ಪ್ರಧಾನ ಮಂತ್ರಿಯವರ ಕಛೇರಿ
ಒಡಿಶಾದ ಸಂಬಲ್‌ಪುರದಲ್ಲಿ 68,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಯೋಜನೆಗಳಿಗೆ ಪ್ರಧಾನಿ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಶಂಕುಸ್ಥಾಪನೆ
ಸುಮಾರು 28,980 ಕೋಟಿ ರೂ. ಮೌಲ್ಯದ ಬಹು ವಿದ್ಯುತ್ ಯೋಜನೆಗಳ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ
ಸುಮಾರು 2,110 ಕೋಟಿ ರೂ. ಒಟ್ಟು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ರಾಷ್ಟ್ರೀಯ ಹೆದ್ದಾರಿಗಳ 3 ರಸ್ತೆ ವಲಯ ಯೋಜನೆಗಳ ಉದ್ಘಾಟನೆ
ಸುಮಾರು 2,146 ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಯೋಜನೆಗಳ ಶಂಕುಸ್ಥಾಪನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ
ಸಂಬಲ್‌ಪುರ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ
ಪುರಿ-ಸೋನೆಪುರ್-ಪುರಿ ವೀಕ್ಲಿ ಎಕ್ಸ್‌ಪ್ರೆಸ್ ರೈಲಿಗೆ ಹಸಿರುನಿಶಾನೆ
ಸಂಬಲ್‌ಪುರದ ಐಐಎಂ ಕಾಯಂ ಕ್ಯಾಂಪಸ್ ಉದ್ಘಾಟನೆ
"ದೇಶವು ಇಂದು ತನ್ನ ಮಹಾನ್ ಪುತ್ರರಲ್ಲಿ ಒಬ್ಬರಾದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ನೀಡಲು ನಿರ್ಧರಿಸಿದೆ"
ಒಡಿಶಾವನ್ನು ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯ ಕೇಂದ್ರವನ್ನಾಗಿ ಮಾಡಲು ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡಿದೆ
"ಎಲ್ಲಾ ರಾಜ್ಯಗಳು ಅಭಿವೃದ್ಧಿಗೊಂಡರೆ ಮಾತ್ರ ವಿಕ್ಷಿತ್ ಭಾರತ್ ಗುರಿ ಸಾಧಿಸಲು ಸಾಧ್ಯ"
"ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಮಾಡಿದ ನೀತಿಗಳಿಂದ ಒಡಿಶಾ ಹೆಚ್ಚು ಪ್ರಯೋಜನ ಪಡೆದಿದೆ"
Posted On:
03 FEB 2024 3:34PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾದ ಸಂಬಲ್‌ಪುರದಲ್ಲಿಂದು 68,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ವಿವಿಧ ಯೋಜನೆಗಳಿಗೆ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ರಸ್ತೆ, ರೈಲ್ವೆ ಮತ್ತು ಉನ್ನತ ಶಿಕ್ಷಣ ಕ್ಷೇತ್ರ ಸೇರಿದಂತೆ ಪ್ರಮುಖ ಯೋಜನೆಗಳ ಜತೆಗೆ, ನೈಸರ್ಗಿಕ ಅನಿಲ, ಕಲ್ಲಿದ್ದಲು ಮತ್ತು ವಿದ್ಯುತ್ ಉತ್ಪಾದನೆ ಒಳಗೊಂಡ ಇಂಧನ ಕ್ಷೇತ್ರವನ್ನು ಉತ್ತೇಜಿಸುವ ಗುರಿ ಹೊಂದಿದೆ. ಇದೇ ಸಂದರ್ಭದಲ್ಲಿ ಐಐಎಂ ಸಂಬಲ್‌ಪುರ ಮಾದರಿಯ ದರ್ಶನ ಪಡೆದ ಶ್ರೀ ಮೋದಿ ಅವರು, ಇದೇ ವೇಳೆ ಛಾಯಾಚಿತ್ರ ಪ್ರದರ್ಶನವನ್ನು ಸಹ ವೀಕ್ಷಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಒಡಿಶಾದ ಅಭಿವೃದ್ಧಿ ಪಯಣಕ್ಕೆ ಇಂದು ಮಹತ್ವದ ಸಂದರ್ಭವಾಗಿದ್ದು, ಶಿಕ್ಷಣ, ರೈಲ್ವೆ, ರಸ್ತೆಗಳು, ವಿದ್ಯುತ್ ಮತ್ತು ಪೆಟ್ರೋಲಿಯಂ ಕ್ಷೇತ್ರಗಳಲ್ಲಿ ಸುಮಾರು 70,000 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಇಂದು ಪ್ರಾರಂಭಿಸಲಾಗಿದೆ. ಒಡಿಶಾದ ಬಡ ಜನರು, ಕಾರ್ಮಿಕರು, ಕಾರ್ಮಿಕ ವರ್ಗ, ವ್ಯಾಪಾರಿಗಳು, ವರ್ತಕರು ಮತ್ತು ಸಮಾಜದ ಇತರ ಎಲ್ಲ ವರ್ಗಗಳ ರೈತರು ಇಂದಿನ ಅಭಿವೃದ್ಧಿ ಯೋಜನೆಗಳ ಲಾಭ ಪಡೆದುಕೊಳ್ಳುತ್ತಾರೆ. ಇದು ಒಡಿಶಾದ ಯುವಕರಿಗೆ ಸಾವಿರಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಭಾರತದ ಮಾಜಿ ಉಪಪ್ರಧಾನಿ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಸರ್ಕಾರದ ನಿರ್ಧಾರ ಘೋಷಿಸುತ್ತಿರುವುದಾಗಿ ಪ್ರಧಾನ ಮಂತ್ರಿ ಹರ್ಷ ವ್ಯಕ್ತಪಡಿಸಿದರು. ಭಾರತದ ಉಪಪ್ರಧಾನಿಯಾಗಿ, ಗೃಹ ಸಚಿವರಾಗಿ ಮತ್ತು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿ ಶ್ರೀ ಅಡ್ವಾಣಿ ಅವರ ಅಪ್ರತಿಮ ಕೊಡುಗೆಗಳನ್ನು ಪ್ರಧಾನ ಮಂತ್ರಿ ಮೋದಿ ಶ್ಲಾಘಿಸಿದರು. ಸಂಸತ್ತಿನ ಪ್ರತಿಷ್ಠಿತ ಮತ್ತು ನಿಷ್ಠಾವಂತ ಸದಸ್ಯರಾಗಿ ದಶಕಗಳ ಅನುಭವ ಹೊಂದಿದ್ದಾರೆ. ಅಡ್ವಾಣಿ ಜಿ ಅವರಿಗೆ ಭಾರತ ರತ್ನ ನೀಡಿ ಗೌರವಿಸುವುದು ದೇಶವು ತನ್ನ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರನ್ನು ಎಂದಿಗೂ ಮರೆಯುವುದಿಲ್ಲ ಎಂಬುದರ ಸಂಕೇತವಾಗಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು. ಶ್ರೀ ಎಲ್ ಕೆ ಅಡ್ವಾಣಿ ಅವರು ತಮ್ಮ ಮೇಲೆ ತೋರಿಸಿದ ಪ್ರೀತಿ, ಆಶೀರ್ವಾದ ಮತ್ತು ಮಾರ್ಗದರ್ಶನಕ್ಕಾಗಿ ಪ್ರಧಾನ ಮಂತ್ರಿ ಅವರು ಧನ್ಯವಾದಗಳನ್ನು ಅರ್ಪಿಸಿದರು. ಎಲ್ಲಾ ನಾಗರಿಕರ ಪರವಾಗಿ ಅವರನ್ನು ಅಭಿನಂದಿಸುತ್ತಾ, ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದರು.
ಒಡಿಶಾವನ್ನು ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯ ಕೇಂದ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರವು ನಿರಂತರ ಪ್ರಯತ್ನಗಳನ್ನು ಮಾಡಿದೆ. ಕಳೆದ ದಶಕದಲ್ಲಿ ಐಐಎಸ್‌ಇಆರ್ ಬರ್ಹಾಂಪುರ ಮತ್ತು ಭುವನೇಶ್ವರ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯಂತಹ ಆಧುನಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರೊಂದಿಗೆ ಒಡಿಶಾದ ಯುವಕರ ಭವಿಷ್ಯವು ಬದಲಾಗಿದೆ. ಈಗ, ಐಐಎಂ ಸಂಬಲ್‌ಪುರವನ್ನು ಆಧುನಿಕ ನಿರ್ವಹಣಾ ಸಂಸ್ಥೆಯಾಗಿ ಸ್ಥಾಪಿಸುವುದರೊಂದಿಗೆ, ರಾಜ್ಯದ ಪಾತ್ರವನ್ನು ಇನ್ನಷ್ಟು ಬಲಪಡಿಸಲಾಗುತ್ತಿದೆ. ಸಾಂಕ್ರಾಮಿಕ ಸಮಯದಲ್ಲಿ ಐಐಎಂ(ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್)ಗೆ ಶಂಕುಸ್ಥಾಪನೆ ನೆರವೇರಿಸಿದ್ದನ್ನು ಪ್ರಧಾನಿ ನೆನಪಿಸಿಕೊಂಡರು. ಎಲ್ಲಾ ಅಡೆತಡೆಗಳ ನಡುವೆ ಅದನ್ನು ಪೂರ್ಣಗೊಳಿಸಿದ ತಂಡವನ್ನು ಶ್ಲಾಘಿಸಿದರು.
"ಎಲ್ಲಾ ರಾಜ್ಯಗಳು ಅಭಿವೃದ್ಧಿಗೊಂಡರೆ ಮಾತ್ರ ವಿಕ್ಷಿತ್ ಭಾರತದ ಗುರಿ ಸಾಧಿಸಬಹುದು". ಒಡಿಶಾಗೆ ಪ್ರತಿ ವಲಯದ ಅಭಿವೃದ್ಧಿಗೆ ಗರಿಷ್ಠ ಬೆಂಬಲ ನೀಡುವುದಾಗಿ ಪ್ರಧಾನಿ ಪ್ರಸ್ತಾಪಿಸಿದರು. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಪ್ರಯತ್ನಗಳನ್ನು ಪ್ರಸ್ತಾಪಿಸಿದ ಅವರು, ಒಡಿಶಾದ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ಸ್ ವಲಯವು ಸುಮಾರು 1.25 ಲಕ್ಷ ಕೋಟಿ ರೂ. ಹೂಡಿಕೆಗೆ ಸಾಕ್ಷಿಯಾಗಿದೆ, ರಾಜ್ಯದ ರೈಲ್ವೆ ಬಜೆಟ್ 12 ಪಟ್ಟು ಹೆಚ್ಚು ಉತ್ತೇಜನ ಪಡೆಯುತ್ತಿದೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ, ಒಡಿಶಾದ 50,000 ಕಿ.ಮೀ. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಮತ್ತು 4,000 ಕಿಮೀ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಇಂದಿನ 3 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆಯನ್ನು ಉಲ್ಲೇಖಿಸಿದ ಪ್ರಧಾನಿ, ಒಡಿಶಾ ಮತ್ತು ಜಾರ್ಖಂಡ್ ನಡುವೆ ಅಂತಾರಾಜ್ಯ ಸಂಪರ್ಕಿಸುವ ಪ್ರಯಾಣದ ಅವಧಿ ಕಡಿಮೆಯಾಗಲಿದೆ ಎಂದರು. ಈ ಪ್ರದೇಶವು ಗಣಿಗಾರಿಕೆ, ವಿದ್ಯುತ್ ಮತ್ತು ಉಕ್ಕಿನ ಕೈಗಾರಿಕೆಗಳಲ್ಲಿ ತನ್ನ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಹೊಸ ಸಂಪರ್ಕವು ಇಡೀ ಪ್ರದೇಶದಲ್ಲಿ ಹೊಸ ಕೈಗಾರಿಕೆಗಳಿಗೆ ಸಾಧ್ಯತೆಗಳನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಸಾವಿರಾರು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಸಂಬಲ್‌ಪುರ್-ತಾಲ್ಚೆರ್ ನಡುವೆ ಜೋಡಿ ರೈಲು ಮಾರ್ಗ ಮತ್ತು ಝಾರ್-ತರ್ಭಾದಿಂದ ಸೋನ್‌ಪುರ್ ಭಾಗಕ್ಕೆ ಹೊಸ ರೈಲು ಮಾರ್ಗದ ಉದ್ಘಾಟನೆ ನೆರವೇರಿಸಲಾಗಿದೆ. ಪುರಿ-ಸೋನ್‌ಪುರ್ ಎಕ್ಸ್‌ಪ್ರೆಸ್ ಮೂಲಕ ಸುವರ್ಣಪುರ ಜಿಲ್ಲೆ ಕೂಡ ಸಂಪರ್ಕ ಹೊಂದಲಿದ್ದು, ಭಕ್ತರಿಗೆ ಜಗನ್ನಾಥನ ದರ್ಶನಕ್ಕೆ ಅನುಕೂಲವಾಗಲಿದೆ ಎಂದರು. ಇಂದು ಉದ್ಘಾಟನೆಯಾದ ಸೂಪರ್‌ಕ್ರಿಟಿಕಲ್ ಮತ್ತು ಅಲ್ಟ್ರಾ-ಸೂಪರ್‌ಕ್ರಿಟಿಕಲ್ ಉಷ್ಣವಿದ್ಯುತ್ ಉಪಾದನಾ ಘಟಕಗಳು ಒಡಿಶಾದ ಪ್ರತಿ ಕುಟುಂಬಕ್ಕೂ ಸಮರ್ಪಕ ಮತ್ತು ಕೈಗೆಟಕುವ ದರದಲ್ಲಿ ವಿದ್ಯುತ್ ಪೂರೈಕೆ ಖಚಿತಪಡಿಸುತ್ತವೆ ಎಂದು ಶ್ರೀ ಮೋದಿ ಪ್ರಸ್ತಾಪಿಸಿದರು.
"ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಮಾಡಿದ ನೀತಿಗಳಿಂದ ಒಡಿಶಾ ಹೆಚ್ಚು ಪ್ರಯೋಜನ ಪಡೆದಿದೆ", ಗಣಿಗಾರಿಕೆ ನೀತಿಯ ಬದಲಾವಣೆಯ ನಂತರ ಒಡಿಶಾದ ಆದಾಯವು 10 ಪಟ್ಟು ಹೆಚ್ಚಾಗಿದೆ. ಗಣಿಗಾರಿಕೆ ನಡೆದ ಪ್ರದೇಶಗಳು ಮತ್ತು ರಾಜ್ಯಗಳಿಗೆ ಖನಿಜ ಉತ್ಪಾದನೆಯ ಪ್ರಯೋಜನಗಳು ಲಭ್ಯವಿಲ್ಲದ ಹಿಂದಿನ ನೀತಿಗಳನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ಜಿಲ್ಲಾ ಖನಿಜ ಪ್ರತಿಷ್ಠಾನ ಸ್ಥಾಪನೆಯೊಂದಿಗೆ ಈ ಸಮಸ್ಯೆ ಪರಿಹರಿಸಲಾಗಿದೆ. ಈ ಪ್ರತಿಷ್ಠಾನವು ಅಭಿವೃದ್ಧಿಗೆ ಹೂಡಿಕೆಗಳನ್ನು ಖಚಿತಪಡಿಸಿತು."ಒಡಿಶಾ ಇದುವರೆಗೆ 25,000 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಪಡೆದಿದೆ ಮತ್ತು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದ ಜನರ ಕಲ್ಯಾಣಕ್ಕಾಗಿ ಈ ಹಣವನ್ನು ಬಳಸಲಾಗುತ್ತಿದೆ". ಒಡಿಶಾದ ಜನತೆಗೆ ಕೇಂದ್ರ ಸರ್ಕಾರವು ಅದೇ ಸಮರ್ಪಣಾ ಮನೋಭಾವದಿಂದ ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಭರವಸೆ ನೀಡಿದ ಪ್ರಧಾನಿ ಅವರು, ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ಒಡಿಶಾ ರಾಜ್ಯಪಾಲ ಶ್ರೀ ರಘುಬರ್ ದಾಸ್, ಮುಖ್ಯಮಂತ್ರಿ ಶ್ರೀ ನವೀನ್ ಪಟ್ನಾಯಕ್, ಕೇಂದ್ರ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ದೇಶದ ಇಂಧನ ಭದ್ರತೆ ಬಲಪಡಿಸುವ ಪ್ರಧಾನ ಮಂತ್ರಿ ಅವರ ದೂರದೃಷ್ಟಿಗೆ ಅನುಗುಣವಾಗಿ, ಒಡಿಶಾದ ಸಂಬಲ್‌ಪುರದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಇಂಧನ ಕ್ಷೇತ್ರ ಉತ್ತೇಜಿಸುವ ಉದ್ದೇಶದಿಂದ ಅನೇಕ ಯೋಜನೆಗಳ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಯಿತು.
'ಜಗದೀಶ್‌ಪುರ-ಹಲ್ಡಿಯಾ ಮತ್ತು ಬೊಕಾರೊ-ಧಮ್ರಾ ಪೈಪ್‌ಲೈನ್ ಯೋಜನೆ (ಜೆಎಚ್‌ಬಿಡಿಪಿಎಲ್)' 'ಧಮ್ರಾ - ಅಂಗುಲ್ ಪೈಪ್‌ಲೈನ್ ವಿಭಾಗ'(412 ಕಿಮೀ)ವನ್ನು ಪ್ರಧಾನಿ ಉದ್ಘಾಟಿಸಿದರು. ‘ಪ್ರಧಾನ ಮಂತ್ರಿ ಊರ್ಜಾ ಗಂಗಾ’ ಯೋಜನೆ ಅಡಿ, 2,450 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದಲ್ಲಿ ನಿರ್ಮಿಸಲಾದ ಈ ಯೋಜನೆಯು ಒಡಿಶಾವನ್ನು ರಾಷ್ಟ್ರೀಯ ಗ್ಯಾಸ್ ಗ್ರಿಡ್‌ನೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರಧಾನ ಮಂತ್ರಿ ಅವರು ಮುಂಬೈ-ನಾಗ್ಪುರ-ಝಾರ್ಸುಗುಡ ಪೈಪ್‌ಲೈನ್‌ನ ‘ನಾಗ್ಪುರ ಝಾರ್ಸುಗುಡಾ ನೈಸರ್ಗಿಕ ಅನಿಲ ಪೈಪ್‌ಲೈನ್ ವಿಭಾಗ’(692 ಕಿಮೀ)’ಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. 2,660 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವ ಈ ಯೋಜನೆಯು ಒಡಿಶಾ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯಗಳಿಗೆ ನೈಸರ್ಗಿಕ ಅನಿಲ ಲಭ್ಯತೆಯನ್ನು ಸುಧಾರಿಸುತ್ತದೆ.
ಕಾರ್ಯಕ್ರಮದಲ್ಲಿ ಸುಮಾರು 28,980 ಕೋಟಿ ರೂ. ಮೌಲ್ಯದ ಬಹು ವಿದ್ಯುತ್ ಯೋಜನೆಗಳನ್ನು ಪ್ರಧಾನ ಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಒಡಿಶಾದ ಸುಂದರ್‌ಗಢ್ ಜಿಲ್ಲೆಯಲ್ಲಿ ಎನ್ ಟಿಪಿಸಿ ದರ್ಲಿಪಾಲಿ ಸೂಪರ್ ಥರ್ಮಲ್ ಪವರ್ ಸ್ಟೇಷನ್ (2x800 MW) ಮತ್ತು ಎನ್ಎಸ್ ಪಿಸಿಲ್ ರೂರ್ಕೆಲಾ ಪಿಪಿ-II ವಿಸ್ತರಣೆ ಯೋಜನೆ(1x250 ಮೆಗಾವ್ಯಾಟ್)ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಅವರು ಒಡಿಶಾದ ಅಂಗುಲ್ ಜಿಲ್ಲೆಯಲ್ಲಿ ಎನ್ ಟಿಪಿಸಿ ತಾಲ್ಚೆರ್ ಥರ್ಮಲ್ ಪವರ್ ಪ್ರಾಜೆಕ್ಟ್, ಹಂತ-III (2x660 ವೆಗಾವ್ಯಾಟ್)ಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ವಿದ್ಯುತ್ ಯೋಜನೆಗಳು ಒಡಿಶಾ ಮತ್ತು ಇತರೆ ಹಲವಾರು ರಾಜ್ಯಗಳಿಗೆ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಪೂರೈಸುತ್ತವೆ.
27,000 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ನೇವೇಲಿ ಲಿಗ್ನೈಟ್ ಕಾರ್ಪೊರೇಷನ್ (ಎನ್‌ಎಲ್‌ಸಿ) ತಲಬಿರಾ ಥರ್ಮಲ್ ಪವರ್ ಪ್ರಾಜೆಕ್ಟ್‌ಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು. ಆತ್ಮನಿರ್ಭರ ಭಾರತ್ ನಿರ್ಮಾಣ ಮಾಡುವ ಪ್ರಧಾನ ಮಂತ್ರಿ ಅವರ ದೂರದೃಷ್ಟಿಯನ್ನು ಬಲಪಡಿಸುವ ಈ ಅತ್ಯಾಧುನಿಕ ಯೋಜನೆಯು ವಿಶ್ವಾಸಾರ್ಹ, ಕೈಗೆಟುಕುವ ಬೆಲೆಗೆ ನಿರಂತರ ವಿದ್ಯುತ್ ಪೂರೈಸುವ ಮೂಲಕ ರಾಷ್ಟ್ರದ ಇಂಧನ ಭದ್ರತೆಗೆ ಗಣನೀಯ ಕೊಡುಗೆ ನೀಡುತ್ತದೆ, ದೇಶದ ಆರ್ಥಿಕ ಬೆಳವಣಿಗೆ ಮತ್ತು ಸಮೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತದೆ.
ಮೊದಲ ಮೈಲ್ ಕನೆಕ್ಟಿವಿಟಿ (ಎಫ್‌ಎಂಸಿ) ಯೋಜನೆಗಳು ಸೇರಿದಂತೆ ಮಹಾನದಿ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ನ ಕಲ್ಲಿದ್ದಲು ಮೂಲಸೌಕರ್ಯ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದರು - ಅಂಗುಲ್ ಜಿಲ್ಲೆಯ ತಾಲ್ಚರ್ ಕೋಲ್‌ಫೀಲ್ಡ್‌ನಲ್ಲಿ ಭುವನೇಶ್ವರಿ ಹಂತ-1 ಮತ್ತು ಲಜ್ಕುರಾ ರಾಪಿಡ್ ಲೋಡಿಂಗ್ ಸಿಸ್ಟಮ್ (ಆರ್‌ಎಲ್‌ಎಸ್). ಸುಮಾರು 2145 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಗಳು ಒಡಿಶಾದಿಂದ ಗುಣಮಟ್ಟದ ಇಂಧನ ಪೂರೈಕೆಯನ್ನು ಹೆಚ್ಚಿಸುತ್ತವೆ. ಒಡಿಶಾದ ಜಾರ್ಸುಗುಡಾ ಜಿಲ್ಲೆಯಲ್ಲಿ 550 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಐಬಿ ವ್ಯಾಲಿ ವಾಶರಿಯನ್ನು ಪ್ರಧಾನಿ ಉದ್ಘಾಟಿಸಿದರು. ಇದು ಗುಣಮಟ್ಟದ ಕಲ್ಲಿದ್ದಲು ಸಂಸ್ಕರಣೆಯಲ್ಲಿ ಒಂದು ಮಾದರಿ ಬದಲಾವಣೆಯನ್ನು ಗುರುತಿಸುತ್ತದೆ, ನಾವೀನ್ಯತೆ ಮತ್ತು ಸುಸ್ಥಿರತೆಯನ್ನು ಸೂಚಿಸುತ್ತದೆ. 878 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಮಹಾನದಿ ಕೋಲ್‌ಫೀಲ್ಡ್ ಲಿಮಿಟೆಡ್‌ನಿಂದ ನಿರ್ಮಿಸಲಾದ ಜರ್ಸುಗುಡ-ಬರ್ಪಾಲಿ-ಸರ್ದೇಗಾ ರೈಲು ಮಾರ್ಗದ ಹಂತ-1ರ 50 ಕಿಮೀ ಉದ್ದದ 2ನೇ ಮಾರ್ಗವನ್ನು ಪ್ರಧಾನ ಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು.
ಸುಮಾರು 2110 ಕೋಟಿ ರೂ. ಒಟ್ಟು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ 3 ರಾಷ್ಟ್ರೀಯ ಹೆದ್ದಾರಿ ರಸ್ತೆ ವಲಯದ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದರು. ಎನ್‌ಎಚ್ 215ರ ರಿಮುಲಿ-ಕೊಯ್ಡಾ ವಿಭಾಗದ ಚತುಷ್ಪಥ (ಹೊಸ ಎನ್‌ಎಚ್ ನಂ. 520), ಎನ್‌ಎಚ್ 23 ರ ಬೀರಮಿತ್ರಪುರ-ಬ್ರಹ್ಮಣಿ ಬೈಪಾಸ್ ಕೊನೆಯ ವಿಭಾಗ (ಹೊಸ ಎನ್‌ಎಚ್ ನಂ. 143) ಮತ್ತು ಬ್ರಾಹ್ಮಣಿ ಬೈಪಾಸ್ ಎಂಡ್-ರಾಜಮುಂಡ ವಿಭಾಗದ ಎನ್ಎಚ್ 23 (ಹೊಸ ಎನ್ಎಚ್ ಸಂಖ್ಯೆ 143) ಈ ಯೋಜನೆಗಳಲ್ಲಿ ಸೇರಿವೆ. ಈ ಯೋಜನೆಗಳು ಸಂಪರ್ಕವನ್ನು ಹೆಚ್ಚಿಸುತ್ತವೆ ಮತ್ತು ಈಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ.
ಇದಲ್ಲದೆ, ಪ್ರಧಾನಿ ಅವರು ಸುಮಾರು 2146 ಕೋಟಿ ರೂ. ವೆಚ್ಚದ ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಅವರು ಸಂಬಲ್‌ಪುರ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು. ಅದರ ವಾಸ್ತುಶಿಲ್ಪವು ಶೈಲಶ್ರೀ ಅರಮನೆಯಿಂದ ಪ್ರೇರಿತವಾಗಿದೆ. ಅವರು ಸಂಬಲ್‌ಪುರ-ತಾಲ್ಚೆರ್ ಡಬ್ಲಿಂಗ್ ರೈಲ್ವೆ ಲೈನ್ (168 ಕಿಮೀ) ಮತ್ತು ಜರ್ತರ್ಭ-ಸೋನೆಪುರ್ ಹೊಸ ರೈಲು ಮಾರ್ಗವನ್ನು (21.7 ಕಿಮೀ) ದೇಶಕ್ಕೆ ಸಮರ್ಪಿಸಿದರು. ಈ ಪ್ರದೇಶದಲ್ಲಿ ಇದು ರೈಲು ಜಾಲದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಪ್ರಧಾನಿ ಅವರು ಪುರಿ-ಸೋನೆಪುರ್-ಪುರಿ ವೀಕ್ಲಿ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಇದು ಈ ಪ್ರದೇಶದ ರೈಲು ಪ್ರಯಾಣಿಕರ ಸಂಪರ್ಕವನ್ನು ಸುಧಾರಿಸುತ್ತದೆ.
ಪ್ರಧಾನ ಮಂತ್ರಿ ಅವರು ಐಐಎಂ- ಸಂಬಲ್‌ಪುರದ ಕಾಯಂ ಕ್ಯಾಂಪಸ್ ಅನ್ನು ಉದ್ಘಾಟಿಸಿದರು. ಇದಲ್ಲದೆ, ಅವರು ಜಾರ್ಸುಗುಡ ಪ್ರಧಾನ ಅಂಚೆ ಕಚೇರಿಯ ಪಾರಂಪರಿಕ ಕಟ್ಟಡವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
***
(Release ID: 2002489)
Visitor Counter : 73
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam