ಪ್ರಧಾನ ಮಂತ್ರಿಯವರ ಕಛೇರಿ

ರಾಷ್ಟ್ರೀಯ ಉದ್ಯೋಗ ಮೇಳ ಉದ್ದೇಶಿಸಿ ಪ್ರಧಾನಿ ಭಾಷಣ


ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡವರಿಗೆ ಸುಮಾರು 71,000 ನೇಮಕಾತಿ ಪತ್ರಗಳನ್ನು ವಿತರಿಸಿದರು

"ಉದ್ಯೋಗ ಮೇಳಗಳು ಯುವಕರ ಬಗ್ಗೆ ಸರ್ಕಾರದ ಬದ್ಧತೆಯನ್ನು ತೋರಿಸುತ್ತವೆ"

"ಕಳೆದ 9 ವರ್ಷಗಳಲ್ಲಿ, ಸರ್ಕಾರವು ನೇಮಕಾತಿ ಪ್ರಕ್ರಿಯೆಯನ್ನು ವೇಗವಾಗಿ, ಪಾರದರ್ಶಕವಾಗಿ ಮತ್ತು ನಿಷ್ಪಕ್ಷಪಾತವಾಗಿ ಮಾಡುವ ಮೂಲಕ ಅದಕ್ಕೆ ಆದ್ಯತೆ ನೀಡಿದೆ"

"ಉದ್ಯೋಗ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ನೀತಿಗಳನ್ನು ರೂಪಿಸಲಾಗುತ್ತಿದೆ"

"ಸರ್ಕಾರವು ಕಳೆದ 9 ವರ್ಷಗಳಲ್ಲಿ ಬಂಡವಾಳ ವೆಚ್ಚಕ್ಕಾಗಿ ಸುಮಾರು 34 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಮತ್ತು ಈ ವರ್ಷವೂ ಬಂಡವಾಳ ವೆಚ್ಚಕ್ಕಾಗಿ 10 ಲಕ್ಷ ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ"

"ಆತ್ಮನಿರ್ಭರ ಭಾರತ್ ಅಭಿಯಾನವು ದೇಶದಲ್ಲಿ ಉತ್ಪಾದನೆಯ ಮೂಲಕ ಉದ್ಯೋಗ ಸೃಷ್ಟಿಯನ್ನು ಆಧರಿಸಿದೆ"

Posted On: 16 MAY 2023 11:54AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರೀಯ ಉದ್ಯೋಗ ಮೇಳವನ್ನುದ್ದೇಶಿಸಿ ಭಾಷಣ ಮಾಡಿದರು. ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ಸೇರ್ಪಡೆಗೊಂಡವರಿಗೆ ಸುಮಾರು 71,000 ನೇಮಕಾತಿ ಪತ್ರಗಳನ್ನು ವಿತರಿಸಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಹೊಸದಾಗಿ ನೇಮಕಗೊಂಡ ಎಲ್ಲಾ ಅಭ್ಯರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಶುಭ ಹಾರೈಸಿದರು. ಗುಜರಾತ್‌ನಂತಹ ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಉದ್ಯೋಗ ಮೇಳ ಮತ್ತು ಅಸ್ಸಾಂನಲ್ಲಿ ಮುಂಬರುವ ಮೇಳವನ್ನು ಅವರು ನೆನಪು ಮಾಡಿಕೊಂಡರು. ಕೇಂದ್ರ ಮತ್ತು ಬಿಜೆಪಿ ಆಡಳಿತದ ರಾಜ್ಯಗಳಲ್ಲಿನ ಈ ಮೇಳಗಳು ಯುವಕರ ಬಗ್ಗೆ ಸರ್ಕಾರದ ಬದ್ಧತೆಯನ್ನು ತೋರಿಸುತ್ತವೆ ಎಂದು ಅವರು ಹೇಳಿದರು.

ಕಳೆದ 9 ವರ್ಷಗಳಲ್ಲಿ, ನೇಮಕಾತಿ ಪ್ರಕ್ರಿಯೆಯನ್ನು ವೇಗವಾಗಿ, ಪಾರದರ್ಶಕವಾಗಿ ಮತ್ತು ನಿಷ್ಪಕ್ಷಪಾತವಾಗಿ ಮಾಡುವ ಮೂಲಕ ಸರ್ಕಾರ ನೇಮಕಾತಿ ಪ್ರಕ್ರಿಯೆಗೆ ಆದ್ಯತೆ ನೀಡಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ನೇಮಕಾತಿ ಪ್ರಕ್ರಿಯೆಯಲ್ಲಿ ಎದುರಾಗಿರುವ ತೊಂದರೆಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಈ ಹಿಂದೆ, ʻಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ʼ ಹೊಸ ನೇಮಕಾತಿಗಳನ್ನು ಆರಂಭಿಸಲು ಸರಿಸುಮಾರು 15-18 ತಿಂಗಳುಗಳು ಹಿಡಿಯುತ್ತಿತ್ತು. ಆದರೆ ಇಂದು ಅದು ಕೇವಲ 6-8 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎಂದು ವಿವರಿಸಿದರು. ಅರ್ಜಿ ನಮೂನೆಯನ್ನು ಪಡೆಯುವುದರಿಂದ ಹಿಡಿದು ಅಂಚೆ ಮೂಲಕ ಸಲ್ಲಿಸುವವರೆಗೆ ಈ ಹಿಂದೆ ಅಸ್ತಿತ್ವದಲ್ಲಿದ್ದ ನೇಮಕಾತಿಯ ಕಠಿಣ ಪ್ರಕ್ರಿಯೆಯನ್ನು ಈಗ ʻಆನ್‌ಲೈನ್ʼ ಮಾಡುವ ಮೂಲಕ ಸರಳೀಕರಿಸಲಾಗಿದೆ ಎಂದು ಅವರು ಒತ್ತಿಹೇಳಿದರು, ಅಲ್ಲಿ ದಾಖಲೆಗಳ ಸ್ವಯಂ ದೃಢೀಕರಣಕ್ಕೆ ಅವಕಾಶವನ್ನು ಸಹ ಪರಿಚಯಿಸಲಾಗಿದೆ. ʻಗ್ರೂಪ್ ಸಿʼ ಮತ್ತು ʻಗ್ರೂಪ್ ಡಿʼ ಸಂದರ್ಶನಗಳನ್ನೂ ರದ್ದುಪಡಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಇಡೀ ಪ್ರಕ್ರಿಯೆಯಲ್ಲಿ ಸ್ವಜನಪಕ್ಷಪಾತವನ್ನು ನಿರ್ಮೂಲನೆ ಮಾಡುವುದು ಇದರ ಅತಿದೊಡ್ಡ ಅನುಕೂಲವಾಗಿದೆ ಎಂದು ಪ್ರಧಾನಿ ಹೇಳಿದರು.

9 ವರ್ಷಗಳ ಹಿಂದೆ ಇದೇ ದಿನಾಂಕದಂದು, ಅಂದರೆ ಮೇ 16ರಂದು ಲೋಕಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟಗೊಂಡ ಹಿನ್ನೆಲೆಯಲ್ಲಿ, ಇಂದಿನ ದಿನಾಂಕದ ಮಹತ್ವವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಆ ದಿನದ ಉತ್ಸಾಹವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ ಆಶಯದಿಂದ ಪ್ರಾರಂಭವಾದ ಈ ಪ್ರಯಾಣವು ʻವಿಕಸಿತ ಭಾರತʼಕ್ಕಾಗಿ ಕೆಲಸ ಮಾಡುತ್ತಿದೆ ಎಂದರು. ಇಂದು ಸಿಕ್ಕಿಂನ ಸಂಸ್ಥಾಪನಾ ದಿನವೂ ಆಗಿದೆ ಎಂದು ಪ್ರಧಾನಿ ಉಲ್ಲೇಖಿಸಿದರು.

ಈ 9 ವರ್ಷಗಳಲ್ಲಿ, ಉದ್ಯೋಗ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ನೀತಿಗಳನ್ನು ರೂಪಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಆಧುನಿಕ ಮೂಲಸೌಕರ್ಯ ಕ್ಷೇತ್ರಗಳಲ್ಲಿನ ಉಪಕ್ರಮಗಳು, ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಉತ್ತೇಜನ ಅಥವಾ ಜೀವನದ ಮೂಲಭೂತ ಅಗತ್ಯಗಳ ವಿಸ್ತರಣೆ ಹೀಗೆ ಭಾರತ ಸರ್ಕಾರದ ಪ್ರತಿಯೊಂದು ನೀತಿಯು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದರು.

ಕಳೆದ 9 ವರ್ಷಗಳಲ್ಲಿ ಸರ್ಕಾರವು ಬಂಡವಾಳ ವೆಚ್ಚ ಮತ್ತು ಮೂಲಭೂತ ಸೌಕರ್ಯಗಳಿಗಾಗಿ ಸುಮಾರು 34 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಈ ವರ್ಷದ ಬಜೆಟ್‌ನಲ್ಲಿಯೂ ಬಂಡವಾಳ ವೆಚ್ಚಕ್ಕಾಗಿ 10 ಲಕ್ಷ ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಈ ಮೊತ್ತವು ಹೊಸ ಹೆದ್ದಾರಿಗಳು, ಹೊಸ ವಿಮಾನ ನಿಲ್ದಾಣಗಳು, ಹೊಸ ರೈಲು ಮಾರ್ಗಗಳು, ಸೇತುವೆಗಳು ಮುಂತಾದ ಆಧುನಿಕ ಮೂಲಸೌಕರ್ಯಗಳ ಸೃಷ್ಟಿಗೆ ದಾರಿ ಮಾಡುತ್ತಿದೆ. ಇದು ದೇಶದಲ್ಲಿ ಅನೇಕ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು.

ಇಂದು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಭಾರತದ ವೇಗ ಮತ್ತು ಪ್ರಮಾಣವು ಅಭೂತಪೂರ್ವವಾಗಿದೆ ಎಂದು ಪ್ರಧಾನಿ ಹೇಳಿದರು. ಕಳೆದ 9 ವರ್ಷಗಳಲ್ಲಿ 40 ಸಾವಿರ ಕಿ.ಮೀ ರೈಲು ಮಾರ್ಗಗಳು ವಿದ್ಯುದ್ದೀಕರಣಗೊಂಡಿವೆ ಎಂದು ಅವರು ಮಾಹಿತಿ ನೀಡಿದರು. ಆದರೆ, ಅದಕ್ಕೆ ಹಿಂದಿನ 7 ದಶಕಗಳಲ್ಲಿ ರೈಲು ಮಾರ್ಗಗಳ ಒಟ್ಟು ವಿದ್ಯುದೀಕರಣ ಕೇವಲ 20 ಸಾವಿರ ಕಿ.ಮೀ. ಆಗಿತ್ತು ಎಂದರು. ದೇಶದ ಮೆಟ್ರೋ ರೈಲು ಜಾಲವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, 2014ಕ್ಕೆ ಮೊದಲು ಕೇವಲ 600 ಮೀಟರ್ ಮೆಟ್ರೋ ಮಾರ್ಗಗಳನ್ನು ಹಾಕಲಾಗಿತ್ತು, ಆದರೆ ಇಂದು ಸರಿಸುಮಾರು 6 ಕಿ.ಮೀ ಮೆಟ್ರೋ ರೈಲು ಮಾರ್ಗಗಳನ್ನು ಹಾಕಲಾಗುತ್ತಿದೆ ಎಂದರು.

2014ಕ್ಕೆ ಮೊದಲು, 4 ಲಕ್ಷ ಕಿ.ಮೀ.ಗಿಂತ ಕಡಿಮೆ ಗ್ರಾಮೀಣ ರಸ್ತೆಗಳಿದ್ದವು, ಇಂದು ಈ ಉದ್ದವು 7.25 ಲಕ್ಷ ಕಿ.ಮೀ.ಗೆ ಏರಿದೆ. ವಿಮಾನ ನಿಲ್ದಾಣಗಳ ಸಂಖ್ಯೆ 2014ರಲ್ಲಿ 74 ಇದ್ದದ್ದು ಇಂದು ಸುಮಾರು 150ಕ್ಕೆ ಏರಿದೆ. ಅಂತೆಯೇ, ಕಳೆದ 9 ವರ್ಷಗಳಲ್ಲಿ ಬಡವರಿಗಾಗಿ ನಿರ್ಮಿಸಲಾದ 4 ಕೋಟಿ ಮನೆಗಳು ಗಮನಾರ್ಹ ಉದ್ಯೋಗವನ್ನು ಸೃಷ್ಟಿಸಿವೆ. ಹಳ್ಳಿಗಳಲ್ಲಿ 5 ಲಕ್ಷ `ಸಾಮಾನ್ಯ ಸೇವಾ ಕೇಂದ್ರ’ಗಳು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಗಳನ್ನು ಒದಗಿಸುತ್ತಿವೆ. ಗ್ರಾಮಗಳಲ್ಲಿ 30 ಸಾವಿರಕ್ಕೂ ಹೆಚ್ಚು ಪಂಚಾಯತ್ ಭವನಗಳನ್ನು ನಿರ್ಮಿಸಲಾಗಿದೆ ಮತ್ತು 9 ಕೋಟಿ ಮನೆಗಳಿಗೆ ಕೊಳವೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಎಲ್ಲರೂ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ಅದು ವಿದೇಶಿ ಹೂಡಿಕೆಯಾಗಿರಲಿ ಅಥವಾ ಭಾರತದ ರಫ್ತು ಶಕ್ತಿಯಾಗಿರಲಿ, ಇದು ದೇಶದಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಹಲವಾರು ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಿ ಹೇಳಿದರು.

ಕಳೆದ 9 ವರ್ಷಗಳಲ್ಲಿ ಉದ್ಯೋಗಗಳ ಸ್ವರೂಪವು ಮಹತ್ತರ ಬದಲಾವಣೆಗಳನ್ನು ಕಂಡಿದೆ. ದೇಶದ ಯುವಕರಿಗೆ ಹೊಸ ಕಾರ್ಯಕ್ಷೇತ್ರಗಳು ಹೊರಹೊಮ್ಮಿವೆ ಎಂದು ಪ್ರಧಾನಿ ಹೇಳಿದರು. ಕೇಂದ್ರ ಸರ್ಕಾರವು ಈ ಹೊಸ ವಲಯಗಳಿಗೆ ನಿರಂತರ ಬೆಂಬಲವನ್ನು ಒದಗಿಸುತ್ತಿದೆ ಎಂದು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ರಾಷ್ಟ್ರವು ಕಂಡ ನವೋದ್ಯಮ ಕ್ರಾಂತಿಯನ್ನು ಒತ್ತಿ ಹೇಳಿದರು. 2014ಕ್ಕೆ ಮೊದಲು 100 ಇದ್ದ ನವೋದ್ಯಮಗಳ ಸಂಖ್ಯೆ ಇಂದು 1 ಲಕ್ಷಕ್ಕೆ ಏರಿಕೆಯಾಗಿದ್ದು, 10 ಲಕ್ಷಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ಕಲ್ಪಿಸಿವೆ ಎಂದರು.

ಜನರ ಜೀವನವನ್ನು ಮೊದಲಿಗಿಂತಲೂ ಸುಲಭಗೊಳಿಸಿರುವ ತಾಂತ್ರಿಕ ಬೆಳವಣಿಗೆಗಳ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ನಗರಗಳಿಗೆ ಜೀವನಾಡಿಯಾಗಿ ಮಾರ್ಪಟ್ಟಿರುವ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳು, ಉದ್ಯೋಗವನ್ನು ಹೆಚ್ಚಿಸಿರುವ ಪರಿಣಾಮಕಾರಿ ಆನ್‌ಲೈನ್ ವಿತರಣಾ ವ್ಯವಸ್ಥೆಗಳು, ಕೀಟನಾಶಕಗಳನ್ನು ಸಿಂಪಡಿಸಲು ಸಹಾಯ ಮಾಡಲು ಡ್ರೋನ್ ವಲಯಕ್ಕೆ ಉತ್ತೇಜನ, 60 ರಿಂದ 600 ನಗರಗಳಿಗೆ ವ್ಯಾಪಿಸಿರುವ ನಗರ ಅನಿಲ ವಿತರಣಾ ವ್ಯವಸ್ಥೆ ಮುಂತಾದ ಉದಾಹರಣೆಗಳನ್ನು ನೀಡಿದರು.

ಕಳೆದ 9 ವರ್ಷಗಳಲ್ಲಿ, ʻಮುದ್ರಾʼ ಯೋಜನೆ ಅಡಿಯಲ್ಲಿ ಸರಕಾರ 23 ಲಕ್ಷ ಕೋಟಿ ರೂ.ಗೂ ಹೆಚ್ಚು ಸಾಲವನ್ನು ವಿತರಿಸಿದೆ. ಇದು ನಾಗರಿಕರಿಗೆ ಹೊಸ ವ್ಯವಹಾರಗಳನ್ನು ಸ್ಥಾಪಿಸಲು, ಟ್ಯಾಕ್ಸಿಗಳನ್ನು ಖರೀದಿಸಲು ಅಥವಾ ಅಸ್ತಿತ್ವದಲ್ಲಿರುವ ಸಂಸ್ಥೆಗಳನ್ನು ವಿಸ್ತರಿಸಲು ಸಹಾಯ ಮಾಡಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಪಡೆದ ನಂತರ ಸರಿಸುಮಾರು 8-9 ಕೋಟಿ ನಾಗರಿಕರು ಮೊದಲ ಬಾರಿಗೆ ಉದ್ಯಮಿಗಳಾಗಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದರು. "ಆತ್ಮನಿರ್ಭರ ಭಾರತ ಅಭಿಯಾನವು ದೇಶದಲ್ಲಿ ಉತ್ಪಾದನೆಯ ಮೂಲಕ ಉದ್ಯೋಗ ಸೃಷ್ಟಿ ತತ್ವವನ್ನು ಆಧರಿಸಿದೆ" ಎಂದು ಹೇಳಿದ ಪ್ರಧಾನಿ, ʻಉತ್ಪಾದನೆ ಆಧರಿತ ಪ್ರೋತ್ಸಾಹಧನʼ(ಪಿಎಲ್ಐ) ಯೋಜನೆಯಡಿ ಉತ್ಪಾದನೆಗಾಗಿ ಕೇಂದ್ರ ಸರ್ಕಾರ ಸುಮಾರು 2 ಲಕ್ಷ ಕೋಟಿ ರೂ.ಗಳ ನೆರವು ನೀಡುತ್ತಿದೆ ಎಂದು ತಿಳಿಸಿದರು.

ದೇಶದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳನ್ನು ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. 2014 ಮತ್ತು 2022ರ ನಡುವೆ ಪ್ರತಿ ವರ್ಷ ಹೊಸ ಐಐಟಿ ಮತ್ತು ಹೊಸ ಐಐಎಂ ತಲೆಯೆತ್ತುತ್ತಿವೆ ಎಂದು ಪ್ರಧಾನಿ ತಿಳಿಸಿದರು. ಪ್ರತಿ ವಾರ ಒಂದು ವಿಶ್ವವಿದ್ಯಾಲಯವನ್ನು ಉದ್ಘಾಟಿಸಲಾಗಿದೆ ಮತ್ತು ಕಳೆದ 9 ವರ್ಷಗಳಲ್ಲಿ ಸರಾಸರಿ ಪ್ರತಿದಿನ ಎರಡು ಕಾಲೇಜುಗಳು ಕಾರ್ಯಾರಂಭಗೊಂಡಿವೆ ಎಂದು ಅವರು ಹೇಳಿದರು. 2014ಕ್ಕೆ ಮೊದಲು ದೇಶದಲ್ಲಿ ಸುಮಾರು 720 ವಿಶ್ವವಿದ್ಯಾಲಯಗಳಿದ್ದವು, ಆದರೆ ಇಂದು ಅವುಗಳ ಸಂಖ್ಯೆ 1100ಕ್ಕಿಂತ ಹೆಚ್ಚಾಗಿದೆ ಎಂದು ಪ್ರಧಾನಿ ಗಮನಸೆಳೆದರು. ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, 7 ದಶಕಗಳಲ್ಲಿ ದೇಶದಲ್ಲಿ ಕೇವಲ 7 ʻಏಮ್ಸ್ʼಗಳನ್ನು ನಿರ್ಮಿಸಲಾಗಿತ್ತು, ಆದರೆ ಕಳೆದ 9 ವರ್ಷಗಳಲ್ಲಿ ಸರ್ಕಾರ 15 ಹೊಸ ʻಏಮ್ಸ್ʼ ಗಳನ್ನು ಅಭಿವೃದ್ಧಿಪಡಿಸಿದೆ ಎಂದರು. ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 400 ರಿಂದ 700 ಕ್ಕೆ ಏರಿದೆ, ಅಲ್ಲಿ ʻಎಂಬಿಬಿಎಸ್ʼ ಮತ್ತು ʻಎಂಡಿʼ ಸೀಟುಗಳ ಸಂಖ್ಯೆ ಸುಮಾರು 80 ಸಾವಿರದಿಂದ 1 ಲಕ್ಷ 70 ಸಾವಿರಕ್ಕೆ ಏರಿದೆ ಎಂದು ಅವರು ಹೇಳಿದರು.

ಅಭಿವೃದ್ಧಿಯಲ್ಲಿ ಐಟಿಐಗಳ ಪಾತ್ರವನ್ನು ಪ್ರಧಾನಿ ಒತ್ತಿ ಹೇಳಿದರು. "ಕಳೆದ 9 ವರ್ಷಗಳಲ್ಲಿ, ಪ್ರತಿದಿನ ಒಂದು ಐಟಿಐ ಸ್ಥಾಪಿಸಲಾಗಿದೆ". ದೇಶದ ಅಗತ್ಯಗಳಿಗೆ ಅನುಗುಣವಾಗಿ 15 ಸಾವಿರ ಐಟಿಐಗಳಲ್ಲಿ ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುತ್ತಿದೆ ಮತ್ತು ʻಪಿಎಂ ಕೌಶಲ್ ವಿಕಾಸ್ʼ ಯೋಜನೆಯಡಿ 1.25 ಕೋಟಿಗೂ ಹೆಚ್ಚು ಯುವಕರಿಗೆ ಕೌಶಲ್ಯಗಳನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ʻಇಪಿಎಫ್ಒʼ ಉದಾಹರಣೆಯನ್ನು ನೀಡಿದ ಪ್ರಧಾನಮಂತ್ರಿಯವರು, ʻಇಪಿಎಫ್ಒ ವೇತನದಾರರ ಮಾಹಿತಿʼ ಪ್ರಕಾರ 2018-19ರ ನಂತರ 4.5 ಕೋಟಿ ಹೊಸ ಔಪಚಾರಿಕ ಉದ್ಯೋಗಗಳು ಸೃಷ್ಟಿಯಾಗಿವೆ, ಇದು ಔಪಚಾರಿಕ ಉದ್ಯೋಗಗಳಲ್ಲಿ ಸ್ಥಿರ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದು ತಿಳಿಸಿದರು. ಸ್ವಯಂ ಉದ್ಯೋಗದ ಅವಕಾಶಗಳು ಸಹ ನಿರಂತರವಾಗಿ ಹೆಚ್ಚುತ್ತಿವೆ ಎಂದರು.

ಜಾಗತಿಕ ಮಟ್ಟದಲ್ಲಿ ಭಾರತದ ಉದ್ಯಮ ಮತ್ತು ಹೂಡಿಕೆ ಬಗ್ಗೆ ಅಭೂತಪೂರ್ವ ಸಕಾರಾತ್ಮಕತೆ ಇದೆ ಎಂದು ಪ್ರಧಾನಿ ವಿವರಿಸಿದರು. ʻವಾಲ್ಮಾರ್ಟ್ʼ ಸಿಇಒ ಅವರೊಂದಿಗಿನ ತಮ್ಮ ಇತ್ತೀಚಿನ ಭೇಟಿಯನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ದೇಶದಿಂದ 80 ಸಾವಿರ ಕೋಟಿ ರೂಪಾಯಿ ಮೌಲ್ಯದ ಸರಕುಗಳನ್ನು ರಫ್ತು ಮಾಡುವಲ್ಲಿ ಭಾರತ ಮೇಲೆ ಸಿಇಒ ಅವರ ವಿಶ್ವಾಸದ ಬಗ್ಗೆ ಮಾಹಿತಿ ನೀಡಿದರು. ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಯುವಕರಿಗೆ ಇದು ದೊಡ್ಡ ಸುದ್ದಿಯಾಗಿದೆ ಎಂದು ಅವರು ಹೇಳಿದರು. ಭಾರತದಿಂದ 8 ಸಾವಿರ ಕೋಟಿ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡುವ ಗುರಿ ಹೊಂದಿರುವ ʻಸಿಸ್ಕೋʼ ಸಂಸ್ಥೆಯ ಸಿಇಒ ಮತ್ತು ಭಾರತದಲ್ಲಿ ಮೊಬೈಲ್ ಉತ್ಪಾದನಾ ಉದ್ಯಮದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ʻಆಪಲ್ʼ ಸಂಸ್ಥೆಯ ಸಿಇಒ ಹಾಗೂ ಸೆಮಿಕಂಡಕ್ಟರ್ ಕಂಪನಿ ʻಎನ್ಎಕ್ಸ್‌ಪಿʼ ಉನ್ನತ ಅಧಿಕಾರಿಗಳು ಸಹ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಭಾರತದ ಸಾಮರ್ಥ್ಯದ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದರು ಎಂದು ಪ್ರಧಾನಿ ತಿಳಿಸಿದರು. ʻಫಾಕ್ಸ್‌ಕಾನ್‌ʼ ಸಹ ಭಾರತದಲ್ಲಿ ಸಾವಿರಾರು ಕೋಟಿ ರೂ.ಗಳ ಹೂಡಿಕೆಯನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಮುಂದಿನ ವಾರದಲ್ಲಿ ನಿಗದಿಯಾಗಿರುವ ವಿಶ್ವದ ಪ್ರಮುಖ ಕಂಪನಿಗಳ ಸಿಇಒಗಳ ಜೊತೆ ತಮ್ಮ ಸಭೆಗಳ ಬಗ್ಗೆಯೂ ಪ್ರಧಾನಿ ಮಾಹಿತಿ ನೀಡಿದರು ಮತ್ತು ಅವರೆಲ್ಲರೂ ಭಾರತದಲ್ಲಿ ಹೂಡಿಕೆ ಮಾಡಲು ಉತ್ಸಾಹ ಹೊಂದಿರುವುದಾಗಿ ತಿಳಿಸಿದರು. ಇಂತಹ ಪ್ರಯತ್ನಗಳು ಭಾರತದ ವಿವಿಧ ಕ್ಷೇತ್ರಗಳಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಉದ್ಯೋಗಾವಕಾಶಗಳನ್ನು ಎತ್ತಿ ತೋರಿಸುತ್ತವೆ ಎಂದು ಅವರು ಹೇಳಿದರು.

ತಮ್ಮ ಭಾಷಣವನ್ನು ಮುಗಿಸುವ ಮುನ್ನ ಪ್ರಧಾನಮಂತ್ರಿಯವರು, ಹೊಸದಾಗಿ ನೇಮಕಗೊಂಡವರತ್ತ ತಮ್ಮ ಮಾತಿನ ಗಮನ ತಿರುಗಿಸಿದರು. ಮುಂದಿನ 25 ವರ್ಷಗಳಲ್ಲಿ ʻಅಭಿವೃದ್ಧಿ ಹೊಂದಿದ ಭಾರತʼದ ಸಂಕಲ್ಪಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿಯ ಈ ಮಹಾಯಜ್ಞದಲ್ಲಿ ನೂತನ ಸಿಬ್ಬಂದಿ ವಹಿಸಬೇಕಾದ ಪಾತ್ರವನ್ನು ಒತ್ತಿಹೇಳಿದರು. ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಹೊಸದಾಗಿ ನೇಮಕಗೊಂಡವರಿಗೆ ಪ್ರಧಾನಮಂತ್ರಿಯವರು ಮನವಿ ಮಾಡಿದರು. ಆನ್‌ಲೈನ್ ಕಲಿಕಾ ವೇದಿಕೆಯಾದ ʻಐಜಿಒಟಿ ಕರ್ಮಯೋಗಿ ಮಾಡ್ಯೂಲ್ʼ ಮೂಲಕ ತನ್ನ ಉದ್ಯೋಗಿಗಳ ಕೌಶಲ್ಯ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡುತ್ತಿದೆ ಎಂದು ಹೇಳುವ ಮೂಲಕ ಪ್ರಧಾನಿ ತಮ್ಮ ಮಾತು ಮುಗಿಸಿದರು.

ಹಿನ್ನೆಲೆ

ಕೇಂದ್ರ ಸರಕಾರ ಮತ್ತು ಈ ಯೋಜನೆಯನ್ನು ಬೆಂಬಲಿಸುವ ರಾಜ್ಯ ಸರಕಾರ/ ಕೇಂದ್ರಾಡಳಿತ ಪ್ರದೇಶಗಳ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ನೇಮಕಾತಿಗಾಗಿ ದೇಶಾದ್ಯಂತ 45 ಸ್ಥಳಗಳಲ್ಲಿ ಉದ್ಯೋಗ ಮೇಳವನ್ನು ನಡೆಯಿತು. ದೇಶದ ವಿವಿಧ ಭಾಗಗಳಿಂದ ನೇಮಕಗೊಂಡ ಹೊಸ ಅಭ್ಯರ್ಥಿಗಳು ಗ್ರಾಮೀಣ ಅಂಚೆ ಸೇವಕ, ಅಂಚೆ ಇನ್‌ಸ್ಪೆಕ್ಟರ್‌, ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಜೂನಿಯರ್ ಅಕೌಂಟ್ಸ್ ಕ್ಲರ್ಕ್, ಟ್ರ್ಯಾಕ್ ನಿರ್ವಾಹಕ, ಸಹಾಯಕ ಸೆಕ್ಷನ್ ಆಫೀಸರ್, ದ್ವಿತೀಯ ದರ್ಜೆ ಕ್ಲರ್ಕ್, ಉಪ ವಿಭಾಗೀಯ ಅಧಿಕಾರಿ, ತೆರಿಗೆ ಸಹಾಯಕ, ಸಹಯಕ ಜಾರಿ ಅಧಿಕಾರಿ, ಇನ್‌ಸ್ಪೆಕ್ಟರ್‌, ನರ್ಸಿಂಗ್ ಅಧಿಕಾರಿ, ಸಹಾಯಕ ಭದ್ರತಾ ಅಧಿಕಾರಿ, ಫೈರ್‌ಮ್ಯಾನ್‌, ಸಹಾಯಕ ಲೆಕ್ಕಾಧಿಕಾರಿ, ಸಹಾಯಕ ಲೆಕ್ಕಪರಿಶೋಧನಾಧಿಕಾರಿ, ವಿಭಾಗೀಯ ಲೆಕ್ಕಾಧಿಕಾರಿ, ಪೇದೆ, ಮುಖ್ಯ ಪೇದೆ, ಸಹಾಯಕ ಕಮಾಂಡೆಂಟ್, ಪ್ರಾಂಶುಪಾಲರು, ತರಬೇತಿ ಪಡೆದ ಪದವೀಧರ ಶಿಕ್ಷಕರು, ಸಹಾಯಕ ರಿಜಿಸ್ಟ್ರಾರ್, ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ವಿವಿಧ ಹುದ್ದೆಗಳನ್ನು ಅಲಂಕರಿಸಲಿದ್ದಾರೆ. 

ಉದ್ಯೋಗ ಸೃಷ್ಟಿಗೆ ಅತ್ಯುನ್ನತ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳ ಒಂದು ಮಹತ್ವದ ಹೆಜ್ಜೆಯಾಗಿದೆ. ಉದ್ಯೋಗ ಮೇಳವು ಮತ್ತಷ್ಟು ಉದ್ಯೋಗ ಸೃಷ್ಟಿಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯುವಕರಿಗೆ ಅವರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಭಾಗವಹಿಸಲು ಅರ್ಥಪೂರ್ಣ ಅವಕಾಶಗಳನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹೊಸದಾಗಿ ನೇಮಕಗೊಂಡ ಎಲ್ಲ ಅಭ್ಯರ್ಥಿಗಳೂ ನೂತನ ಸರಕಾರಿ ಉದ್ಯೋಗಿಗಳಿಗೆ ಆನ್‌ಲೈನ್ ಓರಿಯಂಟೇಶನ್ ಕೋರ್ಸ್ ಆಗಿರುವ ʻಕರ್ಮಯೋಗಿ ಪ್ರಂಭದʼ ಮೂಲಕ ತರಬೇತಿ ಪಡೆಯುವ ಅವಕಾಶವನ್ನು ಸಹ ಪಡೆಯುತ್ತಾರೆ.

*****



(Release ID: 1928577) Visitor Counter : 188