ಪ್ರಧಾನ ಮಂತ್ರಿಯವರ ಕಛೇರಿ
ಡೆಹ್ರಾಡೂನ್- ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಮಂತ್ರಿ
ಹೊಸದಾಗಿ ವಿದ್ಯುದ್ದೀಕರಿಸಿದ ರೈಲು ವಿಭಾಗಗಳು ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಉತ್ತರಾಖಂಡ ಶೇ. 100 ವಿದ್ಯುದ್ದೀಕರಿಸಿದ ರಾಜ್ಯವೆಂದು ಘೋಷಣೆ
"ದೆಹಲಿ-ಡೆಹ್ರಾಡೂನ್ ವಂದೇ ಭಾರತ್ ಎಕ್ಸ್‌ಪ್ರೆಸ್ ನಾಗರಿಕರಿಗೆ 'ಸುಲಭ ಪ್ರಯಾಣ' ಮತ್ತು ಹೆಚ್ಚಿನ ಸೌಕರ್ಯವನ್ನು ಖಚಿತಪಡಿಸುತ್ತದೆ"
"ಆರ್ಥಿಕತೆಯನ್ನು ಬಲಪಡಿಸಲು ಮತ್ತು ಬಡತನದ ವಿರುದ್ಧ ಹೋರಾಡಲು ಭಾರತವು ಜಗತ್ತಿಗೆ ಭರವಸೆಯ ಕಿರಣವಾಗಿದೆ"
"ಈ ದಶಕವು ಉತ್ತರಾಖಂಡದ ದಶಕವಾಗಲಿದೆ"
"ದೇವಭೂಮಿ ಜಗತ್ತಿನ ಆಧ್ಯಾತ್ಮಿಕ ಪ್ರಜ್ಞಾ ಕೇಂದ್ರವಾಗಿದೆ"
"ಸರ್ಕಾರದ ಗಮನವು ಉತ್ತರಾಖಂಡದ ನವರತ್ನಗಳ ಅಭಿವೃದ್ಧಿಯ ಕಡೆಗಿದೆ"
"ಡಬಲ್ ಎಂಜಿನ್ ಸರ್ಕಾರವು ಡಬಲ್ ಶಕ್ತಿ ಮತ್ತು ಡಬಲ್ ವೇಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ"
"21 ನೇ ಶತಮಾನದ ಭಾರತವು ಮೂಲಸೌಕರ್ಯಗಳ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಅಭಿವೃದ್ಧಿಯಲ್ಲಿ ಮತ್ತಷ್ಟು ಎತ್ತರವನ್ನು ಏರಬಹುದು"
"ಪರ್ವತ ಮಾಲಾ ಯೋಜನೆ ಮುಂದಿನ ದಿನಗಳಲ್ಲಿ ರಾಜ್ಯದ ಭವಿಷ್ಯವನ್ನೇ ಬದಲಿಸಲಿದೆ"
"ಸರಿಯಾದ ಉದ್ದೇಶ, ನೀತಿ ಮತ್ತು ಸಮರ್ಪಣೆಯು ಅಭಿವೃದ್ಧಿಯನ್ನು ಚಾಲನೆ ಮಾಡುತ್ತಿದೆ"
“ದೇಶವು ಈಗ ನಿಲ್ಲುವುದಿಲ್ಲ, ದೇಶವು ಈಗ ತನ್ನ ವೇಗವನ್ನು ಪಡೆದುಕೊಂಡಿದೆ. ಇಡೀ ದೇಶವು ವಂದೇ ಭಾರತ್‌ನ ವೇಗದಲ್ಲಿ ಮು
Posted On:
25 MAY 2023 12:21PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಡೆಹ್ರಾಡೂನ್‌ನಿಂದ ದೆಹಲಿಗೆ ಸಂಚರಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ರೈಲಿಗೆ ಹಸಿರು ನಿಶಾನೆ ತೋರಿದರು. ಹೊಸದಾಗಿ ವಿದ್ಯುದ್ದೀಕರಿಸಿದ ರೈಲು ವಿಭಾಗಗಳನ್ನು ಅವರು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ಉತ್ತರಾಖಂಡವನ್ನು ಶೇ.100 ರಷ್ಟು ವಿದ್ಯುದ್ದೀಕರಿಸಿದ ರಾಜ್ಯವೆಂದು ಘೋಷಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಡೆಹ್ರಾಡೂನ್ ಮತ್ತು ದೆಹಲಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭಕ್ಕಾಗಿ ಉತ್ತರಾಖಂಡದ ಜನರನ್ನು ಅಭಿನಂದಿಸಿದರು ಮತ್ತು ರೈಲು ರಾಷ್ಟ್ರ ರಾಜಧಾನಿಯನ್ನು ಉತ್ತರಾಖಂಡದ ದೇವಭೂಮಿಗೆ ಸಂಪರ್ಕಿಸುತ್ತದೆ ಎಂದು ಹೇಳಿದರು. ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ ಮತ್ತು ರೈಲಿನ ಸೌಲಭ್ಯಗಳು ಆಹ್ಲಾದಕರ ಪ್ರಯಾಣದ ಅನುಭವವನ್ನು ನೀಡುತ್ತವೆ ಎಂದು ಪ್ರಧಾನಿ ಹೇಳಿದರು.
ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾಕ್ಕೆ ತಮ್ಮ ಪ್ರವಾಸದ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿಯವರು, ಜಗತ್ತು ಭಾರತದತ್ತ ಹೆಚ್ಚಿನ ಭರವಸೆಯಿಂದ ನೋಡುತ್ತಿದೆ ಎಂದು ಒತ್ತಿ ಹೇಳಿದರು. ಆರ್ಥಿಕತೆಯನ್ನು ಬಲಪಡಿಸಲು ಮತ್ತು ಬಡತನದ ವಿರುದ್ಧ ಹೋರಾಡಲು ಭಾರತವು ಜಗತ್ತಿಗೆ ಭರವಸೆಯ ಕಿರಣವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕೊರೊನಾವೈರಸ್ ಸಾಂಕ್ರಾಮಿಕ ರೋಗವನ್ನು ಭಾರತ ನಿಭಾಯಿಸಿದ ಬಗ್ಗೆ ಮತ್ತು ದೇಶದಲ್ಲಿ ನಡೆಸಿದ ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನದ ಬಗ್ಗೆಯೂ ಅವರು ಮಾತನಾಡಿದರು. ಪ್ರಪಂಚದಾದ್ಯಂತದ ಜನರು ಭಾರತಕ್ಕೆ ಬರಲು ಬಯಸುತ್ತಿರುವಾಗ ಉತ್ತರಾಖಂಡದಂತಹ ಸುಂದರ ರಾಜ್ಯಗಳು ಈ ಅವಕಾಶಗಳನ್ನು ಹೆಚ್ಚು ಬಳಸಿಕೊಳ್ಳಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ವಂದೇ ಭಾರತ್ ರೈಲು ಕೂಡ ಉತ್ತರಾಖಂಡಕ್ಕೆ ಸಹಾಯ ಮಾಡಲಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.
ಪ್ರಧಾನಿಯವರು ತಮ್ಮ ಕೇದಾರನಾಥ ಭೇಟಿಯನ್ನು ನೆನಪಿಸಿಕೊಂಡರು ಮತ್ತು 'ಈ ದಶಕವು ಉತ್ತರಾಖಂಡದ ದಶಕವಾಗಲಿದೆ' ಎಂಬ ತಮ್ಮ ಹೇಳಿಕೆಯನ್ನು ಸ್ಮರಿಸಿದರು. ಕಾನೂನು ಸುವ್ಯವಸ್ಥೆಯನ್ನು ಸುಭದ್ರವಾಗಿಟ್ಟುಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವುದನ್ನು ಶ್ಲಾಘಿಸಿದರು. ‘ದೇವಭೂಮಿ ವಿಶ್ವದ ಆಧ್ಯಾತ್ಮಿಕ ಪ್ರಜ್ಞೆಯ ಕೇಂದ್ರವಾಗಲಿದೆ’ ಎಂಬ ಭರವಸೆಯನ್ನು ಪ್ರಧಾನಿ ವ್ಯಕ್ತಪಡಿಸಿದರು. ಈ ಸಾಮರ್ಥ್ಯವನ್ನು ಬಳಸಿಕೊಳ್ಳಲು ನಾವು ಕೆಲಸ ಮಾಡಬೇಕು. ಚಾರ್ ಧಾಮ್ ಯಾತ್ರೆಗೆ ಬರುವ ಯಾತ್ರಾರ್ಥಿಗಳ ಸಂಖ್ಯೆ ಹಳೆಯ ದಾಖಲೆಗಳನ್ನು ಮುರಿಯುತ್ತಲೇ ಇದೆ ಎಂದು ಅವರು ಹೇಳಿದರು. ಹರಿದ್ವಾರದಲ್ಲಿ ಬಾಬಾ ಕೇದಾರ, ಕುಂಭ/ಅರ್ಧ ಕುಂಭ ದರ್ಶನಕ್ಕೆ ಬರುವ ಭಕ್ತರು ಹಾಗೂ ಕನ್ವರ್ ಯಾತ್ರೆ ಕುರಿತು ಅವರು ಮಾತನಾಡಿದರು. ಹಲವು ರಾಜ್ಯಗಳಿಗೆ ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿಲ್ಲ, ಉತ್ತರಾಖಂಡಕ್ಕೆ ಇದೊಂದು ಕೊಡುಗೆಯಾಗಿದೆ ಹಾಗೆಯೇ ತುಂಬಾ ದೊಡ್ಡ ಕೆಲಸವಾಗಿದೆ ಎಂದರು. ಡಬಲ್ ಎಂಜಿನ್ ಸರ್ಕಾರವು ಈ 'ಭಗೀರಥ' ಕೆಲಸವನ್ನು ಸುಲಭಗೊಳಿಸಲು ಡಬಲ್ ಶಕ್ತಿ ಮತ್ತು ಡಬಲ್ ವೇಗದೊಂದಿಗೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
‘ನವರತ್ನʼಗಳ ಅಭಿವೃದ್ಧಿಗೆ ಸರ್ಕಾರದ ಒತ್ತು ನೀಡಲಾಗಿದೆ ಎಂದು ಪ್ರಧಾನಿ ಹೇಳಿದರು. ಮೊದಲ ರತ್ನ, ಕೇದಾರನಾಥ-ಬದರಿನಾಥ ಧಾಮದಲ್ಲಿ 1300 ಕೋಟಿ ರೂ. ಪುನಶ್ಚೇತನ ಕಾರ್ಯವಾಗಿದೆ ಎಂದು ಅವರು ಹೇಳಿದರು. ಎರಡನೆಯದಾಗಿ, ಗೌರಿಕುಂಡ್-ಕೇದಾರನಾಥ ಮತ್ತು ಗೋಬಿಂದ್ ಘಾಟ್- ಹೇಮಕುಂಡ್ ಸಾಹಿಬ್‌ನಲ್ಲಿ 2500 ಕೋಟಿ ರೂ.ರೋಪ್‌ವೇ ಯೋಜನೆ. ಮೂರನೆಯದಾಗಿ, ಮಾನಸ ಖಂಡ ಮಂದಿರ ಮಾಲಾ ಕಾರ್ಯಕ್ರಮದ ಅಡಿಯಲ್ಲಿ ಕುಮಾನ್‌ನ ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರ. ನಾಲ್ಕನೆಯದಾಗಿ, 4000 ಕ್ಕೂ ಹೆಚ್ಚು ಹೋಂಸ್ಟೇಗಳು ನೋಂದಣಿಯಾಗಿರುವ ಇಡೀ ರಾಜ್ಯದಲ್ಲಿ ಹೋಂಸ್ಟೇಗೆ ಉತ್ತೇಜನ ನೀಡುವುದು. ಐದನೆಯದಾಗಿ, 16 ಪರಿಸರ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ. ಆರನೆಯದಾಗಿ, ಉತ್ತರಾಖಂಡದಲ್ಲಿ ಆರೋಗ್ಯ ಸೇವೆಗಳ ವಿಸ್ತರಣೆ. ಉಧಮ್ ಸಿಂಗ್ ನಗರದಲ್ಲಿ ಏಮ್ಸ್ ಉಪ ಕೇಂದ್ರ ಬರಲಿದೆ. ಏಳನೆಯದು, 2000 ಕೋಟಿ ರೂ. ತೆಹ್ರಿ ಲೇಕ್ ಅಭಿವೃದ್ಧಿ ಯೋಜನೆ. ಎಂಟನೆಯದಾಗಿ, ಹರಿದ್ವಾರ ಹೃಷಿಕೇಶವನ್ನು ಯೋಗ ಮತ್ತು ಸಾಹಸ ಪ್ರವಾಸೋದ್ಯಮದ ರಾಜಧಾನಿಯಾಗಿ ಅಭಿವೃದ್ಧಿಪಡಿಸುವುದು ಮತ್ತು ಅಂತಿಮವಾಗಿ ತನಕ್‌ಪುರ ಬಾಗೇಶ್ವರ ರೈಲು ಮಾರ್ಗವಾಗಿದೆ ಎಂದು ಪ್ರಧಾನಿ ವಿವರಿಸಿದರು.
ರಾಜ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಉತ್ತೇಜನದೊಂದಿಗೆ ಈ ನವರತ್ನಗಳನ್ನು ಕ್ರೋಡೀಕರಿಸಲಾಗುತ್ತಿದೆ ಎಂದು ಅವರು ಹೇಳಿದರು. 12,000 ಕೋಟಿ ರೂ. ಚಾರ್ ಧಾಮ್ ಮಹಾಪರಿಯೋಜನಾ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ ಪ್ರಯಾಣವನ್ನು ವೇಗವಾಗಿಸುತ್ತದೆ ಮತ್ತು ಸುಲಭಗೊಳಿಸುತ್ತದೆ ಎಂದರು. ಉತ್ತರಾಖಂಡದಲ್ಲಿ ರೋಪ್‌ವೇ ಸಂಪರ್ಕದ ಬಗ್ಗೆಯೂ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಪರ್ವತ ಮಾಲಾ ಯೋಜನೆಯು ರಾಜ್ಯದ ಭವಿಷ್ಯವನ್ನೇ ಬದಲಿಸಲಿದೆ. 16,000 ಕೋಟಿ ರೂ. ವೆಚ್ಚದ ಹೃಷಿಕೇಶ-ಕರ್ಣಪ್ರಯಾಗ ರೈಲು ಯೋಜನೆ 2-3 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಯೋಜನೆಯು ಉತ್ತರಾಖಂಡದ ಬಹುತೇಕ ಭಾಗಕ್ಕೆ ಪ್ರವೇಶ ಕಲ್ಪಿಸುತ್ತದೆ ಮತ್ತು ಹೂಡಿಕೆ, ಉದ್ಯಮ ಮತ್ತು ಉದ್ಯೋಗಕ್ಕೆ ಉತ್ತೇಜನ ನೀಡುತ್ತದೆ ಎಂದು ಪ್ರಧಾನಿ ಹೇಳಿದರು.
ಕೇಂದ್ರ ಸರ್ಕಾರದ ನೆರವಿನೊಂದಿಗೆ ಉತ್ತರಾಖಂಡ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ, ಚಲನಚಿತ್ರ ಚಿತ್ರೀಕರಣ ತಾಣ ಮತ್ತು ಮದುವೆಯ ತಾಣವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಿ ಹೇಳಿದರು. ರಾಜ್ಯದ ಪ್ರವಾಸಿ ತಾಣಗಳು ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿವೆ ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್ ಅವರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ಅವರು ಹೇಳಿದರು. ತಮ್ಮ ಕುಟುಂಬ ಸಮೇತರಾಗಿ ಪ್ರಯಾಣಿಸುವವರಿಗೆ ರೈಲು ಮೊದಲ ಆಯ್ಕೆಯಾಗಿದೆ ಮತ್ತು ವಂದೇ ಭಾರತ್ ಕ್ರಮೇಣ ಸಾರಿಗೆಯ ವಿಧಾನವಾಗಿ ಮಾರ್ಪಡುತ್ತಿದೆ ಎಂದು ಪ್ರಧಾನಿ ಹೇಳಿದರು.
21ನೇ ಶತಮಾನದ ಭಾರತವು ಮೂಲಸೌಕರ್ಯಗಳ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ವಂಶಪಾರಂಪರ್ಯ ರಾಜಕಾರಣದಲ್ಲಿ ಮುಳುಗಿ ಮೂಲಸೌಕರ್ಯಗಳ ಮಹತ್ವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ಟೀಕಿಸಿದರು. ಭಾರತದಲ್ಲಿ ಹೈಸ್ಪೀಡ್ ರೈಲುಗಳ ಬಗ್ಗೆ ಹಿಂದಿನ ಸರ್ಕಾರಗಳು ಭಾರಿ ಭರವಸೆಗಳನ್ನು ನೀಡಿದ್ದರೂ, ರೈಲು ಜಾಲದಿಂದ ಮಾನವರಹಿತ ಗೇಟ್‌ಗಳನ್ನು ತೆಗೆದುಹಾಕಲು ಸಹ ವಿಫಲವಾದವು ಎಂದು ಪ್ರಧಾನಿ ಹೇಳಿದರು, ರೈಲು ಮಾರ್ಗಗಳ ವಿದ್ಯುದ್ದೀಕರಣದ ಸ್ಥಿತಿ ಇನ್ನೂ ಕೆಟ್ಟದಾಗಿತ್ತು. 2014 ರ ವೇಳೆಗೆ ದೇಶದ ಮೂರನೇ ಒಂದು ಭಾಗದಷ್ಟು ರೈಲು ಜಾಲ ಮಾತ್ರ ವಿದ್ಯುದ್ದೀಕರಣವಾಗಿತ್ತು ಎಂದು ಪ್ರಧಾನಿ ಮಾಹಿತಿ ನೀಡಿದರು, ಇದರಿಂದಾಗಿ ವೇಗವಾಗಿ ಚಲಿಸುವ ರೈಲಿನ ಬಗ್ಗೆ ಯೋಚಿಸುವುದು ಅಸಾಧ್ಯವಾಗಿತ್ತು. ರೈಲ್ವೆಯನ್ನು ಪರಿವರ್ತಿಸುವ ಸರ್ವತೋಮುಖ ಕೆಲಸವು 2014 ರ ನಂತರ ಪ್ರಾರಂಭವಾಯಿತು ಎಂದು ಪ್ರಧಾನಮಂತ್ರಿ ಹೇಳಿದರು. ದೇಶದ ಮೊದಲ ಹೈಸ್ಪೀಡ್ ರೈಲಿನ ಕನಸನ್ನು ಕಾರ್ಯಗತಗೊಳಿಸುವ ಕೆಲಸವು ಪೂರ್ಣ ವೇಗದಲ್ಲಿ ಪ್ರಾರಂಭವಾಯಿತು ಮತ್ತು ಸೆಮಿ-ಹೈ-ಸ್ಪೀಡ್ ರೈಲುಗಳಿಗಾಗಿ ಇಡೀ ನೆಟ್‌ವರ್ಕ್ ಅನ್ನು ಸಿದ್ಧಪಡಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. 2014 ಕ್ಕಿಂತ ಮೊದಲು ಪ್ರತಿ ವರ್ಷ ಸರಾಸರಿ 600 ಕಿಲೋಮೀಟರ್ ರೈಲು ಮಾರ್ಗಗಳನ್ನು ವಿದ್ಯುದ್ದೀಕರಿಸಲಾಯಿತು, ಆದರೆ ಇಂದು ಪ್ರತಿ ವರ್ಷ 6 ಸಾವಿರ ಕಿಲೋಮೀಟರ್ ರೈಲು ಮಾರ್ಗಗಳು ವಿದ್ಯುದ್ದೀಕರಣಗೊಳ್ಳುತ್ತಿವೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಇಂದು, ದೇಶದ ರೈಲ್ವೆ ಜಾಲದ ಶೇಕಡಾ 90 ಕ್ಕಿಂತ ಹೆಚ್ಚು ವಿದ್ಯುದ್ದೀಕರಣಗೊಂಡಿದೆ. ಉತ್ತರಾಖಂಡದಲ್ಲಿ, ಇಡೀ ರೈಲು ಜಾಲದ ಶೇಕಡಾ 100 ರಷ್ಟು ವಿದ್ಯುದ್ದೀಕರಣವನ್ನು ಸಾಧಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
ಅಭಿವೃದ್ಧಿ ಕಾರ್ಯಗಳ ಶ್ರೇಯ ಸರಿಯಾದ ಉದ್ದೇಶ, ನೀತಿ ಮತ್ತು ಸಮರ್ಪಣೆಗೆ ಸಲ್ಲುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. 2014ಕ್ಕೆ ಹೋಲಿಸಿದರೆ ರೈಲ್ವೇ ಬಜೆಟ್‌ನಲ್ಲಿನ ಉತ್ತೇಜನವು ಉತ್ತರಾಖಂಡಕ್ಕೆ ನೇರ ಲಾಭ ತಂದುಕೊಟ್ಟಿದೆ ಎಂದು ಒತ್ತಿ ಹೇಳಿದ ಪ್ರಧಾನಿ, 2014 ಕ್ಕಿಂತ 5 ವರ್ಷಗಳ ಮೊದಲು ರಾಜ್ಯದ ಸರಾಸರಿ ಬಜೆಟ್ 200 ಕೋಟಿ ರೂ.ಗಿಂತ ಕಡಿಮೆಯಿದ್ದರೆ ಇಂದು ರೈಲು ಬಜೆಟ್ 5 ಸಾವಿರ ಕೋಟಿ ರೂ. ಆಗಿದ್ದು, 25 ಪಟ್ಟು ಹೆಚ್ಚಳವಾಗಿದೆ. ಸಂಪರ್ಕದ ಕೊರತೆಯಿಂದ ಹಳ್ಳಿಗಳಿಂದ ಜನರು ವಲಸೆ ಹೋಗಿರುವ ಬೆಟ್ಟಗಳ ರಾಜ್ಯದಲ್ಲಿ ಸಂಪರ್ಕದ ಮಹತ್ವವನ್ನು ಹೇಳಿದ ಪ್ರಧಾನಿಯವರು ಮುಂದಿನ ಪೀಳಿಗೆ ಆ ನೋವನ್ನು ಅನುಭವಿಸದಂತೆ ಮಾಡಲು ಸರ್ಕಾರ ಬಯಸುತ್ತದೆ ಎಂದು ಒತ್ತಿ ಹೇಳಿದರು. ನಮ್ಮ ಗಡಿಗಳನ್ನು ಸುಲಭವಾಗಿ ಪ್ರವೇಶಿಸಲು ಆಧುನಿಕ ಸಂಪರ್ಕವು ಹೆಚ್ಚು ಉಪಯುಕ್ತವಾಗಲಿದೆ ಮತ್ತು ರಾಷ್ಟ್ರವನ್ನು ರಕ್ಷಿಸುವ ಸೈನಿಕರಿಗೆ ಯಾವುದೇ ರೀತಿಯಲ್ಲಿ ಅನನುಕೂಲವಾಗಬಾರದು ಎಂದು ಅವರು ಹೇಳಿದರು.
ಡಬಲ್ ಇಂಜಿನ್ ಸರ್ಕಾರವು ಉತ್ತರಾಖಂಡದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಅವರು ಹೇಳಿದರು, ಉತ್ತರಾಖಂಡದ ತ್ವರಿತ ಅಭಿವೃದ್ಧಿಯು ಭಾರತದ ತ್ವರಿತ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ದೇಶವು ಈಗ ನಿಲ್ಲುವುದಿಲ್ಲ, ದೇಶವು ಈಗ ವೇಗವನ್ನು ಪಡೆದುಕೊಂಡಿದೆ. ಇಡೀ ದೇಶವು ವಂದೇ ಭಾರತ್‌ನ ವೇಗದಲ್ಲಿ ಮುನ್ನಡೆಯುತ್ತಿದೆ ಮತ್ತು ಮುಂದೆಯೂ ಮುಂದುವರಿಯುತ್ತದೆ ಎಂದು ಹೇಳಿದ ಪ್ರಧಾನಮಂತ್ರಿಯವರು ತಮ್ಮ ಮಾತು ಮುಗಿಸಿದರು.
ಹಿನ್ನೆಲೆ
ಇದು ಉತ್ತರಾಖಂಡದಲ್ಲಿ ಪರಿಚಯಿಸಲಾದ ಮೊದಲ ವಂದೇ ಭಾರತ್ ರೈಲಾಗಿದೆ. ವಿಶ್ವದರ್ಜೆಯ ಸೌಕರ್ಯಗಳೊಂದಿಗೆ, ವಿಶೇಷವಾಗಿ ರಾಜ್ಯಕ್ಕೆ ಪ್ರಯಾಣಿಸುವ ಪ್ರವಾಸಿಗರಿಗೆ ಆರಾಮದಾಯಕ ಪ್ರಯಾಣದ ಅನುಭವಗಳ ಹೊಸ ಯುಗಕ್ಕೆ ನಾಂದಿ ಹಾಡಲಿದೆ. ಈ ರೈಲನ್ನು ದೇಶೀಯವಾಗಿ ನಿರ್ಮಿಸಲಾಗಿದೆ ಮತ್ತು ಕವಚ್ ತಂತ್ರಜ್ಞಾನ ಸೇರಿದಂತೆ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಡೆಹ್ರಾಡೂನ್‌ನಿಂದ ದೆಹಲಿ ನಡುವಿನ ಅಂತರವನ್ನು 4.5 ಗಂಟೆಗಳಲ್ಲಿ ಕ್ರಮಿಸುತ್ತದೆ.
ಸ್ವಚ್ಛವಾದ ಸಾರ್ವಜನಿಕ ಸಾರಿಗೆಯನ್ನು ಒದಗಿಸುವ ಪ್ರಧಾನಮಂತ್ರಿಯವರ ದೂರದೃಷ್ಟಿಗೆ ಅನುಗುಣವಾಗಿ ಭಾರತೀಯ ರೈಲ್ವೆಯು ದೇಶದಲ್ಲಿ ರೈಲು ಮಾರ್ಗಗಳನ್ನು ಸಂಪೂರ್ಣವಾಗಿ ವಿದ್ಯುದ್ದೀಕರಿಸುವ ಹಾದಿಯಲ್ಲಿದೆ. ಈ ನಿಟ್ಟಿನಲ್ಲಿ, ಪ್ರಧಾನಮಂತ್ರಿಯವರು ಉತ್ತರಾಖಂಡದಲ್ಲಿ ಹೊಸದಾಗಿ ವಿದ್ಯುದ್ದೀಕರಿಸಿದ ರೈಲು ಮಾರ್ಗದ ವಿಭಾಗಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದರೊಂದಿಗೆ ರಾಜ್ಯವು ತನ್ನ ಸಂಪೂರ್ಣ ರೈಲು ಮಾರ್ಗವನ್ನು ಶೇ.100 ರಷ್ಟು ವಿದ್ಯುದ್ದೀಕರಿಸಿದಂತಾಗಿದೆ. ವಿದ್ಯುದ್ದೀಕರಿಸಿದ ವಿಭಾಗಗಳಲ್ಲಿ ರೈಲುಗಳ ವೇಗದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತವೆ ಮತ್ತು ಸರಕು ಸಾಗಣೆ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.
****
(Release ID: 1927238)
Visitor Counter : 131
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam