ರೈಲ್ವೇ ಸಚಿವಾಲಯ
ಭೋಪಾಲ್‌ನ ರಾಣಿ ಕಮಲಾಪತಿ ರೈಲು ನಿಲ್ದಾಣದಿಂದ ಐದು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದ ಪ್ರಧಾನಮಂತ್ರಿ
ಮಧ್ಯಪ್ರದೇಶ, ಗೋವಾ, ಜಾರ್ಖಂಡ್, ಬಿಹಾರ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ರಾಜಧಾನಿಗಳನ್ನು ಸಂಪರ್ಕಿಸುವ ರಾಣಿ ಕಮಲಾಪತಿ - ಜಬಲ್‌ಪುರ, ರಾಣಿ ಕಮಲಾಪತಿ-ಇಂಧೋರ್, ಗೋವಾ (ಮಡ್ಗಾಂವ್)-ಮುಂಬೈ, ರಾಂಚಿ-ಪಾಟ್ನಾ ಮತ್ತು ಧಾರವಾಡ-ಬೆಂಗಳೂರು ನಡುವೆ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಾಗಿದೆ.
ಈಗ, ದೇಶದಲ್ಲಿ ಒಟ್ಟು 23 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ
ಈ ಮಾರ್ಗಗಳಲ್ಲಿರುವ ಪ್ರಸ್ತುತ ವೇಗದ ರೈಲಿಗೆ ಹೋಲಿಸಿದರೆ ಈ ರೈಲುಗಳು ಪ್ರಯಾಣದ ಸಮಯವನ್ನು ಉಳಿಸುತ್ತವೆ
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಪ್ರಯಾಣಿಕರಿಗೆ ವಿಶ್ವ ದರ್ಜೆಯ ಅನುಭವವನ್ನು ಒದಗಿಸುತ್ತವೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನವನ್ನು ನೀಡುತ್ತವೆ
Posted On:
27 JUN 2023 4:11PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭೋಪಾಲ್‌ನ ರಾಣಿ ಕಮಲಾಪತಿ ನಿಲ್ದಾಣದಲ್ಲಿ ಐದು ಹೊಸ ಮತ್ತು ಮೇಲ್ದರ್ಜೆಗೇರಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿದಾಗ ಭಾರತೀಯ ರೈಲ್ವೆಯು ಐತಿಹಾಸಿಕ ದಿನಕ್ಕೆ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ, ಮಧ್ಯಪ್ರದೇಶದ ರಾಜ್ಯಪಾಲ ಶ್ರೀ ಮಂಗುಭಾಯಿ ಪಟೇಲ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ರೈಲ್ವೆ, ಸಂವಹನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್, ಜನಪ್ರತಿನಿಧಿಗಳು ಮತ್ತು ವಿಶೇಷ ಅತಿಥಿಗಳು ಉಪಸ್ಥಿತರಿದ್ದರು.
ಆರಾಮದಾಯಕ ಮತ್ತು ಸುಧಾರಿತ ರೈಲು ಪ್ರಯಾಣದ ಹೊಸ ಯುಗಕ್ಕೆ ನಾಂದಿ ಹಾಡಲಾಗಿದ್ದು, ಐದು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ರಾಣಿ ಕಮಲಾಪತಿ-ಜಬಲ್‌ಪುರ, ರಾಣಿ ಕಮಲಾಪತಿ-ಇಂದೋರ್, ಗೋವಾ (ಮಡ್ಗಾಂವ್)-ಮುಂಬೈ, ರಾಂಚಿ-ಪಾಟ್ನಾ ಮತ್ತು ಧಾರವಾಡ-ಬೆಂಗಳೂರು ನಡುವೆ ಸಂಚರಿಸುತ್ತಿವೆ. ಇಂದು ಹಸಿರು ನಿಶಾನೆ ತೋರಿರುವ ಈ ವಂದೇ ಭಾರತ್ ರೈಲುಗಳು ರಾಜ್ಯ ರಾಜಧಾನಿಗಳು ಮತ್ತು ಇತರ ನಗರಗಳ ನಡುವೆ ಸಂಪರ್ಕವನ್ನು ಸುಧಾರಿಸುತ್ತವೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತವೆ ಮತ್ತು ಪ್ರಯಾಣದ ಸೌಕರ್ಯವನ್ನು ಹೆಚ್ಚಿಸುತ್ತವೆ. ಈ ವಂದೇ ಭಾರತ್ ರೈಲುಗಳು ನಮ್ಮ ರಾಷ್ಟ್ರದ ಪ್ರತಿ ಮೂಲೆಗೂ ನವ ಭಾರತ – ವಿಕಸಿತ ಭಾರತ ಸಂದೇಶವನ್ನು ಕೊಂಡೊಯ್ಯುತ್ತಿವೆ.
ರಾಣಿ ಕಮಲಾಪತಿ-ಜಬಲ್ಪುರ ವಂದೇ ಭಾರತ್ ಎಕ್ಸ್ಪ್ರೆಸ್
ರಾಣಿ ಕಮಲಾಪತಿ - ಜಬಲ್‌ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ರಾಣಿ ಕಮಲಾಪತಿ ರೈಲು ನಿಲ್ದಾಣದಿಂದ ಹೊರಡುತ್ತದೆ ಮತ್ತು ಅದೇ ದಿನ ನರಸಿಂಗಪುರ, ಪಿಪಾರಿಯಾ ಮತ್ತು ನರ್ಮದಾಪುರಂ ರೈಲು ನಿಲ್ದಾಣಗಳಲ್ಲಿ ನಿಲುಗಡೆಯೊಂದಿಗೆ ಜಬಲ್‌ಪುರವನ್ನು ತಲುಪುತ್ತದೆ.
ವಂದೇ ಭಾರತ್ ರೈಲಿನ ಕಾರ್ಯಾಚರಣೆಯೊಂದಿಗೆ, ಮಧ್ಯಪ್ರದೇಶದ ಸಾಂಸ್ಕೃತಿಕ ರಾಜಧಾನಿ ಜಬಲ್‌ಪುರ, ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಮತ್ತು ಹತ್ತಿರದ ಧಾರ್ಮಿಕ ಸ್ಥಳಗಳು ಮತ್ತು ಪ್ರವಾಸಿ ತಾಣಗಳ ಸಂಪರ್ಕವು ಹೆಚ್ಚಾಗುತ್ತದೆ ಮತ್ತು ಈ ಪ್ರದೇಶದ ಸರ್ವತೋಮುಖ ಅಭಿವೃದ್ಧಿಯೂ ಹೆಚ್ಚಾಗುತ್ತದೆ.
ರಾಣಿ ಕಮಲಾಪತಿ - ಇಂದೋರ್ ವಂದೇ ಭಾರತ್ ಎಕ್ಸ್ಪ್ರೆಸ್
ಭೋಪಾಲ್ - ಇಂದೋರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಭೋಪಾಲ್ ರೈಲು ನಿಲ್ದಾಣದಿಂದ ನಿರ್ಗಮಿಸುತ್ತದೆ ಮತ್ತು ಅದೇ ದಿನ ಉಜ್ಜಯಿನಿ ರೈಲು ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಇಂದೋರ್ ತಲುಪುತ್ತದೆ. ರಾಣಿ ಕಮಲಾಪತಿಯಿಂದ ಇಂದೋರ್‌ಗೆ ವಂದೇ ಭಾರತ್ ರೈಲು ಸಂಚಾರವು ಸುಲಭ ಮತ್ತು ವೇಗದ ಪ್ರಯಾಣವನ್ನು ಸುಗಮಗೊಳಿಸುತ್ತದೆ ಮತ್ತು ಈ ಪ್ರದೇಶಗಳ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಯಾತ್ರಾ ಸ್ಥಳಗಳನ್ನು ಸಂಪರ್ಕಿಸಲು ಪ್ರಮುಖ ಮಾಧ್ಯಮವಾಗಲಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಆಹ್ಲಾದಕರ ಮತ್ತು ಉತ್ತಮ ರೈಲು ಪ್ರಯಾಣದ ಅನುಭವವನ್ನು ನೀಡುತ್ತದೆ.
ಗೋವಾ (ಮಡ್ಗಾಂವ್)-ಮುಂಬೈ ವಂದೇ ಭಾರತ್ ಎಕ್ಸ್ಪ್ರೆಸ್
ಗೋವಾ (ಮಡ್ಗಾಂವ್)- ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಛತ್ರಪತಿ ಶಿವಾಜಿ ಟರ್ಮಿನಸ್ ನಿಲ್ದಾಣದಿಂದ ಹೊರಟು ಅದೇ ದಿನ ಮಡಗಾಂವ್ ನಿಲ್ದಾಣವನ್ನು ತಲುಪಲಿದ್ದು, ದಾದರ್, ಥಾಣೆ, ಪನ್ವೇಲ್, ಖೇಡ್, ರತ್ನಗಿರಿ, ಕಣಕವಲಿ ಮತ್ತು ಥಿವಿಮ್ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.
ಅತ್ಯಾಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ಕೊಂಕಣ ಪ್ರದೇಶದ ಜನರಿಗೆ ವೇಗ ಮತ್ತು ಸೌಕರ್ಯದೊಂದಿಗೆ ಪ್ರಯಾಣಿಸಲು ಅನುಕೂಲವಾಗುತ್ತದೆ. ಇದು ಈ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ. ಈ ಮಾರ್ಗದಲ್ಲಿ ಹೊಸ ವಂದೇ ಭಾರತ್ ರೈಲು ಪ್ರವಾಸಿಗರಿಗೆ ಹೊಸ ಆಯಾಮವನ್ನು ಕಲ್ಪಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ರಾಂಚಿ-ಪಾಟ್ನಾ ವಂದೇ ಭಾರತ್ ಎಕ್ಸ್ಪ್ರೆಸ್
ರಾಂಚಿ-ಪಾಟ್ನಾ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪಾಟ್ನಾದಿಂದ ಹೊರಡಲಿದ್ದು, ಅದೇ ದಿನ ರಾಂಚಿ ನಿಲ್ದಾಣವನ್ನು ತಲುಪುತ್ತದೆ. ಗಯಾ, ಕೋಡರ್ಮಾ, ಹಜಾರಿಬಾಗ್, ಬರ್ಕಾಕಾನಾ ಮತ್ತು ಮೆಸ್ರಾ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.
ಹೇರಳ ಖನಿಜ ಸಂಪನ್ಮೂಲಗಳನ್ನು ಹೊಂದಿರುವ ರಾಂಚಿಯು ಖನಿಜ ಆಧಾರಿತ ಕೈಗಾರಿಕೆಗಳಿಗೆ ಸೂಕ್ತ ಸ್ಥಳವಾಗಿದೆ. ಪಾಟ್ನಾದೊಂದಿಗೆ ತ್ವರಿತ ಸಂಪರ್ಕಕ್ಕಾಗಿ ಸ್ಥಳೀಯ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ರೈಲು ಪ್ರಯೋಜನಕಾರಿಯಾಗಲಿದೆ.
ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್
ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೆಎಸ್‌ಆರ್ ಬೆಂಗಳೂರು ನಗರದಿಂದ ಹೊರಡಲಿದ್ದು, ಅದೇ ದಿನ ಧಾರವಾಡ ನಿಲ್ದಾಣವನ್ನು ತಲುಪಲಿದ್ದು, ಯಶವಂತಪುರ, ದಾವಣಗೆರೆ ಮತ್ತು ಹುಬ್ಬಳ್ಳಿ ರೈಲು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಕರ್ನಾಟಕದಲ್ಲಿ, ಧಾರವಾಡ - ಬೆಂಗಳೂರು ವಂದೇ ಭಾರತ್ ರೈಲು ವಿದ್ಯಾಕಾಶಿ ಧಾರವಾಡ, ವಾಣಿಜ್ಯ ನಗರಿ, ಹುಬ್ಬಳ್ಳಿ ಮತ್ತು ರಾಜಧಾನಿ ಬೆಂಗಳೂರು ನಗರವನ್ನು ಸಂಪರ್ಕಿಸುತ್ತದೆ. ಈ ವಂದೇ ಭಾರತ್ ರೈಲು ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುತ್ತದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಅಪಾರ ಉನ್ನತ ಸೌಕರ್ಯಗಳನ್ನು ಒದಗಿಸುತ್ತವೆ, ಇವು ಪ್ರಯಾಣಿಕರಿಗೆ ವಿಶ್ವ ದರ್ಜೆಯ ಆರಾಮದಾಯಕ ಪ್ರಯಾಣದ ಅನುಭವ ಮತ್ತು ಕವಚ್ ತಂತ್ರಜ್ಞಾನ ಸೇರಿದಂತೆ ಸುಧಾರಿತ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ. 160 ಪ್ರತಿ ಗಂಟೆಗೆ ಕಿಮೀ ಕಾರ್ಯಾಚರಣೆಯ ವೇಗಕ್ಕಾಗಿ ಪ್ರತಿ ರೈಲಿಗೆ ಸಂಪೂರ್ಣ ಟ್ರ್ಯಾಕ್ಷನ್ ಮೋಟಾರ್‌ಗಳನ್ನು ಹೊಂದಿರುವ ಬೋಗಿಗಳನ್ನು ಒದಗಿಸಲಾಗಿದೆ. ಸುಧಾರಿತ ಅತ್ಯಾಧುನಿಕ ಸಸ್ಪೆನ್ಷನ್ ವ್ಯವಸ್ಥೆಯು ಪ್ರಯಾಣಿಕರಿಗೆ ಸುಗಮ ಮತ್ತು ಸುರಕ್ಷಿತ ಪ್ರಯಾಣ ಮತ್ತು ವರ್ಧಿತ ಸವಾರಿ ಸೌಕರ್ಯವನ್ನು ಖಾತ್ರಿಗೊಳಿಸುತ್ತದೆ.
ಪವರ್ ಕಾರ್‌ಗಳು ಮತ್ತು ಸುಧಾರಿತ ಪುನರುತ್ಪಾದಕ ಬ್ರೇಕಿಂಗ್ ವ್ಯವಸ್ಥೆಯೊಂದಿಗೆ ಸುಮಾರು ಶೇ.30 ರಷ್ಟು ವಿದ್ಯುತ್ ಅನ್ನು ಉಳಿಸುವ ಮೂಲಕ ಭಾರತೀಯ ರೈಲ್ವೆಯ ಹಸಿರು ಹೆಜ್ಜೆಗುರುತನ್ನು ಹೆಚ್ಚಿಸಲು ಈ ರೈಲುಗಳನ್ನು ವಿನ್ಯಾಸಗೊಳಿಸಲಾಗಿದೆ.
****
(Release ID: 1935654)