ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಜಿ20 ಆರೋಗ್ಯ ಸಚಿವರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ


“ಮುಂದಿನ ಆರೋಗ್ಯ ತುರ್ತು ಸ್ಥಿತಿಯನ್ನು ತಡೆಯಲು, ಸಿದ್ಧರಾಗಬೇಕು ಮತ್ತು ಸನ್ನದ್ಧಗೊಳ್ಳಬೇಕು”

“ಅಂತರರಾಷ್ಟ್ರೀಯ ಯೋಗ ದಿನದ ಜಾಗತಿಕ ಆಚರಣೆಯು ಸಮಗ್ರ ಆರೋಗ್ಯದ ಸಾರ್ವತ್ರಿಕ ಬಯಕೆಗೆ ಸಾಕ್ಷಿ”

“ಕ್ಷಯಮುಕ್ತಗೊಳಿಸುವ ಜಾಗತಿಕ ಗುರಿ 2030, ಇದಕ್ಕೂ ಮುನ್ನ ನಾವು ಟಿಬಿ ನಿರ್ಮೂಲನೆ ಸಾಧಿಸುವ ಹಾದಿಯಲ್ಲಿದ್ದೇವೆ”

“ಸಾರ್ವಜನಿಕರಿಗೆ ಉತ್ತಮವಾದ ನಾವೀನ್ಯತೆಗೆ ನಾವು ತೆರೆದುಕೊಂಡಿದ್ದೇವೆ, ಧನ ಸಹಾಯ ನಕಲು ಆಗುವುದನ್ನು ನಾವು ತಪ್ಪಿಸೋಣ, ತಂತ್ರಜ್ಞಾನದ ಸಮಾನ ಲಭ್ಯತೆಯನ್ನು ಸುಗಮಗೊಳಿಸೋಣ"

Posted On: 18 AUG 2023 3:30PM by PIB Bengaluru

ಗುಜರಾತ್ ನ ಗಾಂಧಿನಗರದಲ್ಲಿ ಆಯೋಜಿಸಿದ್ದ ಜಿ20 ಆರೋಗ್ಯ ಸಚಿವರ ಸಭೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಸಂದೇಶ ನೀಡಿದರು.

ನೆರೆದಿದ್ದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, 2.1 ದಶಲಕ್ಷ ವೈದ್ಯರು, 3.5 ದಶಲಕ್ಷ ದಾದಿಯರು, 1.3 ದಶಲಕ್ಷ ಅರೆ ವೈದ್ಯಕೀಯ ಸಿಬ್ಬಂದಿ, 1.6 ದಶಲಕ್ಷ ಔಷಧ ವಲಯದವರು ಮತ್ತು ಲಕ್ಷಾಂತರ ಮಂದಿ ಇತರೆ ಸಿಬ್ಬಂದಿ ಭಾರತದ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರ ಪರವಾಗಿ ಗಣ್ಯರನ್ನು ಸ್ವಾಗತಿಸುತ್ತಿರುವುದಾಗಿ ಹೇಳಿದರು.

ರಾಷ್ಟ್ರಪಿತನನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಗಾಂಧೀಜಿ ಅವರು ಆರೋಗ್ಯವನ್ನು ಎಷ್ಟು ಪ್ರಮುಖ ವಿಚಾರವೆಂದು ಪರಿಗಣಿಸಿದ್ದರು ಎಂದರೆ ಅವರು ಈ ವಿಷಯದ ಬಗ್ಗೆ “ಕೀ ಟು ಹೆಲ್ತ್ “ಎಂಬ ಪುಸ್ತಕ ಬರೆದಿದ್ದರು. ಆರೋಗ್ಯವಾಗಿರುವುದು ಎಂದರೆ ಒಬ್ಬರ ಮನಸ್ಸು ಮತ್ತು ದೇಹವನ್ನು ಸಾಮರಸ್ಯ, ಸಮತೋಲನ ಸ್ಥಿತಿಯಲ್ಲಿರಿಸುವುದಾಗಿದೆ. ಅಂದರೆ ಆರೋಗ್ಯ ಜೀವನದ ಅಡಿಪಾಯವಾಗಿದೆ ಎಂದು ಹೇಳಿದರು.

“ಆರೋಗ್ಯವೇ ಅಂತಿಮ ಸಂಪತ್ತು ಮತ್ತು ಉತ್ತಮ ಆರೋಗ್ಯದಿಂದ ಪ್ರತಿಯೊಂದು ಕಾರ್ಯವನ್ನು ಸಾಧಿಸಬಹುದು” ಎಂಬ ಸಂಸ್ಕೃತ ಶ್ಲೋಕವನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಪಠಿಸಿದರು.

ಕೋವಿಡ್ 19 ಸಾಂಕ್ರಾಮಿಕ ಆರೋಗ್ಯ ನಮ್ಮ ನಿರ್ಧಾರಗಳಲ್ಲಿ ಕೇಂದ್ರ ಸ್ಥಾನ ಪಡೆದಿರುತ್ತದೆ ಎಂಬುದನ್ನು ಸದಾ ನೆನಪಿಸುತ್ತಿರುತ್ತದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಅದು ಔಷಧವಿರಬಹುದು ಮತ್ತು ಲಸಿಕೆ ಪೂರೈಕೆ ಅಥವಾ ನಮ್ಮ ಜನರನ್ನು ವಾಪಸ್ ಕರೆತರುವುದೇ ಆಗಿರಬಹುದು ಈ ಸಂಕಷ್ಟದಲ್ಲಿ ಅಂತರರಾಷ್ಟ್ರೀಯ ಸಹಕಾರದ ಮೌಲ್ಯವನ್ನು ನಮಗೆ ತೋರಿಸಿಕೊಟ್ಟಿದೆ. ಕೋವಿಡ್ 19 ಲಸಿಕೆಯನ್ನು ಜಗತ್ತಿಗೆ ಒದಗಿಸಿದ ಭಾರತ ಸರ್ಕಾರದ ಮಾನವೀಯ ಉಪಕ್ರಮಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಜಾಗತಿಕ ದಕ್ಷಿಣ ಭಾಗವೂ ಒಳಗೊಂಡಂತೆ 100 ಕ್ಕೂ ಹೆಚ್ಚು ದೇಶಗಳಿಗೆ 300 ದಶಲಕ್ಷ ಡೋಡ್ ಲಸಿಕೆಯನ್ನು ಪೂರೈಸಲಾಗಿದೆ ಎಂದರು.

ಸಾಂಕ್ರಾಮಿಕ ಸಮಯದಲ್ಲಿ ಸ್ಥಿತಿಸ್ಥಾಪಕತ್ವವು ಪುಟಿದೇಳುವ ದೊಡ್ಡ ಪಾಠಗಳಲ್ಲಿ ಒಂದಾಗಿದ್ದು, ಜಾಗತಿಕ ಆರೋಗ್ಯ ವ್ಯವಸ್ಥೆಗಳು ಪುಟಿದೇಳುವಂತಿರಬೇಕು ಎಂದರು. “ಮುಂದಿನ ಆರೋಗ್ಯ ತುರ್ತು ಸ್ಥಿತಿಯನ್ನು ತಡೆಯಲು, ಸಿದ್ಧರಾಗಬೇಕು ಮತ್ತು ಸನ್ನದ್ಧರಾಗಬೇಕು”. ಇಂದಿನ ಅಂತರ್ ಸಂಪರ್ಕಿತ ಜಗತ್ತಿನಲ್ಲಿ ಇದು ವಿಶೇಷ ಮಹತ್ವ ಪಡೆಯಲಿದೆ. ನಾವು ಕಂಡಂತೆ ಸಾಂಕ್ರಾಮಿಕ ಸಮಯದಲ್ಲಿ ವಿಶ್ವದ ಒಂದು ಭಾಗದಲ್ಲಿನ ಆರೋಗ್ಯ ಸಮಸ್ಯೆಗಳು ವಿಶ್ವದ ಇತರೆ ಭಾಗಗಳ ಮೇಲೆ ಕಡಿಮೆ ಸಮಯದಲ್ಲಿ ಪರಿಣಾಮ ಬೀರಬಹುದು ಎಂದರು.

“ಭಾರತದಲ್ಲಿ ನಾವು ಸಮಗ್ರ ಮತ್ತು ಎಲ್ಲವನ್ನೊಳಗೊಂಡ ವಿಧಾನವನ್ನು ಅನುಸರಿಸುತ್ತೇವೆ” ಎಂದು ಪ್ರಧಾನಮಂತ್ರಿಯವರು ಹೇಳಿದರು. ನಾವು ಆರೋಗ್ಯ ಮೂಲ ಸೌಕರ್ಯವನ್ನು ವಿಸ್ತರಿಸುತ್ತಿದ್ದು, ಸಾಂಪ್ರದಾಯಿಕ ಪದ್ಧತಿಯ ಔಷಧಗಳನ್ನು ಉತ್ತೇಜಿಸುತ್ತಿದ್ದೇವೆ ಮತ್ತು ಕೈಗೆಟುವ ರೀತಿಯಲ್ಲಿ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸುತ್ತಿದ್ದೇವೆ. ಅಂತರರಾಷ್ಟ್ರೀಯ ಯೋಗ ದಿನ ಜಾಗತಿಕ ಆಚರಣೆಯ ಸಮಗ್ರ ಆರೋಗ್ಯದ ಸಾರ್ವತ್ರಿಕ ಬಯಕೆಗೆ ಸಾಕ್ಷಿಯಾಗಿದೆ. ಈ ವರ್ಷ 2023 ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ. ಸಿರಿಧಾನ್ಯ ಅಥವಾ ‘ಸಿರಿ ಅನ್ನ’ ದಿಂದ ಭಾರತದಲ್ಲಿ ತಿಳಿದಿರುವಂತೆ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ ಎಂದರು.

ಸಮಗ್ರ ಆರೋಗ್ಯ ಮತ್ತು ಸ್ವಾಸ್ತ್ಯ ಪ್ರತಿಯೊಬ್ಬರಲ್ಲೂ ಪುಟಿದೇಳುವ ಸ್ಥಿತಿಯನ್ನು ವೃದ್ಧಿಸಲು ನೆರವಾಗುತ್ತದೆ ಎಂದು ನಾವು ನಂಬುತ್ತೇವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿ ಗುಜರಾತ್ ನ ಜಾಮ್ ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರ ಸ್ಥಾಪಿಸಲಾಗಿದೆ. ಮತ್ತು ಜಿ20 ಆರೋಗ್ಯ ಸಚಿವರ ಸಭೆಯೊಂದಿಗೆ ಸಾಂಪ್ರದಾಯಿಕ ಔಷಧ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಶೃಂಗ ಸಭೆಯನ್ನು ನಡೆಸುವುದು ಅದರ ಸಾಮರ್ಥ್ಯ ಬಳಸಿಕೊಳ್ಳುವ ಪ್ರಯತ್ನಗಳನ್ನು ತೀವ್ರಗೊಳಿಸುತ್ತದೆ. ಸಾಂಪ್ರದಾಯಿಕ ಔಷಧದ ಜಾಗತಿಕ ಬಂಢಾರವನ್ನು ನಿರ್ಮಿಸುವುದು ನಮ್ಮ ಜಂಟಿ ಪ್ರಯತ್ನವಾಗಬೇಕು ಎಂದು ಹೇಳಿದರು.

ವಾಸ್ತವಿಕವಾಗಿ ಆರೋಗ್ಯ ಮತ್ತು ಪರಿಸರ ಒಂದಕ್ಕೊಂದು ಸಂಪರ್ಕ ಹೊಂದಿದ್ದು, ಶುದ್ಧ ವಾಯು, ಸುರಕ್ಷಿತ ಕುಡಿಯುವ ನೀರು, ಅಗತ್ಯವಿರುಷ್ಟು ಪೌಷ್ಟಿಕಾಂಶ ಮತ್ತು ಸುರಕ್ಷತೆಯ ಸೂರು ಆರೋಗ್ಯದ ಪ್ರಮುಖ ಅಂಶಗಳು. ಹವಾಮಾನ ಮತ್ತು ಆರೋಗ್ಯ ಉಪಕ್ರಮಗಳನ್ನು ಆರಂಭಿಸಿ ಪ್ರಮುಖ ಹೆಜ್ಜೆ ಇಟ್ಟಿರುವ ಗಣ್ಯರನ್ನು ಅವರು ಇದೇ ಸಂದರ್ಭದಲ್ಲಿ ಅಭಿನಂದಿಸಿದರು. ಸೂಕ್ಷ್ಮ ಜೀವಿ ಪ್ರತಿಬಂಧಕ [ಎಎಂಆರ್] ಭೀತಿಯನ್ನು ಎದುರಿಸಲು ಕೈಗೊಂಡ ಕ್ರಮಗಳು ಶ್ಲಾಘನೀಯ ಎಂದು ಅವರು ಹೇಳಿದರು

ಜಾಗತಿಕ ಸಾರ್ವಜನಿಕ ಆರೋಗ್ಯ ಮತ್ತು ಇಲ್ಲಿಯವರೆಗಿನ ಎಲ್ಲಾ ಔಷಧಿ ವಲಯದ ಪ್ರಗತಿಗೆ ಎಎಂಆರ್ ಗಂಭೀರ ಅಪಾಯವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಜಿ20 ಆರೋಗ್ಯ ಕಾರ್ಯತಂಡ “ಒಂದು ಆರೋಗ್ಯ”ಕ್ಕೆ ಆದ್ಯತೆ ನೀಡಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು. ಇಡೀ ಪರಿಸರ ವ್ಯವಸ್ಥೆಗೆ ಮಾನವ, ಪ್ರಾಣಿಗಳು, ಸಸ್ಯಗಳು, ಪರಿಸರಕ್ಕೆ ಉತ್ತಮ ಆರೋಗ್ಯ ಕಲ್ಪಿಸುವ “ಒಂದು ಭೂಮಿ, ಒಂದು ಆರೋಗ್ಯ” ನಮ್ಮ ದೃಷ್ಟಿಕೋನವಾಗಿದೆ. ಈ ಸಮಗ್ರ ದೃಷ್ಟಿಕೋನ ಯಾರನ್ನೂ ಹಿಂದೆ ಬಿಡಬಾರದು ಎಂಬ ಗಾಂಧೀಜಿ ಅವರ ಸಂದೇಶವನ್ನು ಹೊಂದಿದೆ ಎಂದು ಹೇಳಿದರು.

ಆರೋಗ್ಯ ಉಪಕ್ರಮಗಳಲ್ಲಿ ಸಾರ್ವಜನಿಕ ಸಹಭಾಗಿತ್ವದಿಂದ ಯಶಸ್ಸು ಗಳಿಸುವ ಪ್ರಮುಖ ವಿಷಯದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ಇದೇ ಕಾರಣದಿಂದ ನಾವು ಕುಷ್ಟರೋಗ ನಿರ್ಮೂಲನೆ ಅಭಿಯಾನದಲ್ಲಿ ಯಶಸ್ಸು ಸಾಧಿಸಿದ್ದೇವೆ ಎಂದರು. ಮಹತ್ವಾಕಾಂಕ್ಷೆಯ ಟಿಬಿ ನಿರ್ಮೂಲನೆ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಿ ಯಶಸ್ವಿಯಾಗಿದ್ದೇವೆ. ‘ನಯಿ ಕ್ಷಯ್ ಮಿತ್ರ’ ಅಥವಾ ‘ಟಿಬಿ ನಿರ್ಮೂಲನೆಗಾಗಿ ಸ್ನೇಹಿತರು’ ಎಂಬ ಅಭಿಯಾನದ ಮೂಲಕ ದೇಶದ ನಾಗರಿಕರು ಒಂದು ದಶಲಕ್ಷ ರೋಗಿಗಳನ್ನು ದತ್ತುಪಡೆಕೊಂಡಿದ್ದು, ಜನರಿಂಗಾಗಿಯೇ ಇದು ಸಾಧ್ಯವಾಗಿದೆ. “2030ಕ್ಕೆ ಜಾಗತಿಕವಾಗಿ ಕ್ಷಯಮುಕ್ತಗೊಳಿಸುವ ಗುರಿ ಇದ್ದು, ಇದಕ್ಕೂ ಮುನ್ನ ನಾವು ಟಿಬಿ ನಿರ್ಮೂಲನೆಯನ್ನು ಸಾಧಿಸುವ ಹಾದಿಯಲ್ಲಿದ್ದೇವೆ” ಎಂದು ಪ್ರಧಾನಮಂತ್ರಿಯವರು ಹೇಳಿದರು.

ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಆರೈಕೆ ವಲಯದಲ್ಲಿ ಡಿಜಿಟಲ್ ಪರಿಹಾರಗಳು ಮತ್ತು ನಾವೀನ್ಯತೆಯ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ದೂರದೂರದ ರೋಗಿಗಳಿಗೆ ಟೆಲಿ ಮೆಡಿಸನ್ ಮೂಲಕ ಗುಣಮಟ್ಟದ ಆರೈಕೆ ಪಡೆಯುವುದರಿಂದ ನಮ್ಮ ಪ್ರಯತ್ನಗಳನ್ನು ಸಮಾನ ಮತ್ತು ಅಂತರ್ಗತವಾಗಿಸಲು ಅವು ಉಪಯುಕ್ತ ಸಾಧನಗಳಾಗಿವೆ. ಇ-ಸಂಜೀವಿನಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಅವರು, ದೇಶದಲ್ಲಿ ಈ ದಿನಾಂಕದವರೆಗೆ 140 ದಶಲಕ್ಷ ಟೆಲಿ ಆರೋಗ್ಯ ಸಮಾಲೋಚನೆಗಳನ್ನು ನಡೆಸುವ ಮೂಲಕ ಭಾರತ ಈ ನಿಟ್ಟಿನಲ್ಲಿ ರಾಷ್ಟ್ರೀಯ ವೇದಿಕೆ ಒದಗಿಸಿದೆ ಎಂದರು.

ಮಾನವೀಯ ಇತಿಹಾಸದಲ್ಲಿ ಅತಿ ದೊಡ್ಡ ಲಸಿಕಾ ಅಭಿಯಾನ ನಡೆಸಲು ಭಾರತದ ಕೋವಿನ್ ವೇದಿಕೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ. ಇದು ಎರಡು ಶತಕೋಟಿ ಲಸಿಕಾ ಡೋಸ್ ಗಳನ್ನು ನಿರ್ವಹಿಸಿದೆ ಮತ್ತು ಜಾಗತಿಕವಾಗಿ ಲಸಿಕೆಗಳ ನಿರ್ವಹಣೆಯನ್ನು ನೈಜ ಸಮಯದಲ್ಲಿ ಪರಿಶೀಲಿಸಬಹುದಾದ ಪಾತ್ರವಹಿಸಿದೆ. ಡಿಜಿಟಲ್ ಆರೋಗ್ಯದ ಜಾಗತಿಕ ಉಪ್ರಕ್ರಮ ವಿವಿಧ ಡಿಜಿಟಲ್ ಆರೋಗ್ಯ ಉಪಕ್ರಮಗಳನ್ನು ಒಂದೇ ವೇದಿಕೆಯಡಿ ಒಟ್ಟುಗೂಡಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

“ಸಾರ್ವಜನಿಕರಿಗೆ ಒಳ್ಳೆಯದಾಗುವ ನಾವೀತ್ಯತೆಯನ್ನು ನಾವು ತೆರೆಯೋಣ. ಧನ ಸಹಾಯ ನಕಲು ಆಗುವುದನ್ನು ನಾವು ತಪ್ಪಿಸೋಣ, ತಂತ್ರಜ್ಞಾನದ ಸಮಾನ ಲಭ್ಯತೆಯನ್ನು ಸುಗಮಗೊಳಿಸೋಣ" ಎಂದು ಪ್ರಧಾನಮಂತ್ರಿಯವರು ಸ್ಪಷ್ಟ ಕರೆ ನೀಡಿದರು. ಈ ಉಪಕ್ರಮ ಜಾಗತಿಕ ದಕ್ಷಿಣದ ದೇಶಗಳಿಗೆ ಆರೋಗ್ಯ ರಕ್ಷಣೆ ಒದಗಿಸುವ ಪೂರೈಕೆ ಅಂತರವನ್ನು ತಗ್ಗಿಸಲು ಅನುವು ಮಾಡಿಕೊಡುತ್ತದೆ ಮತ್ತು ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯನ್ನು ಸಾಧಿಸುವ ನಮ್ಮ ಗುರಿಗೆ ನಮ್ಮನ್ನು ಒಂದು ಹೆಜ್ಜೆ ಹತ್ತಿರಕ್ಕೆ ಕರೆದೊಯ್ಯುತ್ತದೆ ಎಂದು ಅವರು ಹೇಳಿದರು.

 “ಎಲ್ಲರೂ ಸಂತೋವಾಗಿರಲಿ, ಎಲ್ಲರೂ ಅನಾರೋಗ್ಯದಿಂದ ಮುಕ್ತರಾಗಲಿ, ನಿಮ್ಮ ಚರ್ಚೆಗಳಲ್ಲಿ ನಿಮಗೆ ಯಶಸ್ಸು ಸಿಗಲಿ” ಎಂಬ ಹಾರೈಕೆಯೊಂದಿಗೆ ಭಾರತದ ಮಾನವೀಯತೆಗಾಗಿ ಪ್ರಾಚೀನ ಭಾರತೀಯ ಆಶಯದೊಂದಿಗೆ ಪ್ರಧಾನಮಂತ್ರಿಯವರು ತಮ್ಮ ಭಾಷಣ ಮುಕ್ತಾಯ ಮಾಡಿದರು.

 *****

 


(Release ID: 1951290) Visitor Counter : 155