ಪ್ರಧಾನ ಮಂತ್ರಿಯವರ ಕಛೇರಿ

ʻಜಿ-20 ಯೂನಿವರ್ಸಿಟಿ ಕನೆಕ್ಟ್ʼ ಫಿನಾಲೆಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ಪಠ್ಯಾಂತರ

Posted On: 26 SEP 2023 8:45PM by PIB Bengaluru

ದೇಶದ ವಿವಿಧ ವಿಶ್ವವಿದ್ಯಾಲಯಗಳೇ, ಉಪಕುಲಪತಿಗಳೇ, ಪ್ರಾಧ್ಯಾಪಕರೇ, ವಿವಿಧ ಸಂಸ್ಥೆಗಳ ಪ್ರತಿನಿಧಿಗಳೇ ಮತ್ತು ನನ್ನ ಯುವ ಸ್ನೇಹಿತರೇ! ʻಭಾರತ್ ಮಂಟಪಂʼನಲ್ಲಿ ಇದ್ದುದ್ದಕ್ಕಿಂತ ಹೆಚ್ಚಿನ ಜನರು ಇಂದು ಆನ್‌ಲೈನ್ ಮೂಲಕ ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ. ನಾನು 'ಜಿ -20 ಯೂನಿವರ್ಸಿಟಿ ಕನೆಕ್ಟ್' ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸುತ್ತೇನೆ ಮತ್ತು ಎಲ್ಲಾ ಯುವಕರನ್ನು ಅಭಿನಂದಿಸುತ್ತೇನೆ.


ಸ್ನೇಹಿತರೇ,

ಎರಡು ವಾರಗಳ ಹಿಂದೆ ಇದೇ ʻಭಾರತ್‌ ಮಂಟಪಂʼನಲ್ಲಿ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿದ್ದವು. ಈ ʻಭಾರತ್‌ ಮಂಟಪಂʼ ಸಂಪೂರ್ಣವಾಗಿ 'ಚಟುವಟಿಕೆಯ' ಸ್ಥಳವಾಗಿ ಮಾರ್ಪಟ್ಟಿತ್ತು. ಇಂದು ನನ್ನ ಭವಿಷ್ಯದ ಭಾರತವು ಅದೇ ʻಭಾರತ್‌ ಮಂಟಪಂʼನಲ್ಲಿರುವುದು ನನಗೆ ಸಂತೋಷ ತಂದಿದೆ. ʻಜಿ-20ʼ ಕಾರ್ಯಕ್ರಮವನ್ನು ಭಾರತವು ಎಷ್ಟು ಎತ್ತರಕ್ಕೆ ಕೊಂಡೊಯ್ದಿದೆ ಎಂಬುದನ್ನು ನೋಡಿ ಜಗತ್ತು ನಿಜವಾಗಿಯೂ ಆಶ್ಚರ್ಯಚಕಿತವಾಗಿದೆ. ಆದರೆ ನಿಮಗೆ ಗೊತ್ತು, ಇದು ನನ್ನಲ್ಲಿ ಯಾವ ಆಶ್ಚರ್ಯವನ್ನೂ ಉಂಟುಮಾಡಿಲ್ಲ. ಇಷ್ಟು ಭವ್ಯ ಕಾರ್ಯಕ್ರಮದ ಹೊರತಾಗಿಯೂ ನನಗೆ ಏಕೆ ಅಚ್ಚರಿಯಾಗಿಲ್ಲ? ಇದಕ್ಕೆ ಕಾರಣವೇನು? ಎಂಬ ಕುತೂಹಲ ನಿಮ್ಮನ್ನು ಕಾಡಬಹುದು. ಅದು ಏಕೆ ಎಂದು ನಿಮಗೆ ಗೊತ್ತೇ? ಏಕೆಂದರೆ ನಿಮ್ಮಂತಹ ಯುವ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಜವಾಬ್ದಾರಿಯನ್ನು ತೆಗೆದುಕೊಂಡರೆ, ಯುವಕರು ತೊಡಗಿಸಿಕೊಂಡರೆ, ಅದು ಖಂಡಿತ ಯಶಸ್ವಿಯಾಗುತ್ತದೆ.

ನಿಮ್ಮಿಂದಾಗಿ, ಇಡೀ ಭಾರತವು 'ಚಟುವಟಿಕೆಯ' ಸ್ಥಳವಾಗಿ ಮಾರ್ಪಟ್ಟಿದೆ. ಕಳೆದ 30 ದಿನಗಳನ್ನಷ್ಟೇ ನೋಡಿದರೂ ನಡೆಯುತ್ತಿರುವ ಚಟುವಟಿಕೆಗಳ ಮಟ್ಟವು ಸ್ಪಷ್ಟವಾಗಿ ಗೋಚರಿಸುತ್ತದೆ. ನಾನು 30 ದಿನಗಳ ಬಗ್ಗೆ ಮಾತನಾಡುವಾಗ, ನೀವು ನಿಮ್ಮ ಕೊನೆಯ 30 ದಿನಗಳನ್ನು ಸೇರಿಸುತ್ತಲೇ ಇರಿ. ನಿಮ್ಮ ವಿಶ್ವವಿದ್ಯಾಲಯದ 30 ದಿನಗಳನ್ನು ಸೇರಿಸಿ. ಮತ್ತು ಸ್ನೇಹಿತರೇ, 30 ದಿನಗಳಲ್ಲಿ ಇತರರು ಮಾಡಿದ ಪ್ರಯತ್ನಗಳನ್ನು ಮರೆಯಬೇಡಿ. ನನ್ನ ಯುವ ಸ್ನೇಹಿತರೇ, ನಾನು ಇಂದು ನಿಮ್ಮ ಬಳಿಗೆ ಬಂದಿರುವುದರಿಂದ, ನಾನು ನನ್ನ ರಿಪೋರ್ಟ್ ಕಾರ್ಡ್ ಅನ್ನು ಸಹ ನಿಮಗೆ ನೀಡುತ್ತಿದ್ದೇನೆ. ಕಳೆದ 30 ದಿನಗಳು ನಡೆದದ್ದನ್ನು ನಾನು ನಿಮ್ಮ ಮುಂದೆ ಮೆಲುಕು ಹಾಕಲು ಬಯಸುತ್ತೇನೆ. ಇದರಿಂದ ನೀವು ಹೊಸ ಭಾರತದ ವೇಗ ಮತ್ತು ಪ್ರಮಾಣ ಎರಡನ್ನೂ ತಿಳಿಯಲು ಸಾಧ್ಯವಾಗಲಿದೆ.

ಸ್ನೇಹಿತರೇ,

ಆಗಸ್ಟ್ 23ರ ದಿನ ನಿಮ್ಮೆಲ್ಲರಿಗೂ ಸ್ಪಷ್ಟವಾಗಿ ನೆನಪಿದೆ, ಆಗ ಎಲ್ಲರ ಹೃದಯ ಬಡಿತ ಹೆಚ್ಚಾಗಿತ್ತು, ಎಲ್ಲರೂ ಎಲ್ಲವನ್ನೂ ಮರೆತು ಚಂಧ್ರಯಾನ-3 ಯೋಜನೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸುತ್ತಿದ್ದರು,  ಏನೂ ತಪ್ಪಾಗಬಾರದು ಎಂದು ಆಶಿಸಿದ್ದರು. ಅವರು ಪ್ರಾರ್ಥಿಸುತ್ತಿರಲಿಲ್ಲವೇ? ತದನಂತರ ಇದ್ದಕ್ಕಿದ್ದಂತೆ ಎಲ್ಲರ ಮುಖಗಳೂ ಬೆಳಗಿದವು; ಇಡೀ ಜಗತ್ತಿಗೆ ಭಾರತದ ಧ್ವನಿಯನ್ನು ಕೇಳಿಸಿತು - 'ಭಾರತವು ಚಂದ್ರನ ಮೇಲಿದೆ'. ಆಗಸ್ಟ್ 23ರ ದಿನಾಂಕವು ನಮ್ಮ ದೇಶದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಅಮರವಾಗಿದೆ. ಆದರೆ ಅದರ ನಂತರ ಏನಾಯಿತು? ಒಂದೆಡೆ ಚಂದ್ರಯಾನ ಯಶಸ್ವಿಯಾದರೆ, ಮತ್ತೊಂದೆಡೆ ಭಾರತವು ತನ್ನ ಸೌರ ಮಿಷನ್ ಅನ್ನು ಪ್ರಾರಂಭಿಸಿತು. ಒಂದು ಕಡೆ ನಮ್ಮ ಚಂದ್ರಯಾನ-3 ಲಕ್ಷ ಕಿಲೋಮೀಟರ್ ಪ್ರಯಾಣಿಸಿದರೆ, ಇನ್ನೊಂದು 15 ಲಕ್ಷ ಕಿಲೋಮೀಟರ್ ಪ್ರಯಾಣಿಸುತ್ತದೆ. ನೀವು ಹೇಳಿ, ಯಾರಾದರೂ ಭಾರತದ ಈ ಅಗಾಧತೆಯನ್ನು ಸೋಲಿಸಲು ಸಾಧ್ಯವೇ?

ಸ್ನೇಹಿತರೇ,

ಕಳೆದ 30 ದಿನಗಳಲ್ಲಿ ಭಾರತದ ರಾಜತಾಂತ್ರಿಕತೆಯು ಹೊಸ ಎತ್ತರವನ್ನು ತಲುಪಿದೆ.
ʻಜಿ-20ʼಗೂ ಮುನ್ನ ʻಬ್ರಿಕ್ಸ್ ಶೃಂಗಸಭೆʼ ದಕ್ಷಿಣ ಆಫ್ರಿಕಾದಲ್ಲಿ ನಡೆಯಿತು. ಭಾರತದ ಪ್ರಯತ್ನದಿಂದಾಗಿ 6 ಹೊಸ ದೇಶಗಳು ʻಬ್ರಿಕ್ಸ್ʼ ಸಮುದಾಯಕ್ಕೆ ಸೇರ್ಪಡೆಯಾಗಿವೆ. ದಕ್ಷಿಣ ಆಫ್ರಿಕಾದ ನಂತರ, ನಾನು ಗ್ರೀಸ್‌ಗೆ ಭೇಟಿ ನೀಡಿದೆ. ಇದು 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ನೀಡಿದ ಮೊದಲ ಭೇಟಿಯಾಗಿತ್ತು. ಎಲ್ಲಾ ಒಳ್ಳೆಯ ಕೆಲಸಗಳನ್ನು ಮಾಡಲು ನೀವು ನನ್ನನ್ನು ನೇಮಿಸಿದ್ದೀರಿ. ಜಿ-20 ಶೃಂಗಸಭೆಗೆ ಸ್ವಲ್ಪ ಮೊದಲು, ನಾನು ಇಂಡೋನೇಷ್ಯಾದಲ್ಲಿ ಹಲವಾರು ವಿಶ್ವ ನಾಯಕರೊಂದಿಗೆ ಸಭೆ ನಡೆಸಿದೆ. ಇದರ ನಂತರ,
ಜಿ-20 ಶೃಂಗಸಭೆಯಲ್ಲಿ ಅದೇ ʻಭಾರತ್ ಮಂಟಪಂʼನಲ್ಲಿ ಜಗತ್ತಿಗಾಗಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಸ್ನೇಹಿತರೇ, ಇಂದಿನ ಧ್ರುವೀಕೃತ ಅಂತಾರಾಷ್ಟ್ರೀಯ ವಾತಾವರಣದಲ್ಲಿ, ಅನೇಕ ದೇಶಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವುದು ಸಣ್ಣ ಕೆಲಸವಲ್ಲ. ನೀವು ಪಿಕ್ನಿಕ್ ಆಯೋಜಿಸಿದರೂ, ಎಲ್ಲಿಗೆ ಹೋಗಬೇಕೆಂದು ನಿರ್ಧರಿಸಲು ನಿಮಗೆ ಕಷ್ಟವಾಗುತ್ತದೆ. ನಮ್ಮ ʻನವದೆಹಲಿ ಘೋಷಣೆʼಗೆ ಸಂಬಂಧಿಸಿದಂತೆ 100% ಅನುಮೋದನೆಯು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ದೊಡ್ಡ ಶೀರ್ಷಿಕೆಯ ಸುದ್ದಿಯಾಗಿದೆ. ಈ ಅವಧಿಯಲ್ಲಿ, ಭಾರತವು ಅನೇಕ ಪ್ರಮುಖ ಉಪಕ್ರಮಗಳು ಮತ್ತು ನಿರ್ಧಾರಗಳನ್ನು ಮುನ್ನಡೆಸಿತು. 21ನೇ ಶತಮಾನದ ಸಂಪೂರ್ಣ ದಿಕ್ಕನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರುವ ʻಜಿ -20ʼ ಶೃಂಗಸಭೆಯಲ್ಲಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಭಾರತದ ಉಪಕ್ರಮದ ಮೇರೆಗೆ, ಆಫ್ರಿಕನ್ ಒಕ್ಕೂಟವು ʻಜಿ-20ʼ ಯ ಖಾಯಂ ಸದಸ್ಯ ರಾಷ್ಟ್ರವಾಗಿ ಸ್ಥಾನ ಪಡೆದಿದೆ. ಭಾರತವು ಜಾಗತಿಕ ಜೈವಿಕ ಇಂಧನ ಒಕ್ಕೂಟದ ನೇತೃತ್ವವನ್ನೂ ವಹಿಸಿತು. ʻಜಿ-20ʼ ಶೃಂಗಸಭೆಯಲ್ಲಿಯೇ, ನಾವೆಲ್ಲರೂ ಒಟ್ಟಾಗಿ ʻಭಾರತ-ಮಧ್ಯಪ್ರಾಚ್ಯ-ಯುರೋಪ್ ಕಾರಿಡಾರ್ʼ ನಿರ್ಮಿಸಲು ನಿರ್ಧರಿಸಿದ್ದೇವೆ. ಈ ಕಾರಿಡಾರ್ ಅನೇಕ ಖಂಡಗಳನ್ನು ಸಂಪರ್ಕಿಸುತ್ತದೆ. ಇದು ಮುಂಬರುವ ಶತಮಾನಗಳವರೆಗೆ ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಹೆಚ್ಚಿಸಲಿದೆ.

ಸ್ನೇಹಿತರೇ,

ʻಜಿ-20ʼ ಶೃಂಗಸಭೆ ಮುಗಿದ ಬಳಿಕ ಸೌದಿ ಅರೇಬಿಯಾದ ಯುವರಾಜ ದೆಹಲಿಗೆ ಅಧಿಕೃತ ಭೇಟಿ ಆರಂಭಿಸಿದರು. ಸೌದಿ ಅರೇಬಿಯಾ ಭಾರತದಲ್ಲಿ 100 ಶತಕೋಟಿ ಡಾಲರ್ ಹೂಡಿಕೆ ಮಾಡಲಿದೆ. ವಿಶೇಷವೆಂದರೆ ಈ ಎಲ್ಲಾ ಬೆಳವಣಿಗೆಗಳು ಕಳೆದ 30 ದಿನಗಳಲ್ಲಿ ನಡೆದಿವೆ. ಕಳೆದ 30 ದಿನಗಳಲ್ಲಿ, ಭಾರತದ ಪ್ರಧಾನಿಯಾಗಿ ನಾನು ಒಟ್ಟು 85 ವಿಶ್ವ ನಾಯಕರೊಂದಿಗೆ ಅಂದರೆ, ಪ್ರಪಂಚದ ಸುಮಾರು ಅರ್ಧದಷ್ಟು ದೇಶಗಳ ನಾಯಕರೊಂದಿಗೆ ಸಭೆ ನಡೆಸಿದ್ದೇನೆ. ಇದರಿಂದ ನಿಮಗೆ ಏನು ಪ್ರಯೋಜನವಾಗಲಿದೆ ಎಂದು ನೀವು ಆಶ್ಚರ್ಯ ಪಡುತ್ತಿರಬಹುದು, ಅಲ್ಲವೇ? ಇತರ ದೇಶಗಳೊಂದಿಗೆ ಭಾರತದ ಸಂಬಂಧಗಳು ಉತ್ತಮವಾಗಿದ್ದಾಗ, ಹೊಸ ದೇಶಗಳು ಭಾರತದೊಂದಿಗೆ ಸಂಪರ್ಕ ಹೊಂದಿದಾಗ, ಭಾರತಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ. ನಾವು ಹೊಸ ಪಾಲುದಾರ ಮತ್ತು ಹೊಸ ಮಾರುಕಟ್ಟೆಯನ್ನು ಪಡೆಯುತ್ತೇವೆ. ನನ್ನ ದೇಶದ ಯುವ ಪೀಳಿಗೆ ಈ ಎಲ್ಲದರಿಂದ ಪ್ರಯೋಜನ ಪಡೆಯುತ್ತದೆ.

ಸ್ನೇಹಿತರೇ,

ಕಳೆದ 30 ದಿನಗಳ ರಿಪೋರ್ಟ್ ಕಾರ್ಡ್ ನೀಡುವಾಗ, ನಾನು ಕೇವಲ ಬಾಹ್ಯಾಕಾಶ ವಿಜ್ಞಾನ ಮತ್ತು ಜಾಗತಿಕ ಸಂಬಂಧಗಳ ಬಗ್ಗೆ ಮಾತ್ರ ಮಾತನಾಡುತ್ತೇನೆಯೇ ಎಂದು ನೀವೆಲ್ಲರೂ ಯೋಚಿಸುತ್ತಿರಬಹುದು. ನಾನು ಕೇವಲ 30 ದಿನಗಳಲ್ಲಿ ಈ ಕೆಲಸಗಳನ್ನು ಮಾಡಿದ್ದೇನೆಯೇ? ನಿಜವಾಗಿಯೂ ಅಲ್ಲ. ಕಳೆದ 30 ದಿನಗಳಲ್ಲಿ, ʻಎಸ್ಸಿ-ಎಸ್ಟಿ-ಒಬಿಸಿʼಗಳು, ಬಡವರು ಮತ್ತು ಮಧ್ಯಮ ವರ್ಗದವರನ್ನು ಸಬಲೀಕರಣಗೊಳಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿಯಂದು, ʻಪಿಎಂ ವಿಶ್ವಕರ್ಮ ಯೋಜನೆʼಯನ್ನು ಪ್ರಾರಂಭಿಸಲಾಯಿತು. ಈ ಯೋಜನೆಯು ನಮ್ಮ ಕುಶಲಕರ್ಮಿಗಳು, ನುರಿತ ಕೆಲಸಗಾರರು ಮತ್ತು ಸಾಂಪ್ರದಾಯಿಕ ಕೆಲಸದಲ್ಲಿ ತೊಡಗಿರುವ ಜನರಿಗೆ ಮೀಸಲಾದ ಯೋಜನೆಯಾಗಿದೆ. ಉದ್ಯೋಗ ಮೇಳಗಳನ್ನು ಆಯೋಜಿಸುವ ಮೂಲಕ, ಕಳೆದ 30 ದಿನಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಯುವಕರಿಗೆ ಕೇಂದ್ರ ಸರ್ಕಾರದಲ್ಲಿ ಸರ್ಕಾರಿ ಉದ್ಯೋಗಗಳನ್ನು ನೀಡಲಾಗಿದೆ. ಈ ಕಾರ್ಯಕ್ರಮ ಪ್ರಾರಂಭವಾದಾಗಿನಿಂದ, 6 ಲಕ್ಷಕ್ಕೂ ಹೆಚ್ಚು ಯುವಕರು ಮತ್ತು ಮಹಿಳೆಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ.

ಈ 30 ದಿನಗಳಲ್ಲಿ, ನೀವು ಹೊಸ ಸಂಸತ್ ಕಟ್ಟಡದಲ್ಲಿ ದೇಶದ ಮೊದಲ ಸಂಸತ್ ಅಧಿವೇಶನವನ್ನು ನೋಡಿದ್ದೀರಿ. ದೇಶದ ಹೊಸ ಸಂಸತ್ ಕಟ್ಟಡದಲ್ಲಿ ಮೊದಲ ಮಸೂದೆಯನ್ನು ಅಂಗೀಕರಿಸಲಾಯಿತು, ಇದು ಇಡೀ ದೇಶಕ್ಕೆ ಹೆಮ್ಮೆ ಮೂಡಿಸಿದೆ. ʻನಾರಿ ಶಕ್ತಿ ವಂದನ್ ಅಧಿನಿಯಮ್ʼ ಮೂಲಕ ಮಹಿಳಾ ನೇತೃತ್ವದ ಅಭಿವೃದ್ಧಿಯ ಮಹತ್ವವನ್ನು ಸಂಸತ್ತು ಸಂತೋಷದಿಂದ ಅಂಗೀಕರಿಸಿದೆ.

ಸ್ನೇಹಿತರೇ,

ಕಳೆದ 30 ದಿನಗಳಲ್ಲಿ, ದೇಶದಲ್ಲಿ ಎಲೆಕ್ಟ್ರಿಕ್ ಸಾರಿಗೆಯನ್ನು ವಿಸ್ತರಿಸಲು ಮತ್ತೊಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಗಳನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಒಂದು ಪ್ರಮುಖ ಯೋಜನೆಯನ್ನು ಅನುಮೋದಿಸಿದೆ. ಕೆಲವು ದಿನಗಳ ಹಿಂದೆ ನಾವು ದ್ವಾರಕಾದಲ್ಲಿ ʻಯಶೋಭೂಮಿ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರʼವನ್ನು ದೇಶಕ್ಕೆ ಸಮರ್ಪಿಸಿದ್ದೇವೆ. ಯುವಕರಿಗೆ ಕ್ರೀಡೆಯಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗಿಸಲು ನಾನು ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಎರಡು ದಿನಗಳ ಹಿಂದೆ ನಾನು 9 ʻವಂದೇ ಭಾರತ್ ರೈಲುʼಗಳಿಗೆ ಹಸಿರು ನಿಶಾನೆ ತೋರಿದ್ದೇನೆ. ಒಂದೇ ದಿನದಲ್ಲಿ ಏಕಕಾಲದಲ್ಲಿ ಅನೇಕ ಆಧುನಿಕ ರೈಲುಗಳನ್ನು ಪರಿಚಯಿಸಿರುವುದು ನಮ್ಮ ವೇಗ ಮತ್ತು ಪ್ರಮಾಣಕ್ಕೆ ಪುರಾವೆಯಾಗಿದೆ.

ಈ 30 ದಿನಗಳಲ್ಲಿ, ಪೆಟ್ರೋ-ರಾಸಾಯನಿಕ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆಯನ್ನು ಹೆಚ್ಚಿಸಲು ನಾವು ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದ್ದೇವೆ. ಮಧ್ಯಪ್ರದೇಶದ ಸಂಸ್ಕರಣಾಗಾರದಲ್ಲಿ ಪೆಟ್ರೋ-ರಾಸಾಯನಿಕ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮಧ್ಯಪ್ರದೇಶದಲ್ಲಿ  ನವೀಕರಿಸಬಹುದಾದ ಇಂಧನ, ಐಟಿ ಪಾರ್ಕ್, ಮೆಗಾ ಕೈಗಾರಿಕಾ ಪಾರ್ಕ್ ಮತ್ತು 6 ಹೊಸ ಕೈಗಾರಿಕಾ ಪ್ರದೇಶಗಳ ಕೆಲಸ ಪ್ರಾರಂಭವಾಗಿದೆ. ನಾನು ಪಟ್ಟಿ ಮಾಡಿರುವ ಈ ಎಲ್ಲಾ ಯೋಜನೆಗಳು ಯುವಕರ ಕೌಶಲ್ಯ ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿಗೆ ನೇರವಾಗಿ ಸಂಬಂಧಿಸಿವೆ. ಈ ಸುದೀರ್ಘ ಪಟ್ಟಿಯನ್ನು ಹೀಗೆಯೇ ಹೇಳುತ್ತಾ ಹೋದರೆ ನಮಗೆ ಸಮಯವೇ ಸಾಕಾಗುವುದಿಲ್ಲ. ಈ 30 ದಿನಗಳ ನನ್ನ ಲೆಕ್ಕವನ್ನು ನಾನು ನಿಮಗೆ ನೀಡುತ್ತಿದ್ದೆ. ಕಳೆದ 30 ದಿನಗಳಲ್ಲಿ ನೀವು ಮಾಡಿದ ಕೆಲಸಗಳನ್ನು ಈಗ ಸೇರಿಸಿದ್ದೀರಾ? ಬಹುಶಃ ನೀವು ಗರಿಷ್ಠ ಎರಡು ಸಿನಿಮಾಗಳನ್ನು ನೋಡಿದ್ದಾಗಿ ಹೇಳಬಹುದು. ನನ್ನ ಯುವ ಸ್ನೇಹಿತರೇ, ನಾನು ಇದನ್ನು ಏಕೆ ಹೇಳುತ್ತಿದ್ದೇನೆ ಎಂದರೆ ನನ್ನ ದೇಶದ ಯುವಕರು ದೇಶವು ಎಷ್ಟು ವೇಗವಾಗಿ ಚಲಿಸುತ್ತಿದೆ ಮತ್ತು ವಿವಿಧ ಅಂಶಗಳಲ್ಲಿ ಎಷ್ಟು ಕೆಲಸ ಮಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು.

ಸ್ನೇಹಿತರೇ,

ಆಶಾವಾದ, ಅವಕಾಶಗಳು ಮತ್ತು ಮುಕ್ತತೆ ಇರುವಲ್ಲಿ ಮಾತ್ರ ಯುವಕರು ಪ್ರಗತಿ ಸಾಧಿಸಬಹುದು. ಸ್ನೇಹಿತರೇ, ಭಾರತವು ಇಂದು ಪ್ರಗತಿ ಸಾಧಿಸುತ್ತಿರುವ ವಿಧಾನ ಹೇಗಿದೆಯೆಂದರೆ, ಅಲ್ಲಿ, ನಿಮ್ಮ ರೆಕ್ಕೆಗಳನ್ನು ಬಿಚ್ಚಲು ಮತ್ತು ಹಾರಲು ಆಕಾಶವು ವಿಶಾಲವಾಗಿ ತೆರೆದಿದೆ. ನಾನು ನಿಮಗೆ ಹೇಳಲು ಬಯಸುಸುವುದಿಷ್ಟೇ - ದೊಡ್ಡದಾಗಿ ಯೋಚಿಸಿ. ನೀವು ಸಾಧಿಸಲಾಗದದ್ದು ಯಾವುದೂ ಇಲ್ಲ. ಸಾಧಿಸಲು ದೇಶವು ನಿಮ್ಮನ್ನು ಬೆಂಬಲಿಸದ ಯಾವುದೇ ಗುರಿ ಇಲ್ಲ. ಯಾವುದೇ ಅವಕಾಶವನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಬದಲಾಗಿ, ಆ ಅವಕಾಶವನ್ನು ಹೊಸ ಮಾನದಂಡವನ್ನಾಗಿ ಮಾಡುವ ಬಗ್ಗೆ ಯೋಚಿಸಿ. ಈ ವಿಧಾನದ ಮೂಲಕ ನಾವು ʻಜಿ -20ʼ ಅನ್ನು ತುಂಬಾ ಭವ್ಯ ಮತ್ತು ದೊಡ್ಡದಾಗಿ ಮಾಡಿದ್ದೇವೆ. ನಾವು ಕೂಡ ಜಿ-20 ಅಧ್ಯಕ್ಷತೆಯನ್ನು ಕೇವಲ ರಾಜತಾಂತ್ರಿಕ ಮತ್ತು ದೆಹಲಿ ಕೇಂದ್ರಿತ ವ್ಯವಹಾರವನ್ನಾಗಿ ಮಾಡಬಹುದಿತ್ತು. ಆದರೆ ಭಾರತವು ಅದನ್ನು ಜನ-ಚಾಲಿತ ರಾಷ್ಟ್ರೀಯ ಆಂದೋಲನವನ್ನಾಗಿ ಮಾಡಿತು. ಭಾರತದ ವೈವಿಧ್ಯತೆ, ಜನಸಂಖ್ಯಾಬಲ ಮತ್ತು ಪ್ರಜಾಪ್ರಭುತ್ವದ ಬಲವು ʻಜಿ-20ʼ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ.

60 ನಗರಗಳಲ್ಲಿ ಜಿ-20ಗೆ ಸಂಬಂಧಿಸಿದ 200ಕ್ಕೂ ಹೆಚ್ಚು ಸಭೆಗಳು ನಡೆದವು. ಜಿ-20 ಚಟುವಟಿಕೆಗಳಿಗೆ 1.5 ಕೋಟಿಗೂ ಹೆಚ್ಚು ನಾಗರಿಕರು ಕೊಡುಗೆ ನೀಡಿದ್ದಾರೆ. ಈ ಹಿಂದೆ ಯಾವುದೇ ಅಂತರರಾಷ್ಟ್ರೀಯ ಕಾರ್ಯಕ್ರಮವನ್ನು ಆಯೋಜಿಸದ ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳು ಸಹ ಅಪಾರ ಸಾಮರ್ಥ್ಯವನ್ನು ಪ್ರದರ್ಶಿಸಿವೆ. ಇಂದು ಈ ಕಾರ್ಯಕ್ರಮದಲ್ಲಿ
ಜಿ-20ಗಾಗಿ ನಮ್ಮ ಯುವಕರನ್ನು ವಿಶೇಷವಾಗಿ ಶ್ಲಾಘಿಸಲು ನಾನು ಬಯಸುತ್ತೇನೆ. ʻಯೂನಿವರ್ಸಿಟಿ ಕನೆಕ್ಟ್ʼ ಕಾರ್ಯಕ್ರಮದ ಮೂಲಕ 100ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು 1 ಲಕ್ಷ ವಿದ್ಯಾರ್ಥಿಗಳು ʻಜಿ-20ʼಯಲ್ಲಿ ಭಾಗವಹಿಸಿದ್ದರು. ಶಾಲೆಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳಲ್ಲಿ 5 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಲು ಸರ್ಕಾರ ಜಿ-20 ಅನ್ನು ಆರಿಸಿಕೊಂಡಿತು. ನಮ್ಮ ಜನರು ದೊಡ್ಡದಾಗಿ ಯೋಚಿಸಿದರು, ಆದರೆ ಅವರು ತಲುಪಿಸಿದ್ದು ಇನ್ನೂ ಭವ್ಯವಾಗಿತ್ತು.

ಸ್ನೇಹಿತರೇ,

 ಇಂದು ಭಾರತವು ತನ್ನ 'ಅಮೃತ ಕಾಲ'ದಲ್ಲಿದೆ. ಈ ʻಅಮೃತ ಕಾಲʼವು ನಿಮ್ಮಂತಹ ಸುವರ್ಣ ಪೀಳಿಗೆಗೆ ಸೇರಿದೆ. 2047ರಲ್ಲಿ ನಾವು ದೇಶದ ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸುತ್ತೇವೆ. ಅದು ನಮಗೆ ಐತಿಹಾಸಿಕ ಕ್ಷಣವಾಗಲಿದೆ. 2047ರವರೆಗಿನ ಅವಧಿಯು ನಿಮ್ಮಂತಹ ಯುವಕರು ನಿಮ್ಮ ಭವಿಷ್ಯವನ್ನು ನಿರ್ಮಿಸುವ ಸಮಯವಾಗಿದೆ. ಅಂದರೆ ಮುಂದಿನ 25 ವರ್ಷಗಳು ನಿಮ್ಮ ಜೀವನದಲ್ಲಿ ಎಷ್ಟು ಮುಖ್ಯವೋ ದೇಶಕ್ಕೂ ಅಷ್ಟೇ ಮುಖ್ಯ. ಆದ್ದರಿಂದ, ದೇಶದ ಅಭಿವೃದ್ಧಿಯ ಅನೇಕ ಅಂಶಗಳು ಒಟ್ಟಿಗೆ ಬಂದ ಅವಧಿ ಇದಾಗಿದೆ. ಈ ರೀತಿಯ ಅವಧಿಯು ಇತಿಹಾಸದಲ್ಲಿ ಹಿಂದೆಂದೂ ಬಂದಿಲ್ಲ, ಅಥವಾ ಭವಿಷ್ಯದಲ್ಲಿ ಇದೇ ರೀತಿಯ ಅವಕಾಶವಿರುವುದಿಲ್ಲ, ಅಂದರೆ ʻನ ಭೂತೋ ನ ಭವಿಷ್ಯತಿʼ. ಇಂದು ನಾವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದೇವೆ. ಅದು ನಿಮಗೆ ತಿಳಿದಿದೆ, ಅಲ್ಲವೇ? ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ, ನಾವು 10ನೇ ಅತಿದೊಡ್ಡ ಆರ್ಥಿಕತೆಯಿಂದ 5ನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ. ಇಂದು ಭಾರತದ ಮೇಲಿನ ವಿಶ್ವದ ನಂಬಿಕೆ ತುಂಬಾ ಹೆಚ್ಚಾಗಿದೆ, ಮತ್ತು ಭಾರತದಲ್ಲಿ ಹೂಡಿಕೆ ದಾಖಲೆಯ ಮಟ್ಟವನ್ನು ತಲುಪಿದೆ. ಇಂದು ಭಾರತದ ಉತ್ಪಾದನೆ ಮತ್ತು ಸೇವಾ ವಲಯಗಳು ಹೊಸ ಎತ್ತರವನ್ನು ತಲುಪುತ್ತಿವೆ. ನಮ್ಮ ರಫ್ತು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಕೇವಲ 5 ವರ್ಷಗಳಲ್ಲಿ 13.5 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿದ್ದಾರೆ. ಇದು ಭಾರತದ ʻನವ-ಮಧ್ಯಮ ವರ್ಗʼವಾಗಿ ಮಾರ್ಪಟ್ಟಿದೆ.

ದೇಶದಲ್ಲಿ ಸಾಮಾಜಿಕ ಮೂಲಸೌಕರ್ಯ, ಭೌತಿಕ ಮೂಲಸೌಕರ್ಯ ಮತ್ತು ಡಿಜಿಟಲ್ ಮೂಲಸೌಕರ್ಯಗಳ ಸೃಷ್ಟಿಯು ಅಭಿವೃದ್ಧಿಯಲ್ಲಿ ಅಭೂತಪೂರ್ವ ವೇಗಕ್ಕೆ ಕಾರಣವಾಗಿದೆ. ಈ ವರ್ಷ, ಭೌತಿಕ ಮೂಲಸೌಕರ್ಯದಲ್ಲಿ 10 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುತ್ತಿದೆ ಮತ್ತು ಅಂತಹ ಹೂಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇದು ನಮ್ಮ ಆರ್ಥಿಕತೆಯ ಮೇಲೆ ಎಷ್ಟು ದೊಡ್ಡ ಪರಿಣಾಮ ಬೀರುತ್ತದೆ ಮತ್ತು ಎಷ್ಟು ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ ಎಂದು ಸ್ವಲ್ಪ ಊಹಿಸಿ ನೋಡಿ!

ಸ್ನೇಹಿತರೇ,


ನಿಮ್ಮಂತಹ ಯುವಕರಿಗೆ ಇದು ಅವಕಾಶಗಳ ಅವಧಿ. 2020ರ ನಂತರ, ಸುಮಾರು 5 ಕೋಟಿ ಜನರು ಇಪಿಎಫ್ಒ ವೇತನ ಪಟ್ಟಿಗೆ ಸೇರಿದ್ದಾರೆ. ಈ ಪೈಕಿ ಸುಮಾರು 3.5 ಕೋಟಿ ಜನರು ಮೊದಲ ಬಾರಿಗೆ ʻಇಪಿಎಫ್ಒʼ ವ್ಯಾಪ್ತಿಗೆ ಬಂದಿದ್ದಾರೆ ಮತ್ತು ಮೊದಲ ಬಾರಿಗೆ ಔಪಚಾರಿಕ ಉದ್ಯೋಗಗಳನ್ನು ಪಡೆದಿದ್ದಾರೆ. ಇದರರ್ಥ ನಿಮ್ಮಂತಹ ಯುವಕರಿಗೆ ಔಪಚಾರಿಕ ಉದ್ಯೋಗಗಳ ಅವಕಾಶಗಳು ಭಾರತದಲ್ಲಿ ನಿರಂತರವಾಗಿ ಹೆಚ್ಚುತ್ತಿವೆ.

2014ಕ್ಕೂ ಮೊದಲು ನಮ್ಮ ದೇಶದಲ್ಲಿ 100ಕ್ಕಿಂತ ಕಡಿಮೆ ನವೋದ್ಯಮಗಳಿದ್ದವು. ಇಂದು ಅವುಗಳ ಸಂಖ್ಯೆ ಒಂದು ಲಕ್ಷ ದಾಟಿದೆ. ನವೋದ್ಯಮಗಳ ಈ ಅಲೆಯು ಅನೇಕ ಜನರಿಗೆ ಉದ್ಯೋಗಾವಕಾಶಗಳನ್ನು ನೀಡಿದೆ. ಇಂದು ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ರಾಷ್ಟ್ರವಾಗಿದೆ. ಇಂದು ನಾವು ಮೊಬೈಲ್ ಫೋನ್‌ಗಳ ರಫ್ತುದಾರರಾಗಿದ್ದೇವೆ. ಪರಿಣಾಮವಾಗಿ, ಹೆಚ್ಚಿನ ಸಂಖ್ಯೆಯ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಕಳೆದ ಕೆಲವು ವರ್ಷಗಳಲ್ಲಿ ರಕ್ಷಣಾ ಸಾಮಗ್ರಿಗಳ ಉತ್ಪಾದನಾ ಕ್ಷೇತ್ರದಲ್ಲಿ ಭಾರಿ ಅಭಿವೃದ್ಧಿಯಾಗಿದೆ. 2014ಕ್ಕೆ ಹೋಲಿಸಿದರೆ ರಕ್ಷಣಾ ವಲದಯ ರಫ್ತು ಸುಮಾರು 23 ಪಟ್ಟು ಹೆಚ್ಚಾಗಿದೆ. ಅಂತಹ ಬೃಹತ್ ಬದಲಾವಣೆ ಸಂಭವಿಸಿದಾಗ, ರಕ್ಷಣಾ ಪರಿಸರ ವ್ಯವಸ್ಥೆಯ ಸಂಪೂರ್ಣ ಪೂರೈಕೆ ಸರಪಳಿಯಲ್ಲಿ ಹೆಚ್ಚಿನ ಸಂಖ್ಯೆಯ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ.

ನಮ್ಮ ಅನೇಕ ಯುವ ಸ್ನೇಹಿತರು ಉದ್ಯೋಗಾಕಾಂಕ್ಷಿಗಳ ಬದಲು ಉದ್ಯೋಗ ಸೃಷ್ಟಿಕರ್ತರಾಗಲು ಬಯಸುತ್ತಾರೆ ಎಂದು ನನಗೆ ತಿಳಿದಿದೆ. ದೇಶದ ಸಣ್ಣ ವ್ಯಾಪಾರಿಗಳು ಸರ್ಕಾರದ ʻಮುದ್ರಾʼ ಯೋಜನೆಯಡಿ ಆರ್ಥಿಕ ನೆರವು ಪಡೆಯುತ್ತಾರೆ. ಇಂದು 8 ಕೋಟಿ ಜನರು ಮೊದಲ ಬಾರಿಗೆ ಉದ್ಯಮಿಗಳಾಗಿ ತಮ್ಮದೇ ಆದ ವ್ಯವಹಾರವನ್ನು ಪ್ರಾರಂಭಿಸಿದ್ದಾರೆ. ಕಳೆದ 9 ವರ್ಷಗಳಲ್ಲಿ 5ಲಕ್ಷ ʻಸಾಮಾನ್ಯ ಸೇವಾ ಕೇಂದ್ರʼಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ 2 ರಿಂದ 5 ಜನರಿಗೆ ಉದ್ಯೋಗ ಸಿಕ್ಕಿದೆ.

ಸ್ನೇಹಿತರೇ,

ರಾಜಕೀಯ ಸ್ಥಿರತೆ, ನೀತಿಗಳ ಸ್ಪಷ್ಟತೆ ಮತ್ತು ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳಿಂದಾಗಿ ಭಾರತದಲ್ಲಿ ಇದೆಲ್ಲವೂ ನಡೆಯುತ್ತಿದೆ. ಕಳೆದ 9 ವರ್ಷಗಳಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನಗಳು ನಡೆದಿವೆ. ನಿಮ್ಮಂತಹ ಹೆಚ್ಚಿನ ವಿದ್ಯಾರ್ಥಿಗಳು ಸುಮಾರು ಹತ್ತು ವರ್ಷಗಳ ಹಿಂದೆ 2014 ರಲ್ಲಿ 10, 12 ಅಥವಾ 14 ವರ್ಷ ವಯಸ್ಸಿನವರಾಗಿರಬಹುದು. ಬಹುಶಃ ಆ ಸಮಯದಲ್ಲಿ ಭ್ರಷ್ಟಾಚಾರವು ದೇಶವನ್ನು ಹೇಗೆ ಹಾಳುಮಾಡಿದೆ ಎಂಬುದಕ್ಕೆ ಸಂಬಂಧಿಸಿದ ಪತ್ರಿಕೆಗಳಲ್ಲಿನ ಮುಖ್ಯಾಂಶಗಳು ನಿಮಗೆ ತಿಳಿದಿರಲಿಕ್ಕಿಲ್ಲ.

ಸ್ನೇಹಿತರೇ,

ಮಧ್ಯವರ್ತಿಗಳು ಮತ್ತು ಸೋರಿಕೆಗಳನ್ನು ತಡೆಗಟ್ಟಲು ನಾವು ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳನ್ನು ರಚಿಸಿದ್ದೇವೆ ಎಂದು ಇಂದು ನಾನು ಬಹಳ ಹೆಮ್ಮೆಯಿಂದ ಹೇಳಬಲ್ಲೆ. ಹಲವಾರು ಸುಧಾರಣೆಗಳನ್ನು ತರುವ ಮೂಲಕ ಮತ್ತು ವ್ಯವಸ್ಥೆಯಿಂದ ಮಧ್ಯವರ್ತಿಗಳನ್ನು ತೆಗೆದುಹಾಕುವ ಮೂಲಕ ಪಾರದರ್ಶಕ ವ್ಯವಸ್ಥೆಯನ್ನು ರಚಿಸಲಾಗಿದೆ. ಅಪ್ರಾಮಾಣಿಕ ಜನರನ್ನು ಶಿಕ್ಷಿಸಲಾಗುತ್ತಿದೆ ಮತ್ತು ಪ್ರಾಮಾಣಿಕತೆಗೆ ಬಹುಮಾನ ನೀಡಲಾಗುತ್ತಿದೆ. ಈ ದಿನಗಳಲ್ಲಿ ಮೋದಿ ಜನರನ್ನು ಜೈಲಿಗೆ ಹಾಕುತ್ತಿದ್ದಾರೆ ಎಂಬ ಆರೋಪ ನನ್ನ ವಿರುದ್ಧ ಕೇಳಿ ಬರುತ್ತಿರುವುದು ನನಗೆ ಆಶ್ಚರ್ಯ ತಂದಿದೆ. ನೀವು ಹೇಳಿ, ನೀವು ದೇಶದ ಸಂಪತ್ತನ್ನು ಕದ್ದಿದ್ದರೆ ನೀವು ಎಲ್ಲಿ ಇರುತ್ತೀರಿ? ಹಾಗೆ ಮಾಡಿದ ಯಾರೇ ಆದರೂ ಎಲ್ಲಿರಬೇಕು? ಅವರನ್ನು ಬೇಟೆಯಾಡಿ, ಜೈಲಿಗೆ ಕಳುಹಿಸಬೇಕಲ್ಲವೇ? ನಿಮಗೆ ಬೇಕಾದುದನ್ನು ನಾನು ಮಾಡುತ್ತಿದ್ದೇನೆ, ಅಲ್ಲವೇ? ಆದರೆ ಈ ಕೆಲಸದಿಂದ ಕೆಲವೊಂದು ಜನರು ತುಂಬಾ ತೊಂದರೆಗೀಡಾಗುತ್ತಾರೆ.

ಸ್ನೇಹಿತರೇ,
ಅಭಿವೃದ್ಧಿಯ ಪಯಣವನ್ನು ಮುಂದುವರಿಸಲು ಸ್ವಚ್ಛ, ಸ್ಪಷ್ಟ ಮತ್ತು ಸ್ಥಿರ ಆಡಳಿತ ಬಹಳ ಮುಖ್ಯ. ನೀವು ದೃಢನಿಶ್ಚಯ ಹೊಂದಿದ್ದರೆ, 2047ರ ವೇಳೆಗೆ ಭಾರತವು ʻಅಭಿವೃದ್ಧಿ ಹೊಂದಿದʼ, ಎಲ್ಲನ್ನೂ ಒಳಗೊಂಡ ಮತ್ತು ಸ್ವಾವಲಂಬಿ ದೇಶವಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ.

ಸ್ನೇಹಿತರೇ,

ನಾವು ಇನ್ನೂ ಒಂದು ವಿಷಯವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನೀವು ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಭಾರತ ಮಾತ್ರ ನಿರೀಕ್ಷಿಸುತ್ತಿಲ್ಲ, ಇಡೀ ಜಗತ್ತು ನಿಮ್ಮ ಮೇಲೆ ಭರವಸೆ ಇಟ್ಟಿದೆ. ಭಾರತ ಮತ್ತು ಅಲ್ಲಿನ ಯುವಕರ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯ ಬಗ್ಗೆ ಜಗತ್ತು ತಿಳಿದುಕೊಂಡಿದೆ. ಈಗ ಅವರಿಗೆ ಭಾರತದ ಪುತ್ರರು ಮತ್ತು ಪುತ್ರಿಯರ ದಕ್ಷತೆಯ ಬಗ್ಗೆ ಹೇಳಬೇಕಾಗಿಲ್ಲ. ಅವರು ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಸ್ವೀಕರಿಸುತ್ತಾರೆ.

ಭಾರತದ ಪ್ರಗತಿ ಮತ್ತು ಭಾರತದ ಯುವಕರ ಪ್ರಗತಿಯು ವಿಶ್ವದ ಪ್ರಗತಿಗೆ ಬಹಳ ಅವಶ್ಯಕವಾಗಿದೆ. ಇದು ಅಸಾಧ್ಯವೆಂದು ತೋರಿದರೂ ನಾನು ಯಾವುದೇ ಹಿಂಜರಿಕೆಯಿಲ್ಲದೆ ದೇಶಕ್ಕೆ ಖಾತರಿಗಳನ್ನು ನೀಡಬಲ್ಲವನಾಗಿದ್ದೇನೆ, ಇದಕ್ಕೆ ನಮ್ಮ ದೇಶವಾಸಿಗಳ ಶಕ್ತಿ ಕಾರಣ, ಸ್ನೇಹಿತರೇ, ನಿಮ್ಮ ಶಕ್ತಿ ಕಾರಣ. ನಾನು ಆ ಭರವಸೆಗಳನ್ನು ಪೂರೈಸಲು ಸಾಧ್ಯವಾದರೆ, ಅದಕ್ಕೆ ನಿಮ್ಮಂತಹ ಯುವಕರ ಶಕ್ತಿಯೇ ಕಾರಣವಾಗುತ್ತದೆ. ವಿಶ್ವದ ವೇದಿಕೆಗಳಲ್ಲಿ ಭಾರತದ ಉದ್ದೇಶವನ್ನು ಬಲವಾಗಿ ಪ್ರಸ್ತುತಪಡಿಸಲು ನನಗೆ ಸಾಧ್ಯವಾಗಿದೆ ಎಂದರೆ, ಅದಕ್ಕೂ ನನ್ನ ಸ್ಫೂರ್ತಿ ಮತ್ತೆ ನನ್ನ ಯುವ ಶಕ್ತಿಯೇ ಹೌದು. ಆದ್ದರಿಂದ, ಭಾರತದ ಯುವಕರು ನನ್ನ ನಿಜವಾದ ಶಕ್ತಿಯಾಗಿದ್ದಾರೆ; ನನ್ನ ಸಂಪೂರ್ಣ ಶಕ್ತಿ ಅವರಲ್ಲಿದೆ. ನಿಮ್ಮ ಉತ್ತಮ ಭವಿಷ್ಯಕ್ಕಾಗಿ ನಾನು ಹಗಲು ರಾತ್ರಿ ಕೆಲಸ ಮಾಡುತ್ತಲೇ ಇರುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ.



ಆದರೆ ಸ್ನೇಹಿತರೇ,

ನಾನು ನಿಮ್ಮ ಮೇಲೆ ಕೆಲವೊಂದು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇನೆ. ಇಂದು ನಾನು ಏನನ್ನಾದರೂ ಕೊಡುಗೆಯನ್ನು ನೀಡುವಂತೆ ನಿಮ್ಮನ್ನು ಒತ್ತಾಯಿಸಲು ಬಯಸುತ್ತೇನೆ. ನೀವು ತಪ್ಪಾಗಿ ಭಾವಿಸುವುದಿಲ್ಲ ತಾನೇ? ನಿಮ್ಮಂತಹ ಯುವಕರಿಂದ ಏನನ್ನಾದರೂ ಒತ್ತಾಯಿಸುವ ನಾನೆಂಥಾ ಪ್ರಧಾನಿ ಎಂದು ಆಶ್ಚಯ ಆಗುತ್ತಿದೆಯೇ? ಸ್ನೇಹಿತರೇ, ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸುವಂತೆ ನಾನು ನಿಮ್ಮನ್ನು ಕೇಳುವುದಿಲ್ಲ, ಸ್ನೇಹಿತರೇ, ನನ್ನ ಪಕ್ಷಕ್ಕೆ ಸೇರುವಂತೆ ನಾನು ನಿಮ್ಮನ್ನು ಕೇಳುವುದಿಲ್ಲ.

ಸ್ನೇಹಿತರೇ,

ನನಗೆ ಯಾವುದೇ ವೈಯಕ್ತಿಕ ಕಾರ್ಯಸೂಚಿ ಇಲ್ಲ; ಎಲ್ಲವೂ ದೇಶಕ್ಕೆ ಸೇರಿದ್ದು, ಮತ್ತು ಎಲ್ಲವೂ ದೇಶಕ್ಕಾಗಿ. ಅದಕ್ಕಾಗಿಯೇ ನಾನು ಇಂದು ನಿಮ್ಮಿಂದ ಏನಾದರೊಂದನ್ನು  ಬಯಸುತ್ತಿದ್ದೇನೆ. ನಾನು ದೇಶಕ್ಕಾಗಿ ಅದನ್ನು ಒತ್ತಾಯಿಸುತ್ತಿದ್ದೇನೆ. ʻಸ್ವಚ್ಛ ಭಾರತʼ ಅಭಿಯಾನವನ್ನು ಯಶಸ್ವಿಗೊಳಿಸುವಲ್ಲಿ ನೀವು ಯುವಕರು ಪ್ರಮುಖ ಪಾತ್ರ ವಹಿಸಿದ್ದೀರಿ. ಆದರೆ ʻಸ್ವಚ್ಛಗ್ರಹʼವು ಒಂದು ಅಥವಾ ಎರಡು ದಿನಗಳ ಕಾರ್ಯಕ್ರಮವಲ್ಲ. ಇದು ನಿರಂತರ ಪ್ರಕ್ರಿಯೆ. ನಾವು ಇದನ್ನು ಒಂದು ಅಭ್ಯಾಸವನ್ನಾಗಿ ಮಾಡಿಕೊಳ್ಳಬೇಕು. ಆದ್ದರಿಂದ, ಅಕ್ಟೋಬರ್ 2 ರಂದು ಪೂಜ್ಯ ಬಾಪು ಅವರ ಜನ್ಮ ದಿನಾಚರಣೆಯ ಮೊದಲು, ಅಕ್ಟೋಬರ್ 1 ರಂದು ದೇಶಾದ್ಯಂತ ಸ್ವಚ್ಛತೆಗೆ ಸಂಬಂಧಿಸಿದ ಪ್ರಮುಖ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ನಿಮ್ಮೆಲ್ಲರ ಯುವ ಸ್ನೇಹಿತರು ಇದರಲ್ಲಿ ಉತ್ಸಾಹದಿಂದ ಭಾಗವಹಿಸಬೇಕೆಂದು ನಾನು ವಿನಂತಿಸುತ್ತೇನೆ. ಈ ಬೇಡಿಕೆಯನ್ನು ನೀವು ಈಡೇರಿಸುವಿರಾ? ಖಂಡಿತವಾಗಿಯೂ? ಇದು ನಿಮ್ಮ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ನೀವು ಒಂದು ಪ್ರದೇಶವನ್ನು ಗುರುತಿ, ಅದನ್ನು ಸಂಪೂರ್ಣವಾಗಿ ಸ್ವಚ್ಛವಾಗಿರಿಸುತ್ತೀರಾ?

ನನ್ನ ಎರಡನೇ ವಿನಂತಿ ಯುಪಿಐ ಕುರಿತಾದದ್ದು, ಡಿಜಿಟಲ್ ವಹಿವಾಟುಗಳಿಗೆ ಸಂಬಂಧಿಸಿದ್ದು. ಇಂದು ಇಡೀ ಜಗತ್ತು ʻಡಿಜಿಟಲ್ ಭಾರತ್ʼ ಮತ್ತು ʻಯುಪಿಐʼ ಅನ್ನು ತುಂಬಾ ಹೊಗಳುತ್ತಿದೆ. ಈ ಹೆಮ್ಮೆ ಕೂಡ ನಿಮ್ಮದೇ. ನೀವೆಲ್ಲರೂ, ಯುವ ಸ್ನೇಹಿತರು ಇದನ್ನು ತ್ವರಿತವಾಗಿ ಅಳವಡಿಸಿಕೊಂಡಿದ್ದೀರಿ ಮತ್ತು ʻಫಿನ್‌ಟೆಕ್‌ʼನಲ್ಲಿ ಅದಕ್ಕೆ ಸಂಬಂಧಿಸಿದ ಅದ್ಭುತ ಆವಿಷ್ಕಾರಗಳನ್ನು ಮಾಡಿದ್ದೀರಿ. ಈಗ ನನ್ನ ಯುವಕರು ಅದನ್ನು ವಿಸ್ತರಿಸುವ ಮತ್ತು ಅದಕ್ಕೆ ಹೊಸ ದಿಕ್ಕನ್ನು ನೀಡುವ ಜವಾಬ್ದಾರಿಯನ್ನು ಹೊರಬೇಕಾಗಿದೆ. ʻಯುಪಿಐʼ ಅನ್ನು ಹೇಗೆ ನಿರ್ವಹಿಸುವುದು, ಯುಪಿಐನೊಂದಿಗೆ ಹೇಗೆ ಕೆಲಸ ಮಾಡುವುದು, ಡಿಜಿಟಲ್ ವಹಿವಾಟುಗಳನ್ನು ಹೇಗೆ ಮಾಡುವುದು ಎಂದು ವಾರದಲ್ಲಿ ಕನಿಷ್ಠ ಏಳು ಜನರಿಗೆ ನೀವು ಕಲಿಸುತ್ತೀರಿ ಎಂದು ನೀವು ಭರವಸೆ ನೀಡಬಲ್ಲಿರಾ? ಸ್ನೇಹಿತರೇ, ಬದಲಾವಣೆ ಎಷ್ಟು ವೇಗವಾಗಿ ಸಂಭವಿಸುತ್ತದೆ ನೀವೇ ನೋಡಿ.

ಸ್ನೇಹಿತರೇ,

ನಿಮಗೆ ನನ್ನ ಮೂರನೇ ವಿನಂತಿ ʻವೋಕಲ್ ಫಾರ್ ಲೋಕಲ್ʼಗೆ ಸಂಬಂಧಿಸಿದ್ದು. ಸ್ನೇಹಿತರೇ, ನೀವು ಮಾತ್ರ ಇದನ್ನು ಮುಂದೆ ತೆಗೆದುಕೊಂಡು ಹೋಗಬಲ್ಲಿರಿ. ನೀವು ಅದನ್ನು ಒಮ್ಮೆ ನಿಮ್ಮ ಕೈಗೆತ್ತಿಕೊಂಡರೆ, ಜಗತ್ತಿನಲ್ಲಿ ಎದುರಿಲ್ಲ. ನನ್ನನ್ನು ನಂಬಿ. ಏಕೆಂದರೆ ನಿಮ್ಮ ಶಕ್ತಿಯ ಮೇಲೆ ನನಗೆ ನಂಬಿಕೆ ಇದೆ. ನಿಮ್ಮ ಶಕ್ತಿಯಲ್ಲಿ ನಿಮಗೆ ವಿಶ್ವಾಸವಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ, ಆದರೆ ನನಗಂತೂ ಇದೆ. ನೋಡಿ, ಇದು ಹಬ್ಬಗಳ ಸಮಯ. ಹಬ್ಬಗಳ ಸಮಯದಲ್ಲಿ ಉಡುಗೊರೆ ಉದ್ದೇಶಕ್ಕಾಗಿ ನೀವು ಖರೀದಿಸುವ ಎಲ್ಲವೂ 'ಮೇಡ್ ಇನ್ ಇಂಡಿಯಾ' ಆಗಿರಬೇಕೆಂದು ಖಾತರಿಪಡಿಸಿಕೊಳ್ಳಲು ನೀವು ಪ್ರಯತ್ನಿಸಬೇಕು. ಸ್ನೇಹಿತರೇ, ದಯವಿಟ್ಟು ಭಾರತೀಯ ನೆಲದಲ್ಲಿ ಉತ್ಪಾದಿಸಲಾದ ಮತ್ತು ಭಾರತೀಯ ಕಾರ್ಮಿಕರ ಬೆವರು ಹೊಂದಿರುವ ವಸ್ತುಗಳು ಮತ್ತು ಉತ್ಪನ್ನಗಳನ್ನು ಮಾತ್ರ ನಿಮ್ಮ ದೈನಂದಿನ ಜೀವನದಲ್ಲಿ ಬಳಸಿ. ʻವೋಕಲ್ ಫಾರ್ ಲೋಕಲ್ʼನ ಈ ಅಭಿಯಾನವು ಹಬ್ಬಗಳಿಗೆ ಮಾತ್ರ ಸೀಮಿತವಾಗದಂತೆ ನೋಡಿಕೊಳ್ಳಿ.

ನಾನು ನಿಮಗೆ ಒಂದು ಕೆಲಸವನ್ನು ಕೊಡುತ್ತೇನೆ, ನೀವು ಅದನ್ನು ಮಾಡುವಿರಾ? ಹೋಮ್‌ವರ್ಕ್‌ ಇಲ್ಲದೆ ಯಾವುದೇ ತರಗತಿಯೂ ಪರಿಪೂರ್ಣಗೊಳ್ಳುವುದಿಲ್ಲ, ಅಲ್ಲವೇ? ಕೆಲವರು ಮಾತನಾಡುವುದೂ ಇಲ್ಲ. ನಿಮ್ಮ ಕುಟುಂಬದ ಎಲ್ಲಾ ಜನರೊಂದಿಗೆ ಒಟ್ಟುಗೂಡಿ, ಪೆನ್ ಮತ್ತು ಕಾಗದವನ್ನು ತೆಗೆದುಕೊಳ್ಳಿ, ಅಥವಾ ನೀವು ನಿಮ್ಮ ಮೊಬೈಲ್‌ನಲ್ಲಿ ಬರೆಯಬೇಕೆಂದರೆ, ನಿಮ್ಮ ಮನೆಯಲ್ಲಿ ನೀವು ಬಳಸುವ ವಸ್ತುಗಳ ಪಟ್ಟಿಯನ್ನು ನಿಮ್ಮ ಮೊಬೈಲ್‌ನಲ್ಲಿ ಟೈಪಿಸಿ; ನೀವು ಪ್ರತಿದಿನ ಬಳಸುವ ವಸ್ತುಗಳು ಅವಾಗಿರಲಿ. ಅವುಗಳಲ್ಲಿ ಎಷ್ಟು ನಮ್ಮ ದೇಶದಿಂದ ಮತ್ತು ಎಷ್ಟು ಇತರ ದೇಶಗಳಿಂದ ಬಂದವು? ನೀವು ಪಟ್ಟಿಯನ್ನು ತಯಾರಿಸುವಿರಾ? ನಿಮ್ಮ ಜೇಬಿನಲ್ಲಿರುವ ಬಾಚಣಿಗೆ ವಿದೇಶದಿಂದ ಬಂದಿರಬಹುದು ಎಂದು ನಿಮಗೆ ತಿಳಿದಿಲ್ಲದಿರಬಹುದು. ಸ್ನೇಹಿತರೇ, ಇಂತಹ ವಿದೇಶಿ ವಸ್ತುಗಳು ನಮ್ಮ ಮನೆಗಳನ್ನು ಮತ್ತು ನಮ್ಮ ಜೀವನವನ್ನು ಪ್ರವೇಶಿಸಿವೆ. ದೇಶವನ್ನು ಉಳಿಸುವುದು ಬಹಳ ಮುಖ್ಯ. ಹೌದು, ನಮ್ಮ ದೇಶದಲ್ಲಿ ನಮ್ಮ ನಿರೀಕ್ಷೆಗೆ ಸರಿ ಹೊಂದದ ಕೆಲವೊಂದು ವಿಷಯಗಳೀವೆ. ಆದರೆ ನಾವು ತಪ್ಪು ಮಾಡುತ್ತಿದ್ದರೆ ಅದನ್ನು ಎಚ್ಚರಿಕೆಯಿಂದ ನೋಡಲು ಪ್ರಯತ್ನಿಸಬೇಕು. ಆದರೆ ಸ್ನೇಹಿತರೇ, ಒಮ್ಮೆ ನಾವು ನಮ್ಮ ದೇಶದಲ್ಲಿ ತಯಾರಿಸಿದ ವಸ್ತುಗಳನ್ನು ಖರೀದಿಸಲು ಪ್ರಾರಂಭಿಸಿದರೆ,  ನಮ್ಮ ಉದ್ಯಮ ಮತ್ತು ವ್ಯಾಪಾರವು ನೀವು ಊಹಿಸಲಾಗದಷ್ಟು ವೇಗದಲ್ಲಿ ಬೆಳೆಯುವುದನ್ನು ನೋಡುತ್ತೀರಿ! ಒಂದು ಸಣ್ಣ ಹೆಜ್ಜೆ ಕೂಡ ದೊಡ್ಡ ಕನಸುಗಳನ್ನು ಈಡೇರಿಸಬಲ್ಲದು.

ಸ್ನೇಹಿತರೇ,

ನಮ್ಮ ಕ್ಯಾಂಪಸ್‌ಗಳು ʻವೋಕಲ್ ಫಾರ್ ಲೋಕಲ್ʼನ ಪ್ರಮುಖ ಕೇಂದ್ರಗಳಾಗಬಹುದು. ನಮ್ಮ ಕ್ಯಾಂಪಸ್‌ಗಳು ಶಿಕ್ಷಣದ ಕೇಂದ್ರಗಳಷ್ಟೇ ಅಲ್ಲ, ಫ್ಯಾಷನ್‌ ಕೇಂದ್ರಗಳೂ ಆಗಿವೆ. ನಿಮಗೆ ಅದು ಇಷ್ಟವಾಯಿತೇ? ನಾವು ಒಂದು ನಿರ್ದಿಷ್ಟ ದಿನವನ್ನು ಆಚರಿಸಿದಾಗ ಏನಾಗುತ್ತದೆ? ಉದಾಹರಣೆಗೆ ಇಂದು ʻಗುಲಾಬಿ ದಿನʼ ಎಂದು ಹೇಳೋಣ. ಭಾರತೀಯ ಬಟ್ಟೆಯಾದ ಖಾದಿಯನ್ನು ನಾವು ಕ್ಯಾಂಪಸ್‌ನಲ್ಲಿ ʻಫ್ಯಾಷನ್ ಸ್ಟೇಟ್‌ಮೆಂಟ್‌ʼ ಆಗಿ ಮಾಡಲು ಸಾಧ್ಯವಿಲ್ಲವೇ? ನಿಮ್ಮಂತಹ ಎಲ್ಲಾ ಯುವಕರಿಗೆ ಈ ಶಕ್ತಿ ಇದೆ. ನಿಮ್ಮ ಕಡೆಗೆ ತಿರುಗಲು ನೀವು ಮಾರುಕಟ್ಟೆ, ಬ್ರಾಂಡ್‌ಗಳು, ವಿನ್ಯಾಸಕರ ಮೇಲೆ ಪ್ರಭಾವ ಬೀರಬಹುದು. ಕಾಲೇಜು ಮತ್ತು ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಲ್ಲಿ ಅನೇಕ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ. ಅಲ್ಲಿ, ನಾವು ಖಾದಿಗೆ ಸಂಬಂಧಿಸಿದ ಫ್ಯಾಷನ್ ಶೋಗಳನ್ನು ಆಯೋಜಿಸಬಹುದು.

ನಮ್ಮ ವಿಶ್ವಕರ್ಮ ಸ್ನೇಹಿತರ, ನಮ್ಮ ಬುಡಕಟ್ಟು ಸ್ನೇಹಿತರ ಕರಕುಶಲತೆಯನ್ನು ನಾವು ಪ್ರದರ್ಶಿಸಬಹುದು. ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು, ಭಾರತವನ್ನು ಅಭಿವೃದ್ಧಿಪಡಿಸಲು ಇದು ಮಾರ್ಗವಾಗಿದೆ. ಈ ಮಾರ್ಗವನ್ನು ಅನುಸರಿಸುವ ಮೂಲಕ, ನಾವು ಹೆಚ್ಚಿನ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸಬಹುದು. ನಾನು ನಿಮ್ಮ ಮುಂದೆ ಇಟ್ಟಿರುವ ಈ ಮೂರು ಸಣ್ಣ ಬೇಡಿಕೆಗಳು ಈಡೇರಿದ ನಂತರ ನಿಮಗೆ ಮತ್ತು ಇಡೀ ರಾಷ್ಟ್ರಕ್ಕೆ ಹೇಗೆ ಪ್ರಯೋಜನವಾಗುತ್ತದೆ ಮತ್ತು ಅದು ಇತರರಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂದು ನೀವೇ ನೋಡಿ.


 

ನನ್ನ ಯುವ ಸ್ನೇಹಿತರೇ,
ನಮ್ಮ ಯುವಕರು ಮತ್ತು ನಮ್ಮ ಹೊಸ ಪೀಳಿಗೆ ದೃಢನಿಶ್ಚಯ ಹೊಂದಿದ್ದರೆ, ನಾವು ಖಂಡಿತವಾಗಿಯೂ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತೇವೆ. ಈ ಸಂಕಲ್ಪದೊಂದಿಗೆ ನೀವು ಇಂದು ʻಭಾರತ ಮಂಟಪಂʼದಿಂದ ನಿರ್ಗಮಿಸುತ್ತೀರಿ ಎಂದು ನನಗೆ ಖಾತ್ರಿಯಿದೆ. ಈ ಸಂಕಲ್ಪವನ್ನು ಕೈಗೊಳ್ಳುವ ಮೂಲಕ, ನೀವು ಖಂಡಿತವಾಗಿಯೂ ನಿಮ್ಮ ಈ ಸಾಮರ್ಥ್ಯಗಳನ್ನು ಪ್ರದರ್ಶಿಸಬಲ್ಲಿರಿ.

ಸ್ನೇಹಿತರೇ,

ನಾವು ಒಂದು ಕ್ಷಣ ಯೋಚಿಸೋಣ - ದೇಶಕ್ಕಾಗಿ ನಮ್ಮ ಜೀವನವನ್ನು ತ್ಯಾಗ ಮಾಡಲು ಅವಕಾಶ ಸಿಗದ ಜನರು ನಾವು. ಭಗತ್ ಸಿಂಗ್, ಸುಖದೇವ್, ಚಂದ್ರಶೇಖರ್ ಮತ್ತು ಆಜಾದ್ ಅವರಿಗೆ ದೊರೆತ ಅದೃಷ್ಟ ನಮಗೆ ಸಿಕ್ಕಿಲ್ಲ. ಆದರೆ ಭಾರತಕ್ಕಾಗಿ ಬದುಕುವ ಅವಕಾಶ ನಮಗೆ ಸಿಕ್ಕಿದೆ. 100 ವರ್ಷಗಳ ಹಿಂದಿನ ದಿನಗಳನ್ನು ನೋಡಿ ಮತ್ತು 1919, 1920, 1922, 1923, 1925 ವರ್ಷಗಳನ್ನು ಕಲ್ಪಿಸಿಕೊಳ್ಳಿ. ಆ ಸಮಯದಲ್ಲಿ ಯುವಕರು ದೇಶವನ್ನು ವಿಮೋಚನೆಗೊಳಿಸಲು ಏನು ಬೇಕಾದರೂ ಮಾಡಲು ನಿರ್ಧರಿಸಿದ್ದರು. ಅವರು ತಾಔಉ ಕಂಡುಕೊಳ್ಳುವ ಯಾವುದೇ ಮಾರ್ಗವನ್ನು ಬಳಸುತ್ತಿದ್ದರು. ಆ ಕಾಲದ ಯುವಕರು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದರು. ಅವರು ತಮ್ಮ ಪುಸ್ತಕಗಳನ್ನು ಕಬೋರ್ಡಿನಲ್ಲಿ ಲಾಕ್ ಮಾಡಿದ್ದರು, ಮತ್ತು ಅವರು ಜೈಲುಗಳಿಗೆ ಹೋಗಲು ಆದ್ಯತೆ ನೀಡಿದರು. ಅವರು ನೇಣುಗಂಬಕ್ಕೆ ಹೋಗಲು ಸಹ ಆದ್ಯತೆ ನೀಡಿದರು. ಅವರು ತಮಗಾಗಿ ಕಂಡುಕೊಂಡ ಯಾವುದೇ ಮಾರ್ಗದಲ್ಲಿ ನಡೆದರು. ಶೌರ್ಯವು ಸುಮಾರು 100 ವರ್ಷಗಳ ಹಿಂದೆ ಉತ್ತುಂಗಕ್ಕೇರಿತ್ತು; ತ್ಯಾಗದ ವಾತಾವರಣವನ್ನು ಸೃಷ್ಟಿಸಲಾಯಿತು; ತಾಯ್ನಾಡಿಗಾಗಿ ಸಾಯುವ ಇಚ್ಛೆ ಬಲಗೊಂಡಿತ್ತು; ಮತ್ತು 25 ವರ್ಷಗಳ ಅವಧಿಯಲ್ಲಿ ದೇಶವು ಸ್ವತಂತ್ರ ಗಳಿಸಿತು. ಸ್ನೇಹಿತರೇ, ಅದು ಸಂಭವಿಸಿತೇ ಅಥವಾ ಇಲ್ಲವೇ? ಇದು ಅವರ ಪ್ರಯತ್ನದಿಂದಾಗಿ ಸಂಭವಿಸಿದೆಯೇ ಅಥವಾ ಇಲ್ಲವೇ? ಆ 25 ವರ್ಷಗಳಲ್ಲಿ ಉದ್ಭವಿಸಿದ ರಾಷ್ಟ್ರವ್ಯಾಪಿ ಉತ್ಸಾಹವು 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯವನ್ನು ನೀಡಿತು.

ಸ್ನೇಹಿತರೇ,

ನನ್ನೊಂದಿಗೆ ಬನ್ನಿ. ನಾನು ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ. ನಮ್ಮ ಮುಂದೆ 25 ವರ್ಷಗಳಿವೆ. ಇದು ನಡೆದದ್ದು 100 ವರ್ಷಗಳ ಹಿಂದೆ; ನಾವು ಒಮ್ಮೆ ಸ್ವರಾಜ್ಯಕ್ಕಾಗಿ ಮೆರವಣಿಗೆ ಮಾಡಿದ್ದೇವೆ, ಆದರೆ ಈಗ ನಾವು ಸಮೃದ್ಧಿಗಾಗಿ ಸಾಗುತ್ತಿದ್ದೇವೆ. ನಾವು 25 ವರ್ಷಗಳಲ್ಲಿ ದೇಶವನ್ನು ಅಭಿವೃದ್ಧಿಪಡಿಸುತ್ತೇವೆ. ಅದಕ್ಕಾಗಿ ನಾನು ಏನೇ ಮಾಡಬೇಕಾಗಿ ಬಂದರೂ ನಾನು ಹಿಂದೆ ಸರಿಯುವುದಿಲ್ಲ. ಸ್ನೇಹಿತರೇ, ಸ್ವಾವಲಂಬಿ ಭಾರತವು ಸಮೃದ್ಧಿಯ ಬಾಗಿಲನ್ನು ತಲುಪಬೇಕು. ಸ್ವಾವಲಂಬಿ ಭಾರತವು ಸ್ವಾಭಿಮಾನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಆ ಸಂಕಲ್ಪದೊಂದಿಗೆ ಮುಂದುವರಿಯೋಣ; ನಾವು ಒಟ್ಟಾಗಿ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಈಡೇರಿಸೋಣ; 2047ರ ವೇಳೆಗೆ ನಾವು ಅಭಿವೃದ್ಧಿ ಹೊಂದಿದ ದೇಶವಾಗಬೇಕು. ತದನಂತರ ನೀವೂ ಸಹ ಜೀವನದ ಅತ್ಯುನ್ನತ ಹಂತದಲ್ಲಿರುತ್ತೀರಿ. 25 ವರ್ಷಗಳ ನಂತರ ನೀವು ಎಲ್ಲೇ ಇದ್ದರೂ, ನೀವು ನಿಮ್ಮ ಜೀವನದ ಅತ್ಯುನ್ನತ ಹಂತದಲ್ಲಿರುತ್ತೀರಿ.

ಸ್ವಲ್ಪ ಊಹಿಸಿಕೊಳ್ಳಿ ಸ್ನೇಹಿತರೇ, ನಾನು ಇಂದು ಹಾಕುತ್ತಿರುವ ಕಠಿಣ ಪರಿಶ್ರಮ ಮತ್ತು ನಾಳೆ ನಿಮ್ಮೊಂದಿಗೆ ನಾನು ಹಾಕಲಿರುವ ಕಠಿಣ ಪರಿಶ್ರಮ, ನಿಮ್ಮನ್ನು ಎಷ್ಟು ದೂರ ಕರೆದೊಯ್ಯುತ್ತದೆ? ನಿಮ್ಮ ಕನಸುಗಳು ನನಸಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ನಾನು ನಿಮಗೆ ಭರವಸೆ ನೀಡುತ್ತೇನೆ ಸ್ನೇಹಿತರೇ, ನಾನು ಭಾರತವನ್ನು ವಿಶ್ವದ ಅಗ್ರ ಮೂರು ಆರ್ಥಿಕತೆಗಳ ಮಟ್ಟಕ್ಕೆ ಕೊಂಡೊಯ್ಯುತ್ತೇನೆ. ಅದಕ್ಕಾಗಿಯೇ ನಾನು ನಿಮ್ಮ ಬೆಂಬಲವನ್ನು ಬಯಸುತ್ತೇನೆ; ನಾನು ತಾಯಿ ಭಾರತಕ್ಕಾಗಿ ಅದನ್ನು ಬಯಸುತ್ತೇನೆ. 140 ಕೋಟಿ ಭಾರತೀಯರಿಗಾಗಿ ನಾನು ಅದನ್ನು ಬಯಸುತ್ತೇನೆ.

 

ನನ್ನೊಂದಿಗೆ ಹೇಳಿ - ಭಾರತ್ ಮಾತಾ ಕಿ – ಜೈ; ನಿಮ್ಮ ಸಂಪೂರ್ಣ ಶಕ್ತಿಯನ್ನು ಬಳಸಿ ಜೋರಾಗಿ ಹೇಳಿ ಸ್ನೇಹಿತರೇ - ಭಾರತ್ ಮಾತಾ ಕಿ - ಜೈ, ಭಾರತ್ ಮಾತಾ ಕಿ – ಜೈ.

ಅನಂತ ಧನ್ಯವಾದಗಳು.

ಗಮನಿಸಿ: ಇದು ಪ್ರಧಾನಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.

 

*******

 



(Release ID: 1961754) Visitor Counter : 78