ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರು ‘ವಿಕಸಿತ ಭಾರತ ವಿಕಸಿತ ಛತ್ತೀಸಗಢ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು
ಛತ್ತೀಸಗಢದಲ್ಲಿ 34,400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನರೆವೇರಿಸಿದರು
ಯೋಜನೆಗಳು ರಸ್ತೆಗಳು, ರೈಲು ಮಾರ್ಗಗಳು, ಕಲ್ಲಿದ್ದಲು, ವಿದ್ಯುತ್ ಮತ್ತು ಸೌರಶಕ್ತಿಯಂತಹ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿವೆ
ಎನ್ ಟಿ ಪಿ ಸಿ ಯ ಲಾರಾ ಸೂಪರ್ ಥರ್ಮಲ್ ವಿದ್ಯುತ್ ಯೋಜನೆ ಹಂತ-I ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಾಯಿತು ಮತ್ತು ಎನ್ ಟಿ ಪಿ ಸಿ ಯ ಲಾರಾ ಸೂಪರ್ ಥರ್ಮಲ್ ವಿದ್ಯುತ್ ಯೋಜನೆ ಹಂತ-II ಕ್ಕೆ ಅಡಿಪಾಯವನ್ನು ಹಾಕಲಾಯಿತು
"ಛತ್ತೀಸ್ಗಢದ ಅಭಿವೃದ್ಧಿ ಮತ್ತು ಜನರ ಕಲ್ಯಾಣ ಡಬಲ್ ಎಂಜಿನ್ ಸರ್ಕಾರದ ಆದ್ಯತೆಯಾಗಿದೆ"
"ಬಡವರು, ರೈತರು, ಯುವಜನರು ಮತ್ತು ನಾರಿ ಶಕ್ತಿಯ ಸಬಲೀಕರಣದಿಂದ ವಿಕಸಿತ ಛತ್ತೀಸಗಢವನ್ನು ನಿರ್ಮಿಸಲಾಗುವುದು"
"ಗ್ರಾಹಕರ ವಿದ್ಯುತ್ ಬಿಲ್‌ಗಳನ್ನು ಶೂನ್ಯಕ್ಕೆ ಇಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ"
"ಮೋದಿಯವರಿಗೆ ನೀವೇ ಅವರ ಕುಟುಂಬ ಮತ್ತು ನಿಮ್ಮ ಕನಸುಗಳು ಅವರ ಸಂಕಲ್ಪಗಳು"
"ಮುಂದಿನ 5 ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾದಾಗ, ಛತ್ತೀಸಗಢವು ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪುತ್ತದೆ"
"ಭ್ರಷ್ಟಾಚಾರ ಕೊನೆಗೊಂಡಾಗ, ಅಭಿವೃದ್ಧಿ ಪ್ರಾರಂಭವಾಗುತ್ತದೆ ಮತ್ತು ಅನೇಕ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ"
Posted On:
24 FEB 2024 1:30PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ‘ವಿಕಸಿತ ಭಾರತ ವಿಕಸಿತ ಛತ್ತೀಸಗಢ’ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು 34,400 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು, ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳು ರಸ್ತೆಗಳು, ರೈಲು ಮಾರ್ಗಗಳು, ಕಲ್ಲಿದ್ದಲು, ವಿದ್ಯುತ್ ಮತ್ತು ಸೌರಶಕ್ತಿ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿವೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಛತ್ತೀಸಗಢದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಕಾರ್ಯಕ್ರಮದೊಂದಿಗೆ ಸಂಪರ್ಕ ಹೊಂದಿದ ಲಕ್ಷಾಂತರ ಕುಟುಂಬಗಳನ್ನು ಅಭಿನಂದಿಸಿದರು. ಯುವಜನರು, ಮಹಿಳೆಯರು, ಬಡವರು ಮತ್ತು ರೈತರ ಸಬಲೀಕರಣದಿಂದ ವಿಕಸಿತ ಛತ್ತೀಸಗಢವನ್ನು ನಿರ್ಮಿಸಲಾಗುವುದು ಮತ್ತು ಆಧುನಿಕ ಮೂಲಸೌಕರ್ಯಗಳು ವಿಕಸಿತ ಛತ್ತೀಸಗಢದ ಅಡಿಪಾಯವನ್ನು ಬಲಪಡಿಸುತ್ತವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇಂದು ಉದ್ಘಾಟನೆಯಾಗುತ್ತಿರುವ ಅಥವಾ ಶಂಕುಸ್ಥಾಪನೆಯಾಗುತ್ತಿರುವ ಯೋಜನೆಗಳು ಛತ್ತೀಸಗಢದ ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಅವರು ಹೇಳಿದರು.
ಇಂದು ರಾಷ್ಟ್ರಕ್ಕೆ ಸಮರ್ಪಣೆಯಾದ ಎನ್ ಟಿ ಪಿ ಸಿ ಯ ಸೂಪರ್ ಥರ್ಮಲ್ ವಿದ್ಯುತ್ ಯೋಜನೆ ಮತ್ತು 1600 ಮೆಗಾವ್ಯಾಟ್ ಸಾಮರ್ಥ್ಯದ ಹಂತ-II ರ ಶಂಕುಸ್ಥಾಪನೆಯನ್ನು ಉಲ್ಲೇಖಿಸಿದ ಪ್ರಧಾನಿ, ಈಗ ನಾಗರಿಕರಿಗೆ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಲಭ್ಯವಾಗುವಂತೆ ಮಾಡಲಾಗುವುದು ಎಂದು ಹೇಳಿದರು. ಛತ್ತೀಸಗಢವನ್ನು ಸೌರಶಕ್ತಿಯ ಕೇಂದ್ರವನ್ನಾಗಿ ಮಾಡುವ ಸರ್ಕಾರದ ಪ್ರಯತ್ನವನ್ನು ಮತ್ತು ರಾಜನಂದಗಾಂವ್ ಮತ್ತು ಭಿಲಾಯ್ ನಲ್ಲಿ ಸೌರ ವಿದ್ಯುತ್ ಸ್ಥಾವರಗಳ ಲೋಕಾರ್ಪಣೆಯನ್ನು ಪ್ರಸ್ತಾಪಿಸಿದರು, ಅವು ಹತ್ತಿರದ ಪ್ರದೇಶಗಳಿಗೆ ರಾತ್ರಿಯಲ್ಲಿಯೂ ವಿದ್ಯುತ್ ಸರಬರಾಜು ಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂದರು. "ಗ್ರಾಹಕರ ವಿದ್ಯುತ್ ಬಿಲ್ ಗಳನ್ನು ಶೂನ್ಯಕ್ಕೆ ಇಳಿಸಲು ಸರ್ಕಾರ ಶ್ರಮಿಸುತ್ತಿದೆ" ಎಂದು ಪ್ರಧಾನಿ ಮೋದಿ ಹೇಳಿದರು, ಪ್ರಸ್ತುತ ದೇಶದಾದ್ಯಂತ 1 ಕೋಟಿ ಕುಟುಂಬಗಳನ್ನು ಒಳಗೊಂಡಿರುವ ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು. ಮೇಲ್ಛಾವಣಿ ಸೌರ ಫಲಕಗಳನ್ನು ಸ್ಥಾಪಿಸಲು ಸರ್ಕಾರವು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಆರ್ಥಿಕ ನೆರವು ನೀಡಲಿದ್ದು, 300 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು ಮತ್ತು ಉತ್ಪಾದಿಸುವ ಹೆಚ್ಚುವರಿ ವಿದ್ಯುತ್ ಅನ್ನು ಸರ್ಕಾರವು ಮರಳಿ ಖರೀದಿಸುತ್ತದೆ, ಇದರಿಂದಾಗಿ ನಾಗರಿಕರಿಗೆ ಸಾವಿರಾರು ರೂಪಾಯಿ ಹೆಚ್ಚುವರಿ ಆದಾಯವನ್ನು ಲಭ್ಯವಾಗುತ್ತದೆ ಎಂದರು. ಬಂಜರು ಕೃಷಿ ಭೂಮಿಯಲ್ಲಿ ಸಣ್ಣ ಪ್ರಮಾಣದ ಸೋಲಾರ್ ಘಟಕಗಳನ್ನು ಸ್ಥಾಪಿಸಲು ರೈತರಿಗೆ ಸಹಾಯ ಮಾಡುವ ಮೂಲಕ ಅನ್ನದಾತರನ್ನು ಊರ್ಜಾದಾತರನ್ನಾಗಿ ಪರಿವರ್ತಿಸಲು ಸರ್ಕಾರ ಒತ್ತು ನೀಡಿದೆ ಎಂದು ಅವರು ಹೇಳಿದರು.
ಛತ್ತೀಸಗಢದಲ್ಲಿ ಡಬಲ್ ಇಂಜಿನ್ ಸರ್ಕಾರವು ಖಾತರಿಗಳನ್ನು ಈಡೇರಿಸಿರುವುದನ್ನು ಪ್ರಧಾನಿ ಶ್ಲಾಘಿಸಿದರು. ಎರಡು ವರ್ಷಗಳಿಂದ ಬಾಕಿ ಉಳಿದಿದ್ದ ಬೋನಸ್ ಅನ್ನು ಈಗಾಗಲೇ ರಾಜ್ಯದ ಲಕ್ಷಾಂತರ ರೈತರು ಪಡೆದಿದ್ದಾರೆ. ಡಬಲ್ ಇಂಜಿನ್ ಸರ್ಕಾರವು ತೆಂಡು ಎಲೆ ಸಂಗ್ರಾಹಕರ ವೇತನವನ್ನು ಹೆಚ್ಚಿಸುವ ಚುನಾವಣಾ ಭರವಸೆಯನ್ನು ಸಹ ಪೂರೈಸಿದೆ ಎಂದು ಅವರು ಮಾಹಿತಿ ನೀಡಿದರು. ಪಿಎಂ ಆವಾಸ್ ಮತ್ತು ಹರ್ ಘರ್ ನಲ್ ಸೆ ಜಲ್ ನಂತಹ ಯೋಜನೆಗಳು ಹೊಸ ವೇಗವನ್ನು ಪಡೆದುಕೊಂಡಿವೆ ಎಂದು ಅವರು ಹೇಳಿದರು. ವಿವಿಧ ಪರೀಕ್ಷೆಗಳಲ್ಲಿನ ಅಕ್ರಮಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದ ಪ್ರಧಾನಮಂತ್ರಿಯವರು ಮೆಹ್ತಾರಿ ವಂದನ್ ಯೋಜನೆಗಾಗಿ ರಾಜ್ಯದ ಮಹಿಳೆಯರನ್ನು ಅಭಿನಂದಿಸಿದರು.
ಛತ್ತೀಸಗಢದಲ್ಲಿ ಕಷ್ಟಪಟ್ಟು ದುಡಿಯುವ ರೈತರು, ಪ್ರತಿಭಾವಂತ ಯುವಜನರು ಮತ್ತು ನೈಸರ್ಗಿಕ ಸಂಪತ್ತು, ವಿಕಸಿತವಾಗಲು ಬೇಕಾದ ಎಲ್ಲವನ್ನೂ ಹೊಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಹಿಂದಿನ ಸರ್ಕಾರಗಳ ಸಮೀಪದೃಷ್ಟಿ ಮತ್ತು ಸ್ವಾರ್ಥಿ ವಂಶಾಡಳಿತದಿಂದ ರಾಜ್ಯ ಪ್ರಗತಿಯಾಗಿಲ್ಲ ಎಂದು ಟೀಕಿಸಿದರು. ಮೋದಿಗೆ ನೀವೇ ಅವರ ಕುಟುಂಬ ಮತ್ತು ನಿಮ್ಮ ಕನಸುಗಳು ಅವರ ಸಂಕಲ್ಪಗಳಾಗಿವೆ ಎಂದು ಅವರು ಹೇಳಿದರು. ಅದಕ್ಕಾಗಿಯೇ ನಾನು ಇಂದು ವಿಕಸಿತ ಭಾರತ ಮತ್ತು ವಿಕಸಿತ ಛತ್ತೀಸಗಢದ ಬಗ್ಗೆ ಮಾತನಾಡುತ್ತಿದ್ದೇನೆ. "140 ಕೋಟಿ ಭಾರತೀಯರಿಗೂ ಈ ಸೇವಕನು ತನ್ನ ಬದ್ಧತೆ ಮತ್ತು ಕಠಿಣ ಪರಿಶ್ರಮದ ಗ್ಯಾರಂಟಿಯನ್ನು ನೀಡಿದ್ದಾನೆ" ಎಂದು ಅವರು ಹೇಳಿದರು. 2014 ರಲ್ಲಿ ನೀಡಿದ್ದ ಪ್ರತಿಯೊಬ್ಬ ಭಾರತೀಯನು ವಿಶ್ವದಲ್ಲಿ ಭಾರತದ ಇಮೇಜ್ ಬಗ್ಗೆ ಹೆಮ್ಮೆ ಪಡುವಂತೆ ಮಾಡುವ ಭರವಸೆಯನ್ನು ಅವರು ನೆನಪಿಸಿಕೊಂಡರು. ಬಡವರ ಹಣವನ್ನು ಲೂಟಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಣವನ್ನು ಬಡವರ ಕಲ್ಯಾಣ ಯೋಜನೆಗೆ ಬಳಸಿಕೊಳ್ಳಲಾಗುತ್ತಿದೆ. ಬಡವರಿಗೆ ಉಚಿತ ಪಡಿತರ, ಉಚಿತ ವೈದ್ಯಕೀಯ ಚಿಕಿತ್ಸೆ, ಕೈಗೆಟಕುವ ದರದಲ್ಲಿ ಔಷಧ, ವಸತಿ, ಕೊಳವೆ ನೀರು, ಗ್ಯಾಸ್ ಸಂಪರ್ಕ ಹಾಗೂ ಶೌಚಾಲಯದ ಬಗ್ಗೆ ಅವರು ಪ್ರಸ್ತಾಪಿಸಿದರು.
10 ವರ್ಷಗಳ ಹಿಂದೆ ನಮ್ಮ ಪೂರ್ವಜರ ಕನಸುಗಳು ಮತ್ತು ಆಕಾಂಕ್ಷೆಗಳ ಭಾರತವನ್ನು ನಿರ್ಮಿಸುವ ಮೋದಿಯವರ ಗ್ಯಾರಂಟಿಯನ್ನು ಸ್ಮರಿಸಿದ ಪ್ರಧಾನಿ, ಅಂತಹ ಅಭಿವೃದ್ಧಿ ಹೊಂದಿದ ಭಾರತ ಇಂದು ಹೊರಹೊಮ್ಮುತ್ತಿದೆ ಎಂದು ಹೇಳಿದರು. ಅವರು ಡಿಜಿಟಲ್ ಇಂಡಿಯಾ ಉಪಕ್ರಮವನ್ನು ಪ್ರಸ್ತಾಪಿಸಿದರು ಮತ್ತು ನೈಜ-ಸಮಯದ ಪಾವತಿಗಳು, ಬ್ಯಾಂಕಿಂಗ್ ವ್ಯವಸ್ಥೆಗಳು ಮತ್ತು ಸ್ವೀಕರಿಸಿದ ಪಾವತಿಗಳಿಗೆ ಸಂದೇಶಗಳ ಉದಾಹರಣೆಗಳನ್ನು ನೀಡಿದರು ಮತ್ತು ಅವುಗಳು ಇಂದು ನಿಜವಾಗಿವೆ ಎಂದು ಒತ್ತಿ ಹೇಳಿದರು. ಪ್ರಸ್ತುತ ಸರ್ಕಾರವು ನೇರ ಲಾಭ ವರ್ಗಾವಣೆ ಮೂಲಕ ದೇಶದ ಜನರ ಬ್ಯಾಂಕ್ ಖಾತೆಗಳಿಗೆ 34 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣವನ್ನು ವರ್ಗಾಯಿಸಿದೆ, ಮುದ್ರಾ ಯೋಜನೆಯಡಿ ಯುವಕರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕಾಗಿ 28 ಲಕ್ಷ ಕೋಟಿ ರೂಪಾಯಿ ನೆರವು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ 2.75 ಲಕ್ಷ ಕೋಟಿ ರೂಪಾಯಿ ಸಹಾಯ ಒದಗಿಸಿದೆ ಎಂದು ಅವರು ತಿಳಿಸಿದರು. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಪಾರದರ್ಶಕತೆಯ ಕೊರತೆಯಿಂದ ಆಗುತ್ತಿದ್ದ ಹಣ ವರ್ಗಾವಣೆಯಲ್ಲಿನ ಸೋರಿಕೆಯನ್ನೂ ಅವರು ಎತ್ತಿ ತೋರಿಸಿದರು. "ಭ್ರಷ್ಟಾಚಾರವು ಕೊನೆಗೊಂಡಾಗ, ಅಭಿವೃದ್ಧಿಯು ಪ್ರಾರಂಭವಾಗುತ್ತದೆ ಮತ್ತು ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದರು, ಉತ್ತಮ ಆಡಳಿತದ ಪರಿಣಾಮವಾಗಿ ಆರೋಗ್ಯ ಸೌಲಭ್ಯಗಳು ಮತ್ತು ಶಿಕ್ಷಣ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಹೊಸ ರಸ್ತೆಗಳು ಮತ್ತು ರೈಲು ಮಾರ್ಗಗಳ ನಿರ್ಮಾಣವಾಗುತ್ತಿದೆ ಎಂದು ಅವರು ಹೇಳಿದರು.
ಇಂತಹ ಕಾರ್ಯಗಳು ವಿಕಸಿತ ಛತ್ತೀಸಗಢವನ್ನು ಸೃಷ್ಟಿಸುತ್ತವೆ ಮತ್ತು ಮುಂದಿನ 5 ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುತ್ತದೆ, ಆಗ ಛತ್ತೀಸಗಢ ಕೂಡ ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪುತ್ತದೆ ಎಂದು ಪ್ರಧಾನಿ ಹೇಳಿದರು. “ಇದು ಒಂದು ದೊಡ್ಡ ಅವಕಾಶ, ವಿಶೇಷವಾಗಿ ಮೊದಲ ಬಾರಿಯ ಮತದಾರರು ಮತ್ತು ಶಾಲೆ ಹಾಗೂ ಕಾಲೇಜಿನಲ್ಲಿ ಓದುತ್ತಿರುವ ಯುವಜನರಿಗೆ. ವಿಕಸಿತ ಛತ್ತೀಸಗಢ ಅವರ ಕನಸುಗಳನ್ನು ನನಸಾಗಿಸುತ್ತದೆ” ಎಂದು ಪ್ರಧಾನಮಂತ್ರಿಯವರು ತಮ್ಮ ಮಾತು ಮುಕ್ತಾಯಮಾಡಿದರು.
ಹಿನ್ನೆಲೆ
ಪ್ರಧಾನಮಂತ್ರಿಯವರು ಎನ್ ಟಿ ಪಿ ಸಿ ಯ ಲಾರಾ ಸೂಪರ್ ಥರ್ಮಲ್ ವಿದ್ಯುತ್ ಯೋಜನೆ, ಹಂತ-I (2x800 MW) ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಎನ್ ಟಿ ಪಿ ಸಿ ಯ ಲಾರಾ ಸೂಪರ್ ಥರ್ಮಲ್ ವಿದ್ಯುತ್ ಯೋಜನೆ, ಹಂತ-II (2x800 MW) ಕ್ಕೆ ಛತ್ತೀಸಗಢದ ರಾಯಗಢ ಜಿಲ್ಲೆಯಲ್ಲಿ ಅಡಿಪಾಯ ಹಾಕಿದರು. ಹಂತ-1 ಅನ್ನು ಸುಮಾರು 15,800 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ನಿರ್ಮಿಸಲಾಗಿದೆ, ಯೋಜನೆಯ ಹಂತ-II ಅನ್ನು ಹಂತ-I ಆವರಣದ ಲಭ್ಯವಿರುವ ಭೂಮಿಯಲ್ಲಿ ನಿರ್ಮಿಸಲಾಗುವುದು, ಹೀಗಾಗಿ ವಿಸ್ತರಣೆಗೆ ಯಾವುದೇ ಹೆಚ್ಚುವರಿ ಭೂಮಿಯ ಅಗತ್ಯವಿರುವುದಿಲ್ಲ ಮತ್ತು 15,530 ಕೋಟಿ ರೂ. ಹೂಡಿಕೆಯನ್ನು ಒಳಗೊಂಡಿರುತ್ತದೆ. ಹೆಚ್ಚು ಪರಿಣಾಮಕಾರಿಯಾದ ಸೂಪರ್ ಕ್ರಿಟಿಕಲ್ ತಂತ್ರಜ್ಞಾನ (ಹಂತ-I ಕ್ಕೆ) ಮತ್ತು ಅಲ್ಟ್ರಾ ಸೂಪರ್ ಕ್ರಿಟಿಕಲ್ ತಂತ್ರಜ್ಞಾನ (ಹಂತ-II ಕ್ಕೆ) ಯೋಜನೆಯು ಕಡಿಮೆ ನಿರ್ದಿಷ್ಟ ಕಲ್ಲಿದ್ದಲು ಬಳಕೆ ಮತ್ತು ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಖಚಿತಪಡಿಸುತ್ತದೆ. ಹಂತ-I ಮತ್ತು II ಎರಡರಿಂದಲೂ ಶೇ.50 ವಿದ್ಯುತ್ ಅನ್ನು ಛತ್ತೀಸಗಢ ರಾಜ್ಯಕ್ಕೆ ಹಂಚಿಕೆ ಮಾಡಲಾಗಿದೆ. ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ದಮನ್ & ದಿಯು, ದಾದ್ರಾ ಮತ್ತು ನಗರ ಹವೇಲಿಯಂತಹ ಹಲವಾರು ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿದ್ಯುತ್ ಸನ್ನಿವೇಶವನ್ನು ಸುಧಾರಿಸುವಲ್ಲಿ ಈ ಯೋಜನೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ ನ ಮೂರು ಪ್ರಮುಖ ಫಸ್ಟ್ ಮೈಲ್ ಕನೆಕ್ಟಿವಿಟಿ (ಎಫ್‌ಎಂಸಿ) ಯೋಜನೆಗಳನ್ನು ಪ್ರಧಾನ ಮಂತ್ರಿಯವರು ಉದ್ಘಾಟಿಸಿದರು, ಇದನ್ನು ಒಟ್ಟು 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕಲ್ಲಿದ್ದಲನ್ನು ವೇಗವಾಗಿ, ಪರಿಸರ ಸ್ನೇಹಿ ಮತ್ತು ಪರಿಣಾಮಕಾರಿಯಾಗಿ ಯಾಂತ್ರಿಕೃತವಾಗಿ ಸ್ಥಳಾಂತರಿಸುವಲ್ಲಿ ಅವು ಸಹಾಯ ಮಾಡುತ್ತವೆ. ಈ ಯೋಜನೆಗಳಲ್ಲಿ ಎಸ್ ಇ ಸಿ ಎಲ್ ನ ಡಿಪ್ಕಾ ಏರಿಯಾ ಮತ್ತು ಛಲ್ ನಲ್ಲಿರುವ ಡಿಪ್ಕಾ ಒಸಿಪಿ ಕಲ್ಲಿದ್ದಲು ನಿರ್ವಹಣಾ ಘಟಕ ಮತ್ತು ಎಸ್ ಇ ಸಿ ಎಲ್ ನ ರಾಯಗಢ್ ಪ್ರದೇಶದಲ್ಲಿ ಬರೌದ್ ಒಸಿಪಿ ಕಲ್ಲಿದ್ದಲು ನಿರ್ವಹಣಾ ಘಟಕಗಳು ಸೇರಿವೆ. ಎಫ್ ಎಂ ಸಿ ಯೋಜನೆಗಳು ಪಿಟ್‌ಹೆಡ್‌ನಿಂದ ಕಲ್ಲಿದ್ದಲು ನಿರ್ವಹಣಾ ಘಟಕಗಳಿಗೆ ಸಿಲೋಸ್, ಬಂಕರ್ ಗಳು ಮತ್ತು ಕನ್ವೇಯರ್ ಬೆಲ್ಟ್ ಗಳ ಮೂಲಕ ಕ್ಷಿಪ್ರ ಲೋಡಿಂಗ್ ವ್ಯವಸ್ಥೆಗಳನ್ನು ಹೊಂದಿರುವ ಕಲ್ಲಿದ್ದಲಿನ ಯಾಂತ್ರಿಕೃತ ಚಲನೆಯನ್ನು ಖಚಿತಪಡಿಸುತ್ತದೆ. ರಸ್ತೆಯ ಮೂಲಕ ಕಲ್ಲಿದ್ದಲು ಸಾಗಣೆಯನ್ನು ಕಡಿಮೆ ಮಾಡುವ ಮೂಲಕ, ಈ ಯೋಜನೆಗಳು ಕಲ್ಲಿದ್ದಲು ಗಣಿಗಳ ಸುತ್ತಮುತ್ತ ವಾಸಿಸುವ ಜನರ ಜೀವನ ಪರಿಸ್ಥಿತಿಗಳನ್ನು ಸರಾಗಗೊಳಿಸುವ ಮೂಲಕ ಸಂಚಾರ ದಟ್ಟಣೆ, ರಸ್ತೆ ಅಪಘಾತಗಳು ಮತ್ತು ಕಲ್ಲಿದ್ದಲು ಗಣಿಗಳ ಸುತ್ತಲಿನ ಪರಿಸರ ಮತ್ತು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡುತ್ತವೆ. ಪಿಟ್ ಹೆಡ್ ನಿಂದ ರೈಲ್ವೆ ಸೈಡಿಂಗ್ ಗಳಿಗೆ ಕಲ್ಲಿದ್ದಲನ್ನು ಸಾಗಿಸುವ ಟ್ರಕ್ ಗಳಿಂದ ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಸಾರಿಗೆ ವೆಚ್ಚದಲ್ಲಿ ಉಳಿತಾಯಕ್ಕೆ ಕಾರಣವಾಗುತ್ತದೆ.
ಈ ಪ್ರದೇಶದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ಉತ್ತೇಜಿಸುವ ಒಂದು ಕ್ರಮವಾಗಿ, ಸುಮಾರು 900 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾದ ರಾಜನಂದಗಾಂವ್ ನಲ್ಲಿ ಸೌರ ಪಿವಿ ಯೋಜನೆಯನ್ನು ಪ್ರಧಾನಿ ಉದ್ಘಾಟಿಸಿದರು. ಯೋಜನೆಯು ವಾರ್ಷಿಕವಾಗಿ ಅಂದಾಜು 243.53 ಮಿಲಿಯನ್ ಯೂನಿಟ್ ಗಳಷ್ಟು ವಿದ್ಯುತ್ ಉತ್ಪಾದಿಸುತ್ತದೆ ಮತ್ತು 25 ವರ್ಷಗಳಲ್ಲಿ ಸುಮಾರು 4.87 ಮಿಲಿಯನ್ ಟನ್ ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸುತ್ತದೆ, ಇದು ಸುಮಾರು 8.86 ಮಿಲಿಯನ್ ಮರಗಳಿಂದ ಬೇರ್ಪಡಿಸಿದ ಇಂಗಾಲಕ್ಕೆ ಸಮನಾಗಿರುತ್ತದೆ.
ಈ ಪ್ರದೇಶದಲ್ಲಿ ರೈಲು ಮೂಲಸೌಕರ್ಯವನ್ನು ಬಲಪಡಿಸುವ ಮೂಲಕ, ಸುಮಾರು 300 ಕೋಟಿ ರೂ. ವೆಚ್ಚದ ಬಿಲಾಸಪುರ್-ಉಸ್ಲಾಪುರ್ ಮೇಲ್ಸೇತುವೆಯನ್ನು ಪ್ರಧಾನಮಂತ್ರಿಯವರು ಲೋಕಾರ್ಪಣೆ ಮಾಡಿದರು. ಇದು ಸಂಚಾರದ ಭಾರೀ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಪ್ರಧಾನಮಂತ್ರಿಯವರು ಭಿಲಾಯಿಯಲ್ಲಿ 50 ಮೆವ್ಯಾ ಸೌರ ವಿದ್ಯುತ್ ಸ್ಥಾವರವನ್ನು ಲೋಕಾರ್ಪಣೆ ಮಾಡಿದರು. ಚಾಲನೆಯಲ್ಲಿರುವ ರೈಲುಗಳಲ್ಲಿ ಸೌರಶಕ್ತಿಯ ಬಳಕೆಗೆ ಇದು ಸಹಾಯ ಮಾಡುತ್ತದೆ.
ಎನ್ ಎಚ್-49 ರ 55.65 ಕಿಮೀ ಉದ್ದದ ವಿಭಾಗವನ್ನು ಎರಡು ಪಥಗಳಾಗಿ ಪುನರ್ವಸತಿ ಮತ್ತು ಮೇಲ್ದರ್ಜೆ ಯೋಜನೆಯನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಯೋಜನೆಯು ಎರಡು ಪ್ರಮುಖ ನಗರಗಳಾದ ಬಿಲಾಸಪುರ ಮತ್ತು ರಾಯಗಢ್ ನಡುವಿನ ಸಂಪರ್ಕವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಎನ್ ಎಚ್-130 ರ 52.40 ಕಿಮೀ ಉದ್ದದ ವಿಭಾಗವನ್ನು ಎರಡು-ಪಥಗಳಾಗಿ ಪುನರ್ವಸತಿ ಮತ್ತು ಮೇಲ್ದರ್ಜೆ ಯೋಜನೆಯನ್ನು ಪ್ರಧಾನಮಂತ್ರಿ ಲೋಕಾರ್ಪಣೆ ಮಾಡಿದರು. ಈ ಯೋಜನೆಯು ಅಂಬಿಕಾಪುರ ನಗರದ ರಾಯಪುರ ಮತ್ತು ಕೊರ್ಬಾ ನಗರಗಳ ಸಂಪರ್ಕವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಈ ಪ್ರದೇಶದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
***
(Release ID: 2009291)
Visitor Counter : 90
Read this release in:
Odia
,
Bengali
,
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Tamil
,
Telugu
,
Malayalam