ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು 2023ರ ಜುಲೈ 13 ರಂದು ಹರಿಯಾಣದ ಗುರುಗ್ರಾಮದಲ್ಲಿ "ಎನ್ಎಫ್‌ಟಿಗಳು, ಎಐ ಮತ್ತು ಮೆಟಾವರ್ಸ್ ಯುಗದಲ್ಲಿ ಅಪರಾಧ ಮತ್ತು ಭದ್ರತೆ" ಕುರಿತ ಜಿ 20 ಸಮ್ಮೇಳನದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ


​​​​​​​ಗೃಹ ಸಚಿವರು ಭಾರತದ 7 ಪ್ರಮುಖ ಶಿಕ್ಷಣ ಸಂಸ್ಥೆಗಳ ʻಸೈಬರ್ ಸ್ವಯಂಸೇವಕ ದಳʼಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ, ಶ್ರೀ ಅಮಿತ್ ಶಾ ಅವರು ವಸ್ತುಪ್ರದರ್ಶನವನ್ನು ಉದ್ಘಾಟಿಸಲಿದ್ದು, ʻಸಮ್ಮೇಳನದ ಪದಕʼವನ್ನೂ ಬಿಡುಗಡೆ ಮಾಡಲಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ʻಸೈಬರ್ ಸುರಕ್ಷಿತʼ ಭಾರತವನ್ನು ನಿರ್ಮಿಸುವುದು ಗೃಹ ವ್ಯವಹಾರಗಳ ಸಚಿವಾಲಯದ ಉನ್ನತ ಆದ್ಯತೆಗಳಲ್ಲಿ ಒಂದಾಗಿದೆ

ಜುಲೈ 13-14 ರಂದು ನಡೆಯಲಿರುವ ಎರಡು ದಿನಗಳ ಸಮ್ಮೇಳನದಲ್ಲಿ ʻಜಿ-20ʼ ದೇಶಗಳು, 9 ವಿಶೇಷ ಆಹ್ವಾನಿತ ದೇಶಗಳು, ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ತಂತ್ರಜ್ಞಾನ ದಿಗ್ಗಜರು ಹಾಗೂ ಭಾರತ ಮತ್ತು ಪ್ರಪಂಚದಾದ್ಯಂತದ ಡೊಮೇನ್ ತಜ್ಞರು ಸೇರಿದಂತೆ 900ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ

ಸುರಕ್ಷಿತ ಸೈಬರ್ ಸ್ಪೇಸ್ ನಿರ್ಮಿಸಲು ಮತ್ತು ಸೈಬರ್ ಭದ್ರತಾ ಕಾಳಜಿಗಳಿಗೆ ಆದ್ಯತೆ ನೀಡಲು ಜಾಗತಿಕ ಪಾಲುದಾರಿಕೆಯನ್ನು ರೂಪಿಸುವ ಅವಕಾಶವಾಗಿ ಈ ಸಮ್ಮೇಳನವನ್ನು ರೂಪಿಸಲಾಗಿದೆ, ಇದು ಅತ್ಯಾಧುನಿಕ ಆಲೋಚನೆಗಳು, ಜ್ಞಾನ ವಿನಿಮಯ ಮತ್ತು ಮುನ್ನೋಟ ಹೊಂದಿರುವ ವಿಶ್ವದ ನಾಯಕರೊಂದಿಗೆ ಸಂಪರ್ಕಕ್ಕೆ ವೇದಿಕೆಯನ್ನು ಒದಗಿಸುತ್ತದೆ

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ವಲದಯದಲ್ಲಿ ಕೆಲಸ ಮಾಡುವ ಸಂಸ್ಥೆಗಳು / ಕೈಗಾರಿಕೆಗಳು ಒದಗಿಸುವ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಉತ್ಪನ್ನಗಳು ಹಾಗೂ ಸೇವೆಗಳನ್ನು ಪ್ರದರ್ಶಿಸಲು 6 ತಾಂತ್ರಿಕ ಅಧಿವೇಶನಗಳು ಹಾಗೂ ಪ್ರದರ್ಶನಗಳು ಇರುತ್ತವೆ

Posted On: 11 JUL 2023 5:11PM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು 2023ರ ಜುಲೈ 13ರಂದು ಹರಿಯಾಣದ ಗುರುಗ್ರಾಮದಲ್ಲಿ "ಎನ್ಎಫ್‌ಟಿ, ʻಎಐʼ ಮತ್ತು ʻಮೆಟಾವರ್ಸ್ʼ ಯುಗದಲ್ಲಿ ಅಪರಾಧ ಮತ್ತು ಭದ್ರತೆ" ಕುರಿತ ಜಿ-20 ಸಮ್ಮೇಳನದ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭಾರತದ 7 ಪ್ರಮುಖ ಶಿಕ್ಷಣ ಸಂಸ್ಥೆಗಳ ʻಸೈಬರ್ ಸ್ವಯಂಸೇವಕ ದಳʼಗಳಿಗೆ ಗೃಹ ಸಚಿವರು ಹಸಿರು ನಿಶಾನೆ ತೋರಿಸಲಿದ್ದಾರೆ. ವಿಶೇಷವಾಗಿ ಗುರುತಿಸಲ್ಪಟ್ಟ ಈ ಸ್ವಯಂಸೇವಕರು ಸಮಾಜದಲ್ಲಿ ಸೈಬರ್ ಜಾಗೃತಿ ಮೂಡಿಸಲು, ಹಾನಿಕಾರಕ ವಿಷಯವನ್ನು ಗುರುತಿಸಲು ಮತ್ತು ವರದಿ ಮಾಡಲು ಹಾಗೂ ಸಮಾಜವನ್ನು ʻಸೈಬರ್ ಸುರಕ್ಷಿತʼವಾಗಿಸಲು ತಾಂತ್ರಿಕ ನೇರವು ನೀಡಲಿದ್ದಾರೆ. ಶ್ರೀ ಅಮಿತ್ ಶಾ ಅವರು ವಸ್ತುಪ್ರದರ್ಶನ ಮತ್ತು ʻಸಮ್ಮೇಳನ ಪದಕʼವನ್ನು ಬಿಡುಗಡೆ ಮಾಡಲಿದ್ದಾರೆ. ಜುಲೈ 13-14, 2023 ರಂದು ನಡೆಯಲಿರುವ ಎರಡು ದಿನಗಳ ಸಮ್ಮೇಳನದಲ್ಲಿ ಜಿ-20 ದೇಶಗಳು, 9 ವಿಶೇಷ ಆಹ್ವಾನಿತ ದೇಶಗಳು, ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ತಂತ್ರಜ್ಞಾನ ನಾಯಕರು ಮತ್ತು ಭಾರತ ಮತ್ತು ಪ್ರಪಂಚದಾದ್ಯಂತದ ಡೊಮೇನ್ ತಜ್ಞರು ಸೇರಿದಂತೆ 900ಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ʻಸೈಬರ್ ಸುರಕ್ಷಿತʼ ಭಾರತವನ್ನು ನಿರ್ಮಿಸುವುದು ಗೃಹ ವ್ಯವಹಾರಗಳ ಸಚಿವಾಲಯದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಸುರಕ್ಷಿತ ಸೈಬರ್ ವಲಯವನ್ನು ನಿರ್ಮಿಸಲು ಮತ್ತು ಸೈಬರ್ ಸೆಕ್ಯುರಿಟಿ ಕಾಳಜಿಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಜಾಗತಿಕ ಪಾಲುದಾರಿಕೆಯನ್ನು ರೂಪಿಸಲು ಈ ಸಮ್ಮೇಳನವನ್ನು ಒಂದು ಅವಕಾಶವಾಗಿ ರೂಪಿಸಲಾಗಿದೆ. ʻನಾನ್ ಫಂಜಿಬಲ್ ಟೋಕನ್‌ʼ (ಎನ್ಎಫ್‌ಟಿ), ʻಕೃತಕ ಬುದ್ಧಿಮತ್ತೆʼ(ಎಐ) ಮತ್ತು ʻಮೆಟಾವರ್ಸ್‌ʼನಂತಹ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಹಿನ್ನೆಲೆಯಲ್ಲಿ, ಸೈಬರ್ ಸುರಕ್ಷತೆ ಕಾಯ್ದುಕೊಳ್ಳುವ ಮತ್ತು ಸೈಬರ್ ಅಪರಾಧವನ್ನು ಎದುರಿಸುವ ಕ್ರಮಗಳ ಬಗ್ಗೆ ಇಲ್ಲಿ ನಡೆಯುವ ಚರ್ಚೆಗಳು ಗಮನ ಕೇಂದ್ರೀಕರಿಸಲಿವೆ.

ಸೈಬರ್ ಭದ್ರತೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಭದ್ರತೆಗೆ ಸಂಬಂಧಿಸಿದ ಅತ್ಯಗತ್ಯ ಅಂಶವಾಗಿದೆ. ಅದರ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಪರಿಣಾಮಗಳಿಂದಾಗಿ ಇದರ ಬಗ್ಗೆ ಸಾಕಷ್ಟು ಗಮನ ಹರಿಸುವುದು ಅಗತ್ಯವಾಗಿದೆ. ʻಜಿ-20ʼ ವೇದಿಕೆಯಲ್ಲಿ ಸೈಬರ್ ಸುರಕ್ಷತೆಯ ಮೇಲೆ ಹೆಚ್ಚಿನ ಗಮನ ಹರಿಸಿದಲ್ಲಿ, ಅದು ನಿರ್ಣಾಯಕ ಮಾಹಿತಿ ಮೂಲಸೌಕರ್ಯ ಮತ್ತು ಡಿಜಿಟಲ್ ಸಾರ್ವಜನಿಕ ವೇದಿಕೆಗಳ ಭದ್ರತೆ ಮತ್ತು ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಧನಾತ್ಮಕವಾಗಿ ಕೊಡುಗೆ ನೀಡುತ್ತದೆ. ʻಜಿ-20ʼ ವೇದಿಕೆಯಲ್ಲಿ ಸೈಬರ್ ಭದ್ರತೆ ಮತ್ತು ಸೈಬರ್ ಅಪರಾಧ ತಡೆಗಟ್ಟುವಿಕೆಯ ಚರ್ಚೆಗಳು ಮಾಹಿತಿ ಹಂಚಿಕೆ ನೀತಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.

"ಎನ್ಎಫ್‌ಟಿಗಳು, ʻಎಐʼ ಮತ್ತು ʻಮೆಟಾವರ್ಸ್ʼ ಯುಗದಲ್ಲಿ ಅಪರಾಧ ಮತ್ತು ಭದ್ರತೆ ಕುರಿತ ಜಿ-20 ಸಮ್ಮೇಳನ" – ಇದು ಅತ್ಯಾಧುನಿಕ ಆಲೋಚನೆಗಳು, ಜ್ಞಾನ ವಿನಿಮಯ ಮತ್ತು ಮುನ್ನೋಟ ಹೊಂದಿರುವ ವಿಶ್ವದ ನಾಯಕರೊಂದಿಗೆ ಸಂಪರ್ಕಕ್ಕೆ ವೇದಿಕೆಯನ್ನು ಒದಗಿಸುತ್ತದೆ. ಕಾನೂನು, ಶೈಕ್ಷಣಿಕ ಸಂಸ್ಥೆಗಳು ಮತ್ತು ತರಬೇತಿ ಸಂಸ್ಥೆಗಳು, ಹಣಕಾಸು ಮಧ್ಯವರ್ತಿಗಳು, ಫಿನ್‌ಟೆಕ್‌, ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಸೈಬರ್ ವಿಧಿವಿಜ್ಞಾನ, ನಿಯಂತ್ರಕರು, ನವೋದ್ಯಮಗಳು, ʻಓವರ್ ದಿ ಟಾಪ್ʼ(ಒಟಿಟಿ) ಸೇವಾ ಪೂರೈಕೆದಾರರು, ಇ-ಕಾಮರ್ಸ್ ಕಂಪನಿಗಳು ಮತ್ತು ಇತರರನ್ನು ಪ್ರತಿನಿಧಿಸುವ ಜಾಗತಿಕವಾಗಿ ಮೆಚ್ಚುಗೆ ಪಡೆದ ಸೈಬರ್ ತಜ್ಞರು ಮತ್ತು ಅತಿಥಿ ಭಾಷಣಕಾರರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಎಲ್ಲಾ ಕೇಂದ್ರ ಸಚಿವಾಲಯಗಳು, ಸಂಸ್ಥೆಗಳು ಮತ್ತು ಏಜೆನ್ಸಿಗಳ ಪ್ರತಿನಿಧಿಗಳು ಹಾಗೂ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು, ಆಡಳಿತಗಾರರು ಮತ್ತು ಪೊಲೀಸ್ ಮಹಾನಿರ್ದೇಶಕರು ಸಹ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

2023ರ ಜುಲೈ 13ರಂದು ಸರ್ವಸದಸ್ಯರ ಸಭೆಯೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ನಂತರ ಉದ್ಘಾಟನಾ ಅಧಿವೇಶನ ನಡೆಯಲಿದೆ. ಎರಡು ದಿನಗಳ ಸಮ್ಮೇಳನದಲ್ಲಿ ಈ ಕೆಳಗಿನ ವಿಷಯಗಳ ಮೇಲೆ 6 ತಾಂತ್ರಿಕ ಅಧಿವೇಶನಗಳು ನಡೆಯಲಿವೆ:

1. ಇಂಟರ್ನೆಟ್ ನಿಯಂತ್ರಣ - ರಾಷ್ಟ್ರೀಯ ಜವಾಬ್ದಾರಿ ಮತ್ತು ಗ್ಲೋಬಲ್‌ ಕಾಮನ್ಸ್‌
2. ಅಭೂತಪೂರ್ವ ಪ್ರಮಾಣದ ಡಿಜಿಟಲೀಕರಣದ ನಡುವೆ ʻಡಿಪಿಐʼ ಭದ್ರತೆ: ವಿನ್ಯಾಸ, ವಾಸ್ತುಶಿಲ್ಪ, ನೀತಿಗಳು ಮತ್ತು ಸನ್ನದ್ಧತೆ
3. ಎಕ್ಸ್‌ಟೆಂಡೆಡ್‌ ರಿಯಾಲಿಟಿ, ಮೆಟಾವರ್ಸ್ ಮತ್ತು ಡಿಜಿಟಲ್ ಮಾಲೀಕತ್ವದ ಭವಿಷ್ಯ - ಕಾನೂನು ಮತ್ತು ನಿಯಂತ್ರಣ ನೀತಿಗಳು
4. ಎಐ : ಅವಕಾಶಗಳು ಮತ್ತು ಜವಾಬ್ದಾರಿಯುತ ಬಳಕೆಗೆ ಸವಾಲುಗಳು
5. ಕನೆಕ್ಟಿಂಗ್‌ ದಿ ಡಾಟ್ಸ್‌: ಕ್ರಿಪ್ಟೋ ಕರೆನ್ಸಿ ಮತ್ತು ಡಾರ್ಕ್ ನೆಟ್‌ನ ಸವಾಲುಗಳು
6. ʻಐಸಿಟಿʼಯ ಕ್ರಿಮಿನಲ್ ಬಳಕೆ: ಅಂತರರಾಷ್ಟ್ರೀಯ ಸಹಕಾರಕ್ಕಾಗಿ ನಿಯಮಗಳನ್ನು ರೂಪಿಸುವುದು

ಸಮ್ಮೇಳನದ ಜೊತೆಗೆ, ʻಮಾಹಿತಿ ಮತ್ತು ಸಂವಹನ ತಂತ್ರಜ್ಞಾನʼ(ಐಸಿಟಿ) ವಲದಯದಲ್ಲಿ ಕೆಲಸ ಮಾಡುವ ಸಂಸ್ಥೆಗಳ / ಕೈಗಾರಿಕೆಗಳ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಉತ್ಪನ್ನಗಳು ಹಾಗೂ ಸೇವೆಗಳ  ಪ್ರದರ್ಶನವೂ ಇರಲಿದೆ. ಸಮಾವೇಶವು ಜುಲೈ 14 ರಂದು ಸಮಾರೋಪ ಅಧಿವೇಶನದೊಂದಿಗೆ ಮುಕ್ತಾಯಗೊಳ್ಳಲಿದ್ದು, ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು ಅಂದು ಮಾತನಾಡಲಿದ್ದಾರೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ), ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ), ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ (ಎನ್ಎಸ್ಸಿಎಸ್), ದೂರಸಂಪರ್ಕ ಇಲಾಖೆ (ಡಿಒಟಿ) ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ಜೊತೆಗೆ ಇಂಟರ್ಪೋಲ್ ಮತ್ತು ʻಯುನೈಟೆಡ್ ನೇಷನ್ಸ್ ಆಫೀಸ್ ಆನ್ ಡ್ರಗ್ಸ್ ಅಂಡ್ ಕ್ರೈಮ್ʼ(ಯುಎನ್ಒಡಿಸಿ) ಸಹಭಾಗಿತ್ವದಲ್ಲಿ ಈ ಸಮ್ಮೇಳನವನ್ನು ಗೃಹ ಸಚಿವಾಲಯ ಆಯೋಜಿಸಿದೆ. ʻರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯʼ (ಆರ್‌ಆರ್‌ಯು), ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ (ಎನ್ಎಫ್ಎಸ್‌ಯು), ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ (ಡಿಎಸ್ಸಿಐ), ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಎನ್ಎಲ್ಎಸ್ಐಯು) ಮತ್ತು ಅಮೃತ ವಿಶ್ವ ವಿದ್ಯಾಪೀಠಂ ಈ ಕಾರ್ಯಕ್ರಮದ ಇತರ ಪಾಲುದಾರರಲ್ಲಿ ಸೇರಿವೆ.

*****



(Release ID: 1938841) Visitor Counter : 167