ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

2023-24ನೇ ಸಾಲಿನ ಸಕ್ಕರೆ ಋತುವಿನಲ್ಲಿ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಾದ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಗೆ ಸರ್ಕಾರ ಅನುಮೋದನೆ ನೀಡಿದೆ.


ಕಬ್ಬು ಬೆಳೆಗಾರರಿಗೆ ಪ್ರತಿ ಕ್ವಿಂಟಾಲ್ ಗೆ ರೂ.315ರಂತೆ ಅತ್ಯಧಿಕ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ಅನುಮೋದಿಸಲಾಗಿದೆ

ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಬದ್ಧವಾಗಿರುವ ಭಾರತ ಸರ್ಕಾರ 

5 ಕೋಟಿ ಕಬ್ಬು ಬೆಳೆಗಾರರು (ಗನ್ನ ಕಿಸಾನ್) ಮತ್ತು ಅವರ ಅವಲಂಬಿತ ಕುಟುಂಬಸ್ಥರು ಮತ್ತು ಸಕ್ಕರೆ ಕಾರ್ಖಾನೆಗಳಲ್ಲಿ ಮತ್ತು ಸಂಬಂಧಿತ ಪೂರಕ ಚಟುವಟಿಕೆಗಳಲ್ಲಿ ಕೆಲಸ ಮಾಡುವ 5 ಲಕ್ಷ ಕಾರ್ಮಿಕರಿಗೆ ಪ್ರಯೋಜನವಾಗುವುದೆಂಬ ನಿರೀಕ್ಷೆ

Posted On: 28 JUN 2023 3:52PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು 2023-24ರ ಸಕ್ಕರೆ ಋತುವಿನಲ್ಲಿ (ಅಕ್ಟೋಬರ್-ಸೆಪ್ಟೆಂಬರ್) ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (ಎಫ್ಆರ್ ಪಿ) 10.25% ಮೂಲ ಚೇತರಿಕಾ ದರವಾಗಿ ಪ್ರತಿ ಕ್ವಿಂಟಾಲ್ ಗೆ ರೂ.315 ಎಂದು ಅನುಮೋದಿಸಿದೆ. 10.25% ಮೂಲ ಚೇತರಿಕಾ ದರಕ್ಕಿಂತ ಹೆಚ್ಚಿನ ಪರಿಸ್ಥಿತಿಯಲ್ಲಿ ಪ್ರತಿ 0.1% ಹೆಚ್ಚಳಕ್ಕೆ ಪ್ರತಿ ಕ್ವಿಂಟಾಲ್ ಗೆ 3.07 ರೂ.ಗಳ ಪ್ರೀಮಿಯಂ ಒದಗಿಸಲು ಮತ್ತು ಚೇತರಿಕೆಯ ಪ್ರತಿ 0.1% ಇಳಿಕೆಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ಪ್ರತಿ ಕ್ವಿಂಟಾಲ್ ಗೆ 3.07 ರೂ.ಗಳಷ್ಟು ಕಡಿತಗೊಳಿಸಲು ಸಹ ಅನುಮೋದಿಸಲಾಗಿದೆ.

ಇದಲ್ಲದೆ, ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ರಕ್ಷಿಸುವ ದೃಷ್ಟಿಯಿಂದ, 9.5%ಕ್ಕಿಂತ ಕಡಿಮೆ ವಸೂಲಿ ಮಾಡುವ ಸಕ್ಕರೆ ಕಾರ್ಖಾನೆಗಳಿಗೆ ಯಾವುದೇ ಕಡಿತವಿಲ್ಲ ಎಂದು ಸರ್ಕಾರವು ನಿರ್ಧರಿಸಿದೆ. ಅಂತಹ ರೈತರಿಗೆ 2022-23ರ ಪ್ರಸಕ್ತ ಸಕ್ಕರೆ ಋತುವಿನಲ್ಲಿ ಪ್ರತಿ ಕ್ವಿಂಟಾಲ್ ಕಬ್ಬಿಗೆ 282.125 ರೂ.ಗಳ ಬದಲಿಗೆ 2023-24ರ ಸಕ್ಕರೆ ಋತುವಿನಲ್ಲಿ ಪ್ರತಿ ಕ್ವಿಂಟಾಲ್ ಕಬ್ಬಿಗೆ 291.975 ರೂ.ಗಳನ್ನು ನೀಡಲಾಗುವುದು.

2023-24ರ ಸಕ್ಕರೆ ಋತುವಿನಲ್ಲಿ ಕಬ್ಬಿನ ಉತ್ಪಾದನಾ ವೆಚ್ಚವು ಪ್ರತಿ ಕ್ವಿಂಟಾಲ್ ಗೆ ರೂ.157 ಆಗಿದೆ. 10.25% ಚೇತರಿಕಾ ದರದಲ್ಲಿ ಪ್ರತಿ ಕ್ವಿಂಟಾಲ್ ಗೆ ರೂ.315ರ ಈ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯು, ಉತ್ಪಾದನಾ ವೆಚ್ಚಕ್ಕಿಂತ 100.6% ಹೆಚ್ಚಾಗಿದೆ. 2023-24ರ ಸಕ್ಕರೆ ಋತುವಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯು ಪ್ರಸ್ತುತ 2022-23ರ ಸಕ್ಕರೆ ಋತುವಿಗಿಂತ 3.28%ನಷ್ಟು ಹೆಚ್ಚಾಗಿದೆ. 

ಈ ಅನುಮೋದಿತ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯು 2023-24ರ, 2023ರ ಅಕ್ಟೋಬರ್ 1 ರಿಂದ ಪ್ರಾರಂಭವಾಗುವ ಸಕ್ಕರೆ ಋತುವಿನಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಂದ ಕಬ್ಬನ್ನು ಖರೀದಿಸುವಲ್ಲಿ ಅನ್ವಯಿಸಲಾಗುತ್ತದೆ. ಸಕ್ಕರೆ ವಲಯವು ಒಂದು ಪ್ರಮುಖ ಕೃಷಿ ಆಧಾರಿತ ವಲಯವಾಗಿದ್ದು, ಇದು ಸುಮಾರು 5 ಕೋಟಿ ಕಬ್ಬು ಬೆಳೆಗಾರರು ಮತ್ತು ಅವರ ಅವಲಂಬಿತರು ಮತ್ತು ಸಕ್ಕರೆ ಕಾರ್ಖಾನೆಗಳಲ್ಲಿ ನೇರವಾಗಿ ಕೆಲಸ ಮಾಡುವ ಸುಮಾರು 5 ಲಕ್ಷ ಕಾರ್ಮಿಕರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ.

ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ (ಸಿಎಸಿಪಿ) ಮಾಡಿದ ಶಿಫಾರಸುಗಳ ಆಧಾರದ ಮೇಲೆ, ರಾಜ್ಯ ಸರ್ಕಾರಗಳು ಮತ್ತು ಇತರ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ ಈ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ನಿರ್ಧರಿಸಲಾಗಿದೆ. 2013-14ರ ಸಕ್ಕರೆ ಋತುವಿನಲ್ಲಿ ಸರ್ಕಾರ ಘೋಷಿಸಿದ್ದ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯ ವಿವರಗಳು ಈ ಕೆಳಗಿನಂತಿವೆ:


 

ಹಿನ್ನೆಲೆ:
ಪ್ರಸಕ್ತ 2022-23ರ ಸಕ್ಕರೆ ಋತುವಿನಲ್ಲಿ, ಸಕ್ಕರೆ ಕಾರ್ಖಾನೆಗಳು 1,11,366 ಕೋಟಿ ರೂ.ಗಳ ಮೌಲ್ಯದ ಸುಮಾರು 3,353 ಲಕ್ಷ ಟನ್ ಕಬ್ಬನ್ನು ಖರೀದಿಸಿವೆ. ಇದು ಕನಿಷ್ಠ ಬೆಂಬಲ ಬೆಲೆಯಲ್ಲಿ ಭತ್ತದ ಬೆಳೆಯನ್ನು ಸಂಗ್ರಹಿಸುವ ನಂತರದ ಎರಡನೇ ಅತಿ ಹೆಚ್ಚಿನ ಖರೀದಿಯಾಗಿದೆ. ಸರ್ಕಾರವು ತನ್ನ ರೈತ-ಪರ ಕ್ರಮಗಳ ಮೂಲಕ ಕಬ್ಬು ಬೆಳೆಗಾರರು ತಮ್ಮ ಬಾಕಿಯನ್ನು ಸಮಯಕ್ಕೆ ಸರಿಯಾಗಿ ಪಡೆಯುವುದನ್ನು ಈ ಮೂಲಕ ಖಚಿತಪಡಿಸುತ್ತದೆ.

ಕಳೆದ 5 ವರ್ಷಗಳಲ್ಲಿ ಜೈವಿಕ ಇಂಧನ ವಲಯದಲ್ಲಿ ಎಥೆನಾಲ್ ನ ಉಪಯೋಗವು ಕಬ್ಬು ರೈತರಿಗೆ ಮತ್ತು ಸಕ್ಕರೆ ವಲಯಕ್ಕೆ ಸಾಕಷ್ಟು ಬೆಂಬಲ ನೀಡಿದೆ, ಏಕೆಂದರೆ ಕಬ್ಬು / ಸಕ್ಕರೆಯನ್ನು ಎಥೆನಾಲ್ ಗೆ ಪರಿವರ್ತಿಸುವುದರಿಂದ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿಯು ಉತ್ತಮ ಮಟ್ಟಕ್ಕೇರಲು ಕಾರಣವಾಗಿದೆ, ತ್ವರಿತ ಪಾವತಿಗಳು, ಕಡಿಮೆ ದುಡಿತದ ಬಂಡವಾಳದ ಅವಶ್ಯಕತೆಗಳು ಮತ್ತು ಕಾರ್ಖಾನೆಗಳಲ್ಲಿ ಕಡಿಮೆ ಹೆಚ್ಚುವರಿ ಸಕ್ಕರೆಯ ಅವಶ್ಯಕತೆಯಿಂದಾಗಿ ಈ ಕ್ಷೇತ್ರದಲ್ಲಿ ಹಣದ ಶೇಖರಣೆಯು ಕಡಿಮೆಯಾಗಿದೆ. ಇದು ರೈತರ ಕಬ್ಬಿನ ಬಾಕಿಯನ್ನು ಸಕಾಲದಲ್ಲಿ ಪಾವತಿಸಲು ಅನುವು ಮಾಡಿಕೊಟ್ಟಿದೆ. 2021-22ನೇ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳು/ಡಿಸ್ಟಿಲರಿಗಳು ತೈಲ ಮಾರುಕಟ್ಟೆ ಕಂಪನಿಗಳಿಗೆ ಎಥೆನಾಲ್ ಮಾರಾಟ ಮಾಡುವುದರಿಂದ ಸುಮಾರು 20,500 ಕೋಟಿ ರೂ.ಗಳ ಆದಾಯವನ್ನು ಗಳಿಸಿವೆ.

ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮವು ವಿದೇಶಿ ವಿನಿಮಯವನ್ನು ಉಳಿಸಿರುವುದಲ್ಲದೆ ದೇಶದ ಇಂಧನ ಭದ್ರತೆಯನ್ನು ಕೂಡಾ ಬಲಪಡಿಸಿದೆ. ಆಮದು ಮಾಡಿದ ಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಆ ಮೂಲಕ ಪೆಟ್ರೋಲಿಯಂ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತದ ಗುರಿಯನ್ನು ಸಾಧಿಸಲು ಸಹಾಯ ಮಾಡಿದೆ. 2025ರ ವೇಳೆಗೆ, 60 ಎಲ್ಎಂಟಿಗಿಂತ ಹೆಚ್ಚಿನ ಸಕ್ಕರೆಯನ್ನು ಎಥೆನಾಲ್ ಗೆ ಪರಿವರ್ತಿಸುವ ಗುರಿಯನ್ನು ಹೊಂದಿದೆ, ಇದು ಸಕ್ಕರೆಯ ಹೆಚ್ಚುವರಿ ದಾಸ್ತಾನಿನ ಸಮಸ್ಯೆಯನ್ನು ಪರಿಹರಿಸುತ್ತದೆ ಹಾಗೂ ಕಾರ್ಖಾನೆಗಳ ದ್ರವ್ಯತೆಯನ್ನು ಸುಧಾರಿಸಿ, ಆ ಮೂಲಕ ರೈತರ ಕಬ್ಬಿನ ಬಾಕಿಯನ್ನು ಸಮಯೋಚಿತವಾಗಿ ಪಾವತಿಸಲು ಸಹಾಯ ಮಾಡುತ್ತದೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯು ಮಾಲಿನ್ಯವನ್ನು ಕಡಿಮೆ ಮಾಡಿ ಗಾಳಿಯ ಗುಣಮಟ್ಟವನ್ನು ಸುಧಾರಿಸುತ್ತದೆ.

ಸರ್ಕಾರದ ಕ್ರಿಯಾಶೀಲ ಮತ್ತು ರೈತಪರ ನೀತಿಗಳು ರೈತರು, ಗ್ರಾಹಕರು ಮತ್ತು ಸಕ್ಕರೆ ಕ್ಷೇತ್ರದ ಕಾರ್ಮಿಕರ ಆಸಕ್ತಿಯನ್ನು ಉತ್ತೇಜಿಸಲು ಕಾರಣವಾಗಿದೆ. ಸಕ್ಕರೆಯನ್ನು ಕೈಗೆಟುಕುವಂತೆ ಮಾಡುವ ಮೂಲಕ ನೇರವಾಗಿ 5 ಕೋಟಿಗೂ ಹೆಚ್ಚು ನಾಗರೀಕರು ಮತ್ತು ಎಲ್ಲಾ ಗ್ರಾಹಕರ ಜೀವನೋಪಾಯವನ್ನು ಸುಧಾರಿಸಿದೆ. ಸರ್ಕಾರದ ಕ್ರಿಯಾಶೀಲ ನೀತಿಗಳ ಪರಿಣಾಮವಾಗಿ ಸಕ್ಕರೆ ಕ್ಷೇತ್ರವು ಈಗ ಸ್ವಾವಲಂಬಿಯಾಗಿದೆ. 

ಭಾರತವು ಪ್ರಸ್ತುತ ಜಾಗತಿಕ ಸಕ್ಕರೆ ಆರ್ಥಿಕತೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ, ಏಕೆಂದರೆ ಇದು ವಿಶ್ವದ ಎರಡನೇ ಅತಿದೊಡ್ಡ ಸಕ್ಕರೆ ರಫ್ತುದಾರ ರಾಷ್ಟ್ರವಾಗಿದೆ. 2021-22ರ ಸಕ್ಕರೆ ಋತುವಿನಲ್ಲಿ, ಭಾರತವು ಅತಿದೊಡ್ಡ ಸಕ್ಕರೆ ಉತ್ಪಾದಕ ರಾಷ್ಟ್ರವಾಗಿದ್ದು, 2025-26ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಎಥೆನಾಲ್ ಉತ್ಪಾದಿಸುವ ದೇಶವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

***



(Release ID: 1936295) Visitor Counter : 354