ಪ್ರಧಾನ ಮಂತ್ರಿಯವರ ಕಛೇರಿ
ಜಿ-7 ಶೃಂಗಸಭೆಯ 9 ನೇ ಕಾರ್ಯಕಾರಿ ಅಧಿವೇಶನದಲ್ಲಿ ಪ್ರಧಾನ ಮಂತ್ರಿಯವರ ಹೇಳಿಕೆಯ ಕನ್ನಡ ಅನುವಾದ
ಕಾರ್ಯಕಾರಿ ಅಧಿವೇಶನ 9: ಶಾಂತಿಯುತ, ಸ್ಥಿರ ಮತ್ತು ಸಮೃದ್ಧ ಜಗತ್ತಿನ ಕಡೆಗೆ
Posted On:
21 MAY 2023 10:20AM by PIB Bengaluru
ಗೌರವಾನ್ವಿತರೇ,
ನಾವು ಇಂದು ಅಧ್ಯಕ್ಷ ಝೆಲೆನ್ಸ್ಕಿ ಅವರ ಮಾತುಗಳನ್ನು ಕೇಳಿದ್ದೇವೆ. ನಾನು ನಿನ್ನೆ ಕೂಡ ಅವರನ್ನು ಭೇಟಿಯಾಗಿದ್ದೆ. ನಾನು ಸದ್ಯದ ಪರಿಸ್ಥಿತಿಯನ್ನು ರಾಜಕೀಯ ಅಥವಾ ಆರ್ಥಿಕತೆಯ ಸಮಸ್ಯೆ ಎಂದು ಪರಿಗಣಿಸುವುದಿಲ್ಲ. ಇದು ಮಾನವೀಯತೆಯ ವಿಷಯ, ಮಾನವೀಯ ಮೌಲ್ಯಗಳ ವಿಷಯ ಎಂದು ನಾನು ನಂಬುತ್ತೇನೆ. ಮೊದಲಿನಿಂದಲೂ ನಾವು ಮಾತುಕತೆ ಮತ್ತು ರಾಜತಾಂತ್ರಿಕತೆಯೊಂದೇ ದಾರಿ ಎಂದು ಹೇಳಿಕೊಂಡು ಬಂದಿದ್ದೇವೆ. ಈ ಪರಿಸ್ಥಿತಿಯನ್ನು ಪರಿಹರಿಸಲು ಭಾರತವು ಯಾವುದೇ ರೀತಿಯಲ್ಲಿ ಕೊಡುಗೆ ನೀಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತದೆ.
ಗೌರವಾನ್ವಿತರೇ,
ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿ ನಮ್ಮ ಸಾಮಾನ್ಯ ಉದ್ದೇಶವಾಗಿದೆ. ಇಂದಿನ ಅಂತರ್-ಸಂಪರ್ಕಿತ ಜಗತ್ತಿನಲ್ಲಿ, ಯಾವುದೇ ಒಂದು ಪ್ರದೇಶದ ಬಿಕ್ಕಟ್ಟುಗಳು ಎಲ್ಲಾ ದೇಶಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಪ್ರಸ್ತುತ ಜಾಗತಿಕ ಪರಿಸ್ಥಿತಿಯಲ್ಲಿ , ಈ ದೇಶಗಳು ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟಿನ ಗರಿಷ್ಠ ಮತ್ತು ಅತ್ಯಂತ ಗಾಢವಾದ ಪರಿಣಾಮವನ್ನು ಎದುರಿಸುತ್ತಿವೆ.
ಗೌರವಾನ್ವಿತರೇ,
ವಿಭಿನ್ನ ವೇದಿಕೆಗಳಲ್ಲಿ ಶಾಂತಿ ಮತ್ತು ಸ್ಥಿರತೆಯ ವಿಷಯಗಳನ್ನು ಚರ್ಚಿಸುವ ಅಗತ್ಯವನ್ನು ನಾವು ಏಕೆ ಎದುರಿಸುತ್ತಿದ್ದೇವೆ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕುತ್ತದೆ. ಶಾಂತಿ ಸ್ಥಾಪನೆಯ ಉದ್ದೇಶದಿಂದ ಸ್ಥಾಪಿಸಲಾದ ವಿಶ್ವಸಂಸ್ಥೆ (ಯುಎನ್), ಇಂದು ಸಂಘರ್ಷಗಳನ್ನು ತಡೆಯಲು ಏಕೆ ವಿಫಲವಾಗಿದೆ? ಭಯೋತ್ಪಾದನೆಯ ವ್ಯಾಖ್ಯಾನವನ್ನು ವಿಶ್ವಸಂಸ್ಥೆಯಲ್ಲಿ ಇನ್ನೂ ಏಕೆ ಅಂಗೀಕರಿಸಲಾಗಿಲ್ಲ? ಆತ್ಮಾವಲೋಕನ ಮಾಡಿಕೊಂಡರೆ, ಒಂದು ವಿಷಯ ಸ್ಪಷ್ಟವಾಗುತ್ತದೆ. ಕಳೆದ ಶತಮಾನದಲ್ಲಿ ರಚಿಸಲಾದ ಸಂಸ್ಥೆಗಳು ಇಪ್ಪತ್ತೊಂದನೇ ಶತಮಾನದ ವ್ಯವಸ್ಥೆಗೆ ಅನುಗುಣವಾಗಿಲ್ಲ. ಅವು ವರ್ತಮಾನದ ವಾಸ್ತವಗಳನ್ನು ಪ್ರತಿಬಿಂಬಿಸುವುದಿಲ್ಲ. ಅದಕ್ಕಾಗಿಯೇ ವಿಶ್ವಸಂಸ್ಥೆಯಂತಹ ದೊಡ್ಡ ಸಂಸ್ಥೆಗಳಲ್ಲಿ ಸುಧಾರಣೆಗಳಿಗೆ ದೃಢವಾದ ರೂಪವನ್ನು ನೀಡುವುದು ಅವಶ್ಯಕವಾಗಿದೆ. ಇದು ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳಿಗೆ (ಗ್ಲೋಬಲ್ ಸೌತ್) ಧ್ವನಿಯಾಗಬೇಕು. ಇಲ್ಲದಿದ್ದರೆ ನಾವು ಸಂಘರ್ಷವನ್ನು ಕೊನೆಗೊಳಿಸುವ ಬಗ್ಗೆ ಮಾತನಾಡುತ್ತೇವೆ. ವಿಶ್ವಸಂಸ್ಥೆ ಮತ್ತು ಭದ್ರತಾ ಮಂಡಳಿ ಕೇವಲ ಹರಟೆ ಕಟ್ಟೆಗಳಾಗಲಿವೆ.
ಮಹನೀಯರೇ,
ಯುಎನ್ ಚಾರ್ಟರ್, ಅಂತರರಾಷ್ಟ್ರೀಯ ಕಾನೂನು ಮತ್ತು ಎಲ್ಲಾ ದೇಶಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಎಲ್ಲಾ ದೇಶಗಳು ಗೌರವಿಸುವುದು ಅವಶ್ಯಕವಾಗಿದೆ. ಯಥಾಸ್ಥಿತಿಯನ್ನು ಬದಲಾಯಿಸುವ ಏಕಪಕ್ಷೀಯ ಪ್ರಯತ್ನಗಳ ವಿರುದ್ಧ ಒಟ್ಟಾಗಿ ನಿಮ್ಮ ಧ್ವನಿಯನ್ನು ಎತ್ತಿರಿ. ಯಾವುದೇ ಉದ್ವಿಗ್ನತೆ, ಯಾವುದೇ ವಿವಾದವನ್ನು ಶಾಂತಿಯುತ ಮಾರ್ಗಗಳ ಮೂಲಕ, ಮಾತುಕತೆಯ ಮೂಲಕ ಪರಿಹರಿಸಬೇಕು ಎಂದು ಭಾರತವು ಯಾವಾಗಲೂ ಅಭಿಪ್ರಾಯಪಟ್ಟಿದೆ. ಮತ್ತು ಕಾನೂನಿನಿಂದ ಪರಿಹಾರವಿದ್ದರೆ ಅದನ್ನು ಒಪ್ಪಿಕೊಳ್ಳಬೇಕು. ಈ ಉತ್ಸಾಹದಲ್ಲಿಯೇ ಭಾರತವು ಬಾಂಗ್ಲಾದೇಶದೊಂದಿಗಿನ ತನ್ನ ಭೂಮಿ ಮತ್ತು ಸಮುದ್ರ ಗಡಿ ವಿವಾದವನ್ನು ಪರಿಹರಿಸಿಕೊಂಡಿದೆ.
ಮಹನೀಯರೇ,
ಭಾರತದಲ್ಲಿ ಮತ್ತು ಇಲ್ಲಿ ಜಪಾನ್‌ನಲ್ಲಿಯೂ ಸಹ ಸಾವಿರಾರು ವರ್ಷಗಳಿಂದ ಬುದ್ಧನನ್ನು ಅನುಸರಿಸಲಾಗುತ್ತಿದೆ. ಬುದ್ಧನ ಬೋಧನೆಗಳಲ್ಲಿ ಪರಿಹಾರ ಕಂಡುಕೊಳ್ಳಲಾಗದ ಯಾವುದೇ ಸಮಸ್ಯೆ ಆಧುನಿಕ ಯುಗದಲ್ಲಿ ಇಲ್ಲ, ಇಂದು ಜಗತ್ತು ಎದುರಿಸುತ್ತಿರುವ ಯುದ್ಧ, ಅಶಾಂತಿ, ಅಸ್ಥಿರತೆಗೆ ಬುದ್ಧ ಶತಮಾನಗಳ ಹಿಂದೆಯೇ ಪರಿಹಾರ ನೀಡಿದ್ದ.
ಭಗವಾನ್ ಬುದ್ಧನು ಹೀಗೆ ಹೇಳಿದ್ದಾನೆ: नहि वेरेन् वेरानी, सम्मन तीध उदासन्, अवेरेन च सम्मन्ति, एस धम्मो सन्नतन।
ಅಂದರೆ, ಹಗೆತನವನ್ನು ಹಗೆತನವೇ ಶಮನಗೊಳಿಸುವುದಿಲ್ಲ. ಬಾಂಧವ್ಯದಿಂದ ಹಗೆತನ ಶಮನವಾಗುತ್ತದೆ.
ಇದೇ ಮನೋಭಾವದಲ್ಲಿ ನಾವು ಎಲ್ಲರೊಂದಿಗೆ ಒಟ್ಟಾಗಿ ಮುನ್ನಡೆಯಬೇಕು.
ಧನ್ಯವಾದಗಳು.
ಸೂಚನೆ - ಇದು ಪ್ರಧಾನಿಯವರ ಹೇಳಿಕೆಯ ಅಂದಾಜು ಅನುವಾದವಾಗಿದೆ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ.
******
(Release ID: 1926188)
Visitor Counter : 154
Read this release in:
English
,
Marathi
,
Hindi
,
Punjabi
,
Malayalam
,
Urdu
,
Bengali
,
Assamese
,
Manipuri
,
Gujarati
,
Odia
,
Tamil
,
Telugu