ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಛತ್ತೀಸಗಢದ ರಾಯಗಢದಲ್ಲಿ ಸುಮಾರು 6,350 ಕೋಟಿ ರೂಪಾಯಿ ಮೌಲ್ಯದ ರೈಲು ಯೋಜನೆಗಳನ್ನು ಪ್ರಧಾನಮಂತ್ರಿಯವರು ದೇಶಕ್ಕೆ ಸಮರ್ಪಿಸಿದರು


ಛತ್ತೀಸಗಢದ 9 ಜಿಲ್ಲೆಗಳಲ್ಲಿ 50 ಹಾಸಿಗೆಗಳ 'ಕ್ರಿಟಿಕಲ್ ಕೇರ್ ಬ್ಲಾಕ್‌' ಗಳಿಗೆ ಶಂಕುಸ್ಥಾಪನೆ

1 ಲಕ್ಷ ಸಿಕಲ್ ಸೆಲ್ (ರಕ್ತಹೀನತೆ) ಸಮಾಲೋಚನಾ ಕಾರ್ಡ್‌ ವಿತರಣೆ

"ಇಂದು, ದೇಶದ ಪ್ರತಿಯೊಂದು ರಾಜ್ಯ ಮತ್ತು ಪ್ರತಿಯೊಂದು ಪ್ರದೇಶವು ಅಭಿವೃದ್ಧಿಯಲ್ಲಿ ಸಮಾನ ಆದ್ಯತೆಯನ್ನು ಪಡೆಯುತ್ತಿವೆ"

"ಇಡೀ ವಿಶ್ವವು ಆಧುನಿಕ ಅಭಿವೃದ್ಧಿಯ ವೇಗದ ಗತಿ ಮತ್ತು ಸಾಮಾಜಿಕ ಕಲ್ಯಾಣದ ಭಾರತದ ಮಾದರಿಗೆ ಸಾಕ್ಷಿಯಾಗಿರುವುದು ಮಾತ್ರವಲ್ಲ, ಅದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದೆ"

"ಛತ್ತೀಸಗಢ ದೇಶದ ಅಭಿವೃದ್ಧಿಯ ಶಕ್ತಿಕೇಂದ್ರ"

"ಅರಣ್ಯ ಸಂಪತ್ತಿನ ಮೂಲಕ ಸಮೃದ್ಧಿಯ ಹೊಸ ಮಾರ್ಗಗಳನ್ನು ತೆರೆಯುವುದರ ಜೊತೆಗೆ ಅರಣ್ಯ ಮತ್ತು ಭೂಮಿಯನ್ನು ರಕ್ಷಿಸಲು ಸರ್ಕಾರದ ಸಂಕಲ್ಪ"

"ಸಬ್ಕಾ ಸಾಥ್, ಸಬ್ಕಾ ವಿಕಾಸ್" ಸಂಕಲ್ಪದೊಂದಿಗೆ ನಾವು ಮುನ್ನಡೆಯಬೇಕಾಗಿದೆ"

Posted On: 14 SEP 2023 5:26PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಛತ್ತೀಸಗಢದ ರಾಯಗಢದಲ್ಲಿ ಸುಮಾರು 6,350 ಕೋಟಿ ರೂಪಾಯಿ ಮೌಲ್ಯದ ಹಲವಾರು ರೈಲ್ವೆ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿದರು. ಅಪ್ರಧಾನಿಯವರು ಛತ್ತೀಸಗಢದ 9 ಜಿಲ್ಲೆಗಳಲ್ಲಿ 50 ಹಾಸಿಗೆಗಳ 'ಕ್ರಿಟಿಕಲ್ ಕೇರ್ ಬ್ಲಾಕ್‌'ಗಳಿಗೆ ಅಡಿಗಲ್ಲು ಹಾಕಿದರು ಮತ್ತು ತಪಾಸಣೆಗೊಳಗಾದ ಜನರಿಗೆ 1 ಲಕ್ಷ ಸಿಕಲ್ ಸೆಲ್ (ರಕ್ತಹೀನತೆ) ಸಮಾಲೋಚನಾ ಕಾರ್ಡ್‌ ಗಳನ್ನು ವಿತರಿಸಿದರು. ರೈಲ್ವೆ ಯೋಜನೆಗಳಲ್ಲಿ ಛತ್ತೀಸಗಢ ಪೂರ್ವ ರೈಲು ಯೋಜನೆ ಹಂತ-1, ಚಂಪಾದಿಂದ ಜಮ್ಗಾ ನಡುವಿನ 3ನೇ ರೈಲು ಮಾರ್ಗ, ಪೆಂಡ್ರಾ ರಸ್ತೆಯಿಂದ ಅನುಪ್ಪುರ್ ನಡುವಿನ 3ನೇ ರೈಲು ಮಾರ್ಗ ಮತ್ತು ತಲೈಪಲ್ಲಿ ಕಲ್ಲಿದ್ದಲು ಗಣಿಯಿಂದ ಎನ್‌ ಟಿ ಪಿ ಸಿ ಲಾರಾ ಸೂಪರ್ ಥರ್ಮಲ್ ಪವರ್ ಸ್ಟೇಷನ್‌ಗೆ ಸಂಪರ್ಕಿಸುವ ಎಂ ಜಿ ಆರ್ (ಮೆರ್ರಿ-ಗೋ-ರೌಂಡ್) ವ್ಯವಸ್ಥೆ ಸೇರಿವೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಜ್ಯದಲ್ಲಿ 6,400 ಕೋಟಿ ರೂ.ಗೂ ಹೆಚ್ಚು ಮೊತ್ತದ ರೈಲ್ವೆ ಯೋಜನೆಗಳನ್ನು ಅನಾವರಣಗೊಳಿಸುತ್ತಿರುವುದರಿಂದ ಛತ್ತೀಸಗಢವು ಅಭಿವೃದ್ಧಿಯತ್ತ ಮಹತ್ವದ ಹೆಜ್ಜೆ ಇಡುತ್ತಿದೆ ಎಂದು ಹೇಳಿದರು. ಇಂಧನ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಮತ್ತು ರಾಜ್ಯದ ಆರೋಗ್ಯ ಕ್ಷೇತ್ರವನ್ನು ಸುಧಾರಿಸಲು ಇಂದು ವಿವಿಧ ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ಸಿಕಲ್ ಸೆಲ್ (ರಕ್ತಹೀನತೆ) ಸಮಾಲೋಚನಾ ಕಾರ್ಡ್‌ ಗಳ ವಿತರಣೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಆಧುನಿಕ ಅಭಿವೃದ್ಧಿಯ ವೇಗದ ಗತಿ ಮತ್ತು ಸಾಮಾಜಿಕ ಕಲ್ಯಾಣದ ಭಾರತದ ಮಾದರಿಗೆ ಇಡೀ ಜಗತ್ತು ಸಾಕ್ಷಿಯಾಗಿರುವುದು ಮಾತ್ರವಲ್ಲದೆ, ಅದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ವಿಶ್ವ ನಾಯಕರಿಗೆ ಆತಿಥ್ಯ ವಹಿಸಿದ್ದನ್ನು ಪ್ರಧಾನಿ ಸ್ಮರಿಸಿಕೊಂಡರು ಮತ್ತು ಅವರು ಭಾರತದ ಅಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣದ ಮಾದರಿಯ ಬಗ್ಗೆ ಹೆಚ್ಚು ಪ್ರಭಾವಿತರಾಗಿದ್ದಾರೆ. ಜಾಗತಿಕ ಸಂಸ್ಥೆಗಳು ಭಾರತದ ಯಶಸ್ಸಿನಿಂದ ಕಲಿಯುವ ಬಗ್ಗೆ ಮಾತನಾಡುತ್ತಿವೆ ಎಂದು ಅವರು ಹೇಳಿದರು. ಈ ಸಾಧನೆಯ ಶ್ರೇಯವು ದೇಶದ ಪ್ರತಿಯೊಂದು ರಾಜ್ಯ ಮತ್ತು ಪ್ರತಿಯೊಂದು ಪ್ರದೇಶದ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಸಮಾನ ಆದ್ಯತೆಗೆ ಸಲ್ಲಬೇಕು ಎಂದು ಪ್ರಧಾನಿ ಹೇಳಿದರು. ಛತ್ತೀಸಗಢ ಮತ್ತು ರಾಯಗಢದ ಈ ಪ್ರದೇಶವೂ ಇದಕ್ಕೆ ಸಾಕ್ಷಿಯಾಗಿದೆ ಎಂದ ಅವರು, ಇಂದಿನ ಯೋಜನೆಗಳಿಗಾಗಿ ನಾಗರಿಕರನ್ನು ಅಭಿನಂದಿಸಿದರು.

"ಛತ್ತೀಸಗಢವು ದೇಶದ ಅಭಿವೃದ್ಧಿಯ ಶಕ್ತಿ ಕೇಂದ್ರವಾಗಿದೆ" ಎಂದ ಪ್ರಧಾನಿಯವರು, ದೇಶದ ಶಕ್ತಿ ಕೇಂದ್ರಗಳು ಪೂರ್ಣ ಶಕ್ತಿಯಿಂದ ಕೆಲಸ ಮಾಡಿದರೆ ಮಾತ್ರ ರಾಷ್ಟ್ರವು ಮುನ್ನಡೆಯುತ್ತದೆ ಎಂದು ಹೇಳಿದರು. ಕಳೆದ 9 ವರ್ಷಗಳಲ್ಲಿ, ಕೇಂದ್ರ ಸರ್ಕಾರವು ಛತ್ತೀಸಗಢದ ಬಹುಮುಖಿ ಅಭಿವೃದ್ಧಿಗಾಗಿ ನಿರಂತರವಾಗಿ ಕೆಲಸ ಮಾಡಿದೆ ಮತ್ತು ಆ ದೃಷ್ಟಿಕೋನ ಮತ್ತು ನೀತಿಗಳ ಫಲಿತಾಂಶಗಳನ್ನು ಇಂದು ಇಲ್ಲಿ ನೋಡಬಹುದು ಎಂದು ಪ್ರಧಾನಿ ಹೇಳಿದರು. ಛತ್ತೀಸಗಢದಲ್ಲಿ ಕೇಂದ್ರ ಸರ್ಕಾರದಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಬೃಹತ್ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಾಗುತ್ತಿದೆ ಎಂದರು. ವಿಶಾಖಪಟ್ಟಣಂ - ರಾಯಪುರ ಆರ್ಥಿಕ ಕಾರಿಡಾರ್ ಮತ್ತು ರಾಯಪುರ - ಧನಬಾದ್ ಆರ್ಥಿಕ ಕಾರಿಡಾರ್ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲು ಜುಲೈನಲ್ಲಿ ರಾಯಪುರಕ್ಕೆ ಭೇಟಿ ನೀಡಿದ್ದನ್ನು ಪ್ರಧಾನಿ ಸ್ಮರಿಸಿಕೊಂಡರು. ಅವರು ರಾಜ್ಯಕ್ಕೆ ನೀಡಿರುವದ ವಿವಿಧ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ಪ್ರಸ್ತಾಪಿಸಿದರು. ಇಂದು, ಛತ್ತೀಸಗಢದ ರೈಲ್ವೇ ಜಾಲದ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯವನ್ನು ಬರೆಯಲಾಗುತ್ತಿದೆ, ಸುಧಾರಿತ ರೈಲು ಜಾಲವು ಬಿಲಾಸಪುರ-ಮುಂಬೈ ರೈಲು ಮಾರ್ಗದ ಝಾರ್ಸುಗುಡಾ ಬಿಲಾಸಪುರ ವಿಭಾಗದಲ್ಲಿ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು. ಅದೇ ರೀತಿ, ಪ್ರಾರಂಭವಾಗುತ್ತಿರುವ ಇತರ ರೈಲು ಮಾರ್ಗಗಳು ಮತ್ತು ನಿರ್ಮಾಣವಾಗುತ್ತಿರುವ ರೈಲು ಕಾರಿಡಾರ್‌ ಗಳು ಛತ್ತೀಸಗಢದ ಕೈಗಾರಿಕಾ ಅಭಿವೃದ್ಧಿಗೆ ಹೊಸ ಎತ್ತರವನ್ನು ನೀಡುತ್ತವೆ ಎಂದು ಅವರು ಹೇಳಿದರು. ಪೂರ್ಣಗೊಂಡ ನಂತರ, ಈ ಮಾರ್ಗಗಳು ಛತ್ತೀಸಗಢದ ಜನರಿಗೆ ಅನುಕೂಲವನ್ನು ಒದಗಿಸುವುದಲ್ಲದೆ, ಈ ಪ್ರದೇಶದಲ್ಲಿ ಹೊಸ ಉದ್ಯೋಗ ಮತ್ತು ಆದಾಯದ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಅವರು ಹೇಳಿದರು.

ಕಲ್ಲಿದ್ದಲು ಗಣಿಗಳಿಂದ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲನ್ನು ಸಾಗಿಸುವ ವೆಚ್ಚ ಮತ್ತು ಸಮಯವನ್ನು ಕಡಿಮೆ ಮಾಡಲಾಗುವುದು ಎಂದು ಪ್ರಧಾನಮಂತ್ರಿಯವರು ಹೇಳಿದರು. ಕಡಿಮೆ ವೆಚ್ಚದಲ್ಲಿ ಗರಿಷ್ಠ ವಿದ್ಯುತ್ ಉತ್ಪಾದಿಸಲು, ಪಿಟ್ ಹೆಡ್ ಥರ್ಮಲ್ ಪವರ್ ಪ್ಲಾಂಟ್ ಅನ್ನು ಸಹ ಸರ್ಕಾರ ನಿರ್ಮಿಸುತ್ತಿದೆ ಎಂದು ಪ್ರಧಾನಿ ತಿಳಿಸಿದರು. ತಲೈಪಲ್ಲಿ ಗಣಿ ಸಂಪರ್ಕಿಸಲು 65 ಕಿಮೀ ಮೆರ್ರಿ-ಗೋ-ರೌಂಡ್ ಯೋಜನೆಯ ಉದ್ಘಾಟನೆಯನ್ನು ಅವರು ಪ್ರಸ್ತಾಪಿಸಿದರು. ಇಂತಹ ಯೋಜನೆಗಳ ಸಂಖ್ಯೆಯು ದೇಶದಲ್ಲಿ ಹೆಚ್ಚಾಗುತ್ತವೆ ಮತ್ತು ಛತ್ತೀಸಗಢದಂತಹ ರಾಜ್ಯಗಳು ಮುಂದಿನ ದಿನಗಳಲ್ಲಿ ಹೆಚ್ಚು ಪ್ರಯೋಜನ ಪಡೆಯುತ್ತವೆ ಎಂದು ಅವರು ಹೇಳಿದರು.

ಅಮೃತ ಕಾಲದ ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಪರಿವರ್ತಿಸುವ ಸಂಕಲ್ಪ ಕುರಿತು ಮಾತನಾಡಿದ ಪ್ರಧಾನಿ, ಅಭಿವೃದ್ಧಿಯತ್ತ ಪ್ರತಿಯೊಬ್ಬ ನಾಗರಿಕರ ಸಮಾನ ಭಾಗವಹಿಸುವಿಕೆಯ ಅಗತ್ಯವನ್ನು ಒತ್ತಿ ಹೇಳಿದರು. ಪರಿಸರವನ್ನು ಸಂರಕ್ಷಿಸುವುದರೊಂದಿಗೆ ದೇಶದ ಇಂಧನ ಅಗತ್ಯಗಳನ್ನು ಪೂರೈಸಬೇಕಾದ ಅಗತ್ಯವನ್ನು ಅವರು ಎತ್ತಿ ತೋರಿಸಿದರು ಮತ್ತು ಪರಿಸರ ಪ್ರವಾಸೋದ್ಯಮದ ಭಾಗವಾಗಿ ಅಭಿವೃದ್ಧಿಪಡಿಸಲಾಗಿರುವ ಸೂರಜ್‌ ಪುರ ಜಿಲ್ಲೆಯ ಮುಚ್ಚಿದ ಕಲ್ಲಿದ್ದಲು ಗಣಿಯ ಬಗ್ಗೆ ಪ್ರಸ್ತಾಪಿಸಿದರು. ಕೊರ್ವಾದಲ್ಲಿಯೂ ಇದೇ ರೀತಿಯ ಪರಿಸರ ಉದ್ಯಾನವನವನ್ನು ಅಭಿವೃದ್ಧಿಪಡಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು. ಈ ಪ್ರದೇಶದ ಬುಡಕಟ್ಟು ಭಾಗಕ್ಕೆ ದೊರೆಯುತ್ತಿರುವ ಪ್ರಯೋಜನಗಳ ಕುರಿತು ಮಾತನಾಡಿದ ಪ್ರಧಾನಿ, ಗಣಿಗಳಿಂದ ಬಿಡುಗಡೆಯಾದ ನೀರಿನಿಂದ ಸಾವಿರಾರು ಜನರಿಗೆ ನೀರಾವರಿ ಮತ್ತು ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

ಅರಣ್ಯ ಸಂಪತ್ತಿನ ಮೂಲಕ ಸಮೃದ್ಧಿಯ ಹೊಸ ಮಾರ್ಗಗಳನ್ನು ತೆರೆಯುವುದರ ಜೊತೆಗೆ ಅರಣ್ಯಗಳು ಮತ್ತು ಭೂಮಿಯನ್ನು ರಕ್ಷಿಸುವುದು ಸರ್ಕಾರದ ಸಂಕಲ್ಪವಾಗಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ವನಧನ್ ವಿಕಾಸ್ ಯೋಜನೆಯನ್ನು ಉಲ್ಲೇಖಿಸಿದ ಶ್ರೀ ಮೋದಿ, ಲಕ್ಷಾಂತರ ಬುಡಕಟ್ಟು ಯುವಜನರು ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಒತ್ತಿ ಹೇಳಿದರು. ಅವರು ಜಗತ್ತು ಸಿರಿಧಾನ್ಯ ವರ್ಷವನ್ನು ಆಚರಿಸುತ್ತಿರುವ ಬಗ್ಗೆ ಪ್ರಸ್ತಾಪಿಸಿದರು ಮತ್ತು ಮುಂಬರುವ ವರ್ಷಗಳಲ್ಲಿ ಶ್ರೀಅನ್ನ ಅಥವಾ ಸಿರಿಧಾನ್ಯ ಮಾರುಕಟ್ಟೆಯ ಬೆಳವಣಿಗೆಯ ಸಾಮರ್ಥ್ಯವನ್ನು ಒತ್ತಿ ಹೇಳಿದರು. ಒಂದೆಡೆ ನಾಡಿನ ಬುಡಕಟ್ಟು ಸಂಪ್ರದಾಯಕ್ಕೆ ಹೊಸ ಗುರುತು ಸಿಗುತ್ತಿದ್ದರೆ, ಇನ್ನೊಂದೆಡೆ ಪ್ರಗತಿಯ ಹೊಸ ಹಾದಿಗಳೂ ತೆರದುಕೊಳ್ಳುತ್ತಿವೆ ಎಂದರು.

ಬುಡಕಟ್ಟು ಜನರ ಮೇಲೆ ಸಿಕಲ್‌ ಸೆಲ್‌ ರಕ್ತಹೀನತೆಯ ಪರಿಣಾಮವನ್ನು ಕುರಿತು ಮಾತನಾಡಿದ ಪ್ರಧಾನಿಯವರು, ಸಿಕಲ್‌ ಸೆಲ್‌ ರಕ್ತಹೀನತೆಯ ಸಮಾಲೋಚನೆ ಕಾರ್ಡ್‌ ಗಳ ವಿತರಣೆಯು ಬುಡಕಟ್ಟು ಸಮಾಜಕ್ಕೆ ಒಂದು ದೊಡ್ಡ ಹೆಜ್ಜೆಯಾಗಿದೆ, ಏಕೆಂದರೆ ಮಾಹಿತಿಯನ್ನು ಪಸರಿಸುವುದು ರೋಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಒತ್ತಿ ಹೇಳಿದರು. ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ಸಂಕಲ್ಪದೊಂದಿಗೆ ಮುನ್ನಡೆಯುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿಯವರು, ಛತ್ತೀಸಗಢವು ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಕೇಂದ್ರ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವೆ ಶ್ರೀಮತಿ ರೇಣುಕಾ ಸಿಂಗ್ ಸರುತಾ ಮತ್ತು ಛತ್ತೀಸಗಢದ ಉಪಮುಖ್ಯಮಂತ್ರಿ ಶ್ರೀ ಟಿ ಎಸ್ ಸಿಂಘ್‌ ದೇವ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ರಾಯಗಢದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸುಮಾರು 6,350 ಕೋಟಿ ರೂಪಾಯಿ ಮೌಲ್ಯದ ಪ್ರಮುಖ ರೈಲ್ವೆ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸುವುದರೊಂದಿಗೆ ದೇಶಾದ್ಯಂತ ಸಂಪರ್ಕವನ್ನು ಸುಧಾರಿಸಲು ಪ್ರಧಾನ ಮಂತ್ರಿಯವರು ನೀಡುತ್ತಿರುವ  ಒತ್ತು ಉತ್ತೇಜನವನ್ನು ಪಡೆಯುತ್ತದೆ. ಯೋಜನೆಗಳಲ್ಲಿ ಛತ್ತೀಸಗಢ ಪೂರ್ವ ರೈಲು ಯೋಜನೆ ಹಂತ-I, ಚಂಪಾದಿಂದ ಜಮ್ಗಾ ನಡುವಿನ 3ನೇ ರೈಲು ಮಾರ್ಗ, ಪೆಂಡ್ರಾ ರಸ್ತೆಯಿಂದ ಅನುಪ್ಪುರ್ ನಡುವಿನ 3ನೇ ರೈಲು ಮಾರ್ಗ ಮತ್ತು ತಲೈಪಲ್ಲಿ ಕಲ್ಲಿದ್ದಲು ಗಣಿಯಿಂದ ಎನ್‌ ಟಿ ಪಿ ಸಿ ಲಾರಾ ಸೂಪರ್ ಥರ್ಮಲ್ ಪವರ್ ಸ್ಟೇಷನ್ (STPS) ಗೆ ಸಂಪರ್ಕಿಸುವ ಎಂ ಜಿ ಆರ್‌ (ಮೆರ್ರಿ-ಗೋ-ರೌಂಡ್) ವ್ಯವಸ್ಥೆ ಸೇರಿವೆ. ರೈಲು ಯೋಜನೆಗಳು ಈ ಪ್ರದೇಶದಲ್ಲಿ ಪ್ರಯಾಣಿಕರ ಚಲನೆ ಮತ್ತು ಸರಕು ಸಾಗಣೆಯನ್ನು ಸುಗಮಗೊಳಿಸುವ ಮೂಲಕ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಉತ್ತೇಜನವನ್ನು ನೀಡುತ್ತವೆ.

ಬಹು-ಮಾದರಿ ಸಂಪರ್ಕಕ್ಕಾಗಿ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಗತಿಶಕ್ತಿ - ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಛತ್ತೀಸಗಢ ಪೂರ್ವ ರೈಲು ಯೋಜನೆ ಹಂತ-I ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಖಾರ್ಸಿಯಾದಿಂದ ಧರಮ್‌ ಜಯಗಢ್‌ ಗೆ 124.8 ಕಿಮೀ ರೈಲು ಮಾರ್ಗ, ಗಾರೆ-ಪೆಲ್ಮಾಕ್ಕೆ ಸ್ಪರ್ ಲೈನ್ ಮತ್ತು ಛಲ್, ಬರೌದ್, ದುರ್ಗಾಪುರ ಮತ್ತು ಇತರ ಕಲ್ಲಿದ್ದಲು ಗಣಿಗಳನ್ನು ಸಂಪರ್ಕಿಸುವ 3 ಫೀಡರ್ ಮಾರ್ಗಗಳನ್ನು ಒಳಗೊಂಡಿದೆ. ಸುಮಾರು 3,055 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ರೈಲು ಮಾರ್ಗವು ವಿದ್ಯುದ್ದೀಕರಿಸಿದ ಬ್ರಾಡ್ ಗೇಜ್ ಲೆವೆಲ್ ಕ್ರಾಸಿಂಗ್‌ಗಳು ಮತ್ತು ಪ್ರಯಾಣಿಕರ ಸೌಕರ್ಯಗಳೊಂದಿಗೆ ಜೋಡಿ ಮಾರ್ಗಗಳನ್ನು ಹೊಂದಿದೆ. ಇದು ಛತ್ತೀಸಗಢದ ರಾಯಗಢದಲ್ಲಿರುವ ಮಂಡ್-ರಾಯಗಢ ಕಲ್ಲಿದ್ದಲು ಗಣಿಗಳಿಂದ ಕಲ್ಲಿದ್ದಲು ಸಾಗಣೆಗೆ ರೈಲು ಸಂಪರ್ಕವನ್ನು ಒದಗಿಸುತ್ತದೆ.

ಪೆಂಡ್ರಾ ರಸ್ತೆಯಿಂದ ಅನುಪ್ಪುರ್ ನಡುವಿನ ಮೂರನೇ ರೈಲು ಮಾರ್ಗವು 50 ಕಿಮೀ ಉದ್ದವಿದ್ದು, ಸುಮಾರು 516 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಚಂಪಾ ಮತ್ತು ಜಮ್ಗಾ ರೈಲು ವಿಭಾಗದ ನಡುವಿನ 98 ಕಿಲೋಮೀಟರ್ ಉದ್ದದ ಮೂರನೇ ಮಾರ್ಗವನ್ನು ಸುಮಾರು 796 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಹೊಸ ರೈಲು ಮಾರ್ಗಗಳು ಈ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸುತ್ತವೆ ಮತ್ತು ಪ್ರವಾಸೋದ್ಯಮ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತವೆ.

65-ಕಿಮೀ ಉದ್ದದ ವಿದ್ಯುದ್ದೀಕರಿಸಿದ ಎಂ ಜಿ ಆರ್ (ಮೆರ್ರಿ-ಗೋ-ರೌಂಡ್) ವ್ಯವಸ್ಥೆಯು ಎನ್‌ ಟಿ ಪಿ ಸಿ ಯ ತಲೈಪಲ್ಲಿ ಕಲ್ಲಿದ್ದಲು ಗಣಿಯಿಂದ ಛತ್ತೀಸಗಢದ 1600 MW ಎನ್‌ ಟಿ ಪಿ ಸಿ ಲಾರಾ ಸೂಪರ್ ಥರ್ಮಲ್ ಪವರ್ ಸ್ಟೇಷನ್‌ಗೆ ಕಡಿಮೆ ದರದ, ಉನ್ನತ ದರ್ಜೆಯ ಕಲ್ಲಿದ್ದಲನ್ನು ತಲುಪಿಸುತ್ತದೆ. ಇದು ಎನ್‌ ಟಿ ಪಿ ಸಿ ಲಾರಾದಿಂದ ಕಡಿಮೆ-ವೆಚ್ಚದ ಮತ್ತು ವಿಶ್ವಾಸಾರ್ಹ ವಿದ್ಯುತ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಹೀಗಾಗಿ ದೇಶದ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ. 2070 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಎಂ ಜಿ ಆರ್ ವ್ಯವಸ್ಥೆಯು ಕಲ್ಲಿದ್ದಲು ಗಣಿಗಳಿಂದ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಕಲ್ಲಿದ್ದಲು ಸಾಗಣೆಯನ್ನು ಸುಧಾರಿಸುವ ತಾಂತ್ರಿಕತೆಯ ಅದ್ಭುತವಾಗಿದೆ.

ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಛತ್ತೀಸಗಢದ 9 ಜಿಲ್ಲೆಗಳಲ್ಲಿ 50 ಹಾಸಿಗೆಗಳ 'ಕ್ರಿಟಿಕಲ್ ಕೇರ್ ಬ್ಲಾಕ್‌'ಗಳಿಗೆ ಶಂಕುಸ್ಥಾಪನೆ ಮಾಡಿದರು. ಒಂಬತ್ತು ಕ್ರಿಟಿಕಲ್ ಕೇರ್ ಬ್ಲಾಕ್‌ ಗಳನ್ನು ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ (ಪಿಎಂ- ಎ ಬಿ ಹೆಚ್‌ ಐ ಎಂ) ಅಡಿಯಲ್ಲಿ ದುರ್ಗ್, ಕೊಂಡಗಾಂವ್, ರಾಜನಂದಗಾಂವ್, ಗರಿಯಾಬಂದ್, ಜಶಪುರ್, ಸೂರಜಪುರ, ಸುರ್ಗುಜಾ, ಬಸ್ತಾರ್ ಮತ್ತು ರಾಯಗಢ ಜಿಲ್ಲೆಗಳಲ್ಲಿ ಒಟ್ಟು 210 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುವುದು.

ಸಿಕಲ್ ಸೆಲ್ ರಕ್ತಹೀನತೆಯಿಂದ ವಿಶೇಷವಾಗಿ ಬುಡಕಟ್ಟು ಜನರಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ಗುರಿಯೊಂದಿಗೆ, ತಪಾಸಣೆಗೊಳಗಾದ ಜನರಿಗೆ ಒಂದು ಲಕ್ಷ ಸಿಕಲ್ ಸೆಲ್ ಸಮಾಲೋಚನೆ ಕಾರ್ಡ್‌ ಗಳನ್ನು ಪ್ರಧಾನ ಮಂತ್ರಿಯವರು ವಿತರಿಸಿದರು. ಸಿಕಲ್ ಸೆಲ್ ಸಮಾಲೋಚನೆ ಕಾರ್ಡ್‌ ಗಳ ವಿತರಣೆಯನ್ನು ರಾಷ್ಟ್ರೀಯ ಸಿಕಲ್ ಸೆಲ್ ರಕ್ತಹೀನತೆ ನಿರ್ಮೂಲನಾ ಮಿಷನ್ (ಎನ್‌ ಎಸ್‌ ಎ ಇ ಎಂ) ಅಡಿಯಲ್ಲಿ ಮಾಡಲಾಗುತ್ತಿದೆ, ಇದಕ್ಕೆ ಜುಲೈ 2023 ರಲ್ಲಿ ಮಧ್ಯಪ್ರದೇಶದ ಶಾಹದೋಲ್‌ ನಲ್ಲಿ ಪ್ರಧಾನ ಮಂತ್ರಿಯವರು ಚಾಲನೆ ನೀಡಿದರು.

 

***


(Release ID: 1958392) Visitor Counter : 113