ಪ್ರಧಾನ ಮಂತ್ರಿಯವರ ಕಛೇರಿ

ತೆಲಂಗಾಣದ ನಿಜಾಮಾಬಾದ್‌ ನಲ್ಲಿ ಸುಮಾರು 8000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಲೋಕಾರ್ಪಣೆ ಮಾಡಿದರು


ತೆಲಂಗಾಣ ಸೂಪರ್ ಥರ್ಮಲ್ ವಿದ್ಯುತ್‌ ಯೋಜನೆಯ 800 ಮೆ.ವ್ಯಾ. ಘಟಕವನ್ನು ಲೋಕಾರ್ಪಣೆ ಮಾಡಿದರು

ವಿವಿಧ ರೈಲು ಮೂಲಸೌಕರ್ಯ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು

ಪ್ರಧಾನಮಂತ್ರಿ - ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿಯಲ್ಲಿ ತೆಲಂಗಾಣದಾದ್ಯಂತ 20 ನಿರ್ಣಾಯಕ ಆರೈಕೆ ಘಟಕ (ಕ್ರಿಟಿಕಲ್‌ ಕೇರ್)‌ ಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ

ಸಿದ್ದಿಪೇಟೆ - ಸಿಕಂದರಾಬಾದ್ - ಸಿದ್ದಿಪೇಟೆ ರೈಲು ಸೇವೆಗೆ ಹಸಿರು ನಿಶಾನೆ

"ಸುಗಮ ವಿದ್ಯುತ್‌ ಪೂರೈಕೆಯು ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಯನ್ನು ವೇಗಗೊಳಿಸುತ್ತದೆ”

"ನಾನು ಅಡಿಗಲ್ಲು ಹಾಕಿದ ಯೋಜನೆಗಳನ್ನು ನಾವೇ ಪೂರ್ಣಗೊಳಿಸುವುದು ನಮ್ಮ ಸರ್ಕಾರದ ಕೆಲಸದ ಸಂಸ್ಕೃತಿಯಾಗಿದೆ"

"ಹಾಸನ-ಚೆರ್ಲಪಲ್ಲಿ ಎಲ್‌ ಪಿ ಜಿ ಕೊಳವೆ ಮಾರ್ಗವು ಪರಿವರ್ತನೆ, ಸಾರಿಗೆ ಮತ್ತು ವೆಚ್ಚ-ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ವಿತರಣೆಗೆ ಆಧಾರವಾಗಲಿದೆ"

"ಭಾರತ ರೈಲ್ವೇಯು ಎಲ್ಲಾ ರೈಲು ಮಾರ್ಗಗಳ 100 ಪ್ರತಿಶತ ವಿದ್ಯುದ್ದೀಕರಣದ ಗುರಿಯೊಂದಿಗೆ ಮುನ್ನಡೆಯುತ್ತಿದೆ"

Posted On: 03 OCT 2023 5:03PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತೆಲಂಗಾಣದ ನಿಜಾಮಾಬಾದ್‌ ನಲ್ಲಿ ವಿದ್ಯುತ್, ರೈಲು ಮತ್ತು ಆರೋಗ್ಯದಂತಹ ಪ್ರಮುಖ ಕ್ಷೇತ್ರಗಳಲ್ಲಿ 8000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಎನ್‌ ಟಿ ಪಿ ಸಿ ಯ ತೆಲಂಗಾಣ ಸೂಪರ್ ಥರ್ಮಲ್ ವಿದ್ಯುತ್‌ ಯೋಜನೆಯ ಮೊದಲ ಹಂತದ 800 ಮೆ.ವ್ಯಾ. ಘಟಕ, ಮನೋಹರಾಬಾದ್ ಮತ್ತು ಸಿದ್ದಿಪೇಟೆಯನ್ನು ಸಂಪರ್ಕಿಸುವ ಹೊಸ ರೈಲು ಮಾರ್ಗ ಸೇರಿದಂತೆ ರೈಲು ಯೋಜನೆಗಳು; ಮತ್ತು ಧರ್ಮಾಬಾದ್ - ಮನೋಹರಾಬಾದ್ ಮತ್ತು ಮಹಬೂಬ್‌ ನಗರ - ಕರ್ನೂಲ್ ಮಾರ್ಗದ ವಿದ್ಯುದ್ದೀಕರಣ ಯೋಜನೆಗಳನ್ನು ಪ್ರಧಾನಿಯವರು ಲೋಕಾರ್ಪಣೆ ಮಾಡಿದರು. ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿಯಲ್ಲಿ ರಾಜ್ಯಾದ್ಯಂತ 20 ನಿರ್ಣಾಯಕ ಆರೈಕೆ ಘಟಕಗಳಿಗೆ (ಸಿಸಿಬಿ) ಅವರು ಶಂಕುಸ್ಥಾಪನೆ ಮಾಡಿದರು. ಪ್ರಧಾನಿಯವರು ಸಿದ್ದಿಪೇಟೆ - ಸಿಕಂದರಾಬಾದ್ - ಸಿದ್ದಿಪೇಟೆ ರೈಲು ಸೇವೆಗೂ ಹಸಿರು ನಿಶಾನೆ ತೋರಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಇಂದಿನ ಯೋಜನೆಗಳಿಗಾಗಿ ತೆಲಂಗಾಣದ ಜನತೆಗೆ ಅಭಿನಂದನೆ ಸಲ್ಲಿಸಿದರು. ಯಾವುದೇ ರಾಷ್ಟ್ರ ಅಥವಾ ರಾಜ್ಯದ ಅಭಿವೃದ್ಧಿಯು ವಿದ್ಯುತ್ ಉತ್ಪಾದನೆಯಲ್ಲಿ ಅದರ ಸ್ವಾವಲಂಬನೆಯ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. ಅದು ಏಕಕಾಲದಲ್ಲಿ ಸುಗಮ ಜೀವನ ಮತ್ತು ಸುಲಭ ವ್ಯಾಪಾರವನ್ನು ಸುಧಾರಿಸುತ್ತದೆ ಎಂದು ಅವರು ಹೇಳಿದರು. ಸುಗಮ ವಿದ್ಯುತ್‌ ಪೂರೈಕೆಯು ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ವೇಗವನ್ನು ನೀಡುತ್ತದೆ ಎಂದು ಅವರು ಹೇಳಿದರು. ಪೆದ್ದಪಲ್ಲಿ ಜಿಲ್ಲೆಯಲ್ಲಿ ಎನ್‌ ಟಿ ಪಿ ಸಿ ಯ ತೆಲಂಗಾಣ ಸೂಪರ್ ಥರ್ಮಲ್ ವಿದ್ಯುತ್‌ ಯೋಜನೆಯ ಮೊದಲನೇ ಹಂತದ 800 ಮೆ.ವ್ಯಾ ಸಾಮರ್ಥ್ಯದ ಸ್ಥಾವರವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಬಗ್ಗೆ ಪ್ರಧಾನಿ ಗಮನ ಸೆಳೆದರು. ಎರಡನೇ ಘಟಕವೂ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದ್ದು, ಅದು ಪೂರ್ಣಗೊಂಡ ನಂತರ ವಿದ್ಯುತ್ ಸ್ಥಾವರದ ಸ್ಥಾಪಿತ ಸಾಮರ್ಥ್ಯ 4,000 ಮೆಗಾವ್ಯಾಟ್‌ ಗೆ ಏರಲಿದೆ ಎಂದು ಅವರು ಒತ್ತಿ ಹೇಳಿದರು. ತೆಲಂಗಾಣ ಸೂಪರ್ ಥರ್ಮಲ್ ವಿದ್ಯುತ್‌ ಘಟಕ ದೇಶದ ಎಲ್ಲಾ ಎನ್‌ ಟಿ ಪಿ ಸಿ ವಿದ್ಯುತ್ ಸ್ಥಾವರಗಳಲ್ಲಿ ಅತ್ಯಂತ ಆಧುನಿಕ ವಿದ್ಯುತ್ ಸ್ಥಾವರವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಈ ವಿದ್ಯುತ್ ಸ್ಥಾವರದಲ್ಲಿ ಉತ್ಪಾದಿಸುವ ವಿದ್ಯುತ್‌ ನ ಹೆಚ್ಚಿನ ಭಾಗವು ತೆಲಂಗಾಣದ ಜನರಿಗೆ ಲಭ್ಯವಾಗುತ್ತದೆ ಎಂದರು. ತಾವು ಶಂಕುಸ್ಥಾಪನೆ ಮಾಡಿದ ಯೋಜನೆಗಳನ್ನು ತಾನೇ ಪೂರ್ಣಗೊಳಿಸುವ ಕೇಂದ್ರ ಸರ್ಕಾರದ ಪ್ರವೃತ್ತಿಯ ಬಗ್ಗೆ ಒತ್ತಿ ಹೇಳಿದ ಪ್ರಧಾನಿಯವರು, 2016ರಲ್ಲಿ ಈ ಯೋಜನೆಗೆ ತಾವು ಶಂಕುಸ್ಥಾಪನೆ ನೆರವೇರಿಸಿದ್ದನ್ನು ಸ್ಮರಿಸಿದ ಅವರು, ಇಂದು ಯೋಜನೆಯನ್ನು ಉದ್ಘಾಟನೆ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. "ಇದು ನಮ್ಮ ಸರ್ಕಾರದ ಹೊಸ ಕೆಲಸದ ಸಂಸ್ಕೃತಿಯಾಗಿದೆ" ಎಂದು ಅವರು ಹೇಳಿದರು.

ತೆಲಂಗಾಣದ ಇಂಧನ ಅಗತ್ಯಗಳನ್ನು ಪೂರೈಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಇತ್ತೀಚೆಗೆ ಹಾಸನ–ಚೆರ್ಲಪಲ್ಲಿ ಪೈಪ್‌ ಲೈನ್ ಲೋಕಾರ್ಪಣೆ ಮಾಡಿದ್ದನ್ನು ಅವರು ಸ್ಮರಿಸಿದರು. "ಈ ಪೈಪ್‌ಲೈನ್ ಎಲ್‌ಪಿಜಿ ಪರಿವರ್ತನೆ, ಸಾರಿಗೆ ಮತ್ತು ವೆಚ್ಚ-ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ರೀತಿಯಲ್ಲಿ ವಿತರಣೆಗೆ ಆಧಾರವಾಗಲಿದೆ" ಎಂದು ಅವರು ಹೇಳಿದರು.

ಧರ್ಮಾಬಾದ್ - ಮನೋಹರಾಬಾದ್ ಮತ್ತು ಮಹಬೂಬ್‌ ನಗರ - ಕರ್ನೂಲ್ ನಡುವಿನ ರೈಮು ಮಾರ್ಗಗಳ ವಿದ್ಯುದ್ದೀಕರಣ ಯೋಜನೆಗಳ ಕುರಿತು ಮಾತನಾಡಿದ ಪ್ರಧಾನಿ, ಇದು ರೈಲುಗಳ ಸರಾಸರಿ ವೇಗವನ್ನು ಹೆಚ್ಚಿಸುವುದರ ಜೊತೆಗೆ ರಾಜ್ಯದಲ್ಲಿ ಸಂಪರ್ಕವನ್ನು ಸುಧಾರಿಸಲಿದೆ ಎಂದು ಹೇಳಿದರು. ಭಾರತೀಯ ರೈಲ್ವೇಯು ಎಲ್ಲಾ ರೈಲು ಮಾರ್ಗಗಳ 100 ಪ್ರತಿಶತ ವಿದ್ಯುದ್ದೀಕರಣದ ಗುರಿಯೊಂದಿಗೆ ಮುನ್ನಡೆಯುತ್ತಿದೆ ಎಂದು ಅವರು ಹೇಳಿದರು. ಮನೋಹರಾಬಾದ್ ಮತ್ತು ಸಿದ್ದಿಪೇಟೆ ನಡುವಿನ ಹೊಸ ರೈಲು ಸಂಪರ್ಕವು ವ್ಯಾಪಾರ ಮತ್ತು ಉದ್ಯಮಕ್ಕೆ ಉತ್ತೇಜನ ನೀಡಲಿದೆ ಎಂದು ಅವರು ಹೇಳಿದರು. 2016ರಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದನ್ನು ಪ್ರಧಾನಿ ಸ್ಮರಿಸಿದರು.

ಆರೋಗ್ಯ ರಕ್ಷಣೆಯು ಈ ಹಿಂದೆ ಆಯ್ದ ಕೆಲವರಿಗೆ ಮಾತ್ರ ಲಭ್ಯವಾಗುತ್ತಿದ್ದುದನ್ನು ಪ್ರಧಾನಮಂತ್ರಿ ನೆನಪಿಸಿಕೊಂಡರು. ಆರೋಗ್ಯ ಸೇವೆಗಳು ಲಭ್ಯವಾಗುವಂತೆ ಹಾಗೂ ಕೈಗೆಟಕುವಂತೆ ಮಾಡಲು ಕೈಗೊಂಡಿರುವ ಹಲವು ಕ್ರಮಗಳ ಬಗ್ಗೆ ಶ್ರೀ ಮೋದಿ ತಿಳಿಸಿದರು. ಬೀಬಿನಗರ ವೈದ್ಯಕೀಯ ಕಾಲೇಜು ಸೇರಿದಂತೆ ವೈದ್ಯಕೀಯ ಕಾಲೇಜುಗಳು ಮತ್ತು ಏಮ್ಸ್‌ ಗಳ ಸಂಖ್ಯೆ ಹೆಚ್ಚುತ್ತಿರುವ ಕುರಿತು ಅವರು ಮಾತನಾಡಿದರು. ಹಾಗೆಯೇ ವೈದ್ಯರ ಸಂಖ್ಯೆಯನ್ನು ಹೆಚ್ಚಿಸುವ ಕೆಲಸವನ್ನೂ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯವರು ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಮೂಲಸೌಕರ್ಯ ಮಿಷನ್ ಬಗ್ಗೆ ಮಾಹಿತಿ ನೀಡಿದರು, ಅದರ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಗುಣಮಟ್ಟದ ಮೂಲಸೌಕರ್ಯವನ್ನು ಖಾತ್ರಿಪಡಿಸಲಾಗುತ್ತಿದೆ ಎಂದರು. ಇಂದು ಈ ಮಿಷನ್ ಅಡಿಯಲ್ಲಿ, ತೆಲಂಗಾಣದಲ್ಲಿ 20 ನಿರ್ಣಾಯಕ ಆರೈಕೆ ಘಟಕಗಳಿಗೆ ಅಡಿಗಲ್ಲು ಹಾಕಲಾಗಿದೆ ಎಂದು ಪ್ರಧಾನಿ ಹೇಳಿದರು. ಪ್ರತ್ಯೇಕ ವಾರ್ಡ್‌ಗಳು, ಆಮ್ಲಜನಕ ಪೂರೈಕೆ ಮತ್ತು ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ಸಂಪೂರ್ಣ ವ್ಯವಸ್ಥೆಗಳನ್ನು ಹೊಂದಿರುವ ರೀತಿಯಲ್ಲಿ ಈ ಘಟಕಗಳನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದರು. ತೆಲಂಗಾಣದಲ್ಲಿ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಲು 5000 ಕ್ಕೂ ಹೆಚ್ಚು ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ತೆಲಂಗಾಣದಲ್ಲಿ 50 ದೊಡ್ಡ ಪಿ ಎಸ್‌ ಎ ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಾಯಿತು, ಇದು ಅಮೂಲ್ಯ ಜೀವಗಳನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿತು ಎಂದು ಪ್ರಧಾನಿ ತಿಳಿಸಿದರು. ವಿದ್ಯುತ್, ರೈಲ್ವೆ ಮತ್ತು ಆರೋಗ್ಯದಂತಹ ಪ್ರಮುಖ ಕ್ಷೇತ್ರಗಳಲ್ಲಿ ಇಂದಿನ ಯೋಜನೆಗಳಿಗಾಗಿ ತೆಲಂಗಾಣ ಜನರನ್ನು ಅಭಿನಂದಿಸುವುದರ ಮೂಲಕ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ತೆಲಂಗಾಣ ರಾಜ್ಯಪಾಲರಾದ ತಮಿಳಸಾಯಿ ಸೌಂದರರಾಜನ್ ಮತ್ತು ಕೇಂದ್ರ ಸಚಿವ ಶ್ರೀ ಜಿ ಕಿಶನ್ ರೆಡ್ಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ದೇಶದಲ್ಲಿ ಸುಧಾರಿತ ಇಂಧನ ದಕ್ಷತೆಯೊಂದಿಗೆ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ಪ್ರಧಾನ ಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಎನ್‌ ಟಿ ಪಿ ಸಿ ಯ ತೆಲಂಗಾಣ ಸೂಪರ್ ಥರ್ಮಲ್ ವಿದ್ಯುತ್‌ ಯೋಜನೆಯ ಮೊದಲ ಹಂತದ 800 ಮೆ.ವ್ಯಾ. ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಯಿತು. ಇದು ತೆಲಂಗಾಣಕ್ಕೆ ಕಡಿಮೆ ವೆಚ್ಚದ ವಿದ್ಯುತ್ ಅನ್ನು ಒದಗಿಸುತ್ತದೆ ಮತ್ತು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಉತ್ತೇಜನವನ್ನು ನೀಡುತ್ತದೆ. ಇದು ದೇಶದ ಅತ್ಯಂತ ಪರಿಸರ ಸ್ನೇಹಿ ವಿದ್ಯುತ್ ಕೇಂದ್ರಗಳಲ್ಲಿ ಒಂದಾಗಲಿದೆ.

ಮನೋಹರಾಬಾದ್ ಮತ್ತು ಸಿದ್ದಿಪೇಟೆಯನ್ನು ಸಂಪರ್ಕಿಸುವ ಹೊಸ ರೈಲು ಮಾರ್ಗ ಮತ್ತು ಧರ್ಮಾಬಾದ್ - ಮನೋಹರಾಬಾದ್ ಮತ್ತು ಮಹಬೂಬ್ನಗರ - ಕರ್ನೂಲ್ ನಡುವಿನ ವಿದ್ಯುದ್ದೀಕರಣ ಯೋಜನೆ ಸೇರಿದಂತೆ ರೈಲು ಯೋಜನೆಗಳನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸುವ ಮೂಲಕ, ತೆಲಂಗಾಣದ ರೈಲು ಮೂಲಸೌಕರ್ಯವು ಉತ್ತೇಜನವನ್ನು ಪಡೆಯುತ್ತದೆ. 76 ಕಿಮೀ ಉದ್ದದ ಮನೋಹರಾಬಾದ್-ಸಿದ್ದಿಪೇಟೆ ರೈಲು ಮಾರ್ಗವು ಈ ಪ್ರದೇಶದ ವಿಶೇಷವಾಗಿ ಮೇಡಕ್ ಮತ್ತು ಸಿದ್ದಿಪೇಟೆ ಜಿಲ್ಲೆಗಳಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ. ಧರ್ಮಾಬಾದ್ - ಮನೋಹರಾಬಾದ್ ಮತ್ತು ಮಹಬೂಬ್‌ ನಗರ - ಕರ್ನೂಲ್ ನಡುವಿನ ವಿದ್ಯುದ್ದೀಕರಣ ಯೋಜನೆಯು ರೈಲುಗಳ ಸರಾಸರಿ ವೇಗವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಈ ಪ್ರದೇಶದಲ್ಲಿ ಪರಿಸರ ಸ್ನೇಹಿ ರೈಲು ಸಾರಿಗೆಗೆ ಕಾರಣವಾಗುತ್ತದೆ. ಈ ಪ್ರದೇಶದ ಸ್ಥಳೀಯ ರೈಲು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಸಿದ್ದಿಪೇಟೆ - ಸಿಕಂದರಾಬಾದ್ - ಸಿದ್ದಿಪೇಟೆ ರೈಲು ಸೇವೆಗೂ ಪ್ರಧಾನಿ ಚಾಲನೆ ನೀಡಿದರು.

ತೆಲಂಗಾಣದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಪ್ರಧಾನ ಮಂತ್ರಿ - ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿಯಲ್ಲಿ ರಾಜ್ಯಾದ್ಯಂತ 20 ನಿರ್ಣಾಯಕ ಆರೈಕೆ ಘಟಕ (ಸಿಸಿಬಿ) ಗಳಿಗೆ ಪ್ರಧಾನಿಯವರು ಅಡಿಪಾಯವನ್ನು ಹಾಕಿದರು. ಅದಿಲಾಬಾದ್, ಭದ್ರಾದ್ರಿ ಕೊತಗುಡೆಂ, ಜಯಶಂಕರ್ ಭೂಪಾಲಪಲ್ಲಿ, ಜೋಗುಲಾಂಬ ಗದ್ವಾಲ್, ಹೈದರಾಬಾದ್, ಖಮ್ಮಂ, ಕುಮುರಂ ಭೀಮ್ ಆಸಿಫಾಬಾದ್, ಮಂಚೇರಿಯಲ್, ಮಹಬೂಬ್‌ ನಗರ (ಬದೇಪಲ್ಲಿ), ಮುಲುಗು, ನಾಗರಕರ್ನೂಲ್, ನಲ್ಗೊಂಡ, ನಾರಾಯಣಪೇಟೆ, ನಿರ್ಮಲ್, ರಾಜಣ್ಣ ಸಿರ್ಸಿಲ್ಲಾ, ರಂಗಾರೆಡ್ಡಿ (ಮಹೇಶ್ವರಂ), ಸೂರ್ಯಪೇಟ್, ಪೆದ್ದಪಲ್ಲಿ, ವಿಕಾರಾಬಾದ್ ಮತ್ತು ವಾರಂಗಲ್ (ನರಸಂಪೇಟೆ)ನಲ್ಲಿ ಇವುಗಳನ್ನು ನಿರ್ಮಿಸಲಾಗುವುದು. ಈ ಸಿಸಿಬಿಗಳು ತೆಲಂಗಾಣದಾದ್ಯಂತ ಜಿಲ್ಲಾ ಮಟ್ಟದ ನಿರ್ಣಾಯಕ ಆರೈಕೆ ಮೂಲಸೌಕರ್ಯವನ್ನು ಹೆಚ್ಚಿಸಿ ರಾಜ್ಯದ ಜನರಿಗೆ ಪ್ರಯೋಜನವನ್ನು ನೀಡುತ್ತವೆ.

 

*****



(Release ID: 1963959) Visitor Counter : 66