ಬಾಹ್ಯಾಕಾಶ ವಿಭಾಗ
"ಭಾರತವು ಕಡಿಮೆ ಸಮಯದಲ್ಲಿ 140ಕ್ಕೂ ಹೆಚ್ಚು ಬಾಹ್ಯಾಕಾಶ ನವೋದ್ಯಮಗಳನ್ನು ಹೊಂದಿದ್ದು, ಈ ವಲಯದಲ್ಲಿ ಉತ್ತಮ ಹಿಡಿತವನ್ನು ಗಳಿಸಿದೆ. ಇಡೀ ಜಗತ್ತು ಅದನ್ನು ಗುರುತಿಸಲು ಪ್ರಾರಂಭಿಸಿದೆ" ಡಾ. ಜಿತೇಂದ್ರ ಸಿಂಗ್ ರವರ ಹೇಳಿಕೆ
ಬಾಹ್ಯಾಕಾಶದ ಅನ್ವೇಷಣೆಗೆ ಜಾಗತಿಕ ಸಹಕಾರ ಮತ್ತು ಮೈತ್ರಿಗಳು ಅತ್ಯಗತ್ಯ: ಡಾ. ಜಿತೇಂದ್ರ ಸಿಂಗ್
"ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಿ, ಸಾಮಾನ್ಯ ಜನರ ಜೀವನವನ್ನು ಸುಧಾರಿಸಲು ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಳ್ಳುವ ನಮ್ಮ ಸಾಮೂಹಿಕ ಸಾಮರ್ಥ್ಯದಲ್ಲಿ ಮಾನವೀಯತೆಯ ಭವಿಷ್ಯವಿದೆ"
ಖಾಸಗಿ ವಲಯದ ಪಾಲ್ಗೊಳ್ಳುವಿಕೆಯು ಬಾಹ್ಯಾಕಾಶ ಆರ್ಥಿಕತೆಯಲ್ಲಿ ಬಹಳ ಮುಖ್ಯ: ಡಾ. ಜಿತೇಂದ್ರ ಸಿಂಗ್
ಡಾ. ಜಿತೇಂದ್ರ ಸಿಂಗ್ ಅವರು ಬೆಂಗಳೂರಿನಲ್ಲಿ ಜಿ-20ರ 4ನೇ ಆವೃತ್ತಿಯ ಬಾಹ್ಯಾಕಾಶ ಆರ್ಥಿಕ ನಾಯಕರ ಸಭೆಯನ್ನು (ಎಸ್ಇಎಲ್ಎಂ) ಉದ್ಘಾಟಿಸಿದರು
Posted On:
06 JUL 2023 12:58PM by PIB Bengaluru
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವರಾದ (ಸ್ವತಂತ್ರ ಉಸ್ತುವಾರಿ) ಡಾ. ಜಿತೇಂದ್ರ ಸಿಂಗ್ ಅವರು ಇಂದು ಬೆಂಗಳೂರಿನಲ್ಲಿ ಮಾತನಾಡಿ, ಅಲ್ಪಾವಧಿಯಲ್ಲಿ ಭಾರತವು 140ಕ್ಕೂ ಹೆಚ್ಚು ಬಾಹ್ಯಾಕಾಶ ನವೋದ್ಯಮಗಳನ್ನು ಹೊಂದಿದ್ದು, ಈ ಕ್ಷೇತ್ರದಲ್ಲಿ ಉತ್ತಮ ಹಿಡಿತವನ್ನು ಸಾಧಿಸಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಸಾಮರ್ಥ್ಯ ಮತ್ತು ಹಿಡಿತವನ್ನು ಇಡೀ ಜಗತ್ತು ಗುರುತಿಸಲು ಪ್ರಾರಂಭಿಸಿದೆ ಎಂದು ಹೇಳಿದರು.
ಜಿ-20ರ 4 ನೇ ಆವೃತ್ತಿಯ ಬಾಹ್ಯಾಕಾಶ ಆರ್ಥಿಕ ನಾಯಕರ ಸಭೆಯ (ಎಸ್ಇಎಲ್ಎಂ) ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಡಾ. ಜಿತೇಂದ್ರ ಸಿಂಗ್ ಅವರು, ಭಾರತದ ಬಾಹ್ಯಾಕಾಶ ವಲಯವನ್ನು ಖಾಸಗಿಯವರಿಗೆ ತೆರೆದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಇತರ ಕೆಲವು ದೇಶಗಳಿಗೆ ಹೋಲಿಸಿದರೆ ಭಾರತವು ಹಲವಾರು ವರ್ಷಗಳ ನಂತರ ತನ್ನ ಬಾಹ್ಯಾಕಾಶ ಪ್ರಯಾಣವನ್ನು ಪ್ರಾರಂಭಿಸಿದ್ದರೂ, ಇಂದು ವಿಶ್ವದ ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳ ಪ್ರಯೋಜನಕ್ಕಾಗಿ ಭಾರತವು ಪ್ರಮುಖ ಸುಳಿವು ಹಾಗೂ ಮಾಹಿತಿಯನ್ನು ನೀಡುತ್ತಿದೆ ಎಂದು ಅವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಯುಎಸ್ಎ ಭೇಟಿಯ ಸಮಯದಲ್ಲಿ, ಬಾಹ್ಯಾಕಾಶ ಸಂಬಂಧಿತ ಒಪ್ಪಂದಗಳು, ಕಾರ್ಯಸೂಚಿಯ ಪ್ರಮುಖ ಅಂಶವನ್ನು ಒಳಗೊಂಡಿದ್ದು, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ದೇಶಗಳು ಕೂಡಾ ಇಂದು ತಮ್ಮ ಬಾಹ್ಯಾಕಾಶ ಸಂಬಂಧಿತ ಚಟುವಟಿಕೆಗಳ ಮೌಲ್ಯವರ್ಧನೆಗಾಗಿ ಭಾರತದತ್ತ ನೋಡುತ್ತಿವೆ ಎಂದು ಸಚಿವರು ಗಮನಸೆಳೆದರು.
ಖಾಸಗಿ ವಲಯವನ್ನು ಶ್ಲಾಘಿಸಿದ ಡಾ. ಜಿತೇಂದ್ರ ಸಿಂಗ್ ಅವರು, ಖಾಸಗಿ ವಲಯಗಳ ಉದಯೋನ್ಮುಖ ಪಾತ್ರವನ್ನು ಬಾಹ್ಯಾಕಾಶ ಆರ್ಥಿಕತೆಗೆ "ನಿರ್ಣಾಯಕ" ಎಂದು ಬಣ್ಣಿಸಿದ್ದಾರೆ.
ಬಾಹ್ಯಾಕಾಶ ಅನ್ವೇಷಿಗರ ಹೆಚ್ಚಿನ ಮಹತ್ವಾಕಾಂಕ್ಷೆಯ ದಿಶೆಯಲ್ಲಿ ಜಾಗತಿಕ ಸಹಕಾರ ಮತ್ತು ಮೈತ್ರಿಗಳು ಅತ್ಯಗತ್ಯ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ. ಜಾಗತಿಕ ಆರ್ಥಿಕತೆಯಲ್ಲಿ ಬಾಹ್ಯಾಕಾಶ ಆರ್ಥಿಕತೆಯ ಪಾಲನ್ನು ಹೆಚ್ಚಿಸಲು ಜವಾಬ್ದಾರಿಯುತ ಬಾಹ್ಯಾಕಾಶ ರಾಷ್ಟ್ರಗಳ ಮೈತ್ರಿಯು ಇಂದಿನ ಪ್ರಸ್ತುತ ಸಮಯಕ್ಕೆ ಅಗತ್ಯತೆ ಎಂದು ಅವರು ಹೇಳಿದರು.
ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಸಾಧಿಸಿ, ಸಾಮಾನ್ಯ ಜನರ ಜೀವನವನ್ನು ಸುಧಾರಿಸಲು ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳುವ, ಸಂಗ್ರಹಿಸುವ ಮತ್ತು ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಳ್ಳುವ ನಮ್ಮ ಸಾಮೂಹಿಕ ಸಾಮರ್ಥ್ಯದಲ್ಲಿ ಮಾನವೀಯತೆಯ ಭವಿಷ್ಯದ ಅಭಿವೃದ್ಧಿ ಅಡಗಿದೆ ಎಂದು ಡಾ.ಜಿತೇಂದ್ರ ಸಿಂಗ್ ಅವರು ಹೇಳಿದರು.
"ಜಾಗತಿಕ ಆರ್ಥಿಕತೆಯಲ್ಲಿ ಬಾಹ್ಯಾಕಾಶ ಆರ್ಥಿಕತೆಯ ಪಾಲನ್ನು ಹೆಚ್ಚಿಸಲು ಜವಾಬ್ದಾರಿಯುತ ಬಾಹ್ಯಾಕಾಶ ರಾಷ್ಟ್ರಗಳ ಒಕ್ಕೂಟದ ಮೈತ್ರಿಯು ಇಂದಿನ ಪ್ರಸ್ತುತ ಸಮಯದ ಅವಶ್ಯಕತೆಯಾಗಿದೆ ಎಂಬ ವಿಷಯವನ್ನು ಜಿ-20ರ 4ನೇ ಆವೃತ್ತಿಯು ಸರಿಯಾಗಿ ಸೆರೆಹಿಡಿದಿದೆ. ನಾವು ಸಂಸ್ಕೃತ ಭಾಷೆಯಲ್ಲಿ 'ವಸುದೈವ ಕುಟುಂಬಕಂ' ಎಂದು ಹೇಳುವಂತೆ "ಒಂದು ಭೂಮಿ, ಒಂದು ಬಾಹ್ಯಾಕಾಶ ಮತ್ತು ಒಂದು ಭವಿಷ್ಯ" ಎಂಬ ಭಾರತದ ಜಿ-20ರ ಧ್ಯೇಯವಾಕ್ಯವನ್ನು ಇದು ಸೂಕ್ತವಾಗಿ ಸೂಚಿಸುತ್ತದೆ" ಎಂದು ಅವರು ಹೇಳಿದರು.
"ಬಾಹ್ಯಾಕಾಶ ತಂತ್ರಜ್ಞಾನವು ಆರ್ಥಿಕತೆಯ ವಿವಿಧ ಸ್ತಂಭಗಳನ್ನು ಒಂದೇ ಸೂರಿನಡಿ ಸಂಯೋಜಿಸುವುದರಿಂದ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮಾಡಿದ ಹೂಡಿಕೆಗಳು, ಎಲ್ಲಾ ದೇಶಗಳು ಮತ್ತು ಅವುಗಳ ಆರ್ಥಿಕತೆಗಳ ಒಟ್ಟಾರೆ ಅಭಿವೃದ್ಧಿಯ ಮೇಲೆ ದ್ವಿಗುಣ ಪರಿಣಾಮ ಬೀರುತ್ತವೆ. ಮುಂಬರುವ ದಶಕಗಳಲ್ಲಿ ಬಾಹ್ಯಾಕಾಶ ಆರ್ಥಿಕತೆಯು ಮುಂದಿನ ಟ್ರಿಲಿಯನ್ ಡಾಲರ್ ವಲಯವಾಗಲಿದೆ ಎಂದು ಅಧ್ಯಯನಗಳು ಭವಿಷ್ಯ ನುಡಿದಿವೆ. ಆರ್ಥಿಕತೆಯಲ್ಲಿ ಬಾಹ್ಯಾಕಾಶದ ಮಹತ್ವವನ್ನು ಪರಿಗಣಿಸಿ, ನಮ್ಮ ಬಾಹ್ಯಾಕಾಶ ಆರ್ಥಿಕತೆಯನ್ನು ಉತ್ತೇಜಿಸಿ, ಸಂಯೋಜಿಸಿ, ಇತರ ದೇಶಗಳೊಂದಿಗೆ ಮೈತ್ರಿಯನ್ನು ಅಭಿವೃದ್ಧಿಪಡಿಸಲು ಭಾರತವು ವಿವಿಧ ಕ್ರಮಗಳನ್ನು ಕೈಗೊಂಡಿದೆ" ಎಂದು ಅವರು ಹೇಳಿದರು.
ವಿಶ್ವದಾದ್ಯಂತದ ಖಾಸಗಿ ಪಾಲುದಾರರು ಮತ್ತು ಚಿಂತಕರನ್ನು ಸ್ವಾಗತಿಸಿದ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು, ಜಿ-20 ದೇಶಗಳ ಬಾಹ್ಯಾಕಾಶ ಆರ್ಥಿಕ ನಾಯಕರ ಸಭೆಯು ಭೂಮಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಬಾಹ್ಯಾಕಾಶ ತಂತ್ರಜ್ಞಾನಗಳ ಬಳಕೆಯ ಒಮ್ಮತಕ್ಕೆ ಕಾರಣವಾಗಿದೆ ಎಂದು ಆಶಿಸಿದರು.
"ಪಾಲುದಾರ ರಾಷ್ಟ್ರಗಳೊಂದಿಗೆ ಜಿ-20 ದೇಶಗಳು ಜಾಗತಿಕ ಒಟ್ಟು ದೇಶೀಯ ಉತ್ಪನ್ನದ ಸುಮಾರು 85%, ವಿಶ್ವ ವ್ಯಾಪಾರದ 75% ಮತ್ತು ವಿಶ್ವದ ಜನಸಂಖ್ಯೆಯ 2/3 ಭಾಗವನ್ನು ಪ್ರತಿನಿಧಿಸುತ್ತವೆ ಎಂಬ ಅಂಶವನ್ನು ಪರಿಗಣಿಸಿ, ನಾವು ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಬಾಹ್ಯಾಕಾಶ ಆರ್ಥಿಕತೆಯ ಭವಿಷ್ಯದ ಮೇಲೆ ದೂರಗಾಮಿ ಪರಿಣಾಮ ಬೀರಲಿವೆ" ಎಂದು ಅವರು ಹೇಳಿದರು.
ಆರು ದಶಕಗಳ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಅನುಭವದಲ್ಲಿ ಭಾರತವು ಬಾಹ್ಯಾಕಾಶ ತಂತ್ರಜ್ಞಾನದ ಅನ್ವಯಿಕ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು.
"ಇಂದು, ಬಾಹ್ಯಾಕಾಶವು ವಿಜ್ಞಾನ ಮತ್ತು ತಂತ್ರಜ್ಞಾನ, ದೂರಸಂಪರ್ಕ, ಕೃಷಿ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ವಿಪತ್ತು ಎಚ್ಚರಿಕೆ ಮತ್ತು ಚೇತರಿಕೆ, ಹವಾಮಾನ ಬದಲಾವಣೆಯ ಅಧ್ಯಯನ, ನೌಕಾಯಾನ, ರಕ್ಷಣೆ ಮತ್ತು ಆಡಳಿತ ಸೇರಿದಂತೆ ಮಾನವ ಜೀವನದ ಎಲ್ಲಾ ಹಂತಗಳನ್ನು ಸ್ಪರ್ಶಿಸಿದೆ" ಎಂದು ಅವರು ಹೇಳಿದರು.
ಎರಡು ದಿನಗಳ ಈ ಸಭೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳ ಮುಖ್ಯಸ್ಥರು, ಜಿ-20 ರಾಷ್ಟ್ರಗಳ ಬಾಹ್ಯಾಕಾಶ ಕ್ಷೇತ್ರದ ನಾಯಕರು, ಜಿ-20 ರಾಷ್ಟ್ರಗಳ ಹಿರಿಯ ರಾಜ ತಂತ್ರಜ್ಞರು ಮತ್ತು ಆಹ್ವಾನಿತ ದೇಶಗಳ ಗಣ್ಯರು ಮತ್ತು ಇತರ ಗಣ್ಯರು ಭಾಗವಹಿಸಿದ್ದರು.
****
(Release ID: 1937746)
Visitor Counter : 197