ವಾರ್ತಾ ಮತ್ತು ಪ್ರಸಾರ ಸಚಿವಾಲಯ

9 ವರ್ಷಗಳನ್ನು ಪೂರೈಸಿದ ಕೇಂದ್ರ ಸರ್ಕಾರದ ಬಗ್ಗೆ 'ಭಾರತ: ಮುನ್ನುಗ್ಗುತ್ತಿದೆ' ಎಂಬ ವಿಷಯ ಕುರಿತು ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ವಿಸ್ತೃತ ಚರ್ಚೆ


ವ್ಯವಹಾರಗಳಿಗೆ ನಿರ್ಣಾಯಕ ನಾಯಕತ್ವದ ಅಗತ್ಯವಿದೆ ಮತ್ತು ಬಹಳ ಸಮಯದ ನಂತರ ನಾವು ಜಾಗತಿಕ ನಾಯಕ ಎಂದು ಗುರುತಿಸಲ್ಪಟ್ಟ ಮತ್ತು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ನಿರ್ಧರಿಸಿರುವ ನಾಯಕನನ್ನು ಹೊಂದಿದ್ದೇವೆ: ಶ್ರೀ ಸುನಿಲ್ ಭಾರ್ತಿ ಮಿತ್ತಲ್

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕೌಶಲ್ಯಪೂರ್ಣ ನಿರ್ವಹಣೆಯಿಂದಾಗಿ ಭಾರತವು ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ವಿಶಿಷ್ಟವಾಗಿ ಹೊರಹೊಮ್ಮಿತು: ಶ್ರೀಮತಿ ಸಂಗೀತಾ ರೆಡ್ಡಿ

ಕೇಂದ್ರ ಸರ್ಕಾರವು ಅಸಾಧ್ಯವಾದುದನ್ನು ಕಲ್ಪಿಸಿ, ಅದನ್ನು ಪರಿಣಾಮಕಾರಿಯಾಗಿ ಸಾಧಿಸಿ ತೋರಿಸಿದೆ ಮತ್ತು ಇದು ಈ ಸರ್ಕಾರದ ನಿಜವಾದ ದಕ್ಷತೆಯ ಸೂಚ್ಯಂಕವಾಗಿದೆ: ಶ್ರೀ ಸುರ್ಜಿತ್ ಭಲ್ಲಾ

ಜೆಎಎಂ ಟ್ರಿನಿಟಿ ಕಾರ್ಯಕ್ರಮವು ಬ್ಯಾಂಕಿಂಗ್ ಅನ್ನು ತಳ ಮಟ್ಟದವರೆಗೆ ಕೊಂಡೊಯ್ಯಲು ನಮಗೆ ಅನುವು ಮಾಡಿಕೊಟ್ಟಿದೆ: ಶ್ರೀಮತಿ ದೇಬ್ಜಾನಿ ಘೋಷ್

Posted On: 27 MAY 2023 6:26PM by PIB Bengaluru

ಕೇಂದ್ರ ಸರ್ಕಾರವು 9 ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭವಾಗಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು "9 ವರ್ಷಗಳ ಸೇವೆ, ಸುಶಾಸನ, ಗರೀಬ್ ಕಲ್ಯಾಣ್" ಎಂಬ ವಿಷಯದೊಂದಿಗೆ ರಾಷ್ಟ್ರೀಯ ಸಮಾವೇಶವನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿತು. ಸಮಾವೇಶದ ಅಂಗವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಿರ್ಣಾಯಕ ನಾಯಕತ್ವದಲ್ಲಿ ಕೇಂದ್ರ ಸರ್ಕಾರದ ವಿವಿಧ ಸಾಧನೆಗಳು ಮತ್ತು ರಾಷ್ಟ್ರದ ತ್ವರಿತ ಪ್ರಗತಿ ಮತ್ತು ಜನಸಾಮಾನ್ಯರ ಸುಧಾರಣೆಗಾಗಿ ಸರ್ಕಾರ ಕೈಗೊಂಡ ನಿರಂತರ ಪ್ರಯತ್ನಗಳ ಬಗ್ಗೆ ಚರ್ಚಿಸಲು ಗಣ್ಯರೊಂದಿಗೆ  ಮೂರು ವಿಷಯಾಧಾರಿತ ಅಧಿವೇಶನಗಳನ್ನು ನಡೆಸಲಾಯಿತು. ಮೊದಲ ಅಧಿವೇಶನವು 'ಇಂಡಿಯಾ: ಸರ್ಜಿಂಗ್ ಅಹೆಡ್' ('ಭಾರತ: ಮುನ್ನುಗ್ಗುತ್ತಿದೆ') ಎಂಬ ವಿಷಯದ ಮೇಲೆ ನಡೆಯಿತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಭಾರತವು ಪ್ರಮುಖ ಜಾಗತಿಕ ನಾಯಕನಾಗಿ ಹೇಗೆ ಗಮನಾರ್ಹವಾದ ಪರಿವರ್ತನೆ ಕಂಡಿದೆ ಎಂಬುದನ್ನು ಅಧಿವೇಶನವು ವಿಶದವಾಗಿ ಚರ್ಚಿಸಿತು.

ಖ್ಯಾತ ಪತ್ರಕರ್ತ ಶ್ರೀ ನಿತಿನ್ ಗೋಖಲೆಯವರು ಈ ಅಧಿವೇಶನವನ್ನು ನಡೆಸಿಕೊಟ್ಟರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಇದರಲ್ಲಿ ಭಾಗವಹಿಸಿದರು. ಭಾರತಿ ಎಂಟರ್‌ಪ್ರೈಸಸ್‌ನ ಸಂಸ್ಥಾಪಕ ಅಧ್ಯಕ್ಷ ಶ್ರೀ ಸುನಿಲ್ ಭಾರತಿ ಮಿತ್ತಲ್, ಅಪೋಲೋ ಆಸ್ಪತ್ರೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಸಂಗೀತಾ ರೆಡ್ಡಿ, ನಾಸ್ಕಾಂ ಅದ್ಯಕ್ಷೆ ಶ್ರೀಮತಿ ದೇಬ್ಜಾನಿ ಘೋಷ್, ಐಎಂಎಫ್‌ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಸುರ್ಜಿತ್ ಭಲ್ಲಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರೂಪ್ ಮುಖ್ಯ ಆರ್ಥಿಕ ಸಲಹೆಗಾರ ಶ್ರೀ ಸೌಮ್ಯ ಕಾಂತಿ ಘೋಷ್ ಮತ್ತು ಇಂಡಿಯನ್ ವುಮೆನ್ ಇನ್‌ಸ್ಟಿಟ್ಯೂಶನಲ್ ಲೀಗ್ ಇಂಡಿಯಾದ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ಶ್ರೀಮತಿ ದೀಪಾ ಸಾಯಲ್ ಅಧಿವೇಶನದಲ್ಲಿ ಭಾಗವಹಿಸಿದರು.

ಅಧಿವೇಶನದ ಹಿನ್ನೆಲೆಯ ಬಗ್ಗೆ ಮಾತನಾಡಿದ ಶ್ರೀ ಗೋಖಲೆ, "ಭಾರತವು ದಶಕಗಳ ಕಾಲ ಒಟ್ಟಿಗೆ ಕಾಣದಿರುವ ಪರಿವರ್ತನೆಯ ಹಾದಿಯಲ್ಲಿದೆ ಮತ್ತು ಜಾಗತಿಕವಾಗಿ ಭಾರತದ ಮೌಲ್ಯ ಏರಿದೆ" ಎಂದು ಹೇಳಿದರು. “ನವೆಂಬರ್ 2022 ರಲ್ಲಿ ಮೋರ್ಗನ್ ಸ್ಟಾನ್ಲಿ ಇದು ಭಾರತದ ದಶಕವಾಗಲಿದೆ ಎಂದು ಹೇಳಿತ್ತು. ಏಪ್ರಿಲ್, 2023 ರಲ್ಲಿ ಐಎಂಎಫ್‌ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದೆ. ಭಾರತವು ವಿಶ್ವ ಕ್ರಮಾಂಕವನ್ನು ಸಮತೋಲನಗೊಳಿಸುವಲ್ಲಿ ಮುನ್ನುಗ್ಗುತ್ತಿದೆ ಮತ್ತು ಮುಂದಾಳತ್ವ ವಹಿಸುತ್ತಿದೆ, ಆದ್ದರಿಂದ ಈ ಸಮಾವೇಶಕ್ಕೆ ಇದಕ್ಕಿಂತ ಉತ್ತಮ ಸಮಯ ಇನ್ನೊಂದು ಇರಲು ಸಾಧ್ಯವಿರಲಿಲ್ಲ” ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಉತ್ತಮ ಆಡಳಿತದ ದಶಕದ ಬಗ್ಗೆ ಮಾತನಾಡಿದ ಶ್ರೀ ಸುನೀಲ್ ಭಾರತಿ ಮಿತ್ತಲ್, ಕಳೆದ ಕೆಲವು ವರ್ಷಗಳಲ್ಲಿ ನಾವೆಲ್ಲರೂ ವ್ಯತ್ಯಾಸವನ್ನು ಅನುಭವಿಸಿದ್ದೇವೆ ಮತ್ತು ನೋಡಿದ್ದೇವೆ ಎಂದು ಹೇಳಿದರು. ವ್ಯವಹಾರಗಳಿಗೆ ನಿರ್ಣಾಯಕ ನಾಯಕತ್ವದ ಅಗತ್ಯವಿದೆ ಮತ್ತು ಸುದೀರ್ಘ ಅವಧಿಯ ನಂತರ ನಾವು ಜಾಗತಿಕ ನಾಯಕನಾಗಿ ಗುರುತಿಸಲ್ಪಟ್ಟ ಮತ್ತು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ನಿರ್ಧರಿಸಿರುವ ನಾಯಕನನ್ನು ಹೊಂದಿದ್ದೇವೆ ಎಂದು ಅವರು ಹೇಳಿದರು. ಟೆಲಿಕಾಂ ಕ್ಷೇತ್ರದ ಕುರಿತು ಮಾತನಾಡಿದ ಅವರು, ಭಾರತವು ಅತ್ಯಂತ ವೇಗವಾಗಿ 5ಜಿ ಸೇವೆ ಆರಂಭಿಸಿದೆ ಮತ್ತು ಮಾರ್ಚ್, 2024 ರ ವೇಳೆಗೆ, ಭಾರತವು ದೇಶದ ಪ್ರತಿಯೊಂದು ಮೂಲೆ ಮೂಲೆಯಲ್ಲಿ 5ಜಿ ಅನ್ನು ಹೊಂದಿರುತ್ತದೆ ಎಂದರು. ದೇಶದ ಜನಸಾಮಾನ್ಯರಿಗೆ ಸುಧಾರಣೆಗಳು ಮತ್ತು ಪ್ರಯೋಜನಗಳನ್ನು ತಲುಪಿಸಲು ಸರ್ಕಾರವು ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಂಡಿದೆ ಎಂದು ಅವರು ಹೇಳಿದರು. ನಾವು ಅದ್ಭುತವಾದ 9 ವರ್ಷಗಳನ್ನು ನೋಡಿದ್ದೇವೆ ಮತ್ತು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದಿಟ್ಟ ಗುರಿಯು ಕೆಲವು ವರ್ಷಗಳ ಹಿಂದೆ ಕಷ್ಟಕರವಾದ ಕೆಲಸದಂತೆ ತೋರುತ್ತಿತ್ತು ಮತ್ತು ಆದರೆ ಈಗ 2027 ರ ವೇಳೆಗೆ ನಾವು ಅದನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಅಪೊಲೊ ಆಸ್ಪತ್ರೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಸಂಗೀತಾ ರೆಡ್ಡಿ, ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತ ಹೇಗೆ ವ್ಯಾಪಕ ಮತ್ತು ಪರಿಣಾಮಕಾರಿ ಯೋಜನೆಯನ್ನು ಮಾಡಿತು ಎಂಬ ಬಗ್ಗೆ ಮಾತನಾಡಿದರು. ಅನೇಕ ದೇಶಗಳನ್ನು ಅಳಿಸಿಹಾಕಿದ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ನಮ್ಮ ದೇಶವು ವಿಶಿಷ್ಟವಾಗಿ ಎದ್ದು ಕಾಣುತ್ತದೆ ಮತ್ತು ನಮ್ಮ ಪ್ರಧಾನಿ ಮತ್ತು ಸರ್ಕಾರದ ಪರಿಸ್ಥಿತಿಯ ಕೌಶಲ್ಯಪೂರ್ಣ ನಿರ್ವಹಣೆಯಿಂದಾಗಿ ಇದು ಸಾಧ್ಯವಾಯಿತು ಎಂದು ಅವರು ಹೇಳಿದರು. ಅಗತ್ಯ ಮೂಲಸೌಕರ್ಯಗಳಿಗೆ ಸಮಯ ಮತ್ತು ಸ್ಥಳವನ್ನು ಒದಗಿಸಿದ ಮತ್ತು ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಹಾಯ ಮಾಡಿದ ಜನತಾ ಕರ್ಫ್ಯೂ ವನ್ನು ಅವರು ಶ್ಲಾಘಿಸಿದರು. ಕೋವಿಡ್ ಲಸಿಕೆಗಳ ಬಗ್ಗೆ ಮಾತನಾಡಿದ ಅವರು, ಇದು ಪ್ರಶಂಸನೀಯವಾದುದು ಹಾಗೂ ಭಾರತ ಮತ್ತು ನಮ್ಮ ಪ್ರಧಾನಿಯವರ ಜಾಗತಿಕ ಚಿಂತನಾ ಪ್ರಕ್ರಿಯೆಯನ್ನು ಪ್ರತಿಬಿಂಬಿಸುತ್ತದೆ, ವಿಶ್ವದ ಶೇ.50 ರಷ್ಟು ಲಸಿಕೆಗಳನ್ನು ಭಾರತದಲ್ಲಿ ತಯಾರಿಸಲಾಗುತ್ತಿದೆ ಮತ್ತು ಇದು ಅಭೂತಪೂರ್ವ ಪ್ರಮಾಣದಲ್ಲಿ ಲಸಿಕೆ ರಾಜತಾಂತ್ರಿಕತೆಯನ್ನು ಸೃಷ್ಟಿಸಿದೆ ಎಂದು ಹೇಳಿದರು. ಸರ್ಕಾರದ ವಿಧಾನವು ಉತ್ತಮವಾಗಿ ಸಂಘಟಿತವಾದ, ಅದ್ಭುತವಾದ ಪ್ರಜ್ಞಾವಂತಿಕೆಯ ತಂತ್ರವನ್ನು ಶಕ್ತಿಯುತವಾಗಿ ಕಾರ್ಯಗತಗೊಳಿಸಿತು ಎಂದು ಅವರು ಹೇಳಿದರು. ಭಾರತದಲ್ಲಿ ಉತ್ತಮ ಅಡಿಪಾಯವನ್ನು ಹಾಕಲಾಗಿದೆ ಮತ್ತು ಭಾರತವು ತನ್ನ ಜನರನ್ನು ಚೆನ್ನಾಗಿ ನೋಡಿಕೊಳ್ಳುವುದು ಮಾತ್ರವಲ್ಲದೆ, ಪ್ರಪಂಚದ ವೈದ್ಯಕೀಯ ಪ್ರವಾಸೋದ್ಯಮ ತಾಣವಾಗಿದೆ, ಪ್ರಸ್ತುತ ನಾವು 4 ನೇ ಸ್ಥಾನದಲ್ಲಿದ್ದೇವೆ, ಆದರೆ ಶೀಘ್ರದಲ್ಲೇ ನಾವು 2 ನೇ ಸ್ಥಾನವನ್ನು ಪಡೆಯುತ್ತೇವೆ ಎಂದು ನನಗೆ ವಿಶ್ವಾಸವಿದೆ ಎಂದು ಅವರು ಹೇಳಿದರು. ಭಾರತವು ಮುಂದೆ ಉತ್ತಮ ಭವಿಷ್ಯವನ್ನು ಹೊಂದಿರುವುದರಿಂದ ಮತ್ತು ಅದು ಯುವ ಪೀಳಿಗೆಯ ಕೈಯಲ್ಲಿರುವುದರಿಂದ, ಯುವಜನರು ಯೋಗ, ಆಯುಷ್ ಮತ್ತು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಐಎಂಎಫ್‌ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಸುರ್ಜಿತ್ ಭಲ್ಲಾ ಮಾತನಾಡಿ, ಆಘಾತಕಾರಿ ಕೋವಿಡ್ ಅವಧಿಯಲ್ಲಿ ಮತ್ತು ಇಂದು ಭಾರತವು ವಿಶ್ವದ ಅತ್ಯುತ್ತಮ ದಕ್ಷತೆಯ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು. ಬಡತನ ಕಡಿತದ ಕುರಿತು ಮಾತನಾಡಿದ ಅವರು, ಸರ್ಕಾರದ ಸಂಪೂರ್ಣ ಪ್ರಕ್ರಿಯೆಯು ಕೋವಿಡ್‌ನ ಪರಿಣಾಮವಾಗಿ ಜನಸಂಖ್ಯೆಯ ಕನಿಷ್ಠ ಅರ್ಧದಷ್ಟು ಜನರು ಯಾವುದೇ ತೊಂದರೆಗಳನ್ನು ಅನುಭವಿಸದಂತೆ ಖಚಿತಪಡಿಸಿಕೊಳ್ಳಲು ಸಜ್ಜಾಗಿತ್ತು ಎಂದು ಹೇಳಿದರು. ಮೂಲಸೌಕರ್ಯ ಪರಿವರ್ತನೆಯ ಕುರಿತು ಮಾತನಾಡಿದ ಅವರು, ಕಳೆದ 9 ವರ್ಷಗಳಲ್ಲಿ ಇಂತಹ ಪರಿವರ್ತನೆಯನ್ನು ತೋರಿಸಿರುವ ಯಾವುದೇ ಆರ್ಥಿಕತೆ ಜಗತ್ತಿನಲ್ಲಿದೆಯೇ ಎಂದು ಅಧ್ಯಯನ ಮಾಡಲು ಆರಂಭಿಸಿದ್ದೇನೆ ಎಂದು ಹೇಳಿದರು. ಈ ಸರ್ಕಾರ ಮೊದಲು, ಅಸಾಧ್ಯವಾದುದನ್ನು ಕಲ್ಪಿಸುತ್ತದೆ ಮತ್ತು ಅದನ್ನು ಪರಿಣಾಮಕಾರಿಯಾಗಿ ಸಾಧಿಸಿ ತೋರಿಸಿದೆ. ಇದು ಈ ಸರ್ಕಾರದ ನಿಜವಾದ ಕಾರ್ಯಕ್ಷಮತೆಯ ಸೂಚ್ಯಂಕವಾಗಿದೆ ಎಂದು ಅವರು ಹೇಳಿದರು. ಭಾರತೀಯ ನಾವೀನ್ಯತೆಯು ನಿಜವಾಗಿಯೂ ಅನನ್ಯವಾದುದು, ಭಾರತೀಯವಾದುದು ಮತ್ತು ವಿಶ್ವದ ಯಾವುದೇ ದೇಶಕ್ಕಿಂತ ಉತ್ತಮವಾಗಿದೆ. ಭಾರತದ ಪರಿವರ್ತನೆಯ ವೇಗದ ಬಗ್ಗೆ ಪುಸ್ತಕಗಳು ಹೊರಬರಲಿವೆ ಎಂದು ಅವರು ಹೇಳಿದರು.

ನಾಸ್ಕಾಂ ಅಧ್ಯಕ್ಷೆ ಶ್ರೀಮತಿ ದೇಬ್ಜಾನಿ ಘೋಷ್ ಮಾತನಾಡಿ, 2008 ರಲ್ಲಿ ಕೇವಲ ಶೇ.17 ರಷ್ಟು ಭಾರತೀಯರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರು ಮತ್ತು ಶೇ.80 ರಷ್ಟು ವ್ಯಾಪ್ತಿಯನ್ನು ಸಾಧಿಸಲು ಭಾರತವು 46 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಧ್ಯಯನವೊಂದು ಹೇಳಿತ್ತು. ಆದರೆ ಭಾರತವು ಅದನ್ನು ಕೇವಲ 7 ವರ್ಷಗಳಲ್ಲಿ ಸಾಧಿಸಿತು. ತಂತ್ರಜ್ಞಾನ, ಆಧಾರ್, ಇಂಡಿಯಾ ಸ್ಟಾಕ್, ಡಿಜಿಟಲ್ ಪಾವತಿ ಮತ್ತು ಅತ್ಯಂತ ಬುದ್ಧಿವಂತೆಯ ಹಣಕಾಸು ಸೇರ್ಪಡೆ ಕಾರ್ಯಕ್ರಮ ಜನ್ ಧನ್ ಯೋಜನೆಯಿಂದಾಗಿ ಭಾರತವು ಅದನ್ನು ಸಾಧಿಸಿ ತೋರಿಸಿತು ಎಂದು ಅವರು ಹೇಳಿದರು ಜೆಎಎಂ ಟ್ರಿನಿಟಿ ಕಾರ್ಯಕ್ರಮವು ಬ್ಯಾಂಕಿಂಗ್ ಅನ್ನು ತಳ ಮಟ್ಟದವರೆಗೆ ಕೊಂಡೊಯ್ಯಲು ನಮಗೆ ಅನುವು ಮಾಡಿಕೊಟ್ಟಿದೆ. ತಂತ್ರಜ್ಞಾನವು ಎಲ್ಲರಿಗೂ ಲಭ್ಯವಿದೆ, ಆದರೆ ಭಾರತದಲ್ಲಿ ಇರುವ ವ್ಯತ್ಯಾಸವೆಂದರೆ ಯಥಾಸ್ಥಿತಿಗೆ ಸವಾಲು ಹಾಕಲು ನಮಗೆ ಸಾಧ್ಯವಾಗಿಸಿದ ಪ್ರತಿಭೆ ಹಾಗೂ ಜನರು. 245 ಶತಕೋಟಿ ಡಾಲರ್ ಆದಾಯವನ್ನು ನಮ್ಮ ಟೆಕ್ ಉದ್ಯಮವು ಉತ್ಪಾದಿಸುತ್ತಿದೆ ಮತ್ತು ಬೆಳವಣಿಗೆ ಮತ್ತು ನಾವೀನ್ಯತೆಗಳ ವೇಗವು ಅಭೂತಪೂರ್ವವಾಗಿದೆ ಮತ್ತು ಭಾರತವನ್ನು ನಾವೀನ್ಯತೆ ಕೇಂದ್ರವಾಗಿ ಮತ್ತು ಸ್ಟಾರ್ಟ್ಅಪ್ ಕೇಂದ್ರವನ್ನಾಗಿ ಮಾಡಿದ ಪ್ರತಿಭೆಯಿಂದ ಮುನ್ನಡೆಸಲಾಗುತ್ತಿದೆ. ನಾವೀನ್ಯತೆಯಲ್ಲಿನ 'ಐ' ಇಂಡಿಯಾವನ್ನು ಪ್ರತಿನಿಧಿಸುತ್ತದೆ. ಇದು ಎಲ್ಲಾ ದೊಡ್ಡ ಕಂಪನಿಗಳು ನಾವೀನ್ಯತೆಗಾಗಿ ಭಾರತಕ್ಕೆ ಬರುವಂತೆ ಮಾಡಿದೆ ಎಂದು ಅವರು ಪ್ರತಿಪಾದಿಸಿದರು. ತಂತ್ರಜ್ಞಾನವು ಶ್ರೀಮಂತರು ಮತ್ತು ನಗರವಾಸಿಗಳ ಐಷಾರಾಮಿ ಸೌಲಭ್ಯವಾಗಿತ್ತು, ಆದರೆ ಭಾರತವು ಇದನ್ನು ತಿರುಗುಮುರುಗು ಮಾಡಿತು ಮತ್ತು ತಳಮಟ್ಟದಿಂದ ಪ್ರಾರಂಭಿಸಿತು. ತಳಮಟ್ಟದಿಂದ ಯೋಚಿಸುವ ಸಾಮರ್ಥ್ಯವು ಇದನ್ನು ಸಾಧ್ಯವಾಗಿಸಿದೆ ಎಂದರು. ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ 5.3 ಮಿಲಿಯನ್ ಜನರಲ್ಲಿ ಶೇ.36 ರಷ್ಟು ಮಹಿಳೆಯರಿದ್ದಾರೆ ಮತ್ತು ಅವರು ಬದಲಾವಣೆ ಮತ್ತು ನಾವೀನ್ಯತೆಗೆ ಚಾಲನೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಭಾರತೀಯ ಮಹಿಳಾ ಸಂಸ್ಥೆಗಳ ಲೀಗ್ ಇಂಡಿಯಾದ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ಶ್ರೀಮತಿ ದೀಪಾ ಸಾಯಲ್ ಅವರು ಮಾತನಾಡಿ, ನನ್ನ ರಾಷ್ಟ್ರವು ವೇಗದಲ್ಲಿ ಬದಲಾಗುತ್ತಿದೆ ಎಂಬ ಬಗ್ಗೆ ನನಗೆ ಹೆಮ್ಮೆ ಇದೆ ಮತ್ತು ಸರ್ಕಾರವು ಬದಲಾವಣೆಗೆ  ತರುತ್ತಿರುವ ಯೋಗ್ಯವಾದ ಮತ್ತು ಪರಿಶುದ್ಧವಾದ ವೇಗ ಮತ್ತು ಪ್ರಮಾಣವು ಪ್ರಶಂಸಾರ್ಹವಾದುದು ಎಂದು ಹೇಳಿದರು. ದಶಕದ ಅಂತ್ಯದ ವೇಳೆಗೆ ನಮ್ಮ ಜಿಡಿಪಿ 7.5 ಟ್ರಿಲಿಯನ್ ಡಾಲರ್‌ಗೆ ದ್ವಿಗುಣಗೊಳ್ಳುತ್ತದೆ ಎಂದು ಮೋರ್ಗನ್ ಸ್ಟಾನ್ಲಿ ಹೇಳಿದೆ. ಇದೊಂದು ದೊಡ್ಡ ವಿಷಯ ಎಂದು ಅವರು ಹೇಳಿದರು.  ವಿವಿಧ ರಾಜ್ಯಗಳಿಗೆ ಭೇಟಿ ನೀಡುವ ಮತ್ತು ಸ್ಟಾರ್ಟ್‌ಅಪ್‌ಗಳೊಂದಿಗೆ ಸಂಪರ್ಕ ಸಾಧಿಸುವ ಅದೃಷ್ಟ ನನಗೆ ಸಿಕ್ಕಿದೆ. ಮಹಿಳೆಯರು ಮತ್ತು ಮಕ್ಕಳು ಸ್ವಯಂ ಉದ್ಯೋಗವನ್ನು ಪ್ರಾರಂಭಿಸಲು ತುಂಬಾ ಉತ್ಸಾಹಭರಿತರಾಗಿದ್ದಾರೆ  ಎಂದು ಅವರು ಹೇಳಿದರು. ಅವರು 2016 ರಲ್ಲಿದ್ದ 450 ಸ್ಟಾರ್ಟಪ್‌ಗಳು 2023 ರಲ್ಲಿ 90000 ಕ್ಕೆ ಏರಿಕೆಯಾದ ಅಸಾಧಾರಣ ಪ್ರಯಾಣದ ಬಗ್ಗೆ ಅವರು ಮಾತನಾಡಿದರು. ಇದಕ್ಕಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ತಾವು ಅಭಿನಂದಿಸುವುದಾಗಿ ಹೇಳಿದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗುಂಪಿನ ಮುಖ್ಯ ಆರ್ಥಿಕ ಸಲಹೆಗಾರರಾದ ಶ್ರೀ ಸೌಮ್ಯ ಕಾಂತಿ ಘೋಷ್ ಅವರು ಪ್ರಮುಖ ಅಂಕಿ ಸಂಖ್ಯೆಗಳ ಕುರಿತು ಮಾತನಾಡುತ್ತಾ,  ಕೋವಿಡ್‌ ಮಾನವಕುಲಕ್ಕೆ ಅತಿದೊಡ್ಡ ಅಡ್ಡಿಯಾಯಿತು, ಆದರೆ ಕಳೆದ ವರ್ಷ ನಮ್ಮ ಜಿಡಿಪಿ 37 ಟ್ರಿಲಿಯನ್ಗಳಷ್ಟು ವಿಸ್ತರಿಸಿದೆ. 2014 - 20 ನಮ್ಮ ಸರಾಸರಿ 14.5 ಟ್ರಿಲಿಯನ್ ಆಗಿತ್ತು. ಆದ್ದರಿಂದ ನಾವು ಕಳೆದ 6 ವರ್ಷಗಳಿಗಿಂತ 2.5 ಪಟ್ಟು ಹೆಚ್ಚು ಸಾಧಿಸಿದ್ದೇವೆ. ಆದ್ದರಿಂದ ಚೇತರಿಕೆ ವೇಗವಾಗಿತ್ತು. 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಕುರಿತು ಮಾತನಾಡಿದ ಅವರು, ಭಾರತವು 1 ಟ್ರಿಲಿಯನ್‌ಗೆ ತಲುಪಲು 57 ವರ್ಷಗಳನ್ನು ತೆಗೆದುಕೊಂಡಿತು ಮತ್ತು ನಂತರ ಪ್ರತಿ 7 ವರ್ಷಗಳಿಗೊಮ್ಮೆ ನಾವು 1 ಟ್ರಿಲಿಯನ್ ಅನ್ನು ಸೇರಿಸಿದ್ದೇವೆ ಮತ್ತು ಈಗ ಪ್ರತಿ ಮೂರು ವರ್ಷಗಳಿಗೊಮ್ಮೆ ನಾವು ಒಂದು ಟ್ರಿಲಿಯನ್ ಸೇರಿಸುತ್ತಿದ್ದೇವೆ ಮತ್ತು ಕಳೆದ ಎರಡು ವರ್ಷಗಳಲ್ಲಿ ನಮ್ಮ ಆರ್ಥಿಕತೆಯು 750 ಶತಕೋಟಿಯನ್ನು ಸೇರಿಸಿದೆ ಎಂದು ಹೇಳಿದರು. ಅದಕ್ಕಾಗಿಯೇ 2014 ರಲ್ಲಿ ನಾವು 10 ನೇ ಅತಿದೊಡ್ಡ ಆರ್ಥಿಕತೆಯಾಗಿದ್ದೆವು, 2015 ರಲ್ಲಿ ನಾವು 7 ನೇ ಸ್ಥಾನದಲ್ಲಿದ್ದೆವು, 2019 ರಲ್ಲಿ ನಾವು 6 ನೇ ಮತ್ತು 2022 ರಲ್ಲಿ 5 ನೇ ಮತ್ತು 2026 ರಲ್ಲಿ 4 ನೇ ಮತ್ತು 2028 ರಲ್ಲಿ 3 ನೇ ಸ್ಥಾನವನ್ನು ಪಡೆಯುತ್ತೇವೆ. ಚೇತರಿಕೆಯ ಪರಿಭಾಷೆಯಲ್ಲಿ ಇದೊಂದು ಪರಿವರ್ತನೆಯಾಗಿದೆ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾತನಾಡಿದ ಅವರು, ಎಲ್ಲದರಲ್ಲಿಯೂ ಮಹಿಳೆಯರ ಒಳಗೊಳ್ಳುವಿಕೆ ತುಂಬಾ ಹೆಚ್ಚಾಗಿದೆ ಮತ್ತು ಇದು ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ಕಾರಣವಾಗಿದೆ ಎಂದು ತಿಳಿಸಿದರು. ಕಳೆದ 7 ವರ್ಷಗಳಲ್ಲಿ ನಮ್ಮ ಸೇವಾ ರಫ್ತು ದ್ವಿಗುಣಗೊಂಡಿದೆ ಎಂದು ಅವರು ಹೇಳಿದರು. ಸಂಕ್ಷಿಪ್ತವಾಗಿ ಹೇಳುವುದಾದರೆ, ಎಲ್ಲಾ ಸಂಖ್ಯೆಗಳು ಭಾರತವನ್ನು ಒಳಗೊಂಡಿರುವ ಮತ್ತು ಅಸಾಧಾರಣ ದರದಲ್ಲಿ ವಿಸ್ತರಿಸುತ್ತಿರುವುದನ್ನು ಸೂಚಿಸುತ್ತವೆ ಎಂದು ಹೇಳಿದರು.

ಕೊನೆಯಲ್ಲಿ, ಮುಂಬರುವ 5-10 ವರ್ಷಗಳಲ್ಲಿ ಭಾರತಕ್ಕೆ ಮುಂದೇನು ಎಂಬುದರ ಕುರಿತು ಎಲ್ಲರೂ ಮಾತನಾಡಿದರು. ಉದ್ಯೋಗಾವಕಾಶವು ಒಂದು ಅವಕಾಶ ಮತ್ತು ಸವಾಲಾಗಿದೆ ಮತ್ತು ಈ ಅವಕಾಶವನ್ನು ಬಳಸಿಕೊಳ್ಳಲು ನಾವು ಸರಿಯಾದ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಶ್ರೀಮತಿ ದೀಪಾ ಸಾಯಲ್ ಹೇಳಿದರು. ಶ್ರೀಮತಿ ದೇಬ್ಜಾನಿ ಘೋಷ್ ಮಾತನಾಡಿ, ಯುವಜನರ ಶಕ್ತಿ, ಪ್ರತಿಭೆ, ನಾವೀನ್ಯತೆಯು ಜಗತ್ತು ಡಿಜಿಟಲ್, ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಬಗ್ಗೆ ಯೋಚಿಸುವಾಗ ಭಾರತದ ಬಗ್ಗೆ ಯೋಚಿಸುವುದನ್ನು ಖಚಿತಪಡಿಸುತ್ತದೆ ಎಂದರು. ಶ್ರೀ ಸುನಿಲ್ ಮಿತ್ತಲ್ ಅವರು, ಕಳೆದ 9 ವರ್ಷಗಳಲ್ಲಿ ನಮ್ಮ ದೇಶಕ್ಕೆ ಅತ್ಯಂತ ಉಜ್ವಲ ಭವಿಷ್ಯಕ್ಕಾಗಿ ಅಡಿಪಾಯ ಹಾಕಲಾಗಿದೆ ಮತ್ತು ನಮಗೆ ಬೇಕಾದುದನ್ನು ನಾವು ನಿರ್ಮಿಸಬೇಕಾಗಿದೆ. ದೃಢ ನಾಯಕತ್ವ ಮತ್ತು ಬಲವಾದ ಟೆಲ್‌ವಿಂಡ್‌ಗಳ ಸಂಗಮದೊಂದಿಗೆ ಭಾರತಕ್ಕೆ ಇದು ಅಪರೂಪದ ಅವಕಾಶವಾಗಿದೆ ಮತ್ತು ಇದು ಭಾರತಕ್ಕೆ ಸಂತೋಷಕರ ಸ್ಥಾನವಾಗಿದೆ ಮತ್ತು ನಮ್ಮ ದೊಡ್ಡ ಯುವ ಜನಸಂಖ್ಯೆಗೆ ಉತ್ತಮ ಶಿಕ್ಷಣ, ತರಬೇತಿ ಮತ್ತು ಕೌಶಲ್ಯವನ್ನು ನಾವು ಖಚಿತಪಡಿಸಿಕೊಳ್ಳಬೇಕು, ಇದು ಒಟ್ಟಾಗಿ ಭಾರತಕ್ಕೆ ಉಜ್ವಲ ಭವಿಷ್ಯವನ್ನು ಖಚಿತಪಡಿಸುತ್ತದೆ ಎಂದರು. ಶ್ರೀಮತಿ ಸಂಗೀತಾ ರೆಡ್ಡಿ ಅವರು ಕಳೆದ 9 ವರ್ಷಗಳು ಅಂದರೆ 468 ವಾರಗಳು ಇದರಲ್ಲಿ 500 ಕ್ಕೂ ಹೆಚ್ಚು ಯೋಜನೆಗಳನ್ನು ಪ್ರಾರಂಭಿಸಲಾಗಿದೆ, ಅಂದರೆ ಪ್ರತಿ ವಾರ 1 ಯೋಜನೆ ಆರಂಭಿಸಲಾಗಿದೆ. ಮುಂದಿನ 10 ವರ್ಷಗಳಲ್ಲಿ ಈ ಯೋಜನೆಗಳಿಗೆ ಮಾರ್ಗದರ್ಶನ ನೀಡಲು ನಮಗೆ ಸಮಯವಿದೆ. ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಉತ್ತೇಜಿಸುತ್ತಿರುವ ಪ್ರಧಾನಮಂತ್ರಿ ಶ್ರೀ ಮೋದಿ ಅವರನ್ನು ಶ್ಲಾಘಿಸಿದ ಅವರು, ಮಹಿಳೆಯರ ಮೇಲಿನ ಗೌರವವು ಭಾರತಕ್ಕೆ ಪರಿವರ್ತನೆಯಾಗಲಿದೆ ಮತ್ತು ಜಗತ್ತಿಗೆ ಮಾದರಿಯಾಗಲಿದೆ ಎಂದು ಹೇಳಿದರು. ಚಿಂತನೆ, ಆಧ್ಯಾತ್ಮಿಕ ಮತ್ತು ಮಾನವೀಯ ನಾಯಕತ್ವದಲ್ಲಿ ಭಾರತವು ಯಾವಾಗಲೂ ಮೊದಲ ಸ್ಥಾನದಲ್ಲಿದೆ ಎಂದು ಅವರು ಹೇಳಿದರು. ಶ್ರೀ ಸುರ್ಜಿತ್ ಭಲ್ಲಾ ಅವರು ಮಾತನಾಡಿ, ಸಾಕಷ್ಟು ಸಾಧಿಸಲಾಗಿದೆ ಮತ್ತು ಭಾರತಕ್ಕೆ ಅಗತ್ಯವಿರುವ ಪ್ರಮುಖ ಸುಧಾರಣೆ ನೇರ ತೆರಿಗೆಯದ್ದಾಗಿದೆ ಮತ್ತು ಭಾರತವು ವಿಶ್ವದ ಅತ್ಯಂತ ಹೆಚ್ಚು ತೆರಿಗೆ ವಿಧಿಸುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದರು. ಪರಿಣಾಮಕಾರಿ ತೆರಿಗೆ ದರವನ್ನು ಕಡಿಮೆ ಮಾಡುವ ಸುಧಾರಣೆ ಬರಲಿದೆ ಎಂದು ಆಶಿಸಿದ ಅವರು ಹೆಚ್ಚಿನ ಜಿಡಿಪಿ ಬೆಳವಣಿಗೆ ದರವನ್ನು ಸಾಧಿಸಲು ಇದು ಸಹಾಯ ಮಾಡುತ್ತದೆ ಎಂದು ಹೇಳಿ ತಮ್ಮ ಮಾತು ಮುಗಿಸಿದರು.

******

 

 

 

 



(Release ID: 1927917) Visitor Counter : 128