ಪ್ರಧಾನ ಮಂತ್ರಿಯವರ ಕಛೇರಿ

ವಲ್ಲಲಾರ್ ಎಂದೂ ಕರೆಯಲ್ಪಡುವ ಶ್ರೀ ರಾಮಲಿಂಗ ಸ್ವಾಮಿಯವರ 200 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಪಠ್ಯ

Posted On: 05 OCT 2023 1:52PM by PIB Bengaluru

ವಣಕ್ಕಂ! 

ವಲ್ಲಲಾರ್ ಎಂದೂ ಕರೆಯಲ್ಪಡುವ ಮಹಾನ್ ಶ್ರೀ ರಾಮಲಿಂಗ ಸ್ವಾಮಿ ಜೀ  (श्री रामलिंग स्वामी जी ) ಅವರ ಇನ್ನೂರನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವ ಅವಕಾಶ ದೊರಕಿರುವುದು ಬಹಳ ಗೌರವದ ವಿಷಯವಾಗಿದೆ. ವಲ್ಲಲಾರಿಗೆ ನಿಕಟ ಸಂಪರ್ಕವಿರುವ ವಡಲೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಇನ್ನಷ್ಟು ವಿಶೇಷ. ವಲ್ಲಲಾರ್ ನಮ್ಮ ಅತ್ಯಂತ ಗೌರವಾನ್ವಿತ ಸಂತರಲ್ಲಿ ಒಬ್ಬರು. ಅವರು ಈ ಭೂಮಿಯಲ್ಲಿ 19 ನೇ ಶತಮಾನದಲ್ಲಿ ಜೀವಿತದಲ್ಲಿದ್ದರೂ ಕೂಡಾ, ಅವರ ಆಧ್ಯಾತ್ಮಿಕ ಚಿಂತನೆ-ಒಳನೋಟಗಳು ಇಂದಿಗೂ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಿವೆ. ಅವರ ಪ್ರಭಾವವು ಜಾಗತಿಕವಾಗಿದೆ. ಅವರ ಚಿಂತನೆಗಳು ಮತ್ತು ಆದರ್ಶಗಳ ಮೇಲೆ ಹಲವಾರು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.

ಸ್ನೇಹಿತರೇ,

ನಾವು ವಲ್ಲಲಾರನ್ನು ನೆನಪಿಸಿಕೊಂಡಾಗ, ಅವರ ಕಾಳಜಿ ಮತ್ತು ಸಹಾನುಭೂತಿಯ ಮನೋಭಾವವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಅವರು ಜೀವ-ಕಾರುಣ್ಯವನ್ನು ಆಧರಿಸಿದ ಜೀವನ ವಿಧಾನವನ್ನು ನಂಬಿದ್ದರು ಅದು ಸಹ ಮಾನವರ ಕಡೆಗೆ ಸಹಾನುಭೂತಿಯಾಗಿದೆ. ಅವರ ಪ್ರಮುಖ ಕೊಡುಗೆಗಳಲ್ಲಿ ಒಂದು ಹಸಿವನ್ನು ತೆಗೆದುಹಾಕುವಲ್ಲಿ ಅವರ ಬಲವಾದ ಬದ್ಧತೆಯಾಗಿದೆ. ಮನುಷ್ಯ ಖಾಲಿ ಹೊಟ್ಟೆಯಲ್ಲಿ ಮಲಗುವುದಕ್ಕಿಂತ ಅವನಿಗೆ ಬೇರೇನೂ ದೊಡ್ಡ ನೋವು ಕೊಡಲು ಸಾಧ್ಯವಿಲ್ಲ. ಹಸಿದವರೊಂದಿಗೆ ಆಹಾರವನ್ನು ಹಂಚಿಕೊಳ್ಳುವುದು ಎಲ್ಲಾ ದಯಾಪರ ಕಾರ್ಯಗಳಲ್ಲಿ ಅತ್ಯಂತ ಶ್ರೇಷ್ಠವಾದದ್ದು ಎಂದು ಅವರು ನಂಬಿದ್ದರು. ಅವರು ಹೇಳಿದರು, ವಾಡಿಯ ಪೈರಾಯಿ ಕಂಡ ಪೊದೆಲ್ಲಂ, ವಾಡಿ ನೆನ್ (वाडिय पईरई कंडा पोदेल्लाम, वाडी नेन). ಇದರರ್ಥ "ಪ್ರತಿ ಬಾರಿ ಬೆಳೆಗಳು ಒಣಗುವುದನ್ನು ನಾನು ನೋಡಿದಾಗ, ನಾನು ಸಹ ಒಣಗಿದ್ದೇನೆ". ಇದು ನಾವೆಲ್ಲರೂ ಸದಾ ಬದ್ಧವಾಗಿರ ಬೇಕಾದ ಆದರ್ಶವಾಗಿದೆ. ಈ ಶತಮಾನದಲ್ಲಿ, ನಾವು ಕಂಡಂತಹ ಕೋವಿಡ್-19 ಸಾಂಕ್ರಾಮಿಕ ರೋಗ ಬಂದಾಗ, ಸುಮಾರು 80 ಕೋಟಿ ಸಹ ಭಾರತೀಯರು ಉಚಿತ ಪಡಿತರವನ್ನು ಪಡೆದರು ಎಂಬುದನ್ನು ನೀವು ನೆನಪಿಸಿಕೊಳ್ಳಬಹುದು. ಇದು ಪರೀಕ್ಷೆಯ ಸಮಯದಲ್ಲಿ ದೊಡ್ಡ ಪರಿಹಾರವಾಗಿತ್ತು.

ಸ್ನೇಹಿತರೇ,

ವಲ್ಲಲಾರ್ ಕಲಿಕೆ ಮತ್ತು ಶಿಕ್ಷಣ ಹೊಂದಿರುವ ಶಕ್ತಿಯನ್ನು ನಂಬಿದ್ದರು. ಮಾರ್ಗದರ್ಶಕರಾಗಿ, ಅವರ ಬಾಗಿಲು ಯಾವಾಗಲೂ ತೆರೆದಿರುತ್ತಿತ್ತು. ಅವರು ಅಸಂಖ್ಯಾತ ಜನರಿಗೆ ಮಾರ್ಗದರ್ಶನ ನೀಡಿದರು. ಕುರಲ್ ಅನ್ನು ಹೆಚ್ಚು ಜನಪ್ರಿಯಗೊಳಿಸಲು ಅವರು ವ್ಯಾಪಕ ಪ್ರಯತ್ನಗಳನ್ನು ಮಾಡಿದರು. ಆಧುನಿಕ ಪಠ್ಯಕ್ರಮಗಳಿಗೆ ಅವರು ನೀಡಿದ ಮಹತ್ವವೂ ಅಷ್ಟೇ ಮುಖ್ಯ. ಯುವಕರು ತಮಿಳು, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿರಬೇಕೆಂದು ಅವರು ಬಯಸಿದ್ದರು. ಕಳೆದ 9 ವರ್ಷಗಳಲ್ಲಿ ಭಾರತದ ಶಿಕ್ಷಣ ಮೂಲಸೌಕರ್ಯದಲ್ಲಿ ಪ್ರಮುಖ ಬದಲಾವಣೆಯಾಗಿದೆ. 3 ದಶಕಗಳ ನಂತರ, ಭಾರತವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪಡೆದುಕೊಂಡಿದೆ. ಈ ನೀತಿಯು ಇಡೀ ಶೈಕ್ಷಣಿಕ ಭೂದೃಶ್ಯವನ್ನು ಪರಿವರ್ತಿಸುತ್ತಿದೆ. ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಲಾಗಿದೆ. ಕಳೆದ 9 ವರ್ಷಗಳಲ್ಲಿ ಸ್ಥಾಪಿಸಲಾದ ವಿಶ್ವವಿದ್ಯಾಲಯಗಳು, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳ ಸಂಖ್ಯೆ ದಾಖಲೆಯ ಹಂತದಲ್ಲಿದೆ. ಈಗ, ಯುವಕರು ತಮ್ಮ ಸ್ಥಳೀಯ ಭಾಷೆಗಳಲ್ಲಿ ಅಧ್ಯಯನ ಮಾಡುವ ಮೂಲಕ ವೈದ್ಯರು ಮತ್ತು ಎಂಜಿನಿಯರ್ ಆಗಬಹುದು. ಇದು ಯುವಕರಿಗೆ ಹಲವಾರು ನೂತನ ಅವಕಾಶಗಳನ್ನು ತೆರೆದಿದೆ.

ಸ್ನೇಹಿತರೇ,

ಸಮಾಜ ಸುಧಾರಣೆಯ ವಿಚಾರದಲ್ಲಿ ವಲ್ಲಲಾರ್ ಅವರ ಕಾಲಕ್ಕಿಂತ ಮುಂದಿದ್ದರು. ದೇವರ ದರ್ಶನವು ಧರ್ಮ, ಜಾತಿ ಮತ್ತು ಧರ್ಮದ ಅಡೆತಡೆಗಳನ್ನು ಮೀರಿದೆ ಎಂದು ವಲ್ಲಲಾರ್ ಅವರು ಹೇಳಿದ್ದರು. ಅವರು ಬ್ರಹ್ಮಾಂಡದ ಪ್ರತಿಯೊಂದು ಪರಮಾಣುವಿನಲ್ಲಿ ದೈವತ್ವವನ್ನು ಕಂಡರು. ಈ ದೈವಿಕ ಸಂಬಂಧವನ್ನು ಗುರುತಿಸಲು ಮತ್ತು ಪಾಲಿಸಬೇಕೆಂದು ಅವರು ಮಾನವೀಯತೆಯನ್ನು ಎಲ್ಲಡೆ ಒತ್ತಾಯಿಸಿದರು. ಅವರ ಬೋಧನೆಗಳು ಸಮಾನ ಸಮಾಜಕ್ಕಾಗಿ ಕೆಲಸ ಮಾಡುವ ಗುರಿಯನ್ನು ಹೊಂದಿದ್ದವು. ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್ ಮೇಲಿನ ನನ್ನ ನಂಬಿಕೆ ವಲ್ಲಲಾರಿಗೆ ಶ್ರದ್ಧಾಂಜಲಿ ಸಲ್ಲಿಸಿದಾಗ ಇನ್ನಷ್ಟು ಬಲಗೊಳ್ಳುತ್ತದೆ. 

ಇಂದು, ಶಾಸಕಾಂಗ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಿಡುವ ನಾರಿ ಶಕ್ತಿ ವಂದನ್ ಅಧಿನಿಯಮವನ್ನು ಅಂಗೀಕರಿಸಲು ಅವರು ಆಶೀರ್ವದಿಸಿದ್ದರು ಎಂದು ನನಗೆ ವಿಶ್ವಾಸವಿದೆ. ವಲ್ಲಲಾರ್ ಅವರ ಕೃತಿಗಳನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಸಹ ಸುಲಭವಾಗಿದೆ. ಆದ್ದರಿಂದ ಸಂಕೀರ್ಣವಾದ ಆಧ್ಯಾತ್ಮಿಕ ಬುದ್ಧಿವಂತಿಕೆಯನ್ನು ಅವರು ಸರಳ ಪದಗಳಲ್ಲಿ ತಿಳಿಸಿದರು. ಮಹಾನ್ ಸಂತರ ಬೋಧನೆಗಳ ಸಾಮಾನ್ಯ ಭಾಷೆಯಲ್ಲಿತಿಳಿಸಿದರು. ನಮ್ಮ ಸಾಂಸ್ಕೃತಿಕ ಬುದ್ಧಿವಂತಿಕೆಯಲ್ಲಿನ ವೈವಿಧ್ಯತೆಯು ಏಕ ಭಾರತ ಶ್ರೇಷ್ಠ ಭಾರತ ಎಂಬ ನಮ್ಮ ಸಾಮೂಹಿಕ ಕಲ್ಪನೆಯನ್ನು ಬಲಪಡಿಸುತ್ತದೆ.

ಈ ಪುಣ್ಯ ಸಂದರ್ಭದಲ್ಲಿ ಅವರ ಆದರ್ಶಗಳನ್ನು ಈಡೇರಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ. ಅವರ ಪ್ರೀತಿ, ದಯೆ ಮತ್ತು ನ್ಯಾಯದ ಸಂದೇಶವನ್ನು ಹರಡೋಣ. ಅವರ ಹೃದಯಕ್ಕೆ ಹತ್ತಿರವಿರುವ ಕ್ಷೇತ್ರಗಳಲ್ಲಿ ನಾವು ಸಹ ಶ್ರಮಿಸುತ್ತಿರೋಣ. ನಮ್ಮ ಸುತ್ತಮುತ್ತಲಿನ ಯಾರೂ ಹಸಿವಿನಿಂದ ಇರದಂತೆ ನೋಡಿಕೊಳ್ಳೋಣ. ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ನೋಡಿಕೊಳ್ಳೋಣ. ಅವರ ಇನ್ನೂರನೇ ಜನ್ಮ ವಾರ್ಷಿಕೋತ್ಸವದಂದು ನಾನು ಮತ್ತೊಮ್ಮೆ ಮಹಾನ್ ಸಂತರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ ಮತ್ತು ನಿಮಗೆ ಶುಭ ಹಾರೈಸುತ್ತೇನೆ.

ಧನ್ಯವಾದ.

  ***** 



(Release ID: 1964668) Visitor Counter : 78