ವಾರ್ತಾ ಮತ್ತು ಪ್ರಸಾರ ಸಚಿವಾಲಯ
ʻಸರ್ಕಾರದ 9 ವರ್ಷಗಳ ಕುರಿತಾದ ರಾಷ್ಟ್ರೀಯ ಸಮಾವೇಶʼದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅಧ್ಯಕ್ಷತೆ ವಹಿಸಿದ ಹಣಕಾಸು ಸಚಿವರು
ಸರ್ಕಾರದ ಸಮರ್ಥ ನಾಯಕತ್ವ ಮತ್ತು ಉತ್ತಮ ನೀತಿ ನಿರ್ಧಾರಗಳಿಂದಾಗಿಯೇ ಯುವಜನರಲ್ಲಿ ಅವರ ಭವಿಷ್ಯದ ಬಗ್ಗೆ ಗ್ರಹಿಕೆ ಸುಧಾರಿಸಿದೆ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರು
ʻಪಿಎಂ ಗತಿಶಕ್ತಿʼ ಭಾರತಕ್ಕೆ ಅಡಿಪಾಯವಾಗಿ ಮೂಲಸೌಕರ್ಯವನ್ನು ಒದಗಿಸುತ್ತಿದೆ, ಆ ಮೂಲಕ 'ಗತಿ' ಮತ್ತು 'ಪ್ರಗತಿ'ಯನ್ನು ಖಚಿತಪಡಿಸುತ್ತದೆ: ಶ್ರೀ ಅನುರಾಗ್ ಠಾಕೂರ್
ಈ ವರ್ಷದ ʻಖೇಲೋ ಇಂಡಿಯಾʼ ಕ್ರೀಡಾಕೂಟದಲ್ಲಿ 25 ಹೊಸ ರಾಷ್ಟ್ರೀಯ ದಾಖಲೆಗಳನ್ನು ಸೃಷ್ಟಿಸಲಾಗಿದೆ, ಅದರಲ್ಲಿ 21 ದಾಖಲೆಗಳನ್ನು ದೇಶದ ಹೆಣ್ಣುಮಕ್ಕಳು ನಿರ್ಮಿಸಿದ್ದಾರೆ: ಶ್ರೀ ಅನುರಾಗ್ ಠಾಕೂರ್
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವವು ಕಳೆದ 9 ವರ್ಷಗಳಲ್ಲಿ ಸ್ಪಂದನಶೀಲ ಸರ್ಕಾರದ ಉದಾಹರಣೆಯ ಮೂಲಕ ಜನರ ಮನಸ್ಥಿತಿಯನ್ನು ಬದಲಾಯಿಸಿದೆ: ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್
ʻಜಿಎಸ್‌ಟಿʼಯ ಪ್ರಮುಖ ಸುಧಾರಣೆಗಳು, ಪುರಾತನ ಕಾನೂನುಗಳ ರದ್ದತಿ, ದಿವಾಳಿತನ ಸಂಹಿತೆ, ಮಹಿಳಾ ಸಬಲೀಕರಣ, ನವೋದ್ಯಮಗಳು ಮತ್ತು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಇತರ ಪ್ರಮುಖ ಸುಧಾರಣೆಗಳ ಬಗ್ಗೆ ಹಣಕಾಸು ಸಚಿವರು ಮಾತನಾಡಿದರು
Posted On:
27 MAY 2023 9:24PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ದೆಹಲಿಯ ವಿಜ್ಞಾನ ಭವನದ ʻಪ್ಲಾನೆರಿ ಹಾಲ್ʼನಲ್ಲಿ ನಡೆದ ʻಸರ್ಕಾರದ 9 ವರ್ಷಗಳ ಕುರಿತಾದ ರಾಷ್ಟ್ರೀಯ ಸಮಾವೇಶʼದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು ಉದ್ಘಾಟಿಸಿದ ಈ ಕಾರ್ಯಕ್ರಮವು ಮೂರು ವಿಷಯಾಧಾರಿತ ಅಧಿವೇಶನಗಳಿಗೆ ಸಾಕ್ಷಿಯಾಯಿತು. ಇದರಲ್ಲಿ ವಿವಿಧ ಕ್ಷೇತ್ರಗಳ ತಜ್ಞರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಮತ್ತು 'ಯುವ ಶಕ್ತಿ'ಯ ಜೊತೆ ಸಂವಾದ ನಡೆಸಿದರು.
ಸಮಾರೋಪ ಸಮಾರಂಭದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಡಾ.ಎಲ್.ಮುರುಗನ್ ಉಪಸ್ಥಿತರಿದ್ದರು. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಮತ್ತು ಪ್ರಸಾರ ಭಾರತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಗೌರವ್ ದ್ವಿವೇದಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿ ಮತ್ತು ಇತರ ಭಾಗೀದಾರರನ್ನು ಸ್ವಾಗತಿಸಿದ ಶ್ರೀ ಅನುರಾಗ್ ಠಾಕೂರ್ ಅವರು, ಕಳೆದ ದಶಕದಲ್ಲಿ ಭಾರತದ ಚಿತ್ರಣವು ಬದಲಾಗಿದೆ ಎಂದು ಒತ್ತಿ ಹೇಳಿದರು. ಯುವಕರಲ್ಲಿ ತಮ್ಮ ಭವಿಷ್ಯದ ಬಗ್ಗೆ ಗ್ರಹಿಕೆ ಸುಧಾರಿಸಿದೆ ಎಂದರೆ, ಅದಕ್ಕೆ ಕಾರಣ ಸರ್ಕಾರದ ಸಮರ್ಥ ನಾಯಕತ್ವ ಮತ್ತು ಉತ್ತಮ ನೀತಿ ನಿರ್ಧಾರಗಳು ಎಂದು ಸಚಿವರು ಹೇಳಿದರು. 9 ವರ್ಷಗಳ ಹಿಂದೆ ದೇಶ ಎದುರಿಸುತ್ತಿದ್ದ ಸವಾಲುಗಳ ಬಗ್ಗೆ ಅವರು ಎಲ್ಲರ ಗಮನಕ್ಕೆ ತಂದರು. "ಆದರೆ 9 ವರ್ಷಗಳ ನಂತರ, ಭಾರತವು ಈಗ ಕುಂಠಿತ ಆರ್ಥಿಕತೆಯಾಗಿಲ್ಲ ಬದಲಾಗಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ, ಬ್ರಿಟಿಷ್ ಆರ್ಥಿಕತೆಯನ್ನು ಹಿಂದಿಕ್ಕಿ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ಎನಿಸಿದೆ,ʼʼ ಎಂದು ಅವರು ಹೇಳಿದರು.
'ಜಾನ್ ಹೈ ತೋ ಜಹಾನ್ ಹೈ' ಮತ್ತು 'ಜಾನ್ ಭಿ, ಜಹಾನ್ ಭಿ' (ಜೀವವಿದ್ದರೆ ಜೀವನ ಇರುತ್ತದೆ, ಜೀವವೂ ಇರಲಿ, ಜೀವನವೂ ಇರಲಿ) ಎಂಬ ಪ್ರಧಾನಿಯವರ ಗಾದೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಹೇಗೆ ನಿಭಾಯಿಸಿತು ಎಂಬುದನ್ನು ಸಚಿವರು ಸ್ಮರಿಸಿದರು. "ವಿಜ್ಞಾನಿಗಳು ಕೋವಿಡ್ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ನಿರತರಾಗಿದ್ದರು. ಭಾರತದಲ್ಲಿ ಒಂದಲ್ಲ, ಎರಡು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಯಿತು. ಸುಮಾರು 220 ಕೋಟಿ ಕೋವಿಡ್ ಲಸಿಕೆ ಡೋಸ್‌ಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಒದಗಿಸಲಾಗಿದೆ," ಎಂದು ಅವರು ಒತ್ತಿ ಹೇಳಿದರು.
ಆಹಾರ ಭದ್ರತೆಯನ್ನು ಖಾತರಿಪಡಿಸುವಲ್ಲಿ ಸರ್ಕಾರದ ಪ್ರಯತ್ನಗಳನ್ನು ಎತ್ತಿ ತೋರಿಸಿದ ಸಚಿವರು, ವಿಶೇಷವಾಗಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ 80 ಕೋಟಿ ಜನರಿಗೆ 28 ತಿಂಗಳವರೆಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಲಾಗಿದೆ ಮತ್ತು ಈ ನಿಟ್ಟಿನಲ್ಲಿ ಸರ್ಕಾರವು ಸುಮಾರು 4 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಉಲ್ಲೇಖಿಸಿದರು. ಅಲ್ಲದೆ, ಸಾಂಕ್ರಾಮಿಕ ಸಮಯದಲ್ಲಿ ಉದ್ದಿಮೆ-ವ್ಯವಹಾರಗಳು ಎದುರಿಸುತ್ತಿದ್ದ ಸವಾಲುಗಳನ್ನು ನಿಭಾಯಿಸಲು, ʻತುರ್ತು ಸಾಲ ಖಾತರಿʼ ಯೋಜನೆಯಂತಹ ವಿವಿಧ ಯೋಜನೆಗಳನ್ನು ಪರಿಚಯಿಸಲಾಯಿತು, ಇದರಿಂದಾಗಿ ವ್ಯವಹಾರಗಳು ಬದುಕುಳಿದವು ಮತ್ತು ಅವು ಈಗ ಎತ್ತರಕ್ಕೆ ಬೆಳೆದಿವೆ ಬಂದಿವೆ. ನವೋದ್ಯಮ ಪರಿಸರ ವ್ಯವಸ್ಥೆಗೆ ಉತ್ತೇಜನ ನೀಡುವಲ್ಲಿ ಸರ್ಕಾರದ ಪ್ರಯತ್ನಗಳನ್ನು ಒತಿ ಹೇಳಿದ ಅವರು, ಭಾರತವು ಈಗ 100 ʻಯೂನಿಕಾರ್ನ್ʼಗಳು ಸೇರಿದಂತೆ ದೇಶದಲ್ಲಿ 1 ಲಕ್ಷ ನವೋದ್ಯಮಗಳೊಂದಿಗೆ ವಿಶ್ವದ 3ನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿ ಹೆಮ್ಮೆಯಿಂದ ನಿಂತಿದೆ ಎಂದು ಹೇಳಿದರು.
ಕಳೆದ 9 ವರ್ಷಗಳಲ್ಲಿ ಸರ್ಕಾರದ ದಾಖಲೆಯ ಸಾಧನೆಯನ್ನು ಎತ್ತಿ ತೋರಿಸಿದ ಶ್ರೀ ಅನುರಾಗ್ ಠಾಕೂರ್ ಅವರು “ಈ ಸರ್ಕಾರವು ಡಿಜಿಟಲ್ ತಂತ್ರಜ್ಞಾನದ ಮೂಲಕ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಾತರಿಪಡಿಸಿರುವುದು ಮಾತ್ರವಲ್ಲದೆ, 3.5 ಕೋಟಿ ಫಲಾನುಭವಿಗಳಿಗೆ ಪಕ್ಕಾ ಮನೆಗಳನ್ನು ಖಚಿತಪಡಿಸಿದೆ. 12 ಕೋಟಿ ಶೌಚಾಲಯಗಳನ್ನು ನಿರ್ಮಿಸಿದೆ, 11.7 ಕೋಟಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಿದೆ, 9.6 ಕೋಟಿ ಮಹಿಳೆಯರಿಗೆ ʻಉಜ್ವಲʼ ಅನಿಲ ಸಂಪರ್ಕವನ್ನು ಒದಗಿಸಿದೆ ಎಂದು ಉಲ್ಲೇಖಿಸಿದರು. 100 ಕೋಟಿಗೂ ಹೆಚ್ಚು ʻಎಲ್ಇಡಿʼ ಬಲ್ಬ್‌ಗಳನ್ನು ವಿತರಿಸಲಾಗಿದೆ. ಕಳೆದ 9 ವರ್ಷಗಳಲ್ಲಿ ರಸ್ತೆ ನಿರ್ಮಾಣದ ವೇಗವನ್ನು ನಾಲ್ಕು ಪಟ್ಟು ಹೆಚ್ಚಿಸಲಾಗಿದ್ದು, ಜೊತೆಗೆ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಸಂಪರ್ಕವನ್ನು ಸರಕಾರ ಖಾತ್ರಿಪಡಿಸಿದೆ. ʻಪಿಎಂ ಗತಿಶಕ್ತಿʼ ಭಾರತಕ್ಕೆ ಅಡಿಪಾಯವಾದ ಮೂಲಸೌಕರ್ಯವನ್ನು ಒದಗಿಸುತ್ತಿದೆ, ಆ ಮೂಲಕ 'ಗತಿ' ಮತ್ತು 'ಪ್ರಗತಿಯನ್ನು ಖಾತ್ರಿಪಡಿಸುತ್ತಿದೆ,ʼʼ ಎಂದು ಹೇಳಿದರು.
ಕಳೆದ 9 ವರ್ಷಗಳಲ್ಲಿ ಕ್ರೀಡೆಗಳಿಗೆ ಬಜೆಟ್ ಅನುದಾನವನ್ನು 864 ಕೋಟಿ ರೂ.ಗಳಿಂದ 2700 ಕೋಟಿ ರೂ.ಗಳಿಗೆ ಮೂರು ಪಟ್ಟು ಹೆಚ್ಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ʻಖೇಲೋ ಇಂಡಿಯಾʼ, ʻಯೂತ್ ಗೇಮ್ಸ್ʼ, ʻಯೂನಿವರ್ಸಿಟಿ ಗೇಮ್ಸ್ʼ ಮತ್ತು ʻವಿಂಟರ್ ಗೇಮ್ಸ್ʼನಂತಹ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದ್ದು, ಇವುಗಳಲ್ಲಿ ಈಗಾಗಲೇ ಸುಮಾರು 15,000 ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಈ ವರ್ಷದ ʻಖೇಲೋ ಇಂಡಿಯಾʼ ಕ್ರೀಡಾಕೂಟದಲ್ಲಿ 25 ಹೊಸ ರಾಷ್ಟ್ರೀಯ ದಾಖಲೆಗಳನ್ನು ಸೃಷ್ಟಿಸಲಾಗಿದೆ, ಇದರಲ್ಲಿ 21 ದಾಖಲೆಗಳನ್ನು ಭಾರತದ ಹೆಣ್ಣುಮಕ್ಕಳೇ ಸೃಷ್ಟಿಸಿದ್ದಾರೆ ಎಂದು ಅವರು ಉಲ್ಲೇಖಿಸಿದರು.
ಶ್ರೀ ಅನುರಾಗ್ ಠಾಕೂರ್ ಅವರು ಭಾರತದ ಡಿಜಿಟಲ್ ಪಾವತಿ ಮೂಲಸೌಕರ್ಯದ ಪರಾಕ್ರಮದ ಬಗ್ಗೆ ವಿಶೇಷವಾಗಿ ಹೇಳಿದರು. ʻಗೂಗಲ್ʼ ಸಿಇಒ ಸುಂದರ್ ಪಿಚೈ ಅವರಿಂದ ಶ್ಲಾಘನೆ ಸೇರಿದಂತೆ ಜಾಗತಿಕವಾಗಿ ಇದರ ಬಗ್ಗೆ ಹೇಗೆ ಮೆಚ್ಚುಗೆ ವ್ಯಕ್ತವಾಗಿದೆ ಎಂಬುದನ್ನು ಸ್ಮರಿಸಿದರು. ಈ ದೃಢವಾದ ಡಿಜಿಟಲ್ ಮೂಲಸೌಕರ್ಯದಿಂದಾಗಿ, 21 ಕೋಟಿ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗಳಿಗೆ 31,000 ಕೋಟಿ ರೂ.ಗಳನ್ನು ವರ್ಗಾಯಿಸಲು ಸಾಧ್ಯವಾಯಿತು ಎಂದು ಸಚಿವರು ಹೇಳಿದರು.
3.5 ಕೋಟಿ ಕುಟುಂಬಗಳಿಗೆ ಪಕ್ಕಾ ಮನೆಗಳನ್ನು ಒದಗಿಸಲಾಗಿದ್ದು, ಈ ಪೈಕಿ ಶೇ.75ರಷ್ಟು ನೋಂದಣಿಗಳನ್ನು ಮಹಿಳೆಯರ ಹೆಸರಿನಲ್ಲಿ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ʻಹವಾಯಿ ಚಪ್ಪಲ್ʼ ಧರಿಸುವ ಜನರು ಈಗ ʻಹವಾಯಿ ಜಹಾಜ್ʼನಲ್ಲಿ(ವಾಯುಯಾನದಲ್ಲಿ) ಪ್ರಯಾಣಿಸುವುದನ್ನು ಎಂದು ಸರ್ಕಾರ ಖಚಿತಪಡಿಸಿದೆ ಎಂದು ಅವರು ಹೇಳಿದರು. ರಸ್ತೆಗಳ ನಿರ್ಮಾಣದ ತ್ವರಿತ ವೇಗದಿಂದಾಗಿ, ವಿವಿಧ ನಗರಗಳ ನಡುವಿನ ಅಂತರ ಮತ್ತು ಪ್ರಯಾಣ ಸಮಯವೂ ಗಣನೀಯವಾಗಿ ಕಡಿಮೆಯಾಗಿದೆ ಎಂದು ಅವರು ಹೇಳಿದರು.
ಜಗತ್ತು ಭಾರತದಲ್ಲಿ ಭರವಸೆಯನ್ನು ನೋಡುತ್ತಿದೆ ಮತ್ತು ಸರ್ಕಾರದ ಪ್ರಯತ್ನಗಳೊಂದಿಗೆ, ಭಾರತವು 2047ಕ್ಕಿಂತ ಮುಂಚಿತವಾಗಿ ʻವಿಕಸಿತʼ(ಅಭಿವೃದ್ಧಿ ಹೊಂದಿದ) ಗುರಿಯನ್ನು ಸಾಕಾರಗೊಳಿಸುವ ವೇಗದ ಹಾದಿಯಲ್ಲಿದೆ ಎಂದು ಸಚಿವರು ಹೇಳಿದರು.
ʻಸೇವೆʼ, ʻಸುಶಾಸನʼ ಮತ್ತು ʻಬಡವರ ಕಲ್ಯಾಣʼ ತತ್ವಗಳನ್ನು ಆಧರಿಸಿದ ಸರ್ಕಾರದ ನೀತಿಯ ಬಗ್ಗೆ ಒತ್ತಿ ಹೇಳುವ ಮೂಲಕ ಹಣಕಾಸು ಸಚಿವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವವನ್ನು ಉಲ್ಲೇಖಿಸಿದ ಶ್ರೀಮತಿ ನಿರ್ಮಲಾ ಸೀತಾರಾಮನ್, “ಪ್ರಧಾನಿಯವರು ತಮ್ಮ ಕಠಿಣ ಪರಿಶ್ರಮದಿಂದ ಜನರ ನಂಬಿಕೆ ಮತ್ತು ವಿಶ್ವಾಸವನ್ನು ಗಳಿಸಿದ್ದಾರೆ. ಮೋದಿ ಅವರ ಕುರಿತು ನೆಲೆಸಿರುವ ಜನಪ್ರಿಯತೆಯಿಂದ ಇದು ವ್ಯಕ್ತವಾಗುತ್ತದೆ. ಜೊತೆಗೆ ಜನರ ಮನಸ್ಥಿತಿಯೂ ಈಗ ಬದಲಾಗಿದೆ,ʼʼ ಎಂದು ಹೇಳಿದರು.
ಪ್ರಧಾನಿಯವರೊಂದಿಗಿನ ಚರ್ಚೆಯ ಸಂದರ್ಭದ ಬಗ್ಗೆ ಅನುಭವ ಹಂಚಿಕೊಂಡ ಹಣಕಾಸು ಸಚಿವರು, "ಕೋವಿಡ್ ಹೆಸರಿನಲ್ಲಿ ಯಾವುದೇ ಹೊಸ ತೆರಿಗೆಯನ್ನು ಪರಿಚಯಿಸಬಾರದು ಎಂಬುದು ಪ್ರಧಾನಿಯವರ ಸಲಹೆಯಾಗಿತ್ತು. ಅದರಂತೆಯೇ ಲಸಿಕೆಗಳಿಂದ ಹಿಡಿದು ಆಹಾರ ವಿತರಣೆಯವರೆಗೆ ನಾವು ಜನರಿಗೆ ಶುಲ್ಕ ವಿಧಿಸಲಿಲ್ಲ. ಅಷ್ಟೇ ಅಲ್ಲ, ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರವೂ, ತೆರಿಗೆಗಳನ್ನು ಹೆಚ್ಚಿಸಲಾಗಿಲ್ಲ,ʼʼ ಎಂದು ಹೇಳಿದರು.
ಸುಧಾರಣೆಗಳ ವಿಷಯದ ಬಗ್ಗೆ ಮಾತನಾಡಿದ ಶ್ರೀಮತಿ ಸೀತಾರಾಮನ್, ಓಬಿರಾಯನಕಾಲದ 1,500 ಕಾನೂನುಗಳನ್ನು ತೆಗೆದುಹಾಕುವ ಮೂಲಕ ನಿರಂತರ ಸುಧಾರಣೆಗಳನ್ನು ಪ್ರಧಾನಿ ಉತ್ತೇಜಿಸಿದರು. ಆ ಮೂಲಕ ಅಂತಹ ಕಾನೂನುಗಳು ನಾಗರಿಕರಿಗೆ ಕಿರುಕುಳ ನೀಡುವ ಸಾಧನವಾಗದಂತೆ ಮತ್ತು ಭ್ರಷ್ಟಾಚಾರದ ಸಾಧನವಾಗದಂತೆ ಪ್ರಧಾನಿ ಖಾತರಿಪಡಿಸಿದರು ಎಂದರು.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆಡಳಿತದ ಅಡಿಯಲ್ಲಿ ʻಒಂದು ರಾಷ್ಟ್ರ, ಒಂದು ತೆರಿಗೆʼಯ ಉದಾಹರಣೆಯನ್ನು ನೀಡಿದ ಹಣಕಾಸು ಸಚಿವರು, ಈ ಸರ್ಕಾರವು ಎಲ್ಲಾ ರಾಜ್ಯಗಳನ್ನು ಜತೆಗೂಡಿಸಿಕೊಂಡು ದೃಢವಾದ ಶಾಸನವನ್ನು ಜಾರಿಗೊಳಿಸಿದ್ದು ಮಾತ್ರವಲ್ಲದೆ, ಸಾಮಾನ್ಯಜನರು ಮತ್ತು ವ್ಯಾಪಾರಿಗಳ ಜೀವನವನ್ನು ಸುಲಭಗೊಳಿಸಲು ಬಲವಾದ ʻಜಿಎಸ್‌ಟಿʼ ವ್ಯವಸ್ಥೆಯನ್ನು ಒದಗಿಸಿದೆ ಎಂದು ಹೇಳಿದರು.
ಮಹಿಳೆಯರ ಸುರಕ್ಷತೆಯ ಬಗ್ಗೆ ಪ್ರಸ್ತಾಪಿಸಿದ ಹಣಕಾಸು ಸಚಿವರು, ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಅವರು ಕೆಂಪು ಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ಮಹಿಳಾ ಸುರಕ್ಷತೆಯ ವಿಷಯವನ್ನು ಪ್ರಸ್ತಾಪಿಸಿದರು. "ಸ್ಯಾನಿಟರಿ ಪ್ಯಾಡ್‌ಗಳ ಕೊರತೆಯಿಂದಾಗಿ ಅನೇಕ ಹುಡುಗಿಯರು ಅನಾರೋಗ್ಯಕರ ಅಭ್ಯಾಸಗಳನ್ನು ಹೊಂದಿರುವ ಬಗ್ಗೆ ಪ್ರಧಾನಿ ಮಾತನಾಡಿದ್ದಲ್ಲದೆ, ಅವರಿಗೆ 1 ರೂ. ಬೆಲೆಯಲ್ಲಿ ಪ್ಯಾಡ್‌ಗಳನ್ನು ಒದಗಿಸುವ ಮೂಲಕ ಅದನ್ನು ಕೈಗೆಟುಕುವಂತೆ ಮಾಡಿದರು. ಇಂತಹ ಮನಸ್ಥಿತಿ ಬದಲಾವಣೆಯು ಸಾಮಾನ್ಯ ವಿಷಯವಲ್ಲ," ಎಂದು ಹಣಕಾಸು ಸಚಿವರು ಹೇಳಿದರು.
ನವೋದ್ಯಮ ಪರಿಸರ ವ್ಯವಸ್ಥೆಯನ್ನು ಉಲ್ಲೇಖಿಸಿದ ಶ್ರೀಮತಿ ಸೀತಾರಾಮನ್, “ಗೌರವಾನ್ವಿತವಾಗಿ ಒಂದು ವ್ಯವಹಾರವನ್ನು ಮುಚ್ಚುವುದು ಈ ಹಿಂದೆ ಕಳಂಕವಾಗಿತ್ತು. ಆದರೆ ದಿವಾಳಿತನ ಸಂಹಿತೆ (ಐಬಿಸಿ) ಪರಿಚಯಿಸುವುದರೊಂದಿಗೆ ಯುವಕರು ವ್ಯವಹಾರವನ್ನು ಪ್ರಾರಂಭಿಸಬಹುದು ಮತ್ತು ವಿಫಲವಾದರೆ ಅದನ್ನು ಗೌರವಯುತವಾಗಿ ಮುಚ್ಚಬಹುದು,ʼʼ ಎಂದು ಹೇಳಿದರು.
ಸಶಸ್ತ್ರ ಪಡೆಗಳಲ್ಲಿನ ಬೃಹತ್ ಬದಲಾವಣೆಯ ಬಗ್ಗೆ ಮಾತನಾಡಿದ ಶ್ರೀಮತಿ ಸೀತಾರಾಮನ್, ಈ ಹಿಂದೆ ಖಾಯಂ ಆಯೋಗವು ಪುರುಷರಿಗೆ ಮಾತ್ರ ಲಭ್ಯವಿತ್ತು. ಆದರೆ ಪ್ರಧಾನ ಮಂತ್ರಿಯವರ ನಿರ್ದೇಶನದ ಮೇರೆಗೆ ಈ ವಲಯವನ್ನು ಈಗ ಮಹಿಳೆಯರಿಗೂ ಮುಕ್ತಗೊಳಿಸಲಾಗಿದೆ; ಆ ಮೂಲಕ ಭೂಸೇನೆ, ನೌಕಾಪಡೆ, ವಾಯುಪಡೆ ಮತ್ತು ಕೋಸ್ಟ್ ಗಾರ್ಡ್‌ನ ಮುಂಚೂಣಿಯಲ್ಲಿ ಖಾಯಂ ಆಯೋಗವನ್ನು ಪಡೆಯುವ ಅವರ ಆಕಾಂಕ್ಷೆಗಳನ್ನು ಈಡೇರಿಸುತ್ತದೆ.
ಈ ಎಲ್ಲಾ ಉದಾಹರಣೆಗಳು ದೊಡ್ಡ ಬದಲಾವಣೆಯನ್ನು ಸೂಚಿಸುತ್ತವೆ ಎಂದು ಶ್ರೀಮತಿ ಸೀತಾರಾಮನ್ ಹೇಳಿದರು.
"ಮನಸ್ಥಿತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ನಾಯಕರಾದವರು ಎಲ್ಲಾ ಮಧ್ಯಸ್ಥಗಾರರೊಂದಿಗೆ ಜೊತೆಗೂಡಿ ಕೆಲಸ ಮಾಡಿದಾಗ ಮಾತ್ರ ಈ ಬದಲಾವಣೆಗಳು ಸಂಭವಿಸುತ್ತವೆ. ಭಾರತವು ತುಂಬಾ ಸಂಕೀರ್ಣ ದೇಶವಾಗಿದೆ. ಇಲ್ಲಿ ಕೈಗೊಳ್ಳುವಿಕೆಯು ಅನೇಕ ಪದರಗಳು ಮತ್ತು ಹಂತಗಳನ್ನು ಒಳಗೊಂಡಿರುತ್ತದೆ,ʼʼ ಎಂದು ಸಚಿವರು ಹೇಳಿದರು.
ಉಕ್ರೇನ್, ಯೆಮೆನ್ ಮತ್ತು ಸುಡಾನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಉದಾಹರಣೆಗಳನ್ನು ಉಲ್ಲೇಖಿಸಿದ ಶ್ರೀಮತಿ ಸೀತಾರಾಮನ್, ಈ ಸರ್ಕಾರವು ಭಾರತದ ಹೊರಗಿನ ಜನರ ಗ್ರಹಿಕೆಗಳನ್ನು ಬದಲಾಯಿಸುತ್ತಿದೆ. ಭಾರತದ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುಡುವ ಬದ್ಧ ಮತ್ತು ಸಮರ್ಪಿತ ಸರಕಾರದಲ್ಲಿ ಇದು ವ್ಯಕ್ತವಾಗುತ್ತಿದೆ ಎಂದು ಹೇಳಿದರು. "ಪ್ರಧಾನಿ ಪ್ರತಿಯೊಬ್ಬ ನಾಗರಿಕನನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆ; ಪ್ರತಿಯೊಬ್ಬ ನಾಗರಿಕನ ಮಾತನ್ನು ಸರಕಾರ ಕೇಳಿಸಿಕೊಳ್ಳುತ್ತದೆ ಮತ್ತು ಪ್ರತಿಯೊಬ್ಬ ನಾಗರಿಕರೂ ಸಹ ಪ್ರತಿಕ್ರಿಯಿಸುತ್ತಾರೆ" ಎಂದು ಹಣಕಾಸು ಸಚಿವರು ಹೇಳಿದರು.
******
(Release ID: 1927914)
Visitor Counter : 144