ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ʻಬ್ರಿಕ್ಸ್-ಆಫ್ರಿಕಾ ಔಟ್ರೀಚ್ʼ ಮತ್ತು ʻಬ್ರಿಕ್ಸ್ ಪ್ಲಸ್ʼ ಸಂವಾದದಲ್ಲಿ ಪ್ರಧಾನಮಂತ್ರಿಯವರ ಹೇಳಿಕೆಗಳ ಕನ್ನಡ ಅನುವಾದ

Posted On: 24 AUG 2023 3:47PM by PIB Bengaluru

 ಆಫ್ರಿಕಾದ ನೆಲದಲ್ಲಿ, ನನ್ನೆಲ್ಲಾ ಸ್ನೇಹಿತರ ನಡುವೆ ಇಲ್ಲಿರುವುದು ನನಗೆ ಸಂತೋಷ ತಂದಿದೆ. 

 ʻಬ್ರಿಕ್ಸ್ ಔಟ್ರೀಚ್ ಶೃಂಗಸಭೆʼಯ ಸಂದರ್ಭದಲ್ಲಿ ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳೊಂದಿಗೆ ಆಲೋಚನೆಗಳನ್ನು ಹಂಚಿಕೊಳ್ಳಲು ಅವಕಾಶವನ್ನು ಒದಗಿಸಿದ್ದಕ್ಕಾಗಿ ನಾನು ಅಧ್ಯಕ್ಷ ರಮಾಫೋಸಾ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 ಕಳೆದ ಎರಡು ದಿನಗಳಲ್ಲಿ, ʻಬ್ರಿಕ್ಸ್ʼನ ಎಲ್ಲಾ ಚರ್ಚೆಗಳಲ್ಲಿ, ನಾವು ಜಾಗತಿಕ ದಕ್ಷಿಣ ರಾಷ್ಟ್ರಗಳ ಆದ್ಯತೆಗಳು ಮತ್ತು ಕಾಳಜಿಗಳ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ.

  ಈ ವಿಷಯಗಳಿಗೆ ʻಬ್ರಿಕ್ಸ್ʼ ವಿಶೇಷ ಪ್ರಾಮುಖ್ಯತೆ ನೀಡುವುದು ಪ್ರಸ್ತುತ ಸಮಯದಲ್ಲಿ ಅತ್ಯಂತ ನಿರ್ಣಾಯಕವಾದುದು ಎಂದು ಎಂದು ನಾವು ನಂಬುತ್ತೇವೆ.

  ʻಬ್ರಿಕ್ಸ್ʼ ವೇದಿಕೆಯನ್ನು ವಿಸ್ತರಿಸುವ ನಿರ್ಧಾರವನ್ನೂ ನಾವು ಕೈಗೊಂಡಿದ್ದೇವೆ. ನಾವು ಎಲ್ಲಾ ಪಾಲುದಾರ ರಾಷ್ಟ್ರಗಳನ್ನು ಸ್ವಾಗತಿಸುತ್ತೇವೆ.

  ಇದು ಜಾಗತಿಕ ಸಂಸ್ಥೆಗಳು ಮತ್ತು ವೇದಿಕೆಗಳನ್ನು ಪ್ರಾತಿನಿಧಿಕ ಮತ್ತು ಸಮಗ್ರವಾಗಿಸುವ ನಮ್ಮ ಪ್ರಯತ್ನಗಳ ನಿಟ್ಟಿನಲ್ಲಿ ಒಂದು ಉಪಕ್ರಮವಾಗಿದೆ. 

ಗೌರವಾನ್ವಿತರೇ,

  ನಾವು "ಗ್ಲೋಬಲ್ ಸೌತ್" ಎಂಬ ಪದವನ್ನು ಬಳಸಿದಾಗ, ಅದು ಕೇವಲ ರಾಜತಾಂತ್ರಿಕ ಪದವಲ್ಲ.

 ನಾವು ಪರಸ್ಪರ ಹಂಚಿಕೊಂಡಿರುವ ನಮ್ಮ ಇತಿಹಾಸದಲ್ಲಿ, ನಾವು ವಸಾಹತುಶಾಹಿ ಮತ್ತು ವರ್ಣಭೇದ ನೀತಿಯನ್ನು ಒಗ್ಗಟ್ಟಿನಿಂದ ವಿರೋಧಿಸಿದ್ದೇವೆ.

 ಆಫ್ರಿಕಾದ ನೆಲದಲ್ಲಿ ಮಹಾತ್ಮ ಗಾಂಧಿಯವರು ಅಹಿಂಸೆ ಮತ್ತು ಶಾಂತಿಯುತ ಪ್ರತಿರೋಧದಂತಹ ಪ್ರಬಲ ಪರಿಕಲ್ಪನೆಗಳನ್ನು ಅಭಿವೃದ್ಧಿಪಡಿಸಿದರು, ಪರೀಕ್ಷಿಸಿದರು ಮತ್ತು ಅವುಗಳನ್ನು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬಳಸಿದರು.

 ಅವರ ಆಲೋಚನೆಗಳು ಮತ್ತು ಚಿಂತನೆಗಳು ನೆಲ್ಸನ್ ಮಂಡೇಲಾ ಅವರಂತಹ ಮಹಾನ್ ನಾಯಕರಿಗೆ ಸ್ಫೂರ್ತಿ ನೀಡಿದವು.

 ಈ ಬಲವಾದ ಐತಿಹಾಸಿಕ ಅಡಿಪಾಯದ ಆಧಾರದ ಮೇಲೆ, ನಾವು ನಮ್ಮ ಆಧುನಿಕ ಸಂಬಂಧಗಳಿಗೆ ಹೊಸ ಆಕಾರವನ್ನು ನೀಡುತ್ತಿದ್ದೇವೆ. 

ಗೌರವಾನ್ವಿತರೇ,

 ಭಾರತವು ಆಫ್ರಿಕಾ ಜೊತೆಗಿನ ಸಂಬಂಧಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.

 ಉನ್ನತ ಮಟ್ಟದ ಸಭೆಗಳ ಜೊತೆಗೆ, ನಾವು ಆಫ್ರಿಕಾದಲ್ಲಿ 16 ಹೊಸ ರಾಯಭಾರ ಕಚೇರಿಗಳನ್ನು ತೆರೆದಿದ್ದೇವೆ.

 ಪ್ರಸ್ತುತ, ಭಾರತವು ಆಫ್ರಿಕಾದ ನಾಲ್ಕನೇ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಐದನೇ ಅತಿದೊಡ್ಡ ಹೂಡಿಕೆದಾರ ದೇಶವಾಗಿದೆ.

 ಅದು ಸುಡಾನ್, ಬುರುಂಡಿ ಮತ್ತು ರುವಾಂಡಾದ ವಿದ್ಯುತ್ ಯೋಜನೆಗಳಾಗಿರಬಹುದು ಅಥವಾ ಇಥಿಯೋಪಿಯಾ ಮತ್ತು ಮಲವಿಯ ಸಕ್ಕರೆ ಸ್ಥಾವರಗಳಾಗಿರಬಹುದು.

 ಅದು ಮೊಜಾಂಬಿಕ್, ಐವರಿ ಕೋಸ್ಟ್ ಮತ್ತು ಎಸ್ವಾಟಿನಿಯಲ್ಲಿನ ತಂತ್ರಜ್ಞಾನ ಪಾರ್ಕ್ಗಳಾಗಿರಬಹುದು ಅಥವಾ ತಾಂಜೇನಿಯಾ ಮತ್ತು ಉಗಾಂಡಾದಲ್ಲಿ ಭಾರತೀಯ ವಿಶ್ವವಿದ್ಯಾಲಯಗಳು ಸ್ಥಾಪಿಸಿದ ಕ್ಯಾಂಪಸ್ ಗಳಾಗಿರಬಹುದು. ಆಫ್ರಿಕಾದ ದೇಶಗಳಲ್ಲಿ ಸಾಮರ್ಥ್ಯ ವರ್ಧನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಭಾರತ ಸದಾ ಆದ್ಯತೆ ನೀಡಿದೆ.

 ʻಕಾರ್ಯಸೂಚಿ-2063ʼರ ಅಡಿಯಲ್ಲಿ, ಭವಿಷ್ಯದ ಜಾಗತಿಕ ಶಕ್ತಿ ಕೇಂದ್ರವಾಗುವ ಆಫ್ರಿಕಾದ ಪ್ರಯಾಣದಲ್ಲಿ ಭಾರತವು ವಿಶ್ವಾಸಾರ್ಹ ಮತ್ತು ನಿಕಟ ಪಾಲುದಾರನಾಗಿದೆ.

 ಆಫ್ರಿಕಾದಲ್ಲಿ ಡಿಜಿಟಲ್ ವಿಭಜನೆಯನ್ನು ನಿವಾರಿಸಲು, ನಾವು ಟೆಲಿ-ಶಿಕ್ಷಣ ಮತ್ತು ಟೆಲಿ-ಮೆಡಿಸಿನ್ನಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿವೇತನಗಳನ್ನು ಒದಗಿಸಿದ್ದೇವೆ.

 ನಾವು ನೈಜೀರಿಯಾ, ಇಥಿಯೋಪಿಯಾ ಮತ್ತು ತಾಂಜೇನಿಯಾದಲ್ಲಿ ರಕ್ಷಣಾ ಅಕಾಡೆಮಿಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿದ್ದೇವೆ.

 ನಾವು ಬೋಟ್ಸ್ವಾನಾ, ನಮೀಬಿಯಾ, ಉಗಾಂಡಾ, ಲೆಸೊಥೊ, ಜಾಂಬಿಯಾ, ಮಾರಿಷಸ್, ಸೀಶೆಲ್ಸ್ ಮತ್ತು ತಾಂಜಾನಿಯಾದಲ್ಲಿ ತರಬೇತಿಗಾಗಿ ತಂಡಗಳನ್ನು ನಿಯೋಜಿಸಿದ್ದೇವೆ.

 ಮಹಿಳೆಯರು ಸೇರಿದಂತೆ ಸರಿಸುಮಾರು 4,400 ಭಾರತೀಯ ಶಾಂತಿಪಾಲನಾ ಸಿಬ್ಬಂದಿ ಆಫ್ರಿಕಾದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡುತ್ತಿದ್ದಾರೆ.

 ಭಯೋತ್ಪಾದನೆ ಮತ್ತು ಕಡಲ್ಗಳ್ಳತನದ ವಿರುದ್ಧದ ಹೋರಾಟದಲ್ಲಿ ನಾವು ಆಫ್ರಿಕಾದ ದೇಶಗಳೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ.

 ಕೋವಿಡ್ ಸಾಂಕ್ರಾಮಿಕ ರೋಗದ ಸವಾಲಿನ ಸಮಯದಲ್ಲಿ, ನಾವು ಹಲವಾರು ದೇಶಗಳಿಗೆ ಆಹಾರ ಪದಾರ್ಥಗಳು ಮತ್ತು ಲಸಿಕೆಗಳನ್ನು ಪೂರೈಸಿದ್ದೇವೆ.

 ಈಗ, ನಾವು ಕೋವಿಡ್ ಮತ್ತು ಇತರ ಲಸಿಕೆಗಳ ಜಂಟಿ ಉತ್ಪಾದನೆಯಲ್ಲಿ ಆಫ್ರಿಕಾದ ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ.

 ಮೊಜಾಂಬಿಕ್ ಮತ್ತು ಮಲವಿಯಲ್ಲಿನ ಚಂಡಮಾರುತಗಳಿರಲಿ ಅಥವಾ ಮಡಗಾಸ್ಕರ್ನಲ್ಲಿನ ಪ್ರವಾಹವಾಗಲಿ, ಭಾರತವು ಯಾವಾಗಲೂ ಆಫ್ರಿಕಾದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ. 

ಗೌರವಾನ್ವಿತರೇ,

 ಲ್ಯಾಟಿನ್ ಅಮೆರಿಕದಿಂದ ಮಧ್ಯ ಏಷ್ಯಾದವರೆಗೆ;

 ಪಶ್ಚಿಮ ಏಷ್ಯಾದಿಂದ ಆಗ್ನೇಯ ಏಷ್ಯಾದವರೆಗೆ;

 ಇಂಡೋ-ಪೆಸಿಫಿಕ್ ನಿಂದ ಇಂಡೋ-ಅಟ್ಲಾಂಟಿಕ್ ವರೆಗೆ;

 ಭಾರತವು ಎಲ್ಲಾ ದೇಶಗಳನ್ನು ಒಂದು ಜಾಗತಿಕ ಕುಟುಂಬದ ಭಾಗವಾಗಿ ನೋಡುತ್ತದೆ.

 "ವಸುದೈವ ಕುಟುಂಬಕಂ" ಅಂದರೆ ಇಡೀ ಜಗತ್ತು ಒಂದು ಕುಟುಂಬ ಎಂಬ ಪರಿಕಲ್ಪನೆಯು ಸಾವಿರಾರು ವರ್ಷಗಳಿಂದ ನಮ್ಮ ಜೀವನ ವಿಧಾನದ ಅಡಿಪಾಯವಾಗಿದೆ.

 ಇದು ನಮ್ಮ ʻಜಿ -20ʼ ಅಧ್ಯಕ್ಷತೆಯ ಧ್ಯೇಯವಾಕ್ಯವೂ ಅದೇ ಆಗಿದೆ.

  ಜಾಗತಿಕ ದಕ್ಷಿಣದ ಕಾಳಜಿಗಳನ್ನು ಮುಖ್ಯವಾಹಿನಿಗೆ ತರಲು, ನಾವು ಮೂರು ಆಫ್ರಿಕನ್ ದೇಶಗಳು ಮತ್ತು ಹಲವಾರು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಅತಿಥಿ ರಾಷ್ಟ್ರಗಳಾಗಿ ಆಹ್ವಾನಿಸಿದ್ದೇವೆ.

 ʻಜಿ -20ʼ ಯಲ್ಲಿ ಆಫ್ರಿಕನ್ ಒಕ್ಕೂಟಕ್ಕೆ ಶಾಶ್ವತ ಸದಸ್ಯತ್ವವನ್ನು ಭಾರತ ಪ್ರಸ್ತಾಪಿಸಿದೆ. 

ಗೌರವಾನ್ವಿತರೇ,

 ಬಹುಧ್ರುವೀಯ ಜಗತ್ತನ್ನು ಬಲಪಡಿಸಲು ʻಬ್ರಿಕ್ಸ್ʼ ಮತ್ತು ಪ್ರಸ್ತುತ ಎಲ್ಲಾ ಮಿತ್ರ ರಾಷ್ಟ್ರಗಳು ಸಹಕರಿಸಬಹುದು ಎಂದು ನಾನು ನಂಬುತ್ತೇನೆ.

 ಇದರಿಂದ ಜಾಗತಿಕ ಸಂಸ್ಥೆಗಳನ್ನು ಪ್ರಾತಿನಿಧಿಕ ಮತ್ತು ಪ್ರಸ್ತುತವಾಗಿಸುವ ನಿಟ್ಟಿನಲ್ಲಿ ಅವುಗಳನ್ನು ಸುಧಾರಿಸುವಲ್ಲಿ ನಾವು ಪ್ರಗತಿ ಸಾಧಿಸಬಹುದು.

 ಭಯೋತ್ಪಾದನೆಯನ್ನು ಎದುರಿಸುವುದು, ಪರಿಸರ ಭದ್ರತೆ, ಹವಾಮಾನ ಕ್ರಮ, ಸೈಬರ್ ಭದ್ರತೆ, ಆಹಾರ ಮತ್ತು ಆರೋಗ್ಯ ಭದ್ರತೆ, ಇಂಧನ ಭದ್ರತೆ ಮತ್ತು ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳನ್ನು ನಿರ್ಮಿಸುವುದು ನಮ್ಮ ಸಾಮಾನ್ಯ ಹಿತಾಸಕ್ತಿಗಳಾಗಿವೆ. ಇದರಲ್ಲಿ ಸಹಕಾರಕ್ಕೆ ವಿಫುಲ ಅವಕಾಶಗಳಿವೆ.


 ʻಅಂತಾರಾಷ್ಟ್ರೀಯ ಸೌರ ಮೈತ್ರಿಕೂಟʼ; ʻಒಬ್ಬ ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್ʼ; ʻವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟʼ; ʻಒಂದು ಭೂಮಿ ಒಂದು ಆರೋಗ್ಯʼ; ʻಬಿಗ್ ಕ್ಯಾಟ್ ಅಲೈಯನ್ಸ್ʼ; ಮತ್ತು ʻಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ʼ ಮುಂತಾದ ನಮ್ಮ ಅಂತಾರಾಷ್ಟ್ರೀಯ ಉಪಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ನಾನು ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ.

 ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ವ್ಯವಸ್ಥೆಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ನಿಮ್ಮ ಅಭಿವೃದ್ಧಿಗೆ ಅದನ್ನು ಬಳಸಿಕೊಳ್ಳಲು ನಾನು ನಿಮ್ಮನ್ನು ಆಹ್ವಾನಿಸುತ್ತೇನೆ.

  ನಮ್ಮ ಅನುಭವ ಮತ್ತು ಸಾಮರ್ಥ್ಯಗಳನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ.

 ನಮ್ಮ ಜಂಟಿ ಪ್ರಯತ್ನಗಳು ಎಲ್ಲಾ ಸವಾಲುಗಳನ್ನು ಒಟ್ಟಿಗೆ ಎದುರಿಸಲು ನಮಗೆ ಹೊಸ ಆತ್ಮವಿಶ್ವಾಸವನ್ನು ನೀಡುತ್ತದೆ ಎಂಬ ವಿಶ್ವಾಸ ನನಗಿದೆ.

 ಈ ಅವಕಾಶಕ್ಕಾಗಿ ನಾನು ನಿಮ್ಮೆಲ್ಲರಿಗೂ, ವಿಶೇಷವಾಗಿ ಅಧ್ಯಕ್ಷರಾದ ರಮಾಫೋಸಾ ಅವರಿಗೆ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸುತ್ತೇನೆ. 
ಧನ್ಯವಾದಗಳು.

ಗಮನಿಸಿ- ಇದು ಪ್ರಧಾನ ಮಂತ್ರಿಯವರ ಮಾಧ್ಯಮ ಹೇಳಿಕೆಯ ಭಾವಾನುವಾದ. ಮೂಲ ಮಾಧ್ಯಮ ಹೇಳಿಕೆ ಹಿಂದಿಯಲ್ಲಿತ್ತು.

***


(Release ID: 1952002) Visitor Counter : 87