ಪ್ರಧಾನ ಮಂತ್ರಿಯವರ ಕಛೇರಿ

​​​​​​​ಯುಎಇ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿ ಮಾತುಕತೆ

Posted On: 13 FEB 2024 5:33PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಗೆ ಅಧಿಕೃತ ಭೇಟಿಗಾಗಿ ಇಂದು ಅಬುಧಾಬಿಗೆ ಆಗಮಿಸಿದರು. ಯುಎಇ ಅಧ್ಯಕ್ಷರಾದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು ಮತ್ತು ನಂತರ ಆತ್ಮೀಯವಾಗಿ ಸ್ವಾಗತ ಕೋರಿದರು.

ಉಭಯ ನಾಯಕರು ನಿಯೋಗ ಮಟ್ಟದ ಮಾತುಕತೆ ನಡೆಸಿದರು. ಅವರು ದ್ವಿಪಕ್ಷೀಯ ಪಾಲುದಾರಿಕೆ ಬಗ್ಗೆ ಮತ್ತು ಸಹಕಾರದ ಹೊಸ ಕ್ಷೇತ್ರಗಳ ಕುರಿತು ಚರ್ಚಿಸಿದರು. ವ್ಯಾಪಾರ ಮತ್ತು ಹೂಡಿಕೆ, ಡಿಜಿಟಲ್ ಮೂಲಸೌಕರ್ಯ, ಫಿನ್‌ಟೆಕ್, ಇಂಧನ, ಮೂಲಸೌಕರ್ಯ, ಸಂಸ್ಕೃತಿ ಮತ್ತು ಜನರೊಂದಿಗಿನ ಜನರ ಸಂಬಂಧಗಳು ಸೇರಿದಂತೆ ಕ್ಷೇತ್ರಗಳಾದ್ಯಂತ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಬಗ್ಗೆ ಸಮಾಲೋಚಿಸಿದರು.  ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಉಭಯ ನಾಯಕರು ಚರ್ಚಿಸಿದರು.

ಉಭಯ ನಾಯಕರು ಈ ಕೆಳಗಿನ ವಿನಿಮಯಕ್ಕೆ ಸಾಕ್ಷಿಯಾದರು:

ದ್ವಿಪಕ್ಷೀಯ ಹೂಡಿಕೆ ಒಪ್ಪಂದ: ಈ ಒಪ್ಪಂದವು ಎರಡೂ ದೇಶಗಳಲ್ಲಿ ಹೂಡಿಕೆಗಳನ್ನು ಮತ್ತಷ್ಟು ಉತ್ತೇಜಿಸಲು ಸಹಕಾರಿಯಾಗಲಿದೆ. ಭಾರತವು ಯುಎಇಯೊಂದಿಗೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಮತ್ತು ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದೆ.

ವಿದ್ಯುತ್ ಅಂತರ್‌ ಸಂಪರ್ಕ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಸಹಕಾರದ ಕುರಿತು ತಿಳಿವಳಿಕಾ ಒಪ್ಪಂದ: ಇಂಧನ ಭದ್ರತೆ ಮತ್ತು ಇಂಧನ ವ್ಯಾಪಾರ ಸೇರಿದಂತೆ ಇಂಧನ ಕ್ಷೇತ್ರದಲ್ಲಿ ಸಹಯೋಗದ ಹೊಸ ಅವಕಾಶಗಳನ್ನು ತೆರೆಯಲಿದೆ.

ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್‌ನಲ್ಲಿ ಭಾರತ ಮತ್ತು ಯುಎಇ ನಡುವಿನ ಅಂತರಸರ್ಕಾರಿ ಚೌಕಟ್ಟಿನ ಒಪ್ಪಂದ: ಇದು ಈ ವಿಷಯದ ಕುರಿತು ಹಿಂದಿನ ತಿಳಿವಳಿಕೆಗಳು ಮತ್ತು ಸಹಕಾರಕ್ಕೆ ಆದ್ಯತೆ ನೀಡುತ್ತದೆ. ಮತ್ತು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲು ಭಾರತ ಮತ್ತು ಯುಎಇ ಸಹಕಾರವನ್ನು ಉತ್ತೇಜಿಸುತ್ತದೆ.

ಡಿಜಿಟಲ್ ಮೂಲಸೌಕರ್ಯ ಯೋಜನೆಗಳಲ್ಲಿ ಸಹಕಾರದ ಕುರಿತು ತಿಳಿವಳಿಕಾ ಒಪ್ಪಂದ: ಇದು ಡಿಜಿಟಲ್ ಮೂಲಸೌಕರ್ಯ ವಲಯದಲ್ಲಿ ಹೂಡಿಕೆ ಸಹಕಾರ ಸೇರಿದಂತೆ ವ್ಯಾಪಕವಾದ ಸಹಕಾರಕ್ಕಾಗಿ ಒತ್ತು ನೀಡುತ್ತದೆ. ಮತ್ತು ತಾಂತ್ರಿಕ ಜ್ಞಾನ, ಕೌಶಲ್ಯ ಮತ್ತು ಪರಿಣತಿಯನ್ನು ಹಂಚಿಕೊಳ್ಳಲು ಅನುಕೂಲವಾಗುತ್ತದೆ.

ಎರಡು ದೇಶಗಳ ರಾಷ್ಟ್ರೀಯ ದಾಖಲೆಗಳ ನಡುವಿನ ಸಹಕಾರ ಪ್ರೋಟೋಕಾಲ್: ಈ ಪ್ರೋಟೋಕಾಲ್ ಆರ್ಕೈವಲ್ ವಸ್ತುಗಳ ಮರುಸ್ಥಾಪನೆ ಮತ್ತು ಸಂರಕ್ಷಣೆ ಸೇರಿದಂತೆ ಈ ಕ್ಷೇತ್ರದಲ್ಲಿ ವ್ಯಾಪಕವಾದ ದ್ವಿಪಕ್ಷೀಯ ಸಹಕಾರವನ್ನು ರೂಪಿಸುತ್ತದೆ.

ಪರಂಪರೆ ಮತ್ತು ವಸ್ತುಸಂಗ್ರಹಾಲಯಗಳ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳಿವಳಿಕಾ ಒಪ್ಪಂದ: ಇದು ಗುಜರಾತ್‌ನ ಲೋಥಾಲ್‌ನಲ್ಲಿರುವ ಮಾರಿಟೈಮ್ ಹೆರಿಟೇಜ್ ಕಾಂಪ್ಲೆಕ್ಸ್ ಅನ್ನು ಬೆಂಬಲಿಸುವ ಗುರಿಯನ್ನು ಉತ್ತೇಜಿಸುತ್ತದೆ.

ತ್ವರಿತ ಪಾವತಿ ಪ್ಲಾಟ್‌ಫಾರ್ಮ್‌ಗಳ ಪರಸ್ಪರ ಲಿಂಕ್ ಮಾಡುವ ಒಪ್ಪಂದ - UPI (ಭಾರತ) ಮತ್ತು AANI (UAE): ಇದು ಎರಡು ದೇಶಗಳ ನಡುವಿನ ಗಡಿಯಾಚೆಗಿನ ವಹಿವಾಟುಗಳನ್ನು ಸುಗಮಗೊಳಿಸುತ್ತದೆ. ಕಳೆದ ವರ್ಷ ಜುಲೈನಲ್ಲಿ ಗೌರವಾನ್ವಿತ ಪ್ರಧಾನಮಂತ್ರಿಯವರ ಅಬುಧಾಬಿ ಭೇಟಿಯ ಸಂದರ್ಭದಲ್ಲಿ ಸಹಿ ಮಾಡಿದ ಇಂಟರ್ಲಿಂಕಿಂಗ್ ಪಾವತಿ ಮತ್ತು ಸಂದೇಶ ವ್ಯವಸ್ಥೆಗಳ ಕುರಿತಾದ ತಿಳಿವಳಿಕಾ ಒಪ್ಪಂದಕ್ಕೆ ಪೂರಕವಾಗಿದೆ.

ಜಯವಾನ್ (ಯುಎಇ) ಜೊತೆಗೆ ರುಪೇ (ಭಾರತ) ಅಂತರ-ಸಂಪರ್ಕ ದೇಶೀಯ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳ ಕುರಿತಾದ ಒಪ್ಪಂದ: ಆರ್ಥಿಕ ವಲಯದ ಸಹಕಾರವನ್ನು ನಿರ್ಮಿಸುವಲ್ಲಿ ಪ್ರಮುಖ ಹೆಜ್ಜೆ, ಇದು ಯುಎಇಯಾದ್ಯಂತ ರುಪೇಯ ಬಳಕೆಗೆ ಅವಕಾಶ ಕಲ್ಪಿಸುತ್ತದೆ.

ಡಿಜಿಟಲ್ ರುಪೇ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಸ್ಟಾಕ್ ಆಧರಿಸಿದ ಯುಎಇಯ ದೇಶೀಯ ಕಾರ್ಡ್ ಜಯವಾನ್ ಅನ್ನು ಬಿಡುಗಡೆ ಮಾಡಿದಕ್ಕಾಗಿ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಪ್ರಧಾನಿ ಅಭಿನಂದಿಸಿದರು. ಜಯವಾನ್ ಕಾರ್ಡ್ ಬಳಸಿ ನಡೆಸಿದ ವ್ಯವಹಾರವನ್ನು ವೀಕ್ಷಿಸಿದರು.

ಇಂಧನ ಪಾಲುದಾರಿಕೆಯನ್ನು ಬಲಪಡಿಸುವ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದರು. ಯುಎಇ ಕಚ್ಚಾ ಮತ್ತು ಎಲ್‌ಪಿಜಿಯ ಅತಿದೊಡ್ಡ ಮೂಲಗಳಲ್ಲಿ ಒಂದಾಗಿದೆ. ಭಾರತವು ಈಗ ಎಲ್‌ಎನ್‌ಜಿಗಾಗಿ ದೀರ್ಘಾವಧಿಯ ಒಪ್ಪಂದಗಳಿಗೆ ಮುಂದಾಗಲಿದೆ.

RITES ಲಿಮಿಟೆಡ್ ಅಬುಧಾಬಿ ಪೋರ್ಟ್ಸ್ ಕಂಪನಿ ಮತ್ತು ಗುಜರಾತ್ ಮ್ಯಾರಿಟೈಮ್ ಬೋರ್ಡ್ ಅಬುಧಾಬಿ ಪೋರ್ಟ್ಸ್ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ಇವು ಬಂದರು ಮೂಲಸೌಕರ್ಯವನ್ನು ನಿರ್ಮಿಸಲು ಮತ್ತು ಉಭಯ ದೇಶಗಳ ನಡುವಿನ ಸಂಪರ್ಕವನ್ನು ಇನ್ನಷ್ಟು ಹೆಚ್ಚಿಸಲು ನೆರವಾಗಲಿದೆ.

ಅಬುಧಾಬಿಯಲ್ಲಿ BAPS ದೇವಾಲಯದ ನಿರ್ಮಾಣಕ್ಕೆ ಭೂಮಿಯನ್ನು ಮಂಜೂರು ಮಾಡಲು ಬೆಂಬಲಕ್ಕಾಗಿ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಪ್ರಧಾನಮಂತ್ರಿ ಧನ್ಯವಾದ ಅರ್ಪಿಸಿದರು. BAPS ದೇವಾಲಯವು ಯುಎಇ-ಭಾರತ ನಡುವಿನ ಆಳವಾದ ಬೇರೂರಿರುವ ಸಾಂಸ್ಕೃತಿಕ ಬಂಧಗಳು ಮತ್ತು ಸಾಮರಸ್ಯ, ಸಹಿಷ್ಣುತೆ ಮತ್ತು ಶಾಂತಿಯುತ ಸಹಬಾಳ್ವೆಗೆ ಯುಎಇಯ ಜಾಗತಿಕ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

****



(Release ID: 2005792) Visitor Counter : 40