ಪ್ರಧಾನ ಮಂತ್ರಿಯವರ ಕಛೇರಿ

ವಾಷಿಂಗ್ಟನ್ ಡಿಸಿಯಲ್ಲಿ ನಡೆದ 'ಭಾರತ-ಯುಎಸ್‌ಎ: ಭವಿಷ್ಯಕ್ಕಾಗಿ ಕೌಶಲ್ಯ' ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ

Posted On: 22 JUN 2023 11:32PM by PIB Bengaluru

ಅಮೆರಿಕದ ಪ್ರಥಮ ಮಹಿಳೆ, ಡಾ. ಜಿಲ್ ಬೈಡೆನ್

ಡಾ. ಪಂಚನಾಥನ್,

ಶ್ರೀ. ಮೆಹ್ರೋತ್ರಾ,

ಡಾ. ವಿಲಿಯಮ್ಸ್.

ಮಹಿಳೆಯರೆ ಮತ್ತು ಸಜ್ಜನರೆ

ನನ್ನ ಪ್ರೀತಿಯ ಯುವ ಸ್ನೇಹಿತರೆ,
 
ವಾಷಿಂಗ್ಟನ್‌ಗೆ ಬಂದ ಮೇಲೆ ಹಲವಾರು ಯುವ ಮತ್ತು ಸೃಜನಶೀಲ ಮನಸ್ಸುಗಳೊಂದಿಗೆ ಸಂಪರ್ಕ ಸಾಧಿಸಲು ನನಗೆ ಅವಕಾಶ ಸಿಕ್ಕಿರುವುದಕ್ಕೆ ಇಂದು ನನಗೆ ಸಂತೋಷವಾಗಿದೆ. ಭಾರತವು ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದೊಂದಿಗೆ ವಿವಿಧ ಯೋಜನೆಗಳಲ್ಲಿ ಸಹಕರಿಸುತ್ತಿದೆ, ಇದು ಈ ಸ್ಥಳವನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ.
 
ಡಾ. ಜಿಲ್ ಬೈಡೆನ್,

ನಿಮ್ಮ ಜೀವನ, ನಿಮ್ಮ ಪ್ರಯತ್ನಗಳು ಮತ್ತು ನಿಮ್ಮ ಸಾಧನೆಗಳು ಎಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿವೆ. ನಮ್ಮ ಇಂದಿನ ಮತ್ತು ಭವಿಷ್ಯದ ಪೀಳಿಗೆಗೆ ಉಜ್ವಲ ಭವಿಷ್ಯ ಖಾತ್ರಿಪಡಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ.

ಈ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣ, ಕೌಶಲ್ಯ ಮತ್ತು ನಾವೀನ್ಯತೆ ಅತ್ಯಗತ್ಯ. ಈ ದಿಕ್ಕಿನಲ್ಲಿ ನಾವು ಭಾರತದಲ್ಲಿ ಹಲವಾರು ಪ್ರಯತ್ನಗಳನ್ನು ಮಾಡಿದ್ದೇವೆ. ನಾವು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಿಕ್ಷಣ ಮತ್ತು ಕೌಶಲ್ಯವನ್ನು ಸಂಯೋಜಿಸಿದ್ದೇವೆ. ನಾವು ಶಾಲೆಗಳಲ್ಲಿ ಸುಮಾರು 10,000 ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಿದ್ದೇವೆ, ಅಲ್ಲಿ ಮಕ್ಕಳಿಗೆ ವಿವಿಧ ರೀತಿಯ ಆವಿಷ್ಕಾರಗಳನ್ನು ಅನ್ವೇಷಿಸಲು ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ಯುವ ಉದ್ಯಮಿಗಳನ್ನು ಉತ್ತೇಜಿಸಲು ನಾವು ಸ್ಟಾರ್ಟಪ್ ಇಂಡಿಯಾ ಮಿಷನ್ ಪ್ರಾರಂಭಿಸಿದ್ದೇವೆ. ಈ ದಶಕವನ್ನು "ತಂತ್ರಜ್ಞಾನ ದಶಕ" ಅಥವಾ ಟೆಕೇಡ್ ಆಗಿ ಮಾಡುವುದು ನಮ್ಮ ಗುರಿಯಾಗಿದೆ.
 
ಸ್ನೇಹಿತರೆ,

ಭಾರತ ಮತ್ತು ಅಮೆರಿಕ ನಡುವಿನ ಬೆಳವಣಿಗೆಯ ವೇಗ ಕಾಯ್ದುಕೊಳ್ಳಲು ಪ್ರತಿಭೆಗಳ ಸಮೂಹದ ಅವಶ್ಯಕತೆಯಿದೆ. ಅಮೆರಿಕವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿದ್ದರೆ, ಭಾರತವು ವಿಶ್ವದ ಅತಿದೊಡ್ಡ ಯುವ ಸಮುದಾಯದ ಕಾರ್ಖಾನೆಯನ್ನೇ ಹೊಂದಿದೆ. ಆದ್ದರಿಂದ, ಭಾರತ ಮತ್ತು ಅಮೆರಿಕ ನಡುವಿನ ಪಾಲುದಾರಿಕೆಯು ಸುಸ್ಥಿರ ಮತ್ತು ಎಲ್ಲರನ್ನೂ ಒಳಗೊಂಡ ಜಾಗತಿಕ ಬೆಳವಣಿಗೆಗೆ ಚಾಲನಾ ಶಕ್ತಿ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ನಾನು ನಂಬುತ್ತೇನೆ. ಅಮೆರಿಕದಲ್ಲಿ ಸಮುದಾಯ ಕಾಲೇಜುಗಳು ನಿರ್ವಹಿಸುತ್ತಿರುವ ಮಹತ್ವದ ಪಾತ್ರಕ್ಕಾಗಿ ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
 
ಸ್ನೇಹಿತರೆ,

ಭಾರತ ಮತ್ತು ಅಮೆರಿಕ ನಡುವಿನ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಪರಸ್ಪರ ಸಹಕಾರದ ಕುರಿತು ಕೆಲವು ವಿಚಾರಗಳನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ. ಈ ಸಹಯೋಗದ ಪ್ರಯತ್ನದಲ್ಲಿ ಸರ್ಕಾರ, ಉದ್ಯಮ ಮತ್ತು ಶೈಕ್ಷಣಿಕ ವಲಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಭಾರತ-ಅಮೆರಿಕ ಶಿಕ್ಷಕರ ವಿನಿಮಯ ಕಾರ್ಯಕ್ರಮ ಪ್ರಾರಂಭಿಸುವುದನ್ನು ನಾವು ಪರಿಗಣಿಸಬಹುದು. ವಿಶ್ವಾದ್ಯಂತ ಹರಡಿರುವ ವಿಜ್ಞಾನಿಗಳು ಮತ್ತು ಉದ್ಯಮಿಗಳೊಂದಿಗೆ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವ ಸಲುವಾಗಿ ನಾವು 2015ರಲ್ಲಿ ಗ್ಲೋಬಲ್ ಇನಿಶಿಯೇಟಿವ್ ಆಫ್ ಅಕಾಡೆಮಿಕ್ ನೆಟ್‌ವರ್ಕ್ಸ್ (GIAN) ಅನ್ನು ಪ್ರಾರಂಭಿಸಿದ್ದೇವೆ. ಈ ಕಾರ್ಯಕ್ರಮದ ಅಡಿ, ನಾವು ಅಮೆರಿಕದಿಂದ ಭಾರತಕ್ಕೆ 750 ಅಧ್ಯಾಪಕರನ್ನು ಯಶಸ್ವಿಯಾಗಿ ಸ್ವಾಗತಿಸಿದ್ದೇವೆ ಎಂದು ನಿಮಗೆ ತಿಳಿಸಲು ನಾನು ಸಂತೋಷಪಡುತ್ತೇನೆ. ಅಮೆರಿಕದಲ್ಲಿ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ವ್ಯಕ್ತಿಗಳಿಗೆ ತಮ್ಮ ರಜಾ ದಿನಗಳನ್ನು ವಿಶೇಷವಾಗಿ ಚಳಿಗಾಲದ ವಿರಾಮವನ್ನು ಭಾರತದಲ್ಲಿ ಕಳೆಯಲು ನಾನು ವಿನಂತಿಸುತ್ತೇನೆ. ಹಾಗೆ ಮಾಡುವುದರಿಂದ, ಅವರು ಭಾರತವನ್ನು ಅನ್ವೇಷಿಸಲು ಮಾತ್ರವಲ್ಲದೆ, ತಮ್ಮ ಜ್ಞಾನವನ್ನು ಭಾರತದ ಹೊಸ ಪೀಳಿಗೆಯೊಂದಿಗೆ ಹಂಚಿಕೊಳ್ಳಬಹುದು.
 
ಯುವ ಜನರಲ್ಲಿ ಸೃಜನಶೀಲತೆ ಮತ್ತು ನಾವೀನ್ಯತೆಯ ಮನೋಭಾವವು ಅದ್ಭುತವಾಗಿದೆ ಎಂಬುದು ನಿಮಗೂ ತಿಳಿದಿದೆ. ಎರಡೂ ದೇಶಗಳು ಒಗ್ಗೂಡಿ ವಿಭಿನ್ನ ವಿಷಯಗಳ ಮೇಲೆ ಹ್ಯಾಕಥಾನ್‌ಗಳನ್ನು ನಡೆಸಬೇಕು ಎಂದು ನಾನು ನಂಬುತ್ತೇನೆ. ಇದು ಅನೇಕ ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವುದು ಮಾತ್ರವಲ್ಲದೆ, ಭವಿಷ್ಯಕ್ಕಾಗಿ ಹೊಸ ಆಲೋಚನೆಗಳನ್ನು ಹುಟ್ಟುಹಾಕುತ್ತದೆ. ವೃತ್ತಿಪರ ಕೌಶಲ್ಯ ಅರ್ಹತೆಗಳ ಪರಸ್ಪರ ಗುರುತಿಸುವಿಕೆಯನ್ನು ಚರ್ಚಿಸುವುದನ್ನು ನಾವು ಪರಿಗಣಿಸಬಹುದು.
 
ಸ್ನೇಹಿತರೆ,

ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳ ಅಡಿ, ಅಮೆರಿಕದ ವಿದ್ಯಾರ್ಥಿಗಳು ಭಾರತಕ್ಕೆ ಬರುವುದನ್ನು ನಾನು ನೋಡಲು ಬಯಸುತ್ತೇನೆ, ಅಲ್ಲಿ ಅವರು ಭಾರತವನ್ನು ನೋಡಿ, ಅನುಭವಿಸಬಹುದು ಮತ್ತು ಅನ್ವೇಷಿಸಬಹುದು. "ನವಾಜೋ ನೇಷನ್"ನ ಯುವಕರು ಭಾರತದ ನಾಗಾಲ್ಯಾಂಡ್‌ನಲ್ಲಿ ಕುಳಿತು ತಮ್ಮ ಸ್ನೇಹಿತರೊಂದಿಗೆ ಒಂದು ಪರಿಕಲ್ಪನೆ ಮತ್ತು ಯೋಜನೆಯನ್ನು ಸಹ-ಅಭಿವೃದ್ಧಿಪಡಿಸಲು ಸಹಕರಿಸುವ ದಿನ ದೂರವಿಲ್ಲ ಎಂದು ನನಗೆ ಭರವಸೆ ಮತ್ತು ವಿಶ್ವಾಸವಿದೆ. ನನಗೆ ಹಲವಾರು ವಿಚಾರಗಳನ್ನು ಒದಗಿಸಿದ್ದಕ್ಕಾಗಿ ಈ ಇಬ್ಬರು ಯುವ ವ್ಯಕ್ತಿಗಳಿಗೆ ನನ್ನ ಹೃದಯಾಂತರಾಳದಿಂದ ನಿಜವಾಗಿಯೂ ಕೃತಜ್ಞನಾಗಿದ್ದೇನೆ.
ಪ್ರಥಮ ಮಹಿಳೆ ಡಾ. ಜಿಲ್ ಬೈಡೆನ್ ಅವರಿಗೆ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನಕ್ಕೆ ಮತ್ತು ಇಲ್ಲಿಗೆ ಬಂದಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳುತ್ತೇನೆ.
 
ತುಂಬು ಧನ್ಯವಾದಗಳು.

****



(Release ID: 1935234) Visitor Counter : 77