ಪ್ರಧಾನ ಮಂತ್ರಿಯವರ ಕಛೇರಿ

ಅಯೋಧ್ಯೆ ಧಾಮ್ ಜಂಕ್ಷನ್ ರೈಲು ನಿಲ್ದಾಣ ಉದ್ಘಾಟಿಸಿದ ಪ್ರಧಾನಿ


ಎರಡು ಹೊಸ ಅಮೃತ್ ಭಾರತ ರೈಲುಗಳಿಗೆ ಪ್ರಧಾನಿ ಚಾಲನೆ; ಅಮೃತ್ ಭಾರತ ರೈಲುಗಳು ಕಾರ್ಯಾಚರಣೆ ಪ್ರಾರಂಭ

ಆರು ಹೊಸ ವಂದೇ ಭಾರತ ರೈಲುಗಳಿಗೆ ಪ್ರಧಾನಮಂತ್ರಿ ಚಾಲನೆ

Posted On: 30 DEC 2023 4:47PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವೀಕರಣಗೊಂಡ ಅಯೋಧ್ಯೆ ರೈಲು ನಿಲ್ದಾಣವನ್ನು ಉದ್ಘಾಟಿಸಿದರು ಮತ್ತು ಹೊಸ ಅಮೃತ್ ಭಾರತ ರೈಲುಗಳು ಮತ್ತು ವಂದೇ ಭಾರತ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಇದೇ ವೇಳೆ  ಹಲವಾರು ಇತರ ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ನಂತರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ, ಅಯೋಧ್ಯಾ ಧಾಮ್ ರೈಲು ನಿಲ್ದಾಣವು 10 ಸಾವಿರ ಪ್ರಯಾಣಿಕರಿಗೆ ಸೇವೆ ನೀಡುವ ಸಾಮರ್ಥ್ಯ ಹೊಂದಿತ್ತು. ಇದೀಗ ನವೀಕರಣ ಪೂರ್ಣಗೊಂಡ ನಂತರ ಇದು 60 ಸಾವಿರಕ್ಕೆ ತಲುಪುತ್ತದೆ. ವಂದೇ ಭಾರತ ಮತ್ತು ನಮೋ ಭಾರತ ನಂತರ ಹೊಸ ರೈಲು ‘ಅಮೃತ್ ಭಾರತ’ ರೈಲುಗಳ ಬಗ್ಗೆ ಮಾಹಿತಿ ನೀಡಿದ ಪ್ರಧಾನಿ, ಮೊದಲ ಅಮೃತ್ ಭಾರತ ರೈಲು ಅಯೋಧ್ಯೆಯ ಮೂಲಕ ಸಂಚರಿಸುತ್ತಿರುವುದಕ್ಕೆ ಸಂತಸಗೊಂಡಿದ್ದೇನೆ. ಇಂದು ಈ ರೈಲುಗಳನ್ನು ಪಡೆದಿರುವ ಉತ್ತರ ಪ್ರದೇಶ, ದೆಹಲಿ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕದ ಜನತೆಗೆ ಅಭಿನಂದನೆ ಎಂದು ತಿಳಿಸಿದರು.

ಆಧುನಿಕ ಅಮೃತ್ ಭಾರತ ರೈಲುಗಳು ಬಡವರ ಸೇವೆಯ ಪ್ರತೀಕವಾಗಿದೆ. ಕೆಲಸದ ಕಾರಣದಿಂದ ಆಗಾಗ್ಗೆ ದೂರದ ಪ್ರಯಾಣ ಮಾಡುವ ಜನರು ಮತ್ತು ಅಷ್ಟು ಆದಾಯವಿಲ್ಲದವರು ಸಹ ಆಧುನಿಕ ಸೌಲಭ್ಯಗಳು ಮತ್ತು ಆರಾಮದಾಯಕ ಪ್ರಯಾಣ ಮಾಡಬಹುದು. ಬಡವರ ಜೀವನದ ಘನತೆಯನ್ನು ಗಮನದಲ್ಲಿಟ್ಟುಕೊಂಡು ಈ ರೈಲುಗಳನ್ನು ವಿನ್ಯಾಸಗೊಳಿಸಲಾಗಿದೆ” ಎಂದು ಅವರು ಹೇಳಿದರು. ಅಭಿವೃದ್ಧಿಯನ್ನು ಪರಂಪರೆಯೊಂದಿಗೆ ಜೋಡಿಸುವಲ್ಲಿ ವಂದೇ ಭಾರತ ರೈಲುಗಳು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಪ್ರಧಾನಮಂತ್ರಿ ಎತ್ತಿ ತೋರಿಸಿದರು. “ದೇಶದ ಮೊದಲ ವಂದೇ ಭಾರತ ಎಕ್ಸ್‌ಪ್ರೆಸ್ ರೈಲು ಕಾಶಿಯಿಂದ ಸಂಚರಿಸಿತು. ಇಂದು ದೇಶದ 34 ಮಾರ್ಗಗಳಲ್ಲಿ ವಂದೇ ಭಾರತ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿವೆ. ವಂದೇ ಭಾರತವು ಕಾಶಿ, ಕಾತ್ರಾ, ಉಜ್ಜಯಿನಿ, ಪುಷ್ಕರ್, ತಿರುಪತಿ, ಶಿರಡಿ, ಅಮೃತಸರ, ಮಧುರೈ ಹೀಗೆ ಪ್ರತಿಯೊಂದು ದೊಡ್ಡ ಧಾರ್ಮಿಕ ಕೇಂದ್ರಗಳಿಗೆ ತಲುಪುತ್ತಿದೆ. ಇಂದು ಅಯೋಧ್ಯೆಗೆ ವಂದೇ ಭಾರತ ರೈಲಿನ ಉಡುಗೊರೆ ಸಿಕ್ಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮರು ಅಭಿವೃದ್ಧಿಗೊಂಡ ಅಯೋಧ್ಯೆ ರೈಲು ನಿಲ್ದಾಣದ ಹಂತ I - ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ. 240 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮೂರು ಅಂತಸ್ತಿನ ಆಧುನಿಕ ರೈಲು ನಿಲ್ದಾಣದ ಕಟ್ಟಡವು ಲಿಫ್ಟ್‌ಗಳು, ಎಸ್ಕಲೇಟರ್‌ಗಳು, ಫುಡ್ ಪ್ಲಾಜಾಗಳು, ಪೂಜಾ ಅಗತ್ಯಗಳಿಗಾಗಿ ಅಂಗಡಿಗಳು, ಕ್ಲಾಕ್ ರೂಮ್‌ಗಳು, ಮಕ್ಕಳ ಆರೈಕೆ ಕೊಠಡಿಗಳು, ವಿಶ್ರಾಂತಿ ಕೊಠಡಿಗಳು ಎಲ್ಲಾ ಆಧುನಿಕ ವೈಶಿಷ್ಟ್ಯಗಳೊಂದಿಗೆ ಸುಸಜ್ಜಿತವಾಗಿದೆ. ನಿಲ್ದಾಣದ ಕಟ್ಟಡವು 'ಎಲ್ಲರಿಗೂ ಪ್ರವೇಶಿಸಬಹುದಾಗಿದೆ' ಮತ್ತು 'ಐಜಿಬಿಸಿ ಪ್ರಮಾಣೀಕೃತ ಹಸಿರು ನಿಲ್ದಾಣ ಕಟ್ಟಡ'ವಾಗಿದೆ.

ಅಯೋಧ್ಯಾ ಧಾಮ್ ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ದೇಶದ ಹೊಸ ವರ್ಗದ ಸೂಪರ್‌ಫಾಸ್ಟ್ ಪ್ಯಾಸೆಂಜರ್ ರೈಲುಗಳಾದ ಅಮೃತ್ ಭಾರತ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಲಾಯಿತು. ಅಮೃತ್ ಭಾರತ ರೈಲು ಹವಾನಿಯಂತ್ರಿತವಲ್ಲದ ಕೋಚ್‌ಗಳನ್ನು ಹೊಂದಿರುವ ಪುಶ್ ಪುಲ್ ರೈಲು.  ಉತ್ತಮ ವೇಗವರ್ಧನೆಗಾಗಿ ಈ ರೈಲು ಎರಡೂ ತುದಿಗಳಲ್ಲಿ ಲೋಕೊಗಳನ್ನು ಹೊಂದಿದೆ. ಇದು ರೈಲು ಪ್ರಯಾಣಿಕರಿಗೆ ಸುಂದರವಾದ ಮತ್ತು ಆಕರ್ಷಕ ವಿನ್ಯಾಸದ ಆಸನಗಳು, ಉತ್ತಮ ಲಗೇಜ್ ಸ್ಥಳ, ಸೂಕ್ತವಾದ ಮೊಬೈಲ್ ಹೋಲ್ಡರ್ ಹೊಂದಿರುವ ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಎಲ್‌ಇಡಿ ದೀಪಗಳು, ಸಿಸಿಟಿವಿ, ಸಾರ್ವಜನಿಕ ಮಾಹಿತಿ ವ್ಯವಸ್ಥೆ ಮುಂತಾದ ಸುಧಾರಿತ ಸೌಲಭ್ಯಗಳನ್ನು ಒದಗಿಸುತ್ತದೆ. ಆರು ಹೊಸ ವಂದೇ ಭಾರತ ರೈಲುಗಳಿಗೆ ಪ್ರಧಾನಿ ಚಾಲನೆ ನೀಡಿದರು.

ದರ್ಭಾಂಗ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಅಮೃತ್ ಭಾರತ ಎಕ್ಸ್‌ಪ್ರೆಸ್ ಮತ್ತು ಮಾಲ್ಡಾ ಟೌನ್-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಸ್‌ (ಬೆಂಗಳೂರು) ಅಮೃತ್ ಭಾರತ ಎಕ್ಸ್‌ಪ್ರೆಸ್ ಎಂಬ ಎರಡು ಹೊಸ ಅಮೃತ್ ಭಾರತ ರೈಲುಗಳಿಗೆ ಪ್ರಧಾನಿ ಚಾಲನೆ ನೀಡಿದರು.

ಅಮೃತ್ ರೈಲುಗಳ ಉದ್ಘಾಟನೆ ವೇಳೇ ಪ್ರಯಾಣಿಸುತ್ತಿದ್ದ ಶಾಲಾ ಮಕ್ಕಳೊಂದಿಗೆ ಪ್ರಧಾನಮಂತ್ರಿ ಸಂವಾದ ನಡೆಸಿದರು.

ಆರು ಹೊಸ ವಂದೇ ಭಾರತ ರೈಲುಗಳಿಗೆ ಪ್ರಧಾನಿ ಚಾಲನೆ ನೀಡಿದರು. ಇವುಗಳಲ್ಲಿ ಶ್ರೀ ಮಾತಾ ವೈಷ್ಣೋ ದೇವಿ ಕಾತ್ರಾ-ನವದೆಹಲಿ ವಂದೇ ಭಾರತ ಎಕ್ಸ್‌ಪ್ರೆಸ್; ಅಮೃತಸರ-ದೆಹಲಿ ವಂದೇ ಭಾರತ ಎಕ್ಸ್‌ಪ್ರೆಸ್; ಕೊಯಮತ್ತೂರು-ಬೆಂಗಳೂರು ಕಂಟೋನ್‌ಮೆಂಟ್‌ ವಂದೇ ಭಾರತ ಎಕ್ಸ್‌ಪ್ರೆಸ್; ಮಂಗಳೂರು-ಮಡಗಾಂವ್ ವಂದೇ ಭಾರತ ಎಕ್ಸ್‌ಪ್ರೆಸ್; ಜಾಲ್ನಾ-ಮುಂಬೈ ವಂದೇ ಭಾರತ ಎಕ್ಸ್‌ಪ್ರೆಸ್ ಮತ್ತು ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ವಂದೇ ಭಾರತ ಎಕ್ಸ್‌ಪ್ರೆಸ್.

ಈ ಪ್ರದೇಶದಲ್ಲಿ ರೈಲು ಮೂಲಸೌಕರ್ಯವನ್ನು ವೃದ್ಧಿಸಲು 2300 ಕೋಟಿ ರೂಪಾಯಿ ಮೌಲ್ಯದ ಮೂರು ರೈಲ್ವೆ ಯೋಜನೆಗಳನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಯೋಜನೆಗಳು ರೂಮಾ ಚಕೇರಿ-ಚಾಂದೇರಿ ಮೂರನೇ ಸಾಲಿನ ಯೋಜನೆಯನ್ನು ಒಳಗೊಂಡಿವೆ; ಜೌನ್‌ಪುರ್-ತುಳಸಿ ನಗರ, ಅಕ್ಬರ್‌ಪುರ್-ಅಯೋಧ್ಯೆ, ಸೊಹವಾಲ್-ಪತ್ರಾಂಗ ಮತ್ತು ಜೌನ್‌ಪುರ-ಅಯೋಧ್ಯೆ-ಬಾರಾಬಂಕಿ ಡಬ್ಲಿಂಗ್‌ ಯೋಜನೆಯ ಸಫ್ದರ್‌ಗಂಜ್-ರಸೌಲಿ ವಿಭಾಗಗಳು; ಮತ್ತು ಮಲ್ಹೌರ್-ದಲಿಗಂಜ್ ರೈಲ್ವೆ ವಿಭಾಗದ ಡಬ್ಲಿಂಗ್‌ ಮತ್ತು ವಿದ್ಯುದೀಕರಣ ಯೋಜನೆ ಸೇರಿದೆ.

 

***



(Release ID: 1991799) Visitor Counter : 52