ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಗುಜರಾತ್‌ನ ಗಾಂಧಿನಗರದಲ್ಲಿ ಸೆಮಿಕಾನ್ ಇಂಡಿಯಾ 2023 ಉದ್ಘಾಟಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ
ಉದ್ಯಮ, ಶೈಕ್ಷಣಿಕ ರಂಗ ಮತ್ತು ಸರ್ಕಾರದ ಜಾಗತಿಕ ನಾಯಕರು ಸೆಮಿಕಾನ್ ಇಂಡಿಯಾದ 2ನೇ ಆವೃತ್ತಿಯಲ್ಲಿ ಭಾಗಿ
Posted On:
29 JUL 2023 9:29AM by PIB Bengaluru
ಭಾರತವು ವಿದ್ಯುನ್ಮಾನ ಉತ್ಪನ್ನಗಳ ತಯಾರಿಕೆ ಮೇಲೆ ಗಮನ ಕೇಂದ್ರೀಕರಿಸಿ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸುತ್ತಿದೆ. ಈ ಕ್ರಾಂತಿಯ ಭಾಗವಾಗಿ, ಸೆಮಿಕಂಡಕ್ಟರ್ ಗಳು ಅನಿವಾರ್ಯ ಪಾತ್ರ ವಹಿಸುತ್ತಿವೆ. ಇವು ಸಂವಹನ(ಸಂಪರ್ಕ), ರಕ್ಷಣೆ, ವಾಹನಗಳು ಮತ್ತು ಕಂಪ್ಯೂಟಿಂಗ್ ಸಾಧನಗಳು ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಉಪಯೋಗಗಳನ್ನು ಹೊಂದಿವೆ. ದೇಶದ ಪ್ರಗತಿಯ ಪ್ರಮುಖ ಆಧಾರಸ್ತಂಭ ಬಲಪಡಿಸುವ ನಿಟ್ಟಿನಲ್ಲಿ ‘ಎಲೆಕ್ಟ್ರಾನಿಕ್ಸ್’ ಮತ್ತು ‘ಆತ್ಮನಿರ್ಭರ ಭಾರತ’ ಕಟ್ಟುವ ದೃಷ್ಟಿಕೋನ ಬಲಪಡಿಸಲು ಭಾರತವು ತನ್ನ ಮೌಲ್ಯ ಸರಪಳಿ ವಿಸ್ತರಿಸಲು ಮತ್ತು ಅಗಾಧವಾಗಿಸಲು ಮತ್ತು ವಿಶ್ವ ದರ್ಜೆಯ ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಸುಗಮಗೊಳಿಸಲು ಸಜ್ಜಾಗಿದೆ.
ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನೆಯ ಕೇಂದ್ರವಾಗಿ ಭಾರತವನ್ನು ಸಾಕಾರಗೊಳಿಸಲು, ಕಳೆದ ವರ್ಷ ಬೆಂಗಳೂರಿನಲ್ಲಿ ಸೆಮಿಕಾನ್ ಇಂಡಿಯಾ 2022 ಸಮ್ಮೇಳನ ಆಯೋಜಿಸಲಾಯಿತು. ಗುಜರಾತ್‌ನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ‘ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ವೇಗವರ್ಧಿಸುವುದು’ ಎಂಬ ಧ್ಯೇಯವಾಕ್ಯದೊಂದಿಗೆ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಸೆಮಿಕಾನ್ ಇಂಡಿಯಾ 2023 ಸಮ್ಮೇಳನವನ್ನು ಆಯೋಜಿಸಿತು. ಸಮ್ಮೇಳನದಲ್ಲಿ 23ಕ್ಕೂ ಹೆಚ್ಚು ದೇಶಗಳ 8,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಸೆಮಿಕಾನ್ ಇಂಡಿಯಾ 2023ರಲ್ಲಿ ಪ್ರಮುಖ ಜಾಗತಿಕ ಕಂಪನಿಗಳಾದ ಮೈಕ್ರಾನ್ ಟೆಕ್ನಾಲಜಿ, ಅಪ್ಲೈಡ್ ಮೆಟೀರಿಯಲ್ಸ್, ಫಾಕ್ಸ್‌ಕಾನ್, ಕ್ಯಾಡೆನ್ಸ್ ಮತ್ತು ಎಎಮ್‌ಡಿ ಮತ್ತು ದಿ ಇಂಡಸ್ಟ್ರಿ ಅಸೋಸಿಯೇಷನ್, ಸೆಮಿಕಂಡಕ್ಟರ್ ವಲಯದ ಉದ್ಯಮ ನಾಯಕರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.
3 ದಿನಗಳ ಸೆಮಿಕಾನ್ ಇಂಡಿಯಾ 2023 ಉದ್ಘಾಟಿಸಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿ, ಎಲೆಕ್ಟ್ರಾನಿಕ್ಸ್ ಸರಕುಗಳ ಉತ್ಪಾದನೆ ಮೇಲೆ ಗಮನ ಕೇಂದ್ರೀಕರಿಸರುವ ಭಾರತವು, ಜನರ ದೈನಂದಿನ ಬದುಕಿನಲ್ಲಿ ಸೆಮಿಕಂಡಕ್ಟರ್ ಗಳ ಬಳಕೆ ಹೇಗೆ ಹಾಸುಹೊಕ್ಕಾಗಿದೆ, ಸೆಮಿಕಾನ್ ಇಂಡಿಯಾ ಕಾರ್ಯಕ್ರಮದ ಅಡಿ ಭಾರತವು, ಹೇಗೆ ಸೆಮಿಕಂಡಕ್ಟರ್ ಉತ್ಪಾದನಾ ತಾಣವಾಗಿ ರೂಪಿಸಲು ಗಮನ ನೀಡಿದೆ ಅಥವಾ ಬದ್ಧವಾಗಿದೆ ಎಂಬುದನ್ನು ವಿವರಿಸಿದರು. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ಸಂಪರ್ಕ ಮತ್ತು ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಮಾತನಾಡಿ, ಮಾನ್ಯ ಪ್ರಧಾನ ಮಂತ್ರಿ ಅವರು ಎಲೆಕ್ಟ್ರಾನಿಕ್ಸ್ ಸರಕುಗಳ ಉತ್ಪಾದನೆ ವಿಶೇಷವಾಗಿ ಸೆಮಿಕಂಡಕ್ಟರ್ ಗಳ ಉತ್ಪಾದನೆ ಮತ್ತು ಪ್ರತಿಯೊಂದು ವಲಯವನ್ನು ಪರಿವರ್ತಿಸಲು ವಹಿಸುತ್ತಿರುವ ಪಾತ್ರದ ಕುರಿತು ಬೆಳಕು ಚೆಲ್ಲಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಅವರು ಈ ಸಭೆ ಉದ್ದೇಶಿಸಿ ಮಾತನಾಡಿ, ಉತ್ಪಾದನಾ ವಲಯ ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಗಳ ಉತ್ಪಾದನೆ ಬಗ್ಗೆ ಮಾನ್ಯ ಪ್ರಧಾನ ಮಂತ್ರಿ ಹೊಂದಿರುವ ದೂರದೃಷ್ಟಿಯ ಮಾರ್ಗದರ್ಶನವನ್ನು ಶ್ಲಾಘಿಸಿದರು.
ವಿವಿಧ ಜಾಗತಿಕ ಉದ್ಯಮದ ನಾಯಕರು “ಭಾರತದ ಸೆಮಿಕಂಡಕ್ಟರ್ ಉತ್ಪಾದನೆ ಪರಿಸರ ವ್ಯವಸ್ಥೆಯನ್ನು ವೇಗವರ್ಧಿಸುವ” ವಿಷಯದ ಬಗ್ಗೆ ಮುಖ್ಯ ಭಾಷಣ ಮಾಡಿದರು. ಮೈಕ್ರಾನ್ ಪರವಾಗಿ ಮಾತನಾಡಿದ ಶ್ರೀ ಸಂಜಯ್ ಮೆಹ್ರೋತ್ರಾ, ಭಾರತವು ತನ್ನ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ವಿಸ್ತರಿಸಲು ಮಹತ್ವದ ಅವಕಾಶಗಳನ್ನು ಹೊಂದಿದೆ ಎಂದರು. ಸೆಮಿಕಂಡಕ್ಟರ್ ಉದ್ಯಮದ ಪ್ರಮುಖ ಕಂಪನಿ ಮೈಕ್ರಾನ್, ಭಾರತದ ಸೆಮಿಕಂಡಕ್ಟರ್ ಉತ್ಪಾದನೆ ಪ್ರಯಾಣದ ಒಂದು ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತದೆ ಎಂದರು. ಸೆಮಿಕಂಡಕ್ಟರ್ ಉದ್ಯಮದಲ್ಲಿ ಭಾರತದ ಪ್ರಮುಖ ಸಾಮರ್ಥ್ಯಗಳು ಬಲವಾದ ಸರ್ಕಾರದ ಬೆಂಬಲ ಮತ್ತು ಉಪಕ್ರಮಗಳು, ತಂತ್ರಜ್ಞಾನ ಪ್ರತಿಭೆಗಳ ಒಂದು ಸಮೂಹ, ಬಹುರಾಷ್ಟ್ರೀಯ ಕಂಪನಿಗಳ ಉಪಸ್ಥಿತಿ ಮತ್ತು ನಡೆಯುತ್ತಿರುವ ಡಿಜಿಟಲ್ ಇಂಡಿಯಾ ರೂಪಾಂತರವನ್ನು ಒಳಗೊಂಡಿವೆ ಎಂದು ಕ್ಯಾಡೆನ್ಸ್ ಅಧ್ಯಕ್ಷ ಮತ್ತು ಸಿಇಒ ಶ್ರೀ ಅನಿರುದ್ಧ್ ದೇವಗನ್ ಹೇಳಿದ್ದಾರೆ.
ಕೃತಕ ಬುದ್ಧಿಮತ್ತೆ, ಶುದ್ಧ ಇಂಧನ ಉಪಕ್ರಮಗಳು ಮತ್ತು ಕ್ಲೌಡ್ ಕಂಪ್ಯೂಟಿಂಗ್, ಸುಧಾರಿತ ದತ್ತಾಂಶ ಸೃಜನೆ ಮತ್ತು ವರ್ಗಾವಣೆ ವ್ಯವಸ್ಥೆಗಳ ಮೂಲಕ ಡಿಜಿಟಲ್ ರೂಪಾಂತರದಂತಹ ಅಂಶಗಳಿಂದ ಸೆಮಿಕಂಡಕ್ಟರ್ ಉದ್ಯಮವು ಮುನ್ನಡೆಯುವ ಬೆಳವಣಿಗೆ ಕಾಣುತ್ತಿದೆ ಎಂದು ಎಸ್‌ಪಿಜಿ ಅಧ್ಯಕ್ಷ ಶ್ರೀ ಪ್ರಭು ರಾಜಾ ಹೇಳಿದ್ದಾರೆ. ಫ್ಲ್ಯಾಶ್ ಮೆಮೊರಿ ಮತ್ತು ಅಗತ್ಯ ದತ್ತಾಂಶ ಸಂಗ್ರಹ ಮೂಲಸೌಕರ್ಯದ ಪ್ರಮುಖ ಕಂಪನಿಯಾದ ವೆಸ್ಟರ್ನ್ ಡಿಜಿಟಲ್ ಅಧ್ಯಕ್ಷ ಶ್ರೀ ಶಿವ ಶಿವರಾಮ್ ಮಾತನಾಡಿ, ಭಾರತದಲ್ಲಿ ಸೆಮಿಕಂಡಕ್ಟರ್ ಪೂರೈಕೆ ಸರಪಳಿ ಸ್ಥಾಪಿಸಲು, ಬೌದ್ಧಿಕ ಆಸ್ತಿ ಸೃಜನೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಎಎಮ್‌ಡಿ ಕಂಪನಿಯ ಮುಖ್ಯತಂತ್ರಜ್ಞಾನ ಅಧಿಕಾರಿ ಶ್ರೀ ಮಾರ್ಕ್ ಪ್ಯಾಪರ್ ಮಾಸ್ಟರ್ ಮಾತನಾಡಿ, ಕೃತಕ ಬುದ್ಧಿಮತ್ತೆಯ ಪ್ರಭಾವ ಮತ್ತು ಭಾರತದಲ್ಲಿ ಅದಕ್ಕಿರುವ ಅದ್ಭುತ ಸಾಮರ್ಥ್ಯ ಕುರಿತು ವಿವರ ನೀಡಿದರು. ಈ ವಲಯದಲ್ಲಿ ಹೊಸತನವನ್ನು ಸಕ್ರಿಯವಾಗಿ ಚಾಲನೆ ಮಾಡಲಾಗುತ್ತಿದೆ, ಮುಂದಿನ 5 ವರ್ಷಗಳಲ್ಲಿ ಕಂಪನಿಯು ಭಾರತದಲ್ಲಿ 400 ದಶಲಕ್ಷ ಡಾಲರ್ ಹೂಡಿಕೆ ಮಾಡುತ್ತದೆ, ಎಎಮ್‌ಡಿ ಭಾರತದಲ್ಲಿ ವಿಶ್ವದ ಅತಿದೊಡ್ಡ ವಿನ್ಯಾಸ ಕೇಂದ್ರ ಸ್ಥಾಪಿಸುತ್ತದೆ ಎಂದರು. ಫಾಕ್ಸ್‌ಕಾನ್ ಮುಖ್ಯ ಕಾರ್ಯತಂತ್ರ ಅಧಿಕಾರಿ ಶ್ರೀ ಎಸ್.ವೈ. ಚಿಯಾಂಗ್ ಅವರು (Moore's Law era) ಮೂರೆ ಅವರ ಕಾನೂನು ಯುಗದ ನಂತರದ ಸವಾಲುಗಳು ಮತ್ತು ಅವಕಾಶಗಳನ್ನು ಪ್ರಸ್ತುತಪಡಿಸಿದರು. ಸಿಸ್ಟಮ್ ವಿನ್ಯಾಸ ಮತ್ತು ವಿಭಾಗ, ಪ್ಯಾಕೇಜಿಂಗ್ ಮತ್ತು ಪಿಸಿಬಿ ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಮತ್ತು ಐಒಟಿಯಂತಹ ಅಪ್ಲಿಕೇಶನ್‌ಗಳ ಅಗತ್ಯತೆಗಳನ್ನು ಪೂರೈಸುವಲ್ಲಿ ಸೆಮಿಕಂಡಕ್ಟರ್ ಉದ್ಯಮಕ್ಕೆ ಅಗತ್ಯವಾದ ಉದಯೋನ್ಮುಖ ಅವಶ್ಯಕತೆಗಳ ಬಗ್ಗೆ ಅವರು ಗಮನ ಸೆಳೆದರು.
ಹೆಚ್ಚುವರಿಯಾಗಿ, ಸೆಮಿಕಂಡಕ್ಟರ್ ಮತ್ತು ಡಿಸ್ ಪ್ಲೇ(ಪ್ರದರ್ಶನ) ಉತ್ಪಾದನಾ ಪರಿಸರ ವ್ಯವಸ್ಥೆ ಒಳಗೊಂಡ ವಿವಿಧ ಸಂಬಂಧಿತ ವಿಷಯಗಳ ಬಗ್ಗೆ ಉದ್ದೇಶಪೂರ್ವಕ ಸಂವಾದ ಚರ್ಚೆಗಳನ್ನು ಆಯೋಜಿಸಲಾಗಿತ್ತು. ಡಾ. ಮನೀಶ್ ಹೂಡಾ, ಎಸ್‌ಸಿಎಲ್; ಶ್ರೀ ವಿವೇಕ್ ಶರ್ಮಾ, ಸ್ಟಿಮೈಕ್ರೊಎಲೆಕ್ಟ್ರಾನಿಕ್ಸ್; ಡಾ. ಯೀ ಸ್ಕೈ ಚಾಂಗ್, ತಂತ್ರಜ್ಞಾನ ರಾಯಭಾರಿ, ಐಸಿಇಎ; ಶ್ರೀ ರೋಹಿತ್ ಗಿಧರ್, ಇನ್ಫಿನಿಯಾನ್ ಟೆಕ್ನಾಲಜೀಸ್; ಶ್ರೀ ಶ್ರೀರಾಮ್ ರಾಮಕೃಷ್ಣನ್, ಬಿಸಿನೆಸ್ ಹೆಡ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್; ಹಿರಾನಂದಾನಿ ಸಮೂಹದ ಶ್ರೀ ದರ್ಶನ್ ಹಿರಾನಂದಾನಿ ಅವರು ಭಾರತದಲ್ಲಿ ಕಾಂಪೌಂಡ್ ಸೆಮಿಕಂಡಕ್ಟರ್ ಗಳ ಉತ್ಪಾದನೆ ಅನುಕೂಲಗಳ ಬಗ್ಗೆ ಚರ್ಚಿಸಿದರು. ಇವಿಎಸ್‌ಗಾಗಿ ಸಿಲಿಕಾನ್ ಕಾರ್ಬೈಡ್‌ಗೆ ಆದ್ಯತೆ ನೀಡಲು ಮತ್ತು ಸಿಸ್ಟಮ್ ವಿನ್ಯಾಸ ಮತ್ತು ಗ್ಯಾಲಿಯಮ್ ನೈಟ್ರೈಡ್ ಸಂಶೋಧನೆಯ ಮೇಲೆ ಗಮನ ಕೇಂದ್ರೀಕರಿಸಲು ಭಾಷಣಕಾರರು ಸಲಹೆ ನೀಡಿದರು.
ಡಿಸ್ ಪ್ಲೇ ಉತ್ಪಾದನೆ ಡೈನಾಮಿಕ್ಸ್ ಕುರಿತ ಸಂವಾದ ಚರ್ಚೆಯಲ್ಲಿ ಉದ್ಯಮ ತಜ್ಞರಾದ ಗ್ರಾಂಟ್ವುಡ್ ಟೆಕ್ನಾಲಜೀಸ್ ನ ಡಾ. ಜಿ. ರಾಜೇಶ್ವರನ್, ಶ್ರೀ ಸೂರಜ್ ರೆಂಗರಾಜನ್, ಅಪ್ಲೈಡ್ ಮೆಟೀರಿಯಲ್ಸ್, ಡಾ. ವೈ.ಜೆ. ಚೆನ್, ಸಿಇಒ, ವೇದಾಂತ ಡಿಸ್ ಪ್ಲೇ ಲಿಮಿಟೆಡ್, ಶ್ರೀ ಅಚಿಂಥ್ಯಾ ಭೋವ್ಮಿಕ್, ಅಧ್ಯಕ್ಷ, ಸಿಡ್, ಶ್ರೀ ಅಜಿತ್ ಅರಾಸ್, ಇವಿಪಿ, ಶಾರ್ಪ್, ಡಿಸ್ ಪ್ಲೇ ಕ್ಷೇತ್ರದ ಬೆಳವಣಿಗೆಯ ಪಥವನ್ನು ಅರ್ಥ ಮಾಡಿಕೊಳ್ಳುವ ಅಗತ್ಯ, ಉತ್ಪಾದನೆಯ ಪ್ರಮಾಣದ ಆರ್ಥಿಕತೆಗಳು ಮತ್ತು ಎಲ್ಸಿಡಿ ಮತ್ತು ಒಎಲ್ಇಡಿ ಜೋಡಣೆಯ ಉತ್ಪಾದನೆ ಮೂಲಗಳ ಕುರಿತು ಮಾಹಿತಿ ನೀಡಿದರು.
ಇನ್ವೆಸ್ಟ್ ಇಂಡಿಯಾ ಕಂಪನಿಯ ಎಂಡಿ ಮತ್ತು ಸಿಇಒ ಶ್ರೀಮತಿ ನಿವೃತ್ತಿ ರೈ, ಸುಸ್ಥಿರ ಸೆಮಿಕಂಡಕ್ಟರ್ ಗಳ ಉತ್ಪಾದನೆ, ಭಾರತದಲ್ಲಿನ ಹೂಡಿಕೆ ಅವಕಾಶಗಳು ಮತ್ತು ಸುಸ್ಥಿರತೆಯ ಗುರಿಗಳನ್ನು ಹೇಗೆ ಸ್ಪರ್ಧಾತ್ಮಕ ಪ್ರಯೋಜನವಾಗಿ ಪರಿವರ್ತಿಸಬಹುದು ಎಂಬುದರ ಕುರಿತು ಮಾತನಾಡಿದರು. “ಐಎಸ್ಎಂ: ಭಾರತಕ್ಕೆ ಸೆಮಿಕಂಡಕ್ಟರ್ ಹೂಡಿಕೆಗಳನ್ನು ಆಕರ್ಷಿಸುವುದು” ವಿಷಯ ಕುರಿತು ನಡೆದ ಸಂವಾದದಲ್ಲಿ ಸೆಮಿ ಕಂಪನಿಯ ಶ್ರೀ ಅಜಿತ್ ಮನೋಚಾ, ಶ್ರೀ ಸಿರಿಲ್ ಪ್ಯಾಟ್ರಿಕ್ ಫರ್ನಾಂಡೀಸ್, ಸಿಟಿಒ & ಎಂಡಿ, ಹಿಟ್, ಶ್ರೀ ಅಜಯ್ ಸಾಹ್ನಿ, ಮಾಜಿ ಕಾರ್ಯದರ್ಶಿ, ಮೀಟಿ, ಶ್ರೀ ನೀಲ್ಕಾಂತ್ ಮಿಶ್ರಾ, ಮುಖ್ಯ ಅರ್ಥಶಾಸ್ತ್ರಜ್ಞ, ಆಕ್ಸಿಸ್ ಬ್ಯಾಂಕ್, ಶ್ರೀ ಸುನೀತ್ ಶುಕ್ಲಾ, ಇಫ್ಸಿ ಮತ್ತು ಕೆ. ಮುಕುಂದನ್, ಎನ್ಐಐಎಫ್ ಅವರು ತಂತ್ರಜ್ಞಾನ ಹಣಕಾಸು ನಿರೀಕ್ಷೆಗಳು ಮತ್ತು ಭಾರತ ಸರ್ಕಾರದ ಕಾರ್ಯವಿಧಾನಗಳ ಬಗ್ಗೆ ಚರ್ಚಿಸಿದರು. ವ್ಯಾಪಾರ ಯೋಜನೆ ಮತ್ತು ಕಾರ್ಯಾಚರಣೆ ಯೋಜನೆಯ ಕಾರ್ಯಸಾಧ್ಯತೆಯು ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ಐಎಸ್‌ಎಂ) ಭವಿಷ್ಯದ ಪ್ರಸ್ತಾಪಗಳ ಮೌಲ್ಯಮಾಪನಕ್ಕಾಗಿ ಮಾರ್ಗದರ್ಶಿ ಸೂತ್ರಗಳಾಗಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಅವರು ಪ್ರಸ್ತಾಪಿಸಿದರು.
ಜಾಗತಿಕ ಸೆಮಿಕಂಡಕ್ಟರ್ ವಲಯದ ಬೆಳವಣಿಗೆಯಲ್ಲಿ ಭಾರತವು ಬಹುದೊಡ್ಡ ಪಾತ್ರ ಹೊಂದಿದೆ. ಸೆಮಿಕಾನ್ ಇಂಡಿಯಾ 2023 ಪ್ರತಿನಿಧಿಗಳಿಗೆ, ಭಾರತದಲ್ಲಿ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆ ರೂಪಿಸುವ ವಿವಿಧ ಅಂಶಗಳ ಬಗ್ಗೆ ಉದ್ದೇಶಪೂರ್ವಕವಾಗಿ ಚರ್ಚಿಸಲು ಸೂಕ್ತ ವೇದಿಕೆ ಒದಗಿಸಿತು.
****
(Release ID: 1943954)
Visitor Counter : 136