ಪ್ರಧಾನ ಮಂತ್ರಿಯವರ ಕಛೇರಿ

ಗ್ರೀಸ್ ಪ್ರಧಾನ ಮಂತ್ರಿಯವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಮಂತ್ರಿಯವರ ಪತ್ರಿಕಾ ಹೇಳಿಕೆಯ ಇಂಗ್ಲಿಷ್ ಅನುವಾದ

Posted On: 25 AUG 2023 8:08PM by PIB Bengaluru

ಘನತೆವೆತ್ತ ಪ್ರಧಾನ ಮಂತ್ರಿ ಶ್ರೀ ಕಿರಿಯಾಕೋಸ್ ಮಿಟ್ಸೋಟಾಕಿಸ್

ಎರಡೂ ದೇಶಗಳ ಪ್ರತಿನಿಧಿಗಳು,

ಮಾಧ್ಯಮ ಮಿತ್ರರೇ,

ನಮಸ್ಕಾರ!

ಮೊದಲನೆಯದಾಗಿ, ಗ್ರೀಸ್ ನಲ್ಲಿ ಕಾಡ್ಗಿಚ್ಚಿನ ದುರಂತ ಘಟನೆಗಳಲ್ಲಿ ಜೀವಹಾನಿಗಾಗಿ ಭಾರತದ ಎಲ್ಲಾ ಜನರ ಪರವಾಗಿ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ.

ಅಲ್ಲದೆ, ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ.

ಸ್ನೇಹಿತರೇ,

ಗ್ರೀಸ್ ಮತ್ತು ಭಾರತ - ಇದು ನೈಸರ್ಗಿಕ ಪುನರ್ಮಿಲನ

- ಪ್ರಪಂಚದ ಎರಡು ಪ್ರಾಚೀನ ನಾಗರಿಕತೆಗಳ ನಡುವೆ,

- ಪ್ರಪಂಚದ ಎರಡು ಪ್ರಾಚೀನ ಪ್ರಜಾಪ್ರಭುತ್ವ ಸಿದ್ಧಾಂತಗಳ ನಡುವೆ, ಮತ್ತು

- ಪ್ರಪಂಚದ ಎರಡು ಪ್ರಾಚೀನ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಬಂಧಗಳ ನಡುವೆ.
ಸ್ನೇಹಿತರೇ,

ನಮ್ಮ ಸಂಬಂಧದ ತಳಹದಿ ಎಷ್ಟು ಪುರಾತನವಾಗಿದೆಯೋ ಅಷ್ಟೇ ಗಟ್ಟಿಯಾಗಿದೆ.

ವಿಜ್ಞಾನ, ಕಲೆ ಮತ್ತು ಸಂಸ್ಕೃತಿ - ನಾವು ಎಲ್ಲಾ ಕ್ಷೇತ್ರಗಳಲ್ಲಿ ಪರಸ್ಪರ ಕಲಿತಿದ್ದೇವೆ.

ಅದು ಇಂಡೋ-ಪೆಸಿಫಿಕ್ ಅಥವಾ ಮೆಡಿಟರೇನಿಯನ್ ಇರಲಿ ಇಂದು ನಾವು ಭೌಗೋಳಿಕ ರಾಜಕೀಯ, ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳ ಮೇಲೆ ಅತ್ಯುತ್ತಮವಾದ ಸಮನ್ವಯವನ್ನು ಹೊಂದಿದ್ದೇವೆ. 

ಇಬ್ಬರು ಹಳೆಯ ಸ್ನೇಹಿತರಂತೆ, ನಾವು ಪರಸ್ಪರರ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತೇವೆ ಮತ್ತು ಅವರನ್ನು ಗೌರವಿಸುತ್ತೇವೆ.

40 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಗ್ರೀಸ್ ದೇಶಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.

ಆದರೂ, ನಮ್ಮ ಸಂಬಂಧಗಳ ಗಟ್ಟಿತನ ಕಡಿಮೆಯಾಗಿಲ್ಲ, ನಮ್ಮ ಸಂಬಂಧಗಳ ನಡುವೆ ಸೌಹಾರ್ದತೆ ಕಡಿಮೆಯಾಗಿಲ್ಲ.

ಆದ್ದರಿಂದ, ಇಂದು ಗ್ರೀಸ್ ಪ್ರಧಾನ ಮಂತ್ರಿಗಳು ಮತ್ತು ನಾನು ಭಾರತ-ಗ್ರೀಸ್ ಪಾಲುದಾರಿಕೆಯನ್ನು "ಕಾರ್ಯತಂತ್ರ" ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ.

ರಕ್ಷಣೆ ಮತ್ತು ಭದ್ರತೆ, ಮೂಲಸೌಕರ್ಯ, ಕೃಷಿ, ಶಿಕ್ಷಣ, ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ವಿಸ್ತರಿಸುವ ಮೂಲಕ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲು ನಾವು ನಿರ್ಧರಿಸಿದ್ದೇವೆ.

ಸ್ನೇಹಿತರೇ,

ರಕ್ಷಣಾ ಮತ್ತು ಭದ್ರತೆಯ ಕ್ಷೇತ್ರದಲ್ಲಿ, ಮಿಲಿಟರಿ ಸಂಬಂಧಗಳ ಜೊತೆಗೆ ರಕ್ಷಣಾ ಉದ್ಯಮಗಳಿಗೆ ಉತ್ತೇಜನ ನೀಡಲು ನಾವು ಒಪ್ಪಿಕೊಂಡಿದ್ದೇವೆ.

ಇಂದು ನಾವು ಭಯೋತ್ಪಾದನೆ ಮತ್ತು ಸೈಬರ್ ಭದ್ರತೆಯ ವಿಷಯಗಳ ಬಗ್ಗೆಯೂ ಚರ್ಚಿಸಿದ್ದೇವೆ.

ನಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದಲ್ಲಿಯೂ ಸಂವಾದಕ್ಕೆ ಸಾಂಸ್ಥಿಕ ವೇದಿಕೆ ಇರಬೇಕು ಎಂದು ನಾವು ನಿರ್ಧರಿಸಿದ್ದೇವೆ.

ಗ್ರೀಸ್ ಪ್ರಧಾನ ಮಂತ್ರಿ ಮತ್ತು ನಾನು, ನಮ್ಮ ದ್ವಿಪಕ್ಷೀಯ ವ್ಯಾಪಾರವು ವೇಗವಾಗಿ ಬೆಳೆಯುತ್ತಿದೆ ಮತ್ತು ಮತ್ತಷ್ಟು ಬೆಳವಣಿಗೆಗೆ ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದು ಸಹಮತ ವ್ಯಕ್ತಪಡಿಸುತ್ತಿದ್ದೇವೆ.

ಆದ್ದರಿಂದ, 2030 ರ ವೇಳೆಗೆ ನಮ್ಮ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ.

ಇಂದು, ಕೆಲವೇ ಕ್ಷಣಗಳಲ್ಲಿ, ಗ್ರೀಸ್ ಪ್ರಧಾನ ಮಂತ್ರಿಗಳು ವ್ಯವಹಾರ ಸಭೆಯನ್ನು ಆಯೋಜಿಸಲಿದ್ದಾರೆ.

ಇದರಲ್ಲಿ, ನಾವು ಎರಡೂ ದೇಶಗಳ ವ್ಯಾಪಾರ ಪ್ರತಿನಿಧಿಗಳೊಂದಿಗೆ ಕೆಲವು ನಿರ್ದಿಷ್ಟ ಕ್ಷೇತ್ರಗಳನ್ನು ಚರ್ಚಿಸುತ್ತೇವೆ.

ನಮ್ಮ ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುವ ಮೂಲಕ ನಾವು ನಮ್ಮ ಕೈಗಾರಿಕಾ ಮತ್ತು ಆರ್ಥಿಕ ಸಹಕಾರವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯಬಹುದು ಎಂದು ನಾವು ನಂಬುತ್ತೇವೆ.

ಇಂದು ಕೃಷಿ ವಲಯದಲ್ಲಿ ಸಹಕಾರಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ಒಪ್ಪಂದದೊಂದಿಗೆ, ನಾವು ಕೃಷಿ ಮತ್ತು ಬೀಜ ಉತ್ಪಾದನೆಯಲ್ಲಿ ಮಾತ್ರವಲ್ಲದೆ ಸಂಶೋಧನೆ, ಪಶುಸಂಗೋಪನೆ ಮತ್ತು ಜಾನುವಾರು ಉತ್ಪಾದನೆಯ ಕ್ಷೇತ್ರಗಳಲ್ಲಿ ಸಹಕಾರ ಸಂಬಂಧ ಹೆಚ್ಚಿಸಿಕೊಳ್ಳಬಹುದು.
ಸ್ನೇಹಿತರೇ,

ಉಭಯ ದೇಶಗಳ ನಡುವೆ ವಲಸೆಗೆ ಅನುಕೂಲವಾಗುವಂತೆ ನಾವು ಶೀಘ್ರದಲ್ಲೇ ವಲಸೆ ಮತ್ತು ಚಲನಶೀಲ ಪಾಲುದಾರಿಕೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ.

ನಮ್ಮ ಪ್ರಾಚೀನ ಜನರು-ಜನರ ನಡುವಿನ ಸಂಬಂಧಗಳಿಗೆ ಹೊಸ ಆಯಾಮವನ್ನು ನೀಡಲು, ನಾವು ಸಹಕಾರವನ್ನು ಹೆಚ್ಚಿಸಬೇಕು ಎಂದು ನಂಬುತ್ತೇವೆ.

ನಾವು ನಮ್ಮ ಶಿಕ್ಷಣ ಸಂಸ್ಥೆಗಳ ನಡುವೆ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿನಿಮಯವನ್ನು ಉತ್ತೇಜಿಸುತ್ತೇವೆ.

ಸ್ನೇಹಿತರೇ,

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆಯೂ ಚರ್ಚೆ ನಡೆಸಿದ್ದೇವೆ.

ಭಾರತ-ಐರೋಪ್ಯ ಒಕ್ಕೂಟ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದಕ್ಕೆ ಗ್ರೀಸ್ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.

ಉಕ್ರೇನ್ ವಿಷಯದಲ್ಲಿ ಎರಡೂ ದೇಶಗಳು ರಾಜತಾಂತ್ರಿಕತೆ ಮತ್ತು ಮಾತುಕತೆಯನ್ನು ಬೆಂಬಲಿಸುತ್ತವೆ.

ವಿಶ್ವಸಂಸ್ಥೆ ಮತ್ತು ಇತರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗ್ರೀಸ್ನ ಸಹಕಾರಕ್ಕಾಗಿ ನಾನು ಧನ್ಯವಾದಗಳನ್ನು ಅರ್ಪಿಸಿದೆ.

ಭಾರತದ G20 ಪ್ರೆಸಿಡೆನ್ಸಿಗೆ ಸಂಬಂಧಿಸಿದಂತೆ ಗ್ರೀಸ್ ಪ್ರಧಾನ ಮಂತ್ರಿಯವರ ಶುಭ ಹಾರೈಕೆಗಳು ಮತ್ತು ಪ್ರೋತ್ಸಾಹಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ.

ಸ್ನೇಹಿತರೇ,
ಇಂದು ನನಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಹಾನರ್ ನೀಡಿದ್ದಕ್ಕಾಗಿ, ನಾನು ಹೆಲೆನಿಕ್ ರಿಪಬ್ಲಿಕ್ ಮತ್ತು ಅಧ್ಯಕ್ಷರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

140 ಕೋಟಿ ಭಾರತೀಯರ ಪರವಾಗಿ ಪ್ರಶಸ್ತಿ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದ್ದೇನೆ.

ಭಾರತ ಮತ್ತು ಗ್ರೀಸ್ ನ ಹಂಚಿಕೆಯ ಮೌಲ್ಯಗಳು ನಮ್ಮ ಸುದೀರ್ಘ ಮತ್ತು ವಿಶ್ವಾಸಾರ್ಹ ಪಾಲುದಾರಿಕೆಯ ಅಡಿಪಾಯವಾಗಿದೆ.

ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಆದರ್ಶಗಳನ್ನು ಸ್ಥಾಪಿಸಲು ಮತ್ತು ಯಶಸ್ವಿಯಾಗಿ ಅಭ್ಯಾಸ ಮಾಡಲು ಎರಡೂ ದೇಶಗಳು ಐತಿಹಾಸಿಕ ಕೊಡುಗೆಯನ್ನು ಹೊಂದಿವೆ. 

ಭಾರತೀಯ ಮತ್ತು ಗ್ರೀಕೋ-ರೋಮನ್ ಕಲೆಯ ಸುಂದರ ಸಮ್ಮಿಲನವಾದ ಗಾಂಧಾರ ಕಲೆಯಂತೆಯೇ ಭಾರತ ಮತ್ತು ಗ್ರೀಸ್ ನಡುವಿನ ಸ್ನೇಹವು ಕಾಲದ ಕಲ್ಲಿನ ಮೇಲೆ ತನ್ನ ಅಳಿಸಲಾಗದ ಗುರುತು ಬಿಡುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ.

ಮತ್ತೊಮ್ಮೆ, ಗ್ರೀಸ್ ನ ಈ ಸುಂದರ ಮತ್ತು ಐತಿಹಾಸಿಕ ನಗರದಲ್ಲಿ ಇಂದು ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತಿಥ್ಯಕ್ಕಾಗಿ ಗ್ರೀಸ್ ಪ್ರಧಾನ ಮಂತ್ರಿ ಮತ್ತು ಗ್ರೀಸ್ ಜನರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನುಅರ್ಪಿಸುತ್ತೇನೆ.

ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು

****
 



(Release ID: 1952833) Visitor Counter : 97