ಪ್ರಧಾನ ಮಂತ್ರಿಯವರ ಕಛೇರಿ

ಭಾರತದ ನಾಗಪಟ್ಟಿಣಂ ಮತ್ತು ಶ್ರೀಲಂಕಾದ ಕಂಕಸಂತುರೈ ನಡುವಿನ ದೋಣಿ ಸೇವೆಗಳನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ

 
"ಭಾರತ ಮತ್ತು ಶ್ರೀಲಂಕಾ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿವೆ"
 
"ದೋಣಿ ಸೇವೆಯು ಎಲ್ಲಾ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಜೀವಂತವಾಗಿರಿಸುತ್ತದೆ"
 
“ಸಂಪರ್ಕವು ಎರಡು ನಗರಗಳನ್ನು ಹತ್ತಿರಕ್ಕೆ ತರುವುದು ಮಾತ್ರವಲ್ಲ. ಇದು ನಮ್ಮ ದೇಶಗಳನ್ನೂ ಹತ್ತಿರಕ್ಕೆ ತರುತ್ತದೆ, ನಮ್ಮ ಜನರನ್ನು ಹತ್ತಿರಗೊಳಿಸುತ್ತದೆ ಮತ್ತು ನಮ್ಮ ಹೃದಯಗಳನ್ನು ಹತ್ತಿರಕ್ಕೆ ತರುತ್ತದೆ”
 
"ಪ್ರಗತಿ ಮತ್ತು ಅಭಿವೃದ್ಧಿಯ ಪಾಲುದಾರಿಕೆಯು ಭಾರತ - ಶ್ರೀಲಂಕಾ ದ್ವಿಪಕ್ಷೀಯ ಸಂಬಂಧದ ಪ್ರಬಲ ಸ್ತಂಭಗಳಲ್ಲಿ ಒಂದಾಗಿದೆ"
 
"ಶ್ರೀಲಂಕಾದಲ್ಲಿ ಭಾರತದ ನೆರವಿನೊಂದಿಗೆ ಜಾರಿಗೆ ತಂದ ಯೋಜನೆಗಳು ಜನರ ಜೀವನವನ್ನು ಮುಟ್ಟಿವೆ"

Posted On: 14 OCT 2023 8:58AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೋ ಸಂದೇಶದ ಮೂಲಕ ಭಾರತದ ನಾಗಪಟ್ಟಿಣಂ ಮತ್ತು ಶ್ರೀಲಂಕಾದ ಕಂಕಸಂತುರೈ ನಡುವಿನ ದೋಣಿ ಸೇವೆಗಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಭಾರತ ಮತ್ತು ಶ್ರೀಲಂಕಾ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿವೆ ಮತ್ತು ನಾಗಪಟ್ಟಿಣಂ ಮತ್ತು ಕಂಕಸಂತುರೈ ನಡುವೆ ದೋಣಿ ಸೇವೆಯ ಆರಂಭವು ಎರಡೂ ರಾಷ್ಟ್ರಗಳ ನಡುವಿನ ಸಂಬಂಧವನ್ನು ಬಲಪಡಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಿದೆ ಎಂದು ಹೇಳಿದರು.

ಭಾರತ ಮತ್ತು ಶ್ರೀಲಂಕಾ ನಡುವಿನ ಸಂಸ್ಕೃತಿ, ವಾಣಿಜ್ಯ ಮತ್ತು ನಾಗರಿಕತೆಯ ಹಂಚಿಕೆಯ ಇತಿಹಾಸವನ್ನು ಒತ್ತಿಹೇಳಿದ ಅವರು, ನಾಗಪಟ್ಟಿಣಂ ಮತ್ತು ಹತ್ತಿರದ ಪಟ್ಟಣಗಳು ಶ್ರೀಲಂಕಾ ಸೇರಿದಂತೆ ಹಲವು ದೇಶಗಳೊಂದಿಗೆ ಸಮುದ್ರ ವ್ಯಾಪಾರಕ್ಕೆ ಹೆಸರುವಾಸಿಯಾಗಿವೆ ಮತ್ತು ಐತಿಹಾಸಿಕ ಬಂದರು ಪೂಂಪುಹಾರ್ ಪ್ರಾಚೀನ ತಮಿಳು ಸಾಹಿತ್ಯದಲ್ಲಿ ಕೇಂದ್ರಸ್ಥಾನವಾಗಿ ಉಲ್ಲೇಖಿಸಲ್ಪಟ್ಟಿದೆ ಎಂದು ಗಮನಸೆಳೆದರು. ಎರಡು ದೇಶಗಳ ನಡುವಿನ ದೋಣಿಗಳು ಮತ್ತು ಹಡಗುಗಳ ಚಲನೆಯನ್ನು ವಿವರಿಸುವ ಸಂಗಮ್ ಯುಗದ ಸಾಹಿತ್ಯಗಳಾದ ಪಟ್ಟಿನಪ್ಪಲೈ ಮತ್ತು ಮಣಿಮೇಕಲೈ ಬಗ್ಗೆ ಅವರು ಮಾತನಾಡಿದರು. ಭಾರತ ಮತ್ತು ಶ್ರೀಲಂಕಾವನ್ನು ಸಂಪರ್ಕಿಸುವ ಸೇತುವೆಯನ್ನು ಉಲ್ಲೇಖಿಸುವ ಮಹಾನ್ ಕವಿ ಸುಬ್ರಮಣ್ಯ ಭಾರತಿ ಅವರ ‘ಸಿಂಧು ನದಿಯಿಂ ಮಿಸಾಯಿ’ಗೀತೆಯನ್ನು ಪ್ರಧಾನಿಯವರು ಪ್ರಸ್ತಾಪಿಸಿದರು. ದೋಣಿ ಸೇವೆಯು ಎಲ್ಲಾ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಜೀವಂತವಾಗಿರಿಸುತ್ತದೆ ಎಂದು ಅವರು ಹೇಳಿದರು.

ಶ್ರೀಲಂಕಾ ಅಧ್ಯಕ್ಷ ವಿಕ್ರಮಸಿಂಘೆ ಅವರ ಇತ್ತೀಚಿನ ಭೇಟಿಯ ಸಂದರ್ಭದಲ್ಲಿ, ಸಂಪರ್ಕವನ್ನು ಕೇಂದ್ರ ವಿಷಯವಾಗಿಸಿಕೊಂಡ ಆರ್ಥಿಕ ಪಾಲುದಾರಿಕೆಗಾಗಿ ವಿಷನ್ ಡಾಕ್ಯುಮೆಂಟ್ ಅನ್ನು ಜಂಟಿಯಾಗಿ ಅಳವಡಿಸಿಕೊಳ್ಳಲಾಗಿದೆ ಎಂದು ಪ್ರಧಾನಿ ತಿಳಿಸಿದರು. “ಸಂಪರ್ಕವು ಎರಡು ನಗರಗಳನ್ನು ಹತ್ತಿರಕ್ಕೆ ತರುವುದು ಮಾತ್ರವಲ್ಲ. ಇದು ನಮ್ಮ ದೇಶಗಳನ್ನು ಹತ್ತಿರಕ್ಕೆ ತರುತ್ತದೆ, ನಮ್ಮ ಜನರನ್ನು ಹತ್ತಿರಗೊಳಿಸುತ್ತದೆ ಮತ್ತು ನಮ್ಮ ಹೃದಯಗಳನ್ನು ಹತ್ತಿರಕ್ಕೆ ತರುತ್ತದೆ”ಎಂದು ಪ್ರಧಾನಿ ಹೇಳಿದರು. ಸಂಪರ್ಕವು ವ್ಯಾಪಾರ, ಪ್ರವಾಸೋದ್ಯಮ ಮತ್ತು ಜನರ ನಡುವಿನ ಸಂಬಂಧವನ್ನು ಹೆಚ್ಚಿಸುತ್ತದೆ ಮತ್ತು ಎರಡೂ ದೇಶಗಳ ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

2015ರಲ್ಲಿ ದೆಹಲಿ ಮತ್ತು ಕೊಲಂಬೊ ನಡುವೆ ನೇರ ವಿಮಾನಯಾನ ಆರಂಭಿಸಿದಾಗ ಶ್ರೀಲಂಕಾಕ್ಕೆ ಭೇಟಿ ನೀಡಿದ್ದನ್ನು ಪ್ರಧಾನಿ ಸ್ಮರಿಸಿಕೊಂಡರು. ನಂತರ, ಶ್ರೀಲಂಕಾದಿಂದ ತೀರ್ಥಕ್ಷೇತ್ರ ಪಟ್ಟಣವಾದ ಕುಶಿನಗರಕ್ಕೆ ಮೊದಲ ಅಂತರರಾಷ್ಟ್ರೀಯ ವಿಮಾನದ ಲ್ಯಾಂಡಿಂಗ್ ಅನ್ನು ಸಹ ಸಂಭ್ರಮಿಸಲಾಯಿತು ಎಂದು ಪ್ರಧಾನಿ ಹೇಳಿದರು. 2019 ರಲ್ಲಿ ಚೆನ್ನೈ ಮತ್ತು ಜಾಫ್ನಾ ನಡುವೆ ನೇರ ವಿಮಾನಯಾನ ಪ್ರಾರಂಭವಾಯಿತು ಮತ್ತು ಈಗ ನಾಗಪಟ್ಟಿಣಂ ಮತ್ತು ಕಂಕಸಂತುರೈ ನಡುವಿನ ದೋಣಿ ಸೇವೆಯು ಈ ದಿಕ್ಕಿನಲ್ಲಿ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.

ಸಂಪರ್ಕ ಕುರಿತ ನಮ್ಮ ದೃಷ್ಟಿಕೋನವು ಸಾರಿಗೆ ವಲಯವನ್ನು ಮೀರಿದೆ, ಭಾರತ ಮತ್ತು ಶ್ರೀಲಂಕಾವು ಫಿನ್-ಟೆಕ್ ಮತ್ತು ಇಂಧನದಂತಹ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ನಿಕಟವಾಗಿ ಸಹಕರಿಸುತ್ತದೆ ಎಂದು ಅವರು ಒತ್ತಿಹೇಳಿದರು. ಯುಪಿಐನಿಂದಾಗಿ ಡಿಜಿಟಲ್ ಪಾವತಿಗಳು ಭಾರತದಲ್ಲಿ ಜನಾಂದೋಲನ ಮತ್ತು ಜೀವನ ವಿಧಾನವಾಗಿವೆ ಎಂದು ಹೇಳಿದ ಶ್ರೀ ಮೋದಿ, ಯುಪಿಐ ಮತ್ತು ಲಂಕಾ ಪೇ ಅನ್ನು ಲಿಂಕ್ ಮಾಡುವ ಮೂಲಕ ಎರಡೂ ಸರ್ಕಾರಗಳು ಫಿನ್-ಟೆಕ್ ವಲಯದ ಸಂಪರ್ಕದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು. ಭಾರತ ಮತ್ತು ಶ್ರೀಲಂಕಾ ಎರಡೂ ದೇಶಗಳ ಅಭಿವೃದ್ಧಿ ಪಯಣಕ್ಕೆ ಇಂಧನ ಭದ್ರತೆಯು ನಿರ್ಣಾಯಕವಾಗಿರುವುದರಿಂದ ಇಂಧನ ಭದ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಉಭಯ ರಾಷ್ಟ್ರಗಳ ನಡುವೆ ಇಂಧನ ಗ್ರಿಡ್‌ ಗಳನ್ನು ಸಂಪರ್ಕಿಸುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಪ್ರಗತಿ ಮತ್ತು ಅಭಿವೃದ್ಧಿಯ ಪಾಲುದಾರಿಕೆಯು ಭಾರತ - ಶ್ರೀಲಂಕಾದ ದ್ವಿಪಕ್ಷೀಯ ಸಂಬಂಧದ ಪ್ರಬಲ ಸ್ತಂಭಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಯಾರನ್ನೂ ಹಿಂದೆ ಬಿಡದೆ ಎಲ್ಲರ ಅಭಿವೃದ್ಧಿಯನ್ನು ಸಾಧಿಸುವುದು ನಮ್ಮ ದೃಷ್ಟಿಯಾಗಿದೆ ಎಂದು ಅವರು ಹೇಳಿದರು. ಶ್ರೀಲಂಕಾದಲ್ಲಿ ಭಾರತದ ನೆರವಿನೊಂದಿಗೆ ಜಾರಿಗೆ ತಂದ ಯೋಜನೆಗಳು ಜನರ ಬದುಕನ್ನು ಮುಟ್ಟಿವೆ ಎಂದು ಪ್ರಧಾನಿ ಹೇಳಿದರು. ಉತ್ತರ ಪ್ರಾಂತ್ಯದಲ್ಲಿ ವಸತಿ, ನೀರು, ಆರೋಗ್ಯ ಮತ್ತು ಜೀವನೋಪಾಯದ ಬೆಂಬಲಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳು ಪೂರ್ಣಗೊಂಡಿವೆ ಮತ್ತು ಕಂಕಸಂತುರೈ ಬಂದರಿನ ಮೇಲ್ದರ್ಜೆಗೆ ಬೆಂಬಲವನ್ನು ನೀಡುತ್ತಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು. ಉತ್ತರದಿಂದ ದಕ್ಷಿಣಕ್ಕೆ ಸಂಪರ್ಕಿಸುವ ರೈಲು ಮಾರ್ಗಗಳ ಮರುಸ್ಥಾಪನೆಯಾಗಿರಲಿ; ಸಾಂಪ್ರದಾಯಿಕ ಜಾಫ್ನಾ ಸಾಂಸ್ಕೃತಿಕ ಕೇಂದ್ರದ ನಿರ್ಮಾಣ; ಶ್ರೀಲಂಕಾದಾದ್ಯಂತ ತುರ್ತು ಆಂಬ್ಯುಲೆನ್ಸ್ ಸೇವೆ; ಅಥವಾ ಡಿಕ್ ಓಯಾದಲ್ಲಿನ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಾಗಿರಲಿ ಇವೆಲ್ಲವನ್ನೂ ನಾವು ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ದೃಷ್ಟಿಕೋನದಲ್ಲಿ ಮಾಡುತ್ತಿದ್ದೇವೆ ಎಂದು ಶ್ರೀ ಮೋದಿ ಹೇಳಿದರು.

ಭಾರತವು ಇತ್ತೀಚೆಗೆ ಆಯೋಜಿಸಿದ್ದ ಜಿ20 ಶೃಂಗಸಭೆಯ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಅಂತಾರಾಷ್ಟ್ರೀಯ ಸಮುದಾಯದಿಂದ ಸ್ವಾಗತಿಸಲ್ಪಟ್ಟಿರುವ ವಸುಧೈವ ಕುಟುಂಬಕಂ ಕುರಿತ ಭಾರತದ ದೃಷ್ಟಿಕೋನವನ್ನು ಪ್ರಸ್ತಾಪಿಸಿದರು. ಈ ದೃಷ್ಟಿಕೋನದ ಒಂದು ಭಾಗವು ನೆರೆಯ ರಾಷ್ಟ್ರಗಳೊಂದಿಗೆ ಪ್ರಗತಿ ಮತ್ತು ಸಮೃದ್ಧಿಯನ್ನು ಹಂಚಿಕೊಳ್ಳಲು ಆದ್ಯತೆ ನೀಡುವುದಾಗಿದೆ ಎಂದು ಅವರು ಒತ್ತಿ ಹೇಳಿದರು. ಜಿ 20 ಶೃಂಗಸಭೆಯಲ್ಲಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್‌ ಪ್ರಾರಂಭವನ್ನು ಅವರು ಪ್ರಸ್ತಾಪಿಸಿದರು ಮತ್ತು ಇದು ಪ್ರಮುಖ ಸಂಪರ್ಕ ಕಾರಿಡಾರ್ ಆಗಿದ್ದು ಅದು ಇಡೀ ಪ್ರದೇಶದ ಮೇಲೆ ಭಾರಿ ಆರ್ಥಿಕ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಹೇಳಿದರು. ನಮ್ಮ ಎರಡು ದೇಶಗಳ ನಡುವಿನ ಬಹುಮಾದರಿ ಸಂಪರ್ಕವು ಬಲಗೊಳ್ಳುವುದರಿಂದ ಶ್ರೀಲಂಕಾದ ಜನರು ಸಹ ಇದರ ಪ್ರಯೋಜನ ಪಡೆಯುತ್ತಾರೆ ಎಂದು ಅವರು ಒತ್ತಿ ಹೇಳಿದರು.

ಇಂದು ದೋಣಿ ಸೇವೆಯನ್ನು ಯಶಸ್ವಿಯಾಗಿ ಆರಂಭಿಸಿದ್ದಕ್ಕಾಗಿ ಶ್ರೀಲಂಕಾದ ಅಧ್ಯಕ್ಷರು, ಸರ್ಕಾರ ಮತ್ತು ಜನತೆಗೆ ಪ್ರಧಾನಮಂತ್ರಿ ಕೃತಜ್ಞತೆ ಸಲ್ಲಿಸಿದರು ಮತ್ತು ಧನ್ಯವಾದಗಳನ್ನು ತಿಳಿಸಿದರು. ರಾಮೇಶ್ವರಂ ಮತ್ತು ತಲೈಮನ್ನಾರ್ ನಡುವೆ ದೋಣಿ ಸೇವೆಯನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಕುರಿತು ಅವರು ಮಾತನಾಡಿದರು. ನಮ್ಮ ಜನರ ಪರಸ್ಪರ ಪ್ರಯೋಜನಕ್ಕಾಗಿ ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಶ್ರೀಲಂಕಾದೊಂದಿಗೆ ನಿಕಟವಾಗಿ ಕೆಲಸ ಮಾಡಲು ಭಾರತವು ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

Ferry services between India and Sri Lanka will enhance connectivity, promote trade and reinforce the longstanding bonds between our nations. https://t.co/VH6O0Bc4sa

— Narendra Modi (@narendramodi) October 14, 2023

***



(Release ID: 1967712) Visitor Counter : 79