ಪ್ರಧಾನ ಮಂತ್ರಿಯವರ ಕಛೇರಿ

ರೈಲು ದುರಂತ ಸಂಭವಿಸಿದ ಒಡಿಶಾದ ಬಾಲಸೋರ್‌ಗೆ ಭೇಟಿ ವೇಳೆ ಮಾಧ್ಯಮಗಳನ್ನು ಉದ್ದೇಶಿಸಿ ಪ್ರಧಾನ ಮಂತ್ರಿಗಳ ಭಾಷಣದ ಇಂಗ್ಲಿಷ್‌ ಅವತರಿಣಿಕೆ

Posted On: 03 JUN 2023 7:03PM by PIB Bengaluru

ಇಲ್ಲೊಂದು ಭೀಕರ ಅಪಘಾತ ಸಂಭವಿಸಿದ್ದು, ನನಗೆ ಅತೀವ ನೋವುಂಟು ಮಾಡಿದೆ. ನಾನಾ ರಾಜ್ಯಗಳ ಜನ ಈ ದುರ್ಘಟನೆಯಲ್ಲಿ ಏನನ್ನೋ ಕಳೆದುಕೊಂಡಿದ್ದಾರೆ. ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದು, ಕಲ್ಪನೆಗೂ ಮೀರಿದ ದುರ್ಘಟನೆಯಿಂದ ಮನಸ್ಸಿಗೆ ಬಹಳ ನೋವಾಗಿದೆ.

ಘಟನೆಯಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ತ್ವರಿತವಾಗಿ ಗುಣಮುಖರಾಗಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ದುರ್ಘಟನೆಯಲ್ಲಿ ಕಳೆದುಕೊಂಡ ಸದಸ್ಯರನ್ನು ನಾವು ಮರಳಿ ತರಲು ಸಾಧ್ಯವಿಲ್ಲದಿದ್ದರೂ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬದವರೊಂದಿಗೆ ಸರ್ಕಾರ ನಿಲ್ಲಲಿದೆ. ಈ ಅನಾಹುತವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಎಲ್ಲ ಕೋನಗಳಿಂದಲೂ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದ್ದು, ಯಾರೇ ತಪ್ಪಿತಸ್ಥರಾಗಿ ಕಂಡುಬಂದರೂ ಕಠಿಣ ಶಿಕ್ಷೆಗೆ ಒಳಪಡಿಸದೆ ಬಿಡುವ ಪ್ರಶ್ನೆಯೇ ಇಲ್ಲ.

ಈ ಸಂದರ್ಭದಲ್ಲಿ ನೊಂದ, ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಎಲ್ಲ ರೀತಿಯ ನೆರವು ಒದಗಿಸಲು ಪ್ರಯತ್ನಿಸುತ್ತಿರುವ ಒಡಿಶಾ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತದ ಎಲ್ಲ ಅಧಿಕಾರಿಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಹಾಗೆಯೇ ಅನಾಹುತದ ಸನ್ನಿವೇಶದಲ್ಲಿ ರಕ್ತದಾನ, ರಕ್ಷಣಾ ಕಾರ್ಯಕ್ಕೆ ನೆರವಾಗುವುದು ಸೇರಿದಂತೆ ಸಾಧ್ಯವಿರುವ ಎಲ್ಲ ರೀತಿಯ ನೆರವು, ಸಹಕಾರ, ಸ್ಪಂದನೆ ನೀಡುತ್ತಿರುವ ಸ್ಥಳೀಯ ನಿವಾಸಿಗಳಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಸ್ಥಳೀಯ ಯುವಕರು ರಾತ್ರಿಯಿಡೀ ಪರಿಹಾರ, ಸ್ಪಂದನಾ ಕಾರ್ಯದಲ್ಲಿ ತೊಡಗಿಸಿಕೊಂಡು ಶ್ರಮಿಸಿರುವುದು ಶ್ಲಾಘನೀಯ.

ರಕ್ಷಣಾ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಯಲು ಸಹಕರಿಸಿದ ಈ ಭಾಗದ ಜನರಿಗೆ ಗೌರವಪೂರ್ವಕವಾಗಿ ನಮಿಸುತ್ತೇನೆ. ಅವರ ಸಹಕಾರದಿಂದ ರಕ್ಷಣಾ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಲು ಸಾಧ್ಯವಾಯಿತು. ರೈಲ್ವೆ ಇಲಾಖೆಯು ತ್ವರಿತ ರಕ್ಷಣಾ ಹಾಗೂ ಪರಿಹಾರ ಕಾರ್ಯಕ್ಕಾಗಿ ತನ್ನೆಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಕಾರ್ಯ ನಿರ್ವಹಿಸುತ್ತಿದ್ದು, ಸಾಧ್ಯವಾದಷ್ಟು ಶೀಘ್ರವಾಗಿ ಹಳಿಗಳನ್ನು ಪುನರ್‌ ಸ್ಥಾಪಿಸುವ ಜತೆಗೆ ತ್ವರಿತ ಗತಿಯಲ್ಲಿ ಸಂಚಾರ ಪುನಾರಂಭಕ್ಕೆ ಅಗತ್ಯವಿರುವ ಎಲ್ಲ ವ್ಯವಸ್ಥೆಯನ್ನು ಸಮರೋಪಾದಿಯಲ್ಲಿ ಕಲ್ಪಿಸುತ್ತಿದೆ. ಈ ಮೂರು ಅಂಶಗಳ ನಿಟ್ಟಿನಲ್ಲಿ ಉತ್ತಮ ಚಿಂತನೆಯ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ.

ಇಂತಹ ದುಃಖದ ಸಂದರ್ಭದಲ್ಲಿ ನಾನು ಅನಾಹುತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯವನ್ನೂ ವಿಚಾರಿಸಿದ್ದೇನೆ. ಈ ದುರ್ಘಟನೆ ಉಂಟು ಮಾಡಿರುವ ನೋವನ್ನು ವ್ಯಕ್ತಪಡಿಸಲು ನನ್ನಲ್ಲಿ ಪದಗಳಿಲ್ಲ. ಆದರೆ ಈ ದುರದೃಷ್ಟಕರ ಕೆಟ್ಟ ಘಳಿಗೆಯಿಂದ ಆದಷ್ಟು ಶೀಘ್ರವಾಗಿ ನಾವೆಲ್ಲ ಹೊರ ಬರುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಭಾವಿಸುತ್ತೇನೆ. ಈ ಅವಘಡದಿಂದ ನಾವು ಸಾಕಷ್ಟು ಕಲಿಯುತ್ತೇವೆ. ಹಾಗೆಯೇ ಪ್ರಯಾಣಿಕರು, ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಿ ನಮ್ಮ ವ್ಯವಸ್ಥೆಯನ್ನು ಇನ್ನಷ್ಟು ಸದೃಢ- ಸುರಕ್ಷಿತವಾಗಿ ಮುಂದುವರಿಸುವ ವಿಶ್ವಾಸವಿದೆ. ಈ ದುಃಖದ ಸಂದರ್ಭದಲ್ಲಿ ನಾವೆಲ್ಲರೂ ನೊಂದ ಕುಟುಂಬಗಳಿಗಾಗಿ ಪ್ರಾರ್ಥಿಸೋಣ.

****



(Release ID: 1930920) Visitor Counter : 115