ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಹವಾಮಾನ ಬದಲಾವಣೆಯ ಸಿಒಪಿ-28 ಶೃಂಗದ “ಕೈಗಾರಿಕಾ ಪರಿವರ್ತನೆಗೆ ನಾಯಕತ್ವ ಗುಂಪು” ಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 01 DEC 2023 10:29PM by PIB Bengaluru

ಗೌರವಾನ್ವಿತ ಗಣ್ಯರೆ,

ಉದ್ಯಮ ದಿಗ್ಗಜರೆ,

ಘನತೆವೆತ್ತ ಅತಿಥಿಗಳೆ,

ನಿಮ್ಮೆಲ್ಲರಿಗೂ ನನ್ನ ಹಾರ್ದಿಕ ಶುಭಾಶಯಗಳು.

ನಾವೆಲ್ಲರೂ ಸಾಮಾನ್ಯ ಬದ್ಧತೆ ಪ್ರದರ್ಶಿವು ಕಾರಣಕ್ಕಾಗಿ ಇಲ್ಲಿ ಸಂಪರ್ಕಿಸಿದ್ದೇವೆ – ಜಾಗತಿಕ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಕ್ಕೆ ತರುವ ಗುರಿಗಳನ್ನು ಸಾಧಿಸಲು ಸರ್ಕಾರ ಮತ್ತು ಉದ್ಯಮದ ನಡುವಿನ ಪಾಲುದಾರಿಕೆ ಬಹಳ ಮುಖ್ಯವಾಗಿದೆ.

ಮತ್ತು, ಕೈಗಾರಿಕಾ ನಾವೀನ್ಯತೆ ಅಥವಾ ಅನುಶೋಧನೆಯು ಒಂದು ಪ್ರಮುಖ ವೇಗವರ್ಧಕವಾಗಿದೆ.

ಕೈಗಾರಿಕಾ ಪರಿವರ್ತನೆಗೆ ನಾಯಕತ್ವ ಗುಂಪು (ಲೀಡರ್‌ಶಿಪ್ ಗ್ರೂಪ್ ಫಾರ್ ಇಂಡಸ್ಟ್ರಿ ಟ್ರಾನ್ಸಿಶನ್) ಅಂದರೆ ಮಾಹಿತಿ ತಂತ್ರಜ್ಞಾನ ವಲಯದ ನೇತೃತ್ವದಲ್ಲಿ ಸುಂದರ ಪೃಥ್ವಿಯ ಸುರಕ್ಷಿತ ಭವಿಷ್ಯಕ್ಕಾಗಿ ಸರ್ಕಾರಗಳು ಮತ್ತು ಉದ್ಯಮದ ನಡುವಿನ ಪಾಲುದಾರಿಕೆಯ ಯಶಸ್ವಿ ಉದಾಹರಣೆಯಾಗಿದೆ.

2019ರಲ್ಲಿ ಪ್ರಾರಂಭವಾದ ಉದ್ಯಮ ಪರಿವರ್ತನೆಯನ್ನು ಬಲಪಡಿಸಲು ನಮ್ಮ ಜಂಟಿ ಪ್ರಯತ್ನವಾಗಿದೆ.

ಕಡಿಮೆ ಇಂಗಾಲದ ತಂತ್ರಜ್ಞಾನ ಮತ್ತು ಆವಿಷ್ಕಾರವನ್ನು ವೇಗಗೊಳಿಸಬೇಕು. ಅದನ್ನು ಜಾಗತಿಕ ದಕ್ಷಿಣ ರಾಷ್ಟ್ರಗಳಿಗೆ ಸಾಧ್ಯವಾದಷ್ಟು ಬೇಗ ಮತ್ತು ಸುಲಭವಾಗಿ ತಲುಪಿಸಬೇಕು. ಅದರ ಮೊದಲ ಹಂತದಲ್ಲಿ ಐಟಿ ವಲಯದ ನೇತೃತ್ವ(ಲೀಡ್-ಐಟಿ)ದ ಪರಿವರ್ತನಾ ಮಾರ್ಗಸೂಚಿಗಳು ಮತ್ತು ಜ್ಞಾನ ಹಂಚಿಕೆಯು ಕಬ್ಬಿಣ ಮತ್ತು ಉಕ್ಕು, ಸಿಮೆಂಟ್, ಅಲ್ಯೂಮಿನಿಯಂ, ಸಾರಿಗೆಯಂತಹ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಇಂದು 18 ದೇಶಗಳು ಮತ್ತು 20 ಕಂಪನಿಗಳು ಈ ಗುಂಪಿನ ಸದಸ್ಯರಾಗಿದ್ದಾರೆ.

ಸ್ನೇಹಿತರೆ,

ಭಾರತವು ತನ್ನ ಜಿ-20 ಅಧ್ಯಕ್ಷತೆ ವಹಿಸಿದ್ದ ಅವಧಿಯಲ್ಲಿ ವೃತ್ತಾಕಾರದ ಕಾರ್ಯತಂತ್ರಗಳಲ್ಲಿ ಜಾಗತಿಕ ಸಹಕಾರಕ್ಕೆ ಒತ್ತು ನೀಡಿದೆ.

ಇಂದು ಅದನ್ನು ಮುಂದಕ್ಕೆ ತೆಗೆದುಕೊಂಡು, ನಾವು ಲೀಡ್-ಐಟಿಗೆ ಹೊಸ ಅಧ್ಯಾಯ ಸೇರಿಸುತ್ತಿದ್ದೇವೆ. ಇಂದು ನಾವು ಲೀಡ್-ಐಟಿ 2.0 ಅನ್ನು ಪ್ರಾರಂಭಿಸುತ್ತಿದ್ದೇವೆ.

ಈ ಹಂತವು 3 ಮುಖ್ಯ ಗಮನವನ್ನು ಹೊಂದಿರುತ್ತದೆ. ಮೊದಲನೆಯದಾಗಿ, ಎಲ್ಲರನ್ನೂ ಒಳಗೊಂಡ ಅಥವಾ ಅಂತರ್ಗತ ಮತ್ತು ಉದ್ಯಮ ಪರಿವರ್ತನೆ. ಎರಡನೆಯದಾಗಿ, ಕಡಿಮೆ ಇಂಗಾಲ ಹೊರಸೂಸುವಿಕೆಯ ತಂತ್ರಜ್ಞಾನಗಳ ಸಹ-ಅಭಿವೃದ್ಧಿ ಮತ್ತು ವರ್ಗಾವಣೆ ಮತ್ತು ಮೂರನೆಯದಾಗಿ, ಉದಯೋನ್ಮುಖ ಆರ್ಥಿಕತೆಗಳಲ್ಲಿ ಉದ್ಯಮ ಪರಿವರ್ತನೆಗೆ ಹಣಕಾಸಿನ ಬೆಂಬಲ.

ಇದೆಲ್ಲವನ್ನೂ ಸಾಧ್ಯವಾಗಿಸಲು, ಭಾರತ-ಸ್ವೀಡನ್ ಕೈಗಾರಿಕಾ ಪರಿವರ್ತನೆ ವೇದಿಕೆಯನ್ನು ಸಹ ಪ್ರಾರಂಭಿಸಲಾಗುತ್ತಿದೆ.

ಎರಡೂ ರಾಷ್ಟ್ರಗಳ ಸರ್ಕಾರಗಳು, ಕೈಗಾರಿಕೆಗಳು, ತಂತ್ರಜ್ಞಾನ ಪೂರೈಕೆದಾರರು, ಸಂಶೋಧಕರು ಮತ್ತು ಚಿಂತಕರ ಚಾವಡಿಗಳನ್ನು ಸಂಪರ್ಕಿಸುವ ಗುರಿಯನ್ನು ವೇದಿಕೆ ಹೊಂದಿದೆ. ನಮ್ಮ ಸಹಭಾಗಿತ್ವದ ಪ್ರಯತ್ನಗಳು ಭವಿಷ್ಯದ ಪೀಳಿಗೆಯ ಯೋಗಕ್ಷೇಮಕ್ಕಾಗಿ ಹಸಿರು ಬೆಳವಣಿಗೆಯ ತಾಜಾ ನಿರೂಪಣೆಯನ್ನು ಪರಿಣಾಮಕಾರಿಯಾಗಿ ರೂಪಿಸುತ್ತವೆ ಎಂದು ನಾನು ಆಶಾವಾದಿಯಾಗಿದ್ದೇನೆ.

ಮತ್ತೊಮ್ಮೆ, ನನ್ನ ಸ್ನೇಹಿತ ಮತ್ತು ಸಹ-ನಿರೂಪಕ, ಸ್ವೀಡನ್ ಪ್ರಧಾನ ಮಂತ್ರಿ ಘನತೆವೆತ್ತ ಉಲ್ಫ್ ಕ್ರಿಸ್ಟರ್ಸನ್ ಮತ್ತು ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ನನ್ನ ಪ್ರಾಮಾಣಿಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ತುಂಬು ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನ ಮಂತ್ರಿ ಅವರ ಭಾಷಣದ ಅಂದಾಜು ಇಂಗ್ಲೀಷ್ ಅನುವಾದದ ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

****

 



(Release ID: 1983035) Visitor Counter : 81