ವಾರ್ತಾ ಮತ್ತು ಪ್ರಸಾರ ಸಚಿವಾಲಯ

ʻಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆ-2023ʼ ಅನ್ನು ಪ್ರಸ್ತಾಪಿಸಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ

Posted On: 10 NOV 2023 5:10PM by PIB Bengaluru

 

  • ಇಡೀ ಪ್ರಸಾರ ವಲಯಕ್ಕೆ ಏಕೀಕೃತ ಕಾನೂನು ನಿಯಮಾವಳಿ
  • ಕಾರ್ಯಕ್ರಮ ಸಂಹಿತೆ ಮತ್ತು ಜಾಹೀರಾತು ಸಂಹಿತೆಯ ಅನುಸರಣೆಗಾಗಿ ವಿಷಯವಸ್ತು (ಕಂಟೆಂಟ್‌) ಮೌಲ್ಯಮಾಪನ ಸಮಿತಿಗಳು
  • ಅಸ್ತಿತ್ವದಲ್ಲಿರುವ ಅಂತರ ಇಲಾಖಾ ಸಮಿತಿಯ ಸ್ಥಾನದಲ್ಲಿ ಪ್ರಸಾರ ಸಲಹಾ ಮಂಡಳಿ ಸ್ಥಾಪನೆ
  • ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ದಂಡದ ಲೆಕ್ಕಾಚಾರ
  • ವಿಕಲಚೇತನರಿಗೆ ಪ್ರವೇಶಾವಕಾಶ ಒದಗಿಸಲು ಕ್ರಮಗಳು

 

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇಂದು ʻಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆ-2023ʼರ ಬಗ್ಗೆ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ʻಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ (ನಿಯಂತ್ರಣ) ಕಾಯ್ದೆ-1995ʼ ಮೂರು ದಶಕಗಳಿಂದ ಜಾರಿಯಲ್ಲಿದ್ದು, ಇದು ಕೇಬಲ್ ಜಾಲಗಳು ಸೇರಿದಂತೆ ರೇಖೀಯ ಪ್ರಸಾರದ ವಿಷಯವಸ್ತು(ಕಂಟೆಂಟ್‌) ಮೇಲ್ವಿಚಾರಣೆ ಮಾಡುವ ಪ್ರಾಥಮಿಕ ಶಾಸನವಾಗಿ ಕಾರ್ಯನಿರ್ವಹಿಸುತ್ತಿದೆ. ಆದಾಗ್ಯೂ, ಪ್ರಸಾರ ಕ್ಷೇತ್ರವು ಗಮನಾರ್ಹ ಬದಲಾವಣೆಗಳಿಗೆ ಒಳಗಾಗಿದೆ. ತಾಂತ್ರಿಕ ಪ್ರಗತಿಯು ʻಡಿಟಿಎಚ್ʼ, ʻಐಪಿಟಿವಿʼ, ʻಒಟಿಟಿʼ ಮತ್ತು ವಿವಿಧ ಸಂಯೋಜಿತ ಮಾದರಿಗಳಂತಹ ಹೊಸ ವೇದಿಕೆಗಳ ಉಗಮಕ್ಕೆ ದಾರಿ ಮಾಡಿದೆ.

ಪ್ರಸಾರ ಕ್ಷೇತ್ರದ ಡಿಜಿಟಲೀಕರಣದೊಂದಿಗೆ, ವಿಶೇಷವಾಗಿ ಕೇಬಲ್ ಟಿವಿಯಲ್ಲಿ, ನಿಯಂತ್ರಕ ನಿಯಮಾವಳಿಗಳನ್ನು ಸುಗಮಗೊಳಿಸುವ ಅವಶ್ಯಕತೆ ಹೆಚ್ಚುತ್ತಿದೆ. ಸುಗಮ ವ್ಯವ್ಯವಹಾರವನ್ನು ಖಾತರಿಪಡಿಸುವದರ ಜೊತೆಗೆ ಪ್ರಸಾರಕರು ಹಾಗೂ ವಿತರಣಾ ವೇದಿಕೆ ನಿರ್ವಾಹಕರು ಕಾರ್ಯಕ್ರಮ ಸಂಹಿತೆ ಮತ್ತು ಜಾಹೀರಾತು ಸಂಹಿತೆಯ ಅನುಸರಣೆಯನ್ನು ಸುಧಾರಿಸಬೇಕಿದೆ. ಹೆಚ್ಚು ಸಮಗ್ರ ಕಾರ್ಯವಿಧಾನದ ಅಗತ್ಯವಿರುವ ಹಿನ್ನೆಲೆಯಲ್ಲಿ, ಅಸ್ತಿತ್ವದಲ್ಲಿರುವ ವಿಭಜಿತ ನಿಯಂತ್ರಕ ನಿಯಮಾವಳಿಗಳ ಸ್ಥಾನದಲ್ಲಿ ಹೊಸ, ಸಮಗ್ರ ಕಾನೂನು ಅಳವಡಿಸುವ ಅವಶ್ಯಕತೆ ಹೆಚ್ಚಿದೆ.

ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ʻಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆ-2023ʼರ ಕರಡನ್ನು ಪ್ರಸ್ತಾಪಿಸಿದೆ. ಕರಡು ಮಸೂದೆಯು ದೇಶದಲ್ಲಿ ಪ್ರಸಾರ ಸೇವೆಗಳನ್ನು ನಿಯಂತ್ರಿಸಲು ಏಕೀಕೃತ ನಿಯಮಾವಳಿಗಳನ್ನು ಒದಗಿಸುತ್ತದೆ. ಜೊತೆಗೆ, ಅಸ್ತಿತ್ವದಲ್ಲಿರುವ ʻಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ (ನಿಯಂತ್ರಣ) ಕಾಯ್ದೆ-1995ʼ ಮತ್ತು ಪ್ರಸ್ತುತ ದೇಶದಲ್ಲಿ ಪ್ರಸಾರ ಕ್ಷೇತ್ರವನ್ನು ನಿಯಂತ್ರಿಸುವ ಇತರ ನೀತಿ ಮಾರ್ಗಸೂಚಿಗಳನ್ನು ಬದಲಾಯಿಸಲು ಕರಡು ಮಸೂದೆಯು ಪ್ರಯತ್ನಿಸುತ್ತದೆ.

ಈ ಮಸೂದೆಯು ನಿಯಂತ್ರಕ ಪ್ರಕ್ರಿಯೆಗಳನ್ನು ಸುಗಮಗೊಳಿಸುತ್ತದೆ. ʻಓವರ್-ದಿ-ಟಾಪ್ʼ (ಒಟಿಟಿ) ವಿಷಯವಸ್ತು(ಕಂಟೆಂಟ್‌) ಮತ್ತು ಡಿಜಿಟಲ್ ಸುದ್ದಿಗಳನ್ನು ಒಳಗೊಳ್ಳುವ ಹಿನ್ನೆಲೆಯಲ್ಲಿ ಇದರ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಉದಯೋನ್ಮುಖ ತಂತ್ರಜ್ಞಾನಗಳಿಗೆ ಸಮಕಾಲೀನ ವ್ಯಾಖ್ಯಾನಗಳು ಮತ್ತು ನಿಬಂಧನೆಗಳನ್ನು ಇದು ಪರಿಚಯಿಸುತ್ತದೆ. ಇದು ʻವಿಷಯವಸ್ತು(ಕಂಟೆಂಟ್‌) ಮೌಲ್ಯಮಾಪನ ಸಮಿತಿʼಗಳು, ಸ್ವಯಂ ನಿಯಂತ್ರಣಕ್ಕಾಗಿ ʻಪ್ರಸಾರ ಸಲಹಾ ಸಮಿತಿʼ; ವಿವಿಧ ಪ್ರಸಾರ ನೆಟ್‌ವರ್ಕ್‌ ಆಪರೇಟರ್ಗಳಿಗೆ ವಿಭಿನ್ನ ಕಾರ್ಯಕ್ರಮ ಮತ್ತು ಜಾಹೀರಾತು ಕೋಡ್, ಅಂಗವಿಕಲ ವ್ಯಕ್ತಿಗಳಿಗೆ ಪ್ರವೇಶ ಕ್ರಮಗಳು ಮತ್ತು ಶಾಸನಬದ್ಧ ದಂಡಗಳು ಇತ್ಯಾದಿಗಳನ್ನು ಒದಗಿಸಲು ಉದ್ದೇಶಿಸಿದೆ.

ಮಸೂದೆಯು ಆರು ಅಧ್ಯಾಯಗಳು, 48 ವಿಭಾಗಗಳು ಮತ್ತು ಮೂರು ಅನುಸೂಚಿಗಳನ್ನು ಒಳಗೊಂಡಿದೆ.

ಮಸೂದೆಯ ಮುಖ್ಯಾಂಶಗಳು:

1. ಏಕೀಕೃತ ಮತ್ತು ಸುಧಾರಿತ: ಒಂದೇ ಶಾಸಕಾಂಗ ಚೌಕಟ್ಟಿನಡಿಯಲ್ಲಿ ವಿವಿಧ ಪ್ರಸಾರ ಸೇವೆಗಳಿಗೆ ನಿಯಂತ್ರಕ ನಿಬಂಧನೆಗಳನ್ನು ಒಟ್ಟುಗೂಡಿಸುವ ಹಾಗೂ ನವೀಕರಿಸುವ ದೀರ್ಘಕಾಲದ ಅಗತ್ಯವನ್ನು ಇದು ಪರಿಹರಿಸುತ್ತದೆ. ಈ ಕ್ರಮವು ನಿಯಂತ್ರಕ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ, ಅದನ್ನು ಹೆಚ್ಚು ಪರಿಣಾಮಕಾರಿ ಮತ್ತು ಸಮಕಾಲೀನವಾಗಿಸುತ್ತದೆ. ಪ್ರಸ್ತುತ ʻಓವರ್-ದಿ-ಟಾಪ್ʼ(ಒಟಿಟಿ) ವಿಷಯವಸ್ತು(ಕಂಟೆಂಟ್‌), ಡಿಜಿಟಲ್ ಸುದ್ದಿ ಹಾಗೂ ದೈನಂದಿನ ವಿದ್ಯಮಾನ ವರದಿಗಳ ಪ್ರಸಾರವು ʻಐಟಿ ಕಾಯ್ದೆ-2000ʼ ಮತ್ತು ಅದರ ಅಡಿಯಲ್ಲಿ ರೂಪಿಸಲಾದ ನಿಯಮಗಳ ಮೂಲಕ ನಿಯಂತ್ರಿಸಲ್ಪಡುತ್ತಿದ್ದು, ಹೊಸ ಕಾಯ್ದೆಯು ತನ್ನ ನಿಯಂತ್ರಕ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಇವುಗಳ ನಿಯಂತ್ರಣವನ್ನು ಒಳಗೊಳ್ಳಲಿದೆ.

2. ಸಮಕಾಲೀನ ವ್ಯಾಖ್ಯಾನಗಳು ಮತ್ತು ಭವಿಷ್ಯ-ಸನ್ನದ್ಧ ನಿಬಂಧನೆಗಳು: ವಿಕಸನಗೊಳ್ಳುತ್ತಿರುವ ತಂತ್ರಜ್ಞಾನಗಳು ಮತ್ತು ಸೇವೆಗಳ ವೇಗಕ್ಕೆ ಅನುಗುಣವಾಗಿ, ಮಸೂದೆಯು ಸಮಕಾಲೀನ ಪ್ರಸಾರ ಪದಗಳಿಗೆ ಸಮಗ್ರ ವ್ಯಾಖ್ಯಾನಗಳನ್ನು ಪರಿಚಯಿಸುತ್ತದೆ ಮತ್ತು ಉದಯೋನ್ಮುಖ ಪ್ರಸಾರ ತಂತ್ರಜ್ಞಾನಗಳಿಗೆ ನಿಬಂಧನೆಗಳನ್ನು ಒಳಗೊಂಡಿದೆ.

3. ಸ್ವಯಂ ನಿಯಂತ್ರಣವನ್ನು ಬಲಪಡಿಸುತ್ತದೆ: ಇದು 'ವಿಷಯ(ಕಂಟೆಂಟ್‌) ಮೌಲ್ಯಮಾಪನ ಸಮಿತಿಗಳನ್ನು' ಪರಿಚಯಿಸುವುದರೊಂದಿಗೆ ಸ್ವಯಂ ನಿಯಂತ್ರಣವನ್ನು ಹೆಚ್ಚಿಸುತ್ತದೆ. ಅಸ್ತಿತ್ವದಲ್ಲಿರುವ ʻಅಂತರ-ಇಲಾಖಾ ಸಮಿತಿʼಯ ಸ್ಥಾನವನ್ನು ಹೆಚ್ಚು ಪಾಲ್ಗೊಳ್ಳುವಿಕೆಯನ್ನು ಹೊಂದಿರುವ ಮತ್ತು ವಿಶಾಲವಾದ 'ಪ್ರಸಾರ ಸಲಹಾ ಮಂಡಳಿ'ಯೊಂದಿಗೆ ತುಂಬುತ್ತದೆ.

4. ವಿಭಿನ್ನ ಕಾರ್ಯಕ್ರಮ ಸಂಹಿತೆ ಮತ್ತು ಜಾಹೀರಾತು ಸಂಹಿತೆ: ಇದು ವಿವಿಧ ಸೇವೆಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಗಳಿಗೆ ವಿಭಿನ್ನ ಕಾರ್ಯವಿಧಾನಳ ಅಳವಡಿಕೆಗೆ ಅನುಮತಿಸುತ್ತದೆ. ಇದರ ಅಡಿಯಲ್ಲಿ ಪ್ರಸಾರಕರು ಸ್ವಯಂ ವರ್ಗೀಕರಣ ಘೋಷಿಸುವುದು ಅಗತ್ಯವಾಗಿದೆ ಮತ್ತು ನಿರ್ಬಂಧಿತ ವಿಷಯವಸ್ತುವಿಗೆ(ಕಂಟೆಂಟ್‌) ದೃಢವಾದ ಪ್ರವೇಶ ನಿಯಂತ್ರಣ ಕ್ರಮಗಳನ್ನು ಒಳಗೊಂಡಿದೆ.

5. ವಿಕಲಚೇತನರಿಗೆ ಪ್ರವೇಶಾವಕಾಶ: ಈ ಮಸೂದೆಯು ಸಮಗ್ರ ಪ್ರವೇಶಾವಕಾಶ ಮಾರ್ಗಸೂಚಿಗಳನ್ನು ಹೊರಡಿಸಲು ಅವಕಾಶಗಳನ್ನು ಒದಗಿಸುವ ಮೂಲಕ ವಿಕಲಚೇತನರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುತ್ತದೆ.

6. ಶಾಸನಬದ್ಧ ದಂಡಗಳು: ಕರಡು ಮಸೂದೆಯು ನಿರ್ವಾಹಕರು ಮತ್ತು ಪ್ರಸಾರಕರಿಗೆ ಸಲಹೆ, ಎಚ್ಚರಿಕೆ, ಖಂಡನೆ ಅಥವಾ ವಿತ್ತೀಯ ದಂಡಗಳಂತಹ ಶಾಸನಬದ್ಧ ದಂಡಗಳನ್ನು ಪರಿಚಯಿಸುತ್ತದೆ. ಜೈಲು ಶಿಕ್ಷೆ ಮತ್ತು / ಅಥವಾ ದಂಡದ ನಿಬಂಧನೆ ಹಾಗೇ ಉಳಿಸಿಕೊಳ್ಳಲಾಗಿದೆಯಾದರೂ, ಅತ್ಯಂತ ಗಂಭೀರ ಅಪರಾಧಗಳಿಗೆ ಮಾತ್ರ ಅದನ್ನು ಸೀಮಿತಗೊಳಿಸುವ ಮೂಲಕ ನಿಯಂತ್ರಣಕ್ಕೆ ಸಮತೋಲಿತ ವಿಧಾನವನ್ನು ಖಚಿತಪಡಿಸುತ್ತದೆ.

7. ನ್ಯಾಯಸಮ್ಮತ ದಂಡಗಳು: ವಿತ್ತೀಯ ದಂಡಗಳನ್ನು ಸಂಸ್ಥೆಯ ಆರ್ಥಿಕ ಸಾಮರ್ಥ್ಯದೊಂದಿಗೆ ನಂಟು ಮಾಡಲಾಗುತ್ತದೆ, ನ್ಯಾಯಸಮ್ಮತತೆ ಮತ್ತು ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ದಂಡಕ್ಕೆ ಒಳಗಾಗುವವರ ಹೂಡಿಕೆ ಮತ್ತು ವಹಿವಾಟು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

8. ಮೂಲಸೌಕರ್ಯ ಹಂಚಿಕೆ, ಪ್ಲಾಟ್‌ಫಾರ್ಮ್‌ ಸೇವೆಗಳು ಮತ್ತು ಮಾರ್ಗದ ಹಕ್ಕು: ಈ ಮಸೂದೆಯು ಪ್ರಸಾರ ನೆಟ್‌ವರ್ಕ್‌ ಆಪರೇಟರ್‌ಗಳ ನಡುವೆ ಮೂಲಸೌಕರ್ಯ ಹಂಚಿಕೆ ಮತ್ತು ಪ್ಲಾಟ್‌ಫಾರ್ಮ್‌ ಸೇವೆಗಳ ಕ್ಯಾರೇಜ್‌ ನಿಬಂಧನೆಗಳನ್ನು ಸಹ ಒಳಗೊಂಡಿದೆ. ಇದಲ್ಲದೆ, ಇದು ಸ್ಥಳಾಂತರ ಮತ್ತು ಮಾರ್ಪಾಡುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪರಿಹರಿಸಲು ʻರೈಟ್ ಆಫ್ ವೇʼ ವಿಭಾಗವನ್ನು ಸುಗಮಗೊಳಿಸುತ್ತದೆ. ಜೊತೆಗೆ ರಚನಾತ್ಮಕ ವಿವಾದ ಪರಿಹಾರ ಕಾರ್ಯವಿಧಾನವನ್ನು ಸ್ಥಾಪಿಸುತ್ತದೆ.

ʻಕರಡು ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆ-2023ʼನೊಂದಿಗೆ ದೇಶದಲ್ಲಿ ಪಾರದರ್ಶಕತೆ, ಸ್ವಯಂ ನಿಯಂತ್ರಣ ಮತ್ತು ಭವಿಷ್ಯ ಸನ್ನದ್ಧ ಪ್ರಸಾರ ಸೇವೆಗಳ ಹೊಸ ಯುಗವನ್ನು ಪ್ರಾರಂಭಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಬದ್ಧವಾಗಿದೆ.

ಸಚಿವಾಲಯವು ಈ ಕ್ಷೇತ್ರದ ತಜ್ಞರು, ಪ್ರಸಾರ ಸೇವೆಗಳ ಪೂರೈಕೆದಾರರು ಮತ್ತು ಸಾರ್ವಜನಿಕರು ಸೇರಿದಂತೆ ವ್ಯಾಪಕ ಶ್ರೇಣಿಯ ಮಧ್ಯಸ್ಥಗಾರರಿಂದ ಮೇಲಿನ ಮಸೂದೆಯ ಬಗ್ಗೆ ಪ್ರತಿಕ್ರಿಯೆ ಮತ್ತು ಅಭಿಪ್ರಾಯಗಳನ್ನು ಆಹ್ವಾನಿಸುತ್ತದೆ. ಈ ಪತ್ರಿಕಾ ಪ್ರಕಟಣೆಯ ದಿನಾಂಕದಿಂದ 30 ದಿನಗಳ ಒಳಗೆ ಸಲಹೆ-ಸೂಚನೆಗಳನ್ನು ಇಮೇಲ್ jsb-moib[at]gov[dot]in ಮೂಲಕ ಕಳುಹಿಸಬಹುದು.

ಪ್ರಸ್ತಾವಿತ ಮಸೂದೆಯು ಈ ಕೆಳಗಿನ ಲಿಂಕ್‌ನಲ್ಲಿ ಲಭ್ಯವಿದೆ

https://mib.gov.in/sites/default/files/Public%20Notice_0.pdf

 

****



(Release ID: 1976411) Visitor Counter : 105