ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರೀಯ ರೋಜ್ ಗಾರ್ ಮೇಳ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ


ಹಲವು ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಹೊಸದಾಗಿ ನೇಮಕಗೊಂಡಿರುವ 70,000 ಕ್ಕೂ ಅಧಿಕ ಮಂದಿಗೆ ನೇಮಕಾತಿ ಪತ್ರ ವಿತರಣೆ

“ಸರ್ಕಾರದಿಂದ ನೇಮಕಗೊಳ್ಳಲು ಇಂದಿಗಿಂತ ಉತ್ತಮ ಸಮಯವಿಲ್ಲ’’

“ನಿಮ್ಮ ಒಂದು ಸಣ್ಣ ಪ್ರಯತ್ನ ಬೇರೆಯವರ ಜೀವನದಲ್ಲಿ ಭಾರಿ ಬದಲಾವಣೆ ತರಬಲ್ಲದು’’

“ಭಾರತವು ಇಂದು ಬ್ಯಾಂಕಿಂಗ್ ವಲಯವನ್ನು ಪ್ರಬಲವೆಂದು ಪರಿಗಣಿಸುವ ದೇಶಗಳಲ್ಲಿ ಒಂದಾಗಿದೆ’’

“ನಷ್ಟ ಮತ್ತು ಎನ್ ಪಿಎ ಕಾರಣಗಳಿಂದ ಹೆಸರುವಾಸಿಯಾದ ಬ್ಯಾಂಕುಗಳು ತಮ್ಮ ದಾಖಲೆಯ ಲಾಭದ ಬಗ್ಗೆ ಚರ್ಚೆಯಾಗುತ್ತಿದೆ’’

“ಬ್ಯಾಂಕಿಂಗ್ ವಲಯದ ಜನರು ಎಂದಿಗೂ ನನ್ನನ್ನು ಅಥವಾ ನನ್ನ ದೂರದೃಷ್ಟಿಯನ್ನು ನಿರಾಸೆಗೊಳಿಸಿಲ್ಲ’’

“ಸಾಮೂಹಿಕ ಪ್ರಯತ್ನಗಳನ್ನು ಬಡತನವನ್ನು ಭಾರತದಿಂದ ಸಂಪೂರ್ಣ ನಿರ್ಮೂಲನೆ ಸಾಧ್ಯ. ಮತ್ತು ಅದರಲ್ಲಿ ದೇಶದ ಪ್ರತಿಯೊಬ್ಬ ಸರ್ಕಾರಿ ಉದ್ಯೋಗಿಯ ಬಹುದೊಡ್ಡ ಪಾತ್ರವಿರಲಿದೆ’’

Posted On: 22 JUL 2023 12:01PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ರಾಷ್ಟ್ರೀಯ ರೋಜ್ ಗಾರ್ ಮೇಳವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು ಮತ್ತು ಸರ್ಕಾರದ ನಾನಾ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಹೊಸದಾಗಿ ನೇಮಕಗೊಂಡಿರುವ 70,000 ಕ್ಕೂ ಅಧಿಕ ಮಂದಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ದೇಶಾದ್ಯಂತ ಹೊಸದಾಗಿ ನೇಮಕಗೊಂಡಿರುವವರು ಕಂದಾಯ ಇಲಾಖೆ, ಹಣಕಾಸು ಸೇವೆಗಳು, ಅಂಚೆ, ಶಾಲಾ ಶಿಕ್ಷಣ, ಉನ್ನತ ಶಿಕ್ಷಣ, ರಕ್ಷಣಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳು, ಜಲಸಂಪನ್ಮೂಲ, ಸಿಬ್ಬಂದಿ ಮತ್ತು ತರಬೇತಿ, ಗೃಹ ವ್ಯವಹಾರಗಳ ಸಚಿವಾಲಯ ಸೇರಿದಂತೆ ಹಲವು ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೇರ್ಪಡೆಯಾಗಲಿದ್ದಾರೆ. ಪ್ರಧಾನಮಂತ್ರಿಗಳ ಭಾಷಣದ ವೇಳೆ ದೇಶಾದ್ಯಂತ 44 ಸ್ಥಳಗಳೊಂದಿಗೆ ಸಂಪರ್ಕ ಹೊಂದಲಾಗಿತ್ತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, 1947ರಲ್ಲಿ ಮೊದಲ ಬಾರಿಗೆ ಸಂವಿಧಾನ ಸಭೆಯು ತಿರಂಗವನ್ನು ಅದರ ಪ್ರಸ್ತುತ ರೂಪದಲ್ಲಿ ಅಂಗೀಕರಿಸಿದ ದಿನವಾದ ಇಂದು ಹೊಸದಾಗಿ ನೇಮಕಗೊಂಡಿರುವ ಯುವಜನತೆಗೆ ಸ್ಮರಣೀಯ ದಿನ ಮಾತ್ರವಲ್ಲದೆ ರಾಷ್ಟ್ರಕ್ಕೆ ಐತಿಹಾಸಿಕ ದಿನವಾಗಿದೆ ಎಂದು ಹೇಳಿದರು. ದೇಶದ ಹೆಸರನ್ನು ಮುಂದಕ್ಕೆ ಕೊಂಡೊಯ್ಯಲು ಉತ್ತೇಜಿಸಿದ ಈ ಮಹತ್ವದ ದಿನದಂದು ಹೊಸ ನೇಮಕಾತಿಗಳು ಸರ್ಕಾರಿ ಸೇವೆಗಳಿಗೆ ತಮ್ಮ ನೇಮಕಾತಿ ಪತ್ರವನ್ನು ಸ್ವೀಕರಿಸುತ್ತಿರುವುದು ಅತ್ಯಂತ ಸ್ಫೂರ್ತಿದಾಯಕ ಸಂಗತಿಯಾಗಿದೆ ಎಂದು ಪ್ರಧಾನಿ ಹೇಳಿದರು. ಭಾರತವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಮಯದಲ್ಲಿ ವಿಕಸಿತ ಭಾರತದ ಗುರಿಯ ಸಾಧನೆಗೆ ಕೊಡುಗೆ ನೀಡುವ ಅವಕಾಶವನ್ನು ಪಡೆಯುತ್ತಿರುವುದು ಹೊಸ ನೇಮಕಗೊಂಡವರ ಕಠಿಣ ಪರಿಶ್ರಮ ಮತ್ತು ಸಂಕಲ್ಪದ ಫಲವಾಗಿದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಈ ಮಹತ್ವದ ಸಂದರ್ಭದಲ್ಲಿ ಹೊಸದಾಗಿ ನೇಮಕಗೊಂಡಿರುವವರನ್ನು ಮತ್ತು ಅವರ ಕುಟುಂಬಗಳನ್ನು ಪ್ರಧಾನಮಂತ್ರಿ ಅಭಿನಂದಿಸಿದರು.

ಈ ಆಜಾದಿ ಕಾ ಅಮೃತ ಕಾಲದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಭಾರತವನ್ನು “ವಿಕಸಿತ ಭಾರತ’ವನ್ನಾಗಿ ಮಾಡಲು ಸಂಕಲ್ಪ ಮಾಡಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಮುಂದಿನ 25 ವರ್ಷಗಳು ಹೊಸದಾಗಿ ನೇಮಕಗೊಂಡವರಿಗೆ ಮತ್ತು ರಾಷ್ಟ್ರಕ್ಕೆ ಅತ್ಯಂತ ನಿರ್ಣಾಯಕ. ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ವಿಶ್ವ ಭಾರತದೆಡೆಗೆ ನಂಬಿಕೆ, ಮಹತ್ವ ಮತ್ತು ಆಕರ್ಷಣೆಯಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ವಿಶ್ವದ 10 ನೇ ಸ್ಥಾನದಿಂದ 5 ನೇ ಅತಿದೊಡ್ಡ ಆರ್ಥಿಕತೆಗೆ ಜಿಗಿದ ಕಾರಣ ಭಾರತ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. ಬಹುತೇಕ ಆರ್ಥಿಕ ತಜ್ಞರು ಹೇಳಿರುವಂತೆ ಭಾರತವು ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಅವರು ಪುನರುಚ್ಚರಿಸಿದರು. 

"ವಿಶ್ವದ ಅಗ್ರ 3 ಆರ್ಥಿಕತೆಯಾಗುವುದು ಭಾರತಕ್ಕೆ ಒಂದು ಸ್ಮರಣೀಯ ಸಾಧನೆಯಾಗಿದೆ’’ ಇದು ಪ್ರತಿಯೊಂದು ವಲಯದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಜಿಸುತ್ತದೆ ಮತ್ತು ಸಾಮಾನ್ಯ ನಾಗರಿಕರ ಆದಾಯ ವೃದ್ಧಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಅಮೃತ ಕಾಲದ ಮೂಲಕ ಹೊಸ ಅಧಿಕಾರಿಗಳು ದೇಶ ಸೇವೆ ಮಾಡುವ ಸುವರ್ಣಾವಕಾಶವನ್ನು ಪಡೆದಿರುವುದರಿಂದ ಸರ್ಕಾರದಲ್ಲಿ ನೇಮಕ ಹೊಂದಲು ಇಂದಿಗಿಂತ ಉತ್ತಮ ಸಮಯ ಇನ್ನೊಂದಿಲ್ಲ ಎಂದು ತಿಳಿಸಿದರು. ಅವರ ಆದ್ಯತೆಗಳು ದೇಶದ ಜನರಿಗೆ ಸೇವೆ ಸಲ್ಲಿಸುವುದರೊಂದಿಗೆ ಮತ್ತು ಅವರ ಸಮಸ್ಯೆಗಳನ್ನು ಪರಿಹಾರ ಮಾಡುವ ಮೂಲಕ ಜೀವನ ಸೌಕರ್ಯವನ್ನು ಹೆಚ್ಚಿಸುವ ಜೊತೆಗೆ ವಿಕಸಿತ ಭಾರತದ  ಗುರಿಗಳೊಂದಿಗೆ ತಮ್ಮನ್ನು ಸಂಯೋಜಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

“ನಿಮ್ಮ ಒಂದು ಸಣ್ಣ ಪ್ರಯತ್ನದಿಂದ ಬೇರೆಯವರ ಜೀವನದಲ್ಲಿ ಭಾರಿ ಬದಲಾವಣೆ ಸೃಷ್ಟಿಸಬಹುದು’’ ಎಂದು ಪ್ರಧಾನಮಂತ್ರಿ ಹೇಳಿದರು ಮತ್ತು ಜನತೆಯು ದೇವರ ರೂಪವಾಗಿದೆ, ಅವರಿಗೆ ಸೇವೆ ಸಲ್ಲಿಸಿದರೆ ದೇವರಿಗೆ ಸೇವೆ ಸಲ್ಲಿಸಿದಂತೆ ಎಂದು ಪುನರುಚ್ಚರಿಸಿದರು. ಹೊಸದಾಗಿ ಸೇವೆ ಸಲ್ಲಿಸಿರುವವರು, ತಾವು ಇತರರಿಗೆ ಸೇವೆ ಸಲ್ಲಿಸಿದರೆ ಅದು ತಮಗೆ ಶ್ರೇಷ್ಠ ತೃಪ್ತಿಯನ್ನು ನೀಡುತ್ತದೆ ಎಂಬ ನಂಬಿಕೆಯೊಂದಿಗೆ ಸೇವೆ ಮಾಡಬೇಕು ಎಂದರು.

ಇಂದಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕಿಂಗ್ ವಲಯದ ಸಿಬ್ಬಂದಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಆ ವಲಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಆರ್ಥಿಕತೆಯ ವಿಸ್ತರಣೆಯಲ್ಲಿ ಬ್ಯಾಂಕಿಂಗ್ ವಲಯದ ಪಾತ್ರದ ಕುರಿತು ಬಲವಾಗಿ ಪ್ರತಿಪಾದಿಸಿದರು. “ಭಾರತ ಇಂದು ಬ್ಯಾಂಕಿಂಗ್ ವಲಯವನ್ನು ಪ್ರಬಲ ಎಂದು ಪರಿಗಣಿಸುವ ದೇಶಗಳಲ್ಲಿ ಒಂದಾಗಿದೆ’’ ಎಂದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕಳೆದ 9 ವರ್ಷಗಳ ಪಯಣವನ್ನು ಸ್ಮರಿಸಿಕೊಂಡರು. ಅವರು ಹಿಂದೆ ಈ ವಲಯದಲ್ಲಿ ರಾಜಕೀಯ ಸ್ವಾರ್ಥದಿಂದಾಗಿ ದುಷ್ಪರಿಣಾಮಗಳ  ಕುರಿತು ಉಲ್ಲೇಖಿಸಿದರು.  ಹಿಂದೆ ಫೋನ್ ಬ್ಯಾಂಕಿಂಗ್ ಚಾಲ್ತಿಯಲ್ಲಿತ್ತು. ಆಗ ಪ್ರಭಾವಿಗಳು ದೂರವಾಣಿ ಕರೆ ಮಾಡಿದರೆ ಮಾತ್ರ ಸಾಲ ವಿತರಿಸುವ ಕಾಲವಿತ್ತು ಎಂದು ಅವರು ಉಲ್ಲೇಖಿಸಿದರು. ಅಂತಹ ಸಾಲಗಳನ್ನು ಎಂದಿಗೂ ಮರುಪಾವತಿ ಮಾಡಿಲ್ಲ ಎಂದು ಹೇಳಿದರು. ಈ ಹಗರಣಗಳು ದೇಶದ ಬ್ಯಾಂಕಿಂಗ್ ವಲಯದ ಬೆನ್ನನ್ನು ಮುರಿದವು ಎಂದು ತಿಳಿಸಿದರು. 2014ರ ನಂತರ ಪರಿಸ್ಥಿತಿಯನ್ನು ಸುಧಾರಿಸಲು ಕೈಗೊಂಡ ಕ್ರಮಗಳನ್ನು ಅವರು ವಿವರಿಸಿದರು. ಸರ್ಕಾರಿ ಬ್ಯಾಂಕ್ ಗಳ ಆಡಳಿತ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಿದ್ದು, ವೃತ್ತಿಪರತೆಗೆ ಒತ್ತು ನೀಡಿದ್ದು ಮತ್ತು ಸಣ್ಣ ಬ್ಯಾಂಕ್ ಗಳನ್ನು ದೊಡ್ಡ ಬ್ಯಾಂಕ್ ಗಳ ಜತೆ ವಿಲೀನಗೊಳಿಸಿದ್ದನ್ನು ಅವರು ಉಲ್ಲೇಖಿಸಿದರು. 5 ಲಕ್ಷ ರೂಪಾಯಿಗಳವರೆಗಿನ ಠೇವಣಿಗೆ ವಿಮೆ ಕಲ್ಪಿಸಲಾಗಿದೆ. ಹಾಗಾಗಿ ಶೇ.99ಕ್ಕೂ ಅಧಿಕ ಠೇವಣಿದಾರರು ಸುರಕ್ಷಿತವಾಗಿದ್ದಾರೆ ಎಂಬ ಭಾವನೆ ಬಂದು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮತ್ತೆ ವಿಶ್ವಾಸ ವೃದ್ಧಿಯಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ದಿವಾಳಿ ಸಂಹಿತೆಯಂತಹ ಕಾಯ್ದೆಗಳ ಮೂಲಕ ಬ್ಯಾಂಕ್ ಗಳನ್ನು ನಷ್ಟದಿಂದ ರಕ್ಷಿಸಲಾಗಿದೆ. ಅಲ್ಲದೆ ತಮ್ಮ ಆಸ್ತಿಗಳನ್ನು ಅಡವಿಟ್ಟು ಸರ್ಕಾರಿ ಆಸ್ತಿಯನ್ನು ಲೂಟಿ ಮಾಡಿದವರ ವಿರುದ್ಧ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ನಷ್ಟ ಮತ್ತು ಎನ್ ಪಿಎಗಳಿಗೆ ಹೆಸರಾದ ಬ್ಯಾಂಕ್ ಗಳು ಇದೀಗ ದಾಖಲೆಯ ಲಾಭದ ಚರ್ಚೆ ನಡೆಸುತ್ತಿವೆ ಎಂದು ಹೇಳಿದರು.  

ಬ್ಯಾಂಕಿಂಗ್ ವಲಯದ ಉದ್ಯೋಗಿಗಳ ಕಠಿಣ ಶ್ರಮದ ಬಗ್ಗೆ ಪ್ರಧಾನಮಂತ್ರಿ ಹೆಮ್ಮೆ ವ್ಯಕ್ತಪಡಿಸಿದರು. “ನನ್ನ ಅಥವಾ ನನ್ನ ದೂರದೃಷ್ಟಿಯನ್ನು ಬ್ಯಾಂಕಿಂಗ್ ವಲಯದ ಜನರು ಎಂದಿಗೂ ನಿರಾಸೆಗೊಳಿಸಿಲ್ಲ” ಎಂದು ಅವರು ಹೇಳಿದರು. 50 ಕೋಟಿ ಜನ್-ಧನ್ ಖಾತೆಗಳನ್ನು ತೆರೆಯುವ ಮೂಲಕ ಜನ್-ಧನ್ ಖಾತೆ ತೆರೆಯುವ ಯೋಜನೆಯನ್ನು ಭಾರೀ ಯಶಸ್ಸುಗೊಳಿಸಿದ್ದಕ್ಕಾಗಿ ಬ್ಯಾಂಕಿಂಗ್ ವಲಯದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಸಾಂಕ್ರಾಮಿಕದ ಸಮಯದಲ್ಲಿ ಕೋಟ್ಯಾಂತರ ಮಹಿಳೆಯರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ಇದು ದೊಡ್ಡ ಮಟ್ಟದಲ್ಲಿ ಸಹಾಯವಾಯಿತು ಎಂದು ಅವರು ಹೇಳಿದರು.  ಎಂಎಸ್ಎಂಇ ವಲಯದ ಅಭ್ಯುದಯಕ್ಕೆ ಕೈಗೊಂಡಿರುವ ಪ್ರಯತ್ನಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿ, ಮುದ್ರಾ ಯೋಜನೆಯ ಮೂಲಕ ಉದ್ಯಮಶೀಲ ಯುವಜನತೆಗೆ ಖಾತ್ರಿರಹಿತ ಸಾಲಗಳನ್ನು ಒದಗಿಸಲಾಗುತ್ತಿದೆ ಎಂದು ಉಲ್ಲೇಖಿಸಿದರು. ಈ ಯೋಜನೆಯನ್ನು ಯಶಸ್ಸುಗೊಳಿಸಿದ್ದಕ್ಕಾಗಿ ಅವರು ಬ್ಯಾಂಕಿಂಗ್ ವಲಯವನ್ನು ಶ್ಲಾಘಿಸಿದರು. ಅಂತೆಯೇ ಮಹಿಳಾ ಸ್ವಸಹಾಯ ಗುಂಪುಗಳ ಸಾಲದ ಮೊತ್ತವನ್ನು ಸರ್ಕಾರ ದುಪ್ಪಟ್ಟುಗೊಳಿಸಿದಾಗ ಮತ್ತು ಸಣ್ಣ ಉದ್ದಿಮೆದಾರರನ್ನು ರಕ್ಷಿಸಲು 1.5 ಕೋಟಿ ಜನರ ಉದ್ಯೋಗ ಉಳಿಸಲು ಎಂಎಸ್ಎಂಇ ವಲಯಕ್ಕೆ ಹೆಚ್ಚಿನ ಸಾಲಗಳನ್ನು ನೀಡುವಲ್ಲಿ ಬ್ಯಾಂಕಿಂಗ್ ವಲಯ ಸಮಯಕ್ಕೆ ತಕ್ಕಂತೆ ಸ್ಪಂದಿಸಿತು ಎಂದು ಅವರು ಹೇಳಿದರು. ಅಲ್ಲದೆ ಪಿಎಂ-ಕಿಸಾನ್ ಸಮ್ಮಾನ್ ನಿಧಿ ಭಾರೀ ಯಶಸ್ಸು ಗಳಿಸಿದ್ದಾಗಿ ಪ್ರಧಾನಮಂತ್ರಿ, ಬ್ಯಾಂಕ್ ಸಿಬ್ಬಂದಿಗೆ ಧನ್ಯವಾದಗಳನ್ನು ಹೇಳಿದರು. 50 ಲಕ್ಷಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳಿಗೆ ಸ್ವ-ನಿಧಿ ಯೋಜನೆ ಮೂಲಕ ನೆರವು ನೀಡಲಾಗಿದೆ. “ನೀವು ನಿಮ್ಮ ನಿಯುಕ್ತಿ ಪತ್ರ(ನೇಮಕಾತಿ ಪತ್ರ) ಜತೆ ಬಡವರ ಸಬಲೀಕರಣಕ್ಕೆ ಬ್ಯಾಂಕಿಂಗ್ ಅನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳುವ ಸಂಕಲ್ಪ ಪತ್ರ(ನಿರ್ಣಯಪತ್ರ)ವನ್ನು ಕೈಗೊಳ್ಳುತ್ತೀರಿ,  ಎಂಬ ವಿಶ್ವಾಸ ನನಗಿದೆ” ಎಂದು ಅವರು ಹೇಳಿದರು.

ಇತ್ತೀಚಿನ ನೀತಿ ಆಯೋಗದ ವರದಿಯ ಪ್ರಕಾರ ಕಳೆದ 5 ವರ್ಷಗಳಲ್ಲಿ ಸುಮಾರು 13 ಕೋಟಿ ಭಾರತೀಯರು ಬಡತನರೇಖೆಗಿಂತ ಮೇಲೆ ಬಂದಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಪಕ್ಕಾ ಮನೆಗಳು, ಶೌಚಾಲಯಗಳು ಮತ್ತು ವಿದ್ಯುತ್ ಸಂಪರ್ಕ ಯೋಜನೆಗಳನ್ನು ಉಲ್ಲೇಖಿಸಿದ ಅವರು, ಇದರಲ್ಲಿ ಸರ್ಕಾರಿ ಅಧಿಕಾರಿಗಳ ಕಠಿಣ ಪರಿಶ್ರಮವಿದೆ ಎಂದು ಹೇಳಿದರು. “ಈ ಎಲ್ಲ ಯೋಜನೆಗಳು ಬಡಜನರಿಗೆ ತಲುಪಿದರೆ ಅವರ ನೈತಿಕ ಸ್ಥೈರ್ಯ ಹೆಚ್ಚುತ್ತದೆ. ಈ ಯಶಸ್ಸು ಭಾರತದಿಂದ ಬಡತನವನ್ನು ನಿರ್ಮೂಲನೆ ಮಾಡಲು ನಾವೆಲ್ಲರೂ ಒಗ್ಗೂಡಬೇಕು ಎಂಬುದರ ಸಂಕೇತವಾಗಿದೆ. ಹಾಗೆ ಮಾಡಿದರೆ ಭಾರತದಿಂದ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದಾಗಿದೆ ಮತ್ತು ಇದರಲ್ಲಿ ಖಂಡಿತಾ ದೇಶದ ಪ್ರತಿಯೊಬ್ಬ ಸರ್ಕಾರಿ ನೌಕರರ ಬಹುದೊಡ್ಡ ಪಾತ್ರವಿರಲಿದೆ” ಎಂದು ಪ್ರಧಾನಮಂತ್ರಿ ಹೇಳಿದರು.

ದೇಶದಲ್ಲಿ ಬಡತನ ಪ್ರಮಾಣ ಇಳಿಕೆಯಾಗುತ್ತಿರುವ ಮತ್ತೊಂದು ಆಯಾಮದ ಕುರಿತು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಅದು ನವ ಮಧ್ಯಮ ವರ್ಗದ ವಿಸ್ತರಣೆಯಾಗಿದೆ. ಅದರಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಎಂದರು. ನವ ಮಧ್ಯಮ ವರ್ಗದ ಹೆಚ್ಚುತ್ತಿರುವ ಬೇಡಿಕೆ ಮತ್ತು ಆಶೋತ್ತರಗಳು ಉತ್ಪಾದನಾ ವಲಯವನ್ನು ಮುನ್ನಡೆಸುತ್ತಿವೆ. ಭಾರತದ ಕೈಗಾರಿಕೆಗಳು ಮತ್ತು ಉದ್ಯಮಗಳಲ್ಲಿ ಹೆಚ್ಚುತ್ತಿರುವ ಉತ್ಪಾದನೆಯಿಂದಾಗಿ ದೇಶದ ಯುವಕರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಅವರು ಪ್ರಸ್ತಾಪಿಸಿದರು. ಮೊಬೈಲ್ ಫೋನ್ ರಫ್ತಿನಲ್ಲಿ ಭಾರತ ಹೇಗೆ ಪ್ರತಿ ದಿನ ದಾಖಲೆ ಸೃಷ್ಟಿಸುತ್ತಿದೆ ಎಂದು ಉಲ್ಲೇಖಿಸಿದ ಅವರು, 2023ರ ಮೊದಲ ಆರು ತಿಂಗಲ್ಲಿ ಎಷ್ಟು ಕಾರುಗಳು ಮಾರಾಟವಾಗಿವೆ ಎಂಬ ವಿವರ ನೀಡಿದರು ಹಾಗೂ ಎಲೆಕ್ಟ್ರಿಕ್ ವಾಹನಗಳೂ ಸಹ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗಿವೆ ಎಂದರು. “ಈ ಎಲ್ಲ ಚಟುವಟಿಕೆಗಳು ದೇಶದಲ್ಲಿ ಉದ್ಯೋಗಗಳನ್ನು ಮತ್ತು ಉದ್ಯೋಗಾವಕಾಶಗಳನ್ನು ಉತ್ತೇಜಿಸುತ್ತಿವೆ” ಎಂದು ಅವರು ಹೇಳಿದರು.

“ಇಡೀ ವಿಶ್ವ ಭಾರತದ ಪ್ರತಿಭೆಯ ಮೇಲೆ ಕಣ್ಣಿಟಿದೆ” ಎಂದ ಪ್ರಧಾನಮಂತ್ರಿ ಅವರು, ವಿಶ್ವದ ಹಲವು ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿ ದುಡಿಯುವ ಜನಸಂಖ್ಯೆಯ ಪ್ರಮಾಣ ಕುಸಿಯುತ್ತಿದೆ ಎಂಬ ಅಂಶವನ್ನು ಅವರು ಉಲ್ಲೇಖಿಸಿದರು. ಆದ್ದರಿಂದ ಭಾರತೀಯ ಯುವಜನತೆಗೆ ಇದನ್ನು ಬಳಸಿಕೊಂಡು ತಮ್ಮ ಕೌಶಲ್ಯ ಹಾಗೂ ಸಾಮರ್ಥ್ಯಗಳನ್ನು ವೃದ್ಧಿಸಿಕೊಳ್ಳಲು ಇದು ಸಕಾಲ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ ಐಟಿ ಪ್ರತಿಭೆ, ವೈದ್ಯರು ಮತ್ತು ನರ್ಸ್ ಗಳಿಗೆ ಭಾರೀ ಬೇಡಿಕೆ ಇರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ಪ್ರತಿಯೊಂದು ವಲಯ ಮತ್ತು ಪ್ರತಿಯೊಂದು ದೇಶದಲ್ಲೂ ಭಾರತದ ಪ್ರತಿಭೆಗೆ ನಿರಂತರವಾಗಿ ಗೌರವ ಹೆಚ್ಚಾಗುತ್ತಿದೆ ಎಂದರು. ಸರ್ಕಾರ ಕಳೆದ 9 ವರ್ಷಗಳಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ. ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿಯಲ್ಲಿ ಸುಮಾರು 1.5 ಕೋಟಿ ಯುವಜನತೆಗೆ ತರಬೇತಿ ನೀಡಲಾಗಿದೆ ಎಂದರು.  30 ಕೌಶಲ್ಯ ಭಾರತ ಅಂತಾರಾಷ್ಟ್ರೀಯ ಕೇಂದ್ರಗಳನ್ನು ಸ್ಥಾಪಿಸುತ್ತಿರುವುದನ್ನು ಉಲ್ಲೇಖಿಸಿದ ಅವರು, ಹಾಗಾಗಿ ಯುವಜನತೆ ಜಾಗತಿಕ ಅವಕಾಶಗಳನ್ನು ಪಡೆಯಲು ಸಜ್ಜಾಗಬೇಕು ಎಂದರು. ದೇಶಾದ್ಯಂತ ಹೊಸ ವೈದ್ಯಕೀಯ ಕಾಲೇಜುಗಳು, ಐಟಿಐಗಳು, ಐಐಟಿಗಳು ಮತ್ತು ತಾಂತ್ರಿಕ ಸಂಸ್ಥೆಗಳ ನಿರ್ಮಾಣದ ಕುರಿತು ಪ್ರಸ್ತಾಪಿಸಿದ ಪ್ರಧಾನಮಂತ್ರಿ 2014ರ ವರೆಗೆ ದೇಶದಲ್ಲಿ ಕೇವಲ 380 ವೈದ್ಯಕೀಯ ಕಾಲೇಜುಗಳು ಇದ್ದವು. ಕಳೆದ 9 ವರ್ಷಗಳಲ್ಲಿ ಅವುಗಳ ಸಂಖ್ಯೆ 700ಕ್ಕೂ ಅಧಿಕವಾಗಿವೆ ಎಂದು ಹೇಳಿದರು. ನರ್ಸಿಂಗ್ ಕಾಲೇಜುಗಳ ಪ್ರಮಾಣದಲ್ಲೂ ಗಣನೀಯ ಹೆಚ್ಚಳವಾಗಿದೆ ಎಂದು ಅವರು ಉಲ್ಲೇಖಿಸಿದರು. “ಜಾಗತಿಕ ಬೇಡಿಕೆ ಇರುವ ಕೌಶಲ್ಯಗಳಿಂದಾಗಿ ಭಾರತೀಯ ಯುವಕರಿಗೆ ಲಕ್ಷಾಂತರ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

 ತಮ್ಮ ಭಾಷಣದ ಕೊನೆಯಲ್ಲಿ ಪ್ರಧಾನಮಂತ್ರಿ ಅವರು, ಹೊಸದಾಗಿ ನೇಮಕಗೊಂಡ ಎಲ್ಲರೂ ಸಕಾರಾತ್ಮಕ ವಾತಾವರಣದಲ್ಲಿ ಸರ್ಕಾರಿ ಸೇವೆಯನ್ನು ಸೇರುತ್ತಿದ್ದಾರೆ ಮತ್ತು ಈ ಸಕಾರಾತ್ಮಕ ಚಿಂತನೆಯನ್ನು ಮುಂದೆ ಕೊಂಡೊಯ್ಯುವ ಹೊಣೆಗಾರಿಕೆ ಅವರ ಹೆಗಲ ಮೇಲಿದೆ ಎಂದು ಹೇಳಿದರು. ಕಲಿಕೆ ಮತ್ತು ಸ್ವ-ಅಭಿವೃದ್ಧಿಯನ್ನು ಮುಂದುವರಿಸುವಂತೆ ಕರೆ ನೀಡಿದ ಪ್ರಧಾನಮಂತ್ರಿ ಅವರು, ಸರ್ಕಾರ ಸಿದ್ಧಪಡಿಸಿರುವ ಆನ್ ಲೈನ್ ಕಲಿಕಾ ವೇದಿಕೆ IGoT ಕರ್ಮಯೋಗಿಯ ಗರಿಷ್ಠ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.

.

ಹಿನ್ನೆಲೆ:

ಪ್ರಧಾನಮಂತ್ರಿ ಅವರ ಉದ್ಯೋಗ ಸೃಷ್ಟಿಗೆ ಗರಿಷ್ಠ ಆದ್ಯತೆ ನೀಡಬೇಕೆಂಬ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ರೋಜ್ಗಾರ್ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ರೋಜ್ಗಾರ್ ಮೇಳ ಮತ್ತಷ್ಟು ಉದ್ಯೋಗಾವಕಾಶಗಳ ಸೃಷ್ಟಿ ಮತ್ತು ಯುವಜನರ ಸಬಲೀಕರಣಕ್ಕೆ ಅರ್ಥಪೂರ್ಣ ಅವಕಾಶಗಳನ್ನು ಒದಗಿಸುವುದು ಹಾಗೂ ರಾಷ್ಟ್ರದ ಅಭಿವೃದ್ಧಿಯಲ್ಲಿ ಅವರನ್ನು ತೊಡಗಿಸಿಕೊಳ್ಳುವ ಒಂದು ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಹೊಸದಾಗಿ ನೇಮಕಗೊಂಡಿರುವವರು ಆನ್ ಲೈನ್ ವೇದಿಕೆ, IGoT ಕರ್ಮಯೋಗಿ ಪೋರ್ಟಲ್ ಮೂಲಕ ಕರ್ಮಯೋಗಿ ಪ್ರಾರಂಭದೊಂದಿಗೆ ತಾವೇ ತರಬೇತಿ ಪಡೆದುಕೊಳ್ಳಲು ಅವಕಾಶ ಪಡೆಯಲಿದ್ದಾರೆ. ಈ ಪೋರ್ಟಲ್ ನಲ್ಲಿ ಎಲ್ಲಿಯಾದರು, ಯಾವ ಸಾಧನವಾದರೂ ಕಲಿಯಬಹುದಾದ ಮಾದರಿಯಲ್ಲಿ 400ಕ್ಕೂ ಅಧಿಕ ಇ-ಕಲಿಕಾ ಕೋರ್ಸ್ ಗಳು ಲಭ್ಯವಿವೆ.

*****


(Release ID: 1941756) Visitor Counter : 136