ಪ್ರಧಾನ ಮಂತ್ರಿಯವರ ಕಛೇರಿ

ನವದೆಹಲಿಯಲ್ಲಿ ಜರುಗಿದ ರಾಷ್ಟ್ರೀಯ ತಂತ್ರಜ್ಞಾನ ದಿನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಭಾಷಣ

Posted On: 11 MAY 2023 3:16PM by PIB Bengaluru

ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಕೇಂದ್ರ ಸಂಪುಟದ ನನ್ನ ಹಿರಿಯ ಸಹೋದ್ಯೋಗಿಗಳಾದ ಶ್ರೀ ರಾಜನಾಥ್ ಸಿಂಗ್ ಜಿ ಮತ್ತು ಡಾ. ಜಿತೇಂದ್ರ ಸಿಂಗ್ ಜಿ, ವಿಜ್ಞಾನ ಮತ್ತು ತಂತ್ರಜ್ಞಾನ ವಲಯದ ಗೌರವಾನ್ವಿತ ಸದಸ್ಯರು ಮತ್ತು ನನ್ನ ಯುವ ಸಹೋದ್ಯೋಗಿಗಳೆ... ಭಾರತದ ಇತಿಹಾಸದ ಹೆಮ್ಮೆಯ ದಿನಗಳಲ್ಲಿ ಇಂದು ಸಹ ಒಂದಾಗಿದೆ. ಇದೇ ದಿನದಂದು ಭಾರತದ ವಿಜ್ಞಾನಿಗಳು ಪೋಖ್ರಾನ್‌ನಲ್ಲಿ ಇಂತಹ ಸಾಧನೆ ಮಾಡಿದ್ದು, ಭಾರತ ಮಾತೆಯ ಪ್ರತಿ ಮಗುವೂ ಹೆಮ್ಮೆಪಡುವಂತೆ ಮಾಡಿದೆ. ಅಟಲ್ ಜಿ ಅವರು ಭಾರತದ ಯಶಸ್ವಿ ಪರಮಾಣು ಪರೀಕ್ಷೆಯನ್ನು ಘೋಷಿಸಿದ ದಿನವನ್ನು ನಾನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಪೋಖ್ರಾನ್ ಪರಮಾಣು ಪರೀಕ್ಷೆಯ ಮೂಲಕ ಭಾರತವು ತನ್ನ ವೈಜ್ಞಾನಿಕ ಪರಾಕ್ರಮವನ್ನು ಸಾಬೀತುಪಡಿಸಿದ್ದೇ ಅಲ್ಲದೆ, ಭಾರತವನ್ನು ಜಾಗತಿಕ ಸ್ಥಾನದಲ್ಲಿ ಹೊಸ ಉತ್ತುಂಗಕ್ಕೆ ಏರಿಸಿತು. ನಾನು ಅಟಲ್ ಜಿಯವರ ಮಾತುಗಳನ್ನು ಉಲ್ಲೇಖಿಸುತ್ತೇನೆ, “ನಾವು ನಮ್ಮ ಧ್ಯೇಯದಲ್ಲಿ ಎಂದಿಗೂ ನಿಲ್ಲಲಿಲ್ಲ, ಯಾವುದೇ ಸವಾಲಿನ ಮುಂದೆ ತಲೆಬಾಗಲಿಲ್ಲ”. ಈ ಸುಸಂದರ್ಭದಲ್ಲಿ ನಾನು ಎಲ್ಲಾ ದೇಶವಾಸಿಗಳಿಗೆ ರಾಷ್ಟ್ರೀಯ ತಂತ್ರಜ್ಞಾನ ದಿನದ ಶುಭಾಶಯಗಳನ್ನು ಕೋರುತ್ತೇನೆ.

 

ಸ್ನೇಹಿತರೆ,

ಈ ಸಂದರ್ಭದಲ್ಲಿ ಹಲವು ಭವಿಷ್ಯದ ಮಹತ್ವಾಕಾಂಕ್ಷಿ ಉಪಕ್ರಮಗಳನ್ನು ಉದ್ಘಾಟನೆ ಮಾಡಲಾಗಿದ್ದು, ಶಂಕುಸ್ಥಾಪನೆಯನ್ನೂ ನೆರವೇರಿಸಲಾಗಿದೆ. ಈ ಎಲ್ಲಾ ಸಂಸ್ಥೆಗಳು, ಅದು ಮುಂಬೈನಲ್ಲಿರುವ ನ್ಯಾಷನಲ್ ಹ್ಯಾಡ್ರಾನ್ ಬೀಮ್ ಥೆರಪಿ ಫೆಸಿಲಿಟಿ ಮತ್ತು ರೇಡಿಯೊಲಾಜಿಕಲ್ ರಿಸರ್ಚ್ ಸೆಂಟರ್ ಆಗಿರಬಹುದು, ವಿಶಾಖಪಟ್ಟಣಂನ ಬಾರ್ಕ್(BARC) ಕ್ಯಾಂಪಸ್‌ನಲ್ಲಿರುವ ಅಪರೂಪದ ಭೂಮಿಯ ಶಾಶ್ವತ ಮ್ಯಾಗ್ನೆಟ್ ಪ್ಲಾಂಟ್, ಮುಂಬೈನ ಫಿಷನ್ ಮೋಲಿ-99 ಉತ್ಪಾದನಾ ಸೌಲಭ್ಯ ಅಥವಾ ವಿವಿಧ ನಗರಗಳಲ್ಲಿನ ಕ್ಯಾನ್ಸರ್ ಆಸ್ಪತ್ರೆಗಳು, ಪರಮಾಣು ತಂತ್ರಜ್ಞಾನದ ಸಹಾಯದಿಂದ ಮಾನವೀಯತೆ ಮತ್ತು ಭಾರತದ ಪ್ರಗತಿಯನ್ನು ವೇಗಗೊಳಿಸುತ್ತವೆ. ಇಂದು, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಮತ್ತು ಲೇಸರ್ ಇಂಟರ್‌ಫೆರೋಮೀಟರ್ ಗ್ರಾವಿಟೇಶನಲ್-ವೇವ್ ಅಬ್ಸರ್ವೇಟರಿ-ಇಂಡಿಯಾ (LIGO-ಇಂಡಿಯಾ)ಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಲಿಗೊ(LIGO) 21ನೇ ಶತಮಾನದ ಅತ್ಯುತ್ತಮ ವಿಜ್ಞಾನ ಮತ್ತು ತಂತ್ರಜ್ಞಾನದ ಉಪಕ್ರಮಗಳಲ್ಲಿ ಒಂದಾಗಿದೆ. ಇಂದು ಜಗತ್ತಿನ ಕೆಲವೇ ದೇಶಗಳಲ್ಲಿ ಇಂತಹ ವೀಕ್ಷಣಾಲಯಗಳಿವೆ. ಈ ವೀಕ್ಷಣಾಲಯವು ಭಾರತದ ವಿದ್ಯಾರ್ಥಿಗಳು ಮತ್ತು ವಿಜ್ಞಾನಿಗಳಿಗೆ ಆಧುನಿಕ ಸಂಶೋಧನೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ಯೋಜನೆಗಳಿಗಾಗಿ ನಾನು ವೈಜ್ಞಾನಿಕ ಕ್ಷೇತ್ರ ಮತ್ತು ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ.

 

ಸ್ನೇಹಿತರೆ,

ಪ್ರಸ್ತುತ, ನಾವು ಸ್ವಾತಂತ್ರ್ಯದ 'ಅಮೃತ ಕಾಲ'ದ ಆರಂಭಿಕ ತಿಂಗಳಲ್ಲಿದ್ದೇವೆ. ನಾವು 2047 ಕ್ಕೆ ಸ್ಪಷ್ಟ ಗುರಿಗಳನ್ನು ಹೊಂದಿದ್ದೇವೆ. ನಾವು ದೇಶವನ್ನು ಅಭಿವೃದ್ಧಿ ಮತ್ತು ಸ್ವಾವಲಂಬಿಯನ್ನಾಗಿ ಮಾಡಬೇಕು. ಅದು ಭಾರತದ ಆರ್ಥಿಕ ಬೆಳವಣಿಗೆಯಾಗಿರಲಿ, ಸುಸ್ಥಿರ ಅಭಿವೃದ್ಧಿ ಗುರಿಗಳಾಗಿರಲಿ ಅಥವಾ ನಾವೀನ್ಯತೆಗಾಗಿ ಎಲ್ಲರನ್ನೂ ಒಳಗೊಂಡ(ಅಂತರ್ಗತ) ಅಭಿವೃದ್ಧಿಯ ಪರಿಸರ ವ್ಯವಸ್ಥೆಯನ್ನು ರಚಿಸುವುದಿರಲಿ, ತಂತ್ರಜ್ಞಾನವು ನಮಗೆ ಪ್ರತಿ ಹಂತದಲ್ಲೂ ಅತ್ಯಗತ್ಯ. ಆದ್ದರಿಂದ, ಭಾರತವು ಪರಿಪೂರ್ಣ(360°) ಅಥವಾ ಸಮಗ್ರ ಕಾರ್ಯವಿಧಾನದೊಂದಿಗೆ ಹೊಸ ಚಿಂತನೆಯೊಂದಿಗೆ ಈ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ. ಭಾರತವು ತಂತ್ರಜ್ಞಾನವನ್ನು ಪ್ರಾಬಲ್ಯ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವುದಿಲ್ಲ, ಆದರೆ ಇದು ದೇಶದ ಪ್ರಗತಿಯನ್ನು ವೇಗಗೊಳಿಸುವ ಪ್ರಮುಖ ಸಾಧನವಾಗಿದೆ. ಈ ವರ್ಷದ ಥೀಮ್ 'ಸ್ಕೂಲ್ ಟು ಸ್ಟಾರ್ಟಪ್ಸ್ - ಇಗ್ನೈಟಿಂಗ್ ಯಂಗ್ ಮೈಂಡ್ಸ್ ಟು ಇನ್ನೋವೇಟ್' ಎಂದು ನೋಡಲು ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಇಂದಿನ ಯುವ ಪೀಳಿಗೆ ಮತ್ತು ವಿದ್ಯಾರ್ಥಿಗಳು ಈ ಸ್ವಾತಂತ್ರ್ಯದ 'ಅಮೃತ ಕಾಲ'ದಲ್ಲಿ ಭಾರತದ ಉಜ್ವಲ ಭವಿಷ್ಯವನ್ನು ನಿರ್ಧರಿಸುತ್ತಾರೆ. ಇಂದಿನ ಯುವ ಪೀಳಿಗೆ ಹೊಸ ಕನಸುಗಳು ಮತ್ತು ಹೊಸ ಸಂಕಲ್ಪಗಳನ್ನು ಹೊಂದಿದೆ. ಅವರ ಶಕ್ತಿ, ಉತ್ಸಾಹ ಮತ್ತು ಕುತೂಹಲ ಭಾರತದ ದೊಡ್ಡ ಶಕ್ತಿಯಾಗಿದೆ.

 

ಸ್ನೇಹಿತರೆ,

ನಮ್ಮ ದೇಶದ ಮಹಾನ್ ವಿಜ್ಞಾನಿ ಮತ್ತು ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಹೇಳುತ್ತಿದ್ದರು: ಕ್ರಿಯೆಯೊಂದಿಗೆ ಜ್ಞಾನವು ಪ್ರತಿಕೂಲತೆಯನ್ನು ಸಮೃದ್ಧಿಯಾಗಿ ಪರಿವರ್ತಿಸುತ್ತದೆ. ಇಂದು ಭಾರತವು ಜ್ಞಾನ ಸಮಾಜವಾಗಿ ಸಬಲೀಕರಣಗೊಳ್ಳುತ್ತಿರುವಾಗ, ಅದು ಅಷ್ಟೇ ವೇಗವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಭಾರತದ ಯುವ ಮನಸ್ಸುಗಳನ್ನು ನಾವೀನ್ಯತೆಯತ್ತ ಪ್ರೇರೇಪಿಸಲು ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಭದ್ರ ಅಡಿಪಾಯ ಹಾಕಲಾಗಿದೆ. ಅಟಲ್ ಟಿಂಕರಿಂಗ್ ಲ್ಯಾಬ್ ಅಂದರೆ ಕೆಲವು ವರ್ಷಗಳ ಹಿಂದೆ ಪ್ರಾರಂಭವಾದ ಎಟಿಎಲ್ ಇಂದು ದೇಶದ ಇನ್ನೋವೇಶನ್(ನಾವೀನ್ಯತೆ)ಯ ನರ್ಸರಿಯಾಗುತ್ತಿದೆ. ಇಂದು, ದೇಶದ 35 ರಾಜ್ಯಗಳ 700 ಜಿಲ್ಲೆಗಳಲ್ಲಿ 10,000ಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ. ವಿಜ್ಞಾನ, ತಂತ್ರಜ್ಞಾನ, ನಾವೀನ್ಯತೆ ಮತ್ತು ಪೋಷಣಾ ಕೇಂದ್ರ(ಇನ್ ಕ್ಯುಬೇಟರ್ಸ್)ಗಳ ಈ ಕಾರ್ಯಕ್ರಮ(ಮಿಷನ್) ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಅಲ್ಲ. 60ರಷ್ಟು ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಸರ್ಕಾರಿ ಮತ್ತು ಗ್ರಾಮೀಣ ಶಾಲೆಗಳಲ್ಲಿ ಸ್ಥಾಪಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ಬದಲಾಗುತ್ತಿರುವ ಶಿಕ್ಷಣದ ವಿಧಾನಗಳನ್ನು ನೀವು ಊಹಿಸಬಹುದು, ಅವರು ನಾವೀನ್ಯತೆಯ ಕಡೆಗೆ ಸ್ಫೂರ್ತಿ ಪಡೆಯುತ್ತಿದ್ದಾರೆ. ಇಂದು ಅಟಲ್ ಟಿಂಕರಿಂಗ್ ಲ್ಯಾಬ್ ಗಳ ಸುಮಾರು 12 ಲಕ್ಷ ನಾವೀನ್ಯತೆ ಯೋಜನೆಗಳಲ್ಲಿ 75 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೂರ್ಣ ಹೃದಯದಿಂದ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ. ಅವರನ್ನು ಕೈ ಹಿಡಿಯುವುದು ಮತ್ತು ಅವರ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಅವರಿಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಇಂದು ನೂರಾರು ಸ್ಟಾರ್ಟಪ್‌ಗಳು ಅಟಲ್ ಇನ್ನೋವೇಶನ್ ಸೆಂಟರ್‌ಗಳಲ್ಲಿ ಪೋಷಣೆ ಪಡೆದಿವೆ. ಅಟಲ್ ಟಿಂಕರಿಂಗ್ ಲ್ಯಾಬ್‌ಗಳಂತೆ, ಅಟಲ್ ಇನ್ನೋವೇಶನ್ ಸೆಂಟರ್‌ಗಳು(ಎಐಸಿ) ಸಹ ಹೊಸ ಭಾರತದ ಪ್ರಯೋಗಾಲಯಗಳಾಗಿ ಹೊರಹೊಮ್ಮುತ್ತಿವೆ. ಹಿಂದೆ ನಾವು ಉದ್ಯಮಿಗಳನ್ನು ನೋಡಿದ್ದೇವೆ, ಆದರೆ ಈಗ ಅವರು ಟಿಂಕರ್ ಉದ್ಯಶೀಲ(ಪ್ರಿನಿಯರ್)ರಾಗಿದ್ದಾರೆ. ಈ ಟಿಂಕರ್-ಪ್ರಿನಿಯರ್‌ಗಳು ಭವಿಷ್ಯದಲ್ಲಿ ಪ್ರಮುಖ ಉದ್ಯಮಶೀಲರಾಗಲಿದ್ದಾರೆ ಎಂಬುದನ್ನು ನೀವು ನೋಡುತ್ತೀರಿ.

 

ಸ್ನೇಹಿತರೆ,

ಮಹರ್ಷಿ ಪತಂಜಲಿಯ ಒಂದು ಸೂತ್ರವಿದೆ - ಪರಮಾಣು ಪರಮ ಮಹತ್ತ್ವ ಅಂತ್ಯ: ಅಸ್ಯ ವಶೀಕಾರಃ ಅಂದರೆ, ನಾವು ಒಂದು ಗುರಿಗೆ ಸಂಪೂರ್ಣವಾಗಿ ಅರ್ಪಿಸಿಕೊಂಡಾಗ, ಪರಮಾಣುವಿನಿಂದ ಬ್ರಹ್ಮಾಂಡದವರೆಗೆ ಎಲ್ಲವೂ ನಮ್ಮ ನಿಯಂತ್ರಣಕ್ಕೆ ಬರುತ್ತದೆ. ಭಾರತವು 2014ರಿಂದ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಒತ್ತು ನೀಡಲು ಪ್ರಾರಂಭಿಸಿದ ರೀತಿ; ಇದು ಪ್ರಮುಖ ಬದಲಾವಣೆಗಳಿಗೆ ಕಾರಣವಾಗಿದೆ. ಸ್ಟಾರ್ಟಪ್ ಇಂಡಿಯಾ ಅಭಿಯಾನ, ಡಿಜಿಟಲ್ ಇಂಡಿಯಾ ಅಭಿಯಾನ ಅಥವಾ ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಯಶಸ್ಸಿಗೆ ಹೊಸ ಎತ್ತರ ನೀಡಿದೆ. ಮೊದಲು ಕೇವಲ ಪುಸ್ತಕಗಳಿಗೆ ಸೀಮಿತವಾಗಿದ್ದ ವಿಜ್ಞಾನ ಈಗ ಪ್ರಯೋಗಗಳನ್ನು ಮೀರಿ ಹೆಚ್ಚು ಹೆಚ್ಚು ಪೇಟೆಂಟ್ ಗಳಾಗಿ ಬದಲಾಗುತ್ತಿದೆ. ಭಾರತದಲ್ಲಿ ಸುಮಾರು 10 ವರ್ಷಗಳ ಹಿಂದೆ ಒಂದು ವರ್ಷದಲ್ಲಿ ಸುಮಾರು 4,000 ಪೇಟೆಂಟ್‌ಗಳನ್ನು ನೀಡಲಾಯಿತು. ಇಂದು ಅದರ ಸಂಖ್ಯೆ ವಾರ್ಷಿಕವಾಗಿ 30,000ಕ್ಕಿಂತ ಹೆಚ್ಚಿದೆ. 10 ವರ್ಷಗಳ ಹಿಂದೆ ಭಾರತದಲ್ಲಿ ವಾರ್ಷಿಕವಾಗಿ ಸುಮಾರು 10,000 ವಿನ್ಯಾಸಗಳನ್ನು ನೋಂದಾಯಿಸಲಾಗಿದೆ. ಇಂದು ಭಾರತದಲ್ಲಿ ವಾರ್ಷಿಕವಾಗಿ 15,000 ವಿನ್ಯಾಸಗಳನ್ನು ನೋಂದಾಯಿಸಲಾಗುತ್ತಿದೆ. 10 ವರ್ಷಗಳ ಹಿಂದೆ ಭಾರತದಲ್ಲಿ ವಾರ್ಷಿಕವಾಗಿ 70,000 ಟ್ರೇಡ್‌ಮಾರ್ಕ್‌ಗಳನ್ನು ನೋಂದಾಯಿಸಲಾಗಿದೆ. ಇಂದು ಭಾರತದಲ್ಲಿ ವಾರ್ಷಿಕವಾಗಿ 2.5 ಲಕ್ಷಕ್ಕೂ ಹೆಚ್ಚು ಟ್ರೇಡ್‌ಮಾರ್ಕ್‌ಗಳನ್ನು ನೋಂದಾಯಿಸಲಾಗುತ್ತಿದೆ.

 

ಸ್ನೇಹಿತರೆ,

ಇಂದು ಭಾರತವು ತಂತ್ರಜ್ಞಾನ ಸರದಾರನಾಗಿ ದೇಶಕ್ಕೆ ಅಗತ್ಯವಿರುವ ಪ್ರತಿಯೊಂದು ದಿಕ್ಕಿನಲ್ಲಿಯೂ ಮುನ್ನಡೆಯುತ್ತಿದೆ. 2014ರಲ್ಲಿ ನಮ್ಮ ದೇಶದಲ್ಲಿ ಸುಮಾರು 150 ಇನ್‌ಕ್ಯುಬೇಶನ್ ಸೆಂಟರ್‌ಗಳಿದ್ದವು ಎಂಬುದು ನಿಮ್ಮಲ್ಲಿ ಅನೇಕ ಗೆಳೆಯರಿಗೆ ತಿಳಿದಿದೆ. ಇಂದು ಭಾರತದಲ್ಲಿ ಇನ್‌ಕ್ಯುಬೇಶನ್ ಸೆಂಟರ್‌ಗಳ ಸಂಖ್ಯೆ 650 ದಾಟಿದೆ. ಜಾಗತಿಕ ಸಾವೀನ್ಯತಾ ಸೂಚ್ಯಂಕ(ಇನ್ನೋವೇಶನ್ ಇಂಡೆಕ್ಸ್‌)ದಲ್ಲಿ 81ನೇ ಸ್ಥಾನದಲ್ಲಿದ್ದ ಭಾರತ, ಇಂದು 40ನೇ ಸ್ಥಾನಕ್ಕೆ ಜಿಗಿದಿದೆ. ಇಂದು ದೇಶದ ಯುವಕರು ಮತ್ತು ನಮ್ಮ ವಿದ್ಯಾರ್ಥಿಗಳು ತಮ್ಮ ಡಿಜಿಟಲ್ ಉದ್ಯಮಗಳನ್ನು ಸ್ಥಾಪಿಸುತ್ತಿದ್ದಾರೆ, ಸ್ಟಾರ್ಟಪ್‌ಗಳನ್ನು ಪ್ರಾರಂಭಿಸುತ್ತಿದ್ದಾರೆ. 2014ರಲ್ಲಿ ನಮ್ಮ ದೇಶದಲ್ಲಿ ಸ್ಟಾರ್ಟಪ್‌ಗಳ ಸಂಖ್ಯೆ ಕೇವಲ ನೂರರ ಆಸುಪಾಸಿನಲ್ಲಿತ್ತು. ಇಂದು ನಮ್ಮ ದೇಶದಲ್ಲಿ ಮಾನ್ಯತೆ ಪಡೆದ ಸ್ಟಾರ್ಟಪ್‌ಗಳ ಸಂಖ್ಯೆಯೂ ಸುಮಾರು 1 ಲಕ್ಷಕ್ಕೆ ತಲುಪಿದೆ. ಇಂದು ಭಾರತವು ವಿಶ್ವದ 3ನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಾಗಿದೆ. ಇಡೀ ಜಗತ್ತು ಆರ್ಥಿಕ ಅನಿಶ್ಚಿತತೆಯ ಅವಧಿಯನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ಇದು ಭಾರತದ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ತೋರಿಸುತ್ತದೆ. ಆದ್ದರಿಂದ, ನೀತಿ ನಿರೂಪಕರು, ನಮ್ಮ ವೈಜ್ಞಾನಿಕ ಸಮುದಾಯ, ದೇಶಾದ್ಯಂತ ಹರಡಿರುವ ನಮ್ಮ ಸಾವಿರಾರು ಸಂಶೋಧನಾ ಪ್ರಯೋಗಾಲಯಗಳು ಮತ್ತು ನಮ್ಮ ಖಾಸಗಿ ವಲಯಕ್ಕೆ ಈ ಅವಧಿಯು ಬಹಳ ಮಹತ್ವದ್ದಾಗಿದೆ ಎಂದು ನಾನು ಇದನ್ನು ಪುನರುಚ್ಚರಿಸುತ್ತೇನೆ. 'ಶಾಲೆಯಿಂದ ಸ್ಟಾರ್ಟಪ್ ವರೆಗಿನ ಪ್ರಯಾಣವನ್ನು ನಮ್ಮ ವಿದ್ಯಾರ್ಥಿಗಳು ಕೈಗೊಳ್ಳುತ್ತಾರೆ, ಆದರೆ ನೀವು ಅವರಿಗೆ ನಿರಂತರವಾಗಿ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಬೇಕು. ಈ ನಿಟ್ಟಿನಲ್ಲಿ ನಿಮಗೆ ನನ್ನ ಸಂಪೂರ್ಣ ಬೆಂಬಲವಿದೆ.

 

ಸ್ನೇಹಿತರೆ,

ನಾವು ತಂತ್ರಜ್ಞಾನದ ಸಾಮಾಜಿಕ ಸಂದರ್ಭವನ್ನು ಅರ್ಥ ಮಾಡಿಕೊಂಡು ಮುಂದೆ ಹೋದಾಗ, ತಂತ್ರಜ್ಞಾನವು ಸಬಲೀಕರಣದ ಉತ್ತಮ ಮಾಧ್ಯಮವಾಗುತ್ತದೆ. ಇದು ಸಾಮಾಜಿಕ ನ್ಯಾಯವನ್ನು ಖಾತರಿಪಡಿಸುವ ಮತ್ತು ಅಸಮತೋಲನವನ್ನು ನಿರ್ಮೂಲನೆ ಮಾಡುವ ಸಾಧನವಾಗಿದೆ. ತಂತ್ರಜ್ಞಾನವು ಸಾಮಾನ್ಯ ಭಾರತೀಯರಿಗೆ ನಿಲುಕದ ಕಾಲವೊಂದಿತ್ತು. ಜೇಬಿನಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಒಯ್ಯುವುದು ಒಂದು ಕಾಲದಲ್ಲಿ ಸ್ಟೇಟಸ್ ಸಿಂಬಲ್ ಆಗಿರುವುದನ್ನೂ ನೀವು ನೆನಪಿಸಿಕೊಳ್ಳುತ್ತೀರಿ. ಆದರೆ ಭಾರತದ ಯುಪಿಐ ತನ್ನ ಸರಳತೆಯಿಂದಾಗಿ ಇಂದು ಹೊಸದಾದರೂ ಸಾಮಾನ್ಯ ಬಳಕೆಯಾಗಿದೆ. ಇಂದು ಬೀದಿಬದಿ ವ್ಯಾಪಾರಿಗಳಿಂದ ಹಿಡಿದು ರಿಕ್ಷಾ ಚಾಲಕರವರೆಗೆ ಎಲ್ಲರೂ ಡಿಜಿಟಲ್ ಪಾವತಿ ಬಳಸುತ್ತಿದ್ದಾರೆ. ಇಂದು ಭಾರತವು ಇಂಟರ್ನೆಟ್ ಡೇಟಾವನ್ನು ಹೆಚ್ಚು ಬಳಸುವ ವಿಶ್ವದ ರಾಷ್ಟ್ರಗಳಲ್ಲಿ ಒಂದಾಗಿದೆ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಇಂಟರ್‌ನೆಟ್ ಬಳಕೆದಾರರು ಹೆಚ್ಚು. ಇದು ಜನರಿಗೆ ಮಾಹಿತಿ, ಸಂಪನ್ಮೂಲಗಳು ಮತ್ತು ಅವಕಾಶಗಳ ಹೊಸ ಪ್ರಪಂಚವನ್ನು ತೆರೆಯುತ್ತಿದೆ. ಅದು ಜೆಎಎಂ ಟ್ರಿನಿಟಿ, ಜಿಇಎಂ ಪೋರ್ಟಲ್, ಕೊವಿನ್ ಪೋರ್ಟಲ್ ಅಥವಾ ರೈತರಿಗೆ ಡಿಜಿಟಲ್ ಕೃಷಿ ಮಾರುಕಟ್ಟೆ – ಇನಾಮ್ ಇರಬಹುದು, ನಮ್ಮ ಸರ್ಕಾರವು ತಂತ್ರಜ್ಞಾನವನ್ನು ಆರ್ಥಿಕ ಸೇರ್ಪಡೆಯ ಏಜೆಂಟ್ ಆಗಿ ಬಳಸಿದೆ.

 

ಸ್ನೇಹಿತರೆ,

ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಸಮಯದಲ್ಲಿ ಬಳಸುವುದರಿಂದ ಸಮಾಜಕ್ಕೆ ಹೊಸ ಶಕ್ತಿ ನೀಡುತ್ತದೆ. ಇಂದು ಭಾರತದಲ್ಲಿ ಜೀವನ ಚಕ್ರದ ಪ್ರತಿಯೊಂದು ಹಂತಕ್ಕೂ ಒಂದು ಅಥವಾ ಇನ್ನೊಂದು ತಾಂತ್ರಿಕ ಪರಿಹಾರಗಳನ್ನು ಸಿದ್ಧಪಡಿಸಲಾಗುತ್ತಿದೆ. ಜನನದ ಸಮಯದಲ್ಲಿ ಆನ್‌ಲೈನ್ ಜನನ ಪ್ರಮಾಣಪತ್ರ ಸೌಲಭ್ಯವಿದೆ. ಶಾಲೆಗೆ ಹೋಗುವ ಮಗುವಿಗೆ ePathshala ಮತ್ತು DIKSHA ದಂತಹ ಉಚಿತ ಇ-ಕಲಿಕೆ ವೇದಿಕೆಗಳಿವೆ. ಅವರು ನಂತರ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ನಲ್ಲಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಬಹುದು. ಅವರು ಕೆಲಸ ಪ್ರಾರಂಭಿಸಿದಾಗ, ಸಾರ್ವತ್ರಿಕ ಪ್ರವೇಶ ಸಂಖ್ಯೆಯ ಸೌಲಭ್ಯ ಹೊಂದುತ್ತಾನೆ, ಇದರಿಂದಾಗಿ ಅವರು ಕೆಲಸ ಬದಲಾಯಿಸಿದ ನಂತರವೂ ಯಾವುದೇ ಸಮಸ್ಯೆ ಎದುರಿಸುವುದಿಲ್ಲ. ಯಾವುದೇ ಅನಾರೋಗ್ಯದ ಸಂದರ್ಭದಲ್ಲಿ ಅವರು ಇಂದು ಇ-ಸಂಜೀವನಿಯ ಸಹಾಯದಿಂದ ತಕ್ಷಣ ಚಿಕಿತ್ಸೆಗೆ ವ್ಯವಸ್ಥೆ ಮಾಡಬಹುದು. ವೃದ್ಧರಿಗಾಗಿ ಜೀವನ್ ಪ್ರಮಾಣ - ಬಯೋಮೆಟ್ರಿಕ್-ಸಕ್ರಿಯಗೊಳಿಸಿದ ಡಿಜಿಟಲ್ ಸೇವೆಯ ಸೌಲಭ್ಯವಿದೆ, ನೀವು ಅದರ ಬಗ್ಗೆ ಯೋಚಿಸಿ. ಈ ಹಿಂದೆ, ಪಿಂಚಣಿಯಂತಹ ಸಮಸ್ಯೆಗಳಿಗೆ ವಯಸ್ಸಾದವರು ಜೀವಂತವಾಗಿರುವ ಬಗ್ಗೆ ಪುರಾವೆಗಳನ್ನು ನೀಡಬೇಕಾಗಿತ್ತು. ಅವರು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ನಡೆದಾಡಲು ತೊಂದರೆಯಾಗಿದ್ದರೂ, ಅವರು ಸ್ವತಃ ಪರಿಶೀಲನೆಗೆ ಹೋಗಬೇಕಾಗಿತ್ತು. ಈಗ ಈ ಎಲ್ಲಾ ಸಮಸ್ಯೆಗಳನ್ನು ತಂತ್ರಜ್ಞಾನದ ಸಹಾಯದಿಂದ ನೋಡಿಕೊಳ್ಳಲಾಗುತ್ತಿದೆ. ತಂತ್ರಜ್ಞಾನದ ಪರಿಹಾರಗಳು ದೇಶದ ನಾಗರಿಕರಿಗೆ ಅವರ ದೈನಂದಿನ ಜೀವನದಲ್ಲಿ ಸಹಾಯ ಮಾಡುತ್ತಿವೆ. ಯಾರಾದರೂ ತ್ವರಿತ ಪಾಸ್‌ಪೋರ್ಟ್ ಬಯಸಿದರೆ, ಅವರಿಗೆ mPassport ಸೇವೆ ಇದೆ. ಅವರು ವಿಮಾನ ನಿಲ್ದಾಣದಲ್ಲಿ ತೊಂದರೆಮುಕ್ತ ಅನುಭವ ಖಚಿತಪಡಿಸಿಕೊಳ್ಳಲು ಬಯಸಿದರೆ, ಡಿಜಿ-ಯಾತ್ರಾ ಅಪ್ಲಿಕೇಶನ್ ಇದೆ. ಪ್ರಮುಖ ದಾಖಲೆಗಳನ್ನು ಸುರಕ್ಷಿತವಾಗಿ ಇಡಬೇಕಾದರೆ ಡಿಜಿ-ಲಾಕರ್ ಇದೆ. ಈ ಎಲ್ಲಾ ಪ್ರಯತ್ನಗಳು ಸಾಮಾಜಿಕ ನ್ಯಾಯ ಖಾತ್ರಿಪಡಿಸುವಲ್ಲಿ ಮತ್ತು ಜೀವನ ಸುಲಭಗೊಳಿಸಲು ಸಹಾಯ ಮಾಡಿದೆ.

 

ಸ್ನೇಹಿತರೆ,

ತಂತ್ರಜ್ಞಾನ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಕ್ಷಿಪ್ರ ಬದಲಾವಣೆಗಳು ನಡೆಯುತ್ತಿವೆ. ಈ ವೇಗ  ಹೊಂದಿಸುವಲ್ಲಿ ಮತ್ತು ತಲುಪುವಲ್ಲಿ ಭಾರತದ ಯುವಕರು ಮಾತ್ರ ದೇಶವನ್ನು ಮುನ್ನಡೆಸುತ್ತಾರೆ. ಇಂದು ಕೃತ ಬುದ್ಧಿಮತ್ತೆ ತಂತ್ರಜ್ಞಾನ ಪರಿಕರಗಳು ಹೊಸ ಗೇಮ್ ಚೇಂಜರ್‌ಗಳಾಗಿ ಹೊರಹೊಮ್ಮಿವೆ. ಇಂದು ನಾವು ಆರೋಗ್ಯ ಕ್ಷೇತ್ರದಲ್ಲಿ ಅನಂತ ಸಾಧ್ಯತೆಗಳನ್ನು ನೋಡಬಹುದು. ಡ್ರೋನ್ ತಂತ್ರಜ್ಞಾನದಲ್ಲಿ ಪ್ರತಿದಿನ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಅಂತೆಯೇ, ಚಿಕಿತ್ಸಕ ಕ್ಷೇತ್ರವೂ ವೇಗವಾಗಿ ಪ್ರಗತಿಯಲ್ಲಿದೆ. ಇಂತಹ ಕ್ರಾಂತಿಕಾರಿ ತಂತ್ರಜ್ಞಾನದಲ್ಲಿ ನಾವು ಮುಂದಾಳತ್ವ ವಹಿಸಬೇಕಿದೆ. ಇಂದು ಭಾರತ ತನ್ನ ರಕ್ಷಣಾ ಕ್ಷೇತ್ರವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತಿದೆ. ಇದು ನಮ್ಮ ಯುವ ಸ್ಟಾರ್ಟಪ್‌ಗಳಿಗೆ ಹಲವು ಅವಕಾಶಗಳನ್ನು ಸೃಷ್ಟಿಸುತ್ತಿದೆ. ನಾವು ರಕ್ಷಣಾ ಶ್ರೇಷ್ಠತೆಗಾಗಿ ನಾವೀನ್ಯತೆಯನ್ನು ಪ್ರಾರಂಭಿಸಿದ್ದೇವೆ. ಅಂದರೆ, ರಕ್ಷಣಾ ಕ್ಷೇತ್ರದ ನಾವೀನ್ಯತೆಗಾಗಿ iDEX. ರಕ್ಷಣಾ ಸಚಿವಾಲಯವು iDEX ನಿಂದ 350 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ 14 ಆವಿಷ್ಕಾರಗಳನ್ನು ಖರೀದಿಸಿದೆ ಎಂಬುದು ನನಗೆ ಸಂತೋಷ ತಂದಿದೆ.

 

ಸ್ನೇಹಿತರೆ,

ಅದು iCreate ಆಗಿರಲಿ ಅಥವಾ DRDO ಯುವ ವಿಜ್ಞಾನಿಗಳ ಪ್ರಯೋಗಾಲಯಗಳಂತಹ ಉಪಕ್ರಮಗಳಾಗಲಿ, ಇಂದು ಈ ಪ್ರಯತ್ನಗಳಿಗೆ ಹೊಸ ದಿಕ್ಕು ನೀಡಲಾಗುತ್ತಿದೆ. ಹೊಸ ಸುಧಾರಣೆಗಳ ಮೂಲಕ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲೂ ಜಾಗತಿಕ ಸರದಾರನಾಗಿ ಹೊರಹೊಮ್ಮುತ್ತಿದೆ. ಇದೀಗ, ನಾವು SSLV ಮತ್ತು PSLV ಕಕ್ಷೆಯ ವೇದಿಕೆಯಂತಹ ತಂತ್ರಜ್ಞಾನಗಳನ್ನು ನೋಡುತ್ತಿದ್ದೇವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ಯುವಕರು ಮತ್ತು ಸ್ಟಾರ್ಟಪ್‌ಗಳಿಗೆ ನಾವು ಹೊಸ ಅವಕಾಶಗಳನ್ನು ಒದಗಿಸಬೇಕಾಗಿದೆ. ಕೋಡಿಂಗ್‌ನಿಂದ ಹಿಡಿದು ಗೇಮಿಂಗ್ ಮತ್ತು ಪ್ರೋಗ್ರಾಮಿಂಗ್‌ವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಮುನ್ನಡೆ ಸಾಧಿಸಬೇಕಾಗಿದೆ. ಭಾರತವು ಅರೆವಾಹಕ(ಸೆಮಿ ಕಂಡಕ್ಟರ್)ಗಳಂತಹ ಹೊಸ ಮಾರ್ಗಗಳಲ್ಲಿ ತನ್ನ ಅಸ್ತಿತ್ವ ಹೆಚ್ಚಿಸುತ್ತಿದೆ. ನಾವು ನೀತಿ ಮಟ್ಟದಲ್ಲಿ ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ(PLI) ಯೋಜನೆಯಂತಹ ಉಪಕ್ರಮಗಳನ್ನು ಬಳಸುತ್ತಿದ್ದೇವೆ. ಈ ಕ್ಷೇತ್ರದಲ್ಲಿ ಪ್ರತಿಭಾವಂತ ಯುವಕರನ್ನು ಬೆಂಬಲಿಸುವುದು ಉದ್ಯಮ ಮತ್ತು ಸಂಸ್ಥೆಗಳ ಜವಾಬ್ದಾರಿಯಾಗಿದೆ.

 

ಸ್ನೇಹಿತರೆ,

ಇಂದು ಹ್ಯಾಕಥಾನ್‌ಗಳು ನಾವೀನ್ಯತೆಯಿಂದ ಭದ್ರತೆಯವರೆಗೆ ಪ್ರಮುಖ ಪಾತ್ರ ವಹಿಸುತ್ತಿವೆ, ಸರ್ಕಾರ ನಿರಂತರವಾಗಿ ಅವರಿಗೆ ಉತ್ತೇಜನ ನೀಡುತ್ತಿದೆ. ನಾವು ಹ್ಯಾಕಥಾನ್ ಸಂಸ್ಕೃತಿಯನ್ನು ಮುನ್ನಡೆಸಬೇಕು ಮತ್ತು ಹೊಸ ಸವಾಲುಗಳಿಗೆ ಸ್ಟಾರ್ಟಪ್‌ಗಳನ್ನು ಸಿದ್ಧಪಡಿಸಬೇಕು. ಈ ಪ್ರತಿಭೆಗಳ ಕೈ ಹಿಡಿಯಬೇಕು ಮತ್ತು ಅವರು ಮುಂದೆ ಸಾಗಲು ಕಷ್ಟಪಡಬಾರದು ಎಂಬ ಚೌಕಟ್ಟನ್ನು ನಾವು ರಚಿಸಬೇಕಾಗಿದೆ. ಅಟಲ್ ಟಿಂಕರಿಂಗ್ ಲ್ಯಾಬ್ಸ್‌ನಿಂದ ಪದವಿ ಪಡೆಯುವ ಯುವಜನರನ್ನು ಒಳಗೊಳ್ಳಲು ಸಾಂಸ್ಥಿಕ ವ್ಯವಸ್ಥೆಯಾಗಬೇಕು. ದೇಶದ ವಿವಿಧ ಕ್ಷೇತ್ರಗಳಲ್ಲಿ ನಾವು 100 ಲ್ಯಾಬ್‌ಗಳನ್ನು ಗುರುತಿಸಬಹುದೇ? ಶುದ್ಧ ಇಂಧನ ಮತ್ತು ನೈಸರ್ಗಿಕ ಕೃಷಿಯಂತಹ ಕ್ಷೇತ್ರಗಳಲ್ಲಿ ನಾವು ಸಂಶೋಧನೆ ಮತ್ತು ತಂತ್ರಜ್ಞಾನ ಉತ್ತೇಜಿಸಬೇಕಾಗಿದೆ, ಅಲ್ಲಿ ದೇಶವು ವಿಶೇಷ ಗಮನ ನೀಡುತ್ತಿದೆ. ಈ ನಿಟ್ಟಿನಲ್ಲಿ ಯುವಕರನ್ನು ಕಾರ್ಯಾಚರಣೆ ಮಾದರಿಯಲ್ಲಿ ತೊಡಗಿಸಿಕೊಳ್ಳುವುದು ಬಹಳ ಮುಖ್ಯ. ಈ ಸಾಧ್ಯತೆಗಳನ್ನು ಅರಿತುಕೊಳ್ಳುವಲ್ಲಿ ರಾಷ್ಟ್ರೀಯ ತಂತ್ರಜ್ಞಾನ ಸಪ್ತಾಹವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ನನಗೆ ಖಾತ್ರಿಯಿದೆ. ಈ ನಿರೀಕ್ಷೆಯೊಂದಿಗೆ, ಈ ಕಾರ್ಯಕ್ರಮ ಆಯೋಜಿಸಿರುವುದಕ್ಕಾಗಿ ನಾನು ನಿಮ್ಮೆಲ್ಲರಿಗೂ ಶುಭಾಶಯಗಳನ್ನು ಕೋರುತ್ತೇನೆ.

 

ತುಂಬು ಧನ್ಯವಾದಗಳು.

***



(Release ID: 1928579) Visitor Counter : 96