ಪ್ರಧಾನ ಮಂತ್ರಿಯವರ ಕಛೇರಿ
'ವಿಕಸಿತ ಭಾರತ, ವಿಕಸಿತ ಗುಜರಾತ್' ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿಗಳ ಭಾಷಣ
ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಇತರ ವಸತಿ ಯೋಜನೆಗಳ ಅಡಿಯಲ್ಲಿ ಗುಜರಾತ್‌ನಾದ್ಯಂತ ನಿರ್ಮಿಸಲಾದ 1.3 ಲಕ್ಷಕ್ಕೂ ಹೆಚ್ಚು ಮನೆಗಳ ಉದ್ಘಾಟನೆ ಮತ್ತು ಭೂಮಿ ಪೂಜೆ
"ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಿಮ್ಮ ಆಶೀರ್ವಾದಗಳು ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತವೆ"
"ಇಂದಿನ ಸಮಯವು ಇತಿಹಾಸವನ್ನು ರಚಿಸುವ ಸಮಯ"
"ಪ್ರತಿಯೊಬ್ಬರೂ ಸ್ವಂತ ಶಾಶ್ವತ ಸೂರು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ"
"ಮುಂದಿನ 25 ವರ್ಷಗಳಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕೆಂದು ಪ್ರತಿಯೊಬ್ಬ ನಾಗರಿಕರು ಬಯಸುತ್ತಾರೆ. ಇದಕ್ಕಾಗಿ ಪ್ರತಿಯೊಬ್ಬರೂ ಸಾಧ್ಯವಿರುವ ಎಲ್ಲ ಕೊಡುಗೆಗಳನ್ನು ನೀಡುತ್ತಿದ್ದಾರೆ"
"ನಮ್ಮ ವಸತಿ ಯೋಜನೆಗಳಲ್ಲಿ ಮನೆಗಳನ್ನು ವೇಗವಾಗಿ ನಿರ್ಮಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ"
"ವಿಕಸಿತ ಭಾರತದ ನಾಲ್ಕು ಸ್ತಂಭಗಳಾದ ಯುವಕರು, ಮಹಿಳೆಯರು, ರೈತರು ಮತ್ತು ಬಡವರ ಸಬಲೀಕರಣಕ್ಕೆ ನಾವು ಬದ್ಧರಾಗಿದ್ದೇವೆ"
"ಯಾವುದೇ ಗ್ಯಾರಂಟಿ ಇಲ್ಲದವರಿಗೆ ಮೋದಿ ಗ್ಯಾರಂಟಿಯಾಗಿ ನಿಂತಿದ್ದಾರೆ"
"ಪ್ರತಿಯೊಂದು ಬಡವರ ಕಲ್ಯಾಣ ಯೋಜನೆಯ ಅತಿದೊಡ್ಡ ಫಲಾನುಭವಿಗಳು ದಲಿತರು, ಒಬಿಸಿ ಮತ್ತು ಬುಡಕಟ್ಟು ಕುಟುಂಬಗಳು"
Posted On:
10 FEB 2024 2:45PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 'ವಿಕಸಿತ ಭಾರತ, ವಿಕಸಿತ ಗುಜರಾತ್' ಕಾರ್ಯಕ್ರಮವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ʻಪ್ರಧಾನ ಮಂತ್ರಿ ಆವಾಸ್ ಯೋಜನೆʼ(ಪಿಎಂಎವೈ) ಮತ್ತು ಇತರ ವಸತಿ ಯೋಜನೆಗಳ ಅಡಿಯಲ್ಲಿ ಗುಜರಾತ್‌ನಾದ್ಯಂತ ನಿರ್ಮಿಸಲಾದ 1.3 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಉದ್ಘಾಟಿಸಿದರು ಮತ್ತು ಭೂಮಿ ಪೂಜೆ ನೆರವೇರಿಸಿದರು. ʻಆವಾಸ್ ಯೋಜನೆʼಯ ಫಲಾನುಭವಿಗಳೊಂದಿಗೆ ಅವರು ಸಂವಾದ ನಡೆಸಿದರು.
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಗುಜರಾತ್‌ನ ಅಭಿವೃದ್ಧಿಯ ಪಯಣದಲ್ಲಿ ಗುಜರಾತ್ನ ಪ್ರತಿಯೊಂದು ಭಾಗದ ಜನರು ಸಂಪರ್ಕ ಹೊಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. 20 ವರ್ಷಗಳನ್ನು ಪೂರೈಸಿದ ʻರೋಮಾಂಚಕ ಗುಜರಾತ್ʼ ಕಾರ್ಯಕ್ರಮದಲ್ಲಿ ತಾವು ಇತ್ತೀಚೆಗೆ ಭಾಗವಹಿಸಿದ್ದನ್ನು ಅವರು ಸ್ಮರಿಸಿದರು. ʻರೋಮಾಂಚಕ ಗುಜರಾತ್ʼ ಎಂಬ ಬೃಹತ್ ಹೂಡಿಕೆ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಅವರು ಗುಜರಾತ್ ರಾಜ್ಯವನ್ನು ಶ್ಲಾಘಿಸಿದರು.
ಬಡವರಿಗೆ ಸ್ವಂತ ಮನೆಯು ಅವರ ಉಜ್ವಲ ಭವಿಷ್ಯದ ಖಾತರಿಯಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಸಮಯ ಕಳೆದಂತೆ ಮತ್ತು ಕುಟುಂಬಗಳು ಬೆಳೆಯಲು ಪ್ರಾರಂಭಿಸುತ್ತಿದ್ದಂತೆ, ಪ್ರತಿಯೊಬ್ಬ ಬಡವರಿಗೂ ಹೊಸ ಮನೆಗಳನ್ನು ನಿರ್ಮಿಸುವ ಸರ್ಕಾರದ ಪ್ರಯತ್ನಗಳನ್ನು ಪ್ರಧಾನಿ ಒತ್ತಿ ಹೇಳಿದರು. ಇಂದು ಭೂಮಿ ಪೂಜೆ ನೆರವೇರಿದ ಸುಮಾರು 1.25 ಲಕ್ಷ ಜನರನ್ನು ಉಲ್ಲೇಖಿಸಿದರು. ಇಂದು ತಮ್ಮ ಹೊಸ ಮನೆಯನ್ನು ಸ್ವೀಕರಿಸಿದ ಎಲ್ಲಾ ಕುಟುಂಬಗಳನ್ನು ಅವರು ಅಭಿನಂದಿಸಿದರು ಮತ್ತು ಅವರಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದರು. "ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಲಸಗಳು ಪೂರ್ಣಗೊಂಡಾಗ, ರಾಷ್ಟ್ರವು ಅದನ್ನು 'ಮೋದಿ ಅವರ ಗ್ಯಾರಂಟಿ' ಎಂದು ಕರೆಯುತ್ತದೆ, ಅಂದರೆ ಖಾತರಿಯ ನೆರವೇರಿಕೆಯ ಗ್ಯಾರಂಟಿ," ಎಂದು ಶ್ರೀ ಮೋದಿ ಹೇಳಿದರು.
ರಾಜ್ಯದ 180ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಷ್ಟೊಂದು ಜನರ ಭಾಗವಹಿಸುವೆಕೆಗೆ ಸಾಕ್ಷಿಯಾದ ಇಂದಿನ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಪ್ರಧಾನಿ ಶ್ಲಾಘಿಸಿದರು. "ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಿಮ್ಮ ಆಶೀರ್ವಾದವು ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ,ʼʼ ಎಂದರು. ಈ ಪ್ರದೇಶದ ನೀರಿನ ಕೊರತೆಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು ʻಪ್ರತಿ ಹನಿಗೆ ಹೆಚ್ಚು ಬೆಳೆʼ ಹಾಗೂ ಹನಿ ನೀರಾವರಿಯಂತಹ ಉಪಕ್ರಮಗಳು ಬನಸ್ಕಾಂತ, ಮೆಹ್ಸಾನಾ, ಅಂಬಾಜಿ ಮತ್ತು ಪಟಾನ್‌ನಲ್ಲಿ ಕೃಷಿಗೆ ನೆರವಾಗಿವೆ ಎಂದರು. ಅಂಬಾಜಿಯಲ್ಲಿನ ಅಭಿವೃದ್ಧಿ ಪ್ರಯತ್ನಗಳು ಯಾತ್ರಾರ್ಥಿಗಳ ಸಂಖ್ಯೆಗೆ ಭಾರಿ ಉತ್ತೇಜನ ನೀಡಲಿವೆ ಎಂದರು. ಬ್ರಿಟಿಷರ ಕಾಲದಿಂದಲೂ ಬಾಕಿ ಉಳಿದಿದ್ದ ʻಅಹಮದಾಬಾದ್‌ನಿಂದ ಅಬು ರೋಡ್ʼವರೆಗಿನ ಬ್ರಾಡ್‌ಗೇಜ್ ಮಾರ್ಗವು ಹೆಚ್ಚಿನ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.
ತಮ್ಮ ಗ್ರಾಮ ವಡ್ನಗರದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಇತ್ತೀಚೆಗೆ ಪತ್ತೆಯಾದ 3,000 ವರ್ಷಗಳಷ್ಟು ಹಳೆಯದಾದ ಪ್ರಾಚೀನ ಕಲಾಕೃತಿಗಳು ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿವೆ ಎಂದರು. ಹಟ್ಕೇಶ್ವರ, ಅಂಬಾಜಿ, ಪಟಾನ್ ಮತ್ತು ತರಂಗಜಿಯಂತಹ ಸ್ಥಳಗಳನ್ನು ಉಲ್ಲೇಖಿಸಿದ ಅವರು, ಉತ್ತರ ಗುಜರಾತ್ ಕ್ರಮೇಣ ʻಏಕತಾ ಪ್ರತಿಮೆʼಯಂತೆಯೇ ಪ್ರವಾಸಿ ಕೇಂದ್ರವಾಗುತ್ತಿದೆ ಎಂದರು.
ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಮೋದಿ ಅವರ ʻಗ್ಯಾರಂಟಿ ವಾಹನʼವು ದೇಶದ ಲಕ್ಷಾಂತರ ಗ್ರಾಮಗಳನ್ನು ತಲುಪಿದ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಯಶಸ್ವೀ ಸಂಘಟನೆಯ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು. ಗುಜರಾತ್‌ನ ಕೋಟ್ಯಂತರ ಜನರು ಈ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ ಎಂದರು. ದೇಶದಲ್ಲಿ 25 ಕೋಟಿ ಜನರು ಬಡತನದಿಂದ ಹೊರಬರಲು ಸಹಾಯ ಮಾಡಿದ ಸರ್ಕಾರದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ಇದೇ ವೇಳೆ, ಈ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಿರುವುದಕ್ಕಾಗಿ, ಹಣವನ್ನು ಬುದ್ಧಿವಂತಿಕೆಯಿಂದ ಬಳಸಿದ್ದಕ್ಕಾಗಿ ಮತ್ತು ಬಡತನವನ್ನು ಸೋಲಿಸುವ ಯೋಜನೆಗಳಿಗೆ ಅನುಸಾರವಾಗಿ ತಮ್ಮ ಜೀವನವನ್ನು ರೂಪಿಸಿಕೊಂಡದ್ದಕ್ಕಾಗಿ ಬಡತನದಿಂದ ಹೊರಬಂದ ಜನರನ್ನು ಶ್ರೀ ಮೋದಿ ಅವರು ಶ್ಲಾಘಿಸಿದರು. ಫಲಾನುಭವಿಗಳು ಮುಂದೆ ಬಂದು ಈ ಉಪಕ್ರಮವನ್ನು ಬೆಂಬಲಿಸುವಂತೆ ಮತ್ತು ಬಡತನವನ್ನು ಬೇರುಸಹಿತ ಕಿತ್ತೊಗೆಯಲು ಕೊಡುಗೆ ನೀಡುವಂತೆ ಒತ್ತಾಯಿಸಿದ ಪ್ರಧಾನಮಂತ್ರಿಯವರು, ಈ ಸಂಬಂಧ ಜನರ ಬೆಂಬಲದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ, ಇಂದು ವಸತಿ ಯೋಜನೆಯ ಫಲಾನುಭವಿಗಳೊಂದಿಗಿನ ನಡೆಸಿದ ಸಂವಾದದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಹೊಸ ಮನೆಗಳಿಂದಾಗಿ ಫಲಾನುಭವಿಗಳ ಆತ್ಮವಿಶ್ವಾಸಕ್ಕೆ ದೊರೆತ ಉತ್ತೇಜನವನ್ನು ಶ್ಲಾಘಿಸಿದರು.
"ಇಂದಿನ ಸಮಯವು ಇತಿಹಾಸವನ್ನು ರಚಿಸುವ ಸಮಯವಾಗಿದೆ," ಎಂದು ಪ್ರಧಾನಿ ಹೇಳಿದರು. ಈ ಅವಧಿಯನ್ನು ʻಸ್ವದೇಶಿ ಚಳವಳಿʼ, ʻಕ್ವಿಟ್ ಇಂಡಿಯಾ ಚಳವಳಿʼ ಮತ್ತು ʻದಂಡಿ ಯಾತ್ರೆʼಯ ಕಾಲಾವಧಿಗೆ ಹೋಲಿಸಿದ ಅವರು, ಅಂದು ಸ್ವಾತಂತ್ರ್ಯವು ಪ್ರತಿಯೊಬ್ಬ ನಾಗರಿಕನ ಗುರಿಯಾಗಿತ್ತು. ಅದೇ ರೀತಿ ಇಂದು ʻವಿಕಸಿತ ಭಾರತʼ ನಿರ್ಮಾಣವು ದೇಶದ ಸಂಕಲ್ಪವಾಗಿದೆ ಎಂದು ಅವರು ಹೇಳಿದರು. 'ರಾಜ್ಯದ ಪ್ರಗತಿಯ ಮೂಲಕ ರಾಷ್ಟ್ರೀಯ ಅಭಿವೃದ್ಧಿ' ಎಂಬ ಗುಜರಾತ್‌ನ ಚಿಂತನೆಯನ್ನು ಅವರು ಒತ್ತಿ ಹೇಳಿದರು. ಇಂದಿನ ಕಾರ್ಯಕ್ರಮವು ʻವಿಕಸಿತ ಭಾರತʼಕ್ಕಾಗಿ ʻವಿಕಸಿತ ಗುಜರಾತ್ʼನ ಭಾಗವಾಗಿದೆ ಎಂದು ಅವರು ಹೇಳಿದರು.
ʻಪಿಎಂ ಆವಾಸ್ ಯೋಜನೆʼಯಲ್ಲಿ ಗುಜರಾತ್ ಸಾಧಿಸಿರುವ ಪ್ರಗತಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ರಾಜ್ಯದ ನಗರ ಪ್ರದೇಶಗಳಲ್ಲಿ 9 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು. ʻಪಿಎಂ ಆವಾಸ್-ಗ್ರಾಮೀಣʼ ಅಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ಗುಣಮಟ್ಟ ಮತ್ತು ತ್ವರಿತ ನಿರ್ಮಾಣವನ್ನು ಖಚಿತಪಡಿಸಿಕೊಳ್ಳಲು ಹೊಸ ತಂತ್ರಜ್ಞಾನವನ್ನು ನಿಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು. ʻಲೈಟ್ ಹೌಸ್ ಯೋಜನೆʼ ಅಡಿಯಲ್ಲಿ 1100 ಮನೆಗಳನ್ನು ನಿರ್ಮಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು.
2014ರ ಹಿಂದಿನ ಅವಧಿಗೆ ಹೋಲಿಸಿದರೆ, ಬಡವರಿಗೆ ಮನೆಗಳ ನಿರ್ಮಾಣವು ವೇಗವಾಗಿ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು. ಹಿಂದಿನ ಕಾಲದಲ್ಲಿ ಬಡವರ ಮನೆಗಳ ನಿರ್ಮಾಣಕ್ಕೆ ಅತ್ಯಲ್ಪ ಅನುದಾನ ಸಿಗುತ್ತಿತ್ತು ಮತ್ತು ಕಮಿಷನ್ ರೂಪದಲ್ಲಿ ಅದು ಸೋರಿಕೆಯಾಗಿದ್ದನ್ನು ಉಲ್ಲೇಖಿಸಿದ ಪ್ರಧಾನಿ, ಬಡವರ ಮನೆಗಳಿಗೆ ಈಗ ವರ್ಗಾಯಿಸಲಾದ ಹಣವು 2.25 ಲಕ್ಷಕ್ಕಿಂತಲೂ ಅಧಿಕವಾಗಿದೆ ಮತ್ತು ಮಧ್ಯವರ್ತಿಗಳನ್ನು ನಿರ್ಮೂಲನೆ ಮಾಡಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ ಎಂದರು. ಶೌಚಾಲಯಗಳು, ನಲ್ಲಿ ನೀರಿನ ಸಂಪರ್ಕಗಳು, ವಿದ್ಯುತ್ ಮತ್ತು ಅನಿಲ ಸಂಪರ್ಕಗಳನ್ನು ಪೂರೈಸುವುದರ ಜೊತೆಗೆ ಕುಟುಂಬಗಳ ಅಗತ್ಯಗಳಿಗೆ ಅನುಗುಣವಾಗಿ ಮನೆಗಳನ್ನು ನಿರ್ಮಿಸುವ ಸ್ವಾತಂತ್ರ್ಯದ ಬಗ್ಗೆಯೂ ಅವರು ಮಾತನಾಡಿದರು. "ಈ ಸೌಲಭ್ಯಗಳು ಬಡವರಿಗೆ ಹಣವನ್ನು ಉಳಿಸಲು ಸಹಾಯ ಮಾಡಿವೆ," ಎಂದು ಅವರು ಹೇಳಿದರು. ಮನೆಗಳನ್ನು ಈಗ ಮಹಿಳೆಯರ ಹೆಸರಿನಲ್ಲಿ ನೋಂದಾಯಿಸಲಾಗಿದೆ ಮತ್ತು ಅವರನ್ನು ಮನೆ ಮಾಲೀಕರನ್ನಾಗಿ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.
ಯುವಕರು, ರೈತರು, ಮಹಿಳಾ ಮತ್ತು ಬಡವರು ʻವಿಕಸಿತ ಭಾರತʼದ ನಾಲ್ಕು ಸ್ತಂಭಗಳು ಎಂದು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಈ ವರ್ಗಗಳ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದರು. 'ಬಡವರು' ಪ್ರತಿಯೊಂದು ಸಮುದಾಯವನ್ನು ಒಳಗೊಂಡಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಯೋಜನೆಗಳ ಪ್ರಯೋಜನವು ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ತಲುಪುತ್ತಿದೆ. "ಯಾವುದೇ ಗ್ಯಾರಂಟಿ ಇಲ್ಲದವರಿಗೆ ಮೋದಿ ಗ್ಯಾರಂಟಿಯಾಗಿ ನಿಂತಿದ್ದಾರೆ," ಎಂದು ಅವರು ಹೇಳಿದರು. ʻಮುದ್ರಾʼ ಯೋಜನೆಯನ್ನು ಪ್ರಸ್ತಾಪಿಸಿದ ಅವರು, ಅಲ್ಲಿ ಪ್ರತಿ ಸಮುದಾಯದ ಉದ್ಯಮಿಗಳು ಅಡಮಾನ ರಹಿತ ಸಾಲವನ್ನು ಪಡೆಯಬಹುದು. ಅಂತೆಯೇ, ವಿಶ್ವಕರ್ಮರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ಸಾಧನಗಳು ಮತ್ತು ಕೌಶಲ್ಯಗಳನ್ನು ಒದಗಿಸಲಾಯಿತು. "ಪ್ರತಿಯೊಂದು ಬಡವರ ಕಲ್ಯಾಣ ಯೋಜನೆಯ ಅತಿದೊಡ್ಡ ಫಲಾನುಭವಿಗಳು ದಲಿತ, ಒಬಿಸಿ ಮತ್ತು ಬುಡಕಟ್ಟು ಕುಟುಂಬಗಳು. ಮೋದಿಯವರ ಭರವಸೆಯಿಂದ ಯಾರಾದರೂ ಹೆಚ್ಚು ಪ್ರಯೋಜನ ಪಡೆದಿದ್ದರೆ, ಅದು ಈ ಕುಟುಂಬಗಳೇ," ಎಂದು ಅವರು ಹೇಳಿದರು.
"ಲಕ್ಷಾಧಿಪತಿ ದೀದಿʼಯರನ್ನು ಸೃಷ್ಟಿಸುವ ಭರವಸೆಯನ್ನು ಮೋದಿ ನೀಡಿದ್ದಾರೆ." ಎಂದು ಹೇಳಿದ ಪ್ರಧಾನಮಂತ್ರಿಯವರು, ಗುಜರಾತ್‌ನ ಹೆಚ್ಚಿನ ಸಂಖ್ಯೆಯ ಮಹಿಳೆಯರು ಸೇರಿದಂತೆ ದೇಶವು ಈಗಾಗಲೇ 1 ಕೋಟಿ ʻಲಕ್ಷಾಧಿಪತಿ ದೀದಿʼಗಳಿಗೆ ನೆಲೆಯಾಗಿದೆ ಎಂದು ಮಾಹಿತಿ ನೀಡಿದರು. ಮುಂದಿನ ಕೆಲವು ವರ್ಷಗಳಲ್ಲಿ 3 ಕೋಟಿ ʻಲಕ್ಷಾಧಿಪತಿ ದೀದಿʼಯರನ್ನು ಸೃಷ್ಟಿಸುವ ಸರ್ಕಾರದ ಪ್ರಯತ್ನವನ್ನು ಅವರು ಪುನರುಚ್ಚರಿಸಿದರು. ಇದು ಬಡ ಕುಟುಂಬಗಳನ್ನು ಸಾಕಷ್ಟು ಸಬಲೀಕರಣಗೊಳಿಸುತ್ತದೆ ಎಂದು ಹೇಳಿದರು. ಈ ವರ್ಷದ ಬಜೆಟ್‌ನಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರನ್ನು ʻಆಯುಷ್ಮಾನ್ ಯೋಜನೆʼ ಅಡಿಯಲ್ಲಿ ಸೇರಿಸಿರುವ ಬಗ್ಗೆ ಅವರು ಉಲ್ಲೇಖಿಸಿದರು.
ಬಡವರು ಮತ್ತು ಮಧ್ಯಮ ವರ್ಗದವರ ವೆಚ್ಚವನ್ನು ಕಡಿಮೆ ಮಾಡಲು ಸರ್ಕಾರ ಒತ್ತು ನೀಡಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಉಚಿತ ಪಡಿತರ, ಆಸ್ಪತ್ರೆಗಳಲ್ಲಿ ಅಗ್ಗದ ಚಿಕಿತ್ಸಾ ಸೌಲಭ್ಯಗಳು, ಕಡಿಮೆ ಬೆಲೆಯ ಔಷಧಗಳು, ಅಗ್ಗದ ಮೊಬೈಲ್ ಫೋನ್ ಬಿಲ್‌ಗಳು, ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್‌ಗಳು ಮತ್ತು ವಿದ್ಯುತ್ ಬಿಲ್ ಗಳನ್ನು ಕಡಿಮೆ ಮಾಡುವ ಎಲ್‌ಇಡಿ ಬಲ್ಬ್‌ಗಳ ಬಗ್ಗೆ ಅವರು ಪ್ರಸ್ತಾಪಿಸಿದರು. ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡಲು ಮತ್ತು ಉತ್ಪತ್ತಿಯಾಗುವ ಹೆಚ್ಚುವರಿ ವಿದ್ಯುತ್‌ನಿಂದ ಆದಾಯವನ್ನು ಸೃಷ್ಟಿಸಲು 1 ಕೋಟಿ ಮನೆಗಳಿಗೆ ʻಮೇಲ್ಛಾವಣಿ ಸೌರ ಯೋಜನೆʼಯ ಆರಂಭದ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಈ ಯೋಜನೆಯಡಿ ಸುಮಾರು 300 ಯೂನಿಟ್ ವಿದ್ಯುತ್ ಉಚಿತವಾಗಲಿದೆ ಮತ್ತು ಸರ್ಕಾರವು ಪ್ರತಿವರ್ಷ ಸಾವಿರಾರು ರೂಪಾಯಿ ಮೌಲ್ಯದ ವಿದ್ಯುತ್ ಖರೀದಿಸುತ್ತದೆ ಎಂದು ಅವರು ಮಾಹಿತಿ ನೀಡಿದರು. ಮೊಧೇರಾದಲ್ಲಿ ನಿರ್ಮಿಸಲಾದ ಸೌರ ಗ್ರಾಮದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಅಂತಹ ಕ್ರಾಂತಿಯನ್ನು ಈಗ ಇಡೀ ದೇಶದಲ್ಲಿ ನೋಡಬಹುದು ಎಂದು ಹೇಳಿದರು. ಬಂಜರು ಭೂಮಿಯಲ್ಲಿ ಸೌರ ಪಂಪ್‌ಗಳು ಮತ್ತು ಸಣ್ಣ ಸೌರ ಸ್ಥಾವರಗಳನ್ನು ಸ್ಥಾಪಿಸಲು ಸರ್ಕಾರವು ರೈತರಿಗೆ ಸಹಾಯ ಮಾಡುತ್ತಿದೆ ಎಂದು ಅವರು ಉಲ್ಲೇಖಿಸಿದರು. ಗುಜರಾತ್‌ನಲ್ಲಿ ಸೌರಶಕ್ತಿಯ ಮೂಲಕ ರೈತರಿಗೆ ಪ್ರತ್ಯೇಕ ಫೀಡರ್ ಒದಗಿಸುವ ಕೆಲಸವೂ ನಡೆಯುತ್ತಿದೆ ಎಂದು ಅವರು ಉಲ್ಲೇಖಿಸಿದರು, ಇದರಿಂದ ರೈತರಿಗೆ ಹಗಲಿನಲ್ಲಿಯೂ ನೀರಾವರಿಗಾಗಿ ವಿದ್ಯುತ್ ಪಡೆಯಲು ಅನುವಾಗಲಿದೆ ಎಂದರು.
ಗುಜರಾತ್ ಅನ್ನು ವಾಣಿಜ್ಯ ರಾಜ್ಯವೆಂದು ಗುರುತಿಸಲಾಗಿದ್ದು, ಅದರ ಅಭಿವೃದ್ಧಿಯ ಪ್ರಯಾಣವು ಕೈಗಾರಿಕಾ ಬೆಳವಣಿಗೆಗೆ ಹೊಸ ಉತ್ತಜನ ನೀಡುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಕೈಗಾರಿಕಾ ಶಕ್ತಿ ಕೇಂದ್ರವಾಗಿರುವ ಗುಜರಾತ್ ಯುವಕರಿಗೆ ಅಭೂತಪೂರ್ವ ಅವಕಾಶಗಳನ್ನು ಒದಗಿಸುತ್ತದೆ ಎಂದರು. ಗುಜರಾತ್‌ನ ಯುವಕರು ಇಂದು ರಾಜ್ಯವನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಹೇಳಿದ ಪ್ರಧಾನಿಯವರು, ಪ್ರತಿಯೊಬ್ಬರಿಗೂ ಪ್ರತಿ ಹಂತದಲ್ಲೂ ಡಬಲ್ ಎಂಜಿನ್ ಸರ್ಕಾರದ ಬೆಂಬಲದ ಭರವಸೆ ನೀಡುವ ಮೂಲಕ ತಮ್ಮ ಮಾತು ಮುಕ್ತಾಯಗೊಳಿಸಿದರು.
ಹಿನ್ನೆಲೆ
ಈ ಕಾರ್ಯಕ್ರಮವನ್ನು ಗುಜರಾತ್‌ನ ಎಲ್ಲಾ ಜಿಲ್ಲೆಗಳ 180ಕ್ಕೂ ಹೆಚ್ಚು ಸ್ಥಳಗಳಲ್ಲಿ ಆಯೋಜಿಸಲಾಗಿದ್ದು, ಮುಖ್ಯ ಕಾರ್ಯಕ್ರಮವು ಬನಸ್ಕಾಂತ ಜಿಲ್ಲೆಯಲ್ಲಿ ನಡೆಯಿತು. ರಾಜ್ಯವ್ಯಾಪಿ ಕಾರ್ಯಕ್ರಮದಲ್ಲಿ ವಸತಿ ಯೋಜನೆಗಳು ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಸಾವಿರಾರು ಫಲಾನುಭವಿಗಳು ಭಾಗವಹಿಸಿದ್ದರು. ಗುಜರಾತ್ ಮುಖ್ಯಮಂತ್ರಿ, ಗುಜರಾತ್ ಸರ್ಕಾರದ ಇತರ ಸಚಿವರು, ಸಂಸದರು, ಶಾಸಕರು ಮತ್ತು ಸ್ಥಳೀಯ ಮಟ್ಟದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
*****
(Release ID: 2005166)
Visitor Counter : 121
Read this release in:
Telugu
,
Marathi
,
Manipuri
,
Bengali
,
English
,
Urdu
,
Hindi
,
Assamese
,
Punjabi
,
Gujarati
,
Odia
,
Tamil
,
Malayalam