ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಯೂಟ್ಯೂಬ್ ಫ್ಯಾನ್ ಫೆಸ್ಟ್  ಇಂಡಿಯಾ 2023ರ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಯೂಟ್ಯೂಬ್ ಬಳಕೆದಾರರನ್ನು ಉದ್ದೇಶಿಸಿ ಮಾತನಾಡಿದರು


“ನಾನು ನನ್ನ ಯೂಟ್ಯೂಬ್ ಚಾನೆಲ್ ಮೂಲಕ ದೇಶ ಮತ್ತು ಪ್ರಪಂಚದೊಂದಿಗೆ ಸಂಪರ್ಕದಲ್ಲಿದ್ದೇನೆ. ನಾನು ದೊಡ್ಡ ಸಂಖ್ಯೆಯಲ್ಲಿ  ಚಂದಾದಾರರನ್ನು ಕೂಡಾ ಹೊಂದಿದ್ದೇನೆ"

"ನಾವು ಒಟ್ಟಾಗಿ ನಮ್ಮ ದೇಶದ ಅಪಾರ  ಜನರ ಜೀವನದಲ್ಲಿ ಪರಿವರ್ತನೆ ತರಬಹುದು"

"ದೇಶವನ್ನು ಜಾಗೃತಗೊಳಿಸಿ, ಆಂದೋಲನವನ್ನು ಆರಂಭಿಸಿ"

"ನನ್ನ ಎಲ್ಲಾ ತಾಜಾ ವಿಷಯಗಳನ್ನು ಪಡೆಯಲು ನನ್ನ ಚಾನಲ್ ಗೆ ಚಂದಾದಾರರಾಗಿರಿ ಮತ್ತು ಬೆಲ್ ಐಕಾನ್ ಒತ್ತಿರಿ"

Posted On: 27 SEP 2023 9:27PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಯೂಟ್ಯೂಬ್ ಫ್ಯಾನ್ ಫೆಸ್ಟ್  ಇಂಡಿಯಾ 2023ರ ಸಂದರ್ಭದಲ್ಲಿ ಯೂಟ್ಯೂಬರ್ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಅವರು ಯೂಟ್ಯೂಬಿನಲ್ಲಿ ತಮ್ಮ 15 ವರ್ಷಗಳನ್ನು ಪೂರ್ಣಗೊಳಿಸಿದರು ಮತ್ತು ಮಾಧ್ಯಮದ ಮೂಲಕ ಜಾಗತಿಕ ಪ್ರಭಾವವನ್ನು ಸೃಷ್ಟಿಸುವ ತಮ್ಮ ಅನುಭವವನ್ನು ಹಂಚಿಕೊಂಡರು.

ಯೂಟ್ಯೂಬರ್ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ತಮ್ಮ 15 ವರ್ಷಗಳ ಯೂಟ್ಯೂಬ್ ಪ್ರಯಾಣವನ್ನು ಪೂರ್ಣಗೊಳಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು ಮತ್ತು ಅವರು ಇಂದು ಒಬ್ಬ ಸಹ ಯೂಟ್ಯೂಬರ್ ಆಗಿ ಇಲ್ಲಿದ್ದಾರೆ ಎಂದು ಹೇಳಿದರು. “15 ವರ್ಷಗಳಿಂದ”ಎಂದು  ಹೇಳುತ್ತಾ , “ನನ್ನ ಯೂಟ್ಯೂಬ್ ಚಾನೆಲ್ ಮೂಲಕ ನಾನು ದೇಶ ಮತ್ತು ಪ್ರಪಂಚದೊಂದಿಗೆ ಸಂಪರ್ಕದಲ್ಲಿದ್ದೇನೆ ಹಾಗೂ ನಾನು ದೊಡ್ಡ ಸಂಖ್ಯೆಯಲ್ಲಿ  ಚಂದಾದಾರರನ್ನು ಕೂಡಾ ಹೊಂದಿದ್ದೇನೆ.

5,000 ನಿರ್ಮಾತೃಗಳು ಮತ್ತು ಮಹತ್ವಾಕಾಂಕ್ಷಿ ರಚನೆಕಾರರ ಬೃಹತ್ ಸಮುದಾಯದ ಉಪಸ್ಥಿತಿಯ ಬಗ್ಗೆ ಗಮನ ಸೆಳೆದ  ಪ್ರಧಾನಮಂತ್ರಿಯವರು ಗೇಮಿಂಗ್, ತಂತ್ರಜ್ಞಾನ, ಆಹಾರ ಬ್ಲಾಗಿಂಗ್, ಪ್ರಯಾಣ ಬ್ಲಾಗರ್ಗಳು ಮತ್ತು ಜೀವನಶೈಲಿಯ ಪ್ರಭಾವಶಾಲಿಗಳ  ರಚನೆಕಾರರ ಬಗ್ಗೆ ಉಲ್ಲೇಖಿಸಿದರು.

ಭಾರತದ ಜನರ ಮೇಲೆ ಕಂಟೆಂಟ್ ಕ್ರಿಯೇಟರ್‌ ಗಳ (ವಿಷಯಗಳ ರಚನೆಕಾರರು) ಪ್ರಭಾವದ ಬಗ್ಗೆ ಹೇಳಿದ ಪ್ರಧಾನಮಂತ್ರಿಯವರು ಈ ಪ್ರಭಾವವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ಅವಕಾಶವನ್ನು ಹೇಳಿದರು ಮತ್ತು "ಒಟ್ಟಾಗಿ, ನಾವು ನಮ್ಮ ದೇಶದ ಅಪಾರವಾದ ಜನರ ಜೀವನದಲ್ಲಿ ಪರಿವರ್ತನೆ ತರಬಹುದು" ಎಂದು ಹೇಳಿದರು. ಕೋಟ್ಯಂತರ ಜನರಿಗೆ ಸುಲಭವಾಗಿ ಕಲಿಸುವ ಮತ್ತು ಪ್ರಮುಖ ವಿಷಯಗಳನ್ನು ಅರ್ಥಮಾಡಿಸುವ ಮೂಲಕ ಇನ್ನೂ ಅನೇಕ ಜನರನ್ನು ಸಬಲೀಕರಣಗೊಳಿಸುವ ಮತ್ತು ಬಲಪಡಿಸುವ ಬಗ್ಗೆ ಅವರು ಪ್ರಸ್ತಾಪಿಸಿದರು. "ನಾವು ಅವರನ್ನು ನಮ್ಮೊಂದಿಗೆ ಸೇರಿಸಿಕೊಳ್ಳಬಹುದು" ಎಂದು ಅವರು ಹೇಳಿದರು.

ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಸಾವಿರಾರು ವೀಡಿಯೋಗಳಿವೆ ಎಂದು ತಿಳಿಸಿದ ಪ್ರಧಾನಮಂತ್ರಿಯವರು, ಪರೀಕ್ಷೆಯ ಒತ್ತಡ, ನಿರೀಕ್ಷೆ ನಿರ್ವಹಣೆ ಮತ್ತು ಉತ್ಪಾದಕತೆಯಂತಹ ವಿಷಯಗಳ ಕುರಿತು ಯೂಟ್ಯೂಬ್ ಮೂಲಕ ನಮ್ಮ ದೇಶದ ಲಕ್ಷಾಂತರ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ವೀಡಿಯೊಗಳು ನನಗೆ ಹೆಚ್ಚು ತೃಪ್ತಿ ತಂದಿವೆ ಎಂದು ಹೇಳಿದರು.

ಜನಾಂದೋಲನವೇ ಆಂದೋಲನದ ಯಶಸ್ಸಿಗೆ ಜನಶಕ್ತಿಯೇ ಆಧಾರ ಎಂಬ ವಿಷಯದ ಕುರಿತು ಮಾತನಾಡಿದ ಪ್ರಧಾನಿ, ಸ್ವಚ್ಛ ಭಾರತ ಅಭಿಯಾನವನ್ನು ಮೊದಲು ಪ್ರಸ್ತಾಪಿಸಿ, ಕಳೆದ ಒಂಬತ್ತು ವರ್ಷಗಳಲ್ಲಿ ಇದು ಎಲ್ಲರನ್ನೂ ಒಳಗೊಂಡ ದೊಡ್ಡ ಅಭಿಯಾನವಾಗಿದೆ ಎಂದರು. “ಮಕ್ಕಳು ಅದಕ್ಕೆ ಭಾವನಾತ್ಮಕ ಶಕ್ತಿಯನ್ನು ಸೇರಿಸಿದರು. "ಸೆಲೆಬ್ರಿಟಿಗಳು ಇದನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು, ದೇಶದ ಮೂಲೆ ಮೂಲೆಯ ಜನರು ಇದನ್ನು ಮಿಷನ್ ಆಗಿ ಪರಿವರ್ತಿಸಿದರು ಮತ್ತು ನಿಮ್ಮಂತಹ ಯೂಟ್ಯೂಬರ್ ಗಳು ಸ್ವಚ್ಛತೆಯನ್ನು ಹೆಚ್ಚು ಪ್ರಚಾರ ಮಾಡಿದ್ದಾರೆ" ಎಂದು ಅವರು ಮಾತಲ್ಲಿ ಸೇರಿಸಿದರು. ಸ್ವಚ್ಛತೆ ಭಾರತದ ಗುರುತಾಗುವವರೆಗೆ ಈ ಆಂದೋಲನವನ್ನು ನಿಲ್ಲಿಸಬೇಡಿ ಎಂದು ಪ್ರಧಾನಮಂತ್ರಿಯವರು ಮನವಿ ಮಾಡಿದರು. " ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಸ್ವಚ್ಛತೆ ಆದ್ಯತೆಯಾಗಿರಬೇಕು" ಎಂದು ಅವರು ಒತ್ತಿ ಹೇಳಿದರು.


ಎರಡನೆಯದಾಗಿ, ಡಿಜಿಟಲ್ ಪಾವತಿಗಳನ್ನು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ಯುಪಿಐ ನ ಯಶಸ್ಸಿನಿಂದಾಗಿ ವಿಶ್ವದ ಡಿಜಿಟಲ್ ಪಾವತಿಗಳಲ್ಲಿ ಭಾರತವು ಶೇಕಡಾ 46 ರಷ್ಟು ಪಾಲನ್ನು ಹೊಂದಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು  ತಮ್ಮ ವೀಡಿಯೊಗಳ ಮೂಲಕ ಡಿಜಿಟಲ್ ಪಾವತಿಗಳನ್ನು ಬಳಸಲು ದೇಶದಲ್ಲಿ ಹೆಚ್ಚು ಹೆಚ್ಚು ಜನರನ್ನು ಪ್ರೇರೇಪಿಸುವಂತೆ ಮತ್ತು  ಸರಳ ಭಾಷೆಯಲ್ಲಿ ಡಿಜಿಟಲ್ ಪಾವತಿಗಳನ್ನು ಮಾಡುವುದನ್ನು ಕಲಿಸಲು ಯೂಟ್ಯೂಬರ್ ಸಮುದಾಯಕ್ಕೆ ಮನವಿ ಮಾಡಿದರು. 
 
ಮೂರನೆಯದಾಗಿ, ಪ್ರಧಾನಮಂತ್ರಿಯವರು ʼವೋಕಲ್ ಫಾರ್ ಲೋಕಲ್; ಅನ್ನು ಹೈಲೈಟ್ ಮಾಡಿದರು. ನಮ್ಮ ದೇಶದಲ್ಲಿ ಸ್ಥಳೀಯವಾಗಿಯೇ ಹಲವಾರು ಉತ್ಪನ್ನಗಳು ತಯಾರಾಗುತ್ತಿದ್ದು, ಸ್ಥಳೀಯ ಕುಶಲಕರ್ಮಿಗಳ ಕೌಶಲ್ಯ ಅದ್ಭುತವಾಗಿದೆ ಎಂದರು. ಯೂಟ್ಯೂಬ್ (YouTube) ವೀಡಿಯೊಗಳ ಮೂಲಕ ಈ ಕುಶಲಕರ್ಮಿಗಳನ್ನು ಉತ್ತೇಜಿಸಲು ಮತ್ತು ಭಾರತದ ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಹಂತಕ್ಕೆ ತರಲು ಸಹಾಯ ಮಾಡಲು ಯೂಟ್ಯೂಬರ್ ಸಮುದಾಯಕ್ಕೆ ಕೇಳಿದರು.

ನಮ್ಮ ಮಣ್ಣಿನ ಘಮಲು  ಮತ್ತು ಭಾರತದ ಕಾರ್ಮಿಕರು ಮತ್ತು ಕುಶಲಕರ್ಮಿಗಳ ಬೆವರು ಸುರಿಸಿ ಮಾಡಿದ ಉತ್ಪನ್ನಗಳನ್ನು ಖರೀದಿಸಲು ಭಾವನಾತ್ಮಕವಾಗಿ ಮನವಿಯನ್ನು ಮಾಡಿದ ಪ್ರಧಾನಮಂತ್ರಿಯವರು“ಅದು ಖಾದಿ, ಕರಕುಶಲ ವಸ್ತುಗಳು, ಕೈಮಗ್ಗದ ಉಡುಪುಗಳು ಅಥವಾ ಇನ್ನಾವುದೇ ಆಗಿರಲಿ. "ದೇಶವನ್ನು ಜಾಗೃತಗೊಳಿಸಿ, ಆಂದೋಲನವನ್ನು ಆರಂಭಿಸಿ" ಎಂದರು.

ಕೆಲವು ಕ್ರಮಗಳನ್ನು ತೆಗೆದುಕೊಳ್ಳಲು ಜನರನ್ನು ಪ್ರೇರೇಪಿಸಲು ಯೂಟ್ಯೂಬರ್ ಗಳು ತಮ್ಮ ವೀಡಿಯೊದ ಪ್ರತಿ ಸಂಚಿಕೆಯ ಕೊನೆಯಲ್ಲಿ ಒಂದು ಪ್ರಶ್ನೆಯನ್ನು ಕೇಳುವಂತೆ ಪ್ರಧಾನಮಂತ್ರಿಯವರು ಸಲಹೆ ನೀಡಿದರು.   “ಒಮ್ಮೆ ಜನರು ಚಟುವಟಿಕೆಯನ್ನು ಮಾಡಬಹುದು ಮತ್ತು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಹುದು. ಈ ಮೂಲಕ, ನಿಮ್ಮ ಜನಪ್ರಿಯತೆಯೂ ಹೆಚ್ಚುತ್ತದೆ. ಜನರು ಕೇಳುವುದಷ್ಟೇ ಅಲ್ಲ, ಏನಾದರೂ ಚಟುವಟಿಕೆಯನ್ನು ಮಾಡಲು ತೊಡಗುತ್ತಾರೆ” ಎಂದು ಹೇಳಿದರು.

 ಪ್ರಧಾನಮಂತ್ರಿಯವರು ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು ಮತ್ತು ಪ್ರತಿಯೊಬ್ಬ ಯೂಟ್ಯೂಬರ್ ತಮ್ಮ ವೀಡಿಯೊಗಳ ಕೊನೆಯಲ್ಲಿ ಏನು ಹೇಳುತ್ತಾರೆ  "ನನ್ನ ಎಲ್ಲಾ ತಾಜಾ ವಿಷಯಗಳನ್ನು (updates) ಪಡೆಯಲು ನನ್ನ ಚಾನಲ್ ಗೆ ಚಂದಾದಾರರಾಗಿರಿ ಮತ್ತು ಬೆಲ್ ಐಕಾನ್ ಒತ್ತಿರಿ"   ಎಂದು ಹೇಳುವ ಮೂಲಕ ತಮ್ಮ ಮಾತನ್ನು ಮುಕ್ತಾಯಗೊಳಿಸಿದರು.

* * *


(Release ID: 1961765) Visitor Counter : 126