ಜಲ ಶಕ್ತಿ ಸಚಿವಾಲಯ
azadi ka amrit mahotsav g20-india-2023

​​​​​​​ಸಾರ್ವಜನಿಕ ಆರೋಗ್ಯ ಹಾಗೂ ಆರ್ಥಿಕ ಉಳಿತಾಯ ಸಂಬಂಧ ʼಹರ್‌ ಘರ್‌ ಜಲ್‌ʼ (ಮನೆ ಮನೆಗೆ ಗಂಗೆ) ಕಾರ್ಯಕ್ರಮವು ಮಹತ್ವದ ಪರಿಣಾಮ ಬೀರುತ್ತಿದೆ ಎಂದು ಡಬ್ಲ್ಯೂಎಚ್‌ಒ ವರದಿ ಉಲ್ಲೇಖ


ಜೀವಗಳ ರಕ್ಷಣೆ, ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಸಬಲೀಕರಣ ಹಾಗೂ ಜೀವನವನ್ನು ಸುಗಮವಾಗಿಸುವಲ್ಲಿ ಸುರಕ್ಷಿತ ಶುದ್ಧ ಕುಡಿಯುವ ನೀರಿನ ಸೌಲಭ್ಯವು ಮಹತ್ವದ ಕೊಡುಗೆ ನೀಡುತ್ತಿರುವುದು ಸಾಬೀತಾಗುತ್ತಿದೆ: ಡಾ.ವಿ.ಕೆ. ಪೌಲ್‌, ನೀತಿ ಆಯೋಗ

2023ರಲ್ಲಿ ದೇಶದಲ್ಲಿ ಪ್ರತಿ ಸೆಕೆಂಡ್‌ಗೆ ಒಂದು ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದೆ: ಶ್ರೀಮತಿ ವಿನಿ ಮಹಾಜನ್‌

2019ರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ನೀರಿನ ಸಂಪರ್ಕವು ಶೇ. 16.64ರಷ್ಟಿದ್ದುದು ಕೇವಲ 41 ತಿಂಗಳ ಅವಧಿಯಲ್ಲಿ ಶೇ. 62.84ಕ್ಕೆ ಹೆಚ್ಚಾಗಿದೆ: ಶ್ರೀಮತಿ ಮಹಾಜನ್

ಭಾರತ ಸರ್ಕಾರವು ಜಲ ಜೀವನ್ ಮಿಷನ್‌ನಲ್ಲಿ ವಿನಿಯೋಗಿಸುತ್ತಿರುವ ಹೂಡಿಕೆಯು ಆರೋಗ್ಯ ಕ್ಷೇತ್ರದಲ್ಲಿ ಬಹುಮುಖಿ ಗಂಭೀರ ಪರಿಣಾಮವನ್ನು ಬೀರುತ್ತಿರುವುದು ಅಧ್ಯಯನದಿಂದ ಸಾಬೀತಾಗಿದೆ: ಡಾ. ರಾಜೀವ್ ಬಹ್ಲ್

ದೇಶಾದ್ಯಂತ ಎಲ್ಲ ಮನೆಗಳಿಗೆ ಸುರಕ್ಷಿತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದರಿಂದ ಅತಿಸಾರ ರೋಗದಿಂದ ಸಂಭವಿಸಬಹುದಾದ ಸುಮಾರು 4 ಲಕ್ಷ ಸಾವುಗಳನ್ನು ತಪ್ಪಿಸಬಹುದಾಗಿದೆ

ಭಾರತದಲ್ಲಿ ಸಾರ್ವತ್ರಿಕವಾಗಿ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದರಿಂದ ಅತಿಸಾರ ರೋಗದಿಂದ ಸುಮಾರು 14 ಮಿಲಿಯನ್ ಡಿಎಎಲ್‌ವೈಗಳನ್ನು (ಡಿಸೆಬಿಲಿಟಿ ಅಡ್ಜಸ್ಟೆಡ್‌ ಲೈಫ್‌ ಯಿಯರ್ಸ್‌- ವೈಕಲ್ಯತೆಯ ಕಾರಣಕ್ಕೆ ಜೀವನ ಹೊಂದಾಣಿಕ ವರ್ಷಗಳ ಪ್ರಮಾಣ) ತಡೆಗಟ್ಟಬಹುದು ಎಂದು ಅಂದಾಜಿಸಲಾಗಿದ್ದು, ಅದರ ಪರಿಣಾಮವಾಗಿ ಸುಮಾರು 101 ಶತಕೋಟಿ (ಬಿಲಿಯನ್‌) ವರೆಗಿನ ವೆಚ್ಚ ಉಳಿತಾಯವಾಗುತ್ತದೆ

Posted On: 09 JUN 2023 3:39PM by PIB Bengaluru

"ಜೀವಗಳ ರಕ್ಷಣೆ, ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಸಬಲೀಕರಣ ಹಾಗೂ ಜೀವನವನ್ನು ಸುಗಮವಾಗಿಸುವಲ್ಲಿ ಸುರಕ್ಷಿತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯು ಮಹತ್ವದ ಕೊಡುಗೆ ನೀಡುತ್ತಿರುವುದು ಸಾಬೀತಾಗುತ್ತಿದೆ,ʼʼ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ. ಪೌಲ್‌ ಹೇಳಿದ್ದಾರೆ. ಭಾರತದಲ್ಲಿ "ʼಹರ್‌ ಘರ್‌ ಜಲ್‌ʼ" ಕಾರ್ಯಕ್ರಮದ ಗಣನೀಯ ಪರಿಣಾಮ, ಪ್ರಯೋಜನಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಹೊರತಂದಿರುವ ಮಹತ್ವದ ವರದಿ ನೀತಿ ಆಯೋಗದಲ್ಲಿ ಇಂದು ಬಿಡುಗಡೆಯಾದ ಸಂದರ್ಭದಲ್ಲಿ ಅವರು ಈ ರೀತಿಯ ಅಭಿಪ್ರಾಯಪಟ್ಟರು. "ಸಾರ್ವಜನಿಕರ ಹಾಗೂ ಮತ್ತು ಕುಟುಂಬಗಳ ಜೀವ ರಕ್ಷಣೆ ಜತೆಗೆ ದೈಹಿಕ, ಮಾನಸಿಕ ಮತ್ತು ಆರ್ಥಿಕವಾಗಿ ಸುಧಾರಿಸುವಲ್ಲಿ ಈ ರೀತಿಯ ನೇರ ಪರಿಣಾಮ ಬೀರುವ ಮನೆ ಮನೆಗೆ ಗಂಗೆ ಕಾರ್ಯಕ್ರಮದಂತಹ ಮತ್ತೊಂದು ಕಾರ್ಯಕ್ರಮವಿಲ್ಲʼʼ ಎಂದು ಒತ್ತಿ ಹೇಳಿದರು. ಹಾಗೆಯೇ ಕಾರ್ಯಕ್ರಮ ಅನುಷ್ಠಾನದ ಪ್ರಮಾಣ ಹಾಗೂ ವೇಗದ ಬಗ್ಗೆ ಪ್ರಸ್ತಾಪಿಸಿದ ಡಾ. ಪೌಲ್‌, "ಪ್ರತಿ ಸೆಕೆಂಡಿಗೆ ಒಂದು ಹೊಸ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುತ್ತಿದ್ದು, ದೇಶದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಪರಿವರ್ತನೆಯಾಗುತ್ತಿದೆ,ʼʼ ಎಂದು ಹೇಳಿದರು.

ದೇಶಾದ್ಯಂತ ಎಲ್ಲ ಮನೆಗಳಿಗೆ ಸುರಕ್ಷಿತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದರಿಂದ ಅತಿಸಾರದಿಂದ ಸಂಭವಿಸಬಹುದಾದ ಸುಮಾರು 4 ಲಕ್ಷ ಸಾವುಗಳನ್ನು ತಪ್ಪಿಸಬಹುದಾಗಿದೆ. ಆ ಮೂಲಕ ಕಾಯಿಲೆಗಳಿಗೆ ಸಂಬಂಧಪಟ್ಟಂತೆ 14 ಮಿಲಿಯನ್‌ ಅಂಗವೈಕಲ್ಯ ಹೊಂದಾಣಿಕೆ ಜೀವನ ವರ್ಷಗಳ (ಡಿಸೆಬಿಲಿಟಿ ಅಡ್ಜಸ್ಟೆಡ್‌ ಲೈಫ್‌ ಯಿಯರ್ಸ್‌-ಡಿಎಎಲ್‌ವೈ) ಪ್ರಮಾಣವನ್ನು ತಡೆಯಬಹುದಾಗಿದೆ ಎಂದು ವರದಿ ಅಂದಾಜಿಸಿದೆ. ಇದು ಸುಮಾರು 101 ಶತಕೋಟಿ ಡಾಲರ್‌ನಷ್ಟು ಉಳಿತಾಯಕ್ಕೆ ನಾಂದಿ ಹಾಡಲಿದೆ.

ಕೇಂದ್ರ ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ವಿನಿ ಮಹಾಜನ್ ಮತ್ತು ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಧಾನ ನಿರ್ದೇಶಕರಾದ ಡಾ. ರಾಜೀವ್ ಬಹ್ಲ್ ಹಾಗೂ ಭಾರತಕ್ಕೆ ಡಬ್ಲ್ಯೂಎಚ್‌ಒ ಪ್ರತಿನಿಧಿ ಡಾ. ರೊಡೆರಿಕೊ ಎಚ್. ಆಫ್ರಿನ್ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ವಿನಿ ಮಹಾಜನ್, 2019ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಲ್ಲಿ ನೀರಿನ ಸಂಪರ್ಕ ಶೇ 16.64ರಷ್ಟಿದ್ದುದು ಕೇವಲ 41 ತಿಂಗಳ ಅವಧಿಯಲ್ಲಿ ಶೇ. 62.84ಕ್ಕೆ ಏರಿಕೆಯಾಗಿದೆ. 2023ರಲ್ಲಿ ಈವರೆಗೆ ಪ್ರತಿ ಸೆಕೆಂಡಿಗೆ ಸರಕಾರಿ ಒಂದು ನಲ್ಲಿ ನೀರಿನ ಸಂಪಕ ಕಲ್ಪಿಸಲಾಗುತ್ತಿದೆ. ಮಿಷನ್‌ನ ಒಟ್ಟು ಅನುಮೋದಿತ ವೆಚ್ಚ 3,600 ಶತಕೋಟಿ ರೂ. (43,62 ಶತಕೋಟಿ ಡಾಲರ್‌) ಮೂಲಕ 100.8 ಶತಕೋಟಿ ಡಾಲರ್‌ ಮೌಲ್ಯದ 13.8 ಮಿಲಿಯನ್ ಡಿಎಎಲ್‌ವೈ ಕಾರಣದಿಂದಾಗಿ ಎರಡು ಬಾರಿ ಚೇತರಿಸಿಕೊಂಡಿದೆ ಎಂಬುದು ಗಮನಾರ್ಹ,ʼʼ ಎಂದು ವಿಶ್ಲೇಷಿಸಿದರು.

"ನೀರು ಮತ್ತು ನೈರ್ಮಲ್ಯ ಕ್ಷೇತ್ರದಲ್ಲಿನ ಹೂಡಿಕೆಯಿಂದ ಸಾಕಷ್ಟು ಪ್ರಯೋಜನಗಳಾರಂಭಿಸಿವೆ. ಮುಖ್ಯವಾಗಿ ಆರ್ಥಿಕ, ಪರಿಸರ, ಜೀವನದ ಗುಣಮಟ್ಟ ಮತ್ತು ಆರೋಗ್ಯ ಸೇರಿದಂತೆ ಅನೇಕ ಪ್ರಯೋಜನಗಳು ಸಿಗಲಾರಂಭಿಸಿವೆ. ಸುರಕ್ಷಿತ ನೀರಿನ ವ್ಯವಸ್ಥೆಯಿಂದಾಗಿ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸಬಹುದಾಗಿದೆ. ನೀರಿನಲ್ಲಿನ ಆರ್ಸೆನಿಕ್, ಫ್ಲೋರೈಡ್, ಭಾರೀ ಲೋಹ ಇತರೆ ಅಂಶಗಳು ಜನರ ಉತ್ಪಾದನೆ ಪ್ರಮಾಣವನ್ನು ತಗ್ಗಿಸಿ ದುರ್ಬಲಗೊಳಿಸುವಂತಹ ಪರಿಣಾಮ ಬೀರುತ್ತದೆ. ಹಾಗಾಗಿ ಭಾರತ ಸರ್ಕಾರವು ಜಲ ಜೀವನ್ ಮಿಷನ್‌ ಯೋಜನೆಯಲ್ಲಿ ಮಾಡುತ್ತಿರುವ ಹೂಡಿಕೆಯು ಸಾರ್ವಜನಿಕ ಸ್ವಾಸ್ಥ್ಯದ ಮೇಲೆ ಗಮನಾರ್ಹ ಪರಿಣಾಮವನ್ನು ತರಲಿದೆ ಎಂದು ಅಧ್ಯಯನ ಹೇಳಿದೆ," ಎಂದು ಹೇಳಿದರು.

ಐಸಿಎಂಆರ್‌ನ ಪ್ರಧಾನ ನಿದೇಶಕ ಡಾ. ಬಹ್ಲ್‌, "ನಾಗರಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಸ್ಥಳದಲ್ಲೇ ಒದಗಿಸುವ ʼಹರ್‌ ಘರ್‌ ಜಲ್‌ʼ ಯೋಜನೆ ನಿಜಕ್ಕೂ ಶ್ಲಾಘನೀಯ. . ಭಾರತ ಸರ್ಕಾರವು ಜಲ್ ಜೀವನ್ ಮಿಷನ್‌ ಯೋಜನೆಯಲ್ಲಿ ಮಾಡುತ್ತಿರುವ ಹೂಡಿಕೆಯು ಆರೋಗ್ಯದ ಮೇಲೆ ಗಮನಾರ್ಹ ಗುಣಾಕಾರದ ಪರಿಣಾಮವನ್ನು ಹೊಂದಿದೆ ಎಂಬುದು ಈ ಅಧ್ಯಯನದಿಂದ ಸಾಬೀತಾಗಿದೆ,ʼʼ ಎಂದು ಪುನರುಚ್ಚರಿಸಿದರು.

ʼಹರ್ ಘರ್ ಜಲ್' ವರದಿಯು ಅಶುದ್ಧ ನೀರು, ನೈರ್ಮಲ್ಯ ಮತ್ತು ಸ್ವಾಸ್ಥ್ಯ (ವಾಶ್) ಸಂಬಂಧಿತ ಸಮಸ್ಯೆ ಕಡಿವಾಣ ಹಾಕುವ ಮೂಲಕ ಅತಿಸಾರ ರೋಗ ನಿಯಂತ್ರಿಸುವತ್ತ ಕೇಂದ್ರೀಕೃತಗೊಂಡಿದೆ. ಈ ರೋಗಗಳನ್ನು ನಿಯಂತ್ರಿಸುವ ತುರ್ತು ಅಗತ್ಯವನ್ನು ಒತ್ತಿ ಹೇಳುವ ಜತೆಗೆ ಸಾರ್ವಜನಿಕ ಆರೋಗ್ಯ ಮತ್ತು ಆರ್ಥಿಕ ಸುಧಾಣೆಯಲ್ಲಿ ಗಣನೀಯ ಪ್ರಯೋಜನಗಳನ್ನು ತಂದುಕೊಡಲಿದೆ.

2019ಕ್ಕೂ ಮೊದಲು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಸವಾಲಾಗಿತ್ತು. 2018ರಲ್ಲಿ, ಭಾರತದ ಒಟ್ಟು ಜನಸಂಖ್ಯೆಯ ಶೇ. 36 ಅಂದರೆ ಗ್ರಾಮೀಣ ಪ್ರದೇಶಗಳ ಶೇ. 44ರಷ್ಟು ಜನಸಂಖ್ಯೆ ಒಳಗೊಂಡ ಜನಸಮೂಹವು ತನ್ನ ಆವರಣದಲ್ಲೇ ಸುಧಾರಿತ ಕುಡಿಯುವ ನೀರಿನ ಮೂಲವನ್ನು ಹೊಂದಿರಲಿಲ್ಲ ಎಂದು ವರದಿ ಉಲ್ಲೇಖಿಸಿದೆ. ಅಸುರಕ್ಷಿತ ಕುಡಿಯುವ ನೀರಿನ ನೇರ ಸೇವನೆಯು ಗಂಭೀರ ಆರೋಗ್ಯ ಸಮಸ್ಯೆ ಜತೆಗೆ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. 2019ರಲ್ಲಿ ಅಸುರಕ್ಷಿತ ಕುಡಿಯುವ ನೀರು ಸೇವನೆ ಹಾಗೂ ನೈರ್ಮಲ್ಯ, ಸ್ವಾಸ್ಥ್ಯದ ಕೊರತೆ ಕಾರಣಕ್ಕೆ ಜಾಗತಿಕವಾಗಿ 1.4 ಮಿಲಿಯನ್ ಸಾವು ಮತ್ತು 74 ಮಿಲಿಯನ್ ಡಿಎಎಲ್‌ವೈಗೆ ಕಾರಣವಾಗಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ವಿವಿಧ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ಸೂಚಕಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ. ಸುರಕ್ಷಿತವಾಗಿ ನಿರ್ವಹಿಸಲಾದ ಕುಡಿಯುವ ನೀರಿನ ಸೇವೆಗಳನ್ನು ಬಳಸುವ ಜನಸಂಖ್ಯೆಯ ಪ್ರಮಾಣ (ಸೂಚಕ 6.1.1) ಮತ್ತು ಅಸುರಕ್ಷಿತ ನೀರು, ನೈರ್ಮಲ್ಯ ಮತ್ತು ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಮರಣ (ಸೂಚಕ 3.9.2) ಪ್ರಮಾಣ, ನೀರು, ನೈರ್ಮಲ್ಯ ಮತ್ತು ಸ್ವಾಸ್ಥ್ಯದಲ್ಲಿನ ಸುಧಾರಣೆಗಳಿಗೆ ಸಂಬಂಧಿಸಿದ ಆರೋಗ್ಯ ಪ್ರಯೋಜನಗಳನ್ನು ಅಂದಾಜಿಸಲು ಡಬ್ಲ್ಯೂಎಚ್‌ಒ ಸಂಸ್ಥೆಯು ಹಲವು ವಿಧಾನಗಳು ಮತ್ತು ಸಾಧನಗಳನ್ನು ಅಭಿವೃದ್ಧಿಪಡಿಸಿದೆ, ವಿಶೇಷವಾಗಿ ಅತಿಸಾರ ರೋಗಗಳು ಮತ್ತು ಇತರ ಸಂಬಂಧಿತ ಆರೋಗ್ಯ ಸಮಸ್ಯೆಗಳ ಪ್ರಭಾವ ತಗ್ಗಿಸಲು ಮಾನದಂಡಗಳನ್ನು ಗೊತ್ತುಪಡಿಸಿದೆ.

ಮನೆಗಳ ಆವರಣದಲ್ಲೇ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವುದರಿಂದ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಸಾಕಷ್ಟು ಸಮಯ, ಶ್ರಮ ಉಳಿತಾಯವಾಗಲಿದೆ ಎಂದು ವರದಿಯಲ್ಲಿದೆ. 2018ರಲ್ಲಿ ಭಾರತದ ಮಹಿಳೆಯರು ಮನೆಯ ಅಗತ್ಯಗಳನ್ನು ಪೂರೈಸುವುದಕ್ಕಾಗಿ ನೀರು ಸಂಗ್ರಹಿಸಲು ಪ್ರತಿದಿನ ಸರಾಸರಿ 45.5 ನಿಮಿಷಗಳನ್ನು ವಿನಿಯೋಗಿಸಿದ್ದಾರೆ. ಅಂದರೆ, ಮನೆಯ ಆವರಣದಲ್ಲಿ ನೀರಿನ ವ್ಯವಸ್ಥೆ ಇಲ್ಲದ ಕುಟುಂಬಗಳು ನಿತ್ಯ 66.6 ಮಿಲಿಯನ್ ಗಂಟೆಗಳಷ್ಟು ಸಮಯವನ್ನು ನೀರು ಸಂಗ್ರಹ ಕಾರ್ಯಕ್ಕೆ ವಿನಿಯೋಗಿಸಿರುವುದು ಸ್ಪಷ್ಟವಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ನೀರು ಸಂಗ್ರಹಕ್ಕೆ ಹೆಚ್ಚು ಸಮಯ (55.8 ಮಿಲಿಯನ್ ಗಂಟೆಗಳು) ವಿನಿಯೋಗವಾಗುತ್ತಿದೆ. ಸಾರ್ವತ್ರಿಕವಾಗಿ ಎಲ್ಲ ಮನೆಗಳಿಗೆ ನಲ್ಲಿ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ವ್ಯವಸ್ಥೆಯು ನಿತ್ಯ ನೀರು ಸಂಗ್ರಹ ಅಗತ್ಯವನ್ನು ತೊಡೆದು ಹಾಕಲಿದೆ.

ವರದಿ ಪ್ರಕಟಣೆಯ ಸಂದರ್ಭದಲ್ಲಿ ಡಿಡಿಡಬ್ಲ್ಯೂಎಸ್‌ ಇಲಾಖೆ ಕಾರ್ಯದರ್ಶಿ ಶ್ರೀಮತಿ ವಿನಿ ಮಹಾಜನ್ ಅವರು ಜಲ ಜೀವನ್ ಮಿಷನ್‌ ಯೋಜನೆಯ ಗಮನಾರ್ಹ ಪ್ರಗತಿಯನ್ನು ಎತ್ತಿ ತೋರಿಸಿದರು. 2019ರಲ್ಲಿ ಗ್ರಾಮೀಣ ಪ್ರದೇಶಗಳ ಪ್ರತಿ ಮನೆಗೆ ನಲ್ಲಿ ನೀರಿನ ಸಂಪರ್ಕ ಪ್ರಮಾಣ ಶೇ.16.64ರಷ್ಟಿತ್ತು. ಜಲ ಜೀವನ್‌ ಮಿಷನ್‌ ಯೋಜನೆಯ ಅನುಷ್ಠಾನ ಕಾರ್ಯ ಆರಂಭವಾದ ತರುವಾಯ ಕೇವಲ 41 ತಿಂಗಳಲ್ಲಿ ಶೇ.62.84ಕ್ಕೆ ಏರಿದೆ ಎಂದೂ ಉಲ್ಲೇಖಿಸಿದರು. ಹಿಂದೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಪ್ರಮಾಣ ವಾರ್ಷಿಕವಾಗಿ ಶೇ. 0.23ರಷ್ಟಿದ್ದುದಕ್ಕೆ ಹೋಲಿಸಿದರೆ ಸದ್ಯ ವಾರ್ಷಿಕ ಸರಾಸರಿ ಶೇ. 13.5ಕ್ಕೆ ಹೆಚ್ಚಳವಾಗಿದೆ.

'ಹರ್ ಘರ್ ಜಲ್' ಕಾರ್ಯಕ್ರಮದ ಕುರಿತ ವಿವರ:

ಕೇಂದ್ರ ಜಲ ಶಕ್ತಿ ಸಚಿವಾಲಯದಡಿ ಜಲ್ ಜೀವನ್ ಮಿಷನ್ ಯೋಜನೆಯ ಮೂಲಕ ಜಾರಿಗೊಳಿಸಲಾಗುತ್ತಿರುವ ʼಹರ್ ಘರ್ ಜಲ್ʼ ಕಾರ್ಯಕ್ರಮವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 15, 2019ರಂದು ಘೋಷಿಸಿದರು. ಈ ಕಾರ್ಯಕ್ರಮವು ಪ್ರತಿ ಗ್ರಾಮೀಣ ಕುಟುಂಬಕ್ಕೆ ನಲ್ಲಿ ಮೂಲಕ ಶುದ್ಧ, ಸಮರ್ಪಕ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಕಲ್ಪಿಸಲು ಗುರಿ ಹೊಂದಿದೆ. ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಎಸ್‌ಡಿಜಿ 6.1 ಪ್ರಗತಿಯ ಮೇಲ್ವಿಚಾರಣೆಗಾಗಿ ಕುಡಿಯುವ ನೀರು, ನೈರ್ಮಲ್ಯ ಹಾಗೂ ಸ್ವಾಸ್ಥ್ಯ (ಜೆಎಂಪಿ) ಸಂಬಂಧ ಡಬ್ಲ್ಯೂಎಚ್‌ಒ/ ಯುನಿಸೆಫ್‌ ಜಂಟಿ ಮೇಲ್ವಿಚಾರಣಾ ಕಾರ್ಯಕ್ರಮದೊಂದಿಗೆ ʼಹರ್‌ ಘರ್‌ ಜಲ್‌ʼ ಕಾರ್ಯಕ್ರಮವು ಜೋಡಣೆಯಾಗಿದೆ

****(Release ID: 1931485) Visitor Counter : 82