ಪ್ರಧಾನ ಮಂತ್ರಿಯವರ ಕಛೇರಿ

ಫೆಬ್ರವರಿ 26 ರಂದು ಸುಮಾರು 41,000 ಕೋಟಿ ರೂಪಾಯಿ ಮೌಲ್ಯದ 2000 ಕ್ಕೂ ಹೆಚ್ಚು ರೈಲ್ವೆ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ


ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 19,000 ಕೋಟಿ ರೂ.ಗಳ ವೆಚ್ಚದಲ್ಲಿ 553 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಪುನರಾಭಿವೃದ್ಧಿಗೊಂಡ ಗೋಮತಿನಗರ ರೈಲು ನಿಲ್ದಾಣವನ್ನೂ ಉದ್ಘಾಟಿಸಲಿರುವ ಪ್ರಧಾನಮಂತ್ರಿ

ಸುಮಾರು 21,520 ಕೋಟಿ ರೂ.ಗಳ ವೆಚ್ಚದಲ್ಲಿ ದೇಶಾದ್ಯಂತ 1500 ರಸ್ತೆ ಮೇಲ್ಸೇತುವೆಗಳು ಮತ್ತು ಅಂಡರ್ ಪಾಸ್ ಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ

Posted On: 25 FEB 2024 3:29PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 26 ರಂದು ಮಧ್ಯಾಹ್ನ 12:30 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ 41,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಸುಮಾರು 2000 ರೈಲ್ವೆ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ರೈಲ್ವೆ ನಿಲ್ದಾಣಗಳಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವ ಮಹತ್ವವನ್ನು ಪ್ರಧಾನಿ ಆಗಾಗ್ಗೆ ಒತ್ತಿ ಹೇಳಿದ್ದಾರೆ. ಈ ಪ್ರಯತ್ನದ ಪ್ರಮುಖ ಹೆಜ್ಜೆಯಾಗಿ, ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ 553 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಿಸಿರುವ ಈ ನಿಲ್ದಾಣಗಳನ್ನು 19,000 ಕೋಟಿ ರೂ.ಗಳ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುವುದು. ಈ ನಿಲ್ದಾಣಗಳು ನಗರದ ಎರಡೂ ಬದಿಗಳನ್ನು ಸಂಯೋಜಿಸುವ 'ನಗರ ಕೇಂದ್ರಗಳಾಗಿ' ಕಾರ್ಯನಿರ್ವಹಿಸುತ್ತವೆ. ರೂಫ್ ಪ್ಲಾಜಾ, ಸುಂದರವಾದ ಭೂದೃಶ್ಯ, ಅಂತರ ಮಾದರಿ ಸಂಪರ್ಕ, ಸುಧಾರಿತ ಆಧುನಿಕ ಮುಂಭಾಗ, ಮಕ್ಕಳ ಆಟದ ಪ್ರದೇಶ, ಕಿಯೋಸ್ಕ್ ಗಳು, ಫುಡ್ ಕೋರ್ಟ್ ಗಳು ಮುಂತಾದ ಆಧುನಿಕ ಪ್ರಯಾಣಿಕರ ಸೌಲಭ್ಯಗಳು ಇರುತ್ತದೆ. ಅವುಗಳನ್ನು ಪರಿಸರ ಸ್ನೇಹಿ ಮತ್ತು ದಿವ್ಯಾಂಗ ಸ್ನೇಹಿಯಾಗಿ ಪುನರಾಭಿವೃದ್ಧಿ ಮಾಡಲಾಗುವುದು. ಈ ನಿಲ್ದಾಣದ ಕಟ್ಟಡಗಳ ವಿನ್ಯಾಸವು ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆಯುತ್ತದೆ.

ಇದಲ್ಲದೆ, ಸುಮಾರು 385 ಕೋಟಿ ರೂ.ಗಳ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾದ ಉತ್ತರ ಪ್ರದೇಶದ ಗೋಮತಿ ನಗರ ನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಹೆಚ್ಚಿದ ಭವಿಷ್ಯದ ಪ್ರಯಾಣಿಕರ ಸಂಖ್ಯೆಯನ್ನು ಪೂರೈಸಲು, ಈ ನಿಲ್ದಾಣವು ಆಗಮನ ಮತ್ತು ನಿರ್ಗಮನ ಸೌಲಭ್ಯಗಳನ್ನು ಪ್ರತ್ಯೇಕಿಸಿದೆ. ಇದು ನಗರದ ಎರಡೂ ಬದಿಗಳನ್ನು ಸಂಯೋಜಿಸುತ್ತದೆ. ಈ ಕೇಂದ್ರ ಹವಾನಿಯಂತ್ರಿತ ನಿಲ್ದಾಣವು ಏರ್ ಕಾನ್ಕೋರ್ಸ್, ದಟ್ಟಣೆ ಮುಕ್ತ ಪರಿಚಲನೆ, ಫುಡ್ ಕೋರ್ಟ್ ಗಳು ಮತ್ತು ಮೇಲಿನ ಮತ್ತು ಕೆಳಗಿನ ನೆಲಮಾಳಿಗೆಯಲ್ಲಿ ಸಾಕಷ್ಟು ಪಾರ್ಕಿಂಗ್ ಸ್ಥಳದಂತಹ ಆಧುನಿಕ ಪ್ರಯಾಣಿಕರ ಸೌಲಭ್ಯಗಳನ್ನು ಹೊಂದಿದೆ.

ಪ್ರಧಾನಮಂತ್ರಿಯವರು 1500 ರಸ್ತೆ ಮೇಲ್ಸೇತುವೆಗಳು ಮತ್ತು ಅಂಡರ್ ಪಾಸ್ ಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯಾಪಿಸಿರುವ ಈ ರಸ್ತೆ ಮೇಲ್ಸೇತುವೆಗಳು ಮತ್ತು ಅಂಡರ್ ಪಾಸ್ ಗಳು, ಈ ಯೋಜನೆಗಳ ಒಟ್ಟು ವೆಚ್ಚ ಸುಮಾರು 21,520 ಕೋಟಿ ರೂ. ಈ ಯೋಜನೆಗಳು ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಸುರಕ್ಷತೆ ಮತ್ತು ಸಂಪರ್ಕವನ್ನು ಹೆಚ್ಚಿಸುತ್ತದೆ, ಸಾಮರ್ಥ್ಯ ಮತ್ತು ರೈಲು ಪ್ರಯಾಣದ ದಕ್ಷತೆಯನ್ನು ಸುಧಾರಿಸುತ್ತದೆ.

****



(Release ID: 2009050) Visitor Counter : 50