ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೆಪ್ಟೆಂಬರ್ 23ರಂದು ವಾರಣಾಸಿಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿಗಳು


​​​​​​​ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಿ

ಶಿವನಿಂದ ಸ್ಫೂರ್ತಿ ಪಡೆದು ಕ್ರೀಡಾಂಗಣದ ವಿನ್ಯಾಸ ಮಾಡಲಾಗಿದೆ

ಉತ್ತರ ಪ್ರದೇಶದಾದ್ಯಂತ ಸುಮಾರು 1115 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ 16 ಅಟಲ್ ಆವಾಸಿಯಾ ವಿದ್ಯಾಲಯಗಳನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ

ʻಕಾಶಿ ಸಂಸದ್ ಸಾಂಸ್ಕೃತಿಕ ಮಹೋತ್ಸವ-2023ʼರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿರುವ ಪ್ರಧಾನಿ

Posted On: 21 SEP 2023 9:55AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಸೆಪ್ಟೆಂಬರ್ 23ರಂದು ವಾರಣಾಸಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 1:30ಕ್ಕೆ ಪ್ರಧಾನಮಂತ್ರಿಯವರು ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 3:15ಕ್ಕೆ ಪ್ರಧಾನಮಂತ್ರಿಯವರು `ರುದ್ರಾಕ್ಷಿ ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರ’ಕ್ಕೆ ತಲುಪಲಿದ್ದು, `ಕಾಶಿ ಸಂಸದ್ ಸಾಂಸ್ಕೃತಿಕ ಮಹೋತ್ಸವ-2023’ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಉತ್ತರ ಪ್ರದೇಶದಾದ್ಯಂತ ನಿರ್ಮಿಸಲಾದ 16 ಅಟಲ್ ಆವಾಸಿಯಾ ವಿದ್ಯಾಲಯವನ್ನು ಉದ್ಘಾಟಿಸಲಿದ್ದಾರೆ.

ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು ಆಧುನಿಕ ವಿಶ್ವ ದರ್ಜೆಯ ಕ್ರೀಡಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಪ್ರಧಾನಮಂತ್ರಿಯವರ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ವಾರಣಾಸಿಯ ಗಂಜಾರಿ, ರಜತಲಾಬ್ನಲ್ಲಿ ನಿರ್ಮಾಣವಾಗಲಿರುವ ಆಧುನಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ಸುಮಾರು 450 ಕೋಟಿ ರೂ.ಗಳ ವೆಚ್ಚದಲ್ಲಿ 30 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಕ್ರೀಡಾಂಗಣದ ವಿಷಯಾಧಾರಿತ ವಾಸ್ತುಶಿಲ್ಪವು ಶಿವನಿಂದ ಸ್ಫೂರ್ತಿ ಪಡೆದಿದೆ, ಅರ್ಧಚಂದ್ರಾಕಾರದ ಛಾವಣಿಯ ಹೊದಿಕೆಗಳು, ತ್ರಿಶೂಲ ಆಕಾರದ ಫ್ಲಡ್-ಲೈಟ್ಗಳು, ಘಾಟ್ ಮೆಟ್ಟಿಲುಗಳನ್ನು ಆಧರಿಸಿದ ಆಸನಗಳು, ಮುಂಭಾಗದಲ್ಲಿ ಬಿಲ್ವಿಪತ್ರೆ ಆಕಾರದ ಲೋಹದ ಹಾಳೆಗಳನ್ನು ಅಳವಡಿಸಲಾಗಿದೆ. ಈ ಕ್ರೀಡಾಂಗಣವು 30,000 ಪ್ರೇಕ್ಷಕರ ಆಸನ ಸಾಮರ್ಥ್ಯವನ್ನು ಹೊಂದಿರುತ್ತದೆ.

ಗುಣಮಟ್ಟದ ಶಿಕ್ಷಣಕ್ಕೆ ಪ್ರವೇಶವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ, ಉತ್ತರ ಪ್ರದೇಶದಾದ್ಯಂತ ಸುಮಾರು 1115 ಕೋಟಿ ರೂ.ಗಳ ವೆಚ್ಚದಲ್ಲಿ ಹದಿನಾರು ʻಅಟಲ್ ಅವಸಿಯಾ ವಿದ್ಯಾಲಯʼಗಳನ್ನು ನಿರ್ಮಿಸಲಾಗಿದೆ. ವಿಶೇಷವಾಗಿ ಕಾರ್ಮಿಕರು ಮತ್ತು ನಿರ್ಮಾಣ ಕೆಲಸಗಾರರ ಮಕ್ಕಳು ಹಾಗೂ ಕೋವಿಡ್-19 ಸಾಂಕ್ರಾಮಿಕದ ವೇಳೆ ಅನಾಥರ ಮಕ್ಕಳಿಗಾಗಿ ಇವುಗಳನ್ನು ಪ್ರಾರಂಭಿಸಲಾಗಿದೆ. ಈ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗೆ ಸಹಾಯ ಮಾಡುವುದು ಇವುಗಳ ಉದ್ದೇಶವಾಗಿದೆ. ಪ್ರತಿ ಶಾಲೆಯನ್ನು 10-15 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದು, ತರಗತಿ ಕೊಠಡಿಗಳು, ಕ್ರೀಡಾ ಮೈದಾನ, ಮನರಂಜನಾ ಪ್ರದೇಶಗಳು, ಮಿನಿ ಸಭಾಂಗಣ, ಹಾಸ್ಟೆಲ್ ಸಂಕೀರ್ಣ, ಮೆಸ್ ಮತ್ತು ಸಿಬ್ಬಂದಿಗೆ ವಸತಿ ಸಂಕೀರ್ಣಗಳನ್ನು ಇವು ಒಳಗೊಂಡಿವೆ. ಈ ವಸತಿ ಶಾಲೆಗಳಲ್ಲಿ ಅಂತಿಮವಾಗಿ ತಲಾ 1000 ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ.

ಕಾಶಿಯ ಸಾಂಸ್ಕೃತಿಕ ಚೈತನ್ಯವನ್ನು ಬಲಪಡಿಸುವ ಪ್ರಧಾನಮಂತ್ರಿಯವರ ಆಶಯದಂತೆ ʻಕಾಶಿ ಸಂಸದ್ ಸಾಂಸ್ಕೃತಿಕ ಮಹೋತ್ಸವʼದ ಪರಿಕಲ್ಪನೆಗೆ ರೂಪುಗೊಂಡಿದೆ. ಈ ಮಹೋತ್ಸವದಲ್ಲಿ 17 ವಿಭಾಗಗಳಲ್ಲಿ 37,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು, ಅವರು ಹಾಡುಗಾರಿಕೆ, ವಾದ್ಯ ನುಡಿಸುವಿಕೆ, ನುಕ್ಕಡ್ ನಾಟಕ, ನೃತ್ಯ ಇತ್ಯಾದಿಗಳಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು. ʻರುದ್ರಾಕ್ಷಿ ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರʼದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಸ್ಪರ್ಧಿಗಳು ತಮ್ಮ ಸಾಂಸ್ಕೃತಿಕ ಕೌಶಲ್ಯಗಳನ್ನು ಪ್ರದರ್ಶಿಸಲು ಅವಕಾಶ ಪಡೆಯಲಿದ್ದಾರೆ.

*****


(Release ID: 1959415) Visitor Counter : 100