ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav g20-india-2023

​​​​​​​ʻಪೋಕ್ಸೊʼ ಸಂತ್ರಸ್ತರಿಗೆ ನಿರ್ಣಾಯಕ ಆರೈಕೆ ಮತ್ತು ಬೆಂಬಲ ಒದಗಿಸಲು ʻನಿರ್ಭಯಾ ನಿಧಿʼಯ ಅಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಯೋಜನೆ

Posted On: 11 JUL 2023 1:08PM by PIB Bengaluru

ಅತ್ಯಾಚಾರ ಸಂತ್ರಸ್ತರು ಹಾಗೂ ಗರ್ಭಿಣಿಯಾದ ಅಪ್ರಾಪ್ತೆಯರಿಗೆ ನ್ಯಾಯ ಒದಗಿಸಲು ನಿರ್ಣಾಯಕ ಆರೈಕೆ ಮತ್ತು ಬೆಂಬಲ ನೀಡುವ ಯೋಜನೆಯೊಂದನ್ನು `ನಿರ್ಭಯಾ ನಿಧಿ’ ಅಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ರೂಪಿಸಿದೆ. ಇದು ಒಟ್ಟು 74.10 ಕೋಟಿ ರೂ.ಗಳ ವೆಚ್ಚದ ಯೋಜನೆಯಾಗಿದೆ. ಅತ್ಯಾಚಾರ/ ಸಾಮೂಹಿಕ ಅತ್ಯಾಚಾರ ಅಥವಾ ಇನ್ನಾವುದೇ ಕಾರಣದಿಂದಾಗಿ ಬಲವಂತದ ಗರ್ಭಧಾರಣೆಗೆ ಒಳಗಾಗಿ ಕುಟುಂಬದಿಂದ ಹೊರಹಾಕಲ್ಪಟ್ಟ ಮತ್ತು ತಮ್ಮನ್ನು ಬೆಂಬಲಿಸಲು ಬೇರೆ ಯಾವುದೇ ಮಾರ್ಗಗಳಿಲ್ಲದ ಅನಾಥರಾದ ಅಪ್ರಾಪ್ತ ಬಾಲಕಿಯರಿಗೆ ಆಶ್ರಯ, ಆಹಾರ ಮತ್ತು ದೈನಂದಿನ ಅಗತ್ಯಗಳು, ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಸುರಕ್ಷಿತ ಸಾರಿಗೆ ಮತ್ತು ಕಾನೂನು ನೆರವು ಒದಗಿಸುವ ಗುರಿಯನ್ನು ಈ ಯೋಜನೆಯು ಹೊಂದಿದೆ.

2021ರಲ್ಲಿ, ʻರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋʼ ಪೋಕ್ಸೊ ಕಾಯ್ದೆಯಡಿ 51,863 ಪ್ರಕರಣಗಳನ್ನು ವರದಿ ಮಾಡಿದೆ. ಈ ಪೈಕಿ 64% (33,348) ಪ್ರಕರಣಗಳು ಸೆಕ್ಷನ್ 3 ಮತ್ತು 5 ರ ಅಡಿಯಲ್ಲಿ ವರದಿಯಾಗಿವೆ.

ಕಾಯ್ದೆಯ ಸೆಕ್ಷನ್ 3 ಮತ್ತು 5ರ ಅಡಿಯಲ್ಲಿ ವರದಿಯಾದ ಒಟ್ಟು 33,348 ಪ್ರಕರಣಗಳಲ್ಲಿ 99% (33.036) ಪ್ರಕರಣಗಳು ಬಾಲಕಿಯರ ವಿರುದ್ಧ ನಡೆದಿವೆ ಎಂದು ಈ ದತ್ತಾಂಶದ ಮತ್ತಷ್ಟು ವಿಶ್ಲೇಷಣೆಯಿಂದ ತಿಳಿದುಬಂದಿದೆ. ಇಂತಹ ಅನೇಕ ಪ್ರಕರಣಗಳಲ್ಲಿ, ಹುಡುಗಿಯರು ಗರ್ಭಿಣಿಯಾಗುತ್ತಾರೆ ಮತ್ತು ಹಲವಾರು ದೈಹಿಕ ಮತ್ತು ಮಾನಸಿಕ ಆರೋಗ್ಯ ಅನಾರೋಗ್ಯಕ್ಕೆ ಗುರಿಯಾಗುತ್ತಾರೆ. ಅವರು ತಮ್ಮ ಸ್ವಂತ ಕುಟುಂಬಗಳಿಂದ ನಿರಾಕರಿಸಲ್ಪಟ್ಟಾಗ ಅಥವಾ ತ್ಯಜಿಸಲ್ಪಟ್ಟಾಗ ಅಥವಾ ಅನಾಥರಾದಾಗ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ.

ಈ ಯೋಜನೆಯ ಉದ್ದೇಶಗಳು ಹೀಗಿವೆ:

  1. ಸಂತ್ರಸ್ತೆಯರಿಗೆ ಒಂದೇ ಸೂರಿನಡಿ ಸಮಗ್ರ ಬೆಂಬಲ ಮತ್ತು ನೆರವು ಒದಗಿಸುವುದು ಮತ್ತು
  2. ಸಂತ್ರಸ್ತ ಅಪ್ರಾಪ್ತೆಯರಿಗೆ ಶಿಕ್ಷಣ, ಪೊಲೀಸ್ ನೆರವು, ವೈದ್ಯಕೀಯ (ಹೆರಿಗೆ, ನವಜಾತ ಶಿಶು ಮತ್ತು ಶಿಶು ಆರೈಕೆಯನ್ನೂ ಒಳಗೊಂಡಿದೆ), ಮಾನಸಿಕ ಆರೋಗ್ಯ ಸಮಾಲೋಚನೆ, ಕಾನೂನು ಬೆಂಬಲ ಹಾಗೂ ಆಕೆ ಮತ್ತು ಆಕೆಯ ಮಗುವಿಗೆ ವಿಮಾ ರಕ್ಷಣೆ ಸೇರಿದಂತೆ ಹಲವಾರು ಸೇವಾ ಸೌಕರ್ಯಗಳನ್ನು ತಕ್ಷಣವೇ ತುರ್ತು ಆಧಾರದ ಮೇಲೆ ಅಥವಾ ತುರ್ತುರಹಿತ ಸಂದರ್ಭಗಳ ಆಧಾರದ ಮೇಲೆ ಒದಗಿಸುವುದು.

    ಅರ್ಹತಾ ಮಾನದಂಡಗಳು ಹೀಗಿವೆ:
  • 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಹುಡುಗಿ, ಕೆಳಕಂಡ ಪ್ರಕರಣಗಳಲ್ಲಿ ಬಲಿಪಶುವಾಗಿದ್ದರೆ:
  • ಲೈಂಗಿಕ ದೌರ್ಜನ್ಯ - ಪೋಕ್ಸೊ ಕಾಯ್ದೆಯ ಸೆಕ್ಷನ್ 3
  • ತೀವ್ರ ಲೈಂಗಿಕ ದೌರ್ಜನ್ಯ - ಪೋಕ್ಸೊ ಕಾಯ್ದೆಯ ಸೆಕ್ಷನ್ 5
  • ಭಾರತೀಯ ದಂಡ ಸಂಹಿತೆ, 1860 (ಐಪಿಸಿ) ಸೆಕ್ಷನ್ 376, 376 ಎ-ಇ
  • ಮತ್ತು ಅಂತಹ ಹಲ್ಲೆ ಅಥವಾ ಅತ್ಯಾಚಾರದಿಂದಾಗಿ ಗರ್ಭಿಣಿಯಾಗಿರುವವರು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ. ಅಂತಹ ಅಪ್ರಾಪ್ತೆಯ ಸ್ಥಿತಿಯು ಹೀಗಿರಬೇಕು:

• ಅನಾಥ ಅಥವಾ

• ಕುಟುಂಬದಿಂದ ಹೊರಹಾಕಲ್ಪಟ್ಟವರು ಅಥವಾ

• ಕುಟುಂಬದೊಂದಿಗೆ ವಾಸಿಸಲು ಬಯಸದವರು

ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು ಅಪ್ರಾಪ್ತ ಸಂತ್ರಸ್ತೆಯು ʻಎಫ್ಐಆರ್ʼ ಪ್ರತಿಯನ್ನು ಹೊಂದಿರುವುದು ಕಡ್ಡಾಯವಲ್ಲ. ಆದರೆ, ಪೊಲೀಸರಿಗೆ ಮಾಹಿತಿಯನ್ನು ಒದಗಿಸಲಾಗಿದೆ ಮತ್ತು ಎಫ್ಐಆರ್ ದಾಖಲಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಯೋಜನೆಯ ಅನುಷ್ಠಾನಕ್ಕೆ ಹೊಣೆಗಾರರಾಗಿರುವ ವ್ಯಕ್ತಿಗಳ ಜವಾಬ್ದಾರಿಯಾಗಿದೆ.

ಮಕ್ಕಳ ಆರೈಕೆ ಸಂಸ್ಥೆಗಳ (ಸಿಸಿಐಗಳು) ಬಾಲಿಕಾ ಗೃಹಗಳು ಅನುಸರಿಸಬೇಕಾದ ಕಾರ್ಯವಿಧಾನ

ಬಾಲಿಕಾ ಗೃಹದ ಉಸ್ತುವಾರಿ ಹೊಂದಿರುವ ವ್ಯಕ್ತಿಯು ಹೆಣ್ಣು ಮಗುವಿಗೆ ಪ್ರತ್ಯೇಕ ಸುರಕ್ಷಿತ ಸ್ಥಳವನ್ನು ಒದಗಿಸಬೇಕು. ಏಕೆಂದರೆ ಅವಳ ಅಗತ್ಯಗಳು ಬಾಲಿಕಾ ಗೃಹದಲ್ಲಿ ವಾಸಿಸುವ ಇತರ ಮಕ್ಕಳಿಗಿಂತ ಭಿನ್ನವಾಗಿರಬಹುದು. ಅಪ್ರಾಪ್ತೆಯನ್ನು ಉಸ್ತುವಾರಿ ಹೊತ್ತ ವ್ಯಕ್ತಿಯು ʻಕೇಸ್ ವರ್ಕರ್ʼ ಅನ್ನು ತಕ್ಷಣವೇ ನಿಯೋಜಿಸಬೇಕು ಅಥವಾ ನೇಮಿಸಬೇಕು. ಬಾಲಕಿಯ ಆರೈಕೆ ಮತ್ತು ರಕ್ಷಣೆಗಾಗಿ ಬಾಲಿಕಾ ಗೃಹಕ್ಕೆ ಪ್ರತ್ಯೇಕ ನಿಧಿಯನ್ನು ಒದಗಿಸಬೇಕು.

ʻಮಿಷನ್ ವಾತ್ಸಲ್ಯʼ ಮಾರ್ಗಸೂಚಿಗಳ ಅಡಿಯಲ್ಲಿ ಪೋಕ್ಸೊ ಸಂತ್ರಸ್ತರಿಗೆ ಸೂಕ್ತ ಪುನರ್ವಸತಿ ಮತ್ತು ಪೋಕ್ಸೊ ಸಂತ್ರಸ್ತರ ಬೆಂಬಲಕ್ಕಾಗಿ ಮೀಸಲಾದ ʻಸಿಸಿಐʼಗಳ ನಿಬಂಧನೆಗಳನ್ನು ಸಹ ರೂಪಿಸಲಾಗುವುದು.

******



(Release ID: 1938695) Visitor Counter : 115