ಸಹಕಾರ ಸಚಿವಾಲಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ  “ಸಹಕಾರದಿಂದ  ಸಮೃದ್ಧಿ”( ಸಹಕಾರ್ ಸೇ ಸಮೃದ್ಧಿ) ಯ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ಇನ್ನೂ ಐದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ.

Posted On: 08 JUN 2023 3:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ “ಸಹಕಾರದಿಂದ  ಸಮೃದ್ಧಿ”( ಸಹಕಾರ್ ಸೇ ಸಮೃದ್ಧಿ) ಯ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ಇನ್ನೂ ಐದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಶ್ರೀ ಮನ್ಸುಖ್ ಎಸ್. ಮಾಂಡವಿಯಾ ಅವರೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಸಹಕಾರ ಸಚಿವಾಲಯ ಮತ್ತು ರಸಗೊಬ್ಬರ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ಈ ಕೆಳಗಿನ 5 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು : -

1. ದೇಶಾದ್ಯಂತ ಸುಮಾರು 1 ಲಕ್ಷ ಪ್ರಾಥಮಿಕ ಕೃಷಿ ಸಾಲ ಸಹಕಾರ ಸಂಘಗಳಿವೆ.  ವಿವರಗಳ ಆಧಾರದ ಮೇಲೆ, ರಸಗೊಬ್ಬರ ಚಿಲ್ಲರೆ ವ್ಯಾಪಾರಿಗಳಾಗಿ ಕಾರ್ಯನಿರ್ವಹಿಸದ ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು (ಪಿಎಸಿಎಸ್) ಗುರುತಿಸಲಾಗುತ್ತದೆ ಮತ್ತು ಹಂತ ಹಂತವಾಗಿ ಕಾರ್ಯಸಾಧ್ಯತೆಯ ಆಧಾರದ ಮೇಲೆ ಚಿಲ್ಲರೆ ವ್ಯಾಪಾರಿಗಳಾಗಿ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಲಾಗುತ್ತದೆ.

2. ಈಗ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳಾಗಿ (ಪಿಎಂಕೆಎಸ್ಕೆ) ಕಾರ್ಯನಿರ್ವಹಿಸದಿರುವ ಪಿಎಸಿಎಸ್  ಸಂಘಗಳನ್ನು  ಪಿಎಂಕೆಎಸ್ಕೆ ಯ ವ್ಯಾಪ್ತಿಯಲ್ಲಿ ತರಲಾಗುವುದು.

3. ಪಿಎಸಿಎಸ್  ಸಂಘಗಳನ್ನು  ಸಾವಯವ ಗೊಬ್ಬರಗಳ ಮಾರುಕಟ್ಟೆಯೊಂದಿಗೆ ಜೋಡಿಸಲಾಗುತ್ತದೆ, ವಿಶೇಷವಾಗಿ ಹುದುಗಿಸಿದ ಸಾವಯವ ಗೊಬ್ಬರ (ಎಫ್ಒಎಂ) / ದ್ರವ ಹುದುಗಿಸಿದ ಸಾವಯವ ಗೊಬ್ಬರ (ಎಲ್ಎಫ್ಒಎಂ) / ಫಾಸ್ಫೇಟ್ನಿಂದ ಸಮೃದ್ಧಗೊಂಡ ಸಾವಯವ ಗೊಬ್ಬರ (ಪಿಆರ್ಒಎಂ).

4. ರಸಗೊಬ್ಬರ ಇಲಾಖೆಯ ಮಾರುಕಟ್ಟೆ ಅಭಿವೃದ್ಧಿ ನೆರವು (ಎಂಡಿಎ) ಯೋಜನೆಯಡಿ, ರಸಗೊಬ್ಬರ ಕಂಪನಿಗಳು ಉತ್ಪನ್ನವನ್ನು ಮಾರಾಟ ಮಾಡಲು ಸಣ್ಣ ಜೈವಿಕ ಸಾವಯವ ಉತ್ಪಾದಕರಿಗೆ ಸಂಗ್ರಾಹಕಕಾರರಾಗಿ ಕಾರ್ಯನಿರ್ವಹಿಸುತ್ತವೆ, ಈ ಜೈವಿಕ ಸಾವಯವ ಗೊಬ್ಬರಗಳ ಪೂರೈಕೆ ಮತ್ತು ಮಾರುಕಟ್ಟೆ ಸರಪಳಿಯಲ್ಲಿ ಪಿಎಸಿಎಸ್  ಸಂಘಗಳನ್ನು ಸಹ ಸಗಟು/ಚಿಲ್ಲರೆ ವ್ಯಾಪಾರಿಗಳಾಗಿ ಸೇರಿಸಲಾಗುತ್ತದೆ. 

5. ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಸಿಂಪಡಿಸಲು ಪಿಎಸಿಎಸ್  ಸಂಘಗಳನ್ನು ಡ್ರೋನ್ ಉದ್ಯಮಿಗಳಾಗಿಯೂ ಬಳಸಿಕೊಳ್ಳಬಹುದು. ಆಸ್ತಿ ಸಮೀಕ್ಷೆಗೂ ಡ್ರೋನ್ಗಳನ್ನು ಬಳಸಬಹುದು.

ಈ ನಿರ್ಣಯಗಳ ಪ್ರಯೋಜನಗಳು : ಈ ಪ್ರಮುಖ ನಿರ್ಣಯಗಳು ಪ್ರಾಥಮಿಕ ಕೃಷಿ ಸಾಲ ಸಂಘಗಳ ಆದಾಯವನ್ನು ಹೆಚ್ಚಿಸುತ್ತವೆ, ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತವೆ ಮತ್ತು ರೈತರು ಸ್ಥಳೀಯ ಮಟ್ಟದಲ್ಲಿ ರಸಗೊಬ್ಬರಗಳು, ಕೀಟನಾಶಕಗಳು, ಬೀಜಗಳು ಮತ್ತು ಕೃಷಿ ಯಂತ್ರೋಪಕರಣಗಳನ್ನು ಪಡೆಯಲು ಸಾಧ್ಯವಾಗುತ್ತದೆ.

****



(Release ID: 1930797) Visitor Counter : 129