ಪ್ರಧಾನ ಮಂತ್ರಿಯವರ ಕಛೇರಿ

ಎಫ್‌ ಐ ಪಿ ಐ ಸಿ ಮೂರನೇ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಯವರ ಹೇಳಿಕೆಯ ಕನ್ನಡ ಅನುವಾದ

Posted On: 22 MAY 2023 12:58PM by PIB Bengaluru

 

ಗೌರವಾನ್ವಿತರೇ,
ಮೂರನೇ ಎಫ್‌ ಐ ಪಿ ಐ ಸಿ ಶೃಂಗಸಭೆಗೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ! ಪ್ರಧಾನ ಮಂತ್ರಿ ಜೇಮ್ಸ್ ಮರಾಪೆ ನನ್ನೊಂದಿಗೆ ಈ ಶೃಂಗಸಭೆಯನ್ನು ಆಯೋಜಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಪೋರ್ಟ್ ಮೊರೆಸ್ಬಿಯಲ್ಲಿ ಶೃಂಗಸಭೆಗಾಗಿ ಮಾಡಿರುವ ಎಲ್ಲಾ ವ್ಯವಸ್ಥೆಗಳಿಗಾಗಿ ನಾನು ಅವರಿಗೆ ಮತ್ತು ಅವರ ತಂಡಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ.

ಗೌರವಾನ್ವಿತರೇ,
ಈ ಬಾರಿ ಬಹಳ ದಿನಗಳ ನಂತರ ಭೇಟಿಯಾಗುತ್ತಿದ್ದೇವೆ. ಏತನ್ಮಧ್ಯೆ, ಜಗತ್ತು ಕೋವಿಡ್ ಸಾಂಕ್ರಾಮಿಕ ಮತ್ತು ಇತರ ಅನೇಕ ಸವಾಲುಗಳ ಕಠಿಣ ಅವಧಿಯನ್ನು ದಾಟಿದೆ. ಈ ಸವಾಲುಗಳ ಪರಿಣಾಮವನ್ನು ಆರ್ಥಿಕವಾಗಿ ಹಿಂದುಳಿದ ದೇಶಗಳು (ಗ್ಲೋಬಲ್‌ ಸೌತ್) ಹೆಚ್ಚಾಗಿ ಅನುಭವಿಸಿವೆ.

ಹವಾಮಾನ ಬದಲಾವಣೆ, ನೈಸರ್ಗಿಕ ವಿಕೋಪಗಳು, ಹಸಿವು, ಬಡತನ ಮತ್ತು ವಿವಿಧ ಆರೋಗ್ಯ-ಸಂಬಂಧಿತ ಸವಾಲುಗಳು ಈಗಾಗಲೇ ಚಾಲ್ತಿಯಲ್ಲಿವೆ. ಈಗ, ಹೊಸ ಸಮಸ್ಯೆಗಳು ಹೊರಹೊಮ್ಮುತ್ತಿವೆ. ಆಹಾರ, ಇಂಧನ, ರಸಗೊಬ್ಬರ ಮತ್ತು ಔಷಧೀಯ ಪೂರೈಕೆ ಸರಪಳಿಯಲ್ಲಿ ಅಡೆತಡೆಗಳು ಉಂಟಾಗುತ್ತಿವೆ.

ಯಾರನ್ನು ನಾವು ವಿಶ್ವಾಸಾರ್ಹರು ಎಂದುಕೊಂಡಿದ್ದೇವೋ, ಅವರು ಕಷ್ಟದ ಸಮಯದಲ್ಲಿ ನಮ್ಮ ಪರವಾಗಿ ನಿಲ್ಲುತ್ತಿಲ್ಲ ಎಂದು ತಿಳಿದುಬಂದಿದೆ. ಈ ಸವಾಲಿನ ಸಮಯದಲ್ಲಿ, ಹಳೆಯ ಮಾತು "ಅಗತ್ಯವಿದ್ದಾಗ ಆಗುವ ಸ್ನೇಹಿತ ನಿಜವಾಗಿಯೂ ಸ್ನೇಹಿತ"  ಎಂಬುದು ನಿಜವೆಂದು ಸಾಬೀತಾಗಿದೆ. 

ಈ ಸವಾಲಿನ ಸಮಯದಲ್ಲಿ ಭಾರತವು ತನ್ನ ಪೆಸಿಫಿಕ್ ದ್ವೀಪದ ಸ್ನೇಹಿತರೊಂದಿಗೆ ನಿಂತಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ಲಸಿಕೆಗಳು ಅಥವಾ ಅಗತ್ಯ ಔಷಧಗಳು, ಗೋಧಿ ಅಥವಾ ಸಕ್ಕರೆ ಹೀಗೆ ಭಾರತವು ತನ್ನ ಸಾಮರ್ಥ್ಯಗಳಿಗೆ ಅನುಗುಣವಾಗಿ ಎಲ್ಲಾ ಪಾಲುದಾರ ರಾಷ್ಟ್ರಗಳಿಗೆ ಸಹಾಯ ಮಾಡುತ್ತಿದೆ.

ಗೌರವಾನ್ವಿತರೇ,
ನಾನು ಮೊದಲೇ ಹೇಳಿದಂತೆ, ನನಗೆ ನೀವು ಸಣ್ಣ ದ್ವೀಪ ರಾಜ್ಯಗಳಲ್ಲ, ಆದರೆ ದೊಡ್ಡ ಸಾಗರ ದೇಶಗಳು. ಈ ವಿಶಾಲವಾದ ಸಾಗರವೇ ಭಾರತವನ್ನು ನಿಮ್ಮೆಲ್ಲರೊಂದಿಗೆ ಸಂಪರ್ಕಿಸುತ್ತದೆ. ಭಾರತೀಯ ತತ್ವಶಾಸ್ತ್ರವು ಯಾವಾಗಲೂ ಜಗತ್ತನ್ನು ಒಂದೇ ಕುಟುಂಬವಾಗಿ ನೋಡುತ್ತದೆ.

ಈ ವರ್ಷ ನಡೆಯುತ್ತಿರುವ ನಮ್ಮ ಜಿ-20 ಅಧ್ಯಕ್ಷತೆಯ ಘೋಷವಾಕ್ಯ, 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಕೂಡ ಈ ಸಿದ್ಧಾಂತವನ್ನೇ ಆಧರಿಸಿದೆ.

ಈ ವರ್ಷ, ಜನವರಿಯಲ್ಲಿ, ನಾವು ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯನ್ನು ಆಯೋಜಿಸಿದೆವು, ಇದರಲ್ಲಿ ನಿಮ್ಮ ಪ್ರತಿನಿಧಿಗಳು ಭಾಗವಹಿಸಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಅದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಜಿ-20 ವೇದಿಕೆಯ ಮೂಲಕ ಗ್ಲೋಬಲ್ ಸೌತ್ ಸಮಸ್ಯೆಗಳು, ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ವಿಶ್ವದ ಗಮನಕ್ಕೆ ತರುವುದು ಜವಾಬ್ದಾರಿ ಎಂದು ಭಾರತ ಪರಿಗಣಿಸುತ್ತದೆ. 

ಗೌರವಾನ್ವಿತರೇ,
ಕಳೆದ ಎರಡು ದಿನಗಳಲ್ಲಿ, ನಾನು ಜಿ-7 ಶೃಂಗಸಭೆಯಲ್ಲೂ ಅದೇ ಪ್ರಯತ್ನವನ್ನು ಮಾಡಿದ್ದೇನೆ. ಅಲ್ಲಿ ಪೆಸಿಫಿಕ್ ಐಲ್ಯಾಂಡ್ ಫೋರಮ್ ಅನ್ನು ಪ್ರತಿನಿಧಿಸುತ್ತಿದ್ದ ಗೌರವಾನ್ವಿತ ಮಾರ್ಕ್ ಬ್ರೌನ್ ಇದನ್ನು ದೃಢೀಕರಿಸಬಹುದು.

ಗೌರವಾನ್ವಿತರೇ,
ಹವಾಮಾನ ಬದಲಾವಣೆಯ ವಿಷಯದಲ್ಲಿ ಭಾರತವು ಮಹತ್ವಾಕಾಂಕ್ಷೆಯ ಗುರಿಗಳನ್ನು ಹೊಂದಿದೆ ಮತ್ತು ನಾವು ಅವುಗಳ ಕಡೆಗೆ ವೇಗವಾಗಿ ಕೆಲಸ ಮಾಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ.

ಕಳೆದ ವರ್ಷ, ನಾನು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿಯವರ ಜೊತೆಗೆ ಮಿಷನ್ ಲೈಫ್ - ಲೈಫ್ ಸ್ಟೈಲ್ ಫಾರ್ ಎನ್ವಿರಾನ್‌ಮೆಂಟ್ ಅನ್ನು ಪ್ರಾರಂಭಿಸಿದೆ. ನೀವೂ ಈ ಆಂದೋಲನದಲ್ಲಿ ಪಾಲ್ಗೊಳ್ಳಬೇಕೆಂದು ನಾನು ಬಯಸುತ್ತೇನೆ.
ಭಾರತವು ಅಂತರರಾಷ್ಟ್ರೀಯ ಸೌರ ಒಕ್ಕೂಟ ಮತ್ತು ಸಿಡಿಆರ್‌ಐನಂತಹ ಉಪಕ್ರಮಗಳನ್ನು ಕೈಗೊಂಡಿದೆ. ನಿಮ್ಮಲ್ಲಿ ಹೆಚ್ಚಿನವರು ಈಗಾಗಲೇ ಸೌರ ಒಕ್ಕೂಟದ ಭಾಗವಾಗಿದ್ದಾರೆ ಎಂದು ನನಗೆ ತಿಳಿದಿದೆ. ಸಿಡಿಆರ್‌ಐ ಕಾರ್ಯಕ್ರಮಗಳು ಸಹ ನಿಮಗೆ ಉಪಯುಕ್ತವೆಂದು ನಾನು ಭಾವಿಸುತ್ತೇನೆ. ಈ ಸಂದರ್ಭದಲ್ಲಿ, ಈ ಉಪಕ್ರಮಗಳ ಭಾಗವಾಗಲು ನಾನು ನಿಮ್ಮೆಲ್ಲರನ್ನು ಆಹ್ವಾನಿಸುತ್ತೇನೆ.

ಗೌರವಾನ್ವಿತರೇ,
ಆಹಾರ ಭದ್ರತೆಗೆ ಆದ್ಯತೆ ನೀಡುತ್ತಿವಾಗ, ನಾವು ಪೋಷಣೆ ಮತ್ತು ಪರಿಸರ ಸಂರಕ್ಷಣೆಯತ್ತ ಗಮನಹರಿಸಿದ್ದೇವೆ. ವಿಶ್ವಸಂಸ್ಥೆಯು 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿದೆ. ಭಾರತವು ಈ ಸೂಪರ್‌ಫುಡ್‌ಗೆ "ಶ್ರೀ ಅನ್ನ" ದ ಸ್ಥಾನಮಾನವನ್ನು ನೀಡಿದೆ.
ಸಿರಿಧಾನ್ಯ ಕೃಷಿಗೆ ಕಡಿಮೆ ನೀರು ಬೇಕಾಗುತ್ತದೆ ಮತ್ತು ಅವುಗಳು ಪೌಷ್ಟಿಕಾಂಶದಿಂದ ಸಮೃದ್ಧವಾಗಿವೆ. ನಿಮ್ಮ ದೇಶಗಳಲ್ಲಿಯೂ ಸುಸ್ಥಿರ ಆಹಾರ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಸಿರಿಧಾನ್ಯಗಳು ಮಹತ್ವದ ಕೊಡುಗೆಯನ್ನು ನೀಡಬಲ್ಲವು ಎಂದು ನನಗೆ ವಿಶ್ವಾಸವಿದೆ.

ಗೌರವಾನ್ವಿತರೇ,
ಭಾರತವು ನಿಮ್ಮ ಆದ್ಯತೆಗಳನ್ನು ಗೌರವಿಸುತ್ತದೆ. ನಿಮ್ಮ ಅಭಿವೃದ್ಧಿಯ ಪಾಲುದಾರರಾಗಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ಅದು ಮಾನವೀಯ ನೆರವು ಅಥವಾ ಅಭಿವೃದ್ಧಿಯಾಗಿರಲಿ, ನೀವು ಭಾರತವನ್ನು ವಿಶ್ವಾಸಾರ್ಹ ಪಾಲುದಾರ ಎಂದು ಪರಿಗಣಿಸಬಹುದು. ನಮ್ಮ ದೃಷ್ಟಿಕೋನವು ಮಾನವೀಯ ಮೌಲ್ಯಗಳನ್ನು ಆಧರಿಸಿದೆ.
ಪಲಾವುನಲ್ಲಿ ಕನ್ವೆನ್ಷನ್ ಸೆಂಟರ್; ನೌರುನಲ್ಲಿ ತ್ಯಾಜ್ಯ ನಿರ್ವಹಣೆ ಯೋಜನೆ; ಫಿಜಿಯಲ್ಲಿ ಚಂಡಮಾರುತ ಪೀಡಿತ ರೈತರಿಗೆ ಬೀಜಗಳು ಮತ್ತು ಕಿರಿಬಾತಿಯಲ್ಲಿ ಸೌರ ಬೆಳಕಿನ ಯೋಜನೆ. ಇವೆಲ್ಲವೂ ಅದೇ ಭಾವನೆಯನ್ನು ಆಧರಿಸಿವೆ.
ನಮ್ಮ ಸಾಮರ್ಥ್ಯಗಳು ಮತ್ತು ಅನುಭವಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ.
ಅದು ಡಿಜಿಟಲ್ ತಂತ್ರಜ್ಞಾನವಾಗಲಿ ಅಥವಾ ಬಾಹ್ಯಾಕಾಶ ತಂತ್ರಜ್ಞಾನವಾಗಲಿ; ಅದು ಆರೋಗ್ಯ ಭದ್ರತೆಯಾಗಿರಲಿ ಅಥವಾ ಆಹಾರ ಭದ್ರತೆಯಾಗಿರಲಿ; ಅದು ಹವಾಮಾನ ಬದಲಾವಣೆಯಾಗಿರಲಿ ಅಥವಾ ಪರಿಸರ ಸಂರಕ್ಷಣೆಯಾಗಿರಲಿ; ಎಲ್ಲ ರೀತಿಯಲ್ಲೂ ನಿಮ್ಮೊಂದಿಗಿದ್ದೇವೆ.
ಗೌರವಾನ್ವಿತರೇ,
ಬಹುಪಕ್ಷೀಯತೆಯಲ್ಲಿ ನಿಮಗಿರುವ ನಂಬಿಕೆಯನ್ನು ನಾವು ಹಂಚಿಕೊಳ್ಳುತ್ತೇವೆ. ನಾವು ಸ್ವತಂತ್ರ, ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಅನ್ನು ಬೆಂಬಲಿಸುತ್ತೇವೆ. ನಾವು ಎಲ್ಲಾ ದೇಶಗಳ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಗೌರವಿಸುತ್ತೇವೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲೂ ಗಲೋಬಲ್‌ ಸೌತ್‌ ಧ್ವನಿ ಬಲವಾಗಿ ಪ್ರತಿಧ್ವನಿಸಬೇಕು. ಇದಕ್ಕಾಗಿ, ಅಂತರರಾಷ್ಟ್ರೀಯ ಸಂಸ್ಥೆಗಳ ಸುಧಾರಣೆ - ನಮ್ಮ ಹಂಚಿಕೆಯ ಆದ್ಯತೆಯಾಗಬೇಕು.
ನಾನು ಕ್ವಾಡ್‌ ನ ಭಾಗವಾಗಿ ಹಿರೋಶಿಮಾದಲ್ಲಿ ಆಸ್ಟ್ರೇಲಿಯಾ, ಅಮೆರಿಕಾ ಮತ್ತು ಜಪಾನ್‌ನೊಂದಿಗೆ ಚರ್ಚೆ ನಡೆಸಿದೆ. ಈ ಸಂವಾದವು ಇಂಡೋ-ಪೆಸಿಫಿಕ್ ಪ್ರದೇಶದ ಮೇಲೆ ವಿಶೇಷ ಗಮನವನ್ನು ಹೊಂದಿತ್ತು. ಕ್ವಾಡ್ ಸಭೆಯಲ್ಲಿ, ನಾವು ಪಲಾವುನಲ್ಲಿ ರೇಡಿಯೊ ಆಕ್ಸೆಸ್ ನೆಟ್‌ವರ್ಕ್ (ಆರ್‌ ಎ ಎನ್) ಸ್ಥಾಪಿಸಲು ನಿರ್ಧಾರ ತೆಗೆದುಕೊಂಡಿದ್ದೇವೆ. ಬಹುಪಕ್ಷೀಯ ಸ್ವರೂಪದಲ್ಲಿ, ನಾವು ಪೆಸಿಫಿಕ್ ದ್ವೀಪ ದೇಶಗಳೊಂದಿಗೆ ಪಾಲುದಾರಿಕೆಯನ್ನು ಹೆಚ್ಚಿಸುತ್ತೇವೆ.

ಗೌರವಾನ್ವಿತರೇ,
ಫಿಜಿಯ ದಕ್ಷಿಣ ಪೆಸಿಫಿಕ್ ವಿಶ್ವವಿದ್ಯಾಲಯದಲ್ಲಿ ಸುಸ್ಥಿರ ಕರಾವಳಿ ಮತ್ತು ಸಾಗರ ಸಂಶೋಧನಾ ಸಂಸ್ಥೆ (ಎಸ್‌ ಸಿ ಒ ಆರ್‌ ಐ) ಅನ್ನು ಸ್ಥಾಪಿಸಲಾಗಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಈ ಸಂಸ್ಥೆಯು ಸುಸ್ಥಿರ ಅಭಿವೃದ್ಧಿಯಲ್ಲಿ ಭಾರತದ ಅನುಭವಗಳನ್ನು ಪೆಸಿಫಿಕ್ ದ್ವೀಪ ರಾಷ್ಟ್ರಗಳ ದೃಷ್ಟಿಕೋನದೊಂದಿಗೆ ಸಂಪರ್ಕಿಸುತ್ತದೆ.
ಸಂಶೋಧನೆ ಮತ್ತು ಅಭಿವೃದ್ಧಿಯ ಜೊತೆಗೆ, ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಇದು ಪ್ರಯೋಜನಕಾರಿಯಾಗಿದೆ. ಇಂದು, 14 ದೇಶಗಳ ನಾಗರಿಕರ ಯೋಗಕ್ಷೇಮ, ಪ್ರಗತಿ ಮತ್ತು ಸಮೃದ್ಧಿಗೆ ಎಸ್‌ ಸಿ ಒ ಆರ್‌ ಐ ಸಮರ್ಪಿತವಾಗಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ.
ಅದೇ ರೀತಿ, ರಾಷ್ಟ್ರೀಯ ಮತ್ತು ಮಾನವ ಅಭಿವೃದ್ಧಿಗಾಗಿ ಬಾಹ್ಯಾಕಾಶ ತಂತ್ರಜ್ಞಾನಕ್ಕಾಗಿ ವೆಬ್‌ಸೈಟ್‌ನ ಪ್ರಾರಂಭಕ್ಕಾಗಿ ಕೆಲಸ ನಡೆಯುತ್ತಿರುವುದು ನನಗೆ ಸಂತೋಷ ತಂದಿದೆ. ಇದರ ಮೂಲಕ, ನೀವು ಭಾರತೀಯ ಉಪಗ್ರಹ ನೆಟ್‌ವರ್ಕ್‌ನಿಂದ ನಿಮ್ಮ ದೇಶದ ರಿಮೋಟ್ ಸೆನ್ಸಿಂಗ್ ಡೇಟಾವನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ ಮತ್ತು ಅದನ್ನು ನಿಮ್ಮ ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳಲ್ಲಿ ಬಳಸಿಕೊಳ್ಳಬಹುದು.

ಗೌರವಾನ್ವಿತರೇ,
ಈಗ, ನಿಮ್ಮ ಆಲೋಚನೆಗಳನ್ನು ಕೇಳಲು ನಾನು ಉತ್ಸುಕನಾಗಿದ್ದೇನೆ. ಮತ್ತೊಮ್ಮೆ, ಇಂದು ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ತುಂಬು ಧನ್ಯವಾದಗಳು.

ಸೂಚನೆ - ಇದು ಪ್ರಧಾನಿಯವರ ಹೇಳಿಕೆಯ ಅಂದಾಜು ಅನುವಾದವಾಗಿದೆ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ

*****



(Release ID: 1926485) Visitor Counter : 147