ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ವರ್ಷಾಂತ್ಯದ ಪರಾಮರ್ಶೆ-2023

Posted On: 26 DEC 2023 1:01PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ಗಾಂಧಿನಗರದಲ್ಲಿ ಸೆಮಿಕಾನ್ ಇಂಡಿಯಾ-2023 ಉದ್ಘಾಟಿಸಿದರು

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 3 ದಿನಗಳ ಸೆಮಿಕಾನ್ ಇಂಡಿಯಾ-2023 ಉದ್ಘಾಟಿಸಿದರು. ನಂತರ ಅವರು ತಮ್ಮ ವಿಶೇಷ ಭಾಷಣದಲ್ಲಿ, ಜನರ ದೈನಂದಿನ ಜೀವನದಲ್ಲಿ ಸೆಮಿಕಂಡಕ್ಟರ್ ಗಳ ಪಾತ್ರ ಹಾಗೂ ಸೆಮಿಕಾನ್ ಇಂಡಿಯಾ ಅಡಿ, ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ವ್ಯವಸ್ಥೆ ನಿರ್ಮಿಸಲು ಭಾರತ ಹೇಗೆ ಬದ್ಧವಾಗಿದೆ ಎಂಬುದನ್ನು ಅವರು ಕಾರ್ಯಕ್ರಮದಲ್ಲಿ ವಿವರಿಸಿದರು. ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ಸಂಪರ್ಕ ಮತ್ತು ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು, ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ವಿಶೇಷವಾಗಿ ಸೆಮಿಕಂಡಕ್ಟರ್‌ಗಳ ಮೇಲೆ ಗಮನ ಕೇಂದ್ರೀಕರಿಸಿ, ಪ್ರತಿಯೊಂದು ಕ್ಷೇತ್ರವನ್ನು ಪರಿವರ್ತಿಸುವಲ್ಲಿ ಪ್ರಧಾನ ಮಂತ್ರಿ ಅವರು ನಡೆಸುತ್ತಿರುವ ಪಾತ್ರವನ್ನು ವಿವರಿಸಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯುನ್ಮಾನ ಸರಕುಗಳ ಉತ್ಪಾದನೆ ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್‌ಗಳ ಬಗ್ಗೆ ಪ್ರಧಾನಿ ಅವರು ದೂರದೃಷ್ಟಿಯ ಮಾರ್ಗದರ್ಶನವನ್ನು ಶ್ಲಾಘಿಸಿದರು.

ಭಾರತವು ಎಲೆಕ್ಟ್ರಾನಿಕ್ಸ್ ಮೇಲೆ ಗಮನ ಕೇಂದ್ರೀಕರಿಸಿ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸುತ್ತಿದೆ. ಕ್ರಾಂತಿಯ ಭಾಗವಾಗಿ, ಸೆಮಿಕಂಡಕ್ಟರ್ ಗಳು ಅನಿವಾರ್ಯ ಪಾತ್ರ ವಹಿಸುತ್ತವೆ. ಸಂವಹನ ಅಥವಾ ಸಂಪರ್ಕ, ರಕ್ಷಣೆ, ವಾಹನಗಳು ಮತ್ತು ಕಂಪ್ಯೂಟಿಂಗ್ ಸಾಧನಗಳು ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಇವು ಉಪಯೋಗ ಮತ್ತು ಬಳಕೆಯನ್ನು ಹೊಂದಿವೆ. ದೇಶದ ಪ್ರಗತಿಯ ಪ್ರಮುಖ ಆಧಾರ ಸ್ತಂಭವಾದ 'ಎಲೆಕ್ಟ್ರಾನಿಕ್ಸ್' ಅನ್ನು ಬಲಪಡಿಸುವುದು ಮತ್ತು 'ಆತ್ಮನಿರ್ಭರ ಭಾರತ'ದ ದೃಷ್ಟಿಯನ್ನು ಬಲಪಡಿಸುವುದು, ಭಾರತವು ತನ್ನ ಮೌಲ್ಯ ಸರಪಳಿ ವಿಸ್ತರಿಸಲು ಮತ್ತು ಆಳವಾಗಿಸಲು ಮತ್ತು ವಿಶ್ವ ದರ್ಜೆಯ ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಸುಗಮಗೊಳಿಸಲು ಸಿದ್ಧವಾಗಿದೆ ಎಂದರು.

ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಸೆಮಿಕಾನ್‌ ಇಂಡಿಯಾ-2023 ಸಮ್ಮೇಳನವನ್ನು 2023 ಜುಲೈ ನಲ್ಲಿ 'ಕ್ಯಾಟಲೈಸಿಂಗ್ ಇಂಡಿಯಾಸ್ ಸೆಮಿಕಂಡಕ್ಟರ್ ಇಕೋಸಿಸ್ಟಮ್' ಎಂಬ ವಿಷಯದೊಂದಿಗೆ ಆಯೋಜಿಸಿತ್ತು. ಸಮ್ಮೇಳನದಲ್ಲಿ 23 ದೇಶಗಳಿಂದ 8,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಸೆಮಿಕಾನ್‌ ಇಂಡಿಯಾ-2023ರಲ್ಲಿ ಪ್ರಮುಖ ಜಾಗತಿಕ ಕಂಪನಿಗಳಾದ ಮೈಕ್ರಾನ್ ಟೆಕ್ನಾಲಜಿ, ಅಪ್ಲೈಡ್ ಮೆಟೀರಿಯಲ್ಸ್, ಫಾಕ್ಸ್‌ಕಾನ್, ಕ್ಯಾಡೆನ್ಸ್ ಮತ್ತು ಎಎಮ್‌ಡಿ ಮತ್ತು ಇಂಡಸ್ಟ್ರಿ ಅಸೋಸಿಯೇಷನ್, ಎಸ್‌ಇಎಂಐ ಸೇರಿದಂತೆ ಪ್ರಮುಖ ಉದ್ಯಮಗಳ ದಿಗ್ಗಜರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.

ನವದೆಹಲಿಯಲ್ಲಿ ನಡೆದ 3 ದಿನಗಳ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಜಾಗತಿಕ ಪಾಲುದಾರಿಕೆ(ಜಿಪಿಎಐ) ಶೃಂಗಸಭೆ; 150ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಮತ್ತು ಪ್ರಮುಖ ಟೆಕ್ ಕಂಪನಿಗಳು ತಮ್ಮ ಕೃತಕ ಬುದ್ಧಿಮತ್ತೆ  ಅಪ್ಲಿಕೇಶನ್‌ಗಳು ಮತ್ತು ಉತ್ಪನ್ನಗಳನ್ನು ಜಾಗತಿಕ ಕೃತಕ ಬುದ್ಧಿಮತ್ತೆ ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸಿದವು

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಜಾಗತಿಕ ಪಾಲುದಾರಿಕೆ(ಜಿಪಿಎಐ) ಕೂಟಕ್ಕೆ  ಹೊಸದಾಗಿ ಆಯ್ಕೆಯಾದ ಭಾರತವು ಮುಂಚೂಣಿಯಲ್ಲಿದೆ. 2023 ಡಿಸೆಂಬರ್ 12-14ರ ವರೆಗೆ ನವದೆಹಲಿಯಲ್ಲಿ ವಾರ್ಷಿಕ ಜಿಪಿಎಐ ಶೃಂಗಸಭೆ ಆಯೋಜಿಸಿತ್ತು. ಜಿಪಿಎಐ ಶೃಂಗಸಭೆಯು 28 ಸದಸ್ಯ ರಾಷ್ಟ್ರಗಳು ಮತ್ತು ಯುರೋಪಿಯನ್ ಒಕ್ಕೂಟದ ಪ್ರತಿನಿಧಿಗಳನ್ನು ಒಗ್ಗೂಡಿಸಲು ಪ್ರಾರಂಭಿಸಿತು, ಕೃತಕ ಬುದ್ಧಿಮತ್ತೆ(ಎಐ)ಯಲ್ಲಿ ನಿರಂತರವಾಗಿ ವಿಕಸನಗೊಳ್ಳುತ್ತಿರುವ ಭೂದೃಶ್ಯವನ್ನು ರೂಪಿಸುವ ತುರ್ತು ವಿಷಯಗಳ ಕುರಿತು ಆಳವಾದ ಚರ್ಚೆಗಳಿಗೆ ಇದು ಅಸಾಧಾರಣ ವೇದಿಕೆ ಒದಗಿಸಿತು.

ಜಿಪಿಎಐ ಶೃಂಗಸಭೆಸಮಯದಲ್ಲಿ ಸಾಧಿಸಲಾದ ಪ್ರಮುಖ ಫಲಿತಾಂಶಗಳು ಈ ಕೆಳಗಿನಂತಿವೆ:

1. ಜಿಪಿಎಐ ನವದೆಹಲಿ ಘೋಷಣೆಯು ಜಿಪಿಎಐ ಸದಸ್ಯರಲ್ಲಿ ಸುರಕ್ಷಿತ, ಸಂರಕ್ಷಿತ ಮತ್ತು ವಿಶ್ವಾಸಾರ್ಹ ಎಐ ಮತ್ತು ಜಿಪಿಎಐ ಯೋಜನೆಗಳ ಸುಸ್ಥಿರತೆ ಬೆಂಬಲಿಸುವ ಬದ್ಧತೆಯನ್ನು ಮುನ್ನಡೆಸುವ ಕುರಿತು ಒಮ್ಮತ ನಿರ್ಮಿಸಿದೆ.

2. ಎಐಯ ನೈತಿಕ ಬಳಕೆಗಾಗಿ ಜಾಗತಿಕ ಮಾರ್ಗಸೂಚಿ ಸಿದ್ಧಪಡಿಸಲು ಒಟ್ಟಾಗಿ ಕೆಲಸ ಮಾಡಲು ಪ್ರಧಾನ ಮಂತ್ರಿ ಅವರು ಸ್ಪಷ್ಟವಾದ ಕರೆ ನೀಡಿದರು.

3. ಎಐ ಪ್ರತಿಭೆ ಮತ್ತು ಎಐ-ಸಂಬಂಧಿತ ವಿಚಾರಗಳ ಕ್ಷೇತ್ರದಲ್ಲಿ ಭಾರತವು ಪ್ರಮುಖ ಪಾಲುದಾರ ಎಂದು ಬೆಳಕು ಚೆಲ್ಲಲಾಗಿದೆ.

4. ಎಐ ಆವಿಷ್ಕಾರಕ್ಕಾಗಿ ಭಾರತವು ಜಾಗತಿಕ ಕೇಂದ್ರವಾಗಿ ಹೊಳೆಯುತ್ತಿದೆ.

5. ಜಿಪಿಎಐ ನವದೆಹಲಿ ಶೃಂಗಸಭೆಯ ಒಂದು ಸಮಾರಂಭದಲ್ಲಿ ಭಾರತವು ಎಐಗಾಗಿ ಎಲ್ಲಾ ಪ್ರಮುಖ ಉಪಕ್ರಮಗಳನ್ನು ಒಟ್ಟುಗೂಡಿಸಿತು - ವಿಶ್ವಸಂಸ್ಥೆಯ ಸಲಹಾ ಗುಂಪು ಎಐ, ಯುಕೆ ಎಐ ಸುರಕ್ಷತಾ ಶೃಂಗಸಭೆ ಇದರಲ್ಲಿ ಸೇರಿವೆ.

6. ಎಐ ರಿಸರ್ಚ್ ಅನಾಲಿಟಿಕ್ಸ್ ಮತ್ತು ಜ್ಞಾನ ಪ್ರಸರಣ ವೇದಿಕೆ(AIRAWAT) ಮತ್ತು ಕೃತಕ ಬುದ್ಧಿಮತ್ತೆಯ ರಾಷ್ಟ್ರೀಯ ಕಾರ್ಯಕ್ರಮ ಮತ್ತು ಭಾರತದಲ್ಲಿ ಎಐ ಪರಿಸರ ವ್ಯವಸ್ಥೆ ರೂಪಿಸುವಲ್ಲಿ ಅದರ ಪಾತ್ರವನ್ನು ಪ್ರಮುಖವಾಗಿ ಒತ್ತಿಹೇಳಲಾಗಿದೆ.

7. ಸಂಶೋಧನಾ ಸಮುದಾಯಕ್ಕೆ ಅವರ ಮುಖ್ಯ ಮತ್ತು ಅನ್ವಯಿಕ ಸಂಶೋಧನೆಗಳನ್ನು ಪ್ರದರ್ಶಿಸಲು ವೇದಿಕೆ ಒದಗಿಸಲಾಗಿದೆ.

8. ಸ್ಟಾರ್ಟಪ್ ಸಮುದಾಯಕ್ಕೆ ತಮ್ಮ ಎಐ ಉತ್ಪನ್ನಗಳು ಮತ್ತು ಸೇವೆಗಳನ್ನು ಎಕ್ಸ್‌ಪೋದಲ್ಲಿ ಪ್ರದರ್ಶಿಸಲು ಅವಕಾಶ ಒದಗಿಸಲಾಗಿದೆ.

9. ಎಐ ಪಿಚ್ ಫೆಸ್ಟ್ ಮುಂಬರುವ ಸ್ಟಾರ್ಟಪ್‌ಗಳಿಗೆ ತಮ್ಮ ನಾವೀನ್ಯತೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲು ಅವಕಾಶ  ಒದಗಿಸಿದೆ.

10. ಶೃಂಗಸಭೆಯು ಜನಸಾಮಾನ್ಯರಲ್ಲಿ ವಿಶೇಷವಾಗಿ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಎಐ ಬಳಸಲು ಇರುವ ಬಹು-ಪಾಲುದಾರರ ಕಾರ್ಯವಿಧಾನವನ್ನು ಪ್ರದರ್ಶಿಸಿತು. ತಂತ್ರಜ್ಞಾನ, ನೀತಿ, ಮಾರ್ಗಸೂಚಿ, ಕೈಗಾರಿಕಾ, ನೈತಿಕತೆ, ವ್ಯಾಪಾರ ಮತ್ತು ಶೈಕ್ಷಣಿಕ ದೃಷ್ಟಿಕೋನಗಳಿಂದ ಎಐನ ಇತ್ತೀಚಿನ ಪ್ರಗತಿಗಳನ್ನು ಎತ್ತಿ ತೋರಿಸಿದೆ.

2023 ಜನವರಿಯಲ್ಲಿ ನಡೆದ ಮೊದಲ ಇಂಡಿಯಾ ಸ್ಟಾಕ್ ಡೆವಲಪರ್ ಸಮ್ಮೇಳನ

ಮೊದಲ ಇಂಡಿಯಾ ಸ್ಟಾಕ್ ಡೆವಲಪರ್ ಸಮ್ಮೇಳನವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಸಿಎಕ್ಸ್ಒ/ಎಂಡಿ/ಸ್ಥಾಪಕ ಮಟ್ಟದಲ್ಲಿ ಕೈಗಾರಿಕಾ ಒಕ್ಕೂಟಗಳು,  ಉದ್ಯಮ, ಸಿಸ್ಟಮ್ ಇಂಟಿಗ್ರೇಟರ್‌ಗಳು ಮತ್ತು ಸ್ಟಾರ್ಟಪ್‌ಗಳಿಂದ 100+ ಡಿಜಿಟಲ್ ನಾಯಕರು ಭಾಗವಹಿಸಿದ್ದರು. ಕಾರ್ಯಕ್ರಮವು ಜ-20 ದೇಶಗಳ ಪ್ರತಿನಿಧಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.

ಶ್ರೀ ರಾಜೀವ್ ಚಂದ್ರಶೇಖರ್ ಅವರು ತಮ್ಮ ಭಾಷಣದಲ್ಲಿ, ಸಮ್ಮೇಳನದ ಉದ್ದೇಶವು ಇಂಡಿಯಾ ಸ್ಟಾಕ್-ಅನ್ನು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳಲು ಮತ್ತು ಸಂಯೋಜಿಸಲು ಉತ್ಸುಕರಾಗಿರುವ ದೇಶಗಳಿಗೆ ಪ್ರವೇಶ ಮತ್ತು ಅಳವಡಿಕೆ ಹೆಚ್ಚಿಸುವುದಾಗಿದೆ. ಮುಂದಿನ ಪೀಳಿಗೆಯ ನಾವೀನ್ಯತೆಯಲ್ಲಿ ಅದರ ಸುತ್ತಲೂ ಕೆಲಸ ಮಾಡುವ ಸಿಸ್ಟಮ್ ಇಂಟಿಗ್ರೇಟರ್‌ಗಳು, ಸ್ಟಾರ್ಟಪ್‌ಗಳು ಮತ್ತು ಡೆವಲಪರ್‌ಗಳಿಗೆ ಸದೃಢವಾದ ಪರಿಸರ ವ್ಯವಸ್ಥೆ ರಚಿಸುವುದಾಗಿದೆ. "ಒಂದು ರಾಷ್ಟ್ರವಾಗಿ ನಮ್ಮ ಧ್ಯೇಯವೆಂದರೆ, ಇಂಡಿಯಾ ಸ್ಟಾಕ್ ಅಥವಾ ಸ್ಟಾಕ್‌ನ ಭಾಗವನ್ನು ಆವಿಷ್ಕರಿಸಲು ಮತ್ತು ಡಿಜಿಟಲ್ ರೂಪಾಂತರವನ್ನು ಮತ್ತಷ್ಟು ಸಂಯೋಜಿಸಲು, ಕಾರ್ಯಗತಗೊಳಿಸಲು ಬಯಸುವ ವಿಶ್ವದಾದ್ಯಂತದ ಉದ್ಯಮಗಳು ಮತ್ತು ದೇಶಗಳಿಗೆ ಅವಕಾಶ ನೀಡುವುದಾಗಿದೆ ಎಂದು ಸಚಿವರು ಹೇಳಿದರು.

ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಕಡಿಮೆ ಮೌಲ್ಯದ ಭಿಮ್-ಯುಪಿಐ ವಹಿವಾಟುಗಳ ಪ್ರಚಾರಕ್ಕಾಗಿ ಪ್ರೋತ್ಸಾಹಕ ಯೋಜನೆಯನ್ನು ಕೇಂದ್ರ ಸಚಿವ ಸಂಪುಟ ಸಭೆ ಅನುಮೋದಿಸಿದೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು, 2022 ಏಪ್ರಿಲ್  ನಿಂದ 1 ವರ್ಷದ ಅವಧಿಗೆ ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಕಡಿಮೆ ಮೌಲ್ಯದ ಭಿಮ್-ಯುಪಿಐ ವಹಿವಾಟುಗಳಿಗೆ (ವ್ಯಕ್ತಿಯಿಂದ ವ್ಯಾಪಾರಿವರೆಗೆ) ಪ್ರೋತ್ಸಾಹಕ ಯೋಜನೆಯನ್ನು ಅನುಮೋದಿಸಿದೆ.

2022-23 ಆರ್ಥಿಕ ಸಾಲಿನಲ್ಲಿ ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಕಡಿಮೆ ಮೌಲ್ಯದ ಬಭಿಮ್-ಯುಪಿಐ ವಹಿವಾಟುಗಳ (ಪಿ2ಎಂ) ಪ್ರಚಾರಕ್ಕಾಗಿ ಅನುಮೋದಿತ ಪ್ರೋತ್ಸಾಹಕ ಯೋಜನೆಯು 2,600 ಕೋಟಿ ರೂ. ಹಣಕಾಸಿನ ವೆಚ್ಚ ಹೊಂದಿದೆ. ಈ ಯೋಜನೆಯ ಅಡಿ, ಹಿಂದಿನ ಹಣಕಾಸು ವರ್ಷ 2022-23ಕ್ಕಾಗಿ ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಕಡಿಮೆ-ಮೌಲ್ಯದ ಭಿಮ್-ಯುಪಿಐ ವಹಿವಾಟುಗಳನ್ನು (ಪಿ2ಎಂ) ಬಳಸಿಕೊಂಡು ಪಾಯಿಂಟ್-ಆಫ್-ಸೇಲ್(ಪಿಒಎಸ್) ಮತ್ತು ಇ-ಕಾಮರ್ಸ್ ವಹಿವಾಟುಗಳನ್ನು ಉತ್ತೇಜಿಸಲು ಬ್ಯಾಂಕುಗಳಿಗೆ ಆರ್ಥಿಕ ಪ್ರೋತ್ಸಾಹ ನೀಡಲಾಗಿದೆ.

ಹಣಕಾಸು ಸಚಿವರು 2022-23ರ ಆರ್ಥಿಕ ಸಾಲಿನ ಬಜೆಟ್‌ ಭಾಷಣದಲ್ಲಿ, ಹಿಂದಿನ ಬಜೆಟ್‌ನಲ್ಲಿ ಘೋಷಿಸಲಾದ ಡಿಜಿಟಲ್ ಪಾವತಿಗಳಿಗೆ ಆರ್ಥಿಕ ಬೆಂಬಲ ಮುಂದುವರಿಸುವ ಸರ್ಕಾರದ ಉದ್ದೇಶವನ್ನು ಘೋಷಿಸಿದರು, ಆರ್ಥಿಕ ಮತ್ತು ಬಳಕೆದಾರಸ್ನೇಹಿ ಪಾವತಿ ವೇದಿಕೆಗಳ ಬಳಕೆಯನ್ನು ಉತ್ತೇಜಿಸುವತ್ತ ಗಮನ ಹರಿಸಿದ್ದಾರೆ. ಮೇಲಿನ ಬಜೆಟ್ ಘೋಷಣೆಗೆ ಅನುಗುಣವಾಗಿ ಯೋಜನೆಯನ್ನು ರೂಪಿಸಲಾಗಿದೆ.

2021-22ರ ಆರ್ಥಿಕ ಸಾಲಿನಲ್ಲಿ, ಡಿಜಿಟಲ್ ವಹಿವಾಟುಗಳಿಗೆ ಮತ್ತಷ್ಟು ಉತ್ತೇಜನ ನೀಡಲು 2021-22ರ ಬಜೆಟ್ ಘೋಷಣೆಗೆ ಅನುಗುಣವಾಗಿ ಪ್ರೋತ್ಸಾಹಕ ಯೋಜನೆಯನ್ನು ಸರ್ಕಾರ ಅನುಮೋದಿಸಿತ್ತು. ಇದರ ಪರಿಣಾಮವಾಗಿ, ಒಟ್ಟು ಡಿಜಿಟಲ್ ಪಾವತಿ ವಹಿವಾಟುಗಳು ವರ್ಷದಿಂದ ವರ್ಷಕ್ಕೆ 59%ರಷ್ಟು ಬೆಳವಣಿಗೆ ದಾಖಲಿಸಿವೆ, 2020-21ರಲ್ಲಿ 5,554 ಕೋಟಿ ರೂ.ನಿಂದ 2021-22ರಲ್ಲಿ 8,840 ಕೋಟಿ ರೂ.ಗೆ ಏರಿಕೆಯಾಗಿದೆ. ಭಿಮ್-ಯುಪಿಐ ವಹಿವಾಟುಗಳು ವರ್ಷದಿಂದ ವರ್ಷಕ್ಕೆ 106% ಬೆಳವಣಿಗೆ ದಾಖಲಿಸಿವೆ, 2020-21ರಲ್ಲಿ 2,233 ಕೋಟಿ ರೂ.ನಿಂದ 2021-22ರಲ್ಲಿ 4,597 ಕೋಟಿ ರೂ.ಗೆ ಏರಿಕೆಯಾಗಿದೆ.

ಯುಐಡಿಎಐ 5 ಕೇಂದ್ರೀಕೃತ ಕ್ಷೇತ್ರಗಳ ಬಗ್ಗೆ ಚರ್ಚಿಸಿದೆ. ಇದರಲ್ಲಿ ನಿವಾಸಿ(ರೆಸಿಡೆಂಟ್) ಕೇಂದ್ರೀಕೃತ ಮತ್ತು 'ಸುಲಭವಾಗಿ ಬದುಕು ನಡೆಸುವುದು'

ವಯಸ್ಕ ಜನಸಂಖ್ಯೆಯಲ್ಲಿ ಆಧಾರ್ ಶುದ್ಧತ್ವವು ಸಾರ್ವತ್ರಿಕವಾಗಿ ತಲುಪಿರುವುದರಿಂದ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ)ವು ನಿವಾಸಿಗಳಿಗೆ ಅವರ ದೈನಂದಿನ ಜೀವನದಲ್ಲಿ ನಿರಂತರ ಬೆಂಬಲ ನೀಡಲು, ದತ್ತಾಂಶ ಸುರಕ್ಷತೆಯನ್ನು ಇನ್ನಷ್ಟು ಹೆಚ್ಚಿಸಲು ಮತ್ತು ಉತ್ತಮ ಆಡಳಿತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ  ವಹಿಸಲು ಅದು 5 ಪ್ರಮುಖ ಕ್ಷೇತ್ರಗಳಲ್ಲಿ ಕೆಲಸ ಮಾಡಲು ನಿರ್ಧರಿಸಿದೆ.

5 ಪ್ರಮುಖ ಕ್ಷೇತ್ರಗಳೆಂದರೆ - ನಿವಾಸಿ ಕೇಂದ್ರಿಕೃತತೆ, ಆಧಾರ್‌ನ ವಿಸ್ತರಣೆಯ ಬಳಕೆ, ಭದ್ರತೆ ಮತ್ತು ಗೌಪ್ಯತೆ, ನಿರಂತರ ತಂತ್ರಜ್ಞಾನದ ನವೀಕರಣ ಮತ್ತು ಜಾಗತಿಕ ಆರ್ಥಿಕತೆಗಳೊಂದಿಗೆ ಸಹಯೋಗ ಮತ್ತು ಎಸ್ ಡಿಜಿ 16.9 (ಎಲ್ಲರಿಗೂ ಕಾನೂನು ಗುರುತು ಒದಗಿಸುವುದು) ಸಾಧಿಸುವ ಅವರ ಆಕಾಂಕ್ಷೆಯಲ್ಲಿ ಅವರನ್ನು ಬೆಂಬಲಿಸುವುದು. ಕೆವಾಡಿಯಾ (ಗುಜರಾತ್) ನಲ್ಲಿ ನಡೆದ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಅಧಿವೇಶನದಲ್ಲಿ ಈ 5 ಕೇಂದ್ರೀಕೃತ ಕ್ಷೇತ್ರಗಳ ಬಗ್ಗೆ ಚರ್ಚಿಸಲಾಯಿತು. ಯುಐಡಿಎಐ ಸಿಇಒ ಡಾ ಸೌರಭ್ ಗಾರ್ಗ್ ಅವರು ನಿವಾಸಿಗಳ ಸೌಕರ್ಯವನ್ನು ಸುಧಾರಿಸುವಲ್ಲಿ ನಿವಾಸಿಗಳನ್ನು ಹೇಗೆ ಬೆಂಬಲಿಸಬೇಕು ಮತ್ತು ಸೇವೆಗಳನ್ನು ಪಡೆಯುವಲ್ಲಿ ಅವರ ಅನುಭವವನ್ನು ಉತ್ತಮಗೊಳಿಸುವುದು ಹೇಗೆ ಎಂಬುದರ ಕುರಿತು ನಿರಂತರವಾಗಿ ಗಮನ ಹರಿಸುತ್ತಾರೆ.

ಸದೃಢ ಫಿಂಗರ್‌ಪ್ರಿಂಟ್ ಆಧಾರಿತ ಆಧಾರ್ ದೃಢೀಕರಣಕ್ಕಾಗಿ ಯುಐಡಿಎಐ, ಹೊಸ ಭದ್ರತಾ ಕಾರ್ಯವಿಧಾನವನ್ನು ಹೊರತಂದಿದೆ

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಅಡಿ, ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) 2023 ಫೆಬ್ರವರಿಯಲ್ಲಿ ಆಧಾರ್ ಆಧಾರಿತ ಫಿಂಗರ್‌ಪ್ರಿಂಟ್ ದೃಢೀಕರಣ ಮತ್ತು ವಂಚನೆಯ ಪ್ರಯತ್ನಗಳನ್ನು ವೇಗವಾಗಿ ಪತ್ತೆ ಹಚ್ಚಲು ಹೊಸ ಭದ್ರತಾ ಕಾರ್ಯವಿಧಾನವನ್ನು ಯಶಸ್ವಿಯಾಗಿ ಹೊರತಂದಿದೆ. ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ (AI/ML ) ತಂತ್ರಜ್ಞಾನದಿಂದ ಆಂತರಿಕವಾಗಿ ಅಭಿವೃದ್ಧಿಪಡಿಸಲಾದ ಭದ್ರತಾ ಕಾರ್ಯವಿಧಾನವು ಇದೀಗ ಸೆರೆಹಿಡಿಯಲಾದ ಫಿಂಗರ್ ಪ್ರಿಂಟ್‌ನ ಜೀವಂತತೆಯನ್ನು ಪರಿಶೀಲಿಸಲು ಫಿಂಗರ್ ಮಿನಿಟಿಯಾ ಮತ್ತು ಫಿಂಗರ್ ಇಮೇಜ್ ಎರಡರ ಸಂಯೋಜನೆಯನ್ನು ಬಳಸುತ್ತಿದೆ. ಇದು ಆಧಾರ್ ದೃಢೀಕರಣ ವಹಿವಾಟುಗಳನ್ನು ಇನ್ನಷ್ಟು ಸದೃಢವಾಗಿಸುತ್ತಿದೆ ಮತ್ತು ಸುರಕ್ಷಿತವಾಗಿಸುತ್ತಿದೆ.

ಹೊಸ 2 ಅಂಶ/ಪದರದ ದೃಢೀಕರಣವು ಫಿಂಗರ್‌ಪ್ರಿಂಟ್‌ನ ನೈಜತೆಯನ್ನು (ಲೈವ್‌ನೆಸ್) ಮೌಲ್ಯೀಕರಿಸಲು ಆಡ್-ಆನ್ ಚೆಕ್‌ಗಳನ್ನು ಸೇರಿಸುತ್ತಿದೆ, ಇದರಿಂದಾಗಿ ವಂಚನೆಯ ಪ್ರಯತ್ನಗಳ ಸಾಧ್ಯತೆಗಳನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.

ಈ ಕ್ರಮವು ಬ್ಯಾಂಕಿಂಗ್ ಮತ್ತು ಹಣಕಾಸು, ಟೆಲಿಕಾಂ ಮತ್ತು ಸರ್ಕಾರಿ ವಲಯಗಳು ಸೇರಿದಂತೆ ವಿವಿಧ ವಲಯಗಳಲ್ಲಿ ಅಪಾರ ಬಳಕೆಯನ್ನು ಹೊಂದಿದೆ. ಇದು ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ. ನಿರ್ಲಜ್ಜ ಅಂಶಗಳ ದುರುದ್ದೇಶಪೂರಿತ ಪ್ರಯತ್ನಗಳನ್ನು ತಡೆಯುವುದರಿಂದ ಇದು ಎಲ್ಲ ವಲಯಗಳಿಗೂ ಪ್ರಯೋಜನಗಳನ್ನು ನೀಡುತ್ತದೆ. ಹೊಸ ವ್ಯವಸ್ಥೆಯೊಂದಿಗೆ, ಕೇವಲ ಫಿಂಗರ್ ಇಮೇಜ್ ಅಥವಾ ಕೇವಲ ಫಿಂಗರ್ ಮಿನಿಟಿಯಾ ಆಧಾರಿತ ಆಧಾರ್ ದೃಢೀಕರಣವು ದೃಢವಾದ 2 ಅಂಶಗಳ ದೃಢೀಕರಣಕ್ಕೆ ದಾರಿ ಮಾಡಿಕೊಟ್ಟಿದೆ. ಹಾಗಾಗಿ, ಇದು ಎಲ್ಲಾ ಪಾಲುದಾರರಿಗೆ ಗೆಲುವು ಗೆಲುವಿನ ಪರಿಸ್ಥಿತಿ ತಂದಿದೆ.

ಭಾರತವು 2023 ಫೆಬ್ರವರಿ 13ರಿಂದ 15ರ ವರೆಗೆ ಲಕ್ನೋದಲ್ಲಿ ಜಿ-20 ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್‌ನ ಮೊದಲ ಸಭೆಯನ್ನು ಯಶಸ್ವಿಯಾಗಿ ಆಯೋಜಿಸಿತು.

ಭಾರತದ ಮೊದಲ ಜಿ-20 ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್ (DEWG) ಸಭೆಯು 2023 ಫೆಬ್ರವರಿಯಲ್ಲಿ ಮುಕ್ತಾಯಗೊಂಡಿತು. ಭವಿಷ್ಯದ DEWG ಸಭೆಗಳಿಗೆ ಫಲಪ್ರದ ಮತ್ತು ಅರ್ಥಪೂರ್ಣ ಚರ್ಚೆಗಳಿಗೆ ಇದು ಧ್ವನಿ ಹೊಂದಿಸಿದೆ. ಲಕ್ನೋದಲ್ಲಿ ನಡೆದ 3 ದಿನಗಳ ಸಭೆಯು ಭಾರತದ ಡಿಜಿಟಲ್ ಪರಿವರ್ತನೆಯ ಪ್ರಯಾಣವನ್ನು ಪ್ರದರ್ಶಿಸಿತು. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಕೌಶಲ್ಯವನ್ನು ಚರ್ಚಿಸಲು ಜಿ-20 ಸದಸ್ಯ ರಾಷ್ಟ್ರಗಳು, ಪ್ರಮುಖ ಜ್ಞಾನ ಪಾಲುದಾರರು ಮತ್ತು ಅತಿಥಿ ರಾಷ್ಟ್ರಗಳನ್ನು ಒಟ್ಟುಗೂಡಿಸಿತು.

ಉದ್ಘಾಟನಾ ದಿನವು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಎಂಎಸ್ಎಂಇಗಳಿಗೆ ಸೈಬರ್ ಸುರಕ್ಷತೆ ಪರಿಹಾರಗಳು, ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಜಿಯೋಸ್ಪೇಷಿಯಲ್ ತಂತ್ರಜ್ಞಾನಗಳ ಬಳಕೆಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಒಳಗೊಂಡಿರುವ 5 ಕಾರ್ಯಾಗಾರಗಳಿಂದ ಪ್ರದರ್ಶಿಸಲ್ಪಟ್ಟಿದೆ. ಹೆಚ್ಚುವರಿಯಾಗಿ, ಸಭೆಯಲ್ಲಿ ಉತ್ತರ ಪ್ರದೇಶ ರಾಜ್ಯದ ಡಿಜಿಟಲ್ ಉಪಕ್ರಮಗಳನ್ನು ಪ್ರದರ್ಶಿಸಲಾಯಿತು. 2ನೇ ದಿನದಂದು DEWG ಸಭೆಯು ಭಾರತದ ಜಿ-20 ಶೆರ್ಪಾ ಶೃಂಗವು ಶ್ರೀ ಅಮಿತಾಭ್ ಕಾಂತ್ ಅವರ ಪ್ರಮುಖ ಭಾಷಣದೊಂದಿಗೆ ಪ್ರಾರಂಭವಾಯಿತು, ನಂತರ ಒಳನೋಟವುಳ್ಳ ಪ್ರಸ್ತುತಿಗಳು ಮತ್ತು ಪ್ರತಿನಿಧಿಗಳ ಸಂವಾದಗಳಿಗೆ ಸಾಕ್ಷಿಯಾಯಿತು.  ತರುವಾಯ, ಪ್ರತಿನಿಧಿಗಳು 2 ಆದ್ಯತೆಯ ಕ್ಷೇತ್ರಗಳ ಬಗ್ಗೆ ಚರ್ಚಿಸಿದರು. ಅವುಗಳೆಂದರೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಸೈಬರ್ ಭದ್ರತೆ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಹೆಚ್ಚಿನ ಹಂಚಿಕೆಯ ತಿಳುವಳಿಕೆಗಾಗಿ ನಂತರದ ಕಾರ್ಯ ಗುಂಪು ಸಭೆಗಳಲ್ಲಿ ಹೆಚ್ಚಿನ ಚರ್ಚೆಗಳಿಗೆ ತಮ್ಮ ಇಚ್ಛೆ ವ್ಯಕ್ತಪಡಿಸಿದರು.

ದಿನದ ದ್ವಿತೀಯಾರ್ಧದಲ್ಲಿ, ಪ್ರತಿನಿಧಿಗಳು ಬಾರಾ ಇಮಾಂಬರಾಕ್ಕೆ ವಿಹಾರ ಕೈಗೊಂಡರು.ಇದು ವಾಸ್ತುಶಿಲ್ಪದ ಮೇರುಕೃತಿ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಐತಿಹಾಸಿಕ ಸ್ಮಾರಕವಾಗಿದೆ. ಪ್ರತಿನಿಧಿಗಳಿಗೆ ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಆನಂದಿಸಲು ಇದು ಪರಿಪೂರ್ಣ ತಾಣವಾಗಿದೆ. ಎಲ್ಲರಿಗೂ ಮಾಂತ್ರಿಕ ಮತ್ತು ಸ್ಮರಣೀಯ ವಾತಾವರಣ ಸೃಷ್ಟಿಸುವ ಧ್ವನಿ, ಬೆಳಕು ಮತ್ತು ನೃತ್ಯ ಕಾರ್ಯಕ್ರಮಗಳೊಂದಿಗೆ ದಿನವು ಉನ್ನತ ಮಟ್ಟದಲ್ಲಿ ಕೊನೆಗೊಂಡಿತು. ಅಂತಿಮ ಮತ್ತು 3ನೇ ದಿನದ ಸಭೆಯು ಡಿಜಿಟಲ್ ಕೌಶಲ್ಯದ ಆದ್ಯತೆಗೆ ಗಮನ ಕೇಂದ್ರೀಕೃತವಾಗಿತ್ತು. ಡಿಜಿಟಲ್ ನುರಿತ ಭವಿಷ್ಯದ ಸಿದ್ಧ ಉದ್ಯೋಗಿಗಳಿಗೆ ಭಾರತವು ಕಾರ್ಯವಿಧಾನಗಳನ್ನು ಪ್ರಸ್ತಾಪಿಸಿದೆ. ಸದಸ್ಯ ರಾಷ್ಟ್ರಗಳು DEWG ಕಾರ್ಯಸೂಚಿಯಲ್ಲಿ ಡಿಜಿಟಲ್ ಕೌಶಲ್ಯ ಸೇರಿಸುವುದನ್ನು ಶ್ಲಾಘಿಸಿದವು. ಭಾರತದ ಪ್ರಸ್ತಾವಿತ ಆದ್ಯತೆಯ ಕ್ಷೇತ್ರಗಳನ್ನು ವಿಶಾಲವಾಗಿ ಬೆಂಬಲಿಸಿದವು. ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ (ಡಿಪಿಐ), ಡಿಜಿಟಲ್ ಎಕಾನಮಿಯಲ್ಲಿ ಸೈಬರ್ ಸೆಕ್ಯುರಿಟಿ ಮತ್ತು ಡಿಜಿಟಲ್ ಕೌಶಲ್ಯ ಎಂಬ 3 ಪ್ರಮುಖ ಆದ್ಯತೆಯ ಕ್ಷೇತ್ರಗಳ ಕುರಿತು ಸಾರಾಂಶ ಚರ್ಚೆಗಳನ್ನು ಸಹ ನಡೆಸಲಾಯಿತು.

ಲಕ್ಷಾಂತರ ನಿವಾಸಿಗಳಿಗೆ ಪ್ರಯೋಜನವಾಗುವಂತೆ ಯುಐಡಿಎಐ, ಆಧಾರ್‌ನಲ್ಲಿ ಆನ್‌ಲೈನ್ ಡಾಕ್ಯುಮೆಂಟ್ ನವೀಕರಣವನ್ನು ಉಚಿತವಾಗಿ ಮಾಡುತ್ತದೆ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) 2023 ಮಾರ್ಚ್ ನಲ್ಲಿ ತಮ್ಮ ಆಧಾರ್ ಆನ್‌ಲೈನ್‌ನಲ್ಲಿ ದಾಖಲೆಗಳನ್ನು ಉಚಿತವಾಗಿ ನವೀಕರಿಸಲು ಅವಕಾಶ ನೀಡಲು ನಿರ್ಧರಿಸಿದೆ, ಇದು ಲಕ್ಷಾಂತರ ನಿವಾಸಿಗಳಿಗೆ ಪ್ರಯೋಜನ ನೀಡುತ್ತದೆ.

ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ಯುಐಡಿಎಐ, ಈ ನಿರ್ಧಾರ ತೆಗೆದುಕೊಂಡಿದೆ. ಮೈಆಧಾರ್ ಪೋರ್ಟಲ್‌ನಲ್ಲಿ ಉಚಿತ ಡಾಕ್ಯುಮೆಂಟ್ ಅಪ್‌ಡೇಟ್ ಸೌಲಭ್ಯದ ಪ್ರಯೋಜನ ಪಡೆಯಲು ನಿವಾಸಿಗಳನ್ನು ಒತ್ತಾಯಿಸಲಾಗಿದೆ. 3 ತಿಂಗಳವರೆಗೆ, ಅಂದರೆ 2023 ಮಾರ್ಚ್ 15 ರಿಂದ ಜೂನ್ 14ರ ವರೆಗೆ ಉಚಿತ ಸೇವೆ ಲಭ್ಯವಿತ್ತು. ಈ ಸೇವೆಯು ಮೈಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಉಚಿತ. ಆದರೆ ಹಿಂದಿನ ಸಂದರ್ಭದಲ್ಲಿ ಇದ್ದಂತೆ, ಭೌತಿಕ ಆಧಾರ್ ಕೇಂದ್ರಗಳಲ್ಲಿ 50 ರೂ. ಶುಲ್ಕ ಪಡೆಯುವುದನ್ನು ಮುಂದುವರಿಯಲಿದೆ ಎಂಬುದನ್ನು ಗಮನಿಸುವುದು ಮುಖ್ಯ.  ನಿವಾಸಿಗಳು ತಮ್ಮ ಜನಸಂಖ್ಯಾ ವಿವರಗಳನ್ನು ಮರುಮೌಲ್ಯೀಕರಿಸಲು ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ (PoI/PoA) ದಾಖಲೆಗಳನ್ನು ಅಪ್‌ಲೋಡ್ ಮಾಡಲು ಯುಐಡಿಎಐ ಪ್ರೋತ್ಸಾಹಿಸುತ್ತಿದೆ, ವಿಶೇಷವಾಗಿ ಆಧಾರ್ ಅನ್ನು 10 ವರ್ಷಗಳ ಹಿಂದೆ ನೀಡಿದ್ದರೆ ಮತ್ತು ಎಂದಿಗೂ ನವೀಕರಿಸದಿದ್ದರೆ ಈ ಪ್ರೋತ್ಸಾಹ ಅನ್ವಯವಾಗುತ್ತದೆ. ಇದು ಸುಧಾರಿತ ಜೀವನಶೈಲಿಗೆ ಸಹಾಯ ಮಾಡುತ್ತದೆ, ಉತ್ತಮ ಸೇವೆ ವಿತರಣೆ ಮತ್ತು ದೃಢೀಕರಣದ ಯಶಸ್ಸಿನ ಪ್ರಮಾಣವನ್ನು ಹೆಚ್ಚಿಸುತ್ತದೆ.

14,903.25 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್ ಇಂಡಿಯಾ ಕಾರ್ಯಕ್ರಮ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಸರ್ಕಾರವು 2015 ಜುಲೈ ನಲ್ಲಿ ಡಿಜಿಟಲ್ ಇಂಡಿಯಾ ಕಾರ್ಯಕ್ರಮವನ್ನು 3 ಪ್ರಮುಖ ದೃಷ್ಟಿಕೋನಗಳೊಂದಿಗೆ ಪ್ರಾರಂಭಿಸಿತು, ಅವುಗಳೆಂದರೆ ಡಿಜಿಟಲ್ ಮೂಲಸೌಕರ್ಯವು ಪ್ರತಿ ನಾಗರಿಕರಿಗೆ ಒಂದು ಪ್ರಮುಖ ಉಪಯುಕ್ತತೆಯಾಗಬೇಕು. ಆಡಳಿತ ಮತ್ತು ಬೇಡಿಕೆಯ ಸೇವೆಗಳು ಮತ್ತು ನಾಗರಿಕರ ಡಿಜಿಟಲ್ ಸಬಲೀಕರಣ ಸೇರಿದೆ. ಡಿಜಿಟಲ್ ತಂತ್ರಜ್ಞಾನಗಳು ಪ್ರತಿಯೊಬ್ಬ ನಾಗರಿಕನ ಜೀ ಸುಧಾರಿಸುವುದನ್ನು ಖಚಿತಪಡಿಸಿಕೊಳ್ಳುವುದು, ಭಾರತದ ಡಿಜಿಟಲ್ ಆರ್ಥಿಕತೆಯನ್ನು ವಿಸ್ತರಿಸುವುದು ಮತ್ತು ಹೂಡಿಕೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಒಟ್ಟಾರೆ ಗುರಿಯಾಗಿದೆ. ಪಾರದರ್ಶಕವಾಗಿ ಫಲಾನುಭವಿಗಳಿಗೆ ನೇರವಾಗಿ ಸೇವೆಗಳನ್ನು ತಲುಪಿಸಲು ಇದು ಸಹಾಯ ಮಾಡಿದೆ. ಈ ಪ್ರಕ್ರಿಯೆಯಲ್ಲಿ, ತನ್ನ ನಾಗರಿಕರ ಜೀವನ ಪರಿವರ್ತಿಸಲು ತಂತ್ರಜ್ಞಾನವನ್ನು ಬಳಸುವ ವಿಶ್ವದ ಅಗ್ರಗಣ್ಯ ರಾಷ್ಟ್ರಗಳಲ್ಲಿ ಭಾರತವು ಒಂದಾಗಿ ಹೊರಹೊಮ್ಮಿದೆ.

15ನೇ ಹಣಕಾಸು ಆಯೋಗದ ಅವಧಿಯಲ್ಲಿ ಅಂದರೆ 2021-22ರಿಂದ 2025-26ರ ವರೆಗೆ ಒಟ್ಟು 14,903.25 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ವಿಸ್ತರಣೆಯನ್ನು ಸರ್ಕಾರವು 2023 ಆಗಸ್ಟ್ ನಲ್ಲಿ ಅನುಮೋದಿಸಿತು.

ಕಾರ್ಯಕ್ರಮದ ವಿಸ್ತರಣೆಯು ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಹೊಂದಿದೆ:

ಫ್ಯೂಚರ್ ಸ್ಕಿಲ್ಸ್ ಪ್ರೈಮ್ ಕಾರ್ಯಕ್ರಮದಡಿ 6.25 ಲಕ್ಷ ಐಟಿ ವೃತ್ತಿಪರರನ್ನು ಮರು-ಕೌಶಲ್ಯ ಮತ್ತು ಕೌಶಲ್ಯ ಮೇಲ್ದರ್ಜೆಗೆ ಹೆಚ್ಚಿಸಲಾಗುವುದು.

  • 2.65 ಲಕ್ಷ ವ್ಯಕ್ತಿಗಳಿಗೆ ಮಾಹಿತಿ ಭದ್ರತೆ ಮತ್ತು ಶಿಕ್ಷಣ ಜಾಗೃತಿ ಹಂತ (ISEA) ಕಾರ್ಯಕ್ರಮದ ಅಡಿ, ಮಾಹಿತಿ ಭದ್ರತೆಯಲ್ಲಿ ತರಬೇತಿ ನೀಡಲಾಗುತ್ತದೆ. ಹೆಚ್ಚುವರಿಯಾಗಿ, 12 ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ವಿವಿಧ ಚಟುವಟಿಕೆಗಳ ಮೂಲಕ ಸೈಬರ್ ಅವೇರ್ ಡಿಜಿಟಲ್ ನಾಗರಿಕ್ ಘಟಕದ ಅಡಿ ಸೇರಿಸಲು ಯೋಜಿಸಲಾಗಿದೆ.
  • 540 ಹೆಚ್ಚುವರಿ ಸೇವೆಗಳು ಯುನಿಫೈಡ್ ಮೊಬೈಲ್ ಅಪ್ಲಿಕೇಶನ್ ಫಾರ್ ನ್ಯೂ-ಏಜ್ ಗವರ್ನೆನ್ಸ್(UMANG) ಅಪ್ಲಿಕೇಶನ್/ಪ್ಲಾಟ್‌ಫಾರ್ಮ್ ಅಡಿ ಲಭ್ಯವಿರುತ್ತವೆ. ಪ್ರಸ್ತುತ UMANGನಲ್ಲಿ 1,700 ಸೇವೆಗಳು ಈಗಾಗಲೇ ಲಭ್ಯವಿದೆ.
  • ರಾಷ್ಟ್ರೀಯ ಸೂಪರ್ ಕಂಪ್ಯೂಟರ್ ಮಿಷನ್ ಅಡಿ ಇನ್ನೂ 9 ಸೂಪರ್ ಕಂಪ್ಯೂಟರ್‌ಗಳನ್ನು ಸೇರಿಸಲಾಗುವುದು. ಇದು ಈಗಾಗಲೇ ನಿಯೋಜಿಸಲಾದ 18 ಸೂಪರ್‌ಕಂಪ್ಯೂಟರ್‌ಗಳಿಗೆ ಹೆಚ್ಚುವರಿಯಾಗಿದೆ.
  • ಭಾಷಿಣಿ ಎಐ-ಸಕ್ರಿಯಗೊಳಿಸಿದ ಬಹು-ಭಾಷಾ ಭಾಷಾಂತರ ಸಾಧನ (ಪ್ರಸ್ತುತ 10 ಭಾಷೆಗಳಲ್ಲಿ ಲಭ್ಯವಿದೆ) ಎಲ್ಲಾ 22 ವೇಳಾಪಟ್ಟಿ 8 ಭಾಷೆಗಳಲ್ಲಿ ಹೊರತರಲಾಗುವುದು.
  • 1,787 ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಜ್ಞಾನ ಜಾಲದ(NKN) ಆಧುನೀಕರಣ.
  • ಡಿಜಿಲಾಕರ್ ಅಡಿ ಡಿಜಿಟಲ್ ಡಾಕ್ಯುಮೆಂಟ್ ಪರಿಶೀಲನೆ ಸೌಲಭ್ಯವು ಈಗ ಎಂಎಸ್ಎಂಇಗಳು ಮತ್ತು ಇತರ ಕಾರ್ಪೊರೇಟ್‌ಗಳಿಗೆ ಲಭ್ಯವಿದೆ.
  • 1,200 ಸ್ಟಾರ್ಟಪ್‌ಗಳನ್ನು 2 ಮತ್ತು 3ನೇ ಶ್ರೇಣಿಯ ನಗರಗಳಲ್ಲಿ ಬೆಂಬಲಿಸಲಾಗುತ್ತದೆ.
  • ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರದೊಂದಿಗೆ ಉಪಕರಣಗಳ ಅಭಿವೃದ್ಧಿ ಮತ್ತು 200ಕ್ಕೂ ಹೆಚ್ಚು ಸೈಟ್‌ಗಳ ಏಕೀಕರಣ ಸೇರಿದಂತೆ ಸೈಬರ್ ಭದ್ರತೆಯ ಕ್ಷೇತ್ರದಲ್ಲಿ ಹೊಸ ಉಪಕ್ರಮಗಳು.

ಡಿಜಿಟಲೀಕರಣ ಮತ್ತು ಎಲೆಕ್ಟ್ರಾನಿಕ್ ಉತ್ಪಾದನಾ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಸೌದಿ ಅರೇಬಿಯಾ ನಡುವೆ ಸಹಿ ಹಾಕಲಾದ ಸಹಕಾರದ ಜ್ಞಾಪಕ ಪತ್ರಕ್ಕೆ ಸಂಪುಟ ಸಭೆ ಅನುಮೋದನೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಸೌದಿ ಅರೇಬಿಯಾದ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನಡುವೆ 2023 ಆಗಸ್ಟ್ 18 ರಂದು ಡಿಜಿಟಲೈಸೇಶನ್ ಮತ್ತು ಎಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಸಹಕಾರ ಹೊಂದುವ ಒಪ್ಪಂದ(MoC)ಕ್ಕೆ ಸಹಿ ಹಾಕಲಾಗಿದೆ.

ಸಹಕಾರದ ಜ್ಞಾಪಕ ಪತ್ರವು ಡಿಜಿಟಲೀಕರಣ, ಎಲೆಕ್ಟ್ರಾನಿಕ್ ಉತ್ಪಾದನೆ, ಇ-ಆಡಳಿತ, ಸ್ಮಾರ್ಟ್ ಮೂಲಸೌಕರ್ಯ, ಇ-ಆರೋಗ್ಯ ಮತ್ತು ಇ-ಶಿಕ್ಷಣ ಕ್ಷೇತ್ರದಲ್ಲಿ ಸಹಭಾಗಿತ್ವ  ಬಲಪಡಿಸುವ ಉದ್ದೇಶ ಹೊಂದಿದೆ. ಡಿಜಿಟಲ್ ಆವಿಷ್ಕಾರ ಸಂಶೋಧನೆಯಲ್ಲಿ ಪಾಲುದಾರಿಕೆ ಉತ್ತೇಜಿಸಲು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ(ಎಐ), ಇಂಟರ್ನೆಟ್ ಆಫ್ ಥಿಂಗ್ಸ್(ಐಒಟಿ), ರೋಬೋಟ್‌ಗಳು, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬ್ಲಾಕ್‌ಚೈನ್ ಇತ್ಯಾದಿ. ಈ ಸಹಕಾರ ಒಪ್ಪಂದವು ಡಿಜಿಟಲೀಕರಣ ಮತ್ತು ಎಲೆಕ್ಟ್ರಾನಿಕ್ ಉತ್ಪಾದನೆ ಕ್ಷೇತ್ರದಲ್ಲಿ ಸಹಕಾರದ ಮಾರ್ಗಸೂಚಿ ಸ್ಥಾಪಿಸುತ್ತದೆ. ಅಲ್ಲದೆ, ಭಾರತ ಮತ್ತು ಸೌದಿ ಅರೇಬಿಯಾ ನಡುವೆ ಪಾಲುದಾರಿಕೆ ಸ್ಥಾಪಿಸುತ್ತದೆ.

ಡಿಜಿಟಲೀಕರಣ ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಇ-ಬೋಧನೆ, ಇ-ಕಲಿಕೆ ಮತ್ತು ವಿನಿಮಯ ಕಾರ್ಯಕ್ರಮಗಳ ಮೂಲಕ ನವೀನ ತರಬೇತಿ ಮತ್ತು ಅಭಿವೃದ್ಧಿಯ ಮಾರ್ಗಗಳನ್ನು ಉತ್ತೇಜಿಸುವ ಗುರಿಯನ್ನು ಒಪ್ಪಂದ ಹೊಂದಿದೆ. ಸಾಮರ್ಥ್ಯ ವೃದ್ಧಿಗಾಗಿ ಜಂಟಿ ತರಬೇತಿ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಮತ್ತು ಹೆಚ್ಚು ನುರಿತ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವೃತ್ತಿಪರರಿಗೆ ಪ್ರವೇಶ ಕಲ್ಪಿಸುತ್ತದೆ. ಎಂಎಸ್ಎಂಇಗಳನ್ನು ಬಲಪಡಿಸುತ್ತದೆ. ಉದ್ಯಮ ವೇಗವರ್ಧಕಗಳು, ಸಾಹಸೋದ್ಯಮ ಬಂಡವಾಳ ಮತ್ತು ತಂತ್ರಜ್ಞಾನ ಸ್ಟಾರ್ಟಪ್‌ಗಳ ಪೋಷಣಾ ಕೇಂದ್ರಗಳು(ಇನ್ ಕ್ಯುಬೇಟರ್ ಗಳು) ಮಾಹಿತಿ ಹಂಚಿಕೊಳ್ಳುವ ಮೂಲಕ ಸ್ಟಾರ್ಟಪ್ ಪರಿಸರ ವ್ಯವಸ್ಥೆಯು ಪರೋಕ್ಷವಾಗಿ ಎರಡೂ ರಾಷ್ಟ್ರಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಗುಜರಾತ್‌ನ ಸನಂದ್‌ನಲ್ಲಿ ಮೈಕ್ರಾನ್‌ ಸೆಮಿಕಂಡಕ್ಟರ್ ಪ್ರಾಜೆಕ್ಟ್ ತ್ವರಿತ ಪ್ರಗತಿಯಲ್ಲಿದೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು 2023 ಜೂನ್  ನಲ್ಲಿ 22,516 ಕೋಟಿ ರೂ.(2.75 ಶತಕೋಟಿ ಡಾಲರ್) ಬಂಡವಾಳ ಹೂಡಿಕೆಯೊಂದಿಗೆ ಭಾರತದಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪಿಸುವ ಮೈಕ್ರಾನ್ ಪ್ರಸ್ತಾವನೆಯನ್ನು ಅನುಮೋದಿಸಿದೆ. 50 ಪ್ರತಿಶತ ಹಣಕಾಸಿನ ಬೆಂಬಲವನ್ನು ಸರಕಾರ ಒದಗಿಸಿದೆ. 2023 ಸೆಪ್ಟೆಂಬರ್ ನಲ್ಲಿ ಗುಜರಾತ್‌ನ ಸನಂದ್‌ನಲ್ಲಿರುವ ಘಟಕಕ್ಕೆ 3 ತಿಂಗಳೊಳಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.

ಘಟಕದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಸುಮಾರು 12 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಘಟಕದಲ್ಲಿ ತಯಾರಿಸಲಾದ ಮೆಮೊರಿ ಮತ್ತು ಶೇಖರಣಾ ಉತ್ಪನ್ನಗಳು ದೇಶೀಯ ಬಳಕೆಗೆ ಉತ್ಪನ್ನಗಳನ್ನು ಪೂರೈಸುವ ಜತೆಗೆ, ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡುತ್ತವೆ. ಈ ಘಟಕವು ಮುಂದಿನ 5 ವರ್ಷಗಳಲ್ಲಿ 5 ಸಾವಿರ ನೇರ ಮತ್ತು 15 ಸಾವಿರ ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಇಂಡಿಯಾ ಸೆಮಿಕಂಡಕ್ಟರ್ ಮಿಷನ್, ಗುಜರಾತ್ ಸರ್ಕಾರ ಮತ್ತು ಮೈಕ್ರಾನ್ ಸುಮಾರು 10 ಸಾವಿರ ಎಂಜಿನಿಯರ್‌ಗಳಿಗೆ ತರಬೇತಿ ನೀಡಲು ಶೈಕ್ಷಣಿಕ ಸಂಸ್ಥೆಗಳ ಜೊತೆ ನಿಕಟ ಸಹಯೋಗದೊಂದಿಗೆ ಕೆಲಸ ಮಾಡುತ್ತಿವೆ.

30ಕ್ಕೂ ಹೆಚ್ಚು ಅನಿಲಗಳು, ರಾಸಾಯನಿಕಗಳು, ಉಪಕರಣಗಳ ತಯಾರಿಕೆ ಮತ್ತು ಇತರ ಪೂರಕ ಕೈಗಾರಿಕೆಗಳ ಸೌಲಭ್ಯಗಳನ್ನು ಗುಜರಾತ್‌ನಲ್ಲಿ ಸ್ಥಾಪಿಸುವ ಪ್ರಸ್ತಾವನೆ ವಿವಿಧ ಹಂತಗಳ ಚರ್ಚೆಯಲ್ಲಿವೆ. ಪ್ರಾಜೆಕ್ಟ್ ಮೈಲಿಗಲ್ಲುಗಳನ್ನು ಸಮಯೋಚಿತವಾಗಿ ಪೂರೈಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವ ಒಪ್ಪಂದಗಳು ಮತ್ತು ಪ್ರೋತ್ಸಾಹಕಗಳ ವಿತರಣೆಗಾಗಿ ಮೈಕ್ರಾನ್, ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಮತ್ತು ಗುಜರಾತ್ ಸರ್ಕಾರದ ನಡುವೆ ಸಹಿ ಹಾಕಲಾಗಿದೆ. ಕೇಂದ್ರ ರೈಲ್ವೆ, ಸಂಪರ್ಕ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಶ್ರೀ ಅಶ್ವಿನಿ ವಿಷ್ಣವ್ ಅವರು ಗುಜರಾತ್ ಸರ್ಕಾರ, ಭಾರತ ಸರ್ಕಾರ ಮತ್ತು ಉದ್ಯಮದ ನಡುವಿನ ಸಮನ್ವಯ ಶ್ಲಾಘಿಸಿದರು. ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಸಂಪೂರ್ಣ ಬದ್ಧತೆ ಮತ್ತು ಅನುಕೂಲದ  ಭರವಸೆಯನ್ನು ಸಹ ಅವರು ನೀಡಿದರು.

ಐಟಿ ಹಾರ್ಡ್‌ವೇರ್‌ಗಾಗಿ ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆ - 2.0 ಅನ್ನು ಕೇಂದ್ರ ಸಂಪುಟ ಅನುಮೋದಿಸಿದೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 2023 ಮೇ ತಿಂಗಳಲ್ಲಿ ಐಟಿ ಹಾರ್ಡ್‌ವೇರ್‌ಗಾಗಿ ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆ(ಪಿಎಲ್ಐ) 2.0 ಅನ್ನು 17,000 ಕೋಟಿ ರೂ. ಬಜೆಟ್ ವೆಚ್ಚದೊಂದಿಗೆ ಅನುಮೋದಿಸಿತು.

ಪ್ರಮುಖ ಅಂಶಗಳು:

  • ಐಟಿ ಹಾರ್ಡ್‌ವೇರ್‌ಗಾಗಿ ಪಿಎಲ್‌ಐ ಯೋಜನೆ 2.0 ಅಡಿ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್ ಇನ್ ಒನ್ ಪಿಸಿಗಳು, ಸರ್ವರ್‌ಗಳು ಮತ್ತು ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಸಾಧನಗಳನ್ನು ಒಳಗೊಂಡಿವೆ.
  • ಯೋಜನೆಯ ಬಜೆಟ್ ವೆಚ್ಚ 17,000 ಕೋಟಿವು ರೂ. ಆಗಿದೆ.
  • ಈ ಯೋಜನೆಯ ಅವಧಿ 6 ವರ್ಷಗಳು
  • ನಿರೀಕ್ಷಿತ ಹೆಚ್ಚುತ್ತಿರುವ ಉತ್ಪಾದನೆ 3.35 ಲಕ್ಷ ಕೋಟಿ ರೂ.
  • ನಿರೀಕ್ಷಿತ ಹೆಚ್ಚುತ್ತಿರುವ ಹೂಡಿಕೆ 2,430 ಕೋಟಿ ರೂ.
  • ನಿರೀಕ್ಷಿತ ಹೆಚ್ಚುತ್ತಿರುವ ನೇರ ಉದ್ಯೋಗ 75,000

ಮಹತ್ವ:

ಭಾರತವು ಎಲ್ಲಾ ಜಾಗತಿಕ ಪ್ರಮುಖ ರಾಷ್ಟ್ರಗಳಿಗೆ ವಿಶ್ವಾಸಾರ್ಹ ಪೂರೈಕೆ ಸರಪಳಿ ಪಾಲುದಾರನಾಗಿ ಹೊರಹೊಮ್ಮುತ್ತಿದೆ. ದೊಡ್ಡ ಐಟಿ ಹಾರ್ಡ್‌ವೇರ್ ಕಂಪನಿಗಳು ಭಾರತದಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ತೀವ್ರ ಆಸಕ್ತಿ ತೋರಿಸಿವೆ. ದೇಶದೊಳಗೆ ಉತ್ತಮ ಬೇಡಿಕೆ ಹೊಂದಿರುವ ಪ್ರಬಲ ಐಟಿ ಸೇವಾ ಉದ್ಯಮದಿಂದ ಇದು ಮತ್ತಷ್ಟು ಬೆಂಬಲಿತವಾಗಿದೆ. ಹೆಚ್ಚಿನ ಪ್ರಮುಖ ದೇಶಗಳು ಭಾರತದಲ್ಲಿ ನೆಲೆಗೊಂಡಿರುವ ಸೌಲಭ್ಯದಿಂದ ಭಾರತದೊಳಗೆ ದೇಶೀಯ ಮಾರುಕಟ್ಟೆಗಳನ್ನು ಪೂರೈಸಲು ಬಯಸುತ್ತಿದ್ದಾರೆ, ಭಾರತವನ್ನು ಪ್ರಮುಖ ರಫ್ತು ಕೇಂದ್ರವನ್ನಾಗಿ ಮಾಡಲು ಬಯಸುತ್ತಿದ್ದಾರೆ.

ಐಟಿ ಹಾರ್ಡ್‌ವೇರ್‌ಗಾಗಿ ಪಿಎಲ್ಐ ಯೋಜನೆ - 2.0 ಅಡಿ 27 ತಯಾರಕ ಕಂಪನಿಗಳನ್ನು ಸರ್ಕಾರ ಅನುಮೋದಿಸಿದೆ

ಮೊಬೈಲ್ ಫೋನ್‌ಗಳಿಗೆ ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆ(ಪಿಎಲ್‌ಐ) ಯಶಸ್ಸಿನ ಆಧಾರದ ಮೇಲೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು, 2023 ಮೇ 17ರಂದು ಐಟಿ ಹಾರ್ಡ್‌ವೇರ್‌ಗಾಗಿ ಪಿಎಲ್‌ಐ ಸ್ಕೀಮ್ - 2.0 ಅನುಮೋದಿಸಿತು. ಈ ಯೋಜನೆ ಅಡಿ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಆಲ್-ಇನ್-ಒನ್ ಪಿಸಿಗಳು, ಸರ್ವರ್‌ಗಳು ಮತ್ತು ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಸಾಧನಗಳು ಇದರಲ್ಲಿ ಒಳಗೊಂಡಿವೆ.

27 ಐಟಿ ಹಾರ್ಡ್‌ವೇರ್ ತಯಾರಕ ಕಂಪನಿಗಳ ಅರ್ಜಿಗಳನ್ನು ಅನುಮೋದಿಸಲಾಗಿದೆ. ಏಸರ್, ಏಸಸ್, ಡೆಲ್, ಎಚ್ ಪಿ, ಲೆನೊವಾ ಮುಂತಾದ ಪ್ರಸಿದ್ಧ ಬ್ರಾಂಡ್‌ಗಳ ಐಟಿ ಹಾರ್ಡ್‌ವೇರ್‌ ಕಂಪನಿಗಳು ಭಾರತದಲ್ಲಿ ಹಾರ್ಡ್‌ವೇರ್ ತಯಾರಿಸಲಿವೆ. ಯೋಜನೆಯ ಅವಧಿಯ ಮೇಲಿನ ಈ ಅನುಮೋದನೆಯ ನಿರೀಕ್ಷಿತ ಫಲಿತಾಂಶಗಳು ಈ ಕೆಳಗಿನಂತಿವೆ:

  • ಉದ್ಯೋಗ: ಒಟ್ಟು ಸುಮಾರು 02 ಲಕ್ಷಗಳು
  • ಸುಮಾರು 50,000 (ನೇರ) ಮತ್ತು ಸುಮಾರು 1.5 ಲಕ್ಷ (ಪರೋಕ್ಷ)
  • ಐಟಿ ಹಾರ್ಡ್‌ವೇರ್ ಉತ್ಪಾದನೆಯ ಮೌಲ್ಯ: 3 ಲಕ್ಷ 50 ಸಾವಿರ ಕೋಟಿ ರೂಪಾಯಿಗಳು (42 ಬಿಲಿಯನ್ ಯುಎಸ್ ಡಾಲರ್).
  • ಕಂಪನಿಗಳಿಂದ ಹೂಡಿಕೆ: 3,000 ಕೋಟಿ ರೂಪಾಯಿಗಳು (360 ಮಿಲಿಯನ್ ಯುಎಸ್ ಡಾಲರ್).

ಉದ್ಯಮದ ನಾಯಕರು ಮತ್ತು ಮಾಧ್ಯಮ ಉದ್ದೇಶಿಸಿ ಮಾತನಾಡಿದ ರೈಲ್ವೆ, ಸಂಪರ್ಕ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಶ್ರೀ ಅಶ್ವಿನಿ ವೈಷ್ಣವ್, "27 ಅನುಮೋದಿತ ಅರ್ಜಿದಾರರಲ್ಲಿ 23 ಉದ್ಯಮಿಗಳು ಕೂಡಲೇ ಉತ್ಪಾದನೆ ಪ್ರಾರಂಭಿಸಲು ಸಿದ್ಧರಾಗಿದ್ದಾರೆ" ಎಂದರು.

ಜಿ20-ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್(ಡಿಐಎ) ಕಾರ್ಯಕ್ರಮ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ 2023 ಆಗಸ್ಟ್ 17ರಿಂದ 19ರ ವರೆಗೆ ಬೆಂಗಳೂರಿನಲ್ಲಿ ಜಿ20-ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್(ಡಿಐಎ) ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಕಾರ್ಯದರ್ಶಿ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ 23 ರಾಷ್ಟ್ರಗಳಿಂದ 109ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಭಾಗವಹಿಸಿದ್ದವು. ನಂತರ ವಲಯವಾರು ಸಂವಾದ ಕಲಾಪದಲ್ಲಿ ಅವು ಭಾಗವಹಿಸಿದ್ದವು.

ಟಾಪ್ 30 ಸ್ಟಾರ್ಟಪ್‌ಗಳಿಗೆ ಮಾನ್ಯ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರು ಮತ್ತು ಇತರೆ ಗಣ್ಯರು ಸಮಾರೋಪ ಕಲಾಪದಲ್ಲಿ ಪ್ರಶಸ್ತಿ ನೀಡಿದರು. ಕಾರ್ಯಕ್ರಮದಲ್ಲಿ 45ಕ್ಕೂ ಹೆಚ್ಚು ಸ್ಪೀಕರ್‌ಗಳು, 60 ನ್ಯಾಯಾಧೀಶರು, 120 ಹೂಡಿಕೆದಾರರು ಮತ್ತು 1000ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಭಾಗವಾಗಿ, 200ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿರುವ ಅತ್ಯಾಧುನಿಕ ವಸ್ತುಪ್ರದರ್ಶನದಲ್ಲಿ ವಿವಿಧ ಕೇಂದ್ರ ಸರ್ಕಾರದ ಸಚಿವಾಲಯಗಳು, ರಾಜ್ಯ ಸರ್ಕಾರಗಳು, ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಕಾರ್ಪೊರೇಟ್‌ಗಳು, ಅಂತಾರಾಷ್ಟ್ರೀಯ ಮತ್ತು ದೇಶೀಯ ಸ್ಟಾರ್ಟಪ್‌ಗಳು ಸೇರಿದಂತೆ 1,500 ಪ್ರದರ್ಶಕರು ತಮ್ಮ ಸಾಧನೆಗಳನ್ನು ಪ್ರದರ್ಶಿಸಿದರು. 3 ದಿನಗಳ ಕಾರ್ಯಕ್ರಮದಲ್ಲಿ ಒಟ್ಟು 15,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

*****

 



(Release ID: 1990957) Visitor Counter : 76