ಪ್ರಧಾನ ಮಂತ್ರಿಯವರ ಕಛೇರಿ

​​​​​​​ರಾಜ್ಯಸಭೆಯ ನಿವೃತ್ತ ಸದಸ್ಯರ ಬೀಳ್ಕೊಡುಗೆ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 08 FEB 2024 1:07PM by PIB Bengaluru

ಗೌರವಾನ್ವಿತ ಸಭಾಪತಿಗಳೆ, 

ಪ್ರತಿ 2 ವರ್ಷಗಳಿಗೊಮ್ಮೆ ಈ ಸದನದಲ್ಲಿ ಈ ಸಮಾರಂಭ ನಡೆಯುತ್ತದೆ, ಆದರೂ ಈ ಸದನವು ನಿರಂತರತೆಯ ಸಂಕೇತವಾಗಿ ನೆಲೆನಿಂತಿದೆ. ಲೋಕಸಭೆಯು ಪ್ರತಿ 5 ವರ್ಷಗಳಿಗೊಮ್ಮೆ ಈ ರೀತಿಯ ರೂಪಾಂತರಕ್ಕೆ ಒಳಗಾಗುತ್ತದೆ. ಈ ಸದನವು ಪ್ರತಿ 2 ವರ್ಷಗಳಿಗೊಮ್ಮೆ ಪುನಶ್ಚೇತನಗೊಳ್ಳುತ್ತದೆ, ಇದು ತಾಜಾ ಶಕ್ತಿ ಮತ್ತು ಉತ್ಸಾಹದಿಂದ ತುಂಬಿರುತ್ತದೆ. ಆದ್ದರಿಂದ, ಪ್ರತಿ 2 ವರ್ಷಗಳಿಗೊಮ್ಮೆ ನಡೆಯುವ ಬೀಳ್ಕೊಡುಗೆ ನಿಜವಾದ ಅರ್ಥದಲ್ಲಿ ವಿದಾಯವಲ್ಲ. ನಿರ್ಗಮಿಸುವ ಸದಸ್ಯರು ತಮ್ಮ ಅಧಿಕಾರಾವಧಿಯಲ್ಲಿ ಈ ಪರಂಪರೆಯನ್ನು ಹೆಚ್ಚಿಸಲು ಶ್ರಮಿಸುವ ಒಳಬರುವ ತಂಡಗಳಿಗೆ ಒಂದು ಪರಂಪರೆಯಾಗಿ ಕಾರ್ಯ ನಿರ್ವಹಿಸುವ ಅಮೂಲ್ಯವಾದ ನೆನಪುಗಳನ್ನು ಬಿಟ್ಟು ಹೋಗುತ್ತಾರೆ.

ಕೆಲವು ಗೌರವಾನ್ವಿತ ಸಂಸದರು ಹೋದ ನಂತರ ಹಿಂತಿರುಗಬಹುದು, ಆದರೆ ಇತರರು ವಾಪಸಾಗದಿರಬಹುದು. ಈ ಸದನದ ಸದಸ್ಯರಾಗಿ ಮತ್ತು ವಿರೋಧ ಪಕ್ಷದಲ್ಲಿದ್ದು ತಮ್ಮ ಅಮೂಲ್ಯವಾದ ಒಳನೋಟಗಳು ಮತ್ತು ನಾಯಕತ್ವದ ಮೂಲಕ 6 ಬಾರಿ ಈ ಸದನಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿರುವ ಗೌರವಾನ್ವಿತ ಡಾ. ಮನಮೋಹನ್ ಸಿಂಗ್ ಅವರನ್ನು ನಾನು ವಿಶೇಷವಾಗಿ ಶ್ಲಾಘಿಸಲು ಬಯಸುತ್ತೇನೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮತ್ತು ಚರ್ಚೆಗಳ ಹೊರತಾಗಿಯೂ, ಈ ಸದನಕ್ಕೆ ಮತ್ತು ರಾಷ್ಟ್ರಕ್ಕೆ ಅವರ ನಿರಂತರ ಮಾರ್ಗದರ್ಶನ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ಪ್ರಜಾಪ್ರಭುತ್ವದ ಬಗ್ಗೆ ಚರ್ಚೆಗಳು ನಡೆದಾಗಲೆಲ್ಲ, ಗೌರವಾನ್ವಿತ ಡಾ. ಮನಮೋಹನ್ ಸಿಂಗ್ ಅವರ ಕೊಡುಗೆಗಳನ್ನು ನಿಸ್ಸಂದೇಹವಾಗಿ ಸ್ಮರಿಸಲಾಗುತ್ತದೆ ಮತ್ತು ಆಚರಿಸಲಾಗುತ್ತದೆ.

ನಾನು ಈ ಸದನದಲ್ಲಾಗಲಿ ಅಥವಾ ಲೋಕಸಭೆಯಲ್ಲಾಗಲಿ, ಇಂದು ಪ್ರಸ್ತುತ ಮತ್ತು ಭವಿಷ್ಯದಲ್ಲಿ ಸೇರಬಹುದಾದ ಎಲ್ಲ ಸಂಸದರಿಗೆ ಒತ್ತಿ ಹೇಳುವುದೇನೆಂದರೆ, ಸಂಸದರು ಪಕ್ಷದೊಂದಿಗೆ ಹೊದಿರುವ ಸಂಬಂಧ ಲೆಕ್ಕಿಸದೆ, ಅವರ ನಡವಳಿಕೆಯಿಂದ ನಾವು ಪಾಠಗಳನ್ನು ಕಲಿಯಲು ಪ್ರಯತ್ನಿಸಬೇಕು. ಅವರು ತಮ್ಮ ಅಧಿಕಾರಾವಧಿಯಲ್ಲಿ ಪ್ರದರ್ಶಿಸಿದ ಪ್ರತಿಭೆಗಳು, ಮಾರ್ಗದರ್ಶಿ ದೀಪಗಳಾಗಿ ಕಾರ್ಯ ನಿರ್ವಹಿಸುತ್ತವೆ.

ಇತ್ತೀಚೆಗೆ ಸದನದಲ್ಲಿ ಮತದಾನ ನಡೆದ ಘಟನೆಯನ್ನು ನೆನಪಿಸಿಕೊಳ್ಳುತ್ತೇನೆ. ಖಜಾನೆ ಪೀಠವು(ಸ್ಪೀಕರ್ ಅವರ ಬಲಭಾಗದ ಮೊದಲ ಸಾಲಿನ ಆಸನಗಳು) ಗಮನಾರ್ಹ ಅಂತರದೊಂದಿಗೆ ವಿಜಯವನ್ನು ಭದ್ರಪಡಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಆದರೆ, ಡಾ. ಮನಮೋಹನ್ ಸಿಂಗ್ ಅವರು ಗಾಲಿಕುರ್ಚಿಯಲ್ಲೇ ಬಂದು ಮತ ಚಲಾಯಿಸುವ ಪ್ರಯತ್ನ ನಡೆಸಿದರು. ಅವರ ಕರ್ತವ್ಯಗಳ ಬಗ್ಗೆ ಅವರ ಆತ್ಮಸಾಕ್ಷಿಯು ನಿಜವಾಗಿಯೂ ಸ್ಪೂರ್ತಿದಾಯಕವಾಗಿತ್ತು. ಇದಲ್ಲದೆ, ವಿವಿಧ ಸಮಿತಿಗಳ ಚುನಾವಣೆಗಳಲ್ಲಿ ಮತ ಚಲಾಯಿಸಲು ಸಮಿತಿಯ ಸದಸ್ಯರು ಗಾಲಿಕುರ್ಚಿಯಲ್ಲಿ ಆಗಮಿಸಿದ ನಿದರ್ಶನಗಳನ್ನು ನಾನು ಗಮನಿಸಿದ್ದೇನೆ. ಅವರ ಗುರಿ ನಿರ್ದಿಷ್ಟ ಅಭ್ಯರ್ಥಿಗೆ ಗೆಲುವು ಸಾಧಿಸುವುದು ಅಲ್ಲ, ಆದರೆ ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿ ಹಿಡಿಯುವುದಾಗಿದೆ. ಆದ್ದರಿಂದ ಇಂದು, ನಮ್ಮೆಲ್ಲರ ಪರವಾಗಿ, ಅವರ ನಿರಂತರ ಉತ್ತಮ ಆರೋಗ್ಯಕ್ಕಾಗಿ ಮತ್ತು ಅವರ ನಿರಂತರ ಮಾರ್ಗದರ್ಶನ ಮತ್ತು ಸ್ಫೂರ್ತಿಗಾಗಿ ನಾನು ಹೃತ್ಪೂರ್ವಕ ಪ್ರಾರ್ಥನೆಗಳನ್ನು ಸಲ್ಲಿಸುತ್ತೇನೆ.

ಗೌರವಾನ್ವಿತ ಸಭಾಪತಿಗಳೆ, 

ನಮ್ಮ ಸಹೋದ್ಯೋಗಿಗಳು ಹೊಸ ಜವಾಬ್ದಾರಿಗಳನ್ನು ಆರಂಭಿಸುತ್ತಿದ್ದಂತೆ, ವಿಶಾಲವಾದ ಸಾರ್ವಜನಿಕ ಕ್ಷೇತ್ರದತ್ತ ಪರಿವರ್ತನೆಯಾಗುತ್ತಿದ್ದಂತೆ, ಅವರು ರಾಜ್ಯಸಭೆಯಿಂದ ಜನಸಭೆಗೆ ಹೋಗುತ್ತಿದ್ದಾರೆ. ಅವರು ಈ ದೊಡ್ಡ ವೇದಿಕೆಗೆ ಕಾಲಿಟ್ಟಾಗ ಅವರ ಬೆಂಬಲ ಮತ್ತು ಇಲ್ಲಿ ಪಡೆದ ಅನುಭವವು ಅಮೂಲ್ಯವಾದ ಸ್ವತ್ತುಗಳೆಂದು ಸಾಬೀತುಪಡಿಸುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. 3 ಅಥವಾ 4 ವರ್ಷಗಳ ವಿಶ್ವವಿದ್ಯಾಲಯದ ಶಿಕ್ಷಣದ ನಂತರ ಒಬ್ಬರ ವ್ಯಕ್ತಿತ್ವವು ವಿಕಸನಗೊಳ್ಳುವಂತೆಯೇ, ಈ ಸಂಸ್ಥೆಯು ವಿಶ್ವವಿದ್ಯಾಲಯವಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲಿ ಅನುಭವಗಳು ಮತ್ತು ವೈವಿಧ್ಯತೆಯು 6 ವರ್ಷಗಳ ಅವಧಿಯಲ್ಲಿ ಒಬ್ಬರ ವ್ಯಕ್ತಿತ್ವವನ್ನು ರೂಪಿಸುತ್ತದೆ. 6 ವರ್ಷಗಳ ನಂತರ, ವ್ಯಕ್ತಿಗಳು ಶ್ರೀಮಂತ ವ್ಯಕ್ತಿತ್ವ ಮತ್ತು ದೃಷ್ಟಿಕೋನಗಳೊಂದಿಗೆ ಹೊರಹೊಮ್ಮುತ್ತಾರೆ. ಅವರ ಭವಿಷ್ಯದ ಸ್ಥಾನಗಳು ಮತ್ತು ಪಾತ್ರಗಳ ಹೊರತಾಗಿಯೂ, ಅವರು ನಿಸ್ಸಂದೇಹವಾಗಿ ನಮ್ಮ ಸಾಮೂಹಿಕ ಪ್ರಯತ್ನಗಳನ್ನು ಹೆಚ್ಚಿಸುತ್ತಾರೆ. ಜತೆಗೆ, ರಾಷ್ಟ್ರದ ಪ್ರಗತಿಯನ್ನು ವೇಗಗೊಳಿಸುತ್ತಾರೆ.

ಇಂದು ಸದನದಿಂದ ನಿರ್ಗಮಿಸುತ್ತಿರುವ ಈ ಗೌರವಾನ್ವಿತ ಸಂಸದರು ಹಳೆಯ ಸಂಸತ್ ಭವನ ಮತ್ತು ಹೊಸ ಸಂಸತ್ ಭವನ ಎರಡರಲ್ಲೂ ಸೇವೆ ಸಲ್ಲಿಸುವ ಸವಲತ್ತು ಪಡೆದವರು. ಅವರು ವಿದಾಯ ಹೇಳುವಾಗ, ಅವರು 75 ವರ್ಷಗಳ ಸ್ವಾತಂತ್ರ್ಯ (ಅಮೃತಕಾಲ್) ಮತ್ತು ನಮ್ಮ ಸಂವಿಧಾನದ ಸುಪ್ರಸಿದ್ಧ ಪ್ರಯಾಣದೊಂದಿಗೆ ಹೆಣೆದುಕೊಂಡಿರುವ ಪರಂಪರೆಯನ್ನು ಬಿಟ್ಟು ಹೋಗುತ್ತಿದ್ದಾರೆ, ಹಲವಾರು ನೆನಪುಗಳಿಂದ ಅಲಂಕರಿಸಲ್ಪಟ್ಟಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ಸವಾಲಿನ ಅವಧಿಯನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಸಮಯದಲ್ಲಿ ನಾವೆಲ್ಲರೂ ಆ ಸಂದರ್ಭಗಳಿಗೆ ಹೊಂದಿಕೊಂಡಿದ್ದೇವೆ. ಈ ಸಂಸದರು ಕೆಲಸ ಮಾಡಲು ಕರೆದಾಗಲೆಲ್ಲ ಅವರು ಶ್ರದ್ಧೆಯಿಂದ ಸ್ಪಂದಿಸುತ್ತಿದ್ದರು. ಪಕ್ಷಗಳ ಬೇಧವಿಲ್ಲದೆ, ಅಂತಹ ಪ್ರಯತ್ನದ ಸಮಯದಲ್ಲಿ ದೇಶದ ಕೆಲಸವನ್ನು ಸ್ಥಗಿತಗೊಳಿಸಲು ಯಾವುದೇ ಸಂಸದರು ಅವಕಾಶ ನೀಡಲಿಲ್ಲ. ಆದಾಗ್ಯೂ, ಕೋವಿಡ್ ಯುಗವು ಜೀವನ ಅನಿಶ್ಚಿಯದಿಂದ ತುಂಬಿತ್ತು. ಒಬ್ಬರು ಮನೆಯ ಹೊರಗೆ ಹೆಜ್ಜೆ ಹಾಕುವುದು ಸಾಕಷ್ಟು ಅಪಾಯಗಳನ್ನು ಸೃಷ್ಟಿಸಿತ್ತು. ಈ ಗಂಭೀರತೆಯ ಹಿನ್ನೆಲೆಯ ಹೊರತಾಗಿಯೂ, ಗೌರವಾನ್ವಿತ ಸಂಸದರು ಅಧಿವೇಶನಗಳಿಗೆ ಹಾಜರಾಗುವುದನ್ನು ಮುಂದುವರೆಸಿದರು, ರಾಷ್ಟ್ರಕ್ಕಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದರು, ದೇಶವನ್ನು ಪ್ರತಿಕೂಲತೆಯಿಂದ ಮುನ್ನಡೆಸಿದರು. ಹೀಗಾಗಿ, ಕೋವಿಡ್ ಅವಧಿಯು ಅಮೂಲ್ಯವಾದ ಪಾಠಗಳನ್ನು ನೀಡಿದೆ ಎಂದು ನಾನು ನಂಬುತ್ತೇನೆ. ಬಿಕ್ಕಟ್ಟುಗಳ ನಡುವೆ, ಭಾರತದ ಸಂಸತ್ತಿನಲ್ಲಿ ಕುಳಿತವರು ತಮ್ಮ ಗುರುತರವಾದ ಜವಾಬ್ದಾರಿಗಳನ್ನು ಪೂರೈಸಲು ಮತ್ತು ಅವರು ಧೈರ್ಯದಿಂದ ಎದುರಿಸಿದ ಸವಾಲುಗಳನ್ನು, ಎದುರಿಸಿದ ಅಪಾಯದ ಪ್ರಮಾಣವನ್ನು ನಾವು ನೋಡಿದ್ದೇವೆ.

ನಮ್ಮ ಅಧಿಕಾರಾವಧಿಯಲ್ಲಿ, ನಾವು ಕೆಲವು ದುರಂತ ಘಟನೆಗಳನ್ನು ಒಳಗೊಂಡಂತೆ ಆಹ್ಲಾದಕರ ಮತ್ತು ಅಹಿತಕರ ಅನುಭವಗಳ ಮಿಶ್ರಣವನ್ನು ಎದುರಿಸಿದ್ದೇವೆ. ಕೋವಿಡ್‌ಗೆ ಬಲಿಯಾದ ಆತ್ಮೀಯ ಸ್ನೇಹಿತರನ್ನು ಕಳೆದುಕೊಂಡು ದುಃಖಿಸುತ್ತೇವೆ. ಅವರ ಅನುಪಸ್ಥಿತಿಯನ್ನು ಸದನದಲ್ಲಿ ಆಳವಾಗಿ ಅನುಭವಿಸಲಾಗಿದೆ. ಅವರು ಅಮೂಲ್ಯ ಆಸ್ತಿಗಳಾಗಿದ್ದರು ಮತ್ತು ಅವರ ಅಗಲಿಕೆ ನಮಗೆಲ್ಲರಿಗೂ ದೊಡ್ಡ ನಷ್ಟವಾಗಿದೆ. ಇಂತಹ ಸವಾಲುಗಳ ನಡುವೆಯೂ ನಾವು ಪಟ್ಟು ಹಿಡಿದು ಮುನ್ನುಗ್ಗಿದೆವು. ಹೆಚ್ಚುವರಿಯಾಗಿ, ಕಪ್ಪು ಉಡುಪುಗಳನ್ನು ಧರಿಸಿದ ಫ್ಯಾಷನ್ ಮೆರವಣಿಗೆಗಳಂತಹ ಹಗುರವಾದ ಕ್ಷಣಗಳು ಇದ್ದವು. ನಮ್ಮ ಪ್ರಯಾಣವು ವೈವಿಧ್ಯಮಯ ಅನುಭವಗಳಿಂದ ಗುರುತಿಸಲ್ಪಟ್ಟಿದೆ. ಈಗ ಖರ್ಗೆ ಜೀ ಅವರ ಉಪಸ್ಥಿತಿಯಲ್ಲಿ ನಾನು ಅದನ್ನು ಪೂರೈಸುವ ಕರ್ತವ್ಯವನ್ನು ಹೊಂದಿದ್ದೇನೆ.

ಕೆಲವು ಕಾರ್ಯಗಳು ಶಾಶ್ವತವಾದ ಪರಿಣಾಮವನ್ನು ಉಂಟು ಮಾಡುತ್ತವೆ. ನಮ್ಮ ಸಾಂಸ್ಕೃತಿಕ ಆಚರಣೆಗಳಲ್ಲಿ ದುಷ್ಟ ಕಣ್ಣಿನಿಂದ ದೂರವಿರಲು ರಕ್ಷಣಾತ್ಮಕ ಕಪ್ಪು ಗುರುತನ್ನು(ತಿಲಕ) ಹಾಕಲಾಗುತ್ತದೆ. ಉದಾಹರಣೆಗೆ, ಕುಟುಂಬದ ಸದಸ್ಯರು ಸಾಧನೆಯ ಸಂದರ್ಭದಲ್ಲಿ ಅಥವಾ ಸುಂದರವಾದ ಬಟ್ಟೆಗಳನ್ನು ಧರಿಸಿದಾಗ ಮಗುವಿನ ಮೇಲೆ ಕಪ್ಪು ಗುರುತು ಹಾಕುತ್ತಾರೆ.

ಅಂತೆಯೇ, ನಮ್ಮ ರಾಷ್ಟ್ರವು ಕಳೆದ ದಶಕದಲ್ಲಿ ಗಮನಾರ್ಹ ಪ್ರಗತಿಯನ್ನು ಕಂಡಿದೆ, ಭವ್ಯವಾದ ಮತ್ತು ಮಂಗಳಕರ ವಾತಾವರಣವನ್ನು ಸೃಷ್ಟಿಸಿದೆ. ಈ ಪ್ರಗತಿ ಕಾಪಾಡಲು, ರಕ್ಷಣಾತ್ಮಕ ಕಪ್ಪು "ತಿಲಕ" ಅಥವಾ ಗುರುತು ಹಾಕುವುದು ಸಾಂಕೇತಿಕವಾಗಿದೆ. ನಮ್ಮ ಅಭಿವೃದ್ಧಿಯ ಪಯಣವನ್ನು ಪ್ರತಿಕೂಲತೆಯಿಂದ ಕಾಪಾಡಿದ್ದಕ್ಕಾಗಿ ನಾನು ಖರ್ಗೆ ಜಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇಂದು ಕಪ್ಪು ವಸ್ತ್ರವನ್ನು ಧರಿಸುವ ನಿಮ್ಮ ಆಯ್ಕೆಯು ಸಾಂಕೇತಿಕ ತಿಲಕವಾಗಿ ಕಾರ್ಯ ನಿರ್ವಹಿಸುತ್ತಿದೆ, ಇದು ನಮ್ಮ ಸಾಧನೆಗಳನ್ನು ಸಂರಕ್ಷಿಸುವ ನಿಮ್ಮ ಬದ್ಧತೆಯನ್ನು ಸೂಚಿಸುತ್ತದೆ. ಕಪ್ಪು ಉಡುಪಿನ ಸಾಮೂಹಿಕ ಪ್ರದರ್ಶನವನ್ನು ವೀಕ್ಷಿಸಲು ನಾನು ನಿರೀಕ್ಷಿಸಿದ್ದೆ. ಆದರೆ, ಅಂತಹ ಸಂಕೇತಗಳೊಂದಿಗೆ ನಮ್ಮ ಯಶಸ್ಸನ್ನು ರಕ್ಷಿಸುವ ಈ ಸನ್ನೆ(ಗೆಸ್ಚರ್)ಯನ್ನು ನಾನು ಪ್ರಶಂಸಿಸುತ್ತೇನೆ. ನಿಮ್ಮ ಕೊಡುಗೆ, ವಿಶೇಷವಾಗಿ ನಿಮ್ಮ ಗೌರವಾನ್ವಿತ ವಯಸ್ಸಿನಲ್ಲಿ ಗಮನಾರ್ಹ ಮೌಲ್ಯ  ಹೊಂದಿದೆ. ಅದಕ್ಕಾಗಿ ನಾನು ನಿಮಗೆ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಗೌರವಾನ್ವಿತ ಸಭಾಪತಿಗಳೆ,

ಇದು ಆಳವಾಗಿ ಪರಿಶೀಲಿಸುವ ವಿಷಯವಲ್ಲ, ಆದರೆ ನಮ್ಮ ಧರ್ಮಗ್ರಂಥಗಳು ಅಮೂಲ್ಯವಾದ ಒಳನೋಟ ನೀಡುತ್ತವೆ: ನಮ್ಮ ಸ್ನೇಹಿತರು ನಿರ್ಗಮಿಸಿದಾಗ, ಅವರ ಅನುಪಸ್ಥಿತಿಯನ್ನು ಖಂಡಿತವಾಗಿಯೂ ಅನುಭವಿಸುತ್ತೇವೆ. ಅವರ ಕೊಡುಗೆಗಳು ಮತ್ತು ಒಳನೋಟಗಳನ್ನು ನಾವು ಕಳೆದುಕೊಳ್ಳುತ್ತೇವೆ. ಹಿಂದಿರುಗಿದವರು ಹೊಸ ಚೈತನ್ಯದಿಂದ ಹಿಂತಿರುಗುತ್ತಾರೆ, ಉತ್ಸಾಹಭರಿತ ಚರ್ಚೆಗಳು ಮತ್ತು ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಸಿದ್ಧರಾಗುತ್ತಾರೆ.  ಬಲವಾದ ವಾದಗಳನ್ನು ಪ್ರಾರಂಭಿಸುತ್ತಿರಲಿ ಅಥವಾ ದೃಢವಾದ ರಕ್ಷಣೆಯನ್ನು ರಚಿಸುತ್ತಿರಲಿ, ಅವರು ತಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ಮುಂದುವರಿಸಲಿ.

ನಮ್ಮ ಧರ್ಮಗ್ರಂಥಗಳು ಹೇಳುವಂತೆ:

“ಗುಣಾ ಗುಣಜ್ಞೇಷು ಗುಣಾ ಭವನ್ತಿ, ತೇ ನಿರ್ಗುಣಂ ಪ್ರಾಪ್ಯ ಭವನ್ತಿ ದೋಷಾಃ.

ಅಸ್ವದ್ಯತೋಯಾಃ ಪ್ರವಹನ್ತಿ ನದ್ಯಾಃ, ಸಮುದ್ರಮಾಸಾದ್ಯ ಭವಂತ್ಯಪೇಯಾ ।

ನೀತಿವಂತ ವ್ಯಕ್ತಿಗಳೊಂದಿಗೆ ಸಹವಾಸ ಮಾಡುವ ಮೂಲಕ ಒಬ್ಬರ ಸದ್ಗುಣಗಳನ್ನು ಬೆಳೆಸಲಾಗುತ್ತದೆ ಎಂದು ಇದು ಸೂಚಿಸುತ್ತದೆ. ಸದ್ಗುಣಿಗಳ ಸಹವಾಸದಲ್ಲಿರಲು ನಮಗೆ ಅವಕಾಶ ಸಿಕ್ಕಾಗ, ನಮ್ಮದೇ ಗುಣಗಳು ಸುಧಾರಿಸಿ, ನಮ್ಮನ್ನು ನೈತಿಕ ಶ್ರೇಷ್ಠತೆಯತ್ತ ಏರಿಸುತ್ತವೆ. ವ್ಯತಿರಿಕ್ತವಾಗಿ, ನಾವು ನೈತಿಕ ಕೊರತೆಯ ನಡುವೆ ನಮ್ಮನ್ನು ನಾವು ಕಂಡುಕೊಂಡರೆ, ನಮ್ಮ ಸದ್ಗುಣಗಳು ಕಡಿಮೆಯಾಗಿ, ದುರ್ಗುಣಗಳು ಅಭಿವೃದ್ಧಿಗೊಳ್ಳುತ್ತವೆ. ಹೆಚ್ಚುವರಿಯಾಗಿ, ಹರಿಯುವ ನದಿ ನೀರಿನಂತೆ, ನಮ್ಮ ಸದ್ಗುಣಗಳು ಶುದ್ಧವಾಗಿರುತ್ತವೆ ಮತ್ತು ಚಲನೆಯಲ್ಲಿರುವಾಗ ಮಾತ್ರ ಪ್ರಯೋಜನಕಾರಿಯಾಗಿರುತ್ತವೆ ಎಂದು ಒತ್ತಿಹೇಳಲಾಗಿದೆ.

ಅಂತೆಯೇ, ಈ ಗೌರವಾನ್ವಿತ ಸದನದಲ್ಲಿ ಪ್ರತಿ 2 ವರ್ಷಗಳಿಗೊಮ್ಮೆ ಹೊಸ ಅಲೆಯ ಸದಸ್ಯರು ಆಗಮಿಸುತ್ತಾರೆ. ಅವರೊಂದಿಗೆ ಹೊಸ ದೃಷ್ಟಿಕೋನಗಳು ಮತ್ತು ಶಕ್ತಿಗಳನ್ನು ತರುತ್ತಾರೆ.  ಆದರೆ, ನದಿ ನೀರು ಎಷ್ಟೇ ಸಿಹಿಯಾಗಿದ್ದರೂ ಒಮ್ಮೆ ಸಮುದ್ರದಲ್ಲಿ ವಿಲೀನಗೊಂಡರೆ ನಿರುಪಯುಕ್ತವಾಗುತ್ತದೆ. ಆದ್ದರಿಂದ ಅದರ ಶುದ್ಧತೆಯ ಹೊರತಾಗಿಯೂ, ನೀರು ಸಮುದ್ರವನ್ನು ತಲುಪಿದ ನಂತರ ಕಲುಷಿತವಾಗುತ್ತದೆ. ಅದನ್ನು ಬಳಕೆಗೆ ಅನರ್ಹಗೊಳಿಸುತ್ತದೆ. ಈ ಸಾದೃಶ್ಯವು ಬದಲಾವಣೆಯ ನಡುವೆ ಸಮಗ್ರತೆ ಕಾಪಾಡಿಕೊಳ್ಳುವ ಪ್ರಾಮುಖ್ಯತೆಯ ಕಟುವಾದ ಜ್ಞಾಪನೆಯಾಗಿ ಕಾರ್ಯ ನಿರ್ವಹಿಸುತ್ತದೆ.

ಈ ನೀತಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ಸಾಮಾಜಿಕ ನಿಶ್ಚಿತಾರ್ಥದ ವಿಶಾಲ ಕ್ಷೇತ್ರಗಳಿಗೆ ಪರಿವರ್ತನೆಗೊಳ್ಳುವವರು ಈ ಕ್ರಿಯಾತ್ಮಕ ಸಂಸ್ಥೆಯಿಂದ ಪಡೆದ ಜ್ಞಾನ ಮತ್ತು ಅನುಭವದೊಂದಿಗೆ ನಿರ್ಗಮಿಸುತ್ತಾರೆ. ಅವರ ಬುದ್ಧಿವಂತಿಕೆ ಮತ್ತು ಸಮರ್ಪಣೆ ನಿಸ್ಸಂದೇಹವಾಗಿ ರಾಷ್ಟ್ರ ಸೇವೆಯನ್ನು ಮುಂದುವರೆಸುತ್ತದೆ, ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ನನ್ನ ಎಲ್ಲಾ ಸಹೋದ್ಯೋಗಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ.

ತುಂಬು ಧನ್ಯವಾದಗಳು.
 
ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಮೂಲತಃ ಅವರು ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

****



(Release ID: 2008300) Visitor Counter : 40