ಪ್ರಧಾನ ಮಂತ್ರಿಯವರ ಕಛೇರಿ

ಸಾಂಪ್ರದಾಯಿಕ ಕರಕುಶಲ ಕಲೆಗಳಲ್ಲಿ ನುರಿತ ವ್ಯಕ್ತಿಗಳಿಗೆ ಅನುಕೂಲವಾಗುವಂತೆ 'ವಿಶ್ವಕರ್ಮ ಯೋಜನೆ' ಘೋಷಿಸಿದ ಪ್ರಧಾನಮಂತ್ರಿ


₹ 13000 - 15000 ಕೋಟಿ ಆರಂಭಿಕ ಹಂಚಿಕೆಯೊಂದಿಗೆ ಯೋಜನೆ ಆರಂಭವಾಗಲಿದೆ

ಸರಿಸುಮಾರು 13.5 ಕೋಟಿ ಬಡ ದೇಶವಾಸಿಗಳು ಮತ್ತು ಮಹಿಳೆಯರು ಬಡತನದ ವ್ಯವಸ್ಥೆಯಿಂದ ಹೊರಬಂದು ಹೊಸ ಮಧ್ಯಮ ವರ್ಗವನ್ನು ಪ್ರವೇಶಿಸಿದ್ದಾರೆ: ಶ್ರೀ ನರೇಂದ್ರ ಮೋದಿ

Posted On: 15 AUG 2023 1:42PM by PIB Bengaluru

77 ನೇ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಿಂದ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬರುವ ದಿನಗಳಲ್ಲಿ 'ವಿಶ್ವಕರ್ಮ ಯೋಜನೆ'ಯನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.  ಸಾಂಪ್ರದಾಯಿಕ ಕರಕುಶಲತೆಗಳಲ್ಲಿ ನುರಿತ ವ್ಯಕ್ತಿಗಳಿಗೆ ಅನುಕೂಲವಾಗುವಂತೆ ಯೋಜನೆಯನ್ನು ಯೋಜಿಸಲಾಗಿದೆ.

 “ಮುಂದಿನ ದಿನಗಳಲ್ಲಿ, ನಾವು ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ಒಂದು ಯೋಜನೆಯನ್ನು ಪ್ರಾರಂಭಿಸುತ್ತೇವೆ, ಸಾಂಪ್ರದಾಯಿಕ ಕರಕುಶಲತೆಯಲ್ಲಿ ನುರಿತ ವ್ಯಕ್ತಿಗಳಿಗೆ, ಅದರಲ್ಲೂ ವಿಶೇಷವಾಗಿ ಇತರ ಹಿಂದುಳಿದ ಸಮುದಾಯಕ್ಕೆ (ಒಬಿಸಿ) ಇದರಿಂದ ಬಹಳಷ್ಟು ಪ್ರಯೋಜನವಾಗಲಿದೆ. ನೇಕಾರರು, ಅಕ್ಕಸಾಲಿಗರು (ಸ್ವರ್ಣಕಾರ /ಚಿನಿವಾರ), ಕಮ್ಮಾರರು, ಅಗಸರು, ಕ್ಷೌರಿಕರು ಮತ್ತು ಇಂತಹ ಕುಟುಂಬಗಳನ್ನು ‘ವಿಶ್ವಕರ್ಮ ಯೋಜನೆ’ ಮೂಲಕ ಸಬಲೀಕರಣಗೊಳಿಸಲಾಗುವುದು, ಹಾಗೂ ಸುಮಾರು 13-15 ಸಾವಿರ ಕೋಟಿ ರೂಪಾಯಿಗಳ ಹಂಚಿಕೆಯೊಂದಿಗೆ ಈ ಯೋಜನೆ ಪ್ರಾರಂಭವಾಗಲಿದೆ” ಎಂದು ಪ್ರಧಾನಮಂತ್ರಿಯವರು ಹೇಳಿದರು.     

ಇದಕ್ಕೂ ಮುನ್ನ ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ಕಾರದ ಬಡತನ ನಿರ್ಮೂಲನೆ ಪ್ರಯತ್ನಗಳ ಬಗ್ಗೆ ಮಾಹಿತಿ ನೀಡಿದರು. “ಮೊದಲ ಐದು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ವಿವಿಧ ಪ್ರಯತ್ನಗಳ ಫಲವಾಗಿ 13.5 ಕೋಟಿ ಬಡ ದೇಶವಾಸಿಗಳು ಮತ್ತು ಮಹಿಳೆಯರು ಬಡತನದ ವ್ಯವಸ್ಥೆಯಿಂದ ಹೊರಬಂದು ಹೊಸ ಮಧ್ಯಮ ವರ್ಗವನ್ನು ಪ್ರವೇಶಿಸಿದ್ದಾರೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಈ 13.5 ಕೋಟಿ ಜನರಿಗೆ ಬಡತನದ ಸಂಕಷ್ಟದಿಂದ ಮೇಲೆರಲು ನೆರವಾದ ವಿವಿಧ ಯೋಜನೆಗಳ ಕುರಿತು ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ತಿಳಿಸಿದರು.  ಇವುಗಳಲ್ಲಿ ಪ್ರಮುಖವಾಗಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಮೂಲಕ ಬೀದಿ ವ್ಯಾಪಾರಿಗಳಿಗೆ ₹ 50,000 ಕೋಟಿ ಒದಗಿಸಿರುವುದು ಮತ್ತು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮೂಲಕ ದೇಶದಾದ್ಯಂತ ರೈತರ ಖಾತೆಗಳಿಗೆ ಒಟ್ಟು ₹ 2.5 ಲಕ್ಷ ಕೋಟಿಯಷ್ಟು ಹಣವನ್ನು ನೇರವಾಗಿ ಜಮಾ ಮಾಡಿರುವುದು ಸೇರಿದೆ. 
 

 ****



(Release ID: 1949130) Visitor Counter : 128