ಸಹಕಾರ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್‌ನ ಮೆಹ್ಸಾನಾದಲ್ಲಿ ʻದೂಧ್ ಸಾಗರ್ ಸಂಶೋಧನಾ ಮತ್ತು ಅಭಿವೃದ್ಧಿ ಸಂಘʼ ನಿರ್ವಹಿಸುತ್ತಿರುವ ʻಶ್ರೀ ಮೋತಿಭಾಯ್ ಆರ್ ಚೌಧರಿ ಸಾಗರ್ ಸೈನಿಕ ಶಾಲೆʼಗೆ ಶಂಕುಸ್ಥಾಪನೆ ನೆರವೇರಿಸಿದರು
ಈ ಸೈನಿಕ ಶಾಲೆಯು ಕೇವಲ ಉತ್ತರ ಗುಜರಾತಿನ ಮಕ್ಕಳಿಗೆ ಮಾತ್ರವಲ್ಲದೆ ಇಡೀ ದೇಶದ ಮಕ್ಕಳಿಗೆ ಸೇನೆಗೆ ಸೇರಲು ಹಾದಿಯನ್ನು ಸುಗಮಗೊಳಿಸಲಿದೆ
ಒಬ್ಬ ಆದರ್ಶ ಕಾರ್ಯಕರ್ತನ ಸಾರ್ವಜನಿಕ ಜೀವನದ ಬಗ್ಗೆ ಮತ್ತು ತಳಮಟ್ಟದಲ್ಲಿ ಅವರ ವ್ಯಕ್ತಿತ್ವದ ಬಗ್ಗೆ ಶ್ರೀ ಮೋತಿಭಾಯ್ ಚೌಧರಿ ಅವರ ಜೀವನದಿಂದ ಕಲಿಯಬೇಕಾದುದು ಬಹಳ ಇದೆ
ಶ್ರೀ ಮೋತಿಭಾಯ್ ಆರ್ ಚೌಧರಿ ಅವರು ಕಳೆದ ಹಲವಾರು ದಶಕಗಳಿಂದ ಜಾನುವಾರು ಸಾಕಣೆದಾರರಿಗೆ ಮತ್ತು ವಿಶೇಷವಾಗಿ ಗಾಂಧಿನಗರದ ಚೌಧರಿ ಸಮುದಾಯದ ಮಹಿಳೆಯರಿಗೆ ಜೀವನೋಪಾಯದ ಸಾಧನಗಳನ್ನು ಸೃಷ್ಟಿಸುವ ಮೂಲಕ ʻದೂಧ್ ಸಾಗರ್ ಡೈರಿʼಯ ಹೆಸರನ್ನು ನಿಜವಾದ ಅರ್ಥದಲ್ಲಿ ಅರಿತುಕೊಂಡಿದ್ದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ 9 ವರ್ಷಗಳಲ್ಲಿ ದೇಶವನ್ನು ಸುರಕ್ಷಿತ ಮತ್ತು ಅಭಿವೃದ್ಧಿಗೊಳಿಸಿರುವುದು ಮಾತ್ರವಲ್ಲ, ಅವರು ವಿಶ್ವದಾದ್ಯಂತ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ
ಮೋದಿ ಸರ್ಕಾರವು ಅತ್ಯಂತ ದೀನದಲಿತರು ಮತ್ತು ಬಡ ಜನರನ್ನು ಸಹಕಾರಿ ಆಂದೋಲನ ಮತ್ತು ದೇಶದ ಅಭಿವೃದ್ಧಿಯೊಂದಿಗೆ ಸಂಪರ್ಕಿಸುವ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಣೆ ಮಾಡಿದೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಹಕಾರಿ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳನ್ನು (ಎನ್‌ಜಿಒಗಳು) ದೊಡ್ಡ ಪ್ರಮಾಣದಲ್ಲಿ ಜತೆಗೆ ಕರೆದೊಯ್ಯುವ ಮೂಲಕ ದೇಶದ ಅಭಿವೃದ್ಧಿಗೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ʻಪಿ
Posted On:
04 JUL 2023 4:10PM by PIB Bengaluru
ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್‌ನ ಮೆಹ್ಸಾನಾದಲ್ಲಿ ʻದೂಧ್ ಸಾಗರ್ ಸಂಶೋಧನಾ ಮತ್ತು ಅಭಿವೃದ್ಧಿ ಸಂಘʼ ನಡೆಸುತ್ತಿರುವ ಶ್ರೀ ಮೋತಿಭಾಯ್ ಆರ್ ಚೌಧರಿ ಸಾಗರ್ ಸೈನಿಕ ಶಾಲೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಶ್ರೀ ಮೋತಿಭಾಯ್ ಆರ್ ಚೌಧರಿ ಅವರು ಕಳೆದ ಹಲವಾರು ದಶಕಗಳಿಂದ ಜಾನುವಾರು ಸಾಕಣೆದಾರರಿಗೆ ಮತ್ತು ವಿಶೇಷವಾಗಿ ಗಾಂಧಿನಗರದ ಚೌಧರಿ ಸಮುದಾಯದ ಮಹಿಳೆಯರಿಗೆ ಜೀವನೋಪಾಯದ ಸಾಧನಗಳನ್ನು ಸೃಷ್ಟಿಸುವ ಮೂಲಕ ʻದೂಧ್ ಸಾಗರ್ ಡೈರಿʼಯ ಹೆಸರನ್ನು ನೈಜ ಅರ್ಥದಲ್ಲಿ ಅರಿತುಕೊಂಡಿದ್ದರು ಎಂದು ಶ್ರೀ ಅಮಿತ್ ಶಾ ತಮ್ಮ ಭಾಷಣದಲ್ಲಿ ಹೇಳಿದರು. ಶ್ರೀ ಮೋತಿಭಾಯ್ ಅವರ ನಾಯಕತ್ವದಲ್ಲಿ, ಈ ʻದೂಧ್ ಸಾಗರ್ ಡೈರಿʼಯು ಹಲವು ಕಠಿಣ ಹಂತಗಳನ್ನು ಎದುರಿಸಿದೆ ಎಂದು ಅವರು ಹೇಳಿದರು. ಶ್ರೀ ತ್ರಿಭುವನ್ ಭಾಯ್ ಪಟೇಲ್ ಅವರ ಮಾರ್ಗದರ್ಶನದಲ್ಲಿ ಮತ್ತು ಶ್ರೀ ಮೋತಿಭಾಯ್ ಅವರ ಕೊಡುಗೆಯೊಂದಿಗೆ ಉತ್ತರ ಗುಜರಾತ್‌ನ ಮೂರು ಜಿಲ್ಲೆಗಳಾದ ಬನಸ್ಕಾಂತ, ಸಬರ್‌ಕಾಂತ ಮತ್ತು ಮೆಹ್ಸಾನಾದಲ್ಲಿ ಹಾಲು ಉತ್ಪಾದನೆ ಪ್ರಾರಂಭವಾಯಿತು ಎಂದು ಅವರು ಹೇಳಿದರು. ಒಬ್ಬ ಆದರ್ಶ ಕಾರ್ಯಕರ್ತನು ತನ್ನ ಸಾರ್ವಜನಿಕ ಜೀವನದಲ್ಲಿ ಹೇಗೆ ಇರಬೇಕು ಮತ್ತು ಅವನ ವ್ಯಕ್ತಿತ್ವ ಹೇಗಿರಬೇಕು ಎಂಬುದರ ಬಗ್ಗೆ ತಿಳಿಯಲು ಮೋತಿಭಾಯಿ ಚೌಧರಿ ಅವರ ಜೀವನದಿಂದ ಕಲಿಯುವುದು ಬಹಳ ಇದೆ ಎಂದು ಶ್ರೀ ಶಾ ಹೇಳಿದರು.
ಮೋತಿಭಾಯ್ ಚೌಧರಿ ಸಾಗರ್ ಸೈನಿಕ ಶಾಲೆಯ ಭೂಮಿಪೂಜೆಯನ್ನು ಇಂದು ಇಲ್ಲಿ ನೆರವೇರಿಸಲಾಗಿದೆ. ಈ ಸೈನಿಕ ಶಾಲೆಯು ಉತ್ತರ ಗುಜರಾತ್ ಮಾತ್ರವಲ್ಲದೆ ಇಡೀ ದೇಶದ ಮಕ್ಕಳಿಗೆ ಸೈನ್ಯಕ್ಕೆ ಸೇರಲು ಹಾದಿಯನ್ನು ಸುಗಮಗೊಳಿಸಲಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಶಾಲೆಯಲ್ಲಿ ಓದಿ ಸೈನ್ಯಕ್ಕೆ ಹೋಗುವ ಮಕ್ಕಳು ದೇಶಭಕ್ತಿ ಮತ್ತು ದೇಶದ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ. ಸಾಮಾನ್ಯ ಜನರಾಗಿ ಜೀವನ ನಡೆಸುವವರು ಈ ಶಾಲೆಯಿಂದ ದೇಶಭಕ್ತಿಯ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗುತ್ತಾರೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಳೆದ 9 ವರ್ಷಗಳಲ್ಲಿ ದೇಶವನ್ನು ಸುರಕ್ಷಿತವಾಗಿಸಿದ್ದು ಮತ್ತು ಅಭಿವೃದ್ಧಿಗೊಳಿಸಿದ್ದು ಮಾತ್ರವಲ್ಲದೆ, ಅವರು ವಿಶ್ವದಾದ್ಯಂತ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಹಿಂದೆ ಸರ್ಕಾರಗಳು ಅಭಿವೃದ್ಧಿ ಕಾರ್ಯಗಳ ಜವಾಬ್ದಾರಿಯನ್ನು ಮಾತ್ರ ತೆಗೆದುಕೊಳ್ಳುತ್ತಿದ್ದವು, ಅದಕ್ಕಾಗಿಯೇ ಅಭಿವೃದ್ಧಿಯ ವೇಗವು ನಿಧಾನವಾಗಿತ್ತು ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಹಕಾರಿ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳನ್ನು (ಎನ್‌ಜಿಒ) ದೊಡ್ಡ ಪ್ರಮಾಣದಲ್ಲಿ ತಮ್ಮೊಂದಿಗೆ ಕರೆದೊಯ್ಯುವ ಮೂಲಕ ದೇಶದ ಅಭಿವೃದ್ಧಿಗೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಶ್ರೀ ಶಾ ಹೇಳಿದರು. ʻಪಿಪಿಪಿʼ ಮಾದರಿಯಲ್ಲಿ ದೇಶದಲ್ಲಿ 100 ಸೈನಿಕ ಶಾಲೆಗಳು ಇರಬೇಕು ಎಂದು ಪ್ರಧಾನಮಂತ್ರಿಯವರು ಕರೆ ನೀಡಿದ್ದಾರೆ. ಈ ನಿಟ್ಟಿನಲ್ಲಿ 20ನೇ ಸೈನಿಕ ಶಾಲೆಯ ಭೂಮಿಪೂಜೆಯನ್ನು ಇಂದು ಇಲ್ಲಿ ನಡೆಸಲಾಗಿದೆ ಎಂದು ಅವರು ಶಾ ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಜಲಕ್ರಾಂತಿಯನ್ನು ತಂದರು ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರು ಹೇಳಿದರು. ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಉತ್ತರ ಗುಜರಾತ್ ಅನ್ನು ಉಳಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡರು. ಶ್ರೀ ಮೋದಿ ಅವರು ವಿವಿಧ ಯೋಜನೆಗಳ ಮೂಲಕ ನರ್ಮದಾ ಮತ್ತು ಮಹಿಸಾಗರದ ನೀರನ್ನು ಉತ್ತರ ಗುಜರಾತ್‌ಗೆ ಹರಿಸಿದರು ಎಂದು ಅಮಿತ್ ಶಾ ಅವರು ಹೇಳಿದರು. ʻಸುಜಲಾಂ ಸುಫಲಾಂʼ ಯೋಜನೆ ಉತ್ತರ ಗುಜರಾತ್‌ನಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡಿದೆ. ಆ ಮೂಲಕ ಅಲ್ಲಿನ ರೈತರು ಕೃಷಿಯಲ್ಲಿ ಲಾಭ ಪಡೆದಿದ್ದಾರೆ. ಜಾನುವಾರು ಸಾಕಣೆದಾರರ ಅನೇಕ ಸಮಸ್ಯೆಗಳನ್ನೂ ಪರಿಹರಿಸಲಾಗಿದೆ ಎಂದು ಶ್ರೀ ಶಾ ಹೇಳಿದರು. ಆಗಿನ ಗುಜರಾತ್ ಮುಖ್ಯಮಂತ್ರಿ ಮತ್ತು ಈಗಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗ್ರಾಮೀಣ ಪ್ರದೇಶದ ಲಕ್ಷಾಂತರ ಜನರ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಶಾ ಅವರು ವಿವರಿಸಿದರು.
ಈ ಸೈನಿಕ ಶಾಲೆಯು ಜ್ಞಾನ, ಭದ್ರತೆ, ಶೌರ್ಯ ಮತ್ತು ದೇಶಭಕ್ತಿಯ ಮನೋಭಾವವನ್ನು ತುಂಬುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಮತ್ತು ಅನೇಕ ಯುವಕರ ಜೀವನದಲ್ಲಿ ಹೊಸ ಬೆಳಕನ್ನು ತರುತ್ತದೆ ಎಂದು ಶ್ರೀ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು. 2022-23ನೇ ಸಾಲಿನಲ್ಲಿ 50 ಕೆಡೆಟ್ ಮತ್ತು 2023-24ನೇ ಸಾಲಿನಲ್ಲಿ 55 ಕೆಡೆಟ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಶಾಲೆಯಲ್ಲಿ ಓದುತ್ತಿರುವ ಯುವಕರು ಕಠಿಣ ದಿನಚರಿಯನ್ನು ಅನುಸರಿಸುತ್ತಾರೆ ಮತ್ತು ಭಾರತ ಮಾತೆಯ ಸೇವೆಗೆ ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಈ ಶಾಲಯು ಭಾರತವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ಹೇಳಿದರು.
ಇಂದು 'ಶಬ್ದ ಮೋತಿ' ಪುಸ್ತಕವನ್ನು ಸಹ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರು, ಈ ಪುಸ್ತಕವು ಮೋತಿ ಭಾಯ್ ಅವರ ಜೀವನವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಲಿದೆ ಎಂದರು. ಮೋತಿ ಭಾಯ್ ಅವರ ಜೀವನ ಸದಾ ಯುವಕರು ಮತ್ತು ಹದಿಹರೆಯದವರಿಗೆ ಪ್ರೇರಣೆಯ ಮೂಲವಾಗಿದೆ ಎಂದು ಅವರು ಹೇಳಿದರು. ʻಮೆಹ್ಸಾನಾ ಡೈರಿʼಯು ಬಹಳ ಉತ್ಸಾಹದಿಂದ ಮುನ್ನಡೆಯುತ್ತಿದೆ ಮತ್ತು ಇದು ಸುಮಾರು 5 ಲಕ್ಷ ರೈತರ ಜೀವನೋಪಾಯದ ಮೂಲವಾಗಿದೆ ಎಂದು ಅವರು ಹೇಳಿದರು. ʻಮೆಹ್ಸಾನಾ ಡೈರಿʼಯು ಚೌಧರಿ ಸಮಾಜದ ಸಮುದಾಯಗಳನ್ನು, ಚೌಧರಿ ಸಮಾಜದ ಮಹಿಳೆಯರನ್ನು ಮತ್ತು ಠಾಕೂರ್ ಸಮಾಜವನ್ನು ಒಂದುಗೂಡಿಸಿದೆ ಎಂದು ಅವರು ಹೇಳಿದರು. ʻಮೆಹ್ಸಾನಾ ಡೈರಿʼಯ ಸ್ಥಾಪಕರಾದ ಶ್ರೀ ಮಾನ್ ಸಿಂಗ್ ಅವರು ಸಮಾಜದ ಅನೇಕ ವರ್ಗಗಳು ಹೈನುಗಾರಿಕೆಯಿಂದ ತಮ್ಮ ಜೀವನೋಪಾಯವನ್ನು ಪಡೆಯಬೇಕು ಎಂದು ಕನಸು ಕಂಡಿದ್ದರು. ಆ ಆಶಯವನ್ನು ಈಡೇರಿಸುವ ಕೆಲಸವನ್ನು ಇಂದು ಮಾಡಲಾಗುತ್ತಿದೆ ಎಂದರು. ʻಮಾನ್‌ಸಿಂಗ್ ಭಾಯಿ ಡೈರಿ, ಆಹಾರ ಮತ್ತು ತಂತ್ರಜ್ಞಾನ ಸಂಸ್ಥೆʼಯಲ್ಲಿ ಶಿಕ್ಷಣ ಪಡೆದ ಅನೇಕ ಯುವಕರು ಗುಜರಾತ್‌ನಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಹೈನುಗಾರಿಕೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀ ಶಾ ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಹಕಾರ ಸಚಿವಾಲಯವನ್ನು ಸ್ಥಾಪಿಸಿದರು ಮತ್ತು ಜನರಿಗೆ "ಸಹಕಾರದಿಂದ ಸಮೃದ್ಧಿ " ಮಂತ್ರವನ್ನು ನೀಡಿದರು ಎಂದು ಶ್ರೀ ಅಮಿತ್ ಶಾ ಹೇಳಿದರು. ಮೋದಿ ಸರ್ಕಾರವು ಅತ್ಯಂತ ದೀನದಲಿತರು ಮತ್ತು ಬಡ ಜನರನ್ನು ಸಹಕಾರಿ ಆಂದೋಲನ ಮತ್ತು ದೇಶದ ಅಭಿವೃದ್ಧಿಯೊಂದಿಗೆ ಸಂಪರ್ಕಿಸುವ ಮೂಲಕ ಅವರ ಜೀವನ ಮಟ್ಟವನ್ನು ಸುಧಾರಣೆ ಮಾಡಿದೆ ಎಂದು ಅವರು ಹೇಳಿದರು. ಮುಂಬರುವ ದಿನಗಳಲ್ಲಿ, ದೇಶದ ಹೈನುಗಾರಿಕೆ ಕ್ಷೇತ್ರವು ಅನೇಕ ಹೊಸ ಆರಂಭಗಳಿಗೆ ಸಾಕ್ಷಿಯಾಗಲಿದೆ ಎಂದು ಅಮಿತ್ ಶಾ ಅವರು ಹೇಳಿದರು.
****
(Release ID: 1937528)
Visitor Counter : 130