ಪ್ರಧಾನ ಮಂತ್ರಿಯವರ ಕಛೇರಿ

ನವದೆಹಲಿಯಲ್ಲಿ ಭಾರತ ಅಂತಾರಾಷ್ಟ್ರೀಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರ - ‘ಯಶೋಭೂಮಿ’ ಮೊದಲನೇ ಹಂತವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ


ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲಿಗಳಿಗಾಗಿ ‘ಪ್ರಧಾನಮಂತ್ರಿ ವಿಶ್ವಕರ್ಮ’ ಯೋಜನೆಗೆ ಚಾಲನೆ
 
ಪಿಎಂ ವಿಶ್ವಕರ್ಮ ಲೋಗೋ, ಘೋಷವಾಕ್ಯ 'ಸಮ್ಮಾನ್, ಸಾಮರ್ಥ್ಯ, ಸಮೃದ್ಧಿ' ಮತ್ತು ಪೋರ್ಟಲ್ ಬಿಡುಗಡೆ ಮಾಡಿದ ಪ್ರಧಾನಮಂತ್ರಿ
 
ನಿರ್ದಿಷ್ಟವಾಗಿ ರೂಪಿಸಿದ ಸ್ಟ್ಯಾಂಪ್ ಶೀಟ್ ಮತ್ತು ಟೂಲ್‌ಕಿಟ್ ಬುಕ್‌ಲೆಟ್ ಬಿಡುಗಡೆ 
 
18 ಫಲಾನುಭವಿಗಳಿಗೆ ವಿಶ್ವಕರ್ಮ ಪ್ರಮಾಣ ಪತ್ರಗಳ ವಿತರಣೆ
 
"ನಾನು 'ಯಶೋಭೂಮಿ'ಯನ್ನು ದೇಶದ ಪ್ರತಿಯೊಬ್ಬ ಕೆಲಸಗಾರನಿಗೆ, ಪ್ರತಿಯೊಬ್ಬ ವಿಶ್ವಕರ್ಮನಿಗೆ ಅರ್ಪಿಸುತ್ತೇನೆ"
 
"ವಿಶ್ವಕರ್ಮರನ್ನು ಗುರುತಿಸುವುದು ಮತ್ತು ಬೆಂಬಲಿಸುವುದು ಇಂದಿನ ಅಗತ್ಯವಾಗಿದೆ"
 
"ಹೊರಗುತ್ತಿಗೆ ಕೆಲಸವು ನಮ್ಮ ವಿಶ್ವಕರ್ಮ ಸ್ನೇಹಿತರಿಗೆ ಬರಬೇಕು ಮತ್ತು ಅವರು ಜಾಗತಿಕ ಪೂರೈಕೆ ಸರಪಳಿಯ ನಿರ್ಣಾಯಕ ಭಾಗವಾಗಬೇಕು"
 
"ಈ ಬದಲಾಗುತ್ತಿರುವ ಕಾಲದಲ್ಲಿ, ವಿಶ್ವಕರ್ಮ ಸ್ನೇಹಿತರಿಗೆ ತರಬೇತಿ, ತಂತ್ರಜ್ಞಾನ ಮತ್ತು ಉಪಕರಣಗಳು ಪ್ರಮುಖವಾಗಿವೆ"

 
"ಸ್ಥಳೀಯತೆಗೆ ಆದ್ಯತೆ ನೀಡುವುದು ಇಡೀ ದೇಶದ ಜವಾಬ್ದಾರಿ"
 
"ಇಂದಿನ ವಿಕಸಿತ ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ತನಗಾಗಿ ಹೊಸ ಗುರುತನ್ನು ರೂಪಿಸಿಕೊಳ್ಳುತ್ತಿದೆ"
 
“ಯಶೋಭೂಮಿಯಿಂದ ಸಂದೇಶವು ಗಟ್ಟಿಯಾಗಿದೆ ಮತ್ತು ಸ್ಪಷ್ಟವಾಗಿದೆ. ಇಲ್ಲಿ ನಡೆಯುವ ಯಾವುದೇ ಕಾರ್ಯಕ್ರಮವು ಯಶಸ್ಸು ಮತ್ತು ಖ್ಯಾತಿಯನ್ನು ಪಡೆಯುತ್ತವೆ”
 
"ಭಾರತ ಮಂಟಪ ಮತ್ತು ಯಶೋಭೂಮಿ ಕೇಂದ್ರವು ದೆಹಲಿಯನ್ನು ಸಮಾವೇಶ ಪ್ರವಾಸೋದ್ಯಮದ ಅತಿದೊಡ್ಡ ಕೇಂದ್ರವನ್ನಾಗಿ ಮಾಡಲಿದೆ"
 
"ಭಾರತ ಮಂಟಪ ಮತ್ತು ಯಶೋಭೂಮಿ ಎರಡೂ ಭಾರತೀಯ ಸಂಸ್ಕೃತಿ ಮತ್ತು ಅತ್ಯಾಧುನಿಕ ಸೌಲಭ್ಯಗಳ ಸಂಗಮವಾಗಿವೆ ಮತ್ತು ಈ ಭವ್ಯವಾದ ವ್ಯವಸ್ಥೆಗಳು ವಿಶ್ವದ ಮುಂದೆ ಭಾರತದ ಕಥೆಯನ್ನು ಪ್ರಸ್ತುತಪಡಿಸುತ್ತವೆ"
 
"ನಮ್ಮ ವಿಶ್ವಕರ್ಮ ಸಹೋದ್ಯೋಗಿಗಳು ಮೇಕ್ ಇನ್ ಇಂಡಿಯಾದ ಹೆಮ್ಮೆಯಾಗಿದ್ದಾರೆ ಮತ್ತು ಈ ಹೆಮ್ಮೆಯನ್ನು ಜಗತ್ತಿಗೆ ಪ್ರದರ್ಶಿಸಲು ಈ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ ಮಾಧ್ಯಮವಾಗಲಿದೆ"

Posted On: 17 SEP 2023 3:01PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ದ್ವಾರಕಾದಲ್ಲಿ ಭಾರತ ಅಂತಾರಾಷ್ಟ್ರೀಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರ (ಇಂಡಿಯಾ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಮತ್ತು ಎಕ್ಸ್‌ಪೋ ಸೆಂಟರ್) - ‘ಯಶೋಭೂಮಿ’ಯ ಮೊದಲನೇ ಹಂತವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. 'ಯಶೋಭೂಮಿ' ಭವ್ಯವಾದ ಸಮಾವೇಶ ಕೇಂದ್ರ, ಬಹು ಪ್ರದರ್ಶನ ಸಭಾಂಗಣಗಳು ಮತ್ತು ಇತರ ಸೌಲಭ್ಯಗಳನ್ನು ಹೊಂದಿದೆ. ಪ್ರಧಾನಿಯವರು ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲಿಗಳಿಗಾಗಿ ‘ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ’ಗೆ ಚಾಲನೆ ನೀಡಿದರು. ಪ್ರಧಾನಮಂತ್ರಿಯವರು ಪಿಎಂ ವಿಶ್ವಕರ್ಮ ಲೋಗೋ, ಘೋಷವಾಕ್ಯ ಮತ್ತು ಪೋರ್ಟಲ್ ಅನ್ನು ಸಹ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅವರು ನಿರ್ದಿಷ್ಟವಾಗಿ ರೂಪಿಸಿದ ಸ್ಟಾಂಪ್ ಶೀಟ್, ಟೂಲ್ ಕಿಟ್ ಇ-ಪುಸ್ತಕ ಮತ್ತು ವಿಡಿಯೋವನ್ನು ಬಿಡುಗಡೆ ಮಾಡಿದರು. ಪ್ರಧಾನಮಂತ್ರಿಯವರು 18 ಫಲಾನುಭವಿಗಳಿಗೆ ವಿಶ್ವಕರ್ಮ ಪ್ರಮಾಣಪತ್ರಗಳನ್ನು ವಿತರಿಸಿದರು.

ಸ್ಥಳಕ್ಕೆ ಆಗಮಿಸಿದ ಪ್ರಧಾನಮಂತ್ರಿಯವರು ಗುರು-ಶಿಷ್ಯ ಪರಂಪರೆ ಮತ್ತು ಹೊಸ ತಂತ್ರಜ್ಞಾನದ ಪ್ರದರ್ಶನವನ್ನು ವೀಕ್ಷಿಸಿದರು. ಯಶೋಭೂಮಿಯ 3ಡಿ ಮಾದರಿಯನ್ನೂ ಅವರು ಪರಿಶೀಲಿಸಿದರು. ಇದಕ್ಕೂ ಮೊದಲು, ದೆಹಲಿ ವಿಮಾನ ನಿಲ್ದಾಣ ಮೆಟ್ರೋ ಎಕ್ಸ್‌ಪ್ರೆಸ್ ದ್ವಾರಕಾ ಸೆಕ್ಟರ್ 21 ರಿಂದ ಹೊಸ ಮೆಟ್ರೋ ಸ್ಟೇಷನ್ 'ಯಶೋಭೂಮಿ ದ್ವಾರಕಾ ಸೆಕ್ಟರ್ 25' ವರೆಗಿನ ಮಾರ್ಗವನ್ನು ಪ್ರಧಾನಿ ಉದ್ಘಾಟಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ವಿಶ್ವಕರ್ಮ ಜಯಂತಿಯ ಅಂಗವಾಗಿ ಶುಭಾಶಯಗಳನ್ನು ತಿಳಿಸಿದರು ಮತ್ತು ಇದು ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಶಲಿಗಳಿಗೆ ಸಮರ್ಪಿತವಾಗಿದೆ ಎಂದು ಹೇಳಿದರು. ದೇಶಾದ್ಯಂತ ಇರುವ ಲಕ್ಷಾಂತರ ವಿಶ್ವಕರ್ಮರೊಂದಿಗೆ ಸಂಪರ್ಕ ಸಾಧಿಸುವ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರದರ್ಶನ ಸ್ಥಳಕ್ಕೆ ಭೇಟಿ ನೀಡಿ ಕುಶಲಕರ್ಮಿಗಳು ಮತ್ತು ಕರಕುಶಲಿಗಳೊಂದಿಗೆ ಸಂವಾದ ನಡೆಸಿದ ಉತ್ತಮ ಅನುಭವವನ್ನು ಅವರು ಪ್ರಸ್ತಾಪಿಸಿದರು. ನಾಗರಿಕರು ಸಹ ಅಲ್ಲಿಗೆ ಭೇಟಿ ನೀಡುವಂತೆ ಅವರು ಮನವಿ ಮಾಡಿದರು. ಲಕ್ಷಾಂತರ ಕುಶಲಕರ್ಮಿಗಳು ಮತ್ತು ಅವರ ಕುಟುಂಬಗಳಿಗೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಭರವಸೆಯ ಕಿರಣವಾಗಿ ಬರುತ್ತಿದೆ ಎಂದು ಪ್ರಧಾನಿ ಹೇಳಿದರು.

ಭವ್ಯವಾದ ಅಂತಾರಾಷ್ಟ್ರೀಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರ- ‘ಯಶೋಭೂಮಿʼ ನಿರ್ಮಾಣದಲ್ಲಿ ಶ್ರಮಿಕರು ಮತ್ತು ವಿಶ್ವಕರ್ಮರ ಕೊಡುಗೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. "ಇಂದು ನಾನು ದೇಶದ ಪ್ರತಿಯೊಬ್ಬ ಕೆಲಸಗಾರನಿಗೆ, ಪ್ರತಿಯೊಬ್ಬ ವಿಶ್ವಕರ್ಮನಿಗೆ 'ಯಶೋಭೂಮಿ'ಯನ್ನು ಅರ್ಪಿಸುತ್ತೇನೆ" ಎಂದು ಅವರು ಹೇಳಿದರು. ಇಂದಿನ ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಿದ ವಿಶ್ವಕರ್ಮರಿಗೆ,  'ಯಶೋಭೂಮಿ'ಯು ಅವರ ಸೃಷ್ಟಿಗಳನ್ನು ವಿಶ್ವ ಮತ್ತು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುವ ರೋಮಾಂಚಕ ಕೇಂದ್ರವಾಗಲಿದೆ ಎಂದು ಪ್ರಧಾನಿ ಹೇಳಿದರು.
ದೇಶದ ದೈನಂದಿನ ಜೀವನದಲ್ಲಿ ವಿಶ್ವಕರ್ಮರ ಕೊಡುಗೆ ಮತ್ತು ಪ್ರಾಮುಖ್ಯತೆಯನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ತಂತ್ರಜ್ಞಾನದಲ್ಲಿ ಯಾವುದೇ ಪ್ರಗತಿ ಸಾಧಿಸಿದರೂ ಸಮಾಜದಲ್ಲಿ ವಿಶ್ವಕರ್ಮರು ಸದಾ ಮಹತ್ವಪೂರ್ಣರಾಗಿ ಉಳಿಯುತ್ತಾರೆ. ವಿಶ್ವಕರ್ಮರನ್ನು ಗುರುತಿಸಿ ಬೆಂಬಲಿಸುವುದು ಇಂದಿನ ಅಗತ್ಯವಾಗಿದೆ ಎಂದು ಪ್ರಧಾನಿ ಹೇಳಿದರು. 

"ವಿಶ್ವಕರ್ಮರ ಗೌರವವನ್ನು ಹೆಚ್ಚಿಸಲು, ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ಅವರ ಏಳಿಗೆಯನ್ನು ಹೆಚ್ಚಿಸಲು ಸರ್ಕಾರವು ಪಾಲುದಾರನಾಗಿ ಮುಂದೆ ಬಂದಿದೆ" ಎಂದು ಶ್ರೀ ಮೋದಿ ಹೇಳಿದರು. ಕುಶಲಕರ್ಮಿಗಳು ಮತ್ತು ಕರಕುಶಲಿಗಳ 18 ಕೇಂದ್ರೀಕೃತ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಬಡಗಿಗಳು, ಕಮ್ಮಾರರು, ಅಕ್ಕಸಾಲಿಗರು, ಶಿಲ್ಪಿಗಳು, ಕುಂಬಾರರು, ಚಮ್ಮಾರರು, ದರ್ಜಿಗಳು, ಮೇಸ್ತ್ರಿಗಳು, ಕೇಶ ವಿನ್ಯಾಸಕರು, ದೋಬಿಗಳು ಇತ್ಯಾದಿ ಕೆಲಸಗಾರರನ್ನು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ ಸೇರಿಸಲಾಗಿದೆ ಮತ್ತು ಇದಕ್ಕಾಗಿ 13,000 ಕೋಟಿ ರೂ ವೆಚ್ಚ ಮಾಡಲಾಗುವುದು ಎಂದು ತಿಳಿಸಿದರು. 

ತಮ್ಮ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಕುಶಲಕರ್ಮಿಗಳೊಂದಿಗೆ ಸಂವಾದ ನಡೆಸಿದ ತಮ್ಮ ವೈಯಕ್ತಿಕ ಅನುಭವವನ್ನು ಸ್ಮರಿಸಿಕೊಂಡ ಪ್ರಧಾನಿ, ಕೈಯಿಂದ ತಯಾರಿಸಿದ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಎತ್ತಿ ತೋರಿಸಿದರು. ವಿಶ್ವದ ದೊಡ್ಡ ಕಂಪನಿಗಳು ತಮ್ಮ ಕೆಲಸವನ್ನು ಸಣ್ಣ ಉದ್ಯಮಗಳಿಗೆ ನೀಡಬೇಕು ಎಂದು ಹೇಳಿದರು. ‘ಈ ಹೊರಗುತ್ತಿಗೆ ಕೆಲಸ ನಮ್ಮ ವಿಶ್ವಕರ್ಮ ಸ್ನೇಹಿತರಿಗೆ ಬರಬೇಕು ಮತ್ತು ಅವರು ಜಾಗತಿಕ ಪೂರೈಕೆ ಸರಪಳಿಯ ಭಾಗವಾಗಬೇಕು, ಇದಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಆದ್ದರಿಂದಲೇ ಈ ಯೋಜನೆಯು ವಿಶ್ವಕರ್ಮ ಸ್ನೇಹಿತರನ್ನು ಆಧುನಿಕ ಯುಗಕ್ಕೆ ಕೊಂಡೊಯ್ಯುವ ಪ್ರಯತ್ನವಾಗಿದೆ”ಎಂದು ಪ್ರಧಾನಮಂತ್ರಿ ಹೇಳಿದರು.

"ಈ ಬದಲಾಗುತ್ತಿರುವ ಕಾಲದಲ್ಲಿ, ವಿಶ್ವಕರ್ಮ ಸ್ನೇಹಿತರಿಗೆ ತರಬೇತಿ, ತಂತ್ರಜ್ಞಾನ ಮತ್ತು ಪರಿಕರಗಳು ನಿರ್ಣಾಯಕವಾಗಿವೆ” ಎಂದು ಅವರು ಹೇಳಿದರು. ಕೌಶಲ್ಯ ಹೊಂದಿದ ಕುಶಲಕರ್ಮಿಗಳು ಮತ್ತು ವೃತ್ತಿಗಳಿಗೆ ತರಬೇತಿ ನೀಡುವ ಕ್ರಮಗಳ ಕುರಿತು ಪ್ರಧಾನಮಂತ್ರಿಯವರು ವಿವರಿಸಿದರು. ತರಬೇತಿ ಸಮಯದಲ್ಲಿ ವಿಶ್ವಕರ್ಮ ಸ್ನೇಹಿತರಿಗೆ ದಿನಕ್ಕೆ 500 ರೂ ಭತ್ಯೆ ನೀಡಲಾಗುವುದು. ಅಲ್ಲದೆ ಆಧುನಿಕ ಟೂಲ್‌ಕಿಟ್‌ ಗೆ 15 ಸಾವಿರ ರೂಪಾಯಿ ಮೌಲ್ಯದ ಟೂಲ್‌ಕಿಟ್ ವೋಚರ್ ನೀಡಲಾಗುವುದು ಮತ್ತು ಉತ್ಪನ್ನಗಳ ಬ್ರ್ಯಾಂಡಿಂಗ್, ಪ್ಯಾಕೇಜಿಂಗ್ ಮತ್ತು ಮಾರುಕಟ್ಟೆಗೆ ಸರ್ಕಾರ ಸಹಾಯ ಮಾಡುತ್ತದೆ ಎಂದು ಹೇಳಿದರು. ಟೂಲ್‌ಕಿಟ್‌ ಗಳನ್ನು ಜಿ ಎಸ್‌ ಟಿ ನೋಂದಾಯಿತ ಅಂಗಡಿಗಳಿಂದ ಮಾತ್ರ ಖರೀದಿಸಬೇಕು ಮತ್ತು ಈ ಉಪಕರಣಗಳನ್ನು ಭಾರತದಲ್ಲಿಯೇ ತಯಾರಿಸಿರಬೇಕು ಎಂದು ಅವರು ಕೇಳಿದರು.

ವಿಶ್ವಕರ್ಮರಿಗೆ ಆಧಾರ ರಹಿತ ಹಣಕಾಸು ಒದಗಿಸುವ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ಗ್ಯಾರಂಟಿ ಕೇಳಿದಾಗ ಮೋದಿಯವರು ಗ್ಯಾರಂಟಿ ನೀಡುತ್ತಾರೆ ಎಂದು ಹೇಳಿದರು. ವಿಶ್ವಕರ್ಮ ಗೆಳೆಯರು ಯಾವುದೇ ಆಧಾರವಿಲ್ಲದೆ ಅತ್ಯಂತ ಕಡಿಮೆ ಬಡ್ಡಿಯೊಂದಿಗೆ 3 ಲಕ್ಷ ರೂ.ವರೆಗೆ ಸಾಲ ಪಡೆಯುತ್ತಾರೆ ಎಂದು ತಿಳಿಸಿದರು.

“ಕೇಂದ್ರದಲ್ಲಿರುವ ಸರ್ಕಾರವು ವಂಚಿತರ ಅಭಿವೃದ್ಧಿಗೆ ಆದ್ಯತೆ ನೀಡುತ್ತದೆ”ಎಂದ ಪ್ರಧಾನಿಯವರು,  ಪ್ರತಿ ಜಿಲ್ಲೆಯ ವಿಶಿಷ್ಟ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ‘ಒಂದು ಜಿಲ್ಲೆ, ಒಂದು ಉತ್ಪನ್ನ’ಯೋಜನೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ಬ್ಯಾಂಕ್‌ ಬಾಗಿಲು ತೆರೆದಿರುವುದು ಮತ್ತು ‘ದಿವ್ಯಾಂಗʼರಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿರುವ ಬಗ್ಗೆಯೂ ಪ್ರಸ್ತಾಪಿಸಿದರು. ಯಾರೂ ಕಾಳಜಿ ವಹಿಸದವರ ಪರವಾಗಿ ಮೋದಿ ನಿಂತಿದ್ದಾರೆ ಎಂದು ಪ್ರಧಾನಿ ಹೇಳಿದರು. ಸೇವೆ ಸಲ್ಲಿಸಲು, ಘನತೆಯ ಜೀವನ ನೀಡಲು ಮತ್ತು ಸೇವೆಗಳ ವಿತರಣೆಯು ಸರಿಯಾಗಿ ನಡೆಯುವಂತೆ ಮಾಡಲು ನಾನು ಇಲ್ಲಿದ್ದೇನೆ, ಇದು ಮೋದಿಯವರ ಗ್ಯಾರಂಟಿ ಎಂದು ಹೇಳಿದರು. 

ಜಿ20 ಕ್ರಾಫ್ಟ್ ಬಜಾರ್‌ನಲ್ಲಿ ತಂತ್ರಜ್ಞಾನ ಮತ್ತು ಸಂಪ್ರದಾಯದ ಸಮ್ಮಿಲನದ ಫಲಿತಾಂಶವನ್ನು ಜಗತ್ತು ನೋಡಿದೆ ಎಂದು ಪ್ರಧಾನಿ ಹೇಳಿದರು. ಭೇಟಿ ನೀಡಿದ ಗಣ್ಯರಿಗೆ ಉಡುಗೊರೆಗಳು ಸಹ ವಿಶ್ವಕರ್ಮ ಸ್ನೇಹಿತರ ಉತ್ಪನ್ನಗಳಳಾಗಿದ್ದವು ಎಂದು ಅವರು ಹೇಳಿದರು. "ಸ್ಥಳೀಯತೆಗೆ ಆದ್ಯತೆಯ ಈ ಸಮರ್ಪಣೆಯು ಇಡೀ ದೇಶದ ಜವಾಬ್ದಾರಿಯಾಗಿದೆ" ಎಂದು ಅವರು ಹೇಳಿದರು. ‘ಮೊದಲು ನಾವು ಸ್ಥಳೀಯತೆಗೆ ಆದ್ಯತೆ (ವೋಕಲ್ ಫಾರ್‌ ಲೋಕಲ್‌) ನೀಡಬೇಕು ಮತ್ತು ನಂತರ ನಾವು ಲೋಕಲ್  ಅನ್ನು ಗ್ಲೋಬಲ್ ಮಟ್ಟಕ್ಕೆ ತೆಗೆದುಕೊಂಡಹೋಗಬೇಕು’ಎಂದು ಅವರು ಹೇಳಿದರು.

ದೇಶದಲ್ಲಿ ಮುಂಬರುವ ಗಣೇಶ ಚತುರ್ಥಿ, ಧನತೇರಸ್, ದೀಪಾವಳಿ ಮತ್ತು ಇತರ ಹಬ್ಬಗಳನ್ನು ಉಲ್ಲೇಖಿಸಿದ ಪ್ರಧಾನಿ, ದೇಶದ ಪ್ರತಿಯೊಬ್ಬ ನಾಗರಿಕರು ಸ್ಥಳೀಯವಾದ ವಿಶೇಷವಾಗಿ ರಾಷ್ಟ್ರದ ವಿಶ್ವಕರ್ಮರು ಉತ್ಪಾದಿಸಿದ  ಉತ್ಪನ್ನಗಳನ್ನು ಖರೀದಿಸುವಂತೆ ಒತ್ತಾಯಿಸಿದರು.

ಇಂದಿನ ವಿಕಸಿತ ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ತನಗಾಗಿ ಹೊಸ ಗುರುತನ್ನು ರೂಪಿಸಿಕೊಳ್ಳುತ್ತಿದೆ ಎಂದ ಪ್ರಧಾನಿಯವರು, ವಿಶ್ವದಾದ್ಯಂತ ಚರ್ಚೆಯ ವಿಷಯವಾಗಿರುವ ಭಾರತ ಮಂಟಪವನ್ನು ಉಲ್ಲೇಖಿಸಿದರು ಮತ್ತು ಯಶೋಭೂಮಿಯು ಈ ಸಂಪ್ರದಾಯವನ್ನು ಮತ್ತಷ್ಟು ವೈಭವದಿಂದ ಮುಂದುವರಿಸಿದೆ ಎಂದು ಹೇಳಿದರು. “ಯಶೋಭೂಮಿಯಿಂದ ಸಂದೇಶವು ಗಟ್ಟಿಯಾಗಿದೆ ಮತ್ತು ಸ್ಪಷ್ಟವಾಗಿದೆ. ಇಲ್ಲಿ ನಡೆಯುವ ಯಾವುದೇ ಕಾರ್ಯಕ್ರಮವು ಯಶಸ್ಸು ಮತ್ತು ಖ್ಯಾತಿಯನ್ನು ಪಡೆಯುತ್ತವೆ”ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಭವಿಷ್ಯದ ಭಾರತವನ್ನು ಪ್ರದರ್ಶಿಸಲು ಯಶೋಭೂಮಿ ಮಾಧ್ಯಮವಾಗಲಿದೆ ಎಂದು ಅವರು ಹೇಳಿದರು.
ಭಾರತದ ಭವ್ಯ ಆರ್ಥಿಕ ಸಾಮರ್ಥ್ಯ ಮತ್ತು ವಾಣಿಜ್ಯ ಬಲವನ್ನು ಪ್ರದರ್ಶಿಸಲು ಇದು ದೇಶದ ರಾಜಧಾನಿಯಲ್ಲಿ ಸೂಕ್ತ ಕೇಂದ್ರವಾಗಿದೆ ಎಂದು ಅವರು ಹೇಳಿದರು. ಇದು ಬಹುಮಾದರಿ ಸಂಪರ್ಕ ಮತ್ತು ಪಿಎಂ ಗತಿಶಕ್ತಿ ಎರಡನ್ನೂ ಪ್ರತಿಬಿಂಬಿಸುತ್ತದೆ ಎಂದರು. ಇಂದು ಮೆಟ್ರೋ ಮೂಲಕ ಈ ಕೇಂದ್ರಕ್ಕೆ ಒದಗಿಸಲಾದ ಸಂಪರ್ಕ ಮತ್ತು ಮೆಟ್ರೋ ಟರ್ಮಿನಲ್ ಉದ್ಘಾಟನೆಯನ್ನು ಅವರು ಇದಕ್ಕೆ ನಿದರ್ಶನವಾಗಿ ವಿವರಿಸಿದರು. ಯಶೋಭೂಮಿಯ ಪೂರಕ ವ್ಯವಸ್ಥೆಯು ಬಳಕೆದಾರರ ಪ್ರಯಾಣ, ಸಂಪರ್ಕ, ವಸತಿ ಮತ್ತು ಪ್ರವಾಸೋದ್ಯಮ ಅಗತ್ಯಗಳನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದರು.

ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಮತ್ತು ಉದ್ಯೋಗದ ಹೊಸ ಕ್ಷೇತ್ರಗಳು ಹೊರಹೊಮ್ಮುತ್ತಿವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಐವತ್ತರಿಂದ ಅರವತ್ತು ವರ್ಷಗಳ ಹಿಂದೆ ಭಾರತದಲ್ಲಿ ಇಂತಹ ಪ್ರಮಾಣ ಮತ್ತು ಪರಿಮಾಣದ ಐಟಿ ಕ್ಷೇತ್ರವನ್ನು ಯಾವುದೇ ವ್ಯಕ್ತಿ ಊಹಿಸಿರಲಿಲ್ಲ ಎಂದು ಅವರು ಒತ್ತಿ ಹೇಳಿದರು. ಸಾಮಾಜಿಕ ಮಾಧ್ಯಮ ಕೂಡ ಮೂವತ್ತರಿಂದ ಮೂವತ್ತೈದು ವರ್ಷಗಳ ಹಿಂದೆ ಕಾಲ್ಪನಿಕ ವಿಷಯವಾಗಿತ್ತು ಎಂದು ಅವರು ಹೇಳಿದರು. ಸಮಾವೇಶ ಪ್ರವಾಸೋದ್ಯಮದ ಭವಿಷ್ಯದ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಈ ಕ್ಷೇತ್ರದಲ್ಲಿ ಭಾರತವು ಅಪಾರ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದು 25,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ್ದಾಗಿದೆ ಎಂದು ತಿಳಿಸಿದರು. ವಿಶ್ವದಲ್ಲಿ ಪ್ರತಿ ವರ್ಷ 32 ಸಾವಿರಕ್ಕೂ ಹೆಚ್ಚು ದೊಡ್ಡ ಪ್ರದರ್ಶನಗಳು ಮತ್ತು ಎಕ್ಸ್‌ ಪೋಗಳನ್ನು ಆಯೋಜಿಸಲಾಗುತ್ತದೆ, ಅಲ್ಲಿ ಸಮಾವೇಶ ಪ್ರವಾಸಕ್ಕೆ ಬರುವ ಜನರು ಸಾಮಾನ್ಯ ಪ್ರವಾಸಿಗರಿಗಿಂತ ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ. ಅಂತಹ ದೊಡ್ಡ ಉದ್ಯಮದಲ್ಲಿ ಭಾರತದ ಪಾಲು ಕೇವಲ ಒಂದು ಶೇಕಡಾ ಮಾತ್ರ ಇದೆ ಮತ್ತು ಭಾರತದಲ್ಲಿನ ಅನೇಕ ದೊಡ್ಡ ಕಂಪನಿಗಳು ತಮ್ಮ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರತಿ ವರ್ಷ ವಿದೇಶಗಳಿಗೆ ಹೋಗುತ್ತವೆ ಎಂದು ಶ್ರೀ ಮೋದಿ ತಿಳಿಸಿದರು. ಭಾರತವೂ ಈಗ ಸಮಾವೇಶ ಪ್ರವಾಸೋದ್ಯಮಕ್ಕೆ ಸಿದ್ಧಗೊಳ್ಳುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಕಾರ್ಯಕ್ರಮಗಳು, ಸಭೆಗಳು ಮತ್ತು ಪ್ರದರ್ಶನಗಳಿಗೆ ಅಗತ್ಯವಾದ ಸಂಪನ್ಮೂಲಗಳು ಇರುವಲ್ಲಿ ಮಾತ್ರ ಸಮಾವೇಶ ಪ್ರವಾಸೋದ್ಯಮವು ಪ್ರಗತಿ ಕಾಣುತ್ತದೆ ಎಂದು ಪ್ರಧಾನಿ ಹೇಳಿದರು, ಆದ್ದರಿಂದ ಭಾರತ ಮಂಟಪ ಮತ್ತು ಯಶೋಭೂಮಿ ಕೇಂದ್ರಗಳು ಈಗ ದೆಹಲಿಯನ್ನು ಸಮಾವೇಶ ಪ್ರವಾಸೋದ್ಯಮದ ಅತಿದೊಡ್ಡ ಕೇಂದ್ರವನ್ನಾಗಿ ಮಾಡಲು ಹೊರಟಿವೆ. ಲಕ್ಷಾಂತರ ಯುವಕರಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ಭವಿಷ್ಯದಲ್ಲಿ, ಯಶೋಭೂಮಿಯು ಪ್ರಪಂಚದಾದ್ಯಂತದ ಜನರು ಅಂತಾರಾಷ್ಟ್ರೀಯ ಸಮ್ಮೇಳನಗಳು, ಸಭೆಗಳು ಮತ್ತು ಪ್ರದರ್ಶನಗಳಿಗೆ ಬರುವ ಸ್ಥಳವಾಗಲಿದೆ ಎಂದು ಶ್ರೀ ಮೋದಿ ಹೇಳಿದರು.

ಪ್ರಧಾನಮಂತ್ರಿಯವರು ಭಾಗೀದಾರರನ್ನು ಯಶೋಭೂಮಿಗೆ ಆಹ್ವಾನಿಸಿದರು. “ಇಂದು ನಾನು ಪ್ರಪಂಚದಾದ್ಯಂತದ ದೇಶಗಳ ಪ್ರದರ್ಶನ ಮತ್ತು ಕಾರ್ಯಕ್ರಮ (ಈವೆಂಟ್) ಉದ್ಯಮಕ್ಕೆ ಸಂಬಂಧಿಸಿದ ಜನರನ್ನು ದೆಹಲಿಗೆ ಆಹ್ವಾನಿಸುತ್ತಿದ್ದೇನೆ. ಪೂರ್ವ-ಪಶ್ಚಿಮ-ಉತ್ತರ-ದಕ್ಷಿಣ, ದೇಶದ ಪ್ರತಿಯೊಂದು ಪ್ರದೇಶದ ಚಲನಚಿತ್ರೋದ್ಯಮ ಮತ್ತು ಟಿವಿ ಉದ್ಯಮವನ್ನು ನಾನು ಇಲ್ಲಿಗೆ ಆಹ್ವಾನಿಸುತ್ತೇನೆ. ನಿಮ್ಮ ಪ್ರಶಸ್ತಿ ಪ್ರದಾನ ಸಮಾರಂಭಗಳು, ಚಲನಚಿತ್ರೋತ್ಸವಗಳನ್ನು ಇಲ್ಲಿ ನಡೆಸಿ, ಮೊದಲ ಚಲನಚಿತ್ರ ಪ್ರದರ್ಶನಗಳನ್ನು ಇಲ್ಲಿ ನಡೆಸಿ, ಅಂತಾರಾಷ್ಟ್ರೀಯ ಈವೆಂಟ್ ಕಂಪನಿಗಳು, ಪ್ರದರ್ಶನ ವಲಯಕ್ಕೆ ಸಂಬಂಧಿಸಿದ ಜನರನ್ನು ಭಾರತ ಮಂಟಪ ಮತ್ತು ಯಶೋಭೂಮಿಗೆ ಬರುವಂತೆ ನಾನು ಆಹ್ವಾನಿಸುತ್ತೇನೆ.” ಎಂದು ಪ್ರಧಾನಿ ಹೇಳಿದರು.

ಭಾರತ ಮಂಟಪ ಮತ್ತು ಯಶೋಭೂಮಿ ಭಾರತದ ಆತಿಥ್ಯ, ಶ್ರೇಷ್ಠತೆ ಮತ್ತು ಭವ್ಯತೆಯ ಪ್ರತೀಕವಾಗಲಿವೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. ಭಾರತ ಮಂಟಪ ಮತ್ತು ಯಶೋಭೂಮಿ ಎರಡೂ ಭಾರತೀಯ ಸಂಸ್ಕೃತಿ ಮತ್ತು ಅತ್ಯಾಧುನಿಕ ಸೌಲಭ್ಯಗಳ ಸಂಗಮವಾಗಿವೆ ಮತ್ತು ಈ ಭವ್ಯವಾದ ವ್ಯವಸ್ಥೆಗಳು ಪ್ರಪಂಚದ ಮುಂದೆ ಭಾರತದ ಕಥೆಯನ್ನು ಪ್ರಸ್ತುತಪಡಿಸುತ್ತವೆ ಎಂದು ಪ್ರಧಾನಿ ಹೇಳಿದರು. ಇದು ಉತ್ತಮ ಸೌಲಭ್ಯಗಳನ್ನು ಬಯಸುವ ನವಭಾರತದ ಆಶಯವನ್ನೂ ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. "ನನ್ನ ಮಾತುಗಳನ್ನು ನೆನಪಿಟ್ಟುಕೊಳ್ಳಿ, ಭಾರತವು ಇನ್ನು ನಿಲ್ಲುವುದಿಲ್ಲ" ಎಂದು ಶ್ರೀ ಮೋದಿ ಹೇಳಿದರು, ಹೊಸ ಗುರಿಗಳನ್ನು ಸೃಷ್ಟಿಸಲು, ಅವುಗಳ ಸಾಧನೆಗೆ ಶ್ರಮಿಸಲು ಮತ್ತು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತಿಸಲು ನಾಗರಿಕರನ್ನು ಪ್ರಧಾನಿ ಒತ್ತಾಯಿಸಿದರು. ಎಲ್ಲಾ ನಾಗರಿಕರು ಕಷ್ಟಪಟ್ಟು ಕೆಲಸ ಮಾಡುವ ಮತ್ತು ಒಗ್ಗೂಡುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. "ನಮ್ಮ ವಿಶ್ವಕರ್ಮ ಸಹೋದ್ಯೋಗಿಗಳು ಮೇಕ್ ಇನ್ ಇಂಡಿಯಾದ ಹೆಮ್ಮೆಯಾಗಿದ್ದಾರೆ ಮತ್ತು ಈ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರವು ಈ ಹೆಮ್ಮೆಯನ್ನು ಜಗತ್ತಿಗೆ ಪ್ರದರ್ಶಿಸಲು ಮಾಧ್ಯಮವಾಗಲಿದೆ" ಎಂದ ಶ್ರೀ ಮೋದಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್, ಕೇಂದ್ರ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್, ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ಶ್ರೀ ನಾರಾಯಣ ರಾಣೆ ಮತ್ತು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ರಾಜ್ಯ ಸಚಿವ ಶ್ರೀ ಭಾನು ಪ್ರತಾಪ್ ಸಿಂಗ್ ವರ್ಮಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಯಶೋಭೂಮಿ

ದ್ವಾರಕಾದಲ್ಲಿ ‘ಯಶೋಭೂಮಿ’ಕಾರ್ಯಾರಂಭ ಮಾಡುವುದರೊಂದಿಗೆ ದೇಶದಲ್ಲಿ ಸಭೆಗಳು, ಸಮ್ಮೇಳನಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸಲು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಹೊಂದುವ ಪ್ರಧಾನಮಂತ್ರಿಯವರ ದೃಷ್ಟಿಕೋನವು ಬಲಗೊಂಡಿದೆ. ಒಟ್ಟು 8.9 ಲಕ್ಷ ಚದರ ಮೀಟರ್‌ ಗಳ ಯೋಜನಾ ಪ್ರದೇಶ ಮತ್ತು ಒಟ್ಟು 1.8 ಲಕ್ಷ ಚದರ ಮೀಟರ್‌ ಗಿಂತಲೂ ಹೆಚ್ಚು ನಿರ್ಮಾಣ ಪ್ರದೇಶದೊಂದಿಗೆ, 'ಯಶೋಭೂಮಿ' ವಿಶ್ವದ ಅತಿದೊಡ್ಡ ಎಂಐಸಿಇ (ಮೀಟಿಂಗ್ಸ್‌, ಇನ್ಸೆಂಟಿವ್ಸ್‌, ಕಾನ್ಫರೆನ್ಸಸ್‌, ಎಕ್ಷಿಬಿಷನ್ಸ್‌) ಸೌಲಭ್ಯಗಳಲ್ಲಿ ತನ್ನ ಸ್ಥಾನವನ್ನು ಕಂಡುಕೊಳ್ಳುತ್ತದೆ.

ಸುಮಾರು 5400 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ 'ಯಶೋಭೂಮಿ' ಭವ್ಯವಾದ ಸಮಾವೇಶ ಕೇಂದ್ರ, ಬಹು ಪ್ರದರ್ಶನ ಸಭಾಂಗಣಗಳು ಮತ್ತು ಇತರ ಸೌಲಭ್ಯಗಳನ್ನು ಹೊಂದಿದೆ. 73 ಸಾವಿರ ಚದರ ಮೀಟರ್‌ ಗಿಂತಲೂ ಹೆಚ್ಚು ಪ್ರದೇಶದಲ್ಲಿ ನಿರ್ಮಿಸಲಾದ ಸಮಾವೇಶ ಕೇಂದ್ರ, ಮುಖ್ಯ ಸಭಾಂಗಣ, ಗ್ರ್ಯಾಂಡ್ ಬಾಲ್ ರೂಂ ಮತ್ತು 11,000 ಪ್ರತಿನಿಧಿಗಳ ಒಟ್ಟು ಸಾಮರ್ಥ್ಯದ 13 ಸಭೆ ಕೊಠಡಿಗಳನ್ನು ಸೇರಿದಂತೆ 15 ಸಮಾವೇಶ ಕೊಠಡಿಗಳನ್ನು ಒಳಗೊಂಡಿದೆ. ಸಮಾವೇಶ ಕೇಂದ್ರ ದೇಶದಲ್ಲೇ ಅತಿ ದೊಡ್ಡ ಹೊರಾಂಗಣ ಎಲ್ ಇ ಡಿ ವ್ಯವಸ್ಥೆಯನ್ನು ಹೊಂದಿದೆ. ಸಮಾವೇಶ ಕೇಂದ್ರದಲ್ಲಿರುವ ಸಭಾಂಗಣವು ಸುಮಾರು 6,000 ಅತಿಥಿಗಳು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಸಭಾಂಗಣವು ಅತ್ಯಂತ ನವೀನ ಸ್ವಯಂಚಾಲಿತ ಆಸನ ವ್ಯವಸ್ಥೆಗಳನ್ನು ಹೊಂದಿದೆ. ಇದು ವಿವಿಧ ಆಸನ ವ್ಯವಸ್ಥೆಗಳಿಗಾಗಿ ಆಡಿಟೋರಿಯಂ-ಶೈಲಿಯ ಸಮತಟ್ಟಾದ ಮಹಡಿ ಅಥವಾ ಶ್ರೇಣೀಕೃತ ಆಸನ ಸಕ್ರಿಯಗೊಳಿಸಲು ಅವಕಾಶವಿದೆ. ಆಡಿಟೋರಿಯಂನಲ್ಲಿ ಬಳಸಲಾದ ಮರದ ನೆಲಹಾಸು ಮತ್ತು ಅಕೌಸ್ಟಿಕ್ ಗೋಡೆಯ ಫಲಕಗಳು ಸಂದರ್ಶಕರಿಗೆ ವಿಶ್ವ ದರ್ಜೆಯ ಅನುಭವವನ್ನು ಖಚಿತಪಡಿಸುತ್ತದೆ. ಗ್ರ್ಯಾಂಡ್ ಬಾಲ್‌ರೂಮ್, ವಿಶಿಷ್ಟವಾದ ದಳದ ಮೇಲ್ಛಾವಣಿಯೊಂದಿಗೆ ಇದ್ದು, ಇಲ್ಲಿ ಸುಮಾರು 2,500 ಅತಿಥಿಗಳನ್ನು ಆಯೋಜಿಸಬಹುದು. ಇದು 500 ಜನರು ಕುಳಿತುಕೊಳ್ಳಬಹುದಾದ ವಿಸ್ತೃತ ತೆರೆದ ಪ್ರದೇಶವನ್ನು ಸಹ ಹೊಂದಿದೆ. ಎಂಟು ಮಹಡಿಗಳಲ್ಲಿ ಹರಡಿರುವ 13 ಸಭೆ ಕೊಠಡಿಗಳನ್ನು ವಿವಿಧ ಗಾತ್ರದ ವಿವಿಧ ಸಭೆಗಳನ್ನು ನಡೆಸಲು ಯೋಜಿಸಲಾಗಿದೆ.

'ಯಶೋಭೂಮಿ' ವಿಶ್ವದ ಅತಿದೊಡ್ಡ ಪ್ರದರ್ಶನ ಸಭಾಂಗಣಗಳಲ್ಲಿ ಒಂದನ್ನು ಸಹ ಹೊಂದಿದೆ. ಈ ಪ್ರದರ್ಶನ ಸಭಾಂಗಣಗಳನ್ನು 1.07 ಲಕ್ಷ ಚದರ ಮೀಟರ್‌ ಗಳಲ್ಲಿ ನಿರ್ಮಿಸಲಾಗಿದೆ, ಪ್ರದರ್ಶನಗಳು, ವ್ಯಾಪಾರ ಮೇಳಗಳು ಮತ್ತು ವ್ಯಾಪಾರ ಕಾರ್ಯಕ್ರಮಗಳನ್ನು ಆಯೋಜಿಸಲು ಬಳಸಿಕೊಳ್ಳಲಾಗುತ್ತದೆ ಮತ್ತು ತಾಮ್ರದ ಸೀಲಿಂಗ್‌ನೊಂದಿಗೆ ಅನನ್ಯವಾಗಿ ವಿನ್ಯಾಸಗೊಳಿಸಲಾದ ಭವ್ಯವಾದ ಫೋಯರ್ ಜಾಗಕ್ಕೆ ಸಂಪರ್ಕ ಹೊಂದಿದೆ. ಫೋಯರ್‌ನಲ್ಲಿ ಮಾಧ್ಯಮ ಕೊಠಡಿಗಳು, ವಿವಿಐಪಿ ಲಾಂಜ್‌ ಗಳು, ಕ್ಲೋಕ್ ಸೌಲಭ್ಯಗಳು, ಸಂದರ್ಶಕರ ಮಾಹಿತಿ ಕೇಂದ್ರ ಮತ್ತು ಟಿಕೆಟಿಂಗ್‌ನಂತಹ ವಿವಿಧ ಪ್ರದೇಶಗಳಿವೆ.

'ಯಶೋಭೂಮಿ' ಯಲ್ಲಿನ ಎಲ್ಲಾ ಸಾರ್ವಜನಿಕ ಸುತ್ತಾಟ ಪ್ರದೇಶಗಳನ್ನು ಸಮಾವೇಶ ಕೇಂದ್ರದ ಹೊರಾಂಗಣ ಸ್ಥಳದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು ಭಾರತೀಯ ಸಂಸ್ಕೃತಿಯಿಂದ ಪ್ರೇರಿತವಾದ ವಸ್ತುಗಳು ಮತ್ತು ವಿಷಯಗಳಿಂದ ಮಾಡಲ್ಪಟ್ಟಿದೆ ಟೆರಾಝೋ ಮಹಡಿಗಳ ರೂಪದಲ್ಲಿ ರಂಗೋಲಿ ಮಾದರಿಗಳನ್ನು ಪ್ರತಿನಿಧಿಸುವ ಹಿತ್ತಾಳೆಯ ಕೆತ್ತನೆ, ಧ್ವನಿ-ಹೀರಿಕೊಳ್ಳುವ ಲೋಹದ ಸಿಲಿಂಡರ್‌ಗಳು ಮತ್ತು ಲೈಟ್-ಅಪ್ ಮಾದರಿಯ ಗೋಡೆಗಳು ಇವೆ.

ಶೇ.100 ತ್ಯಾಜ್ಯನೀರಿನ ಮರುಬಳಕೆಯೊಂದಿಗೆ ಅತ್ಯಾಧುನಿಕ ತ್ಯಾಜ್ಯನೀರಿನ ಸಂಸ್ಕರಣಾ ವ್ಯವಸ್ಥೆ, ಮಳೆನೀರು ಕೊಯ್ಲು ಮತ್ತು ಸಿಐಐನ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ (ಐಜಿಬಿಸಿ) ನಿಂದ ಪ್ಲಾಟಿನಂ ಪ್ರಮಾಣೀಕರಣವನ್ನು ಪಡೆದಿರುವುದರಿಂದ 'ಯಶೋಭೂಮಿ' ಸುಸ್ಥಿರತೆಯ ಬಲವಾದ ಬದ್ಧತೆಯನ್ನು ಪ್ರದರ್ಶಿಸುತ್ತದೆ.

ಸಂದರ್ಶಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ‘ಯಶೋಭೂಮಿ’ಹೈಟೆಕ್ ಭದ್ರತಾ ವ್ಯವಸ್ಥೆಗಳನ್ನು ಸಹ ಹೊಂದಿದೆ. 3,000 ಕ್ಕೂ ಹೆಚ್ಚು ಕಾರುಗಳ  ಪಾರ್ಕಿಂಗ್ ಸೌಲಭ್ಯವು 100 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೊಂದಿದೆ.

ಹೊಸ ಮೆಟ್ರೋ ಸ್ಟೇಷನ್ 'ಯಶೋಭೂಮಿ ದ್ವಾರಕಾ ಸೆಕ್ಟರ್ 25' ಉದ್ಘಾಟನೆಯೊಂದಿಗೆ 'ಯಶೋಭೂಮಿ' ದೆಹಲಿ ಏರ್‌ಪೋರ್ಟ್ ಮೆಟ್ರೋ ಎಕ್ಸ್‌ಪ್ರೆಸ್ ಲೈನ್‌ಗೆ ಸಹ ಸಂಪರ್ಕಗೊಳ್ಳುತ್ತದೆ. ಹೊಸ ಮೆಟ್ರೋ ನಿಲ್ದಾಣವು ಮೂರು ಸುರಂಗಮಾರ್ಗಗಳನ್ನು ಹೊಂದಿರುತ್ತದೆ - 735ಮೀ ಉದ್ದದ ಸುರಂಗಮಾರ್ಗವು ನಿಲ್ದಾಣವನ್ನು ಪ್ರದರ್ಶನ ಸಭಾಂಗಣಗಳು, ಸಮಾವೇಶ ಕೇಂದ್ರ ಮತ್ತು ಸೆಂಟ್ರಲ್ ಅರೆನಾಗೆ ಸಂಪರ್ಕಿಸುತ್ತದೆ; ಇನ್ನೊಂದು ದ್ವಾರಕಾ ಎಕ್ಸ್‌ಪ್ರೆಸ್‌ವೇ ಪ್ರವೇಶ/ನಿರ್ಗಮನವನ್ನು ಸಂಪರ್ಕಿಸುತ್ತದೆ; ಮೂರನೆಯದು ಮೆಟ್ರೋ ನಿಲ್ದಾಣವನ್ನು 'ಯಶೋಭೂಮಿ' ಭವಿಷ್ಯದ ಪ್ರದರ್ಶನ ಸಭಾಂಗಣಗಳ ಮುಂಭಾಗಕ್ಕೆ ಸಂಪರ್ಕಿಸುತ್ತದೆ.

ಪ್ರಧಾನಮಂತ್ರಿ ವಿಶ್ವಕರ್ಮ

ಸಾಂಪ್ರದಾಯಿಕ ಕಸುಬುಗಳಲ್ಲಿ ತೊಡಗಿರುವ ಜನರಿಗೆ ಬೆಂಬಲ ನೀಡುವುದು ಪ್ರಧಾನ ಮಂತ್ರಿಯವರ ನಿರಂತರ ದೃಷ್ಟಿಯಾಗಿದೆ. ಕುಶಲಕರ್ಮಿಗಳು ಮತ್ತು ಕರಕುಶಲಿಗಳಿಗೆ ಆರ್ಥಿಕವಾಗಿ ಬೆಂಬಲ ನೀಡುವುದು ಮಾತ್ರವಲ್ಲದೆ ಪ್ರಾಚೀನ ಸಂಪ್ರದಾಯ, ಸಂಸ್ಕೃತಿ ಮತ್ತು ವೈವಿಧ್ಯಮಯ ಪರಂಪರೆಯನ್ನು ಜೀವಂತವಾಗಿಡಲು ಮತ್ತು ಸ್ಥಳೀಯ ಉತ್ಪನ್ನಗಳು, ಕಲೆ ಮತ್ತು ಕರಕುಶಲ ವಸ್ತುಗಳ ಮೂಲಕ ಪ್ರವರ್ಧಮಾನಕ್ಕೆ ಬರುವಂತೆ ಮಾಡುವ ಉದ್ದೇಶದಿಂದ ಈ ಕುರಿತು ಗಮನ ನೀಡಲಾಗುತ್ತಿದೆ. 

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಕೇಂದ್ರ ಸರ್ಕಾರವು 13,000 ಕೋಟಿ ರೂಪಾಯಿಗಳ ಸಂಪೂರ್ಣ ಆರ್ಥಿಕ ಬೆಂಬಲ ನೀಡಲಿದೆ. ಯೋಜನೆಯಡಿಯಲ್ಲಿ, ಬಯೋಮೆಟ್ರಿಕ್ ಆಧಾರಿತ ಪ್ರಧಾನಮಂತ್ರಿ ವಿಶ್ವಕರ್ಮ ಪೋರ್ಟಲ್ ಅನ್ನು ಬಳಸಿಕೊಂಡು ವಿಶ್ವಕರ್ಮರನ್ನು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಉಚಿತವಾಗಿ ನೋಂದಾಯಿಸಲಾಗುತ್ತದೆ. ಅವರಿಗೆ ಪ್ರಧಾನಮಂತ್ರಿ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಗುರುತಿನ ಚೀಟಿ, ಮೂಲಭೂತ ಮತ್ತು ಸುಧಾರಿತ ತರಬೇತಿಯನ್ನು ಒಳಗೊಂಡ ಕೌಶಲ್ಯ ಉನ್ನತೀಕರಣ, 15,000 ರೂ ಮೌಲ್ಯದ ಟೂಲ್‌ಕಿಟ್ ಪ್ರೋತ್ಸಾಹ, ಆಧಾರ ರಹಿತ ಸಾಲದ ನೆರವಾಗಿ ಮೊದಲಕಂತಿನಲ್ಲಿ 1 ಲಕ್ಷ ರೂ ವರೆಗೆ ಮತ್ತು ಎರಡನೇ ಕಂತಿನಲ್ಲಿ 2 ಲಕ್ಷ ರೂ ವರೆಗೆ ಶೇ. ೫ ರ ರಿಯಾಯಿತಿ ಬಡ್ಡಿಯಲ್ಲಿ ನೀಡಲಾಗುತ್ತದೆ. ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ಮತ್ತು ಮಾರುಕಟ್ಟೆ ಬೆಂಬಲ ಒದಗಿಸಲಾಗುತ್ತದೆ.

ಈ ಯೋಜನೆಯು ವಿಶ್ವಕರ್ಮರು ತಮ್ಮ ಕೈ ಮತ್ತು ಸಾಧನಗಳೊಂದಿಗೆ ಕೆಲಸ ಮಾಡುವ ಗುರು-ಶಿಷ್ಯ ಪರಂಪರೆ ಅಥವಾ ಸಾಂಪ್ರದಾಯಿಕ ಕೌಶಲ್ಯಗಳ ಕುಟುಂಬ ಆಧಾರಿತ ಕಸುಬನ್ನು ಬಲಪಡಿಸುವ ಮತ್ತು ಪೋಷಿಸುವ ಗುರಿಯನ್ನು ಹೊಂದಿದೆ. ಕುಶಲಕರ್ಮಿಗಳು ಮತ್ತು ಕರಕುಶಲಿಗಳ ಉತ್ಪನ್ನಗಳು ಮತ್ತು ಸೇವೆಗಳ ಗುಣಮಟ್ಟ ಮತ್ತು ವ್ಯಾಪ್ತಿಯನ್ನು ಸುಧಾರಿಸುವುದು ಮತ್ತು ಅವರು ದೇಶೀಯ ಮತ್ತು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸೇರುವುದನ್ನು ಖಚಿತಪಡಿಸಿಕೊಳ್ಳುವುದು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಧಾನ ಉದ್ದೇಶವಾಗಿದೆ.
ಈ ಯೋಜನೆಯು ಭಾರತದಾದ್ಯಂತ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಶಲಕರ್ಮಿಗಳು ಮತ್ತು ಕರಕುಶಲಿಗಳಿಗೆ ಬೆಂಬಲವನ್ನು ನೀಡುತ್ತದೆ. ಹದಿನೆಂಟು ಸಾಂಪ್ರದಾಯಿಕ ಕರಕುಶಲ ವಸ್ತುಗಳು ಪ್ರಧಾನಮಂತ್ರಿ ವಿಶ್ವಕರ್ಮ ಅಡಿಯಲ್ಲಿ ಬರುತ್ತವೆ. ಇವುಗಳಲ್ಲಿ (i) ಬಡಗಿಗಳು; (ii) ದೋಣಿ ತಯಾರಕರು; (iii) ಆರ್ಮರ್; (iv) ಕಮ್ಮಾರರು; (v) ಸುತ್ತಿಗೆ ಮತ್ತು ಟೂಲ್ ಕಿಟ್ ಮೇಕರ್; (vi) ಅಕ್ಕಸಾಲಿಗರು; (vii) ಚಿನಿವಾರರು; (viii) ಕುಂಬಾರರು; (ix) ಶಿಲ್ಪಿಗಳು, ಕಲ್ಲು ಒಡೆಯುವವರು; (x) ಚಮ್ಮಾರರು (ಶೂಸ್ಮಿತ್/ ಪಾದರಕ್ಷೆ ಕುಶಲಕರ್ಮಿ); (xi) ಮೇಸ್ತ್ರಿಗಳು (ರಾಜ್ಮಿಸ್ತ್ರಿ); (xii) ಬುಟ್ಟಿ/ಚಾಪೆ/ಪೊರಕೆ ತಯಾರಕರು/ನಾರು ನೇಕಾರರು; (xiii) ಗೊಂಬೆ ಮತ್ತು ಆಟಿಕೆ ತಯಾರಕರು (ಸಾಂಪ್ರದಾಯಿಕ); (xiv) ಕೇಶ ವಿನ್ಯಾಸಕರು; (xv) ಹೂಮಾಲೆ ತಯಾರಕರು; (xvi) ದೋಬಿಗಳು; (xvii) ದರ್ಜಿಗಳು; ಮತ್ತು (xviii) ಮೀನಿನ ಬಲೆ ತಯಾರಕರು ಸೇರುತ್ತಾರೆ.

Speaking at launch of PM Vishwakarma Yojana at the newly inaugurated Yashobhoomi convention centre. https://t.co/aOpIO1aW5z

— Narendra Modi (@narendramodi) September 17, 2023

आज भगवान विश्वकर्मा की जयंती है।

ये दिन हमारे पारंपरिक कारीगरों और शिल्पकारों को समर्पित है: PM @narendramodi pic.twitter.com/19nim8CHGu

— PMO India (@PMOIndia) September 17, 2023

मैं आज 'यशोभूमि' को देश के हर श्रमिक को समर्पित करता हूं, हर विश्वकर्मा साथी को समर्पित करता हूं: PM @narendramodi pic.twitter.com/zCVApNOf3V

— PMO India (@PMOIndia) September 17, 2023

हज़ारों वर्षों से जो साथी भारत की समृद्धि के मूल में रहे हैं, वो हमारे विश्वकर्मा ही हैं। pic.twitter.com/XEzAol2vuf

— PMO India (@PMOIndia) September 17, 2023

With PM Vishwakarma Yojana, our endeavour is to support the people engaged in traditional crafts. pic.twitter.com/wDtKfG3ipn

— PMO India (@PMOIndia) September 17, 2023

आज देश में वो सरकार है, जो वंचितों को वरीयता देती है: PM @narendramodi pic.twitter.com/edemeKUXd6

— PMO India (@PMOIndia) September 17, 2023

We have to reiterate our pledge to be 'Vocal for Local.' pic.twitter.com/bb5OSX0qQ3

— PMO India (@PMOIndia) September 17, 2023

Today's developing India is carving a new identity for itself in every field. pic.twitter.com/TrHeScAr5H

— PMO India (@PMOIndia) September 17, 2023

 

***



(Release ID: 1958221) Visitor Counter : 133