಿಕ ಯುಗದಲ್ಲಿಯೂ ತುಂಬಾ ಆಧುನಿಕವಾಗಿ ಕಾಣುವ ಬಟ್ಟೆಗಳನ್ನು ಧರಿಸಿವೆ, ಶತಮಾನಗಳ ಹಿಂದೆ ಕಲ್ಲುಗಳ ಮೇಲೆ ಕೆತ್ತಲಾದ ಬಟ್ಟೆಗಳವು.

ಇಂದು, ನಮ್ಮ ಸಹೋದರಿಯರು ಪರ್ಸ್‌ಗಳನ್ನು ಹಿಡಿದುಕೊಂಡು ತಿರುಗಾಡುವುದನ್ನು ನೋಡಿದಾಗ ಇದು ತುಂಬಾ ಫ್ಯಾಶನ್ ಆಗಿ ತೋರುತ್ತದೆ. ಶತಮಾನಗಳ ಹಿಂದೆ ಕಲ್ಲುಗಳಿಂದ ಕೆತ್ತಲಾದ ಕೊನಾರ್ಕ್ ಪ್ರತಿಮೆಗಳಲ್ಲಿ ನೀವು ಅದನ್ನು ಕಾಣಬಹುದು. ವಿವಿಧ ಪ್ರದೇಶಗಳಲ್ಲಿ ವಿವಿಧ ರೀತಿಯ ಪೇಟಗಳು ಏಕೆ ಇವೆ? ನಮ್ಮ ದೇಶದಲ್ಲಿ ಒಂದು ಕಾಲದಲ್ಲಿ ಮಹಿಳೆಯರು ಬಟ್ಟೆ ಧರಿಸಿದಾಗ, ಅವರ ಪಾದದ ಒಂದು ಸೆಂಟಿಮೀಟರ್‌ನಷ್ಟು ಭಾಗವು ಯಾರಿಗಾದರೂ ಕಾಣುವಂತಿದ್ದರೂ ಅದು ಅವರಿಗೆ ಇಷ್ಟವಾಗುತ್ತಿರಲಿಲ್ಲ. ಆದರೆ, ಕೆಲವೊಂದು ಉದ್ಯೋಗದಲ್ಲಿ ತೊಡಗಿದ್ದ ಕೆಲವು ಜನರು ನೆಲದಿಂದ ಆರರಿಂದ ಎಂಟು ಇಂಚುಗಳಷ್ಟು ಎತ್ತರದಲ್ಲಿ ಬಟ್ಟೆಗಳನ್ನು ಧರಿಸಬೇಕೆಂದು ಒತ್ತಾಯಿಸಿದರು. ಆದ್ದರಿಂದ ಆ ಫ್ಯಾಷನ್ ನಮ್ಮ ದೇಶದಲ್ಲಿ ಅವರಿಗೆ ಪ್ರಚಲಿತವಾಗಿತ್ತು. ಪಶುಸಂಗೋಪನೆಯಲ್ಲಿ ಕೆಲಸ ಮಾಡಿದವರ ಬಟ್ಟೆಗಳನ್ನು ನೋಡಿ. ಇದರರ್ಥ ವೃತ್ತಿಗಳಿಗೆ ಸೂಕ್ತವಾದ ಬಟ್ಟೆಗಳು ಭಾರತದಲ್ಲಿ ಶತಮಾನಗಳಿಂದ ಇವೆ. ಯಾರಾದರೂ ಮರುಭೂಮಿಯಲ್ಲಿದ್ದರೆ, ಅವರ ಬೂಟುಗಳು ಹೇಗಿರುತ್ತವೆ? ಅವರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ, ಅವರ ಬೂಟುಗಳು ಹೇಗಿರುತ್ತವೆ? ಯಾರಾದರೂ ಹೊಲಗಳಲ್ಲಿ ಕೆಲಸ ಮಾಡಿದರೆ, ಅವರ ಬೂಟುಗಳು ಹೇಗಿರುತ್ತವೆ? ಯಾರಾದರೂ ಪರ್ವತಗಳಲ್ಲಿ ಕೆಲಸ ಮಾಡಿದರೆ, ಅವರ ಬೂಟುಗಳು ಹೇಗಿರುತ್ತವೆ? ಶತಮಾನಗಳಷ್ಟು ಹಳೆಯದಾದ ಮತ್ತು ಇಂದಿಗೂ ಈ ದೇಶದಲ್ಲಿ ಲಭ್ಯವಿರುವ ವಿನ್ಯಾಸಗಳನ್ನು ನೀವು ಕಾಣಬಹುದು. ಆದರೆ ಇಷ್ಟು ವಿಶಾಲವಾದ ಪರಧಿಯಲ್ಲಿ, ನಾವು ಯೋಚಿಸಬೇಕಾದಷ್ಟು ಸೂಕ್ಷ್ಮವಾಗಿ ಯೋಚಿಸುತ್ತಿಲ್ಲ.

ಆದರೆ, ಸ್ನೇಹಿತರೇ,

ಇದರಲ್ಲಿ ಸರ್ಕಾರ ಭಾಗಿಯಾಗಬಾರದು. ಏಕೆಂದರೆ, ನಾವು ಎಲ್ಲವನ್ನೂ ಹಾಳುಮಾಡುವಲ್ಲಿ ಪರಿಣತರು. ಸರ್ಕಾರವು ಸಾಧ್ಯವಾದಷ್ಟು ಜನರ ಜೀವನದಿಂದ ಹೊರಬರಬೇಕೆಂದು ನಾನು ಬಯಸುತ್ತೇನೆ. ವಿಶೇಷವಾಗಿ ಮಧ್ಯಮ ವರ್ಗದ ಕುಟುಂಬಗಳ ಜೀವನದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿದಾಗ, ನಾನು ಅದನ್ನು ಒಪ್ಪುವುದಿಲ್ಲವಷ್ಟೇ. ಪ್ರತಿದಿನ, ಪ್ರತಿ ಹಂತದಲ್ಲೂ ಸರ್ಕಾರ ಏಕೆ ಇರಬೇಕು? ಸರ್ಕಾರದ ಹಸ್ತಕ್ಷೇಪ ಕಡಿಮೆ ಇರುವ ಸಮಾಜವನ್ನು ಸೃಷ್ಟಿಸೋಣ. ಹೌದು, ಬಡವರಿಗೆ ಬೆಂಬಲ ಬೇಕಾದಾಗ ಸರ್ಕಾರ ಇರಬೇಕು. ಬಡ ಹುಡುಗನಿಗೆ ಶಿಕ್ಷಣದ ಅಗತ್ಯವಿದ್ದರೆ, ಸರ್ಕಾರ ಅದನ್ನು ಒದಗಿಸಬೇಕು. ಅವರಿಗೆ ಆರೋಗ್ಯ ರಕ್ಷಣೆಯ ಅಗತ್ಯವಿದ್ದರೆ, ಅದನ್ನು ಒದಗಿಸಬೇಕು. ಆದರೆ ಉಳಿದ ವಿಷಯಗಳ ವಿಚಾರಕ್ಕೆ ಬಂದಾಗ, ನಾನು ಹತ್ತು ವರ್ಷಗಳಿಂದ ಸರ್ಕಾರದ ಹಸ್ತಕ್ಷೇಪದ ಈ ಅಭ್ಯಾಸದ ವಿರುದ್ಧ ಹೋರಾಡುತ್ತಿದ್ದೇನೆ ಮತ್ತು ಮುಂದಿನ ಐದು ವರ್ಷಗಳವರೆಗೆ ಖಂಡಿತವಾಗಿಯೂ ಅದರ ವಿರುದ್ಧ ಹೋರಾಟವನ್ನು ಮುಂದುವರಿಸುತ್ತೇನೆ.

ಸ್ನೇಹಿತರೇ, ನಾನು ಚುನಾವಣೆಯ ಬಗ್ಗೆ ಮಾತನಾಡುತ್ತಿಲ್ಲ. ನಾನು ಹೇಳಬಯಸುವುದೇನೆಂದರೆ, ಸರ್ಕಾರವು ವೇಗವರ್ಧಕ ಏಜೆಂಟ್ ಆಗಿದೆ. ನಿಮ್ಮ ಕನಸುಗಳನ್ನು ಈಡೇರಿಸುವಲ್ಲಿನ ಎಲ್ಲಾ ಅಡೆತಡೆಗಳನ್ನು ತೊಡೆದು ಹಾಕಲು ಸರ್ಕಾರ ಕೆಲಸ ಮಾಡುತ್ತದೆ. ಅದಕ್ಕಾಗಿ ನಾವು ಇಲ್ಲಿದ್ದೇವೆ, ನಾವು ಅದನ್ನು ಮಾಡುತ್ತೇವೆ. ಆದರೆ ನಾನು ನಿಮ್ಮನ್ನು ಆಹ್ವಾನಿಸುತ್ತೇನೆ, ಧೈರ್ಯವನ್ನು ಒಟ್ಟುಗೂಡಿಸಿ ಮತ್ತು ಹೊಸ ದೃಷ್ಟಿಕೋನದೊಂದಿಗೆ ಬನ್ನಿ. ಇಡೀ ಜಗತ್ತನ್ನು ಗಮನದಲ್ಲಿಟ್ಟುಕೊಳ್ಳಿ. ಭಾರತದಲ್ಲಿ ಸರಕುಗಳು ಮಾರಾಟ ಆಗದಿದ್ದರೆ ಗೊಂದಲಕ್ಕೊಳಗಾಗಬೇಡಿ. ಈ ಹಿಂದೆ ನೀವು 100 ಕೋಟಿ ರೂ.ಗೆ ಸರಕುಗಳನ್ನು ಮಾರಾಟ ಮಾಡಿದ್ದೀರಿ, ಈ ಬಾರಿ ಈ ಸಂಖ್ಯೆ 200 ಕೋಟಿ ರೂ.ಗಳನ್ನು ತಲುಪಿದೆ ಎಂಬ ರೀತಿಯ ಆಲೋಚನೆಯ ಬಲೆಗೆ ಸಿಲುಕಬೇಡಿ. ಈ ಮೊದಲು ಎಷ್ಟು ರಫ್ತು ಇತ್ತು ಮತ್ತು ಈಗ ಎಷ್ಟು ರಫ್ತು ಮಾಡಲಾಗುತ್ತಿದೆ ಎಂಬುದರ ಬಗ್ಗೆ ಯೋಚಿಸಿ. ಈ ಹಿಂದೆ ಇದನ್ನು ನೂರು ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು, ಈಗ ಅದನ್ನು 150 ದೇಶಗಳಿಗೆ ಹೇಗೆ ತಲುಪುಸುವುದು, ಈ ಮೊದಲು ಇದು ವಿಶ್ವದಾದ್ಯಂತ 200 ನಗರಗಳಿಗೆ ಹೋಗುತ್ತಿತ್ತು, ಆದರೆ ಈಗ ಅದನ್ನು 500 ನಗರಗಳಿಗೆ ಹೇಗೆ ವಿಸ್ತರಿಸುವುದು ಎಂದು ಆಲೋಚಿಸಬೇಕು. ಈ ಹಿಂದೆ ಇದು ಪ್ರಪಂಚದಾದ್ಯಂತದ ನಿರ್ದಿಷ್ಟ ಮಾರುಕಟ್ಟೆಗಷ್ಟೇ  ಹೋಗುತ್ತಿತ್ತು, ಈಗ ನಾವು ವಿಶ್ವಾದ್ಯಂತ ಆರು ಹೊಸ ಮಾರುಕಟ್ಟೆಗಳನ್ನು ಹೇಗೆ ವಶಪಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಯೋಚಿಸಿ. ಮತ್ತು ನೀವು ರಫ್ತು ಮಾಡಿದದ ಮಾತ್ರಕ್ಕೆ ಭಾರತದ ಜನರಿಗೇನೂ  ಬಟ್ಟೆಗಳ ಕೊರತೆಯಾಗುವುದಿಲ್ಲ, ಚಿಂತಿಸಬೇಡಿ. ಇಲ್ಲಿನ ಜನರು ತಮಗೆ ಬೇಕಾದ ಬಟ್ಟೆಗಳನ್ನು ಪಡೆಯುತ್ತಾರೆ.

ಅನಂತ ಧನ್ಯವಾದಗಳು.

ಗಮನಿಸಿ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.

*****

 



(Release ID: 2011149) Visitor Counter : 58