ಪ್ರಧಾನ ಮಂತ್ರಿಯವರ ಕಛೇರಿ

ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಭೇಟಿ ಮಾಡಿ ಮಾತುಕತೆ ನಡೆಸಿದ ಪ್ರಧಾನಿ ಮೋದಿ 

Posted On: 14 FEB 2024 3:49PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಫೆಬ್ರವರಿ 14ರಂದು ಯುಎಇ ಉಪಾಧ್ಯಕ್ಷರು, ಪ್ರಧಾನ ಮಂತ್ರಿಗಳು, ರಕ್ಷಣಾ ಸಚಿವರು ಹಾಗೂ ದುಬೈಯ ಪ್ರಮುಖ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. 

ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ಬಾಹ್ಯಾಕಾಶ, ಶಿಕ್ಷಣ ಮತ್ತು ಎರಡೂ ದೇಶಗಳ ಜನರ ನಡುವಿನ ಸಂಬಂಧ ಸೇರಿದಂತೆ ದ್ವಿಪಕ್ಷೀಯ ಸಹಕಾರದ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ಉಭಯ ನಾಯಕರು ಚರ್ಚೆ ನಡೆಸಿದರು. ಭಾರತ ಮತ್ತು ಯುಎಇ ನಡುವೆ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವು ನಿರ್ವಹಿಸಿದ ಪ್ರಮುಖ ಪಾತ್ರದ ಬಗ್ಗೆ ಚರ್ಚೆ ನಡೆಸಿದರು. ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು.

ದುಬೈನಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಬಗ್ಗೆ ಕೃಪೆ ತೋರಿದ್ದಕ್ಕಾಗಿ ಪ್ರಧಾನಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರಿಗೆ ಪ್ರಧಾನಮಂತ್ರಿ ಮೋದಿಯವರು ಧನ್ಯವಾದ ಅರ್ಪಿಸಿದರು. ವ್ಯಾಪಾರ, ಸೇವೆಗಳು ಮತ್ತು ಪ್ರವಾಸೋದ್ಯಮದ ಜಾಗತಿಕ ಕೇಂದ್ರವಾಗಿ ದುಬೈಯ ಪ್ರಗತಿಯಲ್ಲಿ ಅನಿವಾಸಿ ಭಾರತೀಯರ ಕೊಡುಗೆಯನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು.

ಭಾರತೀಯ ಮೂಲದ  ಕಾರ್ಮಿಕರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೌಲಭ್ಯಗಳನ್ನು ನೀಡುತ್ತಿರುವ ದುಬೈಯಲ್ಲಿ ಭಾರತೀಯ ಸಮುದಾಯ ಆಸ್ಪತ್ರೆಗಾಗಿ ಭೂಮಿ ಮಂಜೂರು ಮಾಡಿದ್ದಕ್ಕಾಗಿ ಪ್ರಧಾನಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅವರಿಗೆ ಪ್ರಧಾನ ಮಂತ್ರಿ ಮೋದಿಯವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಆದಷ್ಟು ಶೀಘ್ರ ತಮ್ಮ ಅನುಕೂಲದ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಸಹ ಪ್ರಧಾನಮಂತ್ರಿ ಮೋದಿಯವರು ಈ ಸಂದರ್ಭದಲ್ಲಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರಿಗೆ ಆಹ್ವಾನ ನೀಡಿದರು.

****



(Release ID: 2005936) Visitor Counter : 48