ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ‌ ಡಾ. ಪಿ.ಕೆ. ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ʻದೆಹಲಿ-ಎನ್‌ಸಿಆರ್‌ʼನಲ್ಲಿ ವಾಯುಮಾಲಿನ್ಯ ಕುರಿತ ಉನ್ನತ ಮಟ್ಟದ ಕಾರ್ಯಪಡೆ ಸಭೆ ನಡೆಯಿತು


ʻದೆಹಲಿ-ಎನ್‌ಸಿಆರ್ʼನಲ್ಲಿ ವಾಯುಮಾಲಿನ್ಯವನ್ನು ತಡೆಗಟ್ಟಲು ಮತ್ತು ತಗ್ಗಿಸಲು ಕೈಗೊಳ್ಳಲಾಗುತ್ತಿರುವ ವಿವಿಧ ಕ್ರಮಗಳನ್ನು ಪರಿಶೀಲಿಸಿದರು

ಸ್ವಚ್ಛ ಇಂಧನ  ಮತ್ತು ಇ-ವಾಹನಗಳತ್ತ ಬದಲಾಗಬೇಕಾಗಿದೆ, ʻಇವಿ ಚಾರ್ಜಿಂಗ್ʼ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕು ಎಂದರು

ʻಜಿಆರ್‌ಎಪಿʼನಲ್ಲಿ ಪಟ್ಟಿ ಮಾಡಲಾದ ಕ್ರಮಗಳ ಕಟ್ಟುನಿಟ್ಟಾದ ಅನುಷ್ಠಾನಕ್ಕೆ ಕರೆ ನೀಡಿದರು

ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಾದ್ಯಂತ ಭತ್ತದ ಪೈರು ಸುಡುವುದನ್ನು ಕಡಿಮೆ ಮಾಡಬೇಕು: ಪ್ರಧಾನ ಕಾರ್ಯದರ್ಶಿ

ʻದೆಹಲಿ-ಎನ್‌ಸಿಆರ್‌ʼನಲ್ಲಿ ಪ್ರತಿಕೂಲ ಗಾಳಿಯ ಗುಣಮಟ್ಟದ ಸಮಸ್ಯೆಯನ್ನು ಎದುರಿಸಲು ಸನ್ನದ್ಧತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಪರಿಶೀಲನಾ ಸಭೆಯಲ್ಲಿ ನಿರ್ಧರಿಸಲಾಯಿತು

Posted On: 13 OCT 2023 6:58PM by PIB Bengaluru

ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು ಇಂದು ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿ ʻದೆಹಲಿ-ಎನ್‌ಸಿಆರ್ʼನಲ್ಲಿ ವಾಯುಮಾಲಿನ್ಯ ಕುರಿತ ಉನ್ನತ ಮಟ್ಟದ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿದರು. ಚಳಿಗಾಲ ಸಮೀಪಿಸುತ್ತಿದ್ದಂತೆ ʻದೆಹಲಿ-ಎನ್‌ಸಿಆರ್‌ʼನಲ್ಲಿ ಪ್ರತಿಕೂಲ ಗಾಳಿಯ ಗುಣಮಟ್ಟದ ಸಮಸ್ಯೆಯನ್ನು ಎದುರಿಸಲು ವಿವಿಧ ಮಧ್ಯಸ್ಥಗಾರರ ಸನ್ನದ್ಧತೆಯನ್ನು ಪರಿಶೀಲಿಸಲು ಈ ಸಭೆ ನಡೆಸಲಾಯಿತು.

ವಾಯುಮಾಲಿನ್ಯದ ವಿವಿಧ ಮೂಲಗಳ ಪರಿಣಾಮವನ್ನು ಕಡಿಮೆ ಮಾಡಲು ಕೈಗೊಳ್ಳಲಾಗುತ್ತಿರುವ ವಿವಿಧ ಕ್ರಮಗಳ ಬಗ್ಗೆ ಪ್ರಧಾನ ಕಾರ್ಯದರ್ಶಿಯವರು ಸಭೆಯಲ್ಲಿ ವಿವರವಾಗಿ ಚರ್ಚಿಸಿದರು. ಕೈಗಾರಿಕೆಗಳಿಂದ ಮಾಲಿನ್ಯ, ವಾಹನಗಳಿಂದ ಮಾಲಿನ್ಯ; ನಿರ್ಮಾಣ ಮತ್ತು ನೆಲಸಮ (ಸಿ&ಡಿ) ಚಟುವಟಿಕೆಗಳಿಂದ ಧೂಳು; ರಸ್ತೆಗಳು ಮತ್ತು ʻಆರ್‌ಒಡಬ್ಲ್ಯೂʼಗಳಿಂದ ಧೂಳು; ಸ್ಥಳೀಯ ಸಂಸ್ಥೆಗಳ ಘನ ತ್ಯಾಜ್ಯ(ಎಂಎಸ್‌ಡಬ್ಲ್ಯೂ), ಜೈವಿಕ ಮತ್ತು ಇತರ ತ್ಯಾಜ್ಯಗಳನ್ನು ಸುಡುವುದು; ಕೃಷಿ ತ್ಯಾಜ್ಯ ಸುಡುವಿಕೆ ಸೇರಿದಂತೆ ವಿವಿಧ ಮಾಲಿನ್ಯಗಳು ಇದರಲ್ಲಿ ಸೇರಿವೆ. ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಹಸಿರೀಕರಣ ಮತ್ತು ನೆಡುತೋಪು ಉಪಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಶ್ರೇಣೀಕೃತ ʻಪ್ರತಿಕ್ರಿಯೆ ಕ್ರಿಯಾ ಯೋಜನೆʼ(ಜಿಆರ್‌ಎಪಿ) ಅನುಷ್ಠಾನ, ಅದರ ಮೇಲ್ವಿಚಾರಣೆ ಮತ್ತು ಕ್ಷೇತ್ರ ಮಟ್ಟದಲ್ಲಿ ಅದರ ಅನುಷ್ಠಾನವನ್ನು ಸುಧಾರಿಸುವ ಕ್ರಮಗಳ ಬಗ್ಗೆ ಚರ್ಚಿಸಿದರು. ಗಾಳಿಯ ಗುಣಮಟ್ಟ ಹದಗೆಡುವುದನ್ನು ತಡೆಯಲು ಸಂಬಂಧಪಟ್ಟ ಎಲ್ಲರೂ ʻಜಿಆರ್‌ಎಪಿʼಯಲ್ಲಿ ಪಟ್ಟಿ ಮಾಡಿದ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು.

ʻಎನ್‌ಸಿಆರ್ʼ ಪ್ರದೇಶದ ಕೈಗಾರಿಕೆಗಳನ್ನು ಶುದ್ಧ ಇಂಧನ ಮೂಲದ ಕೈಗಾರಿಕೆಗಳಾಗಿ ಪರಿವರ್ತಿಸಲಾಗುತ್ತಿದೆ. 240 ಕೈಗಾರಿಕಾ ಪ್ರದೇಶಗಳಲ್ಲಿ 211 ಪ್ರದೇಶಗಳಿಗೆ ಈಗಾಗಲೇ ʻಸಿಎನ್‌ಜಿʼ ಸಂಪರ್ಕವನ್ನು ಒದಗಿಸಲಾಗಿದೆ ಎಂದು ʻಸಿಎಕ್ಯೂಎಂʼ ಅಧ್ಯಕ್ಷರಾದ ಡಾ. ಎಂ.ಎಂ.ಕುಟ್ಟಿ ಮಾಹಿತಿ ನೀಡಿದರು. ಅಂತೆಯೇ, 7759 ಇಂಧನ ಆಧಾರಿತ ಕೈಗಾರಿಕೆಗಳಲ್ಲಿ, 7449 ʻಪಿಎನ್‌ಜಿʼ / ಅನುಮೋದಿತ ಇಂಧನಗಳಿಗೆ ಪರಿವರ್ತನೆಗೊಂಡಿವೆ.

ಇ-ವಾಹನಗಳಲ್ಲಿ ಹೆಚ್ಚಳ ಕಂಡುಬಂದಿದೆ ಮತ್ತು ಪ್ರಸ್ತುತ ʻಎನ್‌ಸಿಆರ್‌ʼನಲ್ಲಿ 4,12,393 ʻಇ-ವಾಹನʼಗಳು ನೋಂದಾಯಿಸಲ್ಪಟ್ಟಿವೆ ಎಂದು ʻಸಿಎಕ್ಯೂಎಂʼ ಅಧ್ಯಕ್ಷರು ವಿವರಿಸಿದರು. ಇ-ಬಸ್ಸುಗಳು ಮತ್ತು ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯೂ ಹೆಚ್ಚಾಗಿದೆ ಮತ್ತು ಈಗ ದೆಹಲಿಯಲ್ಲಿ 4793 ಇವಿ ಚಾರ್ಜಿಂಗ್ ಕೇಂದ್ರಗಳಿವೆ ಎಂದು ಮಾಹಿತಿ ನೀಡಿದರು.

ನಿರ್ಮಾಣ ಮತ್ತು ನೆಲಸಮ (ಸಿ&ಡಿ) ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ, ದಿನಕ್ಕೆ 5150 ಟನ್(ಟಿಪಿಡಿ) ಸಾಮರ್ಥ್ಯದ 5 ಸಿ&ಡಿ ತ್ಯಾಜ್ಯ ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ದೆಹಲಿಯಲ್ಲಿ 1000 ಟಿಪಿಡಿ ಸಾಮರ್ಥ್ಯದ ಮತ್ತೊಂದು ಘಟಕವು ಸಿದ್ಧಗೊಳ್ಳುತ್ತಿದೆ ಎಂದು ʻಸಿಎಕ್ಯೂಎಂʼ ಮಾಹಿತಿ ನೀಡಿದರು. ಹರಿಯಾಣದಲ್ಲಿ, 600 ಟಿಪಿಡಿ ಸಾಮರ್ಥ್ಯದ ʻಸಿ &ಡಿʼ ಘಟಕವು ಕಾರ್ಯನಿರ್ವಹಿಸುತ್ತಿದೆ ಮತ್ತು 700 ಟಿಪಿಡಿ ಸಾಮರ್ಥ್ಯದ ಮತ್ತೊಂದು ಘಟಕ ಸಿದ್ಧವಾಗುತ್ತಿದೆ. ಉತ್ತರ ಪ್ರದೇಶದಲ್ಲಿ, 1300 ಟಿಪಿಡಿ ಸಾಮರ್ಥ್ಯದ ಘಟಕ ಕಾರ್ಯನಿರ್ವಹಿಸುತ್ತಿದೆ ಮತ್ತು 2 ಘಟಕಗಳು ಸಿದ್ಧವಾಗುತ್ತಿವೆ. ʻಸಿ&ಡಿʼ ತ್ಯಾಜ್ಯ ಸಂಸ್ಕರಣಾ ಸಾಮರ್ಥ್ಯವನ್ನು ಹೆಚ್ಚಿಸಲು ಎಲ್ಲಾ ರಾಜ್ಯಗಳನ್ನು ಕೋರಲಾಯಿತು.

ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಾದ್ಯಂತ ಭತ್ತದ ಪೈರು ಸುಡುವುದನ್ನು ಕಡಿಮೆ ಮಾಡುವ ಪ್ರಯತ್ನದದ ಭಾಗವಾಗಿ, ಮೂರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಈ ವಿಷಯವನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲು ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳು ಸೂಚನೆ ನೀಡಿದರು. ಬೆಳೆ ಶೇಷ ನಿರ್ವಹಣೆ (ಸಿಆರ್‌ಎಂ) ಯಂತ್ರಗಳ ಮೂಲಕ ಭತ್ತದ ಹುಲ್ಲಿನ ಆಂತರಿಕ ನಿರ್ವಹಣೆ ಮತ್ತು ಜೈವಿಕ ವಿಭಜಕಗಳ ಬಳಕೆಯ ಬಗ್ಗೆ ಅವರು ಸಲಹೆ ನೀಡಿದರು. ತಂತ್ರಜ್ಞಾನವನ್ನು ಸುಧಾರಿಸಲು ಅವರು ಭಾರತೀಯ ಕೃಷಿ ಸಂಶೋಧನಾ ಮಂಡಳಿಗೆ (ಐಸಿಎಆರ್) ಸಲಹೆ ನೀಡಿದರು. ಭತ್ತದ ಹುಲ್ಲಿನ ಪೂರ್ವ ನಿರ್ವಹಣೆಯ ಬಗ್ಗೆ ವಿವರಿಸಿದ ಅವರು, ಭತ್ತದ ಹುಲ್ಲಿನ ಲಾಭದಾಯಕ ಬಳಕೆಯ ಬಗ್ಗೆ ಸಂಶೋಧನೆ ನಡೆಸುವಂತೆ ಸಲಹೆ ನೀಡಿದರು. ಭತ್ತದ ಹುಲ್ಲಿನ ಪರಿಣಾಮಕಾರಿ ಬಳಕೆಗಾಗಿ ಬಾಲಿಂಗ್, ಬ್ರಿಕ್ವೆಟಿಂಗ್ ಮತ್ತು ಪೆಲೆಟ್ ಇತ್ಯಾದಿಗಳಿಗೆ ಮೂಲಸೌಕರ್ಯಗಳ ಜೊತೆಗೆ ಸುರುಳಿ ಸುತ್ತಿದ ಹುಲ್ಲಿಗೆ ಸಾಕಷ್ಟು ಶೇಖರಣಾ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವಂತೆ ಅವರು ಒತ್ತಿ ಹೇಳಿದರು. ಇದಲ್ಲದೆ, ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಜೈವಿಕ ತ್ಯಾಜ್ಯವನ್ನೂ ಸಹ ಇಂಧನವಾಗಿ ಬಳಸಲು, ಅದರಲ್ಲೂ ಭತ್ತದ ಹುಲ್ಲಿನ ಮೇಲೆ ಗಮನ ಕೆಂದ್ರೀಕರಿಸಲು,  ನಿಗದಿತ ಗುರಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಬಗ್ಗೆಯೂ ಚರ್ಚಿಸಲಾಯಿತು.

ಬಯೋಮಾಸ್ ಪೆಲೆಟ್‌ಗಳ ಖರೀದಿ, ಇಂಧನ ಸಚಿವಾಲಯ ಹೊರಡಿಸಿದ ಮಾನದಂಡ ಬೆಲೆಯನ್ನು ಅಳವಡಿಸಿಕೊಳ್ಳುವುದು, ಮಾರ್ಚ್ 2024ರ ವೇಳೆಗೆ ಇಡೀ ಎನ್‌ಸಿಆರ್ ಪ್ರದೇಶದಲ್ಲಿ ಅನಿಲ ಮೂಲಸೌಕರ್ಯ ಮತ್ತು ಪೂರೈಕೆಯನ್ನು ವಿಸ್ತರಿಸುವುದು ಹಾಗೂ ಬೇಡಿಕೆಯ ಮೇರೆಗೆ ಬಯೋಮಾಸ್‌ ಅನ್ನು ತ್ವರಿತವಾಗಿ ಪೂರೈಸುವುದನ್ನು ಖಚಿತಪಡಿಸಿಕೊಳ್ಳುವುದು ಮುಂತಾದ ಹಲವಾರು ಕ್ರಮಗಳನ್ನು ಒಳಗೊಂಡ ಬಹುಮುಖಿ ವಿಧಾನದ ಬಗ್ಗೆ ಪ್ರಧಾನ ಕಾರ್ಯದರ್ಶಿಗಳು ಒತ್ತಿ ಹೇಳಿದರು. ಇದಲ್ಲದೆ, ಅತಿಯಾಗಿ ಬಳಕೆಯಾದ ವಾಹನಗಳು ಹಾಗೂ ಓವರ್‌ಲೋಡ್‌ ಸೇರಿದಂತೆ  ಇತರ ಕಾರಣಗಳಿಂದಾಗಿ ಮಾಲಿನ್ಯಕ್ಕೆ ಒಳಗಾಗುವ ವಾಹನಗಳನ್ನು ಬದಲಾಯಿಸಲು ತೀವ್ರವಾದ ಕ್ರಮಗಳನ್ನು ಕೈಗೊಳ್ಳಬೇಕು. ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆಯಲ್ಲಿ (ಜಿಆರ್‌ಎಪಿ) ಸೂಚಿಸಲಾದ ಕ್ರಮಗಳನ್ನು ಸಂಬಂಧಪಟ್ಟ ಎಲ್ಲರೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಎಲ್ಲಾ ಪ್ರಮುಖ ಪಾಲುದಾರರು ಭಾಗವಹಿಸಿದ್ದರು. ಪರಿಸರ, ಕೃಷಿ, ವಿದ್ಯುತ್, ಪೆಟ್ರೋಲಿಯಂ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ವಸತಿ ಮತ್ತು ನಗರ ವ್ಯವಹಾರಗಳು, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯಗಳಲ್ಲಿ ಭಾರತ ಸರ್ಕಾರದ ಕಾರ್ಯದರ್ಶಿಗಳು, ಎನ್‌ಸಿಆರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ವಾಯು ಗುಣಮಟ್ಟ ನಿರ್ವಹಣಾ ಆಯೋಗ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿಯ ʻಎನ್‌ಸಿಟಿʼ ಮುಖ್ಯ ಕಾರ್ಯದರ್ಶಿಗಳು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಆಯಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು / ಡಿಪಿಸಿಸಿ ಪರಿಶೀಲನಾ ಸಭೆಯಲ್ಲಿ ಉಪಸ್ಥಿತರಿದ್ದರು.

 

******

 



(Release ID: 1968095) Visitor Counter : 83