ಪ್ರಧಾನ ಮಂತ್ರಿಯವರ ಕಛೇರಿ

'ವಿಕಸಿತ ಭಾರತ @2047: ವಾಯ್ಸ್ ಆಫ್ ಯೂತ್'ಗೆ ಚಾಲನೆ ನೀಡಿದ ಪ್ರಧಾನಿ


"ಇದು ಭಾರತದ ಇತಿಹಾಸದಲ್ಲಿ, ದೇಶವು ದಾಪುಗಾಲು ಇಡುವ ಅವಧಿಯಾಗಿದೆ"

"ಭಾರತಕ್ಕೆ ಇದು ಸರಿಯಾದ ಸಮಯ, ಇದು ಭಾರತದ ಸಮಯ”

"ರಾಷ್ಟ್ರೀಯ ಪ್ರಯತ್ನಗಳು ಒಂದೇ ಗುರಿಯತ್ತ ಕೇಂದ್ರೀಕೃತವಾಗಿರುವ ಈ ಸಂದರ್ಭದಲ್ಲಿ, ನಮ್ಮ ಸ್ವಾತಂತ್ರ್ಯ ಹೋರಾಟವು ನಮಗೆ ದೊಡ್ಡ ಸ್ಫೂರ್ತಿಯಾಗಿದೆ"

"ಇಂದು, ನಿಮ್ಮ ಗುರಿಗಳು, ನಿಮ್ಮ ಸಂಕಲ್ಪಗಳು ಒಂದೇ ಆಗಿರಬೇಕು  ಅದು - ʻಅಭಿವೃದ್ಧಿ ಹೊಂದಿದ ಭಾರತʼ ಆಗಿರಬೇಕು"

"India (ಭಾರತ) ಮಾದರಿಯಲ್ಲೇ Idea(ಆಲೋಚನೆ) ಪದವು ʻIʼ (ನಾನು) ನಿಂದ ಪ್ರಾರಂಭವಾಗುತ್ತದೆ, ಅಭಿವೃದ್ಧಿ ಪ್ರಯತ್ನಗಳು ʻನಾನುʼ (ಸ್ವಯಂ) ಇಂದ ಪ್ರಾರಂಭವಾಗುತ್ತವೆʼʼ

"ನಾಗರಿಕರು, ತಮ್ಮ ಪಾತ್ರ ಯಾವುದೇ ಇರಲಿ, ತಮ್ಮ ಕರ್ತವ್ಯವನ್ನು ಮಾಡಲು ಪ್ರಾರಂಭಿಸಿದಾಗ, ದೇಶವು ಮುಂದೆ ಸಾಗುತ್ತದೆ"

"ದೇಶದ ಪ್ರಜೆಗಳಾಗಿ, ನಮಗೆ ಪರೀಕ್ಷೆಯ ದಿನಾಂಕವನ್ನು ಘೋಷಿಸಲಾಗಿದೆ. ʻಅಮೃತ ಕಾಲʼಕ್ಕೆ 25 ವರ್ಷಗಳು ನಮ್ಮ ಮುಂದೆ ಇವೆ. ಇದಕ್ಕಾಗಿ ನಾವು ದಿನದ 24 ಗಂಟೆಯೂ ಕೆಲಸ ಮಾಡಬೇಕು.

"ಯುವ ಶಕ್ತಿಯು ಬದಲಾವಣೆಯ ರೂವಾರಿ ಮತ್ತು ಬದಲಾವಣೆಯ ಫಲಾನುಭವಿಗಳು"

"ಪ್ರಗತಿಯ ಮಾರ್ಗಸೂಚಿಯನ್ನು ಸರ್ಕಾರ ಮಾತ್ರ ನಿರ್ಧರಿಸುವುದಿಲ್ಲ, ಜೊತೆಗೆ ರಾಷ್ಟ್ರವು ಅದನ್ನು ನಿರ್ಧರಿಸುತ್ತದೆ. ʻವಿಕಸಿತ ಭಾರತʼವನ್ನು ʻಸಬ್ ಕಾ ಪ್ರಯಾಸ್ʼ ಮೂಲಕ ಮಾತ್ರ ನಿರ್ಮಿಸಬೇಕು"

Posted On: 11 DEC 2023 11:40AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ 'ವಿಕಸಿತ ಭಾರತ@2047: ವಾಯ್ಸ್ ಆಫ್ ಯೂತ್'ಗೆ ಚಾಲನೆ ನೀಡಿದರು. ಈ ಉಪಕ್ರಮದ ಆರಂಭದ ಅಂಗವಾಗಿ ದೇಶಾದ್ಯಂತ ರಾಜಭವನಗಳಲ್ಲಿ ಆಯೋಜಿಸಲಾದ ಕಾರ್ಯಾಗಾರಗಳಲ್ಲಿ ಪ್ರಧಾನಿ ಮೋದಿ ಅವರು ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಬೋಧಕವರ್ಗದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.

ವಿಕಸಿತ ಭಾರತದ ಅಭಿವೃದ್ಧಿಗಾಗಿ ಇಂದಿನ ಕಾರ್ಯಾಗಾರವನ್ನು ಆಯೋಜಿಸಿದ್ದಕ್ಕಾಗಿ ಎಲ್ಲಾ ರಾಜ್ಯಪಾಲರಿಗೆ ಧನ್ಯವಾದಗಳನ್ನು ಅರ್ಪಿಸುವ ಮೂಲಕ ತಮ್ಮ ಮಾತು ಆರಂಭಿಸಿದ ಪ್ರಧಾನಮಂತ್ರಿಯವರು, ಈ ನಿರ್ಣಯಕ್ಕೆ ಸಂಬಂಧಿಸಿದಂತೆ ಇಂದು ವಿಶೇಷ ಸಂದರ್ಭವಾಗಿದೆ ಎಂದು ಹೇಳಿದರು. ʻವಿಕಸತಿ ಭಾರತ-2047ʼರ ಗುರಿಯನ್ನು ಸಾಧಿಸುವಲ್ಲಿ ರಾಷ್ಟ್ರದ ಯುವಕರಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಹೊಂದಿರುವ ಎಲ್ಲಾ ಪಾಲುದಾರರನ್ನು ಒಟ್ಟುಗೂಡಿಸುವಲ್ಲಿ ರಾಜ್ಯಪಾಲರುಗಳ ಕೊಡುಗೆಗಳನ್ನು ಅವರು ಶ್ಲಾಘಿಸಿದರು. ಯಾವುದೇ ವ್ಯಕ್ತಿಯ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ ಅವರು, ಜನರ ಅಭಿವೃದ್ಧಿಯಿಂದ ಮಾತ್ರ ರಾಷ್ಟ್ರವು ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು. ಪ್ರಸ್ತುತ ಯುಗದಲ್ಲಿ ವ್ಯಕ್ತಿತ್ವ ವಿಕಸನದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ʻವಾಯ್ಸ್ ಆಫ್ ಯೂತ್ʼ(ಯುವಕರ ದನಿ) ಕಾರ್ಯಾಗಾರದ ಯಶಸ್ಸಿಗೆ ಶುಭ ಕೋರಿದರು.

ಯಾವುದೇ ರಾಷ್ಟ್ರದ ಜೀವಿತಾವಧಿಯಲ್ಲಿ, ಆ ರಾಷ್ಟ್ರವು ತನ್ನ ಅಭಿವೃದ್ಧಿಯ ಪಯಣದಲ್ಲಿ ದಾಪುಗಾಲು ಇಟ್ಟ ಸಮಯವನ್ನು ಇತಿಹಾಸವು ನಮಗೆ ತಿಳಿಸುತ್ತದೆ ಎಂದು ಪ್ರಧಾನಿ ಹೇಳಿದರು. ಭಾರತಕ್ಕೆ, ಪ್ರಸ್ತುತ "ಈ ಅಮೃತ ಕಾಲ ನಡೆಯುತ್ತಿದೆ" ಮತ್ತು "ಇದು ಭಾರತದ ಇತಿಹಾಸದಲ್ಲಿ ದೇಶವು ಒಂದು ದೊಡ್ಡ ಜಿಗಿತವನ್ನು ಕಾಣಲಿರುವ ಅವಧಿಯಾಗಿದೆ,ʼʼ ಎಂದರು. ನಿಗದಿತ ಕಾಲಾವಧಿಯಲ್ಲಿ ಇಷ್ಟು ದೊಡ್ಡ ಜಿಗಿತವನ್ನು ಕೈಗೊಂಡು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾಗಿ ಮಾರ್ಪಟ್ಟ ಅನೇಕ ದೇಶಗಳ ಉದಾಹರಣೆಗಳನ್ನು ಅವರು ನೀಡಿದರು. "ಭಾರತಕ್ಕೆ ಇದು ಸರಿಯಾದ ಸಮಯ, ಇದು ಭಾರತದ ಸಮಯ,ʼʼ ಎಂದು ಅವರು ಹೇಳಿದರು, ಈ ʻಅಮೃತ ಕಾಲʼದ ಪ್ರತಿಯೊಂದು ಕ್ಷಣವನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸ್ವಾತಂತ್ರ್ಯಕ್ಕಾಗಿ ನಡೆದ ಭವ್ಯ ಹೋರಾಟವು ನಮ್ಮ ಸ್ಫೂರ್ತಿಯೆ ಸೆಲೆಯಾಗಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. ಆ ಸಮಯದಲ್ಲಿ ಸತ್ಯಾಗ್ರಹ, ಕ್ರಾಂತಿಕಾರಿ ಮಾರ್ಗ, ಅಸಹಕಾರ ಚಳವಳಿ, ಸ್ವದೇಶಿ ಚಳವಳಿ,  ಸಾಮಾಜಿಕ ಹಾಗೂ ಶೈಕ್ಷಣಿಕ ಸುಧಾರಣೆಗಳಂತಹ ಪ್ರತಿಯೊಂದು ಪ್ರಯತ್ನವೂ ಸ್ವಾತಂತ್ರ್ಯದ ಕಡೆಗೆ ಕೇಂದ್ರೀಕೃತವಾಗಿತ್ತು ಎಂದು ಅವರು ಹೇಳಿದರು. ಈ ಅವಧಿಯಲ್ಲಿ ಕಾಶಿ, ಲಖನೌ, ವಿಶ್ವ ಭಾರತಿ, ಗುಜರಾತ್ ವಿದ್ಯಾಪೀಠ, ನಾಗ್ಪುರ ವಿಶ್ವವಿದ್ಯಾಲಯ, ಅಣ್ಣಾಮಲೈ, ಆಂಧ್ರ ಮತ್ತು ಕೇರಳ ವಿಶ್ವವಿದ್ಯಾಲಯಗಳಂತಹ ವಿಶ್ವವಿದ್ಯಾಲಯಗಳು ರಾಷ್ಟ್ರದ ಜಾಗೃತಿಯನ್ನು ಬಲಪಡಿಸಿದವು. ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಸಮರ್ಪಿತವಾದ ಇಡೀ ಪೀಳಿಗೆಯ ಯುವಕರು ಮುನ್ನೆಲೆಗೆ ಬಂದರು, ಅವರ ಪ್ರತಿಯೊಂದು ಪ್ರಯತ್ನವೂ ಸ್ವಾತಂತ್ರ್ಯದ ಗುರಿಯತ್ತ ಸಮರ್ಪಿತವಾಗಿತ್ತು. "ಇಂದು, ಪ್ರತಿಯೊಂದು ಸಂಸ್ಥೆ, ಪ್ರತಿಯೊಬ್ಬ ವ್ಯಕ್ತಿ ಸಹ, ತಮ್ಮ ಪ್ರತಿಯೊಂದು ಪ್ರಯತ್ನ ಮತ್ತು ಕಾರ್ಯವು ʻವಿಕಸಿತ ಭಾರತʼಕ್ಕಾಗಿ ಇರುತ್ತದೆ ಎಂಬ ಸಂಕಲ್ಪದೊಂದಿಗೆ ಮುಂದೆ ಸಾಗಬೇಕು. ನಿಮ್ಮ ಗುರಿಗಳು, ನಿಮ್ಮ ಸಂಕಲ್ಪಗಳು ಒಂದೇ ಆಗಿರಬೇಕು, ಅದು - ಅಭಿವೃದ್ಧಿ ಹೊಂದಿದ ಭಾರತ ಆಗಿರಬೇಕು,ʼʼ ಎಂದರು. ಭಾರತವನ್ನು ವೇಗವಾಗಿ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಮಾರ್ಗಗಳನ್ನು ಕಂಡುಕೊಳ್ಳುವ ಬಗ್ಗೆ ಶಿಕ್ಷಕರು ಮತ್ತು ವಿಶ್ವವಿದ್ಯಾಲಯಗಳು ಆಲೋಚಿಸುತ್ತವೆ. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಸುಧಾರಣೆಗಾಗಿ ನಿರ್ದಿಷ್ಟ ಕ್ಷೇತ್ರಗಳನ್ನು ಗುರುತಿಸುತ್ತವೆ ಎಂದು ಪ್ರಧಾನಿ ಒತ್ತಿ ಹೇಳಿದರು.

'ವಿಕಸಿತ ಭಾರತʼ ಎಂಬ ಸಾಮಾನ್ಯ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಪ್ರತಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಯುವಕರ ಶಕ್ತಿಯನ್ನು ವಿನಿಯೋಗಿಸುವ ಅಗತ್ಯವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. ವಿಚಾರಗಳ ವೈವಿಧ್ಯತೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ಜೋಡಿಸಬೇಕೆಂದು ಒತ್ತಿ ಹೇಳಿದರು. ʻವಿಕಸಿತ ಭಾರತ @2047ʼ ದೃಷ್ಟಿಕೋನಕ್ಕೆ ಕೊಡುಗೆ ನೀಡಲು ಪ್ರತಿಯೊಬ್ಬರೂ ತಮ್ಮ ಮಿತಿಗಳನ್ನು ಮೀರಿ ಕೆಲಸ ಮಾಡಬೇಕೆಂದು ಶ್ರೀ ಮೋದಿ ಒತ್ತಾಯಿಸಿದರು. ಈ ಅಭಿಯಾನದೊಂದಿಗೆ ಹೆಚ್ಚು ಹೆಚ್ಚು ಯುವಕರನ್ನು ಸಂಪರ್ಕಿಸಲು ದೇಶದ ಪ್ರತಿ ಕಾಲೇಜು ಮತ್ತು ವಿಶ್ವವಿದ್ಯಾಲಯದಲ್ಲಿ ವಿಶೇಷ ಅಭಿಯಾನಗಳನ್ನು ನಡೆಸುವಂತೆ ಅವರು ಸಲಹೆ ನೀಡಿದರು. ʻವಿಕಸತಿ ಭಾರತʼಕ್ಕೆ ಸಂಬಂಧಿಸಿದ ʻಐಡಿಯಾಸ್ ಪೋರ್ಟಲ್ʼ ಆರಂಭವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಇದಕ್ಕಾಗಿ 5 ವಿಭಿನ್ನ ವಿಷಯಗಳ ಬಗ್ಗೆ ಸಲಹೆಗಳನ್ನು ನೀಡಬಹುದು ಎಂದು ಮಾಹಿತಿ ನೀಡಿದರು. "ಅತ್ಯುತ್ತಮ 10 ಸಲಹೆಗಳಿಗೆ ಬಹುಮಾನವನ್ನು ಸಹ ವ್ಯವಸ್ಥೆ ಮಾಡಲಾಗಿದೆ. ನೀವು ʻMyGovʼನಲ್ಲಿಯೂ ನಿಮ್ಮ ಸಲಹೆಗಳನ್ನು ನೀಡಬಹುದು," ಎಂದು ಅವರು ತಿಳಿಸಿದರು. "India (ಇಂಡಿಯಾ) ಹೇಗೆ I (ನಾನು) ಪದದಿಂದ ಪ್ರಾರಂಭವಾಗುತ್ತದೆಯೋ ಹಾಗೆಯೇ Idea(ಆಲೋಚನೆ) ಸಹ 'I' ನಿಂದ ಪ್ರಾರಂಭವಾಗುತ್ತದೆ," ಎಂದು ಹೇಳಿದ ಪ್ರಧಾನಿ, ಅಭಿವೃದ್ಧಿಯ ಕಲ್ಪನೆಯು ವ್ಯಕ್ತಿಯ 'ನಾನು' ನಿಂದಲೇ ಪ್ರಾರಂಭವಾಗಬೇಕು ಎಂದು ಒತ್ತಿ ಹೇಳಿದರು.

ಸಲಹೆಗಳನ್ನು ಪಡೆಯುವ ಪ್ರಕ್ರಿಯೆಯ ಬಗ್ಗೆ ವಿವರಿಸಿದ ಪ್ರಧಾನಮಂತ್ರಿಯವರು, ರಾಷ್ಟ್ರೀಯ ಹಿತಾಸಕ್ತಿಗೆ ಅತ್ಯುನ್ನತ ಆದ್ಯತೆ ನೀಡುವಂತಹ ʻಅಮೃತʼ ಪೀಳಿಗೆಯನ್ನು ಸೃಷ್ಟಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಶಿಕ್ಷಣ ಮತ್ತು ಕೌಶಲ್ಯಗಳನ್ನು ಮೀರಿ ಹೋಗುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ನಾಗರಿಕರಲ್ಲಿ ರಾಷ್ಟ್ರೀಯ ಹಿತಾಸಕ್ತಿ ಮತ್ತು ನಾಗರಿಕ ಪ್ರಜ್ಞೆಯ ಜಾಗೃತಿಗೆ ಕರೆ ನೀಡಿದರು. "ನಾಗರಿಕರು, ತಮ್ಮ ಪಾತ್ರ ಯಾವುದೇ ಇರಲಿ, ತಮ್ಮ ಕರ್ತವ್ಯವನ್ನು ಮಾಡಲು ಪ್ರಾರಂಭಿಸಿದಾಗ, ದೇಶವು ತಾನಾಗಿಯೇ ಮುಂದೆ ಸಾಗಬಲ್ಲದು," ಎಂದು ಪ್ರಧಾನಿ ಹೇಳಿದರು. ಜಲ ಸಂರಕ್ಷಣೆ, ವಿದ್ಯುತ್ ಉಳಿತಾಯ, ಕೃಷಿಯಲ್ಲಿ ಕಡಿಮೆ ರಾಸಾಯನಿಕಗಳ ಬಳಕೆ ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸುವ ಮೂಲಕ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಉದಾಹರಣೆಗಳನ್ನು ಅವರು ನೀಡಿದರು. ಸ್ವಚ್ಛತಾ ಅಭಿಯಾನಕ್ಕೆ ಹೊಸ ಶಕ್ತಿಯನ್ನು ನೀಡಲು, ಜೀವನಶೈಲಿ ಸಮಸ್ಯೆಗಳನ್ನು ಎದುರಿಸಲು ಹಾಗೂ ಯುವಜನರು ಮೊಬೈಲ್ ಫೋನ್ಗಳನ್ನು ಮೀರಿ ಪ್ರಪಂಚದ ಅನ್ವೇಷಣೆಗೆ ಹೊಸ ಶಕ್ತಿಯನ್ನು ನೀಡುವ ಮಾರ್ಗೋಪಾಯಗಳನ್ನು ಸೂಚಿಸುವಂತೆ ಶಿಕ್ಷಕರ ಸಮುದಾಯಕ್ಕೆ ಪ್ರಧಾನಿ ಮನವಿ ಮಾಡಿದರು.  ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾದರಿಯಾಗಬೇಕು ಎಂದು ಹೇಳಿದರು. ಸಾಮಾಜಿಕ ಚಿಂತನೆಯು ಆಡಳಿತದಲ್ಲಿಯೂ ಪ್ರತಿಬಿಂಬಿತವಾಗಿದೆ ಎಂದು ಹೇಳಿದ ಪ್ರಧಾನಿ, ಪದವಿ ಪಡೆದವರು ಕನಿಷ್ಠ ಒಂದು ವೃತ್ತಿಪರ ಕೌಶಲ್ಯವನ್ನು ಹೊಂದಿರಬೇಕು ಎಂದು ಸಲಹೆ ನೀಡಿದರು. "ಪ್ರತಿ ಸಂಸ್ಥೆ ಮತ್ತು ರಾಜ್ಯ ಮಟ್ಟದಲ್ಲಿ ಈ ವಿಷಯಗಳ ಬಗ್ಗೆ ಸಮಗ್ರ ಚಿಂತನ-ಮಂಥನ ಪ್ರಕ್ರಿಯೆಯನ್ನು ನೀವು ಮುಂದುವರಿಸಬೇಕು," ಎಂದು ಅವರು ಕರೆ ನೀಡಿದರು.

'ವಿಕಸಿತ ಭಾರತ'ದ ಅಭಿವೃದ್ಧಿಯ ಅವಧಿಯನ್ನು ಪರೀಕ್ಷೆಯ ಅವಧಿಗೆ ಹೋಲಿಕೆ ಮಾಡಿದ ಪ್ರಧಾನಮಂತ್ರಿಯವರು ವಿದ್ಯಾರ್ಥಿಗಳ ಆತ್ಮವಿಶ್ವಾಸ, ಸಿದ್ಧತೆ, ಸಮರ್ಪಣೆ ಹಾಗೂ ಗುರಿ ಸಾಧನೆಗೆ ಅಗತ್ಯವಾದ ಶಿಸ್ತನ್ನು ಕಾಪಾಡಿಕೊಳ್ಳುವಲ್ಲಿ ಕುಟುಂಬಗಳ ಕೊಡುಗೆಗಳನ್ನು ಉಲ್ಲೇಖಿಸಿದರು. ದೇಶದ ಪ್ರಜೆಗಳಾಗಿ ನಮಗೆ ಪರೀಕ್ಷೆಯ ದಿನಾಂಕವನ್ನು ಸಹ ಘೋಷಿಸಲಾಗಿದೆ ಎಂದು ಅವರು ಹೇಳಿದರು. "ನಮ್ಮ ಮುಂದೆ ʻಅಮೃತ ಕಾಲʼದ 25 ವರ್ಷಗಳಿವೆ. ʻವಿಕಸಿತ ಭಾರತʼದ ಗುರಿಗಾಗಿ ನಾವು ದಿನದ 24 ಗಂಟೆಗಳ ಕಾಲ ಕೆಲಸ ಮಾಡಬೇಕು. ಇದು ನಾವು ಒಂದು ಕುಟುಂಬವಾಗಿ ಸೃಷ್ಟಿಸಬೇಕಾದ ವಾತಾವರಣ,", ಎಂದು ಪ್ರಧಾನಿ ಒತ್ತಿ ಹೇಳಿದರು.

ವೇಗವಾಗಿ ಹೆಚ್ಚುತ್ತಿರುವ ದೇಶದ ಜನಸಂಖ್ಯೆಗೆ ʻಯುವಬಲʼವಿದೆ ಎಂದು ಹೇಳಿದ ಶ್ರೀ ಮೋದಿ, ಮುಂಬರುವ 25-30 ವರ್ಷಗಳಲ್ಲಿ ದುಡಿಯುವ ವಯಸ್ಸಿನ ಜನಸಂಖ್ಯೆಯ ವಿಷಯದಲ್ಲಿ ಭಾರತವು ವಿಶ್ವದಲ್ಲೇ ನಾಯಕ ಸ್ಥಾನ ಪಡೆಯಲಿದೆ, ಜಗತ್ತು ಇದನ್ನು ಗುರುತಿಸಿದೆ ಎಂದು ಮಾಹಿತಿ ನೀಡಿದರು. "ಯುವ ಶಕ್ತಿಯು ಬದಲಾವಣೆಯ ರೂವಾರಿ ಮತ್ತು ಬದಲಾವಣೆಯ ಫಲಾನುಭವಿಗಳು" ಎಂದು ಪ್ರಧಾನಿ ಮೋದಿ ಬಣ್ಣಿಸಿದರು. ಮುಂದಿನ 25 ವರ್ಷಗಳು ಇಂದಿನ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಯುವಕರ ವೃತ್ತಿಜೀವನಕ್ಕೆ ನಿರ್ಣಾಯಕವಾಗಲಿವೆ ಎಂದು ಅವರು ಒತ್ತಿ ಹೇಳಿದರು. ಭವಿಷ್ಯದಲ್ಲಿ ಹೊಸ ಕುಟುಂಬಗಳನ್ನು ಮತ್ತು ಹೊಸ ಸಮಾಜವನ್ನು ಸೃಷ್ಟಿಸುವವರು ಯುವಜನರೇ ಎಂದು ಹೇಳಿದ ಪ್ರಧಾನಮಂತ್ರಿಯವರು, ʻಅಭಿವೃದ್ಧಿ ಹೊಂದಿದ ಭಾರತʼ ಹೇಗಿರಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಯುವಜನರಿಗಿದೆ ಎಂದರು. ಈ ಸದಾಶಯದೊಂದಿಗೆ, ಅಭಿವೃದ್ಧಿ ಹೊಂದಿದ ಭಾರತದ ಕ್ರಿಯಾ ಯೋಜನೆ ಜೊತೆ ದೇಶದ ಪ್ರತಿಯೊಬ್ಬ ಯುವಕರನ್ನು ಸಂಪರ್ಕಿಸಲು ಸರ್ಕಾರ ಬಯಸಿದೆ ಎಂದು ಪ್ರಧಾನಿ ಹೇಳಿದರು. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನೀತಿ ಕಾರ್ಯತಂತ್ರದಲ್ಲಿ ದೇಶದ ಯುವಕರ ಧ್ವನಿಗೆ ಸ್ಥಾನ ನೀಡಬೇಕೆಂದು ಪ್ರಧಾನಿ ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಯುವಕರೊಂದಿಗೆ ಗರಿಷ್ಠ ಸಂಪರ್ಕವನ್ನು ಹೊಂದಿರುವ ಶಿಕ್ಷಣ ಸಂಸ್ಥೆಗಳ ಪಾತ್ರವನ್ನು ಎತ್ತಿ ತೋರಿದರು.

ತಮ್ಮ ಭಾಷಣವನ್ನು ಮುಗಿಸುವ ಮುನ್ನ ಪ್ರಧಾನಮಂತ್ರಿಯವರು, “ಪ್ರಗತಿಯ ಮಾರ್ಗಸೂಚಿಯನ್ನು ಸರ್ಕಾರ ಮಾತ್ರ ನಿರ್ಧರಿಸುವುದಿಲ್ಲ, ಜೊತೆಗೆ ರಾಷ್ಟ್ರವೂ ಅದನ್ನು ನಿರ್ಧರಿಸುತ್ತದೆ,ʼʼ ಎಂದು ಒತ್ತಿ ಹೇಳಿದರು. "ದೇಶದ ಪ್ರತಿಯೊಬ್ಬ ನಾಗರಿಕರೂ ಇದರಲ್ಲಿ ಅಭಿಪ್ರಾಯ ಹಂಚಿಕೆ ಮತ್ತು ಸಕ್ರಿಯ ಭಾಗವಹಿಸುವಿಕೆಯನ್ನು ಹೊಂದಿರುತ್ತಾರೆ," ಎಂದು ಶ್ರೀ ಮೋದಿ ಹೇಳಿದರು, ʻಸಬ್ ಕಾ ಪ್ರಯಾಸ್ʼ ಮಂತ್ರದಿಂದ ಅಂದರೆ ಸಾರ್ವಜನಿಕರ ಭಾಗವಹಿಸುವಿಕೆಯಿಂದ ದೊಡ್ಡ ಸಂಕಲ್ಪಗಳನ್ನು ಸಹ ಸಾಧಿಸಬಹುದು ಎಂದು ಗಮನಸೆಳೆದರು. ʻಸ್ವಚ್ಛ ಭಾರತʼ ಅಭಿಯಾನ, ʻಡಿಜಿಟಲ್ ಇಂಡಿಯಾʼ ಅಭಿಯಾನ, ʻವೋಕಲ್ ಫಾರ್ ಲೋಕಲ್ʼ ಅಭಿಯಾನ  ಹಾಗೂ ಕರೋನಾ ಸಾಂಕ್ರಾಮಿಕ ಸಮಯದಲ್ಲಿ ದೇಶದ ಸದೃಢತೆಯು ʻಸಬ್ ಕಾ ಪ್ರಯಾಸ್ʼನ ಶಕ್ತಿಯನ್ನು ಎತ್ತಿ ತೋರಿಸಿವೆ ಎಂದು ಅವರು ಉದಾಹರಿಸಿದರು. "ವಿಕಸಿತ ಭಾರತʼವನ್ನು ʻಸಬ್ ಕಾ ಪ್ರಯಾಸ್ʼ ಮೂಲಕ ಮಾತ್ರ ನಿರ್ಮಿಸಬೇಕು," ಎಂದು ಪ್ರಧಾನಿ ಹೇಳಿದರು. ಈ ಸಂದರ್ಭದಲ್ಲಿ ಹಾಜರಿದ್ದ ವಿದ್ವಾಂಸರೇ ದೇಶದ ಅಭಿವೃದ್ಧಿಯ ದೃಷ್ಟಿಕೋನವನ್ನು ರೂಪಿಸುವವರು ಮತ್ತು ಯುವ ಶಕ್ತಿಯನ್ನು ಸರಿದಾರಿಯಲ್ಲಿ ನಡೆಸುವವರು ಆಗಿರುವುದರಿಂದ, ಅವರಿಂದ  ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುವುದಾಗಿ ಶ್ರೀ ಮೋದಿ ಪುನರುಚ್ಚರಿಸಿದರು. "ಇದು ದೇಶದ ಭವಿಷ್ಯವನ್ನು ಬರೆಯುವ ಒಂದು ದೊಡ್ಡ ಅಭಿಯಾನವಾಗಿದೆ" ಎಂದು ಹೇಳುವ ಮೂಲಕ ಪ್ರಧಾನಮಂತ್ರಿಯವರು ಮಾತು ಮುಗಿಸಿದರು. ʻವಿಕಸಿತ ಭಾರತʼದ ಭವ್ಯತೆಯನ್ನು ಮತ್ತಷ್ಟು ಹೆಚ್ಚಿಸಲು ತಮ್ಮ ಸಲಹೆಗಳನ್ನು ಹಂಚಿಕೊಳ್ಳುವಂತೆ ಪ್ರಧಾನಿ ಕರೆ ನೀಡಿದರು.

ಹಿನ್ನೆಲೆ

ದೇಶದ ರಾಷ್ಟ್ರೀಯ ಯೋಜನೆಗಳು, ಆದ್ಯತೆಗಳು ಮತ್ತು ಗುರಿಗಳನ್ನು ರೂಪಿಸುವಲ್ಲಿ ದೇಶದ ಯುವಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಪ್ರಧಾನ ಮಂತ್ರಿಯವರ ಆಶಯಕ್ಕೆ ಅನುಗುಣವಾಗಿ, 'ವಿಕಸಿತ ಭಾರತ@2047: ವಾಯ್ಸ್ ಆಫ್ ಯೂತ್' ಉಪಕ್ರಮವು ದೇಶದ ಯುವಕರಿಗೆ ʻವಿಕಸಿತ ಭಾರತ@2047ʼರ ದೃಷ್ಟಿಕೋನದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ. ʻವಿಕಸಿತ ಭಾರತ@2047ʼ ಬಗ್ಗೆ ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳಲು ಯುವಕರನ್ನು ತೊಡಗಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರಗಳು ಪ್ರಮುಖ ಹೆಜ್ಜೆಯಾಗಿವೆ.

ʻವಿಕಸಿತ ಭಾರತ@2047ʼ- ಇದು ಸ್ವಾತಂತ್ರ್ಯದ 100ನೇ ವರ್ಷವಾದ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ದೃಷ್ಟಿಕೋನವಾಗಿದೆ. ಈ ದೃಷ್ಟಿಕೋನವು ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ, ಪರಿಸರ ಸುಸ್ಥಿರತೆ ಮತ್ತು ಉತ್ತಮ ಆಡಳಿತ ಸೇರಿದಂತೆ ಅಭಿವೃದ್ಧಿಯ ವಿವಿಧ ಅಂಶಗಳನ್ನು ಒಳಗೊಂಡಿದೆ.

 

***



(Release ID: 1984912) Visitor Counter : 160